ಅಲಾರಾಂಗೆ ಚಳಿಗಾಲವಿಲ್ಲ.

22 Nov 2008


ಅದಕ್ಕೆ ಮಳೆಗಾಲವೂ ಇಲ್ಲ, ಬೇಸಿಗೆ ಕಾಲವೂ ಇಲ್ಲ. ಅದಕ್ಕೆ ಇರುವುದು ಒಂದೇ ಕಾಲ. ಅದು ಸಮಯ.

ಯಾವಾಗ ಸೆಟ್ ಮಾಡಿರುತ್ತೇವೋ, ಆ ಕಾಲಕ್ಕೆ ಸರಿಯಾಗಿ ಬಡಿದುಕೊಳ್ಳುವುದೊಂದೇ ಅದಕ್ಕೆ ಗೊತ್ತು. ಹಾಗೆ ಬಡಿದುಕೊಳ್ಳುತ್ತಾ, ನಮ್ಮನ್ನೂ ಬಡಿದು ಎಬ್ಬಿಸುತ್ತದೆ. ಅಥವಾ ಎಬ್ಬಿಸಲು ಬಡಿದಾಡುತ್ತದೆ.

ಮೋಡ ತುಂಬಿದ ಬೆಂಗಳೂರಿನ ಆಕಾಶದ ಕೆಳಗೆ, ರಸ್ತೆಗಳು ಅಂಗಾತ ಮಲಗಿ ಮೋಡವನ್ನೇ ದಿಟ್ಟಿಸಿ ನೋಡುತ್ತ ಮಲಗಿರುವ ಹೊತ್ತು ಬಡಿದುಕೊಳ್ಳುವುದೆಂದರೆ ಅದಕ್ಕೆ ತುಂಬ ಇಷ್ಟ. ಆಗ ಸಮಯ ಎಷ್ಟಾಗಿರುತ್ತದೆಂಬುದು ನನಗೆ ಗೊತ್ತು. ಆದರೂ, ಅಲಾರಾಂನ ತಲೆ (?) ಕೆಟ್ಟಿದೆ ಎಂದು ನಂಬಲು ಮನಸ್ಸು ಬಯಸುತ್ತದೆ. ಅಷ್ಟು ಬೇಗ ನಸುಕಿನ ಐದು ಗಂಟೆಯಾಯಿತೆ? ಎಂದು ನಂಬಲು ಅದು ತಯಾರಿರುವುದಿಲ್ಲ. ನಿದ್ದೆಗಟ್ಟಣಿನಲ್ಲೇ ಹುಡುಕಿ ಅಲಾರಾಂ ತಲೆಗೆ ಮೊಟಕುತ್ತೇನೆ. ಪಾಪ, ಸುಮ್ಮನಾಗುತ್ತದೆ. ಆದರೆ, ಅದರ ಎಚ್ಚರಿಕೆ ಮನಸ್ಸಿನ ಗಡಿಯಾರದೊಳಗೆ ಸೇರಿಕೊಂಡು ಟಕ್ ಟಕ್ ಅನ್ನಲು ಶುರುವಾಗಿರುತ್ತದೆ. ಅದನ್ನು ಮೊಟಕಲಾಗದು.

ಮೊದಲಿನಿಂದಲೂ ಹೀಗೇ. ಅಲಾರಾಂ ಬಡಿದುಕೊಂಡ ನಂತರ ಮತ್ತೆ ಮಲಗುವುದು ನನಗೆ ಕಷ್ಟ. ಅವತ್ತು ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಮನಸ್ಸು ಓದಲು ಶುರು ಮಾಡುತ್ತದೆ. ಹೊರಗೆ ಚಳಿ ಇರಲಿ, ಮಳೆ ಇರಲಿ, ಕೆಟ್ಟ ಸೆಕೆ ಇರಲಿ- ಅದರ ಪಟ್ಟಿ ಓದುವಿಕೆ ತಪ್ಪುವುದಿಲ್ಲ. ಈ ನನ್ನಗಂದು ಮನಸ್ಸು ಅಲಾರಾಂಗಿಂತ ಹೆಚ್ಚು ಕ್ರಿಯಾಶೀಲ, ಕರಾರುವಾಕ್ಕು. ಆದರೂ, ಸ್ವಲ್ಪ ಹೊತ್ತು ಸೋಮಾರಿತನ ಅನುಭವಿಸುತ್ತ ಅದರ ಪಟ್ಟಿ ಓದುವಿಕೆಯನ್ನು ನಿರಾಸಕ್ತಿಯಿಂದ ಕೇಳಿಸಿಕೊಳ್ಳುತ್ತೇನೆ. ಅರೆ, ಇದು ನಿತ್ಯದ ವರಾತ ಬಿಡು ಅಂದು ಮತ್ತೆ ಮಲಗಲು ಯತ್ನಿಸುತ್ತೇನೆ.

ಆದರೆ, ಮನಸಿನ ಟಿಕ್ ಟಿಕ್ ಶುರುವಾಗಿಬಿಟ್ಟಿರುತ್ತದೆ.

ಒಂಚೂರು ಹೊರಳಾಡುತ್ತೇನೆ. ಸುಳ್ಳು ಸುಳ್ಳೇ ಮುಸುಕೆಳೆದು, ಇನ್ನೂ ಐದಾಗಿಲ್ಲ ಅಂದುಕೊಳ್ಳುತ್ತ ಮಲಗಲು ಯತ್ನಿಸುತ್ತೇನೆ. ’ಹೊರಗೆ ಯಾವ ಪರಿ ಚಳಿ ಇದೆ. ಈ ಚಳಿಯಲ್ಲಿ ಎದ್ದು ಮಾಡುವಂಥ ಮಹತ್ಕಾರ್ಯ ಏನಿದೆ’ ಅಂದುಕೊಳ್ಳುತ್ತ ಮನಸ್ಸನ್ನು ಒಲಿಸಲು ಯತ್ನಿಸುತ್ತೇನೆ. ಬಡ್ಡಿಮಗಂದು, ಟಿಕ್ ಟಿಕ್ ನಿಲ್ಲಿಸುವುದಿಲ್ಲ.

ಇನ್ನು ಏಳದೇ ವಿಧಿಯಿಲ್ಲ.

ಆಲಸ್ಯದಿಂದ ಎದ್ದು ಹಾಸಿಗೆಯಲ್ಲೇ ಕೂಡುತ್ತೇನೆ. ’ಈಗ ನೀರು ತಣ್ಣಗಿರುತ್ತದೆ. ಕಾಲ ಮೇಲೆ ಬಿದ್ದರೆ ಮುಗೀತು, ಮಂಕಾಗುತ್ತೇನೆ’ ಎಂದೆಲ್ಲ ಹೇಳಿಕೊಂಡು ಮನಸ್ಸನ್ನು ಕಳ್ಳತನದಿಂದ ಆಲಿಸುತ್ತೇನೆ. ’ಟಿಕ್ ಟಿಕ್ ಟಿಕ್...!’ ಊಹೂಂ, ಅದು ಕೇಳಿಸಿಕೊಳ್ಳುತ್ತಿಲ್ಲ. ’ಇವತ್ತು ಮಾಡುವಂಥ ಕೆಲಸವೇನೂ ಇಲ್ಲ ಗುರೂ’ ಅನ್ನುತ್ತೇನೆ. ಆದರೂ, ’ಟಿಕ್ ಟಿಕ್ ಟಿಕ್...!’

ಉಪಯೋಗವಿಲ್ಲ. ನಾನೇ ಪಳಗಿಸಿದ ಪಶು ನನ್ನ ಮಾತು ಕೇಳುತ್ತಿಲ್ಲ. ನಿರಾಸೆಯಾಗುತ್ತದೆ. ವಿಧಿಯಿಲ್ಲದೇ ಏಳುತ್ತೇನೆ. ಹೊದಿಕೆ ಮಡಿಸಿ ದಿಂಬಿನ ಮೇಲಿಟ್ಟು, ಉಳಿದಿದ್ದನ್ನು ಹೆಂಡತಿ, ಮಕ್ಕಳು ಎದ್ದನಂತರ ಮಡಿಸಿದರಾಯಿತೆಂದು ಬಾತ್‌ರೂಮಿಗೆ ಹೊರಡುತ್ತೇನೆ.

ಅಲ್ಲಿ ನೀರು ನಿಜಕ್ಕೂ ತಣ್ಣಗಿದೆ.

’ಹೇಳಲಿಲ್ಲವಾ ನಾನು?’ ಅಂದು ಮನಸ್ಸನ್ನು ಬೈದುಕೊಳ್ಳುತ್ತೇನೆ. ’ತಣ್ಣಗಿದ್ದರೆ ಇದ್ದೀತು ಬಿಡು’ ಎಂಬ ಉತ್ತರ. ಎಲಾ ಬಡ್ಡೀಮಗನೇ ಎಂದು ಬೈದುಕೊಂಡು ಪ್ರಾತಃರ್ವಿಧಿ ಮುಗಿಸುತ್ತೇನೆ. ಮುಖ ಒರೆಸಿಕೊಳ್ಳುವಾಗ ತಾಜಾತನ ಎನ್ನುವುದು ನಿಧಾನವಾಗಿ ಆವರಿಸಿಕೊಳ್ಳತೊಡಗಿದಾಗ ಮನಸ್ಸು ಉಲ್ಲಸ. .

ಯಥಾಪ್ರಕಾರ, ಕಂಪ್ಯೂಟರ್ ಆನ್ ಮಾಡಿದಾಗ, ನೆಟ್ ಕೈಕೊಟ್ಟಿರುತ್ತದೆ. ಮತ್ತೆ ಮಲಗಲು ಇದಕ್ಕಿಂತ ಒಳ್ಳೆಯ ನೆವ ಯಾವುದಿದೆ? ಆದರೆ, ತಣ್ಣೀರಿನಲ್ಲಿ ಮುಖ ಮತ್ತೊಂದು ಶುದ್ಧ ಮಾಡಿಕೊಂಡವನಿಗೆ ಮತ್ತೆ ನಿದ್ದೆ ಹತ್ತುವುದು ಕಷ್ಟ. ಸಿದ್ಧವಾಗೇ ಇರುವ ಪುಸ್ತಕವನ್ನು ತೆಗೆದುಕೊಂಡು ಓದಲು ಶುರು ಮಾಡುತ್ತೇನೆ.

ಮನಸ್ಸು ತೆರೆದುಕೊಳ್ಳುತ್ತದೆ. ಓದುತ್ತ ತಲೆ ಅಲ್ಲಾಡಿಸುತ್ತದೆ. ಮತ್ತೆ ಮತ್ತೆ ಮನನ ಮಾಡಿಕೊಳ್ಳುತ್ತ ಸುಖಿಸುತ್ತದೆ. ಆಹಾ ಅನ್ನುತ್ತದೆ. ಛೇ ಛೇ ಎಂದು ಲೊಚಗುಡುತ್ತದೆ. ಛೀ ಎಂದು ಗೊಣಗುತ್ತದೆ. ಉಶ್ ಎಂದು ನಿಟ್ಟುಸಿರಿಡುತ್ತದೆ. ಓದುತ್ತ ಓದುತ್ತ ಅದರಲ್ಲೇ ಲೀನವಾಗಿಬಿಡುತ್ತದೆ.

ಅಷ್ಟೊತ್ತಿಗೆ ಗಂಟೆ ಆರು. ಸಣ್ಣ ಹುಲಿ ಆಕಳಿಸುತ್ತ, ನಿಧಾನವಾಗಿ ಗುರುಗುಡುತ್ತದೆ. ಆದರೆ ಹಾಸಿಗೆ ಬಿಟ್ಟು ಎದ್ದು ಬರುವುದಿಲ್ಲ. ಆರೂವರೆಗೆ, ಅದರ ಅಕ್ಕ ಗುಟುರು ಹಾಕುತ್ತದೆ. ಆಗ ಏಳುತ್ತದೆ ತಾಯಿ ಹುಲಿ. ಗುರುಗುಡುವ, ಪರ್‌ಗುಡುವ ಮರಿಹುಲಿಗಳನ್ನು ಎಬ್ಬಿಸಿ ಬಾತ್‌ರೂಮಿಗೆ ಕರೆದೊಯ್ಯುತ್ತದೆ. ಮುಚ್ಚಿದ ಬಾಗಿಲಿನ ಒಳಗೆ ಅವು ಬಿಸಿ ನೀರಲ್ಲಿ ಸುಖಿಸುವ, ಕಿರಿಚಾಡುವ ಸದ್ದುಗಳು ಕೋಣೆಯಲ್ಲಿ ಕೂತವನನ್ನು ನಿಧಾನವಾಗಿ ತಾಕುತ್ತಿರುತ್ತವೆ. ಇನ್ನೈದು ನಿಮಿಷ ಅಷ್ಟೇ, ಹುಲಿಮರಿಗಳು ನನ್ನ ಮೇಲೆ ನೆಗೆಯಲು ಎಂದು ಮನಸ್ಸು ಎಚ್ಚರಿಸುತ್ತದೆ. ಅಷ್ಟೊತ್ತಿಗೆ ಓದು ಮುಗಿಸಿ, ಪುಟ ಗುರುತು ಇಟ್ಟು ಪುಸ್ತಕ ಮುಚ್ಚುವಷ್ಟರಲ್ಲಿ ಮರಿ ಹುಲಿಗಳು ಕೋಣೆಯೊಳಗೆ ದಾಳಿ ಇಟ್ಟಾಗಿರುತ್ತದೆ.

ಅದು ಕಾಫಿ ಸಮಯ !

ಹುಲಿಮರಿಗಳು ಹಾಲು ಕುಡಿಯುತ್ತವೆ. ಕಾಫಿ-ಹಾಲಿನ ತಟ್ಟೆ ಸುತ್ತ ಪರ್‌ಗುಡುತ್ತ ಕೂತು ಹಾಲು ಹೀರುತ್ತವೆ. ನಾನು ಮತ್ತು ಈಕೆ ನಿಧಾನವಾಗಿ ಕಾಫಿ ಕುಡಿಯುತ್ತೇವೆ. ಹೊರಗೆ ಸೂರ್ಯನ ಮೊದಲ ಕಿರಣ ನೆಲ ತಾಕುತ್ತಿರುತ್ತದೆ.

ಈಗ ಹುಲಿಗಳು ವಾಕಿಂಗ್‌ಗೆ ರೆಡಿ. ಅವಕ್ಕೆ ಬೆಚ್ಚಗಿನ ಬಟ್ಟೆ ಹಾಕಿ, ಶೂ ತೊಡಿಸಿ, ಬಾಗಿಲಿಗೆ ಬೀಗ ಹಾಕಿಕೊಂಡು ರಸ್ತೆಗಿಳಿಯುತ್ತೇವೆ. ಮರಿ ಹುಲಿಯ ಕೈಯನ್ನು ತಾಯಿ ಹುಲಿ ಹಾಗೂ ಮರಿಯ ಅಕ್ಕನ ಕೈಯನ್ನು ನಾನು ಹಿಡಿದುಕೊಂಡು ಬೆಳಗಿನ ತಾಜಾತನ ಆಸ್ವಾದಿಸುತ್ತ ಹೊರಡುತ್ತೇವೆ. ದಾರಿಯಲ್ಲಿ ಬಾಗಿಲು ತೆರೆದುಕೊಂಡ ಕಿರಾಣಿ ಅಂಗಡಿಯಿಂದ ’ಕೌಸಲ್ಯಾ, ಸುಪ್ರಜಾ...’

ಮರಿಹುಲಿಗಳು ಕೇಕೆ ಹಾಕುತ್ತವೆ. ಆ ದಿನದ ಮೊದಲ ಮುಗುಳ್ನಗು ನನ್ನಲ್ಲಿ ಬಿಚ್ಚಿಕೊಳ್ಳುತ್ತದೆ.

- ಚಾಮರಾಜ ಸವಡಿ

3 comments:

Unknown said...
This comment has been removed by a blog administrator.
ಆಲಾಪಿನಿ said...

ನನಗನಿಸಿದಂತೆ ಇದು ಎಲ್ಲರ ಟಿಕ್ ಟಿಕ್!!

Chamaraj Savadi said...

ನನಗೂ ಹಾಗೇ ಅನ್ನಿಸಿದೆ. ಎಲ್ಲರ ಟಿಕ್‌ ಟಿಕ್‌ನ ಮೂಲ ಒಂದೇ ಅಲ್ಲವೇ?

- ಚಾಮರಾಜ ಸವಡಿ