ರೆಂಬೆ ಕೊಂಬೆಗಳಿಲ್ಲದ ಮರಗಳು

29 Nov 2008


’ನಾನು ಇಂಥವರ ಶಿಷ್ಯ ಅಥವಾ ಶಿಷ್ಯೆ’ ಎಂಬ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ’ಗುರುವಿಗೆ ತಕ್ಕ ಶಿಷ್ಯ/ಶಿಷ್ಯೆ’ ಎಂಬ ಮಾತೂ ಉಂಟು.

ಪಿ. ಲಂಕೇಶ್ ಅಂತಹ ಹಲವಾರು ಜನರನ್ನು ಬೆಳೆಸಿದರು. ತಮ್ಮ ಮಕ್ಕಳಿಂದ ಬರೆಸದೇ ಈಗ ತಾನೆ ತಾರುಣ್ಯಕ್ಕೆ ಕಾಲಿಡುತ್ತಿದ್ದ ಹುಡುಗ-ಹುಡುಗಿಯರಿಂದ ಬರೆಸಿ ಪತ್ರಿಕೆ ಬೆಳೆಸಿದ್ದಷ್ಟೇ ಅಲ್ಲ, ಅವರನ್ನೂ ಬೆಳೆಸಿದರು. ಲಂಕೇಶರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ಹಲವಾರು ಉತ್ತಮ ಬರಹಗಾರರು ಅದಕ್ಕೆ ಸಾಕ್ಷಿ. ಇಂಥದೇ ಉದಾಹರಣೆಯನ್ನು ಪತ್ರಿಕೋದ್ಯಮವೊಂದೇ ಅಲ್ಲ, ಪ್ರತಿಯೊಂದು ಕ್ಷೇತ್ರದಲ್ಲಿಯೂ ನೋಡಬಹುದು. ಪುಟ್ಟಣ್ಣ ಕಣಗಾಲ್ ಹಲವಾರು ಕಲಾವಿದ/ಕಲಾವಿದೆಯರನ್ನು ರೂಪಿಸಿದರು.

ಸದ್ಯಕ್ಕೆ ಪತ್ರಿಕೋದ್ಯಮವನ್ನಷ್ಟೇ ನೋಡುವುದಾದರೆ, ಲಂಕೇಶರ ನಂತರ ಆ ಮಾದರಿಯನ್ನು ಅನುಸರಿಸಿ ಯಶಸ್ವಿಯಾದವರು ಅಗ್ನಿ ಶ್ರೀಧರ್. ಪತ್ರಿಕೋದ್ಯಮದಲ್ಲಿ ಏನೇನೂ ಅನುಭವವಿಲ್ಲದೇ ಇದ್ದರೂ, ಅಗ್ನಿ ಶ್ರೀಧರ್ ’ಅಗ್ನಿ’ ಪತ್ರಿಕೆ ಆರಂಭಿಸಿದರು. ಹಲವಾರು ಪತ್ರಕರ್ತರನ್ನು ಹುಟ್ಟುಹಾಕಿದರು. ತಾವೂ ಬೆಳೆದರು, ಹೊಸಬರನ್ನೂ ಬೆಳೆಸಿದರು.

ಆ ಕಾಲ ಮರೆಯಾಗಿ ಹೋಯಿತೆ ಎಂದು ಹಲವಾರು ಸಾರಿ ನನಗೆ ಅನ್ನಿಸಿದೆ.

ನನ್ನ ಚಿಕ್ಕ ಅನುಭವದ ಹಿನ್ನೆಲೆಯಲ್ಲಿ ನೋಡಿದರೂ, ಈ ವೃತ್ತಿಯಲ್ಲಿ ತುಂಬ ಜನ ಪ್ರತಿಭಾವಂತರು ಇರುವುದು ನನ್ನ ಗಮನಕ್ಕೆ ಬಂದಿದೆ. ಅವರಲ್ಲಿ ಆದರ್ಶಗಳಿವೆ, ಕನಸುಗಳಿವೆ, ಪ್ರತಿಭೆಯಿದೆ. ಒಂದಿಷ್ಟು ಸಾಣೆ ಹಿಡಿಯುವ, ಪೋಷಿಸುವ ಕೆಲಸ ನಡೆದರೂ ಸೊಗಸಾಗಿ ಬರೆಯಬಲ್ಲವರು ತುಂಬ ಜನ ಸಿಗುತ್ತಾರೆ. ಅವರಿಗೆ ಒಂದಿಷ್ಟು ಮಾರ್ಗದರ್ಶನ ಬೇಕಿದೆ. ಅವರಿಗೆ ಕೈಹಿಡಿದು ಬರೆಸಬೇಕಿಲ್ಲ. ಅವರನ್ನು ಅವರ ಪಾಡಿಗೆ ಬಿಟ್ಟರೂ ಸಾಕು, ತುಂಬ ಚೆನ್ನಾಗಿ ಬರೆಯುತ್ತಾರೆ. ಹೊಸ ಹೊಳಹುಗಳನ್ನು ಹೆಕ್ಕಿ ತರುತ್ತಾರೆ. ಅಂಥವರಿಗೆ ಒಂಚೂರು ಅವಕಾಶ, ಪ್ರೋತ್ಸಾಹ ನೀಡಿದರೂ ಸಾಕು, ಇವತ್ತು ಪತ್ರಿಕೋದ್ಯಮದಲ್ಲಿ ಕಾಣುತ್ತಿರುವ ಹಲವಾರು ಸಮಸ್ಯೆಗಳು ತಮಗೆ ತಾವೆ ನಿವಾರಣೆಯಾಗುತ್ತವೆ.

ಆದರೆ, ಅಂತಹ ಕೆಲಸ ನಡೆಯುತ್ತಿಲ್ಲ.

ಅವಕಾಶ ಕೊಡಬಹುದಾದ ಹಂತದಲ್ಲಿರುವವರಿಗೆ ಇಂತಹ ಯುವ ಪ್ರತಿಭೆಗಳನ್ನು ಬೆಳೆಸಲು ಏನೋ ಅಳುಕು. ಅವರನ್ನು ಪ್ರೋತ್ಸಾಹಿಸಿದರೆ, ತಮಗಿಂತ ಮೇಲೆ ಬಂದುಬಿಡುತ್ತಾರೇನೋ ಎಂಬ ಹಿಂಜರಿಕೆ. ಹಾಗಾಗಬಾರದು ಎಂಬ ಅಸೂಯೆ. ನಾನು ಕಷ್ಟಪಟ್ಟು ಮೇಲೆ ಬಂದಿದ್ದೇನೆ. ಅವರೂ ಹಾಗೇ ಮಾಡಲಿ ಎಂಬ ದುರ್ಬುದ್ಧಿ. ಅಷ್ಟೇ ಆದರೆ, ಪರವಾಗಿಲ್ಲ. ಆದರೆ, ಬೆಳೆಯುವ ಕುಡಿಯನ್ನು ಮೊಳಕೆಯಲ್ಲೇ ಚಿವುಟುವ ನೀಚತನವೂ ಸೇರಿಕೊಂಡಿರುತ್ತದೆ. ಹೀಗಾಗಿ, ಎಷ್ಟೋ ಪ್ರತಿಭಾವಂತರು ತೆರೆಮರೆಯಲ್ಲೇ ಇದ್ದಾರೆ. ಅವರಿಗೆ ಅವಕಾಶಗಳಿಲ್ಲ.

ಹಾಗಂತ ಅವರು ಪೂರ್ತಿ ನಾಶವಾಗಿಬಿಡುತ್ತಾರೆ ಎಂದಲ್ಲ. ತಮ್ಮ ಸರದಿಗಾಗಿ ಅವರು ತುಂಬ ಕಾಯಬೇಕಾಗುತ್ತದೆ. ಸಾಕಷ್ಟು ಹೋರಾಟ ನಡೆಸಬೇಕಾಗುತ್ತದೆ. ಸಂಸ್ಥೆಗಳ ಮೇಲೆ ಸಂಸ್ಥೆಗಳನ್ನು ಬದಲಿಸಬೇಕಾಗುತ್ತದೆ. ಹಲವಾರು ರೀತಿಯ ಪ್ರಯೋಗಗಳನ್ನು ನಡೆಸಿ, ತಮ್ಮ ಪ್ರತಿಭೆ ಮುಕ್ಕಾಗದಂತೆ ಕಾಪಾಡಿಕೊಳ್ಳಬೇಕಾಗುತ್ತದೆ. ಆದರೆ, ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಎಷ್ಟೋ ಜನ ನಿರಾಶರಾಗುತ್ತಾರೆ. ನಿರ್ಲಿಪ್ತರಾಗುತ್ತಾರೆ. ಆಸಕ್ತಿ ಕಳೆದುಕೊಂಡು ವೃತ್ತಿಯಿಂದ, ಪ್ರವೃತ್ತಿಯಿಂದ ವಿಮುಖರಾಗುತ್ತಾರೆ. ಬಹಳಷ್ಟು ಜನ ಸಿನಿಕರಾಗಿ, ವ್ಯವಸ್ಥೆ ವಿರುದ್ಧ ಆಕ್ರೋಶ ಬೆಳೆಸಿಕೊಂಡು ಕಂಟಕಪ್ರಾಯರಾಗುತ್ತಾರೆ. ಅದು ಇನ್ನಷ್ಟು ಅಪಾಯಕಾರಿ ಬೆಳವಣಿಗೆ.

ಯಾವುದೇ ಸಂಸ್ಥೆ ನೋಡಿದರೂ ಈ ಮಾತಿಗೆ ಸಾಕ್ಷ್ಯ ಸಿಗುತ್ತದೆ. ತನ್ನ ಮಕ್ಕಳನ್ನು ಬಿಟ್ಟು ಇತರರು ಬೆಳೆಯಬಾರದು ಎಂದು ಹೊರಟರು ಎಚ್.ಡಿ. ದೇವೇಗೌಡ. ಅದರಿಂದ ಪಕ್ಷ ಬೆಳೆಯಲಿಲ್ಲ. ಇದ್ದ ಅಧಿಕಾರವನ್ನೂ ಅವರು ಕಳೆದುಕೊಳ್ಳಬೇಕಾಯಿತು. ಹಲವಾರು ನಾಯಕರು ಪಕ್ಷ ಬಿಟ್ಟು ಹೋದರು. ಹಿಂದೆ ಇದೇ ಮಾದರಿಯನ್ನು ದಿ. ಪ್ರಧಾನಿ ಇಂದಿರಾ ಗಾಂಧಿ ಅನುಸರಿಸಿದ್ದರು. ಅದರ ಪರಿಣಾಮ ಏನಾಯಿತು ಎಂಬುದು ಎಲ್ಲರಿಗೂ ಸ್ಪಷ್ಟ. ಇತರರ ಸಹಜ ಅವಕಾಶಗಳನ್ನು, ಬೆಳವಣಿಗೆಯನ್ನು ತಡೆಯುವ ವ್ಯಕ್ತಿ ತನ್ನ ಬೆಳವಣಿಗೆ ಹಾಗೂ ಅವಕಾಶಗಳಿಗೇ ಕಲ್ಲು ಹಾಕಿಕೊಳ್ಳುತ್ತಾನೆ.

ಹಿಂದೊಮ್ಮೆ ಓದಿದ ವಿಷಯವೊಂದು ಇಲ್ಲಿ ನೆನಪಾಗುತ್ತಿದೆ: ನಿಕೃಷ್ಟ, ಮಹತ್ವವಲ್ಲದ ಎಂದು ನಾವು ಭಾವಿಸುವ ಜೀವಿಯೂ ತನ್ನ ಸಂತಾನ ಸೃಷ್ಟಿಸಿ ಸಾಯುತ್ತದೆ. ಒಂದು ಸಾಧಾರಣ ಬೀಜವೂ, ತನ್ನ ಬದುಕಿನ ಅವಧಿಯಲ್ಲಿ ತನ್ನಂಥ ಹಲವಾರು ಬೀಜಗಳನ್ನು ಸೃಷ್ಟಿಸುತ್ತದೆ. ಆದರೆ, ಪ್ರತಿಭಾವಂತರು, ಆಯಕಟ್ಟಿನ ಹುದ್ದೆಯಲ್ಲಿರುವವರು ಈ ನಿಕೃಷ್ಟ ಜೀವಿಗೂ ಕಡೆಯಾಗಿ ವರ್ತಿಸುವುದು ಏಕೆಂಬುದೇ ಅರ್ಥವಾಗುವುದಿಲ್ಲ. ಅದಕ್ಕೆ ಕಾರಣಗಳಿರಬಹುದು. ಆದರೆ, ಅದರಿಂದ ಯಾರಿಗೂ ಉಪಯೋಗವಿಲ್ಲ. ರೆಂಬೆ ಕೊಂಬೆಗಳು ವಿಸ್ತರಿಸುತ್ತಿದ್ದರೇ ಮರ ಬೆಳೆವುದು. ಹಾಗೆ, ಪ್ರತಿಭಾವಂತ ಬೆಳೆಯುವುದು ತನ್ನ ಜೊತೆಗಿರುವವರ ಬೆಳವಣಿಗೆಯಿಂದ ಮಾತ್ರ.

ಇಲ್ಲದಿದ್ದರೆ, ಹೈಬ್ರಿಡ್ ಬೀಜದಂತೆ ಆಗುತ್ತಾರೆ ಇಂಥ ಪ್ರತಿಭಾವಂತರು. ತಾವವು ಮಾತ್ರ ಬೆಳೆಯುತ್ತಾರೆ. ಆದರೆ, ಅವರ ಸೃಷ್ಟಿ ನಪುಂಸಕವಾಗಿ ವ್ಯರ್ಥವಾಗುತ್ತದೆ.

- ಚಾಮರಾಜ ಸವಡಿ

3 comments:

ಆಲಾಪಿನಿ said...

ಅರ್ಥಪೂರ್ಣ, ವಾಸ್ತವ

chanakya said...

ನಿಮ್ಮ ಮಾತು ನೂರಕ್ಕೆ ನೂರರಸ್ಟು ಸತ್ಯ. ಇದು ಯಾವದೋ ಒಂದು ವಲಯಕ್ಕೆ ಸೀಮಿತವಾಗಿಲ್ಲ. ಪ್ರತಿಭೆಗಳನ್ನು ಬೆಳೆಸುವ ಮನೋಭಾವ ಪರಿಣಿತರಿಗೆ ಏಕೆ ಬರೊಲ್ಲ ಅನ್ನೋದೇ ತಿಳೀತಿಲ್ಲ.ಒಮ್ಮೆ ಭ್ರಮನಿರಸನಕ್ಕೆ ಒಳಗಾಗುವ ಅದೆಶ್ಟೊ ಪ್ರತಿಭೆಗಳು ಶಾಶ್ವತವಾಗಿ ಮೂಲೆಗುಂಪಾಗುವ ಆತಂಕವೂ ಇದೆ.
ಗೆಳೆಯಾ ನಮ್ಮಿಂದ ಅಂತಹ ತಪ್ಪು ಆಗದಂತೆ ಎಚ್ಚರ ವಹಿಸೋಣ ಏನಂತೀರಾ?

Chamaraj Savadi said...

ಥ್ಯಾಂಕ್ಸ್‌ ಶ್ರೀದೇವಿ ಮತ್ತು ಚಾಣಕ್ಯ. ನಮ್ಮ ವ್ಯಾಪ್ತಿಯಲ್ಲಿ ಇಂತಹ ತಪ್ಪನ್ನು ಮಾಡದಿರಲು ಯತ್ನಿಸೋಣ.

- ಚಾಮರಾಜ ಸವಡಿ