ಅಗ್ನಿದ್ರವ ಗೆದ್ದು ಬಂದ ಮಹಾಲಕ್ಷ್ಮಿ

19 Mar 2009

ಎಂಟು ವರ್ಷಗಳ ಹಿಂದಿನ ಘಟನೆ.

ಮೈಸೂರಿನ ಒಂಟಿಕೊಪ್ಪಲು ಪ್ರದೇಶದಲ್ಲಿದ್ದ ತಮ್ಮ ಕ್ಲಿನಿಕ್ ಬಾಗಿಲು ಹಾಕಿದ ನಂತರ, ಯುವ ವೈದ್ಯೆಯೊಬ್ಬರು ಮನೆಯತ್ತ ಹೊರಟಿದ್ದರು. ರಸ್ತೆಯಲ್ಲಿನ್ನೂ ಜನಸಂಚಾರವಿತ್ತು. ಇದ್ದಕ್ಕಿದ್ದಂತೆ ಬಂದ ವ್ಯಕ್ತಿಯೊಬ್ಬ ಅವರ ಮುಖದ ಮೇಲೆ ಆಸಿಡ್ ಎರಚಿ ಓಡಿಹೋದ.

ಜೋರಾಗಿ ಚೀರಿಕೊಂಡ ವೈದ್ಯೆ ನೆಲಕ್ಕೆ ಕುಸಿದಳು. ಮುಖಕ್ಕೆ ಬೆಂಕಿ ಹೊತ್ತಿಕೊಂಡಂತಾಗಿತ್ತು. ಆಸಿಡ್ ಹೊಕ್ಕಿದ್ದರಿಂದ ಒಂದು ಕಣ್ಣು ಪೂರ್ತಿ ದೃಷ್ಟಿ ಕಳೆದುಕೊಂಡಿತ್ತು. ನೋವಿನಿಂದ ಚೀರುತ್ತಿದ್ದ ಆಕೆ, ನೆರವಿಗಾಗಿ ಮೊರೆಯಿಟ್ಟಳು. ಆದರೆ, ಮೈಸೂರಿನ ಸುಸಂಸ್ಕೃತ ಜನ ಸಹಾಯ ಮಾಡುವುದಿರಲಿ, ಆಕೆಯ ನೋವನ್ನು ನೋಡುತ್ತ ಸುಮ್ಮನೇ ನಿಂತಿದ್ದರು. ಆಟೊದಲ್ಲಾದರೂ ಹತ್ತಿಸಿ ಕಳಿಸಿ, ನಾನು ಆಸ್ಪತ್ರೆಗೆ ಹೋಗುತ್ತೇನೆ ಎಂದು ಈ ಹೆಣ್ಣುಮಗಳು ಬೇಡಿಕೊಂಡರೂ ಸಾಂಸ್ಕೃತಿಕ ಊರಿನ ಜನರ ಮನ ಕರಗಲಿಲ್ಲ.

ಡಾ. ವೈ.ಎನ್. ಮಹಾಲಕ್ಷ್ಮೀ ಎಂಬ ಆ ಯುವವೈದ್ಯೆಯ ಬದುಕು ಅಂದಿನಿಂದ ಬದಲಾಗಿ ಹೋಯಿತು.

ಘಟನೆಯಾಗಿ ಎಂಟು ವರ್ಷಗಳಾಗಿವೆ. ಆಸಿಡ್ ದಾಳಿ ಡಾ. ಮಹಾಲಕ್ಷ್ಮಿಯವರ ಒಂದು ಕಣ್ಣನ್ನು ಕಿತ್ತುಕೊಂಡಿದೆ. ಸುಂದರ ರೂಪವನ್ನು ಅಳಿಸಿದೆ. ಆಸಿಡ್ ಎರಚಿದ ವ್ಯಕ್ತಿ ಬಂಧನದ ದಿನದಂದೇ ಜಾಮೀನು ಪಡೆದು ಹೊರಬಂದಿದ್ದಾನೆ. ಇವತ್ತಿಗೂ ಅಟ್ಟಹಾಸದಿಂದ ಓಡಾಡಿಕೊಂಡೇ ಇದ್ದಾನೆ. ಒಬ್ಬ ವ್ಯಕ್ತಿ ಜಗತ್ತಿನ ಬಗ್ಗೆ, ಅದರ ನೀತಿ-ನಿಯಮಗಳ ಬಗ್ಗೆ ನಂಬಿಕೆ ಕಳೆದುಕೊಳ್ಳಲು ಬೇಕಾದ ಎಲ್ಲಾ ದೌರ್ಜನ್ಯಗಳು ಈ ಹೆಣ್ಣುಮಗಳ ಮೇಲೆ ಆಗಿಹೋಗಿವೆ. ಸಣ್ಣಪುಟ್ಟ ಘಟನೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುವ ಮಹಿಳಾವಾದಿಗಳು, ಸೋ ಕಾಲ್ಡ್ ಬುದ್ಧಿಜೀವಿಗಳು, ಮಹಿಳಾ ಸಂಘಟನೆಗಳು, ಎನ್‌ಜಿಓಗಳು- ಹೀಗೆ ಯಾರೆಂದರೆ ಯಾರೂ ಡಾ. ಮಹಾಲಕ್ಷ್ಮೀ ಅವರಿಗೆ ಸಹಾಯ ಹಸ್ತ ನೀಡಲಿಲ್ಲ.

ಈ ಸಂದರ್ಭದಲ್ಲಿ ದಿ ಹಿಂದು ಪತ್ರಿಕೆಯಲ್ಲಿ ಬಂದಿದ್ದ ಲೇಖನವೊಂದು ಅವರ ಬದುಕಿಗೆ ಮಹತ್ವದ ತಿರುವು ನೀಡಿತು. ಆಸಿಡ್ ದಾಳಿಗೆ ಒಳಗಾಗಿದ್ದ ಯುವಕನೊಬ್ಬ ಬದುಕು ಕಟ್ಟಿಕೊಂಡ ರೀತಿ ಅವರಿಗೆ ಹೊಸ ಭರವಸೆ ಮೂಡಿಸಿತು. ಮುರಿದ ಕನಸುಗಳ ಜಾಗದಲ್ಲಿ ಹೊಸ ಕನಸುಗಳನ್ನು ಕಟ್ಟಿಕೊಂಡರು. ಯಾವ ಬದುಕೂ ಬದುಕಲಾರದಷ್ಟು ನಿಕೃಷ್ಟವಲ್ಲ ಎಂಬ ಭರವಸೆ ಬೆಳೆಸಿಕೊಂಡರು. ಬದುಕು ಇಲ್ಲಿಗೇ ಮುಗಿದಿಲ್ಲ, ಬದಲಾಗಿ, ಇಲ್ಲಿಂದ ಶುರುವಾಗಿದೆ ಅಂದುಕೊಂಡು ಮತ್ತೆ ವೈದ್ಯವೃತ್ತಿ ಶುರು ಮಾಡಿದರು. ಸದ್ಯ ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿರುವ ಅವರು, ಸದ್ದಿಲ್ಲದೇ ಬಡಜನರ ಸೇವೆಯಲ್ಲಿ ನಿರತರಾಗಿದ್ದಾರೆ. ಡಿವಿಜಿ ಹೇಳಿದಂತೆ,

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳೊಂದಾಗು, ಮಂಕುತಿಮ್ಮ

ಎಂಬಂತೆ ಎಲ್ಲರೊಳೊಂದಾಗಿ ಬದುಕುತ್ತಿದ್ದಾರೆ.

ಹೆತ್ತವರ ಬೆಂಬಲವನ್ನಷ್ಟೇ ಬೆನ್ನಿಗಿಟ್ಟುಕೊಂಡು ಕಾಯಕದಲ್ಲಿ ನಿರತರಾಗಿರುವ ಡಾ. ಮಹಾಲಕ್ಷ್ಮಿ, ಆಸಿಡ್ ದಾಳಿಗೆ ತುತ್ತಾದವರ ಪಾಲಿಗೆ ಹೊಸ ಭರವಸೆ. ನೋವು ನುಂಗಿ ನಗು ಹರಡುತ್ತಿರುವ ಸಂಜೀವಿನಿ.

- ಚಾಮರಾಜ ಸವಡಿ

7 comments:

ಆಲಾಪಿನಿ said...

really great!!!

ತೇಜಸ್ವಿನಿ ಹೆಗಡೆ- said...

ಸವಡಿಯವರೆ,

ನಿಜಕ್ಕೂ ಸ್ಫೂರ್ತಿತುಂಬುವ, ಪ್ರೇರಣೆ ನೀಡುವ ಲೇಖನ. ಅವರ ಜೀವನೋತ್ಸಾಹ ಎಂತಹವರಿಗೂ ಆದರ್ಶಪ್ರಾಯವಾಗಿರುವುದು. ಮನುಷ್ಯ ಜೀವನ್ಮುಖಿಯಾಗಿದ್ದರೆ ಯಾವ ಆಸಿಡ್ ಕೂಡಾ ಆತನೊಳಗಿಂದ ಬದುಕ ಛಲ, ಆಶಯವನ್ನು ಸುಟ್ಟು ಭಸ್ಮಮಾಡಲಾಗದೆಂದು ತೋರಿದ್ದಾರೆ ಮಹಾಲಕ್ಷ್ಮಿ ಅವರು.

ಆದರೆ ಇವರಿಗಿಂಥ ದುರ್ಗತಿ ತಂದ ಆ ನರರೂಪಿ ರಾಕ್ಷಸನಿಗೆ ಏನೂ ಶಿಕ್ಷೆಯೇ ಆಗಲಿಲ್ಲವಲ್ಲ, ನಮ್ಮ ಕಾನೂನು ಇಷ್ಟೊಂದು ದುರ್ಬಲವಾಗಿದೆಯಲ್ಲ ಎಂದು ಖೇದವೂ ಜೊತೆಗೆ ಆಗುತ್ತದೆ.

ತೇಜಸ್ವಿನಿ ಹೆಗಡೆ- said...
This comment has been removed by a blog administrator.
Sharan said...

ಆಸಿಡ್ ಎರಚಿದವನ ಮನಸ್ಸು ಕಲ್ಲಾದರೆ, ಕಲ್ಲುಸಕ್ಕರೆಯಾಗಿತ್ತು ಎರಚಿಸಿಕೊಂಡವಳ ಮನಸ್ಸು.

ಮಲ್ಲಿಕಾರ್ಜುನ.ಡಿ.ಜಿ. said...

ಬದುಕು ಅಂಧಕಾರದತ್ತ ತಳ್ಳಿದಾಗಲೂ ಪುಟ್ಟ ಹಣತೆಯೊಂದಿಗೆ ತನ್ನನ್ನು ಮಾತ್ರವಲ್ಲದೆ ಸಮಾಜಕ್ಕೂ ಬೆಳಕು ನೀಡುತ್ತಿರುವ ಡಾ.ಮಹಾಲಕ್ಷ್ಮಿ ಎಲ್ಲರಿಗೂ ಆದರ್ಶಪ್ರಾಯರು. ಆ ಕೆಡುಕನಿಗೆ ಶಿಕ್ಷೆಯಾಗಬೇಕಿತ್ತು.

Deepasmitha said...

Dr.Mahalakshmi avara Chala haagoo jeevanOtsaaha ellarigoo spoorthidaayaka

Chamaraj Savadi said...

ಪ್ರೀತಿಯ ಆಲಾಪಿನಿ, ತೇಜಸ್ವಿನಿ, ಶರಣ್‌, ಮಲ್ಲಿಕಾರ್ಜುನ್‌ ಮತ್ತು ದೀಪಾಸ್ಮಿತ- ನಿಮ್ಮೆಲ್ಲರ ಮೆಚ್ಚುಗೆಗೆ ಧನ್ಯವಾದಗಳು. ಸ್ಫೂರ್ತಿ ಎಲ್ಲೆಡೆ ಹರಡಲಿ. ಇತರರ ಮನಸ್ಸಿಗೂ ಪ್ರೇರಣೆ ತರಲಿ.