ಅವಳಿಲ್ಲದ ಐದು ವರ್ಷ

28 Apr 2009

ಎಲ್ಲಿ ಹೋದೆಯೇ ಸೌಮ್ಯ ಹೆಸರಿನ ಸೌಂದರ್ಯವತಿ?

ನೀನಿಲ್ಲದ ಐದು ವರ್ಷ ಇಲ್ಲಿ ಏನೇನು ಬದಲಾವಣೆಯಾಗಿದೆ ಗೊತ್ತೆ? ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬಂದಿದೆ. ನೀನು ಆ ಪರಿ ಬೆಂಬಲಿಸಿದ್ದ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ಕಾವೇರಿ ಗಲಾಟೆಯಾಗಿಲ್ಲ. ಆಲಮಟ್ಟಿ ಏಕೋ ಉಕ್ಕಿಉಕ್ಕಿ ಹರಿದಿದೆ. ರಾಜ್ಯ ಮೊದಲಿಗಿಂತ ಸದೃಢವಾಗಿದೆ. ಹಣದುಬ್ಬರ ಇಳಿದಿದೆ. ಆರ್ಥಿಕ ಹಿಂಜರಿತವನ್ನೂ ಮೆಟ್ಟಿ ನಿಲ್ಲಬಲ್ಲ ವಿಶ್ವಾಸ ವ್ಯಕ್ತವಾಗಿದೆ. ಇದನ್ನೆಲ್ಲ ನೋಡಲು ನೀನಿರಬೇಕಿತ್ತೇ ಸೌಂದರ್ಯವತಿ.

ಎಂಥಾ ವಿಚಿತ್ರ ನೋಡು, ನೀನು ಅತ್ತ ಹೋದ ಐದು ವರ್ಷದಲ್ಲಿ ಕನ್ನಡ ಚಿತ್ರರಂಗಕ್ಕೆ ಎಪ್ಪತ್ತೈದು ತುಂಬಿತು. ನಿನ್ನ ಅನುಪಸ್ಥಿತಿಯಲ್ಲಿ ಸಡಗರಪಡಬೇಕಾದ ದೌರ್ಭಾಗ್ಯ ಕನ್ನಡಿಗರದು. ನಿನ್ನನ್ನು ಆ ಪರಿ ಮೆರೆಸಿದ ಆಂಧ್ರಪ್ರದೇಶದಲ್ಲಿ ಚಿರಂಜೀವಿ ಹೊಸ ಪಕ್ಷ ಶುರು ಮಾಡಿ ಚುನಾವಣೆಗೆ ನಿಂತಿದ್ದಾರೆ. ನೀನಿದ್ದರೆ ಪ್ರಜಾರಾಜ್ಯಂ ಕಡೆ ವಾಲುತ್ತಿದ್ದೆಯೇನೋ. ಯಾರಿಗೆ ಗೊತ್ತು? ಆಂಧ್ರದಲ್ಲಿ ಚುನಾವಣೆಗೆ ನಿಂತಿದ್ದರೂ ಗೆದ್ದು ಬರಬಲ್ಲ ಜನಪ್ರಿಯತೆ, ಆಕರ್ಷಣೆ ನಿನಗಿತ್ತು. ನಿನ್ನೊಲುಮೆಯಿಂದ ಚಿರುಗೆ ಇನ್ನಷ್ಟು ಸೀಟ್‌ಗಳು ಸಿಗುವ ಸಾಧ್ಯತೆಗಳೂ ಇದ್ದವು. ಎಷ್ಟೊಂದು ಜನ ನಿನ್ನನ್ನು ಮಿಸ್ ಮಾಡಿಕೊಳ್ತಿದ್ದಾರೆ ಗೊತ್ತೆ?

ಏನಂಥ ಅರ್ಜೆಂಟಿತ್ತೇ ತಾಯಿ ನಿನಗೆ. ಹಾರುತ್ತ ಹೊರಟವಳು ದಿಢೀರನೇ ಕುಸಿದುಬಿಟ್ಟೆ. ದೋಷ ಹಾರುವ ವಿಮಾನದಲ್ಲೇ ಇದ್ದಿರಬಹುದು. ಆದರೆ, ಇಲ್ಲಿ ನಮ್ಮಗಳ ಎದೆಯಲ್ಲಿ ಎಂಥ ಆಘಾತವಾಯ್ತೆಂಬ ಪರಿವೆಯಾದರೂ ನಿನಗಿತ್ತೆ? ಸೌಂದರ್ಯ ಇನ್ನಿಲ್ಲ ಎಂಬ ಎರಡು ಸಾಲಿನ ಸುದ್ದಿಗೆ ಈ ಪರಿಯ ಆಘಾತ ತರುವ ಶಕ್ತಿ ಇದೆ ಎಂಬುದು ಅವತ್ತೇ ನಮಗೆ ಗೊತ್ತಾಗಿದ್ದು. ಅದೇ ಕೊನೆ, ಸೌಂದರ್ಯ ಎಂಬ ಹೆಸರು ದುಃಖದ ನೆನಪಾಗಿ, ಪಕ್ಕದ ಮನೆಯ ಹುಡುಗಿಯ ಮುಗ್ಧ ನಗೆಯ ಭಾವನೆಯಾಗಿ, ಮನಸ್ಸರಳಿಸಿದ್ದ ಕಲಾವಿದೆಯಾಗಿ ಉಳಿದುಬಿಟ್ಟಿತು. ಅವತ್ತಿನಿಂದ ನಾವೆಲ್ಲ, ಸೌಂದರ್ಯ ಎಂಬ ಶಬ್ದಕ್ಕೆ ಡಿಕ್ಷನರಿ ನೀಡುವ ಅರ್ಥವನ್ನೇ ಮರೆತುಬಿಟ್ಟೆವು ಕಣೇ.

ಬದುಕು ನಿನಗೇನು ಕಡಿಮೆ ಮಾಡಿತ್ತು ಸೌಂದರ್ಯ? ಚಿಕ್ಕ ವಯಸ್ಸಿಗೆ ಮನ್ನಣೆ ಕೊಟ್ಟಿತು. ಒಂದಲ್ಲ ಎರಡಲ್ಲ, ಐದು ಭಾಷೆಗಳ ಚಿತ್ರರಂಗದಲ್ಲಿ ನಿನ್ನ ಸೌಂದರ್ಯವನ್ನು, ಪ್ರತಿಭೆಯನ್ನು ಮೆರೆಸಿತು. ರಾಜಕೀಯದತ್ತ ನೀನು ಆಸಕ್ತಿ ತೋರಿದಾಗಲೂ ಯಾರೂ ಇಲ್ಲ ಅನ್ನಲಿಲ್ಲ. ಕಮಲದಂತೆ ಅರಳಲಿ ಸೌಂದರ್ಯ ಎಂದೇ ಹರಸಿತು. ನಿನ್ನ ಮನಸ್ಸಿನಲ್ಲಿ ಅದೇನು ನೋವಿತ್ತೋ, ಅದೇನು ಕೊರತೆಯಿತ್ತೋ, ಒಂದೂ ತೋರಗೊಡದೇ ಹೂವಿನಂತೆ ನಗುತ್ತಲೇ ಹೋದೆ. ಯಾರನ್ನೂ ನೀನು ಕೆರಳಿಸಲಿಲ್ಲ. ಎಲ್ಲರ ಮನಸ್ಸಲ್ಲೂ ಅರಳಿದ ಹೂವಾಗುಳಿದೆ.

೨೦೦೪ರ ಆ ಏಪ್ರಿಲ್ ೧೭ನ್ನು ನಾವು ಮರೆಯುವುದಾದರೂ ಹೇಗೆ ಸೌಂದರ್ಯ? ಆಗ ತಾನೆ ಬಿಸಿಲು ಬಲಿಯುತ್ತಿತ್ತು. ಆ ವರ್ಷದಲ್ಲೂ ಇದೇ ರೀತಿ ಚುನಾವಣೆ ಅಬ್ಬರ. ಜಕ್ಕೂರು ವಾಯುನೆಲೆಯಿಂದ ಪ್ರಚಾರಕ್ಕೆಂದು ಹಗುರ ವಿಮಾನ ಏರಿದ ನೀನು ಯಾರಿಗೆ ಭಾರವಾಗಿದ್ದೆಯೋ ಏನೋ. ಇದ್ದಕ್ಕಿದ್ದಂತೆ ವಿಮಾನ ನಿಯಂತ್ರಣ ಕಳೆದುಕೊಂಡು ಕುಸಿಯಿತು. ನೆಲಕ್ಕೆ ಅಪ್ಪಳಿಸಿತು. ಹೊತ್ತಿ ಉರಿಯಿತು. ಹೊರಬರಲು ಒಂಚೂರು ಅವಕಾಶ ದೊರೆತಿದ್ದರೂ ನೀನು ಬದುಕುಳಿಯುತ್ತಿದ್ದೆಯೇನೋ. ಆದರೆ, ವಿಧಿ ಅದಕ್ಕೆ ಅವಕಾಶ ಕೊಡಲಿಲ್ಲ. ಬಹುಶಃ ಅದಕ್ಕೆ ನಮ್ಮ ಮೇಲೆ ಸಿಟ್ಟಿತ್ತು ಅಂತ ಕಾಣುತ್ತೆ. ಹೊರಬರಬಹುದಾದ ಎಲ್ಲ ದಾರಿಯನ್ನೂ ಬಂದ್ ಮಾಡಿ ನಿನ್ನ ಬಲಿ ತೆಗೆದುಕೊಂಡಿತು.

ನಂತರ ಹರಿದಿದ್ದೆಲ್ಲ ಕಣ್ಣೀರೇ. ಒಂದು ವೇಳೆ ಇವೇ ಹನಿಹನಿ ಬಾಷ್ಪಗಳು ಉರಿಯುತ್ತಿದ್ದ ವಿಮಾನದ ಮೇಲೆ ಸುರಿದಿದ್ದರೆ, ಬಹುಶಃ ಬೆಂಕಿಯಾರಿ ಅಲ್ಲಿ ಪುಟ್ಟ ಕೊಳವೇ ನಿರ್ಮಾಣವಾಗುತ್ತಿತ್ತೇನೋ. ನೀನು ಮತ್ತೆ, ಅಗ್ನಿದಿವ್ಯದಿಂದ ಸೀತೆ ಹೊರಬಂದಂತೆ ಎದ್ದು ಬರುತ್ತಿದ್ದೆಯೇನೋ. ಆದರೆ, ದುರ್ವಿಧಿ ಅದಕ್ಕೆ ಅವಕಾಶ ಕೊಡಲಿಲ್ಲ ಸೌಂದರ್ಯ. ಏನು ಮಾಡುವುದು? ನಾವೆಲ್ಲ ಇದ್ದ ಜಾಗದಿಂದಲೇ ಹನಿಯಾದೆವು. ಮರುಗಿದೆವು. ನಲುಗಿಹೋದೆವು. ಕಳೆದ ಐದು ವರ್ಷಗಳಿಂದ, ನಿನ್ನ ನೆನಪಾದಾಗೆಲ್ಲ ಹೀಗೇ ಹನಿಯಾಗಿದ್ದೇವೆ, ಮರುಗಿದ್ದೇವೆ. ಪ್ರತಿಯೊಂದು ಹನಿಯೂ ನಿನ್ನ ನೆನಪಿನ ಗಿಡದ ಬೇರುಗಳನ್ನು ಬಲಗೊಳಿಸಿದೆ. ನಿನ್ನ ಚಿತ್ರವನ್ನು ದಟ್ಟವಾಗಿಸಿದೆ.

ನಾವು ಇನ್ನೇನು ತಾನೆ ಮಾಡಲು ಸಾಧ್ಯ ಸೌಂದರ್ಯ? ನಿನ್ನ ನೆನಪಿಸಿಕೊಳ್ಳುವುದನ್ನು ಬಿಟ್ಟು ನಾವು ಮಾಡುವುದಾದರೂ ಏನಿದೆ? ಕಳೆದ ಐದು ವರ್ಷಗಳ ಅವಧಿಯಲ್ಲಿ, ನಮ್ಮ ಬದುಕಿನಲ್ಲಿ ನಗು ಉಕ್ಕಿದಾಗ, ಕನಸುಗಳು ಮೊಳಕೆಯೊಡೆದಾಗ, ಕನ್ನಡ ಚಿತ್ರರಂಗ ಹೊಸ ದಾಖಲೆ ಬರೆದಾಗೆಲ್ಲ ನಿನ್ನ ನೆನಪಾಗಿದೆ. ನಿನ್ನ ಅನುಪಸ್ಥಿತಿ ಕಾಡಿದೆ. ಎಲ್ಲ ನಗುವಿನ ಆಳದಲ್ಲಿರುವ ವಿಷಾದದಂತೆ ನೀನು ನಮ್ಮೆದೆಯಲ್ಲಿ ಶಾಶ್ವತ ವಿಷಾದವಾಗಿ ಉಳಿದುಬಿಟ್ಟಿರುವೆ.

ಸುಂದರ ನಗುವಿನ ಒಡತಿಯೇ, ನಾವು ಇದಕ್ಕಿಂತ ಹೆಚ್ಚಿಗೆ ಏನು ಹೇಳಲು ಸಾಧ್ಯ? ಎಲ್ಲಿಯೇ ಇರು, ಹೇಗೇ ಇರು, ನಿನ್ನ ನಗು ಮಾಸದಿರಲಿ. ನಗುತ್ತ ಹೋದವಳು ನೀನು. ನಗುತ್ತಲೇ ಇರು. ನಮ್ಮ ಪಾಲಿಗೆ ನೀನು ಬಿಟ್ಟುಹೋಗಿರುವ ಗಾಢ ವಿಷಾದ ಆ ನಗೆಯಿಂದ ಕೊಂಚವಾದರೂ ಕಡಿಮೆಯಾಗಲಿ. ಹಾಗಂತ ಮನತುಂಬಿ ಹಾರೈಸುತ್ತೇವೆ.

- ಚಾಮರಾಜ ಸವಡಿ

2 comments:

ಮಲ್ಲಿಕಾರ್ಜುನ.ಡಿ.ಜಿ. said...

ನಿಜ ಸರ್,
ಸೌಂಧರ್ಯ ಇನ್ನೂ ಇರಬೇಕಿತ್ತು. ಹಲವಾರು ವಿಷಯಗಳಲ್ಲಿ ಅವರನ್ನು ಮಿಸ್ ಮಾಡಿಕೊಳ್ತೀವಿ.

Chamaraj Savadi said...

ಹೌದು ಮಲ್ಲಿಕಾರ್ಜುನ್‌. ಸೌಂದರ್ಯ ಎಂದಿಗೂ ಮರೆಯದ ನಟಿ.