ಇದ್ದ ಒಂದೇ ಕನ್ನಡಕ
ಬಿದ್ದು ಒಡೆದುಹೋಯಿತು
ಬೆಳಕಿಲ್ಲದ ರಾತ್ರಿ ಗಡಿಯಾರ ಹೆಳವ
ಅವಳ ದೀಪದಂಥ ಕಂಗಳಿಗೆ
ಅಕ್ಷರಗಳ ಹುಡುಕಲಿ ಹೇಗೆ?
ಗಾಜೆಂದುಕೊಂಡಿದ್ದು ಕಣ್ಣೇ ಆಗಿತ್ತೇನೋ
ಖಾಲಿ ಫ್ರೇಮಿನ ಕನ್ನಡಕದಲ್ಲಿ
ಅತಿ ನಿಚ್ಚಳ ಅವಳ ಬಿಂಬ
ಏನು ಮಾಡುವುದು ಅಪರಾತ್ರಿಯಲಿ
ದಿನದ ನಿಟ್ಟುಸಿರಿಗೆ ಹೊಸ ಕನಸ ಪೋಣಿಸಿ
ಹೃದಯದ ತೂತ ಮುಚ್ಚಲಾಗದು
ಸುಮ್‌ಸುಮ್ನೇ ಬೀರಿದ ಮುಗುಳ್ನಗೆಗಳ
ಖಾಲಿತನ ತುಂಬಲಾಗದು
ನಾಳೆ ಬೆಳಗಾಗುವವರೆಗೂ ಕತ್ತಲೆಯೇ
ಈ ರಾತ್ರಿ ದೂಡಬೇಕು, ಹೇಗೋ
ಅಕ್ಷರಗಳ ಕ್ಷಮೆ ಕೇಳಿ,
ಕನಸುಗಳಿಗೆ ಕಾಡದಿರಲು ಹೇಳಿ
ಖಿನ್ನ ಮನಸಿಗೆ ನಿದ್ರಿಸಲೊಂದು ಮನವಿ
ಹೂಂ. ಹಾಗೇ ಮಾಡಬೇಕು
ಮುರಿದ ಗಾಜುಗಳ ಗುಡಿಸಿ,
ಕನ್ನಡಕದ ಫ್ರೇಮು ಎತ್ತಿಟ್ಟು
ಬಾರದ ನಿದ್ದೆಗೆ ಬೇಡಿಕೆ ಇಟ್ಟು
ಮುಚ್ಚಬೇಕು ಕಣ್ಣ
ನಿನ್ನೆಯದೆಲ್ಲ ಇಂದಿಗಾದಂತೆ
ನಾಳೆಗಿರಲಿ ಇಂದು, ಎಂದು
ದೀಪವಾರಿಸಿ, ಎವೆ ಮುಚ್ಚಿದರೆ
ಕಣ್ಣರಳಿಸುತ್ತಾಳೆ ಕಣ್ಣೊಳಗೆ
ಕನ್ನಡಕದ ಹಂಗಿಲ್ಲದೇ ಸ್ಪಷ್ಟವಾಗುತ್ತಾಳೆ
ಮರೆಯಬೇಕೆಂದರೂ ಇಷ್ಟವಾಗುತ್ತಾಳೆ
ಅಷ್ಟೇ,
ಇನ್ನು ಈ ರಾತ್ರಿಗೆ ಬೆಳಗಾಗುವುದಿಲ್ಲ
- ಚಾಮರಾಜ ಸವಡಿ
ನಾಳೆ ಏಳಲಿಕ್ಕಾದರೂ ರಾತ್ರಿ ಮಲಗಬೇಕು
21 Mar 2012
ಅಲ್ಲಿಂದ ಹೊರಟಾಗಲೇ ಮಧ್ಯರಾತ್ರಿ.
ಗುಡ್ ಮಾರ್ನಿಂಗ್ ಹೇಳಬೇಕೋ, ಗುಡ್‌ನೈಟ್ ಇನ್ನೂ ಉಳಿದಿದೆಯೋ ಎಂಬ ಗೊಂದಲ. ರಸ್ತೆಗಳು ಅಗಲಕ್ಕೆ ಮೈಚಾಚಿ ಮಲಗಿದ್ದವು. ಆಗೊಂದು, ಈಗೊಂದು ವಾಹನ, ಬೆಳಕಿನಲ್ಲಿ ರಸ್ತೆಯ ತಗ್ಗು, ಉಬ್ಬುಗಳನ್ನು ಹುಡುಕಿಕೊಂಡು ತಂತಮ್ಮ ಗುರಿಯೆಡೆಗೆ ಹೊರಟಿದ್ದವು. ಎಲ್ಲಿಗೆ ಹೋಗಬೇಕು ನಾನು?
ಗಾಡಿಯ ಮೇಲೆ ಕೂತು ಕತ್ತೆತ್ತಿ ನೋಡಿದೆ. ನಕ್ಷತ್ರಗಳು ತಬ್ಬಲಿಯಂತೆ ಮಂಕಾಗಿ ದಿಟ್ಟಿಸಿದವು. ಅವಕ್ಕೂ ಬೇಸರವಾಗಿದೆಯಾ? ತಲೆ ಕೊಡವಿದೆ. ಬೇಸರಪಡಲು, ಮನಸ್ಸು ಮುದುಡಲು, ಖಿನ್ನವಾಗಲು ಅವೇನು ಪ್ರೀತಿಸಿವೆಯಾ ಎಂದು ಸುಮ್ಮನೇ ಹೊರಟೆ. ಅಗಲ ರಸ್ತೆಯಲ್ಲಿ, ಅಪರಾತ್ರಿಯಲ್ಲಿ, ಒಂಟಿ ಪಯಣ. ಮನೆ ದೂರ.
ಹಳೆಯ ಹಾಡುಗಳು ಜೊತೆಯಾದವು. ಗಾಡಿ ತನ್ನ ಪಾಡಿಗೆ ಓಡುತ್ತಿತ್ತು. ನಾನು ಸುಮ್ಮನೇ ಹ್ಯಾಂಡಲ್ ಹಿಡಿದುಕೊಂಡಿದ್ದೆ. ಸಿಗ್ನಲ್‌ಗಳೆಲ್ಲ ಹಳದಿ ಮಿಣುಕುಗಳಾಗಿ, ನೀನು ಆರಾಮವಾಗಿ ಹೋಗಬಹುದು ಎನ್ನುತ್ತಿದ್ದವು. ಸರ್ಕಲ್ ಹತ್ತಿರವಾದಾಗೆಲ್ಲ, ವೇಗ ತಗ್ಗಿಸಿ, ಆಕಡೆ, ಈಕಡೆ ನೋಡಿ, ಮತ್ತೆ ವೇಗ ಹೆಚ್ಚಿಸಿಕೊಂಡು, ಅಷ್ಟರಲ್ಲಿ ಮತ್ತೊಂದು ಸಿಗ್ನಲ್ ಹತ್ತಿರವಾಗಿ, ಮನಸ್ಸಿನಲ್ಲಿ ಮೊರೆಯುತ್ತಿದ್ದ ಹಾಡಿನ ಜಾಗದಲ್ಲಿ ಬೇರೆ ಹಾಡು.
ಮೇಲೆ ಮಾತ್ರ ಅವೇ ದೀನ ನಕ್ಷತ್ರಗಳು. ಒಳಗೆ ಮಂಕು ಭಾವ.
*****
ಮೊದಲೆಲ್ಲ ಇಷ್ಟು ತಡವಾಗಿ ಹೋಗುತ್ತಿರಲಿಲ್ಲ. ನನ್ನಷ್ಟೇ ಖಿನ್ನರಾದ ಕೆಲವರು ಬೇರೆ ಬೇರೆ ಕಾರಣಗಳಿಗಾಗಿ ಜೊತೆಯಾಗಿ, ಅವರ ನೋವುಗಳಿಗೆ ನಾನು ಕಿವಿಯಾಗತೊಡಗಿದಾಗಿನಿಂದ ಹೀಗೆ ತಡವಾಗುತ್ತಿದೆ. ಇಲ್ಲದಿದ್ದರೆ ಕಚೇರಿ ಬಿಟ್ಟರೆ ಮನೆ, ಮನೆ ಬಿಟ್ಟರೆ ಕಚೇರಿ ಎಂಬ ಟೈಂ ಟೇಬಲ್‌ನವ ನಾನು. ಅವರ ಜೊತೆ ಹರಟುತ್ತಿದ್ದರೂ, ಮನಸ್ಸು ಎಲ್ಲೋ ಯಾತ್ರೆ ಹೊರಟಿರುತ್ತದೆ. ಕಾರಣವಿಲ್ಲದೇ ನಕ್ಷತ್ರಗಳನ್ನು ದಿಟ್ಟಿಸುತ್ತದೆ. ಅವಕ್ಕೂ ಖಿನ್ನತೆಯಾ ಎಂದು ಪ್ರಶ್ನಿಸಿಕೊಳ್ಳುತ್ತದೆ. ಛೇ, ಇರಲಿಕ್ಕಿಲ್ಲ ಎಂದು ಸುಮ್ಮನಾಗುತ್ತದೆ. ಮತ್ತೆ ಹರಟೆ, ಮತ್ತೆ ಯಾತ್ರೆ, ಮತ್ತೆ ಗೊಂದಲ.
ಕೊನೆಗೂ ಜೊತೆಗಿರುವ ಗೆಳೆಯನನ್ನು ಮನೆ ಮುಟ್ಟಿಸಿ, ಅಲ್ಲೊಂಚೂರು ಹರಟೆ ಹೊಡೆದು, ಕಟ್ಟೆಯ ಮೇಲೆ, ಅಂಗಡಿಯ ಮುಂದಿನ ಅಗಲ ಫುಟ್‌ಪಾತ್ ಮೇಲೆ ಮಲಗಿದವರು ಮುಸುಕು ಸರಿಸಿ, ನಮ್ಮನ್ನೊಮ್ಮೆ ನಿದ್ದೆ ಕೆಟ್ಟ ಕಣ್ಣಲ್ಲಿ ಕೆಕ್ಕರಿಸಿ ನೋಡಿದಾಗ, ಸರಿ ನಾಳೆ ಸಿಕ್ತೀನಿ ಎನ್ನುತ್ತಾ ಮತ್ತೆ ಗಾಡಿ ಏರುತ್ತೇನೆ. ಮುಂದಿನ ಎಂಟೊಂಬತ್ತು ಕಿಮೀ ನನಗೆ ನಾನೇ.
ಆಗ ಎಲ್ಲಾ ಸಿಗ್ನಲ್ಲುಗಳೂ ಮುಕ್ತ. ಪ್ರತಿಯೊಂದು ಸರ್ಕಲ್‌ನ ಮೂಲೆಯಲ್ಲೂ ಕೆಲವು ಆಟೊಗಳ ಸಾಲು, ಅವುಗಳ ಮುಂದೆ ಹರಟೆ ಹೊಡೆಯುವ ಆಟೊ ಚಾಲಕರು. ಅಪರೂಪಕ್ಕೊಮ್ಮೆ ಪೊಲೀಸರ ಗಸ್ತು ವಾಹನ. ಹಗಲುಹೊತ್ತು ಗಿಜಿಗುಡುವ ರಸ್ತೆಗಳೆಲ್ಲ ದಿನದ ದುಡಿಮೆಯ ನಂತರ ನಿಟ್ಟುಸಿರಿಡುತ್ತ ವಿಶ್ರಾಂತಿಯಲ್ಲಿರುತ್ತವೆ. ಬೀದಿ ದೀಪಗಳಿಗೆ ಬುದ್ಧನ ಪ್ರಶಾಂತತೆ. ಅಲ್ಲಲ್ಲಿ ತೆರೆದುಕೊಂಡ ದೊಡ್ಡ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್‌ಗಳ ಬಾಗಿಲ ಮುಂದೆ ನಿಂತ ಆಂಬುಲೆನ್ಸ್‌ಗಳು, ಅವಸರದಿಂದ ಆಚೀಚೆ ಓಡಾಡುವ ರೋಗಿಗಳ ಸಂಬಂಧಿಗಳನ್ನು ಬಿಟ್ಟರೆ, ಇಡೀ ಊರಿಗೆ ದೊಡ್ಡ ನಿದ್ದೆ.
ಹೊಟ್ಟೆ ಸಣ್ಣಗೆ ಚುರುಗುಡುತ್ತದೆ. ಪರವಾಗಿಲ್ಲ, ಹಸಿವೆಯಾಗುತ್ತಿದೆ ಎಂದು ಖುಷಿ. ಬೇರೆ ಸಮಯದಲ್ಲಾದರೆ ಮುಕ್ಕಾಲು ಗಂಟೆ ಹಿಡಿಯುವ ಪಯಣ, ಅಪರಾತ್ರಿಯಲ್ಲಿ ಕೇವಲ ಇಪ್ಪತ್ತು ನಿಮಿಷಕ್ಕೆಲ್ಲ ಮುಗಿಯುತ್ತದೆ. ಆದರೆ, ಇಪ್ಪತ್ತು ನಿಮಿಷ ಅಗಾಧ ಕಾಲವೇನೋ ಎಂಬಂತೆ ಮನಸ್ಸು ಮಂಕುಮಂಕು.
ಅದು ದಿನದ ಸುಸ್ತಲ್ಲ. ಸಣ್ಣಗೇ ಚುರುಗುಡುವ ಹಸಿವೆಯಿಂದಲೂ ಅಲ್ಲ. ಎಷ್ಟೇ ದಣಿದಿದ್ದರೂ, ರಾತ್ರಿ ಓದಿನ ಕೋಣೆ ಹೊಕ್ಕು, ಅರ್ಧ ಗಂಟೆಯಾದರೂ ಒಂಟಿಯಾಗಿ ಕೂಡದಿದ್ದರೆ, ಅವತ್ತಿನ ದಿನ ಮುಗಿಯುವುದಿಲ್ಲ. ಸಿಗ್ನಲ್‌ಗಳ ಮೇಲೆ ಸಿಗ್ನಲ್ ದಾಟಿ, ಅಗಲ ಒಂಟಿ ರಸ್ತೆಗಳನ್ನು ನುಂಗಿಕೊಂಡು ಮನೆಗೆ ಹತ್ತಿರವಾಗುವ ಹೊತ್ತಿಗೆ ಎಂಥದೋ ಸುಸ್ತು.
*****
ಓದುವ ಕೋಣೆ ಕಾಯುತ್ತಿರುತ್ತದೆ. ಇಡೀ ದಿನ ಹೊರಗೆ ಹೋಗಿದ್ದೆಯಲ್ಲ ಮಿತ್ರಾ, ಹೇಗಿತ್ತು ನಿನ್ನ ದಿನ ಎಂದು ಪ್ರಶ್ನಿಸುತ್ತದೆ. ಅದಕ್ಕೇ ಉತ್ತರ ಗೊತ್ತಿರುವುದರಿಂದ ನಾನು ಏನೂ ಹೇಳುವುದಿಲ್ಲ. ಬಾಗಿಲು ಮುಚ್ಚಿ, ಕಂಪ್ಯೂಟರ್ ತೆರೆದು, ಅದರ ಪಾಡಿಗೆ ಅದನ್ನು ಬಿಟ್ಟು ಸುಮ್ಮನೇ ಕೂಡುತ್ತೇನೆ. ಒಂದೇ ಗತಿಯಲ್ಲಿ ತಿರುಗುವ ಫ್ಯಾನ್, ಅಲ್ಲೆಲ್ಲೋ ಕೋಲಿನಿಂದ ಫುಟ್‌ಪಾತ್‌ನ ಕಲ್ಲುಗಳನ್ನು ಕುಟ್ಟುತ್ತ ಗೂರ್ಖಾ ಸಿಳ್ಳೆ ಹೊಡೆಯುವ ಸದ್ದು, ಫ್ಯಾನಿನ ಗಾಳಿಗೆ ಸಣ್ಣಗೇ ಅಲುಗುವ ಹಾಳೆಗಳನ್ನು ದಿಟ್ಟಿಸುತ್ತೇನೆ. ದೊಡ್ಡದೊಂದು ಖಾಲಿತನ ಒಳಗೆ. ಅದನ್ನು ತುಂಬುವುದು ಹೇಗೆ?
ಮರೆಯಬೇಕೆಂದಾಗಲೇ ಎಲ್ಲ ನೆನಪಾಗತೊಡಗುತ್ತವೆ.
ಎಲ್ಲಾ ಎಂದರೆ, ಎಲ್ಲವೂ. ಸ್ಪಷ್ಟ ಚಿತ್ರಗಳಂತೆ, ಸಜೀವವಾಗಿ ನೆನಪಾಗುತ್ತವೆ. ಭಾಷೆ ಗೊತ್ತಿಲ್ಲದ ಸಿನಿಮಾ ನೋಡುವಂತೆ, ಸುಮ್ಮನೇ ಆ ಚಿತ್ರಗಳನ್ನು ನೋಡುತ್ತ ಹೋಗುತ್ತೇನೆ.
ಹಿಂದಕ್ಕೆ, ಹಿಂದಕ್ಕೆ ಹೋಗುತ್ತದೆ ನೆನಪು. ಗುಜರಾತ್‌ನ ಕಚ್ಛ್ ರಣಭೂಮಿಯಲ್ಲಿ ಕಳೆದ ವರ್ಷಗಳು ನೆನಪಾಗುತ್ತವೆ. ಅಲ್ಲೂ ಹೀಗೇ. ವರ್ಷಗಟ್ಟಲೇ ರಾತ್ರಿಗಳನ್ನು ಒಂಟಿಯಾಗಿ ಒಂಟಿ ರಸ್ತೆಗಳಲ್ಲಿ ತಿರುಗುತ್ತ ಕಳೆದಿದ್ದೆ. ಎದೆ ತುಂಬ ಪುಟಿಯುವ ಕನಸುಗಳು. ಸಾವಿರಾರು ನವಿರು ಭಾವನೆಗಳು.
ಆದರೆ, ಅಲ್ಲಿ ನಕ್ಷತ್ರಗಳು ಉಜ್ವಲವಾಗಿರುತ್ತಿದ್ದವು. ಮರುಭೂಮಿಯಲ್ಲೆಲ್ಲೋ ಒಂಟಿಯಾಗಿದ್ದ ಸೇನಾ ಠಾಣ್ಯದಲ್ಲಿ, ಬೆರಳೆಣಿಕೆಯಷ್ಟಿದ್ದ ಬೀದಿದೀಪಗಳನ್ನು ನಾಚಿಸುವಂತೆ ಪಳಪಳ ಹೊಳೆಯುತ್ತಿದ್ದವು. ಅವುಗಳನ್ನು ಮತ್ತೆ ಮತ್ತೆ ನೋಡುತ್ತ ನಾನು ಗೆಲುವಾಗಲು ಯತ್ನಿಸುತ್ತಿದ್ದೆ. ಅಲ್ಲೂ ಹೀಗೇ ಅಪರಾತ್ರಿಯ ತಿರುಗಾಟ. ಸೇನಾ ಠಾಣ್ಯದ ತಂತಿ ಸುತ್ತಿದ್ದ ಆವರಣದಲ್ಲಿ ಒಂಟಿ ಹುಡುಕಾಟ.
ಅವತ್ತಿಗೂ ಇವತ್ತಿಗೂ ನಡುವೆ ಇಪ್ಪತ್ತೈದು ವರ್ಷಗಳೇ ಕಳೆದುಹೋಗಿವೆ. ಆದರೆ, ಅದೇ ಒಂಟಿತನ, ಅದೇ ಅಪರಾತ್ರಿ, ಅದೇ ಒಂಟಿ ಅಲೆದಾಟ. ವ್ಯತ್ಯಾಸ ಇಷ್ಟೇ: ಅವತ್ತು ಉಜ್ವಲವಾಗಿದ್ದ ನಕ್ಷತ್ರಗಳು ಈ ನಗರದ ಬೀದಿದೀಪದ ಪ್ರಖರತೆಯಲ್ಲಿ ಮಂಕಾಗಿವೆ.
ಎಷ್ಟು ವಿಚಿತ್ರ!
ಆ ಉಜ್ವಲ ನಕ್ಷತ್ರಗಳು ಕೊಂಚವಾದರೂ ಭರವಸೆ ಹುಟ್ಟಿಸುತ್ತಿದ್ದವು. ಆದರೆ, ಈ ಬೀದಿ ದೀಪಗಳ ಪ್ರಖರತೆ ಮನಸ್ಸನ್ನು ಇನ್ನಷ್ಟು ಮಂಕಾಗಿಸುತ್ತಿದೆ.
ಅಗಲ ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುತ್ತ, ಓದುವ ಕೋಣೆಯಲ್ಲಿ ಒಂಟಿಯಾಗಿ ಕೂತುಕೊಂಡೇ ನಿನ್ನೆ ಕಳೆದು ಇಂದು ಬಂದಿರುತ್ತದೆ. ನಾನು ನಿನ್ನೆಗೂ ಸೇರಿಲ್ಲ, ಇಂದಿಗೂ ಹೊಂದಿಕೊಂಡಿಲ್ಲ. ನಡುವೆ ಎಲ್ಲೋ ಕಳೆದುಹೋಗಿದ್ದೇನೆಂದು ಅನಿಸತೊಡಗುತ್ತದೆ.
ಮರೆತಂತಿರುವ ಹಾಡುಗಳು ನೆನಪಾಗುತ್ತವೆ. ಭಾವನೆಗಳು ನೆನಪಾಗುತ್ತವೆ. ಕನಸುಗಳು ಕರೆಯುತ್ತವೆ. ಅಪರಾತ್ರಿಯ ನೀರವತೆಯಲ್ಲಿ, ನನಗೆ ಮಾತ್ರ ಕೇಳಿಸುವಂತೆ ಹಾಡುತ್ತವೆ, ಕಾಡುತ್ತವೆ.
ನಿನ್ನೆಯೂ ಹೀಗೇ ಕೂತಿದ್ದೆ. ಮೊನ್ನೆಯೂ. ಅದರ ಹಿಂದಿನ ದಿನವೂ... ವರ್ಷಗಟ್ಟಲೇ ಹೀಗೆ ಕೂತಿದ್ದೇನೆ. ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿವೆ. ಆದರೆ, ಅವನ್ನು ನಾನು ಒಪ್ಪಿಕೊಂಡಿಲ್ಲ. ಕೆಲ ಪ್ರಶ್ನೆಗಳು ಹೊಸದಾಗಿ ಮೂಡಿವೆ. ಅವಕ್ಕೆ ಉತ್ತರ ಸಿಕ್ಕಿಲ್ಲ. ಈ ಪ್ರಶ್ನೋತ್ತರಗಳ ಭರಾಟೆಯಲ್ಲಿ ಮೂಡಿರಬಹುದಾದ ಕೊಂಚ ವಿವೇಕವನ್ನು ಅನುಭವ ಎಂದುಕೊಂಡಿದ್ದೇನೆ. ಆದರೆ, ಅದಕ್ಕೂ ನನಗೆ ನಿದ್ದೆಯನ್ನು, ಅಪ್ಪಟ ಹಸಿವನ್ನು, ಕೊಂಚ ನೆಮ್ಮದಿಯನ್ನು ಮೂಡಿಸಲು ಆಗಿಲ್ಲ.
*****
ರಾತ್ರಿ ತನ್ನ ಪಾಡಿಗೆ ತಾನು ಸರಿಯುತ್ತ ಹೋಗುತ್ತದೆ. ಗಡಿಯಾರಕ್ಕೆ ಅವಸರವಿಲ್ಲದ ಒಂದೇ ಗತಿ. ನಾಳೆ ಏಳಲಿಕ್ಕಾದರೂ ಈಗ ಮಲಗಬೇಕು. ನನ್ನ ಕನಸುಗಳು ನನಗಿರಲಿ. ಮಲಗಿಕೊಂಡ ಯಾರ ಕನಸನ್ನೂ ಅವು ಕಾಡದಿರಲಿ. ಸುಖನಿದ್ದೆ ನಂತರದ ಅವರ ಬೆಳಗಿನಲ್ಲೊಂದು ಹೊಂಬೆಳಕು ಮೂಡಲೆಂದು ಅಂದುಕೊಳ್ಳುತ್ತೇನೆ.
ಕಂಪ್ಯೂಟರ್ ಆರಿಸಿ, ದೀಪದ ಕತ್ತು ಹಿಸುಕಿ, ಮಂಕು ಬೆಳಕಲ್ಲಿ ಹಾಸಿಗೆಯ ನನ್ನ ಜಾಗ ಹುಡುಕಿಕೊಳ್ಳುತ್ತೇನೆ. ಕಣ್ಣು ಮುಚ್ಚಿಕೊಂಡು ನಿದ್ದೆಗಾಗಿ ಒಂದು ಸದ್ದಿಲ್ಲದ ಪ್ರಾರ್ಥನೆ ಸಲ್ಲಿಸುತ್ತೇನೆ.
ಎಲ್ಲರಿಗೂ ಶುಭರಾತ್ರಿ.
- ಚಾಮರಾಜ ಸವಡಿ
ಹೀಗೆಂದರೆ ಹೀಗೇ, ಹೇಗಿದೆಯೋ ಹಾಗೆ
4 Mar 2012
ಅಂದುಕೊಂಡಂತೆ ಆಗದಿದ್ದರೆ
ಎಂದು ಯೋಚಿಸಿದೆ
ಭಯವಾಯಿತು:
ನಾನು ನಾನಾಗಿರಲ್ಲ
ಅಂದುಕೊಂಡಂತೆ ಆಗಿಬಿಟ್ಟರೆ
ಇನ್ನೂ ಭಯ
ಆಗಲೂ ನಾನು ನಾನಾಗಿರಲ್ಲ
ಹೀಗೇ ಇರಲಿ ಬಿಡು
ಹೀಗೆಂದರೆ ಹೀಗೇ
ಹೇಗಿದೆಯೋ ಹಾಗೆ
***
ಒಮ್ಮೊಮ್ಮೆ ಹೀಗೇ
ನೆನಪಾದಾಗೆಲ್ಲ ವಿಷಾದ
ಕೂತಲ್ಲೇ ಕಳೆದುಹೋಗೋದು
ಎದ್ದಾಗ ಕನಸು
ನಿದ್ದೆಯಲ್ಲಿ ಎಚ್ಚರ
ತುತ್ತು ನೆತ್ತಿಗೇರಿದಾಗ
ನೀರು ಹುಡುಕುವಂತೆ
ಬಿಕ್ಕಳಿಕೆ ನಿಂತಾಗ
ಏನೋ ಕಳಕೊಂಡಂತೆ
ಷೆಲ್ಫು ತುಂಬಿದ ಪುಸ್ತಕಗಳು
ಬರೀ ಲೊಳಲೊಟ್ಟೆ
ಹಸಿದ ಹೊಟ್ಟೆಯ ಮುಂದೆ
ಖಾಲಿ ತಟ್ಟೆ
ಮನಸೆಂಬುದು
ನೆಲೆ ಕಳೆದುಕೊಂಡ ನಾಯಿಮರಿ
ಅಪರಿಚಿತ ಊರಿನ ಬಸ್‌ಸ್ಟ್ಯಾಂಡು
ಒಳಗೇ ಬಚ್ಚಿಟ್ಟುಕೊಂಡು
ಊರೆಲ್ಲ ಹುಡುಕಾಟ
ಬರೀ ಬಿಡಿ ಚಿತ್ರಗಳು
ಜೋಡಿಸಿದಷ್ಟೂ ಗೊಂದಲ
ನಿನ್ನೆ ಎಂಬುದು ಇಂದಾಗಿ
ಇಂದೆಂಬುದೇ ನಾಳೆಯಾಗಿ
ಗಡಿಯಾರ ಮಂಕಾಗಿ
ಕಾಲವೆಂಬುದು ನಾಯಿಬಾಲದಂತೆ
ಸರಿಯಾಗದು
ಬಿಡಲಾಗದು
- ಚಾಮರಾಜ ಸವಡಿ
ಎಂದು ಯೋಚಿಸಿದೆ
ಭಯವಾಯಿತು:
ನಾನು ನಾನಾಗಿರಲ್ಲ
ಅಂದುಕೊಂಡಂತೆ ಆಗಿಬಿಟ್ಟರೆ
ಇನ್ನೂ ಭಯ
ಆಗಲೂ ನಾನು ನಾನಾಗಿರಲ್ಲ
ಹೀಗೇ ಇರಲಿ ಬಿಡು
ಹೀಗೆಂದರೆ ಹೀಗೇ
ಹೇಗಿದೆಯೋ ಹಾಗೆ
***
ಒಮ್ಮೊಮ್ಮೆ ಹೀಗೇ
ನೆನಪಾದಾಗೆಲ್ಲ ವಿಷಾದ
ಕೂತಲ್ಲೇ ಕಳೆದುಹೋಗೋದು
ಎದ್ದಾಗ ಕನಸು
ನಿದ್ದೆಯಲ್ಲಿ ಎಚ್ಚರ
ತುತ್ತು ನೆತ್ತಿಗೇರಿದಾಗ
ನೀರು ಹುಡುಕುವಂತೆ
ಬಿಕ್ಕಳಿಕೆ ನಿಂತಾಗ
ಏನೋ ಕಳಕೊಂಡಂತೆ
ಷೆಲ್ಫು ತುಂಬಿದ ಪುಸ್ತಕಗಳು
ಬರೀ ಲೊಳಲೊಟ್ಟೆ
ಹಸಿದ ಹೊಟ್ಟೆಯ ಮುಂದೆ
ಖಾಲಿ ತಟ್ಟೆ
ಮನಸೆಂಬುದು
ನೆಲೆ ಕಳೆದುಕೊಂಡ ನಾಯಿಮರಿ
ಅಪರಿಚಿತ ಊರಿನ ಬಸ್‌ಸ್ಟ್ಯಾಂಡು
ಒಳಗೇ ಬಚ್ಚಿಟ್ಟುಕೊಂಡು
ಊರೆಲ್ಲ ಹುಡುಕಾಟ
ಬರೀ ಬಿಡಿ ಚಿತ್ರಗಳು
ಜೋಡಿಸಿದಷ್ಟೂ ಗೊಂದಲ
ನಿನ್ನೆ ಎಂಬುದು ಇಂದಾಗಿ
ಇಂದೆಂಬುದೇ ನಾಳೆಯಾಗಿ
ಗಡಿಯಾರ ಮಂಕಾಗಿ
ಕಾಲವೆಂಬುದು ನಾಯಿಬಾಲದಂತೆ
ಸರಿಯಾಗದು
ಬಿಡಲಾಗದು
- ಚಾಮರಾಜ ಸವಡಿ
Subscribe to:
Posts (Atom)