ಹುಟ್ಟಿದ ದಿನವೇ ಗೊತ್ತಿರದವನಿಗೆ ಅದೆಂಥ ಭವಿಷ್ಯವಿದ್ದೀತು?

27 Sept 2010

ಕೊಪ್ಪಳ ಜಿಲ್ಲೆ ಅಳವಂಡಿಯ ಮಣ್ಣಿನ ಛಾವಣಿ ಮನೆಯಲ್ಲಿ ಸಹಜ ಹೆರಿಗೆಯಲ್ಲಿ ಹುಟ್ಟಿದ ನಾಲ್ಕನೇ ಮಗು ನಾನು.

ಮೊದಲ ಮೂರು ಮಕ್ಕಳು ಗಂಡಾಗಿದ್ದರಿಂದ ನನ್ನ ಅಪ್ಪ-ಅವ್ವ ಹೆಣ್ಣುಮಗುವನ್ನು ನಿರೀಕ್ಷಿಸುತ್ತಿದ್ದರು. ಆದರೆ, ಹುಟ್ಟಿದ್ದು ಮತ್ತೊಂದು ಗಂಡು.

ಅಪ್ಪನಿಗೆ ನಿರಾಶೆಯಾಗಿರಬೇಕು. ಹೀಗಾಗಿ, ಅವರು ನನ್ನ ಜನ್ಮದಿನ, ಸಮಯ ಇತ್ಯಾದಿ ಕನಿಷ್ಟ ಮಾಹಿತಿಯನ್ನು ಬರೆದಿಡುವ ಗೋಜಿಗೇ ಹೋಗಲಿಲ್ಲ.

ಬಹುಶಃ ಅವ್ವನಿಗೂ ನಿರಾಶೆಯಾಗಿರಬೇಕು. ಆದರೆ, ಅದನ್ನು ತೋರಿಸಿಕೊಳ್ಳಲಾದೀತೆ? ಹಸಿ ಬಾಣಂತಿ ಬೇರೆ. ಮನೆ ಕೆಲಸ ನೋಡಿಕೊಳ್ಳಲು, ಬಾಣಂತನ ಮಾಡಲು ಮನೆಯಲ್ಲಿ ಇನ್ನೊಂದು ಹೆಣ್ಣುಜೀವವಿಲ್ಲ. ಹೇಗೋ ಒಂದು ವಾರ ಅವರಿವರು ಬಂದು ಕೆಲಸ ಮಾಡಿಕೊಟ್ಟು ಹೋಗುತ್ತಿದ್ದರು. ನಂತರ, ಅವ್ವನೇ ನನ್ನ ಮೂರು ಅಣ್ಣಂದಿರ ಜೊತೆಗೆ, ಅಪ್ಪನಿಗೂ ಅಡುಗೆ ಮಾಡಬೇಕಿತ್ತು.

ಹೀಗಾಗಿ, ಅವ್ವನಿಗೂ ನನ್ನ ಜನ್ಮದಿನ ಬರೆದಿಡಲು ಆಗಲಿಲ್ಲ. ಅಪ್ಪ ಬರೆದಿಟ್ಟಿರಬಹುದು ಎಂದು ಅವ್ವ ಸುಮ್ಮನಾಗಿರಬೇಕು.

ಕಾಲ ಹೀಗೇ ಉರುಳಿರಬೇಕು. ಓದುವುದರಲ್ಲಿ ಸಾಕಷ್ಟು ಆಸಕ್ತಿ ಹೊಂದಿರುವ ಕಾರಣಕ್ಕಾಗಿಯೋ, ಅಥವಾ ಅಪ್ಪ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಕಾರಣಕ್ಕೋ, ನನ್ನ ಬಾಲ್ಯ ಮನೆಯಲ್ಲಿ ಅರ್ಧ, ಶಾಲೆಯಲ್ಲಿ ಅರ್ಧ ಎಂದು ಹಂಚಿಹೋಗಿತ್ತು. ಆಗ ನರ್ಸರಿಯಾಗಲಿ ಕೆಜಿಗಳಾಗಲಿ ಇರಲಿಲ್ಲ. ಬೆರಳೆಣಿಕೆಯಷ್ಟು ಕೆಜಿ ತೂಕವಿದ್ದ ನನ್ನನ್ನು ಐದನೇ ವಯಸ್ಸಿಗೇ ಮೊದಲನೇ ವರ್ಗದಲ್ಲಿ ಸೇರಿಸಿಬಿಟ್ಟರು ಅಪ್ಪ. ಆರು ವರ್ಷ ತುಂಬುವವರೆಗೆ ಮೊದಲನೇ ತರಗತಿಗೆ ಸೇರಿಸಲು ಬರುತ್ತಿರಲಿಲ್ಲವಾದ್ದರಿಂದ, ನನ್ನ ಜನ್ಮದಿನಾಂಕವನ್ನು ಆರು ವರ್ಷಕ್ಕೆ ಹೊಂದಿಕೆಯಾಗುವಂತೆ ಬದಲಿಸಿಬಿಟ್ಟರು.

ಹೀಗಾಗಿ, ನನ್ನ ಖಚಿತ ಜನ್ಮದಿನಾಂಕ ನನಗೆ ಗೊತ್ತೇ ಇಲ್ಲ.

ಇದೆಲ್ಲ ಆಗಿ ನಲವತ್ತು ವರ್ಷಗಳೇ ಆಗಿರುವುದರಿಂದ ಮನೆಯವರೂ ಮರೆತುಬಿಟ್ಟಿದ್ದಾರೆ. ಶಾಲೆಯ ದಾಖಲೆಗಳಲ್ಲಿದ್ದ ಜನ್ಮದಿನಾಂಕವೇ ಖಾಯಂ ಆಗಿ ಉಳಿದುಬಿಟ್ಟಿದೆ.

ಇದೆಲ್ಲ ನೆನಪಾಗಿದ್ದು ಮೊನ್ನೆ ಸೆಪ್ಟೆಂಬರ್‌ ೨೫ಕ್ಕೆ.

ಎಂದಿನಂತೆ ಅವತ್ತೂ ಕಂಪ್ಯೂಟರ್‌ ಮುಂದೆ ಕೂತೇ ಮಧ್ಯರಾತ್ರಿ ಕಳೆದಿದ್ದೆ. ಸಾಮಾಜಿಕ ತಾಣಗಳಲ್ಲಿ ನನ್ನ ಜನ್ಮದಿನಾಂಕ ಪತ್ತೆ ಹಚ್ಚಿದ್ದ ಅಂತರ್ಜಾಲ ಮಿತ್ರರು ಹುಟ್ಟುಹಬ್ಬದ ಶುಭಾಶಯಗಳನ್ನು ಕಳಿಸತೊಡಗಿದ್ದರು. ಅವನ್ನು ನೋಡಿದ ನಂತರವೇ, ನನ್ನ ಜನ್ಮದಿನಾಂಕದ ಎಡವಟ್ಟು ನನಗೆ ಮತ್ತೆ ನೆನಪಾಗಿದ್ದು.

ಮೊದಲಿನಿಂದಲೂ ಹುಟ್ಟುಹಬ್ಬವನ್ನು ಆಚರಿಸದ ಪುಣ್ಯಾತ್ಮ ನಾನು. ನಮ್ಮ ಹುಟ್ಟುಹಬ್ಬವನ್ನು ಇತರರು ಆಚರಿಸಿದರೇ ಚೆನ್ನ ಎಂಬ ಅಭಿಪ್ರಾಯ ಬೇರೆ. ಹೀಗಾಗಿ, ನನ್ನ ಜನ್ಮದಿನಾಂಕ, ಅಂದರೆ, ಸರಕಾರಿ ದಾಖಲೆಗಳಲ್ಲಿರುವ ದಿನಾಂಕ ನೆನಪಾಗುವುದೇ ಅಪರೂಪ. ಹೀಗೇ, ಯಾರಾದರೂ ಶುಭಾಶಯ ಕೋರಿದರೆ, ಅರೆ ಹೌದಲ್ಲ, ಆಗಲೇ ಮತ್ತೊಂದು ವರ್ಷ ಉರುಳಿತಲ್ಲ ಎಂದು ಅಚ್ಚರಿಯಾಗುತ್ತದೆ.

ಜೊತೆಗೆ, ನಮ್ಮ ಅಸಲಿ ಜನ್ಮದಿನಾಂಕ ಯಾವುದಿರಬಹುದು ಎಂಬ ಪ್ರಾಥಮಿಕ ಜಿಜ್ಞಾಸೆಯೂ ಕಾಡುತ್ತದೆ.

ಬಸವ ಜಯಂತಿ ಮುಗಿದು ಇಷ್ಟು ದಿನಗಳ ನಂತರ, ಯಾವುದೋ ಹುಣ್ಣಿಮೆ ಕಳೆದು ಇಷ್ಟು ದಿನಗಳ ನಂತರ ನೀನು ಹುಟ್ಟಿದ್ದು ಎಂದು ಅವ್ವ ಆಗಾಗ ಹೇಳುತ್ತಾಳೆ. ನನಗೆ ಅದೆಲ್ಲ ತಲೆಗೆ ಹೋಗುವುದಿಲ್ಲ. ’ಸರಿ, ಯಾವುದೋ ಒಂದಿನ ಹುಟ್ಟಿದ್ದೇನೆ. ಏನೀಗ?’ ಎಂದು ನಾನೂ ಸುಮ್ಮನಾಗುತ್ತೇನೆ. ಹುಟ್ಟುಹಬ್ಬದ ನೆಪದಲ್ಲಿ ಶುಭಾಶಯ ಕೋರಿದವರಿಗೆ ಒಣ ಮುಗುಳ್ನಗೆ ಕೊಟ್ಟು ಅದನ್ನು ಮರೆತುಬಿಡುತ್ತೇನೆ. ಎಷ್ಟೋ ಸಾರಿ ಹುಟ್ಟುಹಬ್ಬದ ದಿನವೇ ಸ್ನಾನ ಇತ್ಯಾದಿ ಪ್ರಾಥಮಿಕ ಕರ್ಮಗಳನ್ನೂ ಮಾಡದೇ ಕೆಲಸದಲ್ಲಿ ತಲ್ಲೀನನಾದ ಭೂಪ ನಾನು.

ಹೀಗಾಗಿ, ಜನ್ಮದಿನ ನನ್ನ ಅಂತರಂಗ ತಾಕದ ದಿನವಾಗಿ ಕಳೆದುಹೋಗುತ್ತದೆ.

ನನ್ನ ಜನ್ಮದಿನ ಹೋಗಲಿ, ಹತ್ತಿರದವರಿಗೆ ಸಂಬಂಧಿಸಿದ ವಿಶೇಷ ದಿನಗಳ ನೆನಪೂ ನನಗಿದ್ದುದು ಅಪರೂಪ. ಒಂದು ಸಾರಿಯಂತೂ ಹೆಂಡತಿಯ ಜನ್ಮದಿನವನ್ನೇ ಮರೆತು ಇಡೀ ದಿನ ಯಾವ್ಯಾವುದೋ ಕೆಲಸಗಳಲ್ಲಿ ಮಗ್ನನಾಗಿಬಿಟ್ಟಿದ್ದೆ. ಅವತ್ತು ಮನೆ ಸೇರಿದ್ದೂ ತಡವಾಗಿ. ಮಕ್ಕಳು ಎದ್ದಾರೆಂದು ಕಳ್ಳನಂತೆ ಬಟ್ಟೆ ಬದಲಿಸಿ, ಕೈಕಾಲು ಮುಖ ತೊಳೆದು, ಅಡುಗೆ ಮನೆಗೆ ಬೆಕ್ಕಿನಂತೆ ಹೊಕ್ಕು, ನೈಟ್‌ ಬಲ್ಬಿನ ಮಂಕು ಬೆಳಕಲ್ಲಿ ತಟ್ಟೆಗೆ ಬಡಿಸಿಕೊಂಡು ತಿನ್ನುತ್ತಿದ್ದವನನ್ನು ದುರುಗುಟ್ಟಿ ನೋಡಿದ್ದಳು ಮಡದಿ. ಯಾಕೆ ಹಾಗೆ ನೋಡ್ತಿದ್ದೀ ಎಂಬ ಮೂಕಪ್ರಶ್ನೆ ನನ್ನದು. ತಿನ್ನುತ್ತಿದ್ದ ಐಟಂಗಳಲ್ಲಿ ಸಿಹಿ ತಿನಿಸು ಇದ್ದುದನ್ನೂ ಗಮನಿಸದೇ ತಿಂದ ನನ್ನನ್ನು ಆಕೆ ಇನ್ಯಾವ ರೀತಿ ನೋಡಲು ಸಾಧ್ಯ? ಕೊನೆಗೂ, ಅವತ್ತಿನ ಆಕೆಯ ಮುನಿಸಿನ ಹಿನ್ನೆಲೆ ಅರ್ಥವಾಗಿ, ಆಕೆಗೆ ಬರಿಗೈಯ ಜನ್ಮದಿನ ಶುಭಾಶಯ ಕೋರುವಾಗ ರಾತ್ರಿ ೨ ಗಂಟೆಯಾಗಿತ್ತು. ಆ ಅಪರಾತ್ರಿಯಲ್ಲಿ ಗಿಫ್ಟ್‌ ಎಲ್ಲಿಂದ ತರಲಿ? ಮದುವೆಯಾಗಿ ಎಂಟು ವರ್ಷಗಳು ದಾಟಿರುವಾಗ, ಮುನಿಸಿಕೊಂಡ ಮಡದಿಗೆ ದಾಂಪತ್ಯದ ಗಿಫ್ಟೂ ಅಷ್ಟಾಗಿ ರುಚಿಸದು. ಛೇ, ಎಂಥ ಕೆಲಸವಾಯ್ತು ಎಂದು ಹಳಹಳಿಸುತ್ತ ಕೂತವನಿಗೆ ನಿದ್ದೆ ಬಂದಿದ್ದು ಬೆಳಗಿನ ಜಾವಕ್ಕೇ.

ನನ್ನ ಈ ಪರಿ ಅಮೋಘ ನೆನಪಿನ ಶಕ್ತಿ ಅನೇಕ ಸಂದರ್ಭಗಳಲ್ಲಿ ನನ್ನನ್ನು ಪೇಚಿಗೆ ಸಿಕ್ಕಿಸಿದೆ. ಎಷ್ಟೋ ಸಾರಿ ನನ್ನ ಅಣ್ಣಂದಿರ, ತಂಗಿಯ, ಅವರೆಲ್ಲರ ಮಕ್ಕಳ ಜನ್ಮದಿನಗಳು ಸಹ ನನ್ನನ್ನು ಇಕ್ಕಟ್ಟಿಗೆ ಸಿಕ್ಕಿಸಿವೆ. ‘ಮಾಮಾ/ಕಾಕಾ, ಇವತ್ತು ನನ್ನ ಬರ್ತ್‌‌ಡೇ. ವಿಶ್‌ ಮಾಡು’ ಎಂದು ಅವರೇ ಫೋನ್‌ ಮಾಡಿ, ನನ್ನ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ.

ಹೀಗಿದ್ದರೂ, ನನ್ನ ಮಕ್ಕಳ ಜನ್ಮದಿನ ಮಾತ್ರ ಚೆನ್ನಾಗಿ ನೆನಪಿನಲ್ಲಿರುತ್ತದೆ. ಏಕೆಂದರೆ, ಮಕ್ಕಳ ಜನ್ಮದಿನ ಬರುವುದಕ್ಕೆ ಹದಿನೈದು ದಿನದಿಂದಲೇ ’ಇಂಥ ದಿನ ಮಗಳ ಬರ್ತ್‌‌ಡೇ’ ಎಂದು ಮಡದಿ ಇಂಜಕ್ಷನ್‌ನಂತೆ ನನ್ನ ಮೆದುಳಿಗೆ ಚುಚ್ಚುತ್ತಿರುತ್ತಾಳೆ. ನೆವ ಹೇಳುವುದರಲ್ಲಿ ವರ್ಲ್ಡ್‌ ಫೇಮಸ್‌ ಆಗಿರುವ ನನ್ನನ್ನು ಮುಲಾಜಿಲ್ಲದೇ ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿ, ಮಕ್ಕಳಿಗೆ ಬಟ್ಟೆ ಆರಿಸುತ್ತಾಳೆ. ಅವರು ಬೇಡುವ ವಸ್ತುಗಳನ್ನು ಖರೀದಿಸಲು ಕಾಸುಸನ್ನದ್ಧನಾಗಿರುವಂತೆ ನನಗೆ ಪದೆ ಪದೆ ಆದೇಶ ಮಾಡುತ್ತಿರುತ್ತಾಳೆ.

ಹೀಗಾಗಿ, ಮಕ್ಕಳ ಜನ್ಮದಿನಾಂಕಗಳು ನೆನಪಿನಲ್ಲಿರುತ್ತವೆ. ಇಲ್ಲದಿದ್ದರೆ, ನನ್ನ ಮಕ್ಕಳು ಕೂಡ, ’ಅಪ್ಪಾ, ಇವತ್ತು ನನ್ನ ಬರ್ತ್‌‌ಡೇ, ವಿಶ್‌ ಮಾಡು’ ಎಂದು ನೆನಪಿಸುವ ಸಂದರ್ಭ ಬರುತ್ತಿತ್ತೇನೋ.

ಸದ್ಯ, ನನ್ನ ಜನ್ಮದಿನಾಂಕವನ್ನು ನೆನಪಿನಲ್ಲಿಟ್ಟುಕೊಳ್ಳುವ ಅನಿವಾರ್ಯತೆ ಇಲ್ಲ. ಅದು ನನ್ನ ಖಾಸಾ ದಿನವಾಗಿದ್ದರಿಂದ, ಅದನ್ನು ಮರೆಯುವ, ಆಚರಿಸದಿರುವ ವಿಶಿಷ್ಟ ಹಕ್ಕು ನನಗಿದೆ. ಅವತ್ತು ಸ್ನಾನ ಮಾಡಿದರೂ ನಡೆಯುತ್ತದೆ, ಬಿಟ್ಟರೂ ಓಕೆ. ಹೊಸ ಬಟ್ಟೆ ತರಲೇಬೇಕೆಂಬ ಕಟ್ಟುಪಾಡೂ ಇಲ್ಲ. ಹೆಂಡತಿ ಮನೆಯಲ್ಲೇ ಸಿಹಿ ಮಾಡುವುದರಿಂದ, ಅದನ್ನೂ ಕೊಂಡು ತರುವ ಕಷ್ಟದಿಂದ ಮುಕ್ತನಾಗಿದ್ದೇನೆ. ಆದರೆ, ಊಟ ಮಾಡುವಾಗ ಮಾತ್ರ, ಸಿಹಿ ತಿಂಡಿ ನೋಡಿ, ‘ಏನೇ ವಿಶೇಷ?’ ಎಂದು ತಪ್ಪಿ ಪ್ರಶ್ನೆ ಮಾಡಿ, ಫಜೀತಿಗೆ ಸಿಲುಕುವುದು ಮಾತ್ರ ಆಗಾಗ ನಡೆಯುತ್ತಲೇ ಇರುತ್ತದೆ.

ಜನ್ಮದಿನಾಂಕ ಗೊತ್ತಿಲ್ಲದಿರುವುದರ ಲಾಭಗಳೂ ಮಜವಾಗಿವೆ. ಆಗೀಗ ಕಟ್ಟಿಗೆ ಬಿದ್ದು, ದೇವಸ್ಥಾನಗಳಿಗೆ ಹೋದಾಗ, ಜನ್ಮನಕ್ಷತ್ರ ಕೇಳಿದ ಅರ್ಚಕರಿಗೆ ನನ್ನ ಹೆಸರಷ್ಟೇ ಹೇಳಿ ದೇವರತ್ತ ಮುಖ ತಿರುಗಿಸುತ್ತೇನೆ. ದಿನಾಂಕವೇ ಗೊತ್ತಿರದವನಿಗೆ ನಕ್ಷತ್ರಗಳ ಗೊಡವೆ ಏಕೆ?

ಅಂಥ ಮತ್ತೊಂದು ಜನ್ಮದಿನ ಸದ್ದಿಲ್ಲದೇ ಬಂದು ಹೋಗಿದೆ. ವಯಸ್ಸಿನ ಲೆಕ್ಕಕ್ಕೆ ಮತ್ತೊಂದು ವರ್ಷ ಸೇರ್ಪಡೆಯಾಗಿದೆ. ಮನೆಯವರು ತಾವು ತಾವೇ ಮಾಡಿಕೊಂಡ ಸಡಗರ, ಊಟ, ಶುಭಾಶಯಗಳೆಲ್ಲ ರಾತ್ರಿಯಾದಂತೆ ಕರಗಿ, ಗಡಿಯಾರದ ಟಿಕ್‌ಟಿಕ್‌ ಸದ್ದಿನಲ್ಲಿ ನಿದ್ದೆಗೆ ಜಾರುತ್ತವೆ. ಎಲ್ಲರೂ ಮಲಗಿರುವುದು ಖಚಿತವಾದಾಗ ಒಬ್ಬನೇ ಎದ್ದು ಕಂಪ್ಯೂಟರ್‌ ಮುಂದೆ ಕೂಡುತ್ತೇನೆ. ಯಾವ್ಯಾವುದೋ ಪುಸ್ತಕಗಳನ್ನು ತೆರೆಯುತ್ತೇನೆ. ಓದುತ್ತ, ಗುರುತು ಹಾಕಿಕೊಳ್ಳುತ್ತ, ತೀವ್ರವಾಗಿ ಕಾಡಿದ್ದನ್ನು ಬರೆಯುತ್ತ ಮುಳುಗಿಹೋಗುತ್ತೇನೆ.

ನನಗೆ ಜನ್ನದಿನಾಂಕವಿಲ್ಲ, ಜನ್ಮನಾಮವಿಲ್ಲ, ಹುಟ್ಟಿದ ಸಮಯ ಗೊತ್ತಿಲ್ಲ. ಹೀಗಾಗಿ, ಜನ್ಮನಕ್ಷತ್ರವಿಲ್ಲ, ರಾಶಿ ಗೊತ್ತಿಲ್ಲ. ಇವ್ಯಾವೂ ಇರದ್ದರಿಂದ ನನಗೆ ಭವಿಷ್ಯವೇ ಇಲ್ಲ.

ಏನಿದ್ದರೂ ಕೇವಲ ಭೂತ ಕಾಲ ಹಾಗೂ ವರ್ತಮಾನ ಮಾತ್ರ. ಬದುಕಲು ಅಷ್ಟು ಸಾಕು ಎಂದುಕೊಂಡು ಸುಮ್ಮನಾಗುತ್ತೇನೆ.

- ಚಾಮರಾಜ ಸವಡಿ

11 comments:

ಬಿಸಿಲ ಹನಿ said...

ನಮಸ್ಕಾರ ಸರ್,
ಅಂದ ಹಾಗೆ ಹೇಗಿದ್ದೀರಿ? ನಿಮ್ಮ ಲೇಖನ ಓದುವಾಗ ನಾನೂ ನನ್ನ ಹೆಂಡತಿಗೆ ಅವಳ ಬರ್ಥಡೇ ದಿವಸ ವಿಶ್ ಮಾಡುವದನ್ನು ಮರೆತು ಮಾರನೇ ದಿವಸ ಇರಬಹುದೆಂದು ಆವತ್ತು ವಿಶ್ ಮಾಡಿ ಚನ್ನಾಗಿ ಒಗಿಸಿಕೊಂಡಿದ್ದು ಜ್ಞಾಪಕಕ್ಕೆ ಬಂತು.

ಈ ಸಾಲುಗಳು ತುಂಬಾ ಇಷ್ಟವಾದವು. ಹೀಗೆ ಬರೆಯುತ್ತಿರಿ. ಲಿಬಿಯಾಗೆ ಬಂದು ೧೫ ದಿವಸಗಳಾದರೂ ಏಕೋ ಜಡ್ಡುಗಟ್ಟಿದ ಮನಸ್ಸು ಹೋಗಿಯೇ ಇಲ್ಲ. ಒಮ್ಮೆ ಕೊಡವಿ ನಾನೂ ಬರೆಯಲು ಆರಂಭಿಸಬೇಕಿದೆ.

Chamaraj Savadi said...

ನಿಮ್ಮ ಪ್ರತಿಕ್ರಿಯೆ ಓದಿ ಖುಷಿಯಾಯ್ತು ಉದಯ್‌. ಪರವಾಗಿಲ್ಲ, ದಿನಾಂಕ ಮರೆಯುವವರಲ್ಲಿ ನೀವೂ ಇದ್ದೀರಿ ಎಂಬುದೇ ನನ್ನಂಥವನಿಗೆ ಖುಷಿಯ ವಿಷಯ.

ಊರಿನಿಂದ ದೂರ ಹೋದಾಗ ಮನೆಯ ನೆನಪು ಕಾಡುವುದು ಸಹಜ. ಏರ್‌ಫೋರ್ಸ್‌‌ನಲ್ಲಿದ್ದಾಗ ಈ ಭಾವನೆಯನ್ನು ನಾನು ಅತ್ಯಂತ ಉತ್ಕಟವಾಗಿ ಅನುಭವಿಸಿದ್ದೇನೆ. ಇದೆಲ್ಲ ಜೀವನ ರೂಪಿಸುವ ಉಳಿ ಪೆಟ್ಟುಗಳು.

ಬರೆಯಲು ಶುರು ಮಾಡಿ. ಅದು ನಿಮ್ಮನ್ನು ನೆಮ್ಮದಿಯಾಗಿಡುತ್ತದೆ. ನಿಮ್ಮ ಬರವಣಿಗೆಗಾಗಿ ಎದುರು ನೋಡುತ್ತಿರುತ್ತೇನೆ.

ಸದ್ಯ ಲಿಬಿಯಾದಲ್ಲಿರುವುದು ನೀವು ಸುಮ್ಮನೆ, ಕೊನೆಗೂ ಕರುನಾಡೇ ನಿಮ್ಮನೆ. ಅಲ್ಲಿಯವರೆಗೆ ಕೆಲಸವನ್ನು ಆಸ್ವಾದಿಸಿ.

umesh desai said...

ಇದೊಂಥರಾ ಮಜವಾಗಿದೆ ಇರಲಿ ನಿಮ್ಮ "ಜನ್ಮದಿನ" ಕ್ಕೆ ಶುಭಾಶಯಗಳನ್ನು ತಡವಾಗಿ ಹೇಳುತ್ತಿರುವೆ
ಮನ್ನಿಸೋಣ ಆಗಲಿ

Anonymous said...

ಅಯ್ಯೋ ಎಲ್ಲಾರ ಮನೆ ದೋಸೆ ತೂತೇ ಅನ್ನೋದು ಇದಕ್ಕೆ ಅನ್ಸತ್ತೆ. ನನ್ನ ಪತಿರಾಯ "ನಮ್ಮ ನಮ್ಮವರಿಗೆ ಏನಿಕೆ ವಿಶ್ ಮಾಡ್ಬೇಕು. ಅದೇನಿದ್ರು ಬೇರೆಯವರಿಗೆ ಅಷ್ಟೆ" ಅಂತ ಹೇಳಿ ವಿಶ್ಶು ಮಾಡಲ್ಲ. ಅಕಸ್ಮಾತ್ ಏನಾದ್ರು ಕೊಡ್ಸಿ ಅಂತ ಕೇಳಿದ್ರೆ, ನಾನೇ ಇರಬೇಕಾದ್ರೆ ಇನ್ನೇನು ಅಂತ ಶುರುಮಾಡ್ತಾರೆ. ಹೀಗಾಗಿ ನಾನು ಕೇಳೋದೇ ಬಿಟ್ಟಿದ್ದೀನಿ.

manju said...

ಚೆನ್ನಾಗಿದೆ ಚಾಮರಾಜರೆ, ಇದು ನಮ್ಮದೇ ಕಥೆ! ಶಾಲೆಗೆ ಸೇರಿಸುವಾಗಿನ ಸ೦ದರ್ಭಕ್ಕೆ ತಕ್ಕ೦ತೆ ಅಪ್ಪ ಗೀಚಿದ್ದೇ ನನ್ನದೂ ಜನ್ಮದಿನವಾಯಿತು. ನೀವ೦ದ೦ತೆ ನಮಗೆ ಭವಿಷ್ಯವಿಲ್ಲ, ಅದರ ಬಗ್ಗೆ ಭಯವೂ ಇಲ್ಲ ಎನ್ನುವುದು ಅಕ್ಷರಶಃ ಸತ್ಯ.

PaLa said...

ಹ್ಹಿ ಹ್ಹಿ.. ಸುಮ್ನೆ ನಿಮಗೆ ವಿಶ್ ಮಾಡಿದ್ದು.. ನಂದೂ ೨ ಬರ್ತ್ ಡೆ.. ಒಂದು ಶಾಲೆಗೆ ಮತ್ತೊಂದು ನಿಜವಾದ್ದು.. ಆದ್ರೆ ೨ ಹೆಣ್ಮಕ್ಕಳ ನಂತ್ರ ನಾ ಹುಟ್ಟಿದ್ರಿಂದ ನನ್ನ ಹುಟ್ಟಿದ ದಿನ ಗುರುತಿಟ್ಟುಕೊಂಡಿದಾರೆ :)

ಶರಣು ಹಂಪಿ said...

ಭವಿಷ್ಯ ಕಾಲ ಬೇಡದ ನಿಮಗೆ... ನಮ್ಮದೊಂದು ಸಲಾಮು...
ಭೂತ ಮತ್ತು ವರ್ತಮಾನ ಎರಡೇ ಸಾಕೇ... ಇನ್ನು ಒಂದು ಹೆಜ್ಜೆ ಮುಂದೆ ಹೋದರೆ ವರ್ತಮಾನ ಒಂದೇ ಸಾಕಲ್ಲವೆ.. ಏನೇ ಆಗಲಿ.. ನಿಮ್ಮ ಕೊನೆಯ ಎರಡು ಸಾಲು ನನಗೆ ರುಚಿಸಿತು.
ಹುಟ್ಟುಹಬ್ಬ ಆಚರಿಸಿಕೊಳ್ಳಲಿಕ್ಕೆ ಜನುಮ ದಿನವೇ ಬೇಕಾಗಿಲ್ಲ ಅನ್ನೋದು ನಮ್ಮ ವಾದ... ಏನಂತೀರಿ ಸರ್..

Chamaraj Savadi said...

ಉಮೇಶ್‌: ಮಜವಾಗಿದೆಯಲ್ವಾ? ಆದರೆ, ಫಜೀತಿಯಲ್ಲಿದ್ದಾಗ ಮಜಾ ಇರಲ್ಲ, ಸಜಾ ಅಷ್ಟೇ !

ವಿಚಾರಧಾರೆ: ನಿಮ್ಮ ಹೆಸರೇ ಗೊತ್ತಾಗ್ತಿಲ್ವಲ್ರೀ. ಹೆಸರು ನಮ್ಮ ವ್ಯಕ್ತಿತ್ವದ ಒಂದು ಅಂಗವಲ್ವಾ? ಇರಲಿ, ನೀವು ಗಿಫ್ಟ್‌ ಕೀಳಲು ಹೊಸ ಉಪಾಯ ಕಂಡುಕೊಳ್ಳಬೇಕು ಅನಿಸುತ್ತದೆ. ಪ್ರಯತ್ನಿಸಿ.

ಮಂಜು: ನಾವೆಲ್ಲ ಒಂದೇ ದೋಣಿಯ ಪಯಣಿಗರು.

ಪಾಲ: ಇಬ್ಬರು ಹೆಣ್ಣುಮಕ್ಕಳ ನಂತರ ಹುಟ್ಟಿದ್ದರಿಂದ ನಿಮಗೆ ಸಾಕಷ್ಟು ಸೌಲಭ್ಯಗಳು ಹಾಗೂ ಮಾಡಿದ ತಪ್ಪುಗಳಿಗೆ ವಿನಾಯಿತಿ ಸಿಕ್ಕಿರಬಹುದು ಅನಿಸುತ್ತದೆ.

ಶರಣು: ನಿಮ್ಮ ವಾದಕ್ಕೆ ನನ್ನದೊಂದು ತಕರಾರಿದೆ. ವರ್ತಮಾನ ಒಂದೇ ಸಾಕಾಗಲ್ಲ, ಭೂತಕಾಲದ ಬೇರುಗಳು ಬೇಕಾಗುತ್ವೆ ಅನಿಸುತ್ತದೆ. ಅಲ್ವೆ?

Chaithrika said...
This comment has been removed by the author.
Chaithrika said...

ಬಹಳ ಒಳ್ಳೆಯದು ಬಿಡಿ. ಜನ್ಮ ದಿನಾಂಕ, ನಕ್ಷತ್ರ ಇತ್ಯಾದಿ ಗೊತ್ತಿದ್ದರೆ ಜಾತಕ, ಭವಿಷ್ಯ ಎಲ್ಲ ಹುಟ್ಟಿಕೊಳ್ಳುತ್ತಿತ್ತು. ಇವುಗಳೊಂದಿಗೆ ನಿಮ್ಮ ಗೆಲುವಿಗೆ, ನಿಮ್ಮ ಇಷ್ಟಗಳಿಗೆ ಕಡಿವಾಣ ಹಾಕುವಂತಹ ಸಂಗತಿಗಳೂ ಹುಟ್ಟಿಕೊಳ್ಳುತ್ತಿದ್ದವು. ಈಗ ನಿಮಗೆ ಯಾವುದರ ಚಿಂತೆಯೂ ಇಲ್ಲ. ಬೇಕಾದ ರೀತಿಯಲ್ಲಿ ಬದುಕ ಬಹುದು.

Chamaraj Savadi said...

ನಿಜ ಸಿಂಧೂ. ನನಗೆ ಭವಿಷ್ಯದ ಚಿಂತೆ ಇಲ್ಲ. ಅನಿಸಿದಂತೆ ಬದುಕಬಹುದು. :)