ಬೆಳೆಯುತ್ತ ಬೆಳೆಯುತ್ತ ನಾವು ಬಾಲ್ಯವನ್ನೇ ಮರೆಯುತ್ತೇವೆ.
ಏಕೋ ಇವತ್ತು ಈ ಭಾವನೆ ಬಲವಾಗಿ ಕಾಡತೊಡಗಿದೆ. ಚಿಕ್ಕವರಿದ್ದಾಗ ಬೇಗ ಬೇಗ ದೊಡ್ಡವರಾಗಬೇಕು ಎಂದು ಹಂಬಲಿಸುತ್ತೇವೆ. ಬೆಳೆದು, ಜವಾಬ್ದಾರಿಗಳು ಹೆಗಲಿಗೇರಿದಾಗ ಬಾಲ್ಯ ಪ್ರಿಯವಾಗತೊಡಗುತ್ತದೆ. ಕಳೆದುಕೊಂಡಿದ್ದಕ್ಕಾಗಿ, ಇಲ್ಲದಿರುವುದಕ್ಕಾಗಿ ಹಂಬಲಿಸುವುದು ಮನುಷ್ಯನ ಜೊತೆಗೇ ಬೆಳೆದುಬಂದ ಗುಣವಿರಬೇಕು.
ಅದಕ್ಕೆಂದೇ ಬಾಲ್ಯ ಒಂದು ಶಾಶ್ವತ ನೆನಪು.
ಬಾಲ್ಯದ ಎಲ್ಲ ನೆನಪುಗಳೂ ಸುಂದರ ಎಂದು ಹೇಳಲಾಗದು. ಆದರೂ, ಹಲವಾರು ಕಾರಣಗಳಿಗಾಗಿ ಅದು ಪ್ರಿಯವೇ. ತೀರ ದುಃಸ್ಥಿತಿ ಎದುರಿಸಿದವರನ್ನು ಬಿಟ್ಟರೆ, ಬಹುತೇಕ ಜನರ ಪಾಲಿಗೆ ಬಾಲ್ಯದ ನೆನಪೇ ಸುಂದರ. ಈಗಿನ ಸೌಲಭ್ಯಗಳ್ಯಾವವೂ ಇದ್ದಿರದಿದ್ದರೂ ನಮ್ಮ ಬಾಲ್ಯ ನಮಗೆ ಸೊಗಸೇ.
ಆಗಿನ ಆಟಿಕೆಗಳಾದರೂ ಎಂಥವು? ಬೀದಿಯಲ್ಲಿ ಬಿದ್ದಿರುತ್ತಿದ್ದ ಕಲ್ಲುಗಳು, ಮಣ್ಣು, ಉದುರಿಬಿದ್ದಿರುತ್ತಿದ್ದ ಹೂಗಳು, ಹಳೆ ಸಾಮಾನು, ರದ್ದಿ ಕಾಗದ, ಶಾಲೆಯಿಂದ ಕದ್ದು ತಂದಿರುತ್ತಿದ್ದ ಚಾಕ್‌ಪೀಸ್- ಇವು ನಮ್ಮ ಬಾಲ್ಯವನ್ನು ಅದೆಷ್ಟು ಸಮೃದ್ಧವಾಗಿಸಿದ್ದವು! ಒಬ್ಬರೇ ಆಡಿಕೊಳ್ಳುವ ನೂರಾರು ಆಟಗಳಿದ್ದವು. ಇಬ್ಬರು ಸೇರಿದರೆ ಅದೊಂದು ತಂಡ. ನಾಲ್ಕೈದು ಜನರಿದ್ದರಂತೂ ಇಡೀ ಊರಿಗೇ ಕೇಳುವಷ್ಟು ಜೋರಾಗಿ ಗದ್ದಲ ಮಾಡುತ್ತ, ಖುಷಿ ಅನುಭವಿಸುತ್ತ ಆಡುತ್ತಿದ್ದೆವು.
ಆಗ ಪ್ರತಿಯೊಂದೂ ನಮಗೆ ಆಟಿಕೆಯೇ, ಅಚ್ಚರಿ ಹುಟ್ಟಿಸುವ ವಿಷಯವೇ. ಬೆಳಗಿನ ಸೂರ್ಯನಿಂದ ಹಿಡಿದು ರಾತ್ರಿಯ ಚುಕ್ಕಿಗಳವರೆಗೆ, ಪ್ರಕೃತಿಯ ಪ್ರತಿಯೊಂದು ಘಟನೆಯೂ ವಿಸ್ಮಯಕಾರಿಯೇ. ಪ್ರತಿಯೊಂದು ಪ್ರಾಣಿಯೂ ಸಂಗಾತಿಯೇ. ಮನೆಯ ಪ್ರತಿಯೊಂದು ವಸ್ತುವೂ ಆಟಿಕೆಯೇ. ಅದು ಕಟ್ಟಿಕೊಟ್ಟ ಸುಂದರ ಜಗತ್ತಿನ ಸವಿ ವರ್ಣಿಸುವುದೂ ಸಾಧ್ಯವಿಲ್ಲವೆನ್ನವಷ್ಟರ ಮಟ್ಟಿಗೆ ಬಾಲ್ಯ ಸಮೃದ್ಧ.
ನಾನು ಹುಟ್ಟಿ ಬೆಳೆದಿದ್ದು ಇಂಥ ಒಂದು ಸಣ್ಣ ಊರಿನಲ್ಲಿ. ಕೊಪ್ಪಳ ಜಿಲ್ಲೆ ಅಳವಂಡಿಯಲ್ಲಿ ಅವತ್ತಿಗಾಗಲೇ ಹೈಸ್ಕೂಲಿತ್ತು. ಏಳನೇ ತರಗತಿಯವರೆಗೆ ಸರ್ಕಾರಿ ಶಾಲೆ, ನಂತರ ಖಾಸಗಿ ಹೈಸ್ಕೂಲು. ತಾಲ್ಲೂಕು ಕೇಂದ್ರ ಕೊಪ್ಪಳ ಬಿಟ್ಟರೆ, ನಮ್ಮೂರೊಂದರಲ್ಲೇ ಹೈಸ್ಕೂಲಿದ್ದುದು. ಆಗ ಕೊಪ್ಪಳದಲ್ಲೂ ಸರ್ಕಾರಿ ಹೈಸ್ಕೂಲು ಇರಲಿಲ್ಲ.
ಪ್ರಾಥಮಿಕ ಶಾಲೆ ಸರ್ಕಾರದದ್ದಾಗಿದ್ದರೂ ಅದಕ್ಕೊಂದು ಸ್ವಂತ ಕಟ್ಟಡವಿದ್ದಿಲ್ಲ. ಮಣ್ಣಿನ ಗೋಡೆಯ, ಮಣ್ಣಿನ ಛಾವಣಿಯ ದೊಡ್ಡ ಮನೆಯೇ ಶಾಲೆ. ಸೆಗಣಿ ಸಾರಿಸಿದ ನೆಲದ ಮೇಲೆಯೇ ಎಲ್ಲರೂ ಕೂಡುತ್ತಿದ್ದೆವು. ಮೂರು ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಬೆಂಚು. ಇಡೀ ಶಾಲೆಯಲ್ಲಿ ಡೆಸ್ಕುಗಳಿದ್ದಿಲ್ಲ. ಬಿನ್ ಇಯತ್ತೆ (ಬಿನ್ನತ್ತೆ) ಎಂದು ಕರೆಯುತ್ತಿದ್ದ ನರ್ಸರಿ ತರಗತಿಯೂ ಸೇರಿದಂತೆ ಒಂದು ಮತ್ತು ಎರಡನೇ ತರಗತಿಗಳು ನಡೆಯುತ್ತಿದ್ದುದು ಒಂದೇ ಅಂಕಣದಲ್ಲಿ. ಮೂರು ಮತ್ತು ನಾಲ್ಕನೇ ತರಗತಿಗಳಿಗೆ ಪ್ರತ್ಯೇಕ ಕೋಣೆಗಳಿದ್ದರೂ ಯಾವುದಕ್ಕೂ ಬಾಗಿಲೇ ಇರಲಿಲ್ಲ. ಅಲ್ಲಿ ನಡೆಯುತ್ತಿದ್ದ ಪಾಠ ಎಲ್ಲರಿಗೂ ಕೇಳುವಂಥ ವಾತಾವರಣ.
ಅಪ್ಪ ಪ್ರಾಥಮಿಕ ಶಾಲೆಯ ಹೆಡ್ಮಾಸ್ಟರಾಗಿದ್ದರಿಂದ ನಾಲ್ಕನೇ ವಯಸ್ಸಿನಿಂದಲೇ ಶಾಲೆಗೆ ಹೋಗುವುದು ಅಭ್ಯಾಸವಾಗಿತ್ತು. ಮನೆಯಲ್ಲಿದ್ದರೆ ಗಲಾಟೆ ಮಾಡುತ್ತಾರೆ ಎಂಬ ಕಾರಣಕ್ಕೆ ಶಾಲೆಗೆ ಹೋಗುವಾಗ ಅಣ್ಣ ಮತ್ತು ನನ್ನನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಇನ್ನಿಬ್ಬರು ಅಣ್ಣಂದಿರು ಅದೇ ಶಾಲೆಯಲ್ಲಿ ಓದುತ್ತಿದ್ದರು. ಹೆಡ್ಮಾಸ್ಟರ ಮಗ ಎಂಬ ಯಾವ ವಿನಾಯಿತಿಯೂ ಇಲ್ಲದಂತೆ ಶಾಲೆ ತಲುಪಿದ ಕೂಡಲೇ ಬಿನ್ನತ್ತೆಯಲ್ಲಿ ಕೂಡಿಸುತ್ತಿದ್ದರು. ಅಲ್ಲಿ ನಮಗೆ ಏನು ಕಲಿಸುತ್ತಿದ್ದರು ಎಂಬುದು ನೆನಪಿಲ್ಲವಾದರೂ, ಅಕ್ಕಪಕ್ಕದಲ್ಲೇ ನಡೆಯುತ್ತಿದ್ದ ಒಂದು ಮತ್ತು ಎರಡನೇ ತರಗತಿಯ ಪಾಠಗಳು ನನಗೆ ಆಗಲೇ ಬಾಯಿಪಾಠವಾಗಿದ್ದವು. ಅಕ್ಷರ ಕಲಿತಿದ್ದು ನಂತರ.
ಬಿದ್ದರೆ ಒಡೆದುಹೋಗುವಂಥ ಪಾಟಿ (ಸ್ಲೇಟು) ಮತ್ತು ಬಳಪದ ಕಲ್ಲಿನ ಪೆನ್ಸಿಲ್ಲೇ ನಮ್ಮ ಆಗಿನ ಸಂಗಾತಿ. ಪೆನ್ಸಿಲ್‌ಗೆ ನಾವು ಪೇಣೆ ಎಂದು ಕರೆಯುತ್ತಿದ್ದೆವು. ನಾಲ್ಕನೇ ತರಗತಿ ಮುಗಿಯುವವರೆಗೆ ಎಲ್ಲರೂ ಬಳಸಲೇಬೇಕಾದ ವಸ್ತುಗಳವು. ನನ್ನ ಮೊದಲ ಅಕ್ಷರಭ್ಯಾಸ ಆಗಿದ್ದು ಪಾಟಿಯಲ್ಲೇ. ಮಗ್ಗಿ ಕಲಿತಿದ್ದು, ಸಣ್ಣ ಸಣ್ಣ ವಾಕ್ಯಗಳನ್ನು ಬರೆದಿದ್ದು ಅದರಲ್ಲಿಯೇ. ಹೋಂ ವರ್ಕ್ ಕೂಡಲ ಅದರಲ್ಲೇ ಮಾಡುತ್ತಿದ್ದೆವು. ರಾತ್ರಿ ಲಾಂದ್ರದ ಬೆಳಕಿನಲ್ಲಿ ಪಾಟಿಯ ಒಂದು ಭಾಗದಲ್ಲಿ ಶಬ್ದಗಳು ಮತ್ತು ವಾಕ್ಯ ರಚನೆ ಹಾಗೂ ಇನ್ನೊಂದು ಭಾಗದಲ್ಲಿ ಮಗ್ಗಿ ಬರೆದು, ಹುಷಾರಾಗಿ ಎತ್ತಿಡುತ್ತಿದ್ದೆವು. ಮರುದಿನ ಅದನ್ನು ಅತ್ಯಂತ ಜತನದಿಂದ ತೆಗೆದುಕೊಂಡು ಹೋಗಿ ಮಾಸ್ತರರ ಟೇಬಲ್ ಮೇಲಿಡುತ್ತಿದ್ದೆವು. ಒಂದರ ಮೇಲೆ ಒಂದರಂತೆ ಇಟ್ಟಿದ್ದ ಪಾಟಿಗಳ ಹಿಂದೆ ಮಾಸ್ತರರೇ ಕಾಣುತ್ತಿರಲಿಲ್ಲ.
ಸಹಪಾಠಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಆಗಿನ ಅತ್ಯಂತ ಸಾಮಾನ್ಯ ವಿಧಾನವೆಂದರೆ, ಪಾಟಿಯಲ್ಲಿ ಬರೆದಿರುತ್ತಿದ್ದ ಹೋಮ್ ವರ್ಕ್ ಅಳಿಸಿಹಾಕುವುದು. ಹಿಂದಿನ ದಿನದ ಜಗಳವನ್ನು ಮನಸ್ಸಿನಲ್ಲಿಟ್ಟುಕೊಂಡಿರುತ್ತಿದ್ದ ಹುಡುಗರು, ಶಾಲೆಗೆ ಹೋಗುವ ದಾರಿಯಲ್ಲಿ ಕಾಯ್ದು ನಿಂತಿರುತ್ತಿದ್ದರು. ತಪ್ಪಿಸಿಕೊಂಡು ಹೋಗುವವರನ್ನು ಬಲವಂತದಿಂದ ಹಿಡಿದು ನಿಲ್ಲಿಸಿ, ಪಾಟಿಯಲ್ಲಿ ಬರೆದಿದ್ದನ್ನು ಅಳಿಸಿಬಿಟ್ಟರೆ ದೊಡ್ಡ ಜಯ ಸಂಪಾದಿಸಿದ ಸಂಭ್ರಮ. ಏಕೆಂದರೆ, ಹೋಮ್ ವರ್ಕ್ ಮಾಡಿಲ್ಲ ಎಂದು ಮಾಸ್ತರು ಏಟು ಕೊಡುವುದು ಖಾತರಿ. ಎಷ್ಟೇ ವಿವರಣೆ ನೀಡಿದರೂ ಮಾಸ್ತರು ಕೇಳುತ್ತಿರಲಿಲ್ಲ. ಅಳಿಸಿಹೋದ ಪಾಟಿ ಸತ್ಯ ನುಡಿಯುವುದಾದರೂ ಹೇಗೆ?
ಆಗ ಪ್ರತಿಯೊಂದನ್ನೂ ಬಾಯಿಪಾಠ ಮಾಡುವುದು ಕಡ್ಡಾಯವಾಗಿತ್ತು. ಮಗ್ಗಿ ಕಲಿತಿದ್ದು ಹಾಗೆ. ಒಂದು ಮತ್ತು ಎರಡನೇ ತರಗತಿಯಲ್ಲಿ ಇಡೀ ವರ್ಷಕ್ಕೆ ಒಂದೇ ಪಠ್ಯಪುಸ್ತಕ ಇರುತ್ತಿತ್ತು. ಅದರಲ್ಲಿರುತ್ತಿದ್ದ ಪದ್ಯಗಳನ್ನೆಲ್ಲ ನಾವು ಕಂಠಪಾಠ ಮಾಡಬೇಕಿತ್ತು. ಪ್ರತಿಯೊಂದು ಪದ್ಯವನ್ನು ಹೇಳಿಕೊಟ್ಟಾಗ, ಮಧ್ಯಾಹ್ನದ ತರಗತಿಯ ಕೊನೆಯ ಪಿರಿಯೆಡ್ಡಿನಲ್ಲಿ ಅದನ್ನು ಸಾಮೂಹಿಕವಾಗಿ ಬಾಯಿಪಾಠ ಮಾಡಿಸುತ್ತಿದ್ದರು. ಸರದಿಯ ಪ್ರಕಾರ, ಒಬ್ಬೊಬ್ಬನೇ ವಿದ್ಯಾರ್ಥಿ ಎದ್ದು, ಕೈಕಟ್ಟಿಕೊಂಡು, ಎರಡ ತರಗತಿಗಳ ನಡುವಿನ ಚಿಕ್ಕ ಕಾಲ್ದಾರಿಯಂಥ ಜಾಗದಲ್ಲಿ, ಆ ಕಡೆಯಿಂದ ಈ ಕಡೆ ನಡೆಯುತ್ತ, ಪದ್ಯದ ಒಂದೊಂದು ನುಡಿಯನ್ನು ರಾಗವಾಗಿ ಹಾಡುತ್ತಿದ್ದ. ಪ್ರತಿಯೊಂದು ಸಾಲಿಗೂ ತರಗತಿಯ ಇತರ ವಿದ್ಯಾರ್ಥಿಗಳು ಅದನ್ನೇ ಸಾಮೂಹಿಕವಾಗಿ ಹೇಳಬೇಕಿತ್ತು. ಶಾಲೆಯಲ್ಲಿದ್ದ ಎಲ್ಲ ನಾಲ್ಕೂ ತರಗತಿಗಳ ವಿದ್ಯಾರ್ಥಿಗಳು ತಂತಮ್ಮ ಪದ್ಯವನ್ನು ಕೋರಸ್‌ನಲ್ಲಿ ಹಾಡುತ್ತಿದ್ದರು. ಪಕ್ಕದ ಕ್ಲಾಸ್‌ನವ ಹೇಳುತ್ತಿದ್ದುದಕ್ಕಿಂತ ಜೋರಾಗಿ ಹೇಳುವ ಉಮೇದು ನಮಗೆ. ಮಾಸ್ತರು ಕೂಡ ಅದನ್ನು ಪ್ರೋತ್ಸಾಹಿಸುತ್ತಿದ್ದರು. ಕಂಠ ಹರಿಯುವಂತೆ ಏರು ಧ್ವನಿಯಲ್ಲಿ ಪದ್ಯದ ಸಾಲುಗಳನ್ನು ಕಿರಿಚುತ್ತಿದ್ದೆವು. ಎಲ್ಲ ತರಗತಿಗಳಿಂದ ಹೊರಡುತ್ತಿದ್ದ ಆ ಘನಘೋರ ಧ್ವನಿಯನ್ನು ಕೇಳಿದ ಜನರಿಗೆ, ಶಾಲೆ ಬಿಡುವ ಹೊತ್ತಾಯಿತು ಎಂಬ ಮುನ್ಸೂಚನೆ ಸಿಗುತ್ತಿತ್ತು.
ರೈಲು ಕಂಬಿಯ ಒಂದು ತುಂಡು ಶಾಲೆಯ ಗಂಟೆಯಾಗಿತ್ತು. ಅದನ್ನು ಬಾರಿಸುವುದೊಂದೇ ತಡ, ಮಾಸ್ತರು ಅಡ್ಡ ನಿಂತಿದ್ದರೂ ತಳ್ಳಿಕೊಂಡು ಹೊರಗೆ ಧಾವಿಸುತ್ತಿದ್ದೆವು. ನಾನಂತೂ ಮನೆ ತಲುಪುವವರೆಗೆ ಓಡಿಕೊಂಡೇ ಹೋಗುತ್ತಿದ್ದೆ. ನಿಧಾನವಾಗಿ ಬಂದ ನೆನಪೇ ಇಲ್ಲ.
ಆಗ ಯಾರಿಗೂ ಯುನಿಫಾರ್ಮ್ ಆಗಲಿ, ಚಪ್ಪಲಿಯಾಗಲಿ ಇರುತ್ತಿದ್ದಿಲ್ಲ. ಹರಕುಬಟ್ಟೆಗಳಂತೂ ಅತಿ ಸಾಮಾನ್ಯ. ಕೈಯಲ್ಲಿ ಹಿಡಿದ ಪಾಟಿಯ ಹೊರತಾಗಿ ಬೇರೇನೂ ಶಾಲಾವಸ್ತುಗಳಿರುತ್ತಿದ್ದಿಲ್ಲ. ಆದರೂ, ಕಲಿಯುವ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಮಳೆ ಬಂದರೆ ಸಾಕು, ಇಡೀ ಶಾಲೆ ಸೋರುತ್ತಿತ್ತು. ಸೋರದಿರುವ ಭಾಗದಲ್ಲಿ ಮೂರು ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳನ್ನು ಗುಂಪುಗುಂಪಾಗಿ ಕೂಡಿಸಿ ಬಿನ್ನತ್ತೆ, ಒಂದು ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿಬಿಡುತ್ತಿದ್ದರು. ಮಳೆ ಇನ್ನೂ ಜೋರಾದರೆ, ಇಡೀ ಶಾಲೆಗೇ ರಜೆ. ಆಗ ಅತೀವ ಹರುಷದಿಂದ, ‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ' ಎಂದು ಜೋರಾಗಿ ಹಾಡುತ್ತ, ಮಳೆಯಿಂದ ರಕ್ಷಿಸಿಕೊಳ್ಳಲು ಪಾಟಿಯನ್ನು ತಲೆ ಮೇಲೆ ಇಟ್ಟುಕೊಂಡು ಓಡುತ್ತ ಮನೆಗೆ ಹೋಗುತ್ತಿದ್ದೆವು.
*****
ಆಕಾಶವೇ ತೂತಾಗಿದೆಯೇನೋ ಎಂಬಂತೆ ಬೀಳುತ್ತಿರುವ ಬೆಂಗಳೂರಿನ ಮಳೆ ನನಗೆ ನನ್ನೂರನ್ನು ನೆನಪಿಸುತ್ತಿದೆ. ತಮಾಷೆಯ ಸಂಗತಿ ಎಂದರೆ, ಸೋರಲು ಬೆಂಗಳೂರಿನಲ್ಲಿ ಮಣ್ಣಿನ ಶಾಲೆಗಳಿಲ್ಲ. ಸೋರುವುದೇನಿದ್ದರೂ ರಸ್ತೆಗಳು ಮತ್ತು ಚರಂಡಿಗಳು. ಹೀಗಾಗಿ, ಜೋರು ಮಳೆ ಬಂದರೆ, ನಮ್ಮೂರಲ್ಲಿ ನೀಡುತ್ತಿದ್ದಂತೆ ಇಲ್ಲಿಯೂ ಶಾಲೆಗೆ ರಜೆ.
ಆದರೆ, ‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ' ಹಾಡು ಮಾತ್ರ ಎಲ್ಲಿಯೂ ಕೇಳಿಬರುವುದಿಲ್ಲ!
- ಚಾಮರಾಜ ಸವಡಿ
‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ'
26 Sept 2009
ಮತ್ತೆ ಕಿತ್ತು ಜೋಡಿಸುವ ಮಜಾ...
ಪದ ಶೋಧ
Chamaraj Savadi,
ನೆನಪು,
ಮನೆ ಬದಲಾವಣೆ,
ಸ್ಥಳಾಂತರ
ಇವತ್ತು ಓದುವ ಕೊಠಡಿ ತಕ್ಕ ಮಟ್ಟಿಗೆ ಸಿದ್ಧವಾಯಿತು. ಬೆಳಿಗ್ಗೆ ಡಬ್ಬಿಗಳನ್ನೆಲ್ಲ ಖಾಲಿ ಮಾಡಿ ಕಂಪ್ಯೂಟರಿನ ವಿವಿಧ ಭಾಗಗಳನ್ನು ಜೋಡಿಸಿಕೊಂಡೆ.
ವರ್ಷಕ್ಕೊಮ್ಮೆ ಮನೆ ಹಾಗೂ ನೌಕರಿ ಬದಲಿಸುವ ಜಾಯಮಾನದ ವ್ಯಕ್ತಿ ನಾನು. ಹೀಗಾಗಿ, ಮನೆ ಬದಲಾದಾಗೆಲ್ಲ ಕಂಪ್ಯೂಟರ್ ಬಿಚ್ಚಿ ಜೋಡಿಸುವುದು ಅನಿವಾರ್ಯ. ಎಷ್ಟೋ ಸಾರಿ ಒಂದೇ ಮನೆಯಲ್ಲೇ ಕನಿಷ್ಠ ಎರಡೆರಡು ಬಾರಿ ಕಂಪ್ಯೂಟರಿನ ಜಾಗ ಬದಲಿಸಿದ್ದೇನೆ. ಮೊದಮೊದಲು ಅಷ್ಟೊಂದು ವೈರುಗಳು ಗೋಜಲುಗೋಜಲಾಗಿ ಹೆಣೆದುಕೊಂಡಿದ್ದನ್ನು ಗಾಬರಿಯಿಂದ ನೋಡುತ್ತ ನಿಂತುಬಿಟ್ಟಿದ್ದೆ. ಕಂಪ್ಯೂಟರ್ ತಜ್ಞರನ್ನೇ ಕರೆಸಿ ಬಿಚ್ಚಿಸಬೇಕಾಗುತ್ತದೆ ಎಂದು ಬೇಸರಪಟ್ಟುಕೊಂಡಿದ್ದೆ. ಆದರೂ, ಒಂದು ಸಾರಿ ಪ್ರಯತ್ನಿಸಿ ನೋಡಿಬಿಡೋಣ. ಬಾರದಿದ್ದರೆ, ಗೊತ್ತಿರುವವರನ್ನು ಕರೆಸುವುದು ಇದ್ದೇ ಇದೆಯಲ್ಲ ಎಂದು ಕೈ ಹಾಕಿದ್ದೆ.
ಆದರೆ, ಕೈಯೇ ಓಡುತ್ತಿಲ್ಲ. ಅಪರಿಚಿತ ಸರ್ಕ್ಯೂಟ್ ಬಿಚ್ಚುತ್ತಿರುವ ವಿದ್ಯಾರ್ಥಿಯ ಥರ ಭೀತಿ. ಮೊದಲು ಸಿಪಿಯು ವೈರುಗಳನ್ನು ಬಿಚ್ಚಿಟ್ಟೆ. ನಂತರ ಸಂಬಂಧಿಸಿದ ಭಾಗಗಳ ಜೋಡಣೆ ತೆಗೆದುಹಾಕುತ್ತ, ಯಾವ್ಯಾವ ವೈರು ಎಲ್ಲೆಲ್ಲಿ ಜೋಡಣೆಯಾಗಿದೆ ಎಂಬುದನ್ನು ಎರಡೆರಡು ಸಾರಿ ನೋಡಿಕೊಂಡಿದ್ದೆ. ಆದರೆ, ಬಿಚ್ಚಿ ಅವನ್ನು ಪ್ಯಾಕ್ ಮಾಡಿಟ್ಟಾಗ, ಬೋಳು ಮೈಯನ ಸಿಪಿಯು ನೋಡಿ ದಿಗಿಲಾಗಿತ್ತು. ನಮನಮೂನೆಯ ಚುಚ್ಚುಗುಂಡಿಗಳಿಗೆ ಯಾವ್ಯಾವ ವೈರುಗಳು ಸೇರುತ್ತವೋ ಏನೋ, ಒಂದು ವೇಳೆ ತಪ್ಪು ವೈರು ಸೇರಿಸಿ ಕಂಪ್ಯೂಟರ್ ಢಂ ಅಂದರೆ ಹೇಗೆ ಅಂತ ತುಂಬ ದಿಗಿಲಾಗಿತ್ತು.
ಈಗ ಎಲ್ಲಾ ಕಿತ್ತಾಗಿದೆ. ಚಿಂತಿಸಿ ಉಪಯೋಗವಿಲ್ಲ. ಮತ್ತೆ ಜೋಡಿಸುವಾಗ ಯೋಚಿಸಿದರಾಯ್ತು ಎಂಬ ಸಮಾಧಾನ ಹೇಳಿಕೊಂಡಿದ್ದೆನಾದರೂ, ಮನಸ್ಸಿನಲ್ಲಿ ಅದೇ ವಿಷಯ ಕೊರೆಯುತ್ತಿತ್ತು. ಮನೆ ಬದಲಿಸಿ, ಗೃಹಮಂತ್ರಿಯ ಆದ್ಯತೆಯ ಪ್ರಕಾರ, ಸಾಮಾನುಗಳನ್ನೆಲ್ಲ ಜೋಡಿಸಿಟ್ಟಾಗ, ಕೊನೆಗೆ ಉಳಿದಿದ್ದು ನನ್ನ ಓದುವ ಕೊಠಡಿ ಸಿದ್ಧಪಡಿಸುವುದು. ಅದು ನನ್ನದೇ ಜವಾಬ್ದಾರಿಯಾಗಿದ್ದರಿಂದ, ಎಲ್ಲರೂ ಮಲಗಿದಾಗ, ಕಳ್ಳನಂತೆ ಒಂದೊಂದೇ ಡಬ್ಬ ತೆರೆಯುತ್ತ ಸಾಮಾನುಗಳನ್ನು ಜೋಡಿಸಿಟ್ಟುಕೊಳ್ಳುತ್ತಿದ್ದೆ. ಕಂಪ್ಯೂಟರಿಗೆ ಸಂಬಂಧಿಸಿದ ಡಬ್ಬಗಳನ್ನು ನೋಡಿದಾಗ, ಮತ್ತದೇ ಅಳುಕು ಹುಟ್ಟುತ್ತಿದ್ದರಿಂದ, ಅವನ್ನೆಲ್ಲ ನಂತರ ಜೋಡಿಸಿದರಾಯ್ತು ಎಂದು ಒಂದೆಡೆ ಇಟ್ಟುಬಿಟ್ಟಿದ್ದೆ.
ಇವತ್ತು ಅದೆಲ್ಲ ನೆನಪಾಗುತ್ತಿದೆ.
ಡಬ್ಬಗಳನ್ನು ಒಂದೊಂದಾಗಿ ತೆರೆದು, ಕಂಪ್ಯೂಟರಿನ ವಿವಿಧ ಭಾಗಗಳನ್ನು ಟೇಬಲ್ ಮೇಲಿಟ್ಟುಕೊಂಡೆ. ದಾರ ಸುತ್ತಿದಂತೆ ಸುತ್ತಿಟ್ಟಿದ್ದ ವೈರುಗಳ ಚೀಲ ತೆರೆದು, ಹಾವಾಡಿಗನಂತೆ ಅವನ್ನೆಲ್ಲ ಹೊರತೆಗೆದೆ. ಎಲ್ಲ ನಮೂನೆಯ, ಗಾತ್ರದ, ಬಣ್ಣದ ವೈರುಗಳವು. ಜನುಮಜನುಮದ ಪ್ರೇಮಿಗಳಂತೆ, ತಳುಕುಹಾಕಿಕೊಂಡಿದ್ದ ಅವನ್ನೆಲ್ಲ ಬಲವಂತದಿಂದ ಒಂದೊಂದಾಗಿ ಬಿಡಿಸಿ, ಕಂಪ್ಯೂಟರಿನ ಸಂಬಂಧಿಸಿದ ಭಾಗಗಳಿಗೆ ಜೋಡಿಸಿದೆ. ಎಲ್ಲ ಮುಗಿದು, ಯುಪಿಎಸ್‌ನ ಪ್ಲಗ್ ಕೈಗೆತ್ತಿಕೊಂಡು ಕನೆಕ್ಷನ್ ಕೊಡಲೆಂದು ನೋಡುತ್ತೇನೆ-
ಗೋಡೆಯ ಮೇಲೆ ಒಂದೇ ಒಂದು ಸಾಕೆಟ್ ಇಲ್ಲ!
ಇದ್ದುದು ಒಂದು ಸ್ವಿಚ್ ಮಾತ್ರ. ತುಂಬ ನಿರಾಸೆಯಾಯ್ತು. ಶತಾಯಗತಾಯ ಇವತ್ತು ಕಂಪ್ಯೂಟರ್ ಜೋಡಿಸಿ ಏನಾದರೂ ಬರೆದೇ ಸಿದ್ಧ ಎಂಬ ಹುಮ್ಮಸ್ಸಿನಿಂದ ಕೆಲಸ ಶುರು ಮಾಡಿದವನಿಗೆ ಕರೆಂಟಿಗೇ ದಿಕ್ಕಿಲ್ಲದಂತಾಗಿತ್ತು. ಹತ್ತಿರದಲ್ಲಿ ಎಲ್ಲಾದರೂ ಮೂರು ಪಿನ್ನಿನ ಸಾಕೆಟ್ ಇದೆಯಾ ಎಂದು ಹುಡುಕಿದರೆ, ಒಂದೂ ಸಿಗಲಿಲ್ಲ. ಎಕ್ಸ್ಟೆನ್ಷನ್ ಜಂಕ್ಷನ್ ಬಾಕ್ಸ್ ತರದೇ ದಾರಿಯೇ ಇಲ್ಲದಾದಾಗ, ಪ್ಯಾಂಟೇರಿಸಿಕೊಂಡು ವಿದ್ಯುತ್ ಉಪಕರಣಗಳ ಅಂಗಡಿ ಹುಡುಕಿಕೊಂಡು ಹೊರಟೆ.
'ಇದು ಬ್ರ್ಯಾಂಡೆಡ್ ಜಂಕ್ಷನ್ ಬಾಕ್ಸ್' ಎಂದು ಅಂಗಡಿಯವ ಪದೆ ಪದೆ ಭರವಸೆ ಕೊಡುತ್ತಿದ್ದರೂ, ಅವನು ಕೊಡಲೆತ್ತಿಸುತ್ತಿದ್ದ ಬಾಕ್ಸನ್ನು ಅತ್ಯಂತ ಅನುಮಾನದಿಂದ ನೋಡುತ್ತ, ಪರಿಶೀಲಿಸುತ್ತ, ಅನುಮಾನ ಇದ್ದರೂ ಅನಿವಾರ್ಯತೆ ಅದಕ್ಕಿಂತ ಹೆಚ್ಚಾಗಿದ್ದರಿಂದ, ಇದ್ದುದರಲ್ಲೇ ಉತ್ತಮ ಎಂದು ಕಾಣುತ್ತಿದ್ದ ಜಂಕ್ಷನ್ ಬಾಕ್ಸ್ ಎತ್ತಿಕೊಂಡು ಬಂದೆ. ಅಡುಗೆ ಮನೆಯಲ್ಲಿದ್ದ ಸಾಕೆಟ್‌ಗೆ ಅದನ್ನು ಜೋಡಿಸಿ, ಯುಪಿಎಸ್‌ಗೆ ಸಂಪರ್ಕ ಕೊಟ್ಟು, ಕೊನೆಗೂ ಕಂಪ್ಯೂಟರ್ ಆನ್ ಮಾಡಿದಾಗ ಪ್ರತ್ಯಕ್ಷವಾಯ್ತಲ್ಲ 'ಉಬುಂಟು'! ಹಳೆಯ ಗೆಳೆಯನೊಬ್ಬ ಮನೆಗೆ ಬಂದಂಥ ಸಂತಸ.
ಅವಶ್ಯಕತೆ ಎಷ್ಟೊಂದು ವಿಷಯಗಳನ್ನು ಕಲಿಸುತ್ತದೆ ಎಂದು ನೆನಪಿಸಿಕೊಂಡರೆ ಆಶ್ಚರ್ಯವಾಗುತ್ತದೆ. ಈಗ ಕಂಪ್ಯೂಟರ್ ವೈರುಗಳನ್ನು ಬಿಚ್ಚಿ ಜೋಡಿಸುವುದು ರೂಢಿಯಾಗಿಬಿಟ್ಟಿದೆ. ನೌಕರಿ ಹಾಗೂ ಮನೆ ಬದಲಿಸುವುದು ನನ್ನ ಜಾಯಮಾನದ ಒಂದು ಭಾಗವೇ ಆಗಿರುವಾಗ, ಯಕಃಶ್ಚಿತ್ ಕಂಪ್ಯೂಟರ್ ಜೋಡಣೆ ಕಲಿಯದೇ ಇರಲಾದೀತೆ?

ಮೈಕೇಲ್, ಮೊಬೈಲ್‌ಮತ್ತು ಗ್ರಾಮೀಣ ಅಭಿವೃದ್ಧಿ
6 Sept 2009
ಪದ ಶೋಧ
ಕೃಷಿ,
ತಂತ್ರಜ್ಞಾನ,
ಮೈಕೇಲ್ ರಿಗ್ಸ್,
ಮೊಬೈಲ್,
ಸಂಪದ
(ಮೈಕೇಲ್ ರಿಗ್ಸ್. ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಜ್ಞಾನ ಮತ್ತು ಮಾಹಿತಿ ನಿರ್ವಹಣೆ ಅಧಿಕಾರಿ. ಐ.ಸಿ.ಟಿ. (ಇನ್‌ಫರ್ಮೇಶನ್ ಅಂಡ್ ಕಮ್ಯನಿಕೇಶನ್ ಟೆಕ್ನಾಲಜಿ) ಅಂದರೆ, ಮಾಹಿತಿ ಮತ್ತು ದೂರಸಂಪರ್ಕ ತಂತ್ರಜ್ಞಾನವನ್ನು ಗ್ರಾಮೀಣ ಅಭಿವೃದ್ಧಿಗೆ ಬಳಸಲು ಪ್ರೇರೇಪಿಸುವುದು ಅವರ ಜವಾಬ್ದಾರಿ. ಆಗಸ್ಟ್ ಕೊನೆಯ ವಾರದಲ್ಲಿ ಬೆಂಗಳೂರಿಗೆ ಬಂದಿದ್ದ ರಿಗ್ಸ್ ಕನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ದಿ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯಲ್ಲಿ ಭಾಷಣ ಮಾಡಿದರು. ತಂತ್ರಜ್ಞಾನದ ನೆರವಿನಿಂದ ಗ್ರಾಮೀಣ ಅಭಿವೃದ್ಧಿ ಸುಲಭ ಎಂಬುದು ಅವರ ಮಾತಿನ ಸಾರಾಂಶ. ಆ ಸಂದರ್ಭದಲ್ಲಿ ಹಾಜರಿದ್ದ ಕೃಷಿ ಸಂಪದ ತಂಡ ಗ್ರಹಿಸಿದ ವಿವರ ಇಲ್ಲಿದೆ)
ಒಂದು ಸರಳ ಮಾಹಿತಿ ಸಾಧನವೊಂದು ನಮ್ಮ ಗ್ರಾಮೀಣ ಪ್ರದೇಶದ ಬದುಕನ್ನೇ ಪ್ರಗತಿಯತ್ತ ಕೊಂಡೊಯ್ಯಬಲ್ಲುದೆ? ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಅಧಿಕಾರಿ ಮೈಕೇಲ್ ರಿಗ್ಸ್ ಪ್ರಕಾರ ಅದು ಖಂಡಿತ ಸಾಧ್ಯ. ಇದಕ್ಕೆ ಅವರು ನೀಡುವ ಉದಾಹರಣೆ ಮೊಬೈಲ್.
ಮೊಬೈಲ್‌ಯಂತ್ರದ ಬಳಕೆಯ ಸಾಧ್ಯತೆಗಳು ಅಪಾರ ಅಂತಾರೆ ರಿಗ್ಸ್. ಇದರಿಂದ ರೈತ ಮತ್ತು ಮಾಹಿತಿ ಭಂಡಾರದ ನಡುವಿನ ದೂರ ಇಲ್ಲವಾಗುತ್ತದೆ. ರೈತನಿಗೆ ಬೇಕಾದ ಮಾಹಿತಿಯನ್ನು ಸಂಬಂಧಿಸಿದ ಸಂಸ್ಥೆ ಅಥವಾ ಸರ್ಕಾರ ತಕ್ಷಣ ಅವರಿಗೆ ತಲುಪಿಸಬಹುದು. ಬರ, ಅತಿವೃಷ್ಟಿ, ಕೀಟಬಾಧೆ, ಬೆಲೆ ಏರಿಳಿತ, ಯಾವ ಪ್ರದೇಶಕ್ಕೆ ಯಾವ ಬೆಳೆ ಸೂಕ್ತ, ಬಿತ್ತನೆ ಹೇಗೆ, ಕಾಲಕಾಲಕ್ಕೆ ಅನುಸರಿಸಬೇಕಾದ ಬೇಸಾಯ ಕ್ರಮಗಳಾವವು, ಯಾವ ಮಣ್ಣಿಗೆ ಎಂಥ ಬೆಳೆ ಸೂಕ್ತ- ಹೀಗೆ ಕೃಷಿ ಸಂಬಂಧಿ ವಿಷಯಗಳೆಲ್ಲವನ್ನೂ ಮೊಬೈಲ್ ಮೂಲಕ ಅಪ್‌ಡೇಟ್ ಮಾಡುತ್ತ ಹೋಗಬಹುದು. ಒಂದೇ ಸಂದೇಶವನ್ನು ಸಂಬಂಧಿಸಿದ ಎಲ್ಲ ರೈತರಿಗೂ ಏಕಕಾಲಕ್ಕೆ ತಲುಪಿಸುವುದು ಮೊಬೈಲ್ ಮೂಲಕ ಸುಲಭ. ಅಷ್ಟೇ ಅಲ್ಲ, ರೈತರೈತರ ನಡುವೆ ಕೂಡ ಇದು ಸಂಪರ್ಕ ಸಾಧನವಾಗಿ, ಮಾಹಿತಿ ವಿನಿಮಯಕ್ಕೆ ನೆರವಾಗಬಲ್ಲುದು.
ಇಂಥದೇ ಇನ್ನೊಂದು ತಂತ್ರಜ್ಞಾನ ವಿಡಿಯೋ ಕಾನ್ಫೆರೆನ್ಸಿಂಗ್. ರೈತನ ಹೊಲದ ವಾಸ್ತವ ಪರಿಸ್ಥಿತಿ ಏನೆಂಬುದನ್ನು ಇಲ್ಲಿ ತಕ್ಷಣ ಅರಿಯಬಹುದು. ಸಂಬಂಧಿಸಿದ ರೈತರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ನೇರವಾಗಿ ಮಾತನಾಡಿ, ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬಹುದು. ಇದರಿಂದ ಹಣ ಮತ್ತು ಸಮಯದ ಅಪಾರ ಉಳಿತಾಯವಾಗುತ್ತದೆ ಮತ್ತು ಪರಿಹಾರ ಕೂಡ ಶೀಘ್ರವಾಗಿ ಲಭಿಸುತ್ತದೆ ಅಂತಾರೆ ಮೈಕೇಲ್ ರಿಗ್ಸ್.
ಈ ಎಲ್ಲ ಉದಾಹರಣೆಗಳು ಕೇವಲ ಆದರ್ಶಗಳಲ್ಲ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ವಿವಿಧ ದೇಶಗಳಲ್ಲಿ ಇದನ್ನು ಯಶಸ್ವಿಯಾಗಿ ಪ್ರಯೋಗಿಸಿದೆ. ರೈತರೆಂದರೆ ಏನೂ ಗೊತ್ತಿರದ ಜನ ಎಂಬ ಭ್ರಮೆಯನ್ನು ಬದಿಗಿಟ್ಟು, ತಂತ್ರಜ್ಞಾನವನ್ನು ಅವರ ಕೈಗೆ ತಲುಪಿಸಿದರೆ ಪ್ರಗತಿ ಖಂಡಿತ. ಗ್ರಾಮೀಣ ಪ್ರದೇಶದ ಜನ ಹೇಗೆ ಬದುಕುತ್ತಿದ್ದಾರೆ ಎಂಬ ಕಲ್ಪನೆಯೇ ಬಹಳಷ್ಟು ಕಡೆ ಸ್ಪಷ್ಟವಾಗಿಲ್ಲ. ಹೀಗಿರುವಾಗ, ಅವರಿಗಾಗಿ ರೂಪಿಸುವ ಯೋಜನೆಗಳು ಅವರನ್ನು ತಲುಪುವುದಾದರೂ ಹೇಗೆ ಎಂಬುದು ರಿಗ್ಸ್ ಪ್ರಶ್ನೆ.
ತಂತ್ರಜ್ಞಾನವನ್ನು ಬಳಸಿ, ಗ್ರಾಮೀಣ ಪ್ರದೇಶವನ್ನು ಕಾಡುತ್ತಿರುವ ಸಮಸ್ಯೆಗಳನ್ನು ಅರಿತುಕೊಳ್ಳಿ. ನಂತರ, ಅವನ್ನು ನಿವಾರಿಸುವ ಕುರಿತು ಯೋಜನೆಗಳನ್ನು ರೂಪಿಸಿ. ಅವುಗಳ ಮಾಹಿತಿಯನ್ನು ಸಂಬಂಧಿಸಿದವರಿಗೆ ತಲುಪಿಸಿ. ಅವರೂ ಈ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಉತ್ತೇಜಿಸಿ. ಮೊಬೈಲ್‌ಕಂಪನಿಗಳು ಕೂಡ ಈ ಕೆಲಸಕ್ಕೆ ಕೈಜೋಡಿಸಬಲ್ಲವು. ಆಗ ಯಾವೊಂದು ಸಮಸ್ಯೆಯೂ ಅಲ್ಲಿಯೇ ಉಳಿದುಬಿಡದೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ಬರುತ್ತದೆ. ಆಗ ಪರಿಹಾರ ಸುಲಭ. ಹಲವಾರು ಬುದ್ಧಿಜೀವಿಗಳು ಹಾಗೂ ತಂತ್ರಜ್ಞರು ಸೇರಿ ರೂಪಿಸಿದ್ದು ಮಾಹಿತಿ ಮತ್ತು ತಂತ್ರಜ್ಞಾನ ಬಳಕೆಯ ಈ ಐಡಿಯಾ. ಹಿಂದುಳಿದ ದೇಶವಾದ ಕೋಸ್ಟರಿಕ, ಭೂತಾನ್, ಅಭಿವೃದ್ಧಿಶೀಲ ದೇಶಗಳಾದ ಶ್ರೀಲಂಕಾ, ಮಲೇಷ್ಯದಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ ಅಂತಾರೆ ರಿಗ್ಸ್.
'ಗ್ರಾಮೀಣ ಪ್ರದೇಶಕ್ಕೆ ಮಾಹಿತಿ ರವಾನಿಸುವುದು ಎಲ್ಲಾ ಕಾಲದಲ್ಲೂ ಎದುರಾಗಿರುವ ದೊಡ್ಡ ಸವಾಲು. ಇವತ್ತಿಗೂ ತುಂಬ ಜನ ಇದು ಕಷ್ಟಕರ ಎಂದೇ ಭಾವಿಸಿದ್ದಾರೆ. ಅವರ ಪ್ರಕಾರ ಮಾಹಿತಿ ಎಂದರೆ ಅಕ್ಷರರೂಪದಲ್ಲಿ ಇರುವಂಥದು. ವೆಬ್‌ಸೈಟ್, ದಿನಪತ್ರಿಕೆಗಳಲ್ಲಿ ಬರುವ ಮಾಹಿತಿಯನ್ನು ರೈತ ಓದಬಲ್ಲನೆ? ಎಂಬುದು ಅವರ ಪ್ರಶ್ನೆ. ನಿಜ, ರೈತನಿಗೆ ವೆಬ್‌ಸೈಟ್‌ನೋಡಲು ಆಗಲಿಕ್ಕಿಲ್ಲ. ಆದರೆ, ಸರ್ಕಾರ ನೋಡಬಹುದಲ್ಲ? ಸಂಬಂಧಿಸಿದ ಅಧಿಕಾರಿಗಳು ನೋಡಬಹುದು. ಅಲ್ಲಿಂದ ಹೆಕ್ಕಿದ ಮಾಹಿತಿಯನ್ನು ರೈತನಿಗೆ ತಲುಪಿಸುವುದಷ್ಟೇ ಮುಂದಿನ ಕೆಲಸ. ಮೊಬೈಲ್‌ಆ ಕೆಲಸವನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಬಹುದು. ರೇಡಿಯೋದಂತೆ ಇಲ್ಲಿ ಒಮ್ಮುಖ ಸಂಪರ್ಕ ಇಲ್ಲ. ರೈತ ಮತ್ತು ಸಂಬಂಧಿಸಿದ ವ್ಯಕ್ತಿಗಳೊಂದಿಗೆ ನೇರ ಸಂವಾದ ಸಾಧ್ಯವಿರುವುದರಿಂದ, ಸಮಸ್ಯೆ ಬೇಗ ಪರಿಹಾರ ಕಾಣಬಲ್ಲುದು' ಎಂಬುದು ಮೈಕೇಲ್ ರಿಗ್ಸ್ ವಾದ.
ಹೀಗಾಗಿ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಮಾಹಿತಿ ತಂತ್ರಜ್ಞಾನದ ನೆರವಿನಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮುಂದಾಗಿದೆ. ಅದರಲ್ಲೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತದಂಥ ದೇಶದಲ್ಲಿ, ಪ್ರಗತಿಯ ಸಾಧ್ಯತೆಗಳು ಅಪಾರ. ಇಲ್ಲಿ ಮೊಬೈಲ್‌ದರ ಅತ್ಯಂತ ಕಡಿಮೆ. ವ್ಯಾಪ್ತಿ ಹೆಚ್ಚು. ಹಲವಾರು ಕಂಪನಿಗಳು ಕಣದಲ್ಲಿರುವುದರಿಂದ ಸ್ಪರ್ಧಾತ್ಮಕ ದರದಲ್ಲಿ ಸೇವೆ ಸಿಗುತ್ತದೆ. ರೈತರ ಯೋಜನೆಗಳಿಗೆ ಇನ್ನೂ ರಿಯಾಯಿತಿ ಪಡೆಯಬಹುದು. ಸರ್ಕಾರ ಮನಸ್ಸು ಮಾಡಿದರೆ, ಖಂಡಿತವಾಗಿ ಗ್ರಾಮೀಣ ಅಭಿವೃದ್ಧಿ ಕೆಲಸ ತೀವ್ರಗೊಳ್ಳುತ್ತದೆ ಎಂಬುದು ರಿಗ್ಸ್ ಮಾತಿನ ಸಾರಾಂಶ.
ಇಷ್ಟೊಂದು ತಂತ್ರಜ್ಞಾನ ಬಂದಿದೆ. ಆದರೂ ಹಸಿವೆಯನ್ನು ಹೋಗಲಾಡಿಸಲು ಆಗಿಲ್ಲ. ಎಲ್ಲ ಪ್ರದೇಶಗಳಿಗೂ ಒಂದೇ ರೀತಿಯ ಯೋಜನೆ ರೂಪಿಸುವ ಸಾಂಪ್ರದಾಯಿಕ ವಿಧಾನಗಳಿಂದ ಉಪಯೋಗವಿಲ್ಲ. ಮೊಬೈಲ್‌ತಂತ್ರಜ್ಞಾನವೊಂದನ್ನೇ ಬಳಸಿಕೊಂಡರೂ ಪ್ರತಿಯೊಂದು ಹಳ್ಳಿಗೆ ಅದಕ್ಕೆ ಬೇಕಾದ ರೀತಿಯ ಪರಿಹಾರ ಕ್ರಮಗಳನ್ನು ರೂಪಿಸಲು ಸಾಧ್ಯ. ಆಗ ಭೂಮಿಯ ಇನ್ನೊಂದು ಮೂಲೆಯಲ್ಲಿರುವ ರೈತನೊಂದಿಗೆ ಇಲ್ಲಿಯ ರೈತ ಸಂಪರ್ಕ ಹೊಂದಲು, ಮಾಹಿತಿ ವಿನಿಮಯ ಮಾಡಿಕೊಳ್ಳಲು ಸಾಧ್ಯ. ಹೊಸ ವಿಚಾರ, ವಿಧಾನ ಆತನಿಗೆ ದಕ್ಕುತ್ತವೆ. ರೈತನೊಳಗೊಬ್ಬ ಕ್ರಿಯಾಶೀಲ ವಿಜ್ಞಾನಿ, ಕೆಲಸಗಾರ ಕಣ್ತೆರೆಯುತ್ತಾನೆ. ಹೊಸ ವಿಚಾರಗಳು ಹರಿದಾಡುವುದರಿಂದ ಅಭಿವೃದ್ಧಿ ವೇಗವಾಗಿ ನಡೆಯುತ್ತದೆ. ನನ್ನ ಎಂಟು ವರ್ಷಗಳ ಅನುಭವ ಹೇಳುವುದಾದರೆ, ಜಗತ್ತಿನ ಎಲ್ಲ ಗ್ರಂಥಾಲಯಗಳನ್ನು ಜೋಡಿಸಿದಾಗ ಸಿಗುವ ಮಾಹಿತಿಗಿಂತ ನಮ್ಮ ಹತ್ತಿರ ಹೆಚ್ಚು ಮಾಹಿತಿ ಸಂಗ್ರಹವಾಗಬಲ್ಲುದು ಅಂತಾರೆ ರಿಗ್ಸ್.
ಸಮುದಾಯಗಳನ್ನು ಸ್ಥಾಪಿಸಿಕೊಳ್ಳಬೇಕು. ಇಪ್ಪತ್ತರಿಂದ ನೂರು ಜನರಿರುವ ಸಣ್ಣ ಸಣ್ಣ ತಂಡಗಳನ್ನು ರಚಿಸುವ ಮೂಲಕ ನಾವು ಗುರಿಯನ್ನು ಸುಲಭವಾಗಿ ತಲುಪಬಹುದು. ಪ್ರತಿಯೊಂದು ಸಮುದಾಯವೂ ದೂರ ಸಂಪರ್ಕ ಸಾಧನಗಳ ಮೂಲಕ ಪರಸ್ಪರ ಸಂಪರ್ಕ ಹೊಂದಬೇಕು. ವಿಚಾರ ವಿನಿಮಯವಾಗಬೇಕು. ರೈತರ ಇಂಥ ಸಮುದಾಯ ಜಗತ್ತಿನ ಎಲ್ಲ ಭಾಗಗಳ ಜನರನ್ನು ಒಳಗೊಳ್ಳಬೇಕು. ಏಕೆಂದರೆ, ಜಗತ್ತಿನ ಎಲ್ಲ ರೈತರ ಸಮಸ್ಯೆಗಳು ಹಾಗೂ ಪರಿಹಾರಗಳೂ ಒಂದೇ ಆಗಿವೆ. ಏಕದಿಂದ ಅನೇಕ (ಒನ್‌ಟು ಮೆನಿ) ನೀತಿಯಿಂದ ಸಾಕಷ್ಟು ರೈತರು ಪರಸ್ಪರ ಸಂಪರ್ಕಿಸಬಲ್ಲರು, ಮಾಹಿತಿ ವಿನಿಮಯ ಮಾಡಿಕೊಳ್ಳಬಲ್ಲರು. ಒಂದು ಮಾಹಿತಿ ಸಾವಿರಾರು ಜನರನ್ನು ತಲುಪಬಲ್ಲುದು. ಕಳೆದ ಎಂಟು ವರ್ಷಗಳಲ್ಲಿ ನಾನು ಕಂಡುಕೊಂಡ ಯಶಸ್ಸಿನ ಗುಟ್ಟಿದು ಎಂದರು ರಿಗ್ಸ್.
ಸಿಐಎಸ್(ಸೆಂಟರ್ ಫಾರ್ ಇಂಟರ್ನೆಟ್‌ಸೊಸೈಟಿ) ಈ ಕೆಲಸಕ್ಕೆ ಮುಂದಾಗಬೇಕು ಎಂದು ಆಶಿಸಿದ ರಿಗ್ಸ್, ಗ್ರಾಮೀಣ ಜನತೆಯನ್ನು ತಲುಪುವ ಕೆಲಸ ನಿಮ್ಮಿಂದ ಪ್ರಾರಂಭವಾಗಲಿ ಎಂದರು. ಜಗತ್ತಿನ ಯಾವೊಂದು ಸಮುದಾಯವೂ ತನ್ನ ಸಮಸ್ಯೆಯನ್ನು ತಾನೊಂದೇ ಪೂರ್ತಿಯಾಗಿ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಸಮುದಾಯದ ಪಾಲ್ಗೊಳ್ಳುವಿಕೆ ಮುಖ್ಯವಾಗುತ್ತದೆ. ಹೀಗಾಗಿ, ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ. ಆಗ, ಸಮಸ್ಯೆಗಳು ಹಗುರವಾಗುತ್ತವೆ. ಲಾಭ ದುಪ್ಪಟ್ಟಾಗುತ್ತದೆ ಎಂದರು.
ಮೈಕೇಲ್‌ರಿಗ್ಸ್ ಹೊಸ ರೀತಿಯ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಯ ಕನಸನ್ನು ಬಿತ್ತುತ್ತ ನಡೆದಿದ್ದಾರೆ. ಅದನ್ನು ಗ್ರಾಮೀಣ ಪ್ರದೇಶಕ್ಕೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದು.

Subscribe to:
Posts (Atom)