ಹಣ್ಣಿನ ಅಂಗಡಿಯ ಮುಂದೆ ನಿಂತರೆ ಕೊಪ್ಪಳ ಜಿಲ್ಲೆ ಅಳವಂಡಿಯ ನಮ್ಮ ಹೊಲದ ನೆನಪಾಗುತ್ತದೆ. ಇಪ್ಪತ್ತೈದು ವರ್ಷಗಳ ಹಿಂದೆ ನಮ್ಮ ಹೊಲದಲ್ಲಿ ಮೂರು ಭರ್ಜರಿ ಮಾವಿನ ಮರಗಳಿದ್ದವು. ಒಂದು ತುಂಬ ಹಳೆಯದು, ಒಂದು ಮಧ್ಯಮ ಹಾಗೂ ಇನ್ನೊಂದು ಸಣ್ಣ ವಯಸ್ಸಿನ ಮರ.
ದೊಡ್ಡ ಮರದಲ್ಲಿ ವರ್ಷಕ್ಕೆ ಹನ್ನೆರಡು ಸಾವಿರಕ್ಕಿಂತ ಹೆಚ್ಚು ಕಾಯಿಗಳು ಬರುತ್ತಿದ್ದವು. ಮಧ್ಯಮ ವಯಸ್ಸಿನ ಮರದಲ್ಲಿ ಏಳೆಂಟು ಸಾವಿರ ಹಾಗೂ ಚಿಕ್ಕ ಮರದಲ್ಲಿ ನಾಲ್ಕೈದು ಸಾವಿರ.
ಬೇಸಿಗೆ ರಜೆ ಬರುತ್ತಲೇ ಮನೆಯಲ್ಲಿ ಹೇಳದಿದ್ದರೂ ಮಾವಿನ ಮರದ ಹೊಲಗಳತ್ತ ಪೇರಿ ಕೀಳುತ್ತಿದ್ದೆವು. ನಮ್ಮದೇ ಹೊಲ, ನಮ್ಮವೇ ಮರ, ಎಷ್ಟು ಬೇಕಾದರೂ ಹಣ್ಣು ತಿನ್ನಬಹುದು. ಒಂದೇ ನಿರ್ಬಂಧನೆ ಎಂದರೆ, ಮರಗಳತ್ತ ಕಲ್ಲು ಬೀರಬಾರದು.
ಮರ ಕಾಯಲು ನೇಮಿಸಿರುತ್ತಿದ್ದ ವೃದ್ಧ, ಜೊತೆಗೆ ತನ್ನ ಮಗನನ್ನೂ ಕರೆತರುತ್ತಿದ್ದ. ಮುದುಕ ನೆರಳಲ್ಲಿ ಎಲೆಯಡಿಕೆ ಹಾಕಿಕೊಂಡು ಕೂತರೆ, ಮಗ ಮರ ಏರಿ ಗಿಣಿ ಕಚ್ಚಿದ ಹಣ್ಣುಗಳನ್ನು ಹುಡುಕುತ್ತಿದ್ದ. ನಾವು ಮರದ ಕೆಳಗೆ ತಲೆ ಎತ್ತಿಕೊಂಡು ಓಡಾಡುತ್ತ, ಆತ ಕೊಂಬೆಯಿಂದ ಕೊಂಬೆಗೆ ಸಾಗುವುದನ್ನೇ ನೋಡುತ್ತಿದ್ದೆವು. ’ಅಗೋ ಅಲ್ಲೊಂದಿದೆ, ಕೆಂಪಾಗಿದೆ, ಅದನ್ನು ಕಿತ್ತುಕೊಡೋ’ ಎಂದು ಗೋಗರೆಯುತ್ತ ಮಧ್ಯಾಹ್ನದವರೆಗೆ ಹೊಲದಲ್ಲೇ ಕಳೆಯುತ್ತಿದ್ದೆವು.
ಸಾಕಷ್ಟು ಹಣ್ಣುಗಳನ್ನು ತಿಂದು, ಮನೆಗೆಂದು ಸ್ವಲ್ಪ ಎತ್ತಿಟ್ಟುಕೊಂಡು ಊಟದ ಹೊತ್ತಿಗೆ ಊರು ಸೇರುತ್ತಿದ್ದೆವು. ಹುಳಿ-ಸಿಹಿ ಹಣ್ಣುಗಳ ಭೋಜನ ಸವಿದವರಿಗೆ ಮನೆಯ ಊಟ ಹಿಡಿಸುವುದಾದರೂ ಹೇಗೆ?
ಈಗ ಬೆಂಗಳೂರಿನ ಹಣ್ಣಿನ ಅಂಗಡಿಗಳ ಮುಂದೆ ನಿಂತರೆ, ಮಾವಿನ ವಾಸನೆ ಊರನ್ನು ನೆನಪಿಸುತ್ತದೆ. ಮಾವಿನ ಹಣ್ಣಿನ ಸೀಸನ್‌ನಲ್ಲಿ ನೂರಾರು ಹಣ್ಣುಗಳನ್ನು ಒಬ್ಬನೇ ತಿನ್ನುತ್ತಿದ್ದ ನನಗೆ ಕೆಜಿ ಲೆಕ್ಕದಲ್ಲಿ ಹಣ್ಣು ತರುವಾಗ ಮನಸ್ಸಿಗೆ ಎಂಥದೋ ಹಳಹಳಿ. ಆಗ ಊರು ನೆನಪಾಗುತ್ತದೆ. ಹೊಲ ನೆನಪಾಗುತ್ತದೆ. ಮಾವಿನ ಮರಗಳು ನೆನಪಾಗುತ್ತವೆ. ಘೋರ ಬಿಸಿಲಿನ ಮಧ್ಯೆಯೂ ಮರದ ಕೆಳಗೆ ತಂಪಿರುತ್ತಿತ್ತು. ಕೋಗಿಲೆಗಳು ಕೂಗುತ್ತಿದ್ದವು. ಮರದ ಕೊಂಬೆಗಳಲ್ಲಿ ಅದೃಶ್ಯನಾಗಿರುತ್ತಿದ್ದ ಆಳು ಎಸೆಯುತ್ತಿದ್ದ ಹಣ್ಣುಗಳು ಅಂತರಿಕ್ಷದಿಂದ ದೇವತೆಗಳು ಪ್ರಸಾದಿಸಿದ ಅಮೂಲ್ಯ ಫಲದಂತೆ ಭಾಸವಾಗುತ್ತಿದ್ದ ನೆನಪು ಒತ್ತರಿಸುತ್ತದೆ.
ನಮ್ಮ ಓದಿಗೆಂದು ಅಪ್ಪ ಮರಗಳನ್ನು ಮಾರಿಬಿಟ್ಟ. ಕೊಂಡವರು ಅವನ್ನು ಕಡಿದು ಸಾ ಮಿಲ್‌ಗಳಿಗೆ ಹೇರಿಕೊಂಡು ಹೋದರು. ನಾವು ನೌಕರಿ ಹುಡುಕಿಕೊಂಡು ಊರು ಬಿಟ್ಟೆವು. ಬದುಕು ಎಲ್ಲೆಲ್ಲಿಗೋ ಕರೆದುಕೊಂಡು ಬಂದಿತು.
ಈಗ ಮಾವಿನ ಹಣ್ಣುಗಳು ಇವೆ. ಆದರೆ, ಮರವಿಲ್ಲ, ಕೋಗಿಲೆಯಿಲ್ಲ. ಉಳಿದಿರುವುದು ಸುಂದರ ನೆನಪುಗಳು ಮಾತ್ರ.
- ಚಾಮರಾಜ ಸವಡಿ
No comments:
Post a Comment