ಹಾಗಂದುಕೊಂಡೇ ಪ್ರತಿ ದಿನ ಮಧ್ಯಾಹ್ನದ ಹೊತ್ತು ಸ್ಕೂಟಿ ಏರುತ್ತೇನೆ. ಮಗಳನ್ನು ಶಾಲೆಯಿಂದ ಕರೆ ತಂದಾಗಿರುತ್ತದೆ. ಲಘು ಊಟವೂ ಮುಗಿದಿರುತ್ತದೆ. ಸುದ್ದಿ ವಿಷಯಕ್ಕೆ ಸಂಬಂಧಿಸಿದಂತೆ ಇವತ್ತು ಅಂತಹ ಬೆಳವಣಿಗೆಗಳೇನೂ ಆಗಿಲ್ಲ ಅಂತ ಅಂದುಕೊಳ್ಳುತ್ತ ಸ್ಕೂಟಿ ಚಲಿಸುವಾಗ, ಬಿಸಿ ಗಾಳಿ ಮುಖಕ್ಕೆ ರಾಚುತ್ತದೆ.
ಹೌದು, ಬಿಸಿಲು ಬಲಿಯುತ್ತಿದೆ.
ಚಂದ್ರಾ ಲೇಔಟ್ನ ಎಲ್ಲೆಡೆ ಸಿಮೆಂಟ್, ಡಾಂಬರಿನದೇ ಕಾರುಬಾರು. ಬಿದ್ದ ಬಿಸಿಲನ್ನು ಹೀರಿಕೊಳ್ಳುವ ಮಣ್ಣಾಗಲಿ, ಹಸಿರಾಗಲಿ ಕಡಿಮೆ. ಬೆಳಿಗ್ಗೆ ಎಂಟು ಗಂಟೆಗೆಲ್ಲಾ ತಾರಸಿ ಏರಿ ನೋಡಿದರೆ, ಬಿಸಿಲಲ್ಲಿ ಫಡಫಡಿಸುವ ಕಟ್ಟಡಗಳೇ ಎಲ್ಲೆಡೆ ಕಣ್ಣಿಗೆ ಬೀಳುತ್ತವೆ. ಮಧ್ಯಾಹ್ನದ ಹೊತ್ತು ಹದವಾದ ಬಿಸಿ ಗಾಳಿ ತುಂಬಿಕೊಂಡು ರಸ್ತೆಗಳು ಮಂಕು ಮಂಕು. ಜೋರು ಊಟವಾದರೆ, ಸೀದಾ ಮಂಪರು ಪರೀಕ್ಷೆಗೆ ಸಿದ್ಧವಾದ ಆರೋಪಿಯಂತಾಗಿಬಿಡುವ ಭಯ. ಹೀಗಾಗಿ, ಲಘು ಭೋಜನ. ಆದರೂ, ಬಿಸಿ ಗಾಳಿಗೆ ಮನಸ್ಸು ಅಂಗಾತ ಮಲಗಿ ನಿದ್ರಿಸಲು ಚಡಪಡಿಸುತ್ತಿರುತ್ತದೆ.
ಮುಖ್ಯ ರಸ್ತೆ ಬರುವವರೆಗೆ ಸ್ಕೂಟಿಗೂ ಒಂಥರಾ ಮಂಕು. ಆದರೆ, ಜೋರು ಟ್ರಾಫಿಕ್ ನೋಡುತ್ತಲೇ ನಿದ್ದೆ ಹಾರಿಹೋಗಿ ಮನಸ್ಸು ಸ್ವಸ್ಥವಾಗುತ್ತದೆ. ರಸ್ತೆಯ ಏರಿಳಿತಗಳೊಂದಿಗೆ ಏರಿಳಿಯುತ್ತ, ಟ್ರಾಫಿಕ್ಕನ್ನು ಹುಷಾರಾಗಿ ನಿಭಾಯಿಸುತ್ತ ರೈಲ್ವೇ ಸಮಾನಾಂತರ ರಸ್ತೆಗೆ ಬರುವ ಹೊತ್ತಿಗೆ, ಅವತ್ತು ಮಾಡಬೇಕಾದ ಕೆಲಸಗಳ ಪಟ್ಟಿ ಮನಸ್ಸಿನ ತುಂಬ. ದಾರಿಯಲ್ಲಿ ಸಿಗುವ ಒಂದೆರಡು ಶಾಲೆಗಳ ಚಿಣ್ಣರನ್ನು ನೋಡುತ್ತ, ಮುದಗೊಳ್ಳುತ್ತ, ದಾರಿ ಸಾಗುವಾಗ, ಅರೆರೆ, ಆ ಮುದುಕ ನಮ್ಮೂರಿನವಂತೆ ಕಾಣುತ್ತಾನಲ್ಲ ಎಂದು ಫಕ್ಕನೇ ಅನಿಸಿಬಿಡುತ್ತದೆ.
ಆತ ನಮ್ಮೂರಿನವನಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತು. ಆದರೆ, ಊರ ನೆನಪಾಗಲು ಆ ಮುದುಕ ಒಂದು ನೆವ.
ಏಕೆ ಹೀಗನಿಸುತ್ತದೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಹೈಸ್ಕೂಲಿನ ತರಗತಿ ನೆನಪಾಗುತ್ತದೆ. ಶಾಲೆ ಮುಗಿಸಿ ಮನೆಗೆ ಬರುವಾಗಿನ ಓಣಿಯ ವಿವರಗಳು ಕಣ್ಮುಂದೆ ನಿಲ್ಲುತ್ತವೆ. ಯಾವುದೋ ದುಃಖಿ ನೆನಪುಗಳು, ಒಂಟಿತನ ಕಾಡಿದ ಕ್ಷಣಗಳು ಕಾಡತೊಡಗುತ್ತವೆ. ತಲೆ ಕೊಡವಿ ಮತ್ತೆ ರಸ್ತೆಯ ಕಡೆ ಗಮನ ಹರಿಸಿದರೂ, ಕಾಲಡಿ ಸುತ್ತುವ ಸಾಕಿದ ಬೆಕ್ಕಿನಂತೆ ನೆನಪುಗಳು ಅಲ್ಲೇ ಓಡಾಡುತ್ತಿರುತ್ತವೆ. ಅಂದಿನ ದಿನಗಳ ನಾನು, ಇಂದಿನ ಬದುಕಿನೊಂದಿಗೆ ಅವನ್ನು ಅನುಭವಿಸಬೇಕಾದ ರೀತಿಯೇ ವಿಚಿತ್ರ.
ದಾರಿಯುದ್ದಕ್ಕೂ ಇಂಥವೇ ನೆನಪುಗಳು. ರಸ್ತೆಯ ಕಡೆ ಎಷ್ಟೇ ಗಮನ ಕೊಟ್ಟರೂ, ಮನಸ್ಸಿನಲ್ಲಿ ನೆನಪುಗಳ ಕಲರವ ನಿಲ್ಲುವುದಿಲ್ಲ.
ಹಳೆ ಗುಡ್ಡದಹಳ್ಳಿಯ ಅಡ್ಡಮಾರ್ಗ ದಾಟಿಕೊಂಡು ಬಾಲಗಂಗಾಧರನಾಥ ಸ್ವಾಮೀಜಿ ಹೆಸರಿನ ಮೇಲ್ಸೇತುವೆ ಏರುವಾಗಲೂ ನಾನು ಹಳೆಯ ದಿನಗಳ ಗುಂಗಿನಲ್ಲೇ ಇರುತ್ತೇನೆ. ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಪದೆ ಪದೆ ನೆನಪಿಸಿಕೊಂಡರೂ, ಅದರ ಸಂದಿಯಲ್ಲಿ ತೂರಿ ನೆನಪುಗಳು ನುಗ್ಗುತ್ತವೆ. ಗಾಡಿ ಓಡಿಸುವಾಗ, ತೀರ ಗಂಭೀರವಾದ ಏನನ್ನೂ ಯೋಚಿಸುವುದಿಲ್ಲ. ಹಾಗಿದ್ದರೂ, ಆ ನಿಯಮ ದಾಟಿಕೊಂಡು ನೆನಪುಗಳು ನುಗ್ಗುತ್ತವೆ. ಹಿಂದಿನ ದಿನಗಳಿಗೆ ಕರೆದೊಯ್ಯುತ್ತವೆ.
ಮೇಲ್ಸೇತುವೆ ಇಳಿದು, ಮಾರುಕಟ್ಟೆಯ ಪಕ್ಕದ ಎಸ್ಪಿ ರಸ್ತೆಯ ಜಂಗುಳಿಯಲ್ಲಿ ತೂರಿಕೊಂಡು, ಹುಷಾರಾಗಿ ಹೊರಟು ಕಬ್ಬನ್ ಪಾರ್ಕ್ ಒಳಗಿನ ರಸ್ತೆ ಸೇರುವ ಹೊತ್ತಿಗೆ ಮನಸ್ಸು ಒಂಥರಾ ದಣಿದಿರುತ್ತದೆ. ಪಾರ್ಕ್ನ ತಾಜಾ ಗಾಳಿಗೆ ಮುಖವೊಡ್ಡಿ, ಎದೆಯ ತುಂಬ ಅದನ್ನು ಹೀರಿಕೊಳ್ಳುವ ಹೊತ್ತಿಗೆ ವಿಧಾನಸೌಧದ ಮುಂದಿನ ರಸ್ತೆಯಲ್ಲಿರುತ್ತೇನೆ. ಮತ್ತೆ ವಾಹನಗಳ ಭರಾಟೆ. ಇನ್ಫ್ಯಾಂಟ್ರಿ ರಸ್ತೆಯ ಜಂಗುಳಿ ದಾಟಿ ಕಚೇರಿಯ ಪಾರ್ಕಿಂಗ್ನಲ್ಲಿ ವಾಹನ ನಿಲ್ಲಿಸುವ ಹೊತ್ತಿಗೆ ಹೈಸ್ಕೂಲ್ನಿಂದ ವೃತ್ತಿಯ ಈ ಹಂತದವರೆಗಿನ ಪಯಣವನ್ನು ಅರ್ಧ ಗಂಟೆಯೊಳಗೆ ಮುಗಿಸಿದ ದಣಿವು.
ಅದೇ ಮೊದಲ ಬಾರಿ ಎಂಬಂತೆ ಕಚೇರಿ ಪ್ರವೇಶಿಸುತ್ತೇನೆ. ಸಹೋದ್ಯೋಗಿಗಳಿಗೆ ವಿಶ್ ಮಾಡುತ್ತ ನನ್ನ ಸ್ಥಾನಕ್ಕೆ ಬಂದು ಕೂಡುತ್ತೇನೆ. ಎದುರಿಗೆ ಕೂತಿರುವ ಕಂಪ್ಯೂಟರ್ ಪರದೆ ಬಾಲ್ಯದ ಚಿತ್ರ ಸಂಪುಟದಂತೆ ಕಾಣುತ್ತದೆ. ಸುದ್ದಿ ವಿಭಾಗದ ತಾಣಗಳನ್ನು ಒಂದೊಂದಾಗಿ ತೆರೆಯುತ್ತ, ನೆನಪುಗಳನ್ನು ಒಂದೊಂದಾಗಿ ಕಳಚುತ್ತ ನನ್ನ ಕೆಲಸದಲ್ಲಿ ಮುಳುಗುತ್ತೇನೆ. ಬ್ರೆಕಿಂಗ್ ನ್ಯೂಸ್ಗಳು, ಅಪ್ಡೇಟ್ಗಳು, ಪ್ಯಾಕೇಜ್ಗಳು ಒಂದಾದ ನಂತರ ಒಂದರಂತೆ ರಾಚತೊಡಗಿದಾಗ, ನಿರ್ಲಕ್ಷ್ಯಿಸಲ್ಪಟ್ಟ ಮಗುವಿನಂತೆ ನೆನಪುಗಳು ಮುರುಟಿಕೊಳ್ಳುತ್ತ ಹೋಗುತ್ತವೆ.
ಭೂತಕಾಲದಲ್ಲಿ ಬದುಕಬಾರದು ಎಂದು ಎಲ್ಲಿಯೋ ಓದಿದ್ದು ನೆನಪಾಗಿ ನಗು ಬರುತ್ತದೆ. ಬೇರುಗಳಿಲ್ಲದೇ ಮರವುಂಟೆ? ಭೂತಕಾಲವಿಲ್ಲದೇ ವರ್ತಮಾನವೂ ಇಲ್ಲ, ಭವಿಷತ್ತೂ ಇಲ್ಲ. ಬೇರುಗಳಂತೆ ಹಳೆಯ ದಿನಗಳ ನೆನಪುಗಳು, ಕನಸುಗಳು, ಕನವರಿಕೆಗಳು, ನೋವು-ನಲಿವುಗಳು ವರ್ತಮಾನಕ್ಕೆ ತಲುಪುತ್ತಲೇ ಇರುತ್ತವೆ. ಅವುಗಳನ್ನು ಜೀರ್ಣಿಸಿಕೊಂಡೇ ಬದುಕಬೇಕು. ಅವುಗಳನ್ನು ಹಳೆ ಫೊಟೊಗಳಿರುವ ಆಲ್ಬಮ್ಮಿನಂತೆ ಇಟ್ಟುಕೊಂಡು ಹೊಸ ಫೊಟೊಕ್ಕೆ ಮುಗುಳ್ನಗಬೇಕು.
ಹಾಗಂದುಕೊಂಡು, ಕೆಲಸದಲ್ಲಿ ಮಗ್ನನಾಗುತ್ತೇನೆ.
- ಚಾಮರಾಜ ಸವಡಿ