ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!

20 Nov 2008


ಚರ್ಮದ ಚಪ್ಪಲಿಗಳವು. ಕೊಂಡು ಮೂರು ತಿಂಗಳಾಗಿತ್ತು. ಬಸ್ ಹತ್ತುವಾಗ ಇಳಿಯುತ್ತಿದ್ದ ಯಾವನೋ ಪಾಪಿ ಅದರ ಮೇಲೆ ಕಾಲಿಟ್ಟಿದ್ದ. ಹತ್ತುವ ಅವಸರದಲ್ಲಿ ಕಾಲನ್ನು ಬಲವಾಗಿ ಎತ್ತಿದಾಗ ಉಂಗುಷ್ಠ ಅಲ್ಲೇ ಹರ ಹರಾ ಅಂದಿತು.

ರಿಪೇರಿ ಮಾಡಿಸೋಣ ಅಂದುಕೊಂಡರೂ, ಮನಸ್ಸಿಗೆ ಹಳಹಳಿ ತಪ್ಪಲಿಲ್ಲ. ಚಪ್ಪಲಿ ಮೇಲೆ ಕಾಲಿಟ್ಟು ಅದಕ್ಕೊಂದು ಗತಿ ಕಾಣಿಸಿದ ಪಾಪಿಗೆ ಮನದಣಿಯೇ ಶಪಿಸಿದೆ.

ಹಾಗಂತ ಚಪ್ಪಲಿ ಸರಿಯಾದೀತೆ? ಬಸ್ ಇಳಿಯುವವರೆಗೂ ಅದರದೇ ಚಿಂತೆ. ನಾನಿಳಿಯುವ ಸ್ಟಾಪ್‌ನಲ್ಲಿ ಚಪ್ಪಲಿ ದುರಸ್ತಿ ಅಂಗಡಿ ಇರಲಿ ದೇವರೇ ಎಂದು ಬೇಡಿಕೊಂಡೆ.

ಆದರೆ, ದೇವರು ತಥಾಸ್ತು ಅನ್ನಲಿಲ್ಲ. ಬಸ್ ಇಳಿದಾಗ ರಿಪೇರಿ ಅಂಗಡಿ ಇರಲಿ, ಆ ಪರಿ ಸಂದಣಿಯಲ್ಲಿ ಸರಿಯಾಗಿ ನಿಲ್ಲುವುದಕ್ಕೂ ಆಗದಂಥ ಪರಿಸ್ಥಿತಿ. ಹೇಗೋ ಕಾಲೆಳೆದುಕೊಂಡು, ಶಪಿಸಿಕೊಳ್ಳುತ್ತ ಅಲ್ಲೇ ಹತ್ತಿರದ ಯಾವುದೋ ಅಂಗಡಿ ಮುಂದೆ ನಿಂತೆ. ನನ್ನ ದುರಾದೃಷ್ಟಕ್ಕೆ ಅದು ಫ್ಯಾನ್ಸಿ ಸ್ಟೋರ್. ಅಂಗಡಿ ಮುಂದೆ ಅನುಮಾನಾಸ್ಪದವಾಗಿ ನಿಂತ ನನ್ನನ್ನು ಅನುಮಾನದಿಂದ ನೋಡುತ್ತ ಒಳ ಹೋದರು ಹುಡುಗಿಯರು. ಇದು ಸರಿಯಲ್ಲ ಅಂದುಕೊಂಡು ಮತ್ತೆ ಕಾಲೆಳೆಯುತ್ತ ಹೊರಟೆ.

ಚಪ್ಪಲಿ ದುರಸ್ತಿ ಮನಸ್ಸಿನಿಂದ ಬಿಟ್ಟು ಹೋಯಿತು. ಅರ್ಜೆಂಟಾಗಿ ಹೊಸವನ್ನು ಕೊಳ್ಳಬೇಕು. ಇವನ್ನು ಅದೇ ಡಬ್ಬದಲ್ಲಿ ಪ್ಯಾಕ್ ಮಾಡಿಸಿಕೊಂಡು, ಬಿಡುವಾದಾಗ ದುರಸ್ತಿ ಮಾಡಿಸುವುದು ಅಂದುಕೊಂಡೆ.

ಆದರೆ, ದೇವರು ಮತ್ತೆ ತಥಾಸ್ತು ಅನ್ನಲಿಲ್ಲ.

ಹತ್ತಿರದಲ್ಲೆಲ್ಲೂ ಚಪ್ಪಲಿ ಅಂಗಡಿ ಕಾಣಲಿಲ್ಲ. ರೆಡಿಮೇಡ್ ಬಟ್ಟೆಗಳ ಅಂಗಡಿಳೇ ಎಲ್ಲ ಕಡೆ. ಅಲ್ಲಲ್ಲಿ ರೆಸ್ಟುರಾಂಟ್‌ಗಳು, ಎಲೆಕ್ಟ್ರಾನಿಕ್ಸ್ ಅಂಗಡಿಗಳು ಕಂಡವು. ಇವುಗಳ ಮಧ್ಯೆ, ಕೊನೆಗೊಂದು ಡಬ್ಬಾ ಚಪ್ಪಲಿ ಅಂಗಡಿ ಸಿಕ್ಕರೂ ಸಾಕು ಎಂದು ಮನಸ್ಸು ಹಂಬಲಿಸಿತು. ಕಣ್ಣಾಡಿಸುತ್ತ, ಕಾಲೆಳೆದುಕೊಂಡು ಹೊರಟ ನನ್ನ ಸ್ಥಿತಿ ಕಂಡು ನನಗೇ ಸಿಟ್ಟು.

ದುರಾದೃಷ್ಟ ಚಪ್ಪಲಿ ರೂಪದಲ್ಲೂ ಬರುತ್ತದೆ. ಅಷ್ಟೇ ಅಲ್ಲ, ಅದು ನಿಜಕ್ಕೂ ಹೀನಾಯವಾಗಿರುತ್ತದೆ ಎಂಬುದು ಅವತ್ತು ನನ್ನ ಅನುಭವಕ್ಕೆ ಬಂದಿತು. ನಾನು ಹೊರಟ ಫುಟ್‌ಪಾತ್‌ನಲ್ಲಿ ಪಾಲಿಕೆಯವರ ದುರಸ್ತಿ ಕೆಲಸ ನಡೆದಿತ್ತು. ಫುಟ್‌ಪಾತ್ ಅನ್ನು ಅಲ್ಲಲ್ಲಿ ಅಗಿದಿದ್ದರು, ನೀರು ಮಡುಗಟ್ಟಿತ್ತು. ಸಾಮಾನ್ಯ ಸಂದರ್ಭಗಳಲ್ಲಾದರೆ ಜಿಗಿದು ದಾಟಿ ಹೋಗುತ್ತಿದ್ದೆ. ಆದರೆ, ಈಗ ನಾನು ತಾತ್ಕಾಲಿಕವಾಗಿ ಕುಂಟ. ಜಿಗಿಯಲಾರೆ. ಆದರೆ, ಜಿಗಿಯದೇ ಇರಲಾಗದು ಅನ್ನುವಂತಿದೆ ಫುಟ್‌ಪಾತ್.

ನೀರು ನಿಂತ ಕಡೆ ಬೇಗ ದಾಟದಿದ್ದರೆ, ವಾಹನಗಳು ಪಿಚಕಾರಿ ಹೊಡೆದು ಹೋಗುತ್ತವೆ. ಆಗ ಚಪ್ಪಲಿ ಜೊತೆ ಹೊಸ ಬಟ್ಟೆಯನ್ನೂ ಖರೀದಿ ಮಾಡಬೇಕಾದೀತು ಎಂಬ ಎಚ್ಚರಿಕೆಯನ್ನು ನೀಡಿ ಮನಸ್ಸು ಸುಮ್ಮನಾಯಿತು. ಸುಮ್ಮನಾಗುವುದೇನು ’ಬ್ಲ್ಯಾಂಕ್’ ಅಂತಾರಲ್ಲ, ಹಾಗಾಯಿತು. ಫುಟ್‌ಪಾತ್ ಅಗೆದ ಜಾಗದಲ್ಲಿ ಮಂಕನಂತೆ ನಿಂತೆ.

ಒಂದೆರಡು ವಾಹನಗಳು ಅಪಾಯಕಾರಿ ಅನಿಸುವಷ್ಟು ಹತ್ತಿರ ಬಂದವು. ತಕ್ಷಣ ಸರಿದು ನಿಂತೆ. ಆದರೆ, ಉಂಗುಷ್ಠ ಹರಿದ ಚಪ್ಪಲಿ ನನ್ನ ವೇಗಕ್ಕೆ ಬರಲಿಲ್ಲ. ಅದು ಅಲ್ಲೇ ಉಳಿಯಿತು. ಖಾಲಿ ಪಾದ ಕೆಸರನ್ನು ಮೆತ್ತಿಕೊಂಡು ಹಿಂದಕ್ಕೆ ಬಂತು.

ಇದು ನಿಜಕ್ಕೂ ಪಾಪಿ ದಿನ ಎಂದು ಮತ್ತೆ ಶಪಿಸಿಕೊಂಡೆ. ಕೆಸರನ್ನು ಅಲ್ಲೇ ಕಲ್ಲಿಗೆ ಒರೆಸಿ, ಇನ್ನೂ ಅಂಟುಅಂಟಾಗಿದ್ದ ಪಾದಕ್ಕೆ ಉಂಗುಷ್ಠ ಹರಿದ ಚಪ್ಪಲಿ ಸೇರಿಸಿ ಕಾಲೆಳೆಯುತ್ತ ವಿರುದ್ಧ ದಿಕ್ಕಿಗೆ ಹೊರಟೆ. ಎಲ್ಲಾದರೂ ಒಂದು ಅಂಗಡಿ ಕಾಣಲಿ ದೇವರೇ ಅಂತ ಬೇಡಿಕೊಳ್ಳುತ್ತ ಒಂದಿಷ್ಟು ಹೊತ್ತು ಅಲೆದಾಡಿದೆ.

’ಯುರೇಕಾ!’

ಮೂಲೆಯಲ್ಲೊಂದು ಡಬ್ಬಾ ಚಪ್ಪಲಿ ಅಂಗಡಿ ಇದೆ! ನಿಧಿ ಸಿಕ್ಕಷ್ಟು ಸಂತೋಷವಾಯಿತು. ಪರವಾಗಿಲ್ಲ, ಮೊದಮೊದಲು ಸತಾಯಿಸಿದರೂ ದೇವರು ಕೊನೆಗೆ ತಥಾಸ್ತು ಅನ್ನುತ್ತಾನೆ ಎಂದು ಖುಷಿಪಡುತ್ತ ಅಂಗಡಿ ಮುಂದೆ ನಿಂತೆ. ನನಗೇನು ಬೇಕು ಎಂಬುದನ್ನು ನಾನು ಬಾಯಿ ಬಿಟ್ಟು ಹೇಳಬೇಕಿರಲಿಲ್ಲ. ನನ್ನ ಕೊಳೆಯಾದ ಕಾಲು ಹಾಗೂ ಉಂಗುಷ್ಠ ಹರಿದ ಚಪ್ಪಲಿಗಳೇ ಅದನ್ನು ಮಜಬೂತಾಗಿ ಹೇಳಿದ್ದವು.

ನನ್ನ ನೋಡುತ್ತಲೇ ಅಂಗಡಿಯವ ಚಂಗನೇ ಎಗರಿ ಬಂದ. ಯಾವ ಸೈಜ್ ಸರ್ ಅಂದ. ಹೇಳಿದೆ. ಅದುವರೆಗೆ ಕೇಳಿರದ ಬ್ರಾಂಡ್‌ಗಳ ನಾಲ್ಕೈದನ್ನು ನನ್ನೆದುರು ಇಟ್ಟು, ಹಾಕಿ ನೋಡಿ ಸರ್ ಅಂದ.

ನೋಡಿದೆ. ಒಂದು ಜೊತೆ ಒಪ್ಪಿಗೆಯಾದವು. ಆದರೆ, ಏಕೋ ಬಿಗಿಯಾಗುತ್ತವೆ ಅನಿಸಿತು. ಪರವಾಗಿಲ್ಲ ಸರ್, ಒಂದೆರಡು ದಿನ ಹಾಕಿದರೆ ಸರಿಯಾಗುತ್ತವೆ. ಲೂಸ್ ಆಗಿರೋದನ್ನು ತಗೊಂಡ್ರೆ ಆಮೇಲೆ ನಡೆಯುವಾಗ ನಿಮಗಿಂತ ಮುಂಚೆ ಅವೇ ಹೋಗಿಬಿಡುತ್ತವೆ ಎಂದು ಸಮಾಧಾನವನ್ನೂ ಎಚ್ಚರಿಕೆಯನ್ನೂ ಒಮ್ಮೆಲೇ ಹೇಳಿದ ಅಂಗಡಿಯವ.

ಅವನ ಮಾತನ್ನು ಕೇಳದಿರಲು ಸಾಧ್ಯವೆ? ನನ್ನಂಥ ಎಷ್ಟೊಂದು ಅಸಹಾಯಕರನ್ನು ನೋಡಿಲ್ಲ ಆತ? ಹೀಗಾಗಿ ಬಿಗಿಯಾದ ಚಪ್ಪಲಿಗಳನ್ನೇ ಖರೀದಿಸಿದೆ. ನನ್ನ ಹಳೆಯ ಜೋಡುಗಳನ್ನು ಹೊಸಾ ಡಬ್ಬದಲ್ಲಿ ಹಾಕಿ, ಅದನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಸೇರಿಸಿ ಕೈಗಿಟ್ಟ. ಬಿಲ್ ಕೊಟ್ಟು ಹೊರ ಬಂದೆ.

ಜಗತ್ತನ್ನೇ ಗೆದ್ದ ಸಮಾಧಾನ. ಕಾಲಲ್ಲಿ ಹೊಸ ಚಪ್ಪಲಿ ಕಚ್ಚಿಕೊಂಡು ಕೂತಿತ್ತು, ಎಂದೆಂದೂ ನಿನ್ನನು ನಾನು ಬಿಟ್ಟಿರಲಾರೆ ಎಂಬಂತೆ. ನಾನು ಕೂಡಾ, ಬಿಟ್ಟರೆ ಕೆಟ್ಟೇನು ಎಂಬಂತೆ ಬಿಗಿಯಿಂದಲೇ ಹೊರಟೆ. ಇನ್ನು ಬಸ್‌ಗೆ ಕಾಯುವುದು ವ್ಯರ್ಥ ಎಂದು ಆಟೊ ಹಿಡಿದೆ.

ಕಚೇರಿಯಲ್ಲಿ ಚಪ್ಪಲಿ ಸಾಧು ಸ್ವಭಾವದಿಂದಲೇ ಇತ್ತು. ಯಾವಾಗ, ಕೆಲಸ ಮುಗಿಸಿಕೊಂಡು ಮನೆ ಕಡೆ ಹೋಗಲು ಬಸ್‌ಸ್ಟಾಪ್‌ನತ್ತ ಹೆಜ್ಜೆ ಹಾಕತೊಡಗಿದೆನೋ, ಆಗ ತನ್ನ ಅಸಲಿ ಬುದ್ಧಿ ತೋರಿಸಿತು. ಏಕೋ ಕಾಲೊಳಗೆ ಹರಳಿನಂಥದು ಒತ್ತುತ್ತಿದೆ ಅನಿಸಿ ಕಷ್ಟಪಟ್ಟು ಬಿಡಿಸಿಕೊಂಡು ನೋಡುತ್ತೇನೆ! ಹೆಬ್ಬೆರಳಿನ ಮೇಲ್ಗಡೆ ಚರ್ಮ ಕೆಂಪಾಗಿದೆ. ಮೆಲ್ಲಗೇ ಸವರಿದರೆ ಉರಿಯತೊಡಗಿತು.

ಅರೆರೆ, ಹೊಸ ಚಪ್ಪಲಿ ಕಚ್ಚತೊಡಗಿದೆ.

ಆದರೆ, ಏನು ಮಾಡುವುದು? ಬಿಗಿ ಚಪ್ಪಲಿಯನ್ನು ಮತ್ತೆ ಹುಷಾರಾಗಿ ಕಾಲಿಗೆ ತೊಡಿಸಿಕೊಂಡೆ. ಕಾಲು ಅಳುಕಿತು. ಕಣ್ಣು ತುಳುಕಿದವು. ಯಕಃಶ್ಚಿತ್ ಕಾಲೊಳಗಿನ ವಸ್ತು ಕಣ್ಣಲ್ಲಿ ನೀರು ಬರುವಂತೆ ಮಾಡಿತಲ್ಲ ಎಂಬ ರೋಷ ಉಕ್ಕಿತು. ಆದರೆ, ಏನೂ ಮಾಡುವ ಹಾಗಿಲ್ಲ. ಕೈಯಲ್ಲಿ ಹಳೆ ಚಪ್ಪಲಿಗಳಿದ್ದ ಹೊಸ ಡಬ್ಬಾ ಬೇರೆ ಇದೆ. ನನ್ನನ್ನು ಇಂಥ ದುಃಸ್ಥಿತಿಗೆ ದೂಡಿದ ಸಿಟಿ ಬಸ್‌ನ ಪಾಪಿಗೆ ಹಿಡಿಶಾಪ ಹಾಕುತ್ತ ಹೊರಟೆ.

ಅದು ಎಂಥಾ ನಡಿಗೆ ಅಂತೀರಿ. ಆಯಕಟ್ಟಿನ ಜಾಗದಲ್ಲಿ ಕುರುವಾದವರು ನಡೆಯುವಂತೆ ಬಲೇ ಹುಷಾರಿಂದ, ಒಂಥರಾ ಗತ್ತಿನಿಂದ ನಿಧಾನವಾಗಿ ಹೊರಟೆ. ಹೆಜ್ಜೆ ಊರಿದಾಗೆಲ್ಲ, ಚಪ್ಪಲಿ ಕಚ್ಚುತ್ತಿತ್ತು. ತುಟಿ ಅವಡುಗಚ್ಚುತ್ತಿತ್ತು. ಐದೇ ನಿಮಿಷದಲ್ಲಿ ಬಸ್‌ಸ್ಟಾಪ್‌ನಲ್ಲಿ ಇರುತ್ತಿದ್ದವ ಅಂದು ಅರ್ಧ ಗಂಟೆ ತಗೊಂಡೆ. ಮನೆ ಹತ್ತಿರದ ಸ್ಟಾಪ್‌ನಲ್ಲಿ ಇಳಿದು, ಮನೆ ಸೇರುವಾಗ ಮತ್ತೆ ಅರ್ಧ ಗಂಟೆ.

ಬಂದವನೇ ಮೊದಲು ಚಪ್ಪಲಿಯನ್ನು ಕೈಹಾಕಿ ಕಿತ್ತೆಸೆದೆ. ಕಾಲು ತೊಳೆಯುವಾಗ, ತಣ್ಣೀರು ಹಾಕಿಕೊಂಡರೂ ಕೆಂಪಾದ ಜಾಗ ಭಗಭಗ ಉರಿಯಿತು. ಹಳೆಯ ಜೋಡುಗಳನ್ನು ಮೂಲೆಗೆಸೆದೆ. ಅವುಗಳ ಅವಶ್ಯಕತೆ ಇಲ್ಲ. ಕಾಲು ದುರಸ್ತಿಯಾಗುವವರೆಗೂ ಚಪ್ಪಲಿ ಪಥ್ಯ!

ಹೀಗಿರಲಾಗಿ, ಗೆಳೆಯ ಎಂಬ ಹಿತಶತ್ರುವೊಬ್ಬ ಒಂದು ಬಿಟ್ಟಿ ಸಲಹೆ ಕೊಟ್ಟ. ನಿನ್ನ ಕಾಲಿಗೆ ಬಿಗಿಯಾಗುತ್ತಿದ್ದರೆ, ನಿನಗಿಂತ ದೊಡ್ಡ ಕಾಲಿರುವವರ ಹತ್ತಿರ ಅದನ್ನು ಒಂದು ದಿನ ಸರ್ವೀಸಿಂಗ್‌ಗೆ ಬಿಡು. ಅವರು ಹಾಕಿಬಿಟ್ಟ ನಂತರ ನೀನು ಹಾಕಿಕೋ, ಸರಿಯಾಗುತ್ತೆ ಅಂದ.

ಒಳ್ಳೆ ಐಡಿಯಾ ಅನಿಸಿತು.

ಆದರೆ, ನನ್ನ ಪಾದಕ್ಕಿಂತ ದೊಡ್ಡ ಪಾದವಿರುವ ದ್ವಿಪಾದಿಯನ್ನು ಹುಡುಕುವುದು ಎಲ್ಲಿ? ನನ್ನ ದೊಡ್ಡ ಕಾಲಿನ ಗೆಳೆಯರನ್ನು ನೆನಪಿಸಿಕೊಂಡೆ. ಆದರೆ, ಅವರ ಕಾಲು ಉದ್ದ. ನನ್ನಷ್ಟೇ ಗಿಡ್ಡರಾದ, ಆದರೆ, ನನಗಿಂತ ದೊಡ್ಡ ಪಾದ ಹೊಂದಿರುವವರೇ ಸರ್ವೀಸಿಂಗ್‌ಗೆ ಉತ್ತಮ.

ಶಾರ್ಟ್‌‌ಲಿಸ್ಟ್ ಮಾಡುತ್ತ ಹೋದಂತೆ, ಮನೆ ಹತ್ತಿರ ತರಕಾರಿ ಮಾರಲು ಬರುವ ಹುಡುಗ ಒಪ್ಪಿಗೆಯಾದ. ಹೇಗಿದ್ದರೂ ಮನೆ ಮನೆ ತಿರುಗುವವ. ನಾವು ಅವನ ಹತ್ತಿರವೇ ದಿನಾ ತರಕಾರಿ ಕೊಳ್ಳೋದು. ಪುಕ್ಕಟೆ ಹಾಕಿಕೊ ಮಾರಾಯಾ ಅಂದರೆ ಇಲ್ಲವೆನ್ನಲಾರ ಅನಿಸಿದಾಗ, ಪರಿಹಾರ ಸಿಕ್ಕ ನೆಮ್ಮದಿ.

ಮರುದಿನ ಪತ್ರಿಕ ಹುಡುಗನನ್ನು ಕಾಯುವುದು ಮರೆತು ತರಕಾರಿಯವನ ವಿಚಿತ್ರ ಕೂಗಿಗೆ ಕಿವಿಗೊಟ್ಟು ನಿಂತೆ. ಪುಣ್ಯಾತ್ಮ ಎಂಟುಗಂಟೆಯಾದರೂ ಬರಲಿಲ್ಲ. ಗೇಟಿನ ಹತ್ತಿರವೇ ನಿಂತು ಪೇಪರ್ ಓದಿದೆ. ಕಾಫಿ ಕುಡಿದೆ. ಕಚೇರಿಗೆ ಅವಸರದಿಂದ ಹೊರಟವರನ್ನು ನೋಡುತ್ತ ನಿಂತೆ. ಹೆಂಡತಿಗೆ ಅಸಮಾಧಾನ. ಬಂದರೆ, ಕೂಗ್ತಾನೆ ಒಳಗೆ ಬನ್ರೀ ಎಂದು ಆವಾಜ್‌ ಹಾಕಿದಳು. ಕ್ಯಾರೆ ಅನ್ನದೇ ಗೇಟಿಗೆ ಅಂಟಿಕೊಂಡೇ ನಿಂತೆ.

ಎಂಟಾದ ನಂತರ ಪ್ರತ್ಯಕ್ಷನಾದ ಆಸಾಮಿ ಕಂಡ ಕೂಡಲೇ ಪುಳಕ! ಅವತ್ತು ಅವಶ್ಯತೆಗಿಂತ ಹೆಚ್ಚು ತರಕಾರಿ ಕೊಂಡೆ, ಹೆಚ್ಚು ಮಾತಾಡಿದೆ. ದುಡ್ಡು ಕೊಡುವಾಗ, ಚಪ್ಪಲಿ ಸರ್ವೀಸಿಂಗ್ ಮಾಡಿಕೊಡುವ ವಿನಂತಿ ಮುಂದಿಟ್ಟೆ.

ಮೊದಲು ಅವ ನನ್ನನ್ನು ಮಿಕಿಮಿಕಿ ನೋಡಿದ. ನಂತರ ಮುಗುಳ್ನಕ್ಕ. ಆಗಲಿ ಸರ್ ಕೊಡಿ ಎಂದು ಕೃಪೆಯಿಟ್ಟು ನನ್ನ ಚಪ್ಪಲಿಯೊಳಗೆ ತನ್ನ ಕಾಲಿಟ್ಟು ನನ್ನನ್ನು ಕೃತಾರ್ಥನನ್ನಾಗಿ ಮಾಡಿದ. ನಾಳೆ ವಾಪಸ್ ಬಿಡ್ತೀನಿ ಎಂದು ಹೇಳಿ ತನ್ನ ಕರ್ಣಕಠೋರ ಧ್ವನಿಯಲ್ಲಿ ತರಕಾರಿಗಳ ಹೆಸರು ಕೂಗುತ್ತ ಹೊರಟ. ನನ್ನ ಹೊಸಾ ಚಪ್ಪಲಿ ಅವನ ಕಾಲಿಗೆ ಹೇಗೆ ಕಾಣುತ್ತವೆಂಬುದನ್ನು ನೋಡುತ್ತ ಕೊಂಚ ಹೊತ್ತು ಅಲ್ಲೇ ನಿಂತಿದ್ದೆ. ಎಂಥದೋ ಸಮಾಧಾನ !

ಮರು ದಿನ ಅದೇ ರೀತಿ ಗೇಟಿಗೆ ಒರಗಿಕೊಂಡು ನಿಂತೆ. ಚಪ್ಪಲಿ ವಸೂಲು ಮಾಡಬೇಕಲ್ಲ! ಎಂಟಾಯಿತು, ಎಂಟೂವರೆಯಾಯಿತು, ಒಂಬತ್ತು. ಊಹೂಂ. ತರಕಾರಿಯವ ಕಾಣಲಿಲ್ಲ. ಅವನ ಕರ್ಣಕಠೋರ ಕೂಗು ಕೇಳಲಿಲ್ಲ. ಅರೆರೆ, ನನ್ನ ಚಪ್ಪಲಿ ಹಾರಿಸಿಕೊಂಡು ಹೋದನಾ ಬಡ್ಡೀಮಗ ಎಂದು ಮನಸ್ಸು ಕುದಿಯಿತು.

ಅವತ್ತೇಕೋ ಸಮಾಧಾನವೇ ಇಲ್ಲ. ನನಗೇಕೋ ಚಪ್ಪಲಿ ಭಾಗ್ಯವೇ ಇಲ್ಲ ಎಂಬ ಹಳಹಳಿ. ಕಚೇರಿಯಲ್ಲಿ ಕೂತಾಗಲೂ ಮನಸ್ಸು ಪಾದರಕ್ಷೆಗಳನ್ನೇ ನೆನಪಿಸಿಕೊಳ್ಳುತ್ತಿತ್ತು. ’ಯಾಕ್ರೀ ಒಂಥರಾ ಇದ್ದೀರಿ’ ಅಂದರು ಸಹೋದ್ಯೋಗಿಗಳು. ಏನು ಹೇಳಲಿ? ಮನಸ್ಸಿನ ಎದುರು ಚಪ್ಪಲಿ ಜೋಡಿ ತಾಳಗಳಂತೆ ಕುಣಿದಾಡುತ್ತ ಏಕಾಗ್ರತೆ ಕಸಿದವು.

ಅದರ ಮರುದಿನವೂ ಗೇಟಿಗೆ ಒರಗಿ ತರಕಾರಿಯವನ ಧ್ಯಾನಕ್ಕೆ ತೊಡಗಿದೆ. ಎಂಟು ಗಂಟೆಯ ಸುಮಾರು, ಬೀದಿಯ ತಿರುವಿನಲ್ಲಿ ಕರ್ಣಕಠೋರ ಕೂಗು ಕೇಳಿಸಿತು.

ಆಹಾ, ಅದೆಷ್ಟು ಸುಮಧುರವಾಗಿ ಕೇಳಿಸಿತು ನನಗೆ! ಬಂದ ನನ್ನ ಚಪ್ಪಲಿ ಸರ್ವೀಸ್‌ದಾರ ಎಂದು ಮನಸ್ಸು ಕುಣಿದಾಡಿತು. ಗೇಟು ತೆರೆದುಕೊಂಡು ಅವನಿದ್ದಲ್ಲಿಗೇ ಹೋಗಿಬಿಡಲೇ ಎಂಬ ವಿಚಾರ ಬಂದರೂ, ಮರ್ಯಾದೆಗೆ ಅಂಜಿ ತಳಮಳಿಸುತ್ತ ಸುಮ್ಮನೇ ನಿಂತೆ. ನನ್ನ ಹೆಂಡತಿಗೆ ಯಥಾಪ್ರಕಾರ ಅಸಮಾಧಾನ!

ಕೊನೆಗೂ ಬಂದ ಪುಣ್ಯಾತ್ಮ. ಕಾಲಲ್ಲಿ ನನ್ನವೇ ಚಪ್ಪಲಿಗಳು. ತರಕಾರಿ ಕೊಳ್ಳುವುದು ಮರೆತು ಚಪ್ಪಲಿ ವಿಷಯವೇ ಬಾಯಿಗೆ ಬಂತು. ಅದನ್ನು ಕೇಳಿ ಅವನ ಮುಖದಲ್ಲಿ ನಗೆ. ಕಳ್ಳ ಬಡ್ಡೀಮಗ, ನಗುತ್ತಾನೆ ಎಂದು ಮನಸ್ಸು ಕ್ರುದ್ಧವಾದರೂ ನಾನೂ ಸುಳ್ಳುಸುಳ್ಳೇ ನಕ್ಕೆ.

ಅವನು ಬಿಟ್ಟ ಚಪ್ಪಲಿಗಳಿಗೆ ನನ್ನ ಕಾಲು ಸೇರಿಸಿ, ನೆಪಕ್ಕೆ ಒಂದೆರಡು ಸೊಪ್ಪಿನ ಕಟ್ಟು ತೆಗೆದುಕೊಂಡು ದಿಗ್ವಿಜಯ ಸಾಧಿಸಿದವನಂತೆ ಒಳ ಬಂದೆ. ಕಂಪೌಂಡ್‌ನಲ್ಲೇ ನಡೆದಾಡಿ ಪರೀಕ್ಷಿಸಿದೆ. ಈಗ ಕಾಲು ಒತ್ತುತ್ತಿಲ್ಲವಾದರೂ, ಏಕೋ ಚಪ್ಪಲಿಗಳು ಕಾಲಲ್ಲಿ ನಿಲ್ಲುತ್ತಿಲ್ಲ ಅನಿಸಿತು.

ಇನ್ನೊಂದೆರಡು ಸುತ್ತು ಓಡಾಡಿ ನೋಡಿದೆ. ಹೌದು, ಚಪ್ಪಲಿಗಳು ಈಗ ಒತ್ತುತ್ತಿಲ್ಲ. ಆದರೆ, ಕಾಲಿನ ಅಂಕೆಗೂ ಸಿಕ್ಕುತ್ತಿಲ್ಲ. ಪಾದ ಮತ್ತು ಚಪ್ಪಲಿಯ ನಡುವೆ ಸಣ್ಣ ಗಾತ್ರದ ಮೊಬೈಲ್‌ ತೂರಿಸುವಷ್ಟು ಜಾಗ ಉಂಟಾಗಿದೆ!

ತರಕಾರಿಯವನ ಪಾದದ ಉದ್ದ ನನ್ನ ಪಾದದಷ್ಟೇ ಇದ್ದಿರಬಹುದು, ಆದರೆ ಗಾತ್ರ ನನಗಿಂತ ತೀರಾ ದೊಡ್ಡದಿರಬೇಕು. ಅದಕ್ಕೆಂದೇ ಚಪ್ಪಲಿ ಅವನ ಪಾದಕ್ಕೆ ರಿಶೇಪ್ ಆಗಿವೆ.

ಅರೆರೆ, ಘಾತವಾಯಿತು ಎಂದು ಮನಸ್ಸು ಹಳಹಳಿಸತೊಡಗಿತು. ಮೊದಲು ಚಪ್ಪಲಿ ನನ್ನ ಪಾದಕ್ಕಿಂತ ಚಿಕ್ಕದಿತ್ತು. ಈಗ ಅದಕ್ಕಿಂತ ದೊಡ್ಡದಾಗಿದೆ. ಇಂಥ ಅನಾಹುತಕಾರಿ ವಸ್ತುಗಳಿಗೆ ಸರ್ವೀಸಿಂಗ್ ಮಾಡಿಸುವ ಐಡಿಯಾ ಕೊಟ್ಟ ಧೂರ್ತ ಗೆಳೆಯನನ್ನು ಮನಸಾರೆ ಬೈದುಕೊಂಡೆ.

ಮರುದಿನವೂ ಗೇಟಿನ ಬಳಿ ಕಾಯ್ದು ನಿಂತೆ. ಎಂಟಾದ ನಂತರ ತರಕಾರಿಯವ ಬಂದ. ಚಪ್ಪಲಿ ಸರಿಯಾದವಾ ಸರ್ ಎಂದು ಕೇಳಿದ ಅವನಿಗೆ ನೇರ ಉತ್ತರ ಕೊಡದೇ, ಇವನ್ನು ನೀನೇ ಇಟ್ಟುಕೋ ಮಾರಾಯ, ನಾನು ಬೇರೆ ಜೊತೆ ತಗೊಂಡೆ ಅಂದೆ. ಆತ ಅಚ್ಚರಿಯಿಂದ ನೋಡುತ್ತಿದ್ದಂತೆ, ರಸ್ತೆಯ ಮಧ್ಯೆಯೇ ಚಪ್ಪಲಿ ಅವನ ಮುಂದೆ ಬಿಟ್ಟು, ಬರಿಗಾಲಲ್ಲೇ ಒಳಗೆ ಬಂದೆ. ನೋಡಿದರೆ, ನನ್ನ ಹೆಂಡತಿ ಮುಸಿಮುಸಿ ನಗುತ್ತಿದ್ದಾಳೆ.

ಏಕೋ!?

- ಚಾಮರಾಜ ಸವಡಿ

3 comments:

Sushrutha Dodderi said...

ವೆರಿ ನೈಸ್! ಚನಾಗ್ ಬರ್ದಿದೀರಾ. A related link:

http://madhu-vana.blogspot.com/2008/09/blog-post.html

Lakshmi Shashidhar Chaitanya said...

ನನಗೆ ಪ್ರಾಕ್ಟಿಕಲ್ ಪರೀಕ್ಷೆ ಇದ್ದ ದಿನ ಸರಿಯಾಗಿ ನಿಮ್ಮ ಹಾಗೇ ಬಸ್ಸಿನಲ್ಲಿ ನನ್ನ ಚಪ್ಪಲಿ ಕಟ್ಟಾಯ್ತು...ಅರ್ಧ ಘಂಟೆಯಲ್ಲಿ ನಾನು ಎಕ್ಸಾಮ್ ಹಾಲ್ ನಲ್ಲಿರಬೇಕು, ದಾರಿಯಲ್ಲಿ ಚಪ್ಪಲಿ ಅಂಗಡಿ ಕಾಣಲೊಲ್ಲದು ! ನಾನು ಪಟ್ಟ ಪಾಡು...ಅಬ್ಬಾ !

ಒಳ್ಳೇ ಲೇಖನ.

Chamaraj Savadi said...

ಥ್ಯಾಂಕ್ಸ್‌ ಸುಶ್ರುತ ಮತ್ತು ಲಕ್ಷ್ಮೀ.
- ಚಾಮರಾಜ ಸವಡಿ