ಲವ್‌ಜಿಹಾದ್‌ಎಂಬ ಹಳೇ ಯುದ್ಧ

7 Nov 2009

ನಾನಾಗ ಧಾರವಾಡದಲ್ಲಿ ಪ್ರಜಾವಾಣಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಆಗ ಎಂದರೆ, ೨೦೦೬ರಲ್ಲಿ ಒಂದು ಪ್ರಕರಣ ನಡೆಯಿತು. ಜಂಗಮ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳು ಇದ್ದಕ್ಕಿದ್ದಂತೆ ನಾಪತ್ತೆಯಾದಳು. ಧಾರವಾಡ ಸಣ್ಣ ನಗರವಾಗಿದ್ದರಿಂದ, ಪೊಲೀಸರಿಗೆ ದೂರು ಹೋಗುವ ಮುನ್ನವೇ ಪತ್ರಕರ್ತರಿಗೆ ವಿಷಯ ಗೊತ್ತಾಗಿತ್ತು. ಪ್ರೇಮ ಪ್ರಕರಣಗಳು ಸಾಮಾನ್ಯವಾಗಿದ್ದರಿಂದ, ಈ ಕುರಿತು ನಾವ್ಯಾರು ತಲೆ ಕೆಡಿಸಿಕೊಳ್ಳಲಿಲ್ಲ.
 

ಆದರೆ, ಒಂದೆರಡು ದಿನಗಳಲ್ಲಿ ಬೆಳವಣಿಗೆಗಳು ತೀವ್ರಗೊಂಡವು. ನಾಪತ್ತೆಯಾಗಿದ್ದ ಹುಡುಗಿ ಮುಸ್ಲಿಂ ಯುವಕನೊಂದಿಗೆ ಓಡಿಹೋಗಿದ್ದಳು. ಈಕೆ ಬಿ.ಬಿ.ಎ. ಅಂತಿಮ ವರ್ಷದಲ್ಲಿ ಓದುತ್ತಿದ್ದ ಹುಡುಗಿ. ಆತ, ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ಮೆಕ್ಯಾನಿಕ್‌. ಹುಡುಗಿಯ ತಂದೆ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ, ಅವರಿಗೆ ರಜೆ ಸಿಗುವುದು ವರ್ಷದಲ್ಲಿ ಒಂದೆರಡು ಸಲ ಮಾತ್ರ. ಹೀಗಾಗಿ, ಮನೆ ನೋಡಿಕೊಳ್ಳುವ ಜವಾಬ್ದಾರಿ ಹುಡುಗಿಯ ತಂದೆ ಮತ್ತು ಅವರ ಸೋದರರ ಮೇಲಿತ್ತು.
 

ಸಹಜವಾಗಿ ಹುಡುಗಿಯ ತಾಯಿ ಕಂಗಾಲಾಗಿದ್ದರು. ಗಂಡ ಬೇರೆ ದೂರದಲ್ಲಿದ್ದಾರೆ. ಹುಡುಗಿ ಮುಸ್ಲಿಂ ಯುವಕನೊಂದಿಗೆ ಓಡಿ ಹೋಗಿದ್ದು ಖಚಿತವಾಗಿತ್ತು. ಅತ್ತ ಗಂಡನಿಗೆ ತಕ್ಷಣ ಬರುವಂತೆ ಸುದ್ದಿ ಕಳಿಸಿದ ಆಕೆ, ಮೈದುನರ ಮೂಲಕ ಹುಡುಗನ ಮನೆಯವರೊಂದಿಗೆ ಮಾತುಕತೆಗೆ ಕೂತರು. ‘ಹುಡುಗ ಎಲ್ಲಿದ್ದಾನೆ ಎಂಬುದು ನಿಮಗೆ ಗೊತ್ತಿರುತ್ತದೆ. ನಮ್ಮದು ಮರ್ಯಾದಸ್ತರ ಕುಟುಂಬ. ಹುಡುಗಿ ಹೀಗೆ ಓಡಿಹೋಗಿದ್ದು ಗೊತ್ತಾದರೆ ತಲೆ ಎತ್ತಿಕೊಂಡು ಓಡಾಡುವುದು ಕಷ್ಟವಾಗುತ್ತದೆ...’ ಎಂದು ಕಣ್ಣೀರಿಟ್ಟರು. ಮೈದುನರು, ಹುಡುಗನ ಕೈಕಾಲು ಮುರಿಯುವ ಬೆದರಿಕೆ ಹಾಕಿದರು.
 

ಆದರೆ, ಹುಡುಗನ ಮನೆಯವರು ಮಾತ್ರ ನಿರುಮ್ಮಳವಾಗಿದ್ದರು.
 

‘ಹುಡುಗಿಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕಾದ ಜವಾಬ್ದಾರಿ ನಿಮ್ಮದು. ನಮ್ಮ ಹುಡುಗನ ಮೇಲೇಕೆ ಗೂಬೆ ಕೂರಿಸುತ್ತೀರಿ? ಹುಡುಗ ಎಲ್ಲಿದ್ದಾನೋ ನಮಗೆ ಗೊತ್ತಿಲ್ಲ’ ಎಂದು ಕೈತೊಳೆದುಕೊಂಡರು. ಅಚ್ಚರಿಯ ಸಂಗತಿ ಎಂದರೆ, ತಮ್ಮ ಹುಡುಗ ನಾಪತ್ತೆಯಾಗಿದ್ದಾನೆ ಎಂದು ಅವರು ದೂರನ್ನೂ ದಾಖಲಿಸಿರಲಿಲ್ಲ.
 

ಇದು ಪಕ್ಕಾ ಪ್ರೇಮ ಪ್ರಕರಣ ಎಂದು ಎಲ್ಲರೂ ಭಾವಿಸಿದರು. ಪೊಲೀಸರೂ ಸಹ.
 

ಆದರೆ, ಯಾವಾಗ ಹುಡುಗಿಯ ತಂದೆ ಧಾವಿಸಿ ಬಂದರೋ ಪ್ರಕರಣಕ್ಕೆ ಬಿಸಿ ಮುಟ್ಟಿತು. ಆ ಅಸಹಾಯಕ ತಂದೆ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿಯವರನ್ನು ಕಂಡು ಕಣ್ಣೀರಿಟ್ಟರು. ಅಧಿಕೃತವಾಗಿ ದೂರು ದಾಖಲಿಸದೇ ಹುಡುಗನ ಮೇಲೆ ಕ್ರಮ ಕೈಗೊಳ್ಳುವುದು ಕಷ್ಟ ಎಂದು ಎಸ್ಪಿ ತಿಳಿಸಿದಾಗ, ದೂರು ದಾಖಲಾಯ್ತು. ಈ ವಿಷಯ ವರದಿ ಮಾಡಬೇಡಿ ಎಂದು ಪತ್ರಕರ್ತರಿಗೂ ವಿನಂತಿಸಿಕೊಳ್ಳಲಾಯ್ತು.
 

ಆದರೆ, ಪ್ರಕರಣದ ಬಗ್ಗೆ ಕುತೂಹಲಿಗಳಾಗಿದ್ದ ನಾವು ನಿತ್ಯ ಪೊಲೀಸ್‌ಠಾಣೆಗೆ ಹೋಗಿ ಬೆಳವಣಿಗೆಗಳನ್ನು ಗಮನಿಸುತ್ತಿದ್ದೆವು. ದೂರು ದಾಖಲಾದ ಒಂದೆರಡು ದಿನಗಳಲ್ಲಿ ಪೊಲೀಸ್‌ ತಂಡವೊಂದು ಬೆಳಗಾವಿಗೆ ತೆರಳಿ, ಅಲ್ಲಿ ವಸತಿಗೃಹದಲ್ಲಿದ್ದ ಹುಡುಗ-ಹುಡುಗಿಯನ್ನು ಕರೆತಂದಿತು. ದೂರು ಈಗ ಅಧಿಕೃತವಾಗಿ ದಾಖಲಾಯ್ತು. ಹುಡುಗ ಜೈಲಿಗೆ, ಹುಡುಗಿ ತನ್ನ ಪೋಷಕರ ಮನೆಗೆ ತೆರಳಿದಳು.
 

ಈ ಹಂತದಲ್ಲಿ, ಸುದ್ದಿಗೋಷ್ಠಿ ಕರೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಒಂದು ದಡ್ಡತನದ ಕೆಲಸ ಮಾಡಿದರು. ‘ಹುಡುಗಿಯನ್ನು ಬಲವಂತವಾಗಿ ಕರೆದೊಯ್ದ ಹುಡುಗ, ಆಕೆಯ ಮತಾಂತರ ಮಾಡಿ ಒತ್ತಾಯದ ಮದುವೆ ಮಾಡಿಕೊಂಡಿದ್ದಾನೆ. ಆಕೆಯ ಹೆಸರನ್ನೂ ಬದಲಿಸಿದ್ದಾನೆ. ಹೀಗಾಗಿ, ಹುಡುಗಿಯ ಮನೆಯವರು ನೀಡಿದ ದೂರಿನ ಅನ್ವಯ ಅವನನ್ನು ಬಂಧಿಸಲಾಗಿದೆ’ ಎಂದು ಮುದ್ರಿತ ಪ್ರಕಟಣೆ ನೀಡಿದರು. ನಂತರ ಸಾಕಷ್ಟು ಮೌಖಿಕ ವಿವರಗಳೂ ಬಂದವು. ಹುಡುಗಿಯೂ ಠಾಣೆಯಲ್ಲಿ ಹಾಜರಿದ್ದರಿಂದ, ಆಕೆಯನ್ನೂ ಪ್ರಶ್ನಿಸಿದೆವು. ಮನೆಯವರ ಒತ್ತಾಯಕ್ಕೆ ಮಣಿದು ಆಕೆ ಒಲ್ಲದ ಮನಸ್ಸಿನಿಂದ ಹುಡುಗನ ವಿರುದ್ಧ ಹೇಳಿಕೆ ನೀಡಿದ್ದು ಸ್ಪಷ್ಟವಾಗಿತ್ತು.
 

ಇಂಥ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹುಡುಗಿಯ ಹೆಸರನ್ನಾಗಲಿ, ಫೊಟೊವನ್ನಾಗಲಿ ಅಚ್ಚು ಹಾಕುವುದಿಲ್ಲ. ಆದರೆ, ಎಸ್ಪಿ ಸಾಹೇಬರು ಸುಮ್ಮನಿರದೇ, ಹುಡುಗಿಯ ಮದುವೆ ಫೊಟೊಗಳನ್ನು ತೋರಿಸಿದರು. ಅದರಲ್ಲಿ ಮತಾಂತರಗೊಂಡಿದ್ದ ಹುಡುಗಿ ನಗುಮುಖದೊಂದಿಗೆ ವಿವಾಹ ಸಮಾರಂಭದಲ್ಲಿದ್ದ ದೃಶ್ಯಗಳಿದ್ದವು. ಒತ್ತಾಯದಿಂದ ಮದುವೆ ಮಾಡಿಕೊಳ್ಳುತ್ತಿದ್ದ ಕುರುಹುಗಳು ಎಲ್ಲಿಯೂ ಕಾಣಲಿಲ್ಲ. 
 

ದೃಶ್ಯ ಮಾಧ್ಯಮದ ನಮ್ಮ ಕೆಲ ದಡ್ಡ ಪತ್ರಕರ್ತರು ಆ ಫೊಟೊಗಳ ಸಹಿತ ಸುದ್ದಿ ಪ್ರಸಾರ ಮಾಡಿದ್ದು ಇಡೀ ಪ್ರಕರಣದಲ್ಲಿ ರಾಡಿ ಎಬ್ಬಿಸಿತು. ‘ಹುಡುಗಿ ಪ್ರಾಪ್ತ ವಯಸ್ಕಳಾಗಿದ್ದು, ಸ್ವ-ಇಚ್ಛೆಯಿಂದ ಮತಾಂತರಗೊಂಡು ಮದುವೆಯಾಗಿದ್ದಾಳೆ. ಆದರೂ, ನಮ್ಮ ಹುಡುಗನನ್ನು ಅಕ್ರಮವಾಗಿ ಪೊಲೀಸರು ಬಂಧಿಸಿದ್ದಾರೆ’ ಎಂದು ಹುಡುಗನ ಮನೆಯವರು ಪ್ರತಿದೂರು ದಾಖಲಿಸುವುದರೊಂದಿಗೆ ಇಡೀ ಪ್ರಕರಣ ಸಾಮಾಜಿಕ ಸಂಘರ್ಷಕ್ಕೆ ದಾರಿಯಾಯ್ತು.
 

ಅದಕ್ಕೂ ಮುನ್ನವೇ ರಂಗಕ್ಕಿಳಿದಿದ್ದ ಶ್ರೀರಾಮಸೇನೆ ಕಾರ್ಯಕರ್ತರು ಎಸ್ಪಿಯನ್ನು ಹಾಗೂ ದೃಶ್ಯ ಮಾಧ್ಯಮದ ವರದಿಗಾರರನ್ನು ತರಾಟೆಗೆ ತೆಗೆದುಕೊಂಡರು. ವಿಷಯ ತೀವ್ರವಾದಂತೆ, ಹಿಂದೆ ನಡೆದಿದ್ದ ಇಂಥ ಹಲವಾರು ಪ್ರಕರಣಗಳು ಬೆಳಕಿಗೆ ಬಂದವು. ‘ಲವ್‌ ಜಿಹಾದ್‌’ ಎಂಬ ಪದ ನನ್ನ ಗಮನಕ್ಕೆ ಉದಾಹರಣೆ ಸಮೇತ ಬಂದಿದ್ದು ಆಗ.
 

ಈಗ ಮತ್ತೆ ಆ ಪದ ಸುದ್ದಿ ಮಾಡುತ್ತಿದೆ. ಹೈಕೋರ್ಟ್ ಕೂಡ ಇದರ ಬಗ್ಗೆ ತಲೆಕೆಡಿಸಿಕೊಂಡಿದೆ. ಇಂಥದೊಂದು ಕಾರ್ಯಸೂಚಿ ಇದ್ದುದೇ ಆದರೆ ಅದರ ಉದ್ದೇಶವೇನು? ಯಾವ ಯಾವ ಸಂಘಟನೆಗಳು ಇದರಲ್ಲಿ ಸಕ್ರಿಯವಾಗಿವೆ? ಇಂತಹ ಚಟುವಟಿಕೆಗಳಿಗೆ ಎಲ್ಲಿಂದ ಹಣ ಬರುತ್ತಿದೆ? ಎಂದು ಕೋರ್ಟ್‌ ಪ್ರಶ್ನಿಸಿದೆ. ಈ ಕುರಿತು ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶಿಸಿದೆ. ಕೇರಳದಲ್ಲಿ ಈ ವಿಷಯ ಭಾರಿ ವಿವಾದ ಸೃಷ್ಟಿಸಿದ ನಂತರ ಈಗ ರಾಜ್ಯದ ಚಾಮರಾಜನಗರ ಜಿಲ್ಲೆಯ ಯುವತಿಯೊಬ್ಬಳ ಪ್ರಕರಣ ಇಲ್ಲಿಯೂ ಜೀವ ತುಂಬಿದೆ.
 

ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ನ್ಯಾಯವೇ ಅಂತೆ. ಆದರೆ, ಪ್ರೀತಿಯ ಮೂಲಕ ಯುದ್ಧ ಸಾರಲು ಮುಂದಾಗಿರುವುದು ಮಾತ್ರ ಆಘಾತಕಾರಿ ಬೆಳವಣಿಗೆಯೇ. ಸಮುದಾಯದ ಬೆಳವಣಿಗೆಗೆ ಮಾಡಬೇಕಾದ ಕೆಲಸಗಳು ಸಾಕಷ್ಟಿರುತ್ತವೆ. ಅವನ್ನು ಬಿಟ್ಟು ಸಂಘರ್ಷಕ್ಕೆ ಕಾರಣವಾಗುವ ಚಟವಟಿಕೆಗಳನ್ನು ನಡೆಸುತ್ತಿರುವುದಕ್ಕೆ ಲಗಾಮು ಬೀಳಲೇಬೇಕು.
 

ಮತ್ತೆ ಧಾರವಾಡದ ಯುವತಿಯ ವಿಷಯಕ್ಕೆ ಬರುತ್ತೇನೆ. ಆಕೆಯನ್ನು ತುರ್ತಾಗಿ ದೂರದ ಊರಿಗೆ ಸಾಗಿಸಿದ ಪೋಷಕರು, ಒಂದೆರಡು ವರ್ಷಗಳಲ್ಲಿ ಆಕೆಗೆ ಮದುವೆ ಮಾಡಿದರು. ಜೈಲಿನಲ್ಲಿದ್ದ ಹುಡುಗ ಜಾಮೀನಿನ ಮೇಲೆ ಹೊರಬಂದು ಮತ್ತೆ ತನ್ನ ಕೆಲಸ ಮುಂದುವರಿಸಿದ. ಇಡೀ ಮುಸ್ಲಿಂ ಸಮಾಜ ಅವನನ್ನು ಮೆಚ್ಚುಗೆಯಿಂದ ನೋಡಿತು. ದೂರು ಕೊಟ್ಟವರೇ ಆಸಕ್ತಿ ಕಳೆದುಕೊಂಡಾಗ ಏನಾಗಬಹುದೋ ಅದೇ ಪರಿಣಾಮ ಈ ಪ್ರಕರಣದ ಮೇಲೆಯೂ ಆಯಿತು. ಕೆಲ ದಿನಗಳಲ್ಲಿ ಜನ ಕೂಡ ಈ ವಿಷಯ ಮರೆತರು. ನಾನು ಕೂಡಾ ವರ್ಗವಾಗಿ ಬೆಂಗಳೂರಿಗೆ ಬಂದೆ.
 

ಈಗ ಮತ್ತೆ ಲವ್‌ ಜಿಹಾದ್‌ಸುದ್ದಿ ಮಾಡುತ್ತಿದೆ. ನನಗೆ ಧಾರವಾಡದ ಆ ಯುವತಿ ಮತ್ತು ಯುವಕ ನೆನಪಾಗುತ್ತಿದ್ದಾರೆ. ಅವರ ಮದುವೆ ಫೊಟೊ, ಅಲ್ಲಿ ಮದುಮಗಳ ಉಡುಪಿನಲ್ಲಿ ಖುಷಿಯಿಂದ ನಗುತ್ತಿದ್ದ ಯುವತಿಯ ಚಿತ್ರ ನೆನಪಾಗುತ್ತಿದೆ. ಇವರ ಲವ್‌ ನಿಜಕ್ಕೂ ಜಿಹಾದ್‌ ಆಗಿತ್ತಾ?
 

ಈ ಪ್ರಶ್ನೆಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ.
 

- ಚಾಮರಾಜ ಸವಡಿ

6 comments:

ಲೋದ್ಯಾಶಿ said...

ಅದು ಲವ್ವೋ? ಜಿಹಾದೋ?
ಹಾಳಾಗಿ ಹೋಗ್ಲಿ ಅಂತ ಅನ್ನೋಂಗೂ ಇಲ್ಲ.
ಸುಮ್ನೆ ಬಿಡಂಗೂ ಇಲ್ಲ.
ಇದಕ್ಕೆ ಸೂಕ್ತ ಕ್ರಮ ಅಂದ್ರೆ, ಜಾಹಿರಾತುಗಳ ಮೂಲ್ಕ ಎಲ್ಲರಲ್ಲೂ ಇಂತಹ ಚಟುವಟಿಕೆಗಳ ಅರಿವು ಮೂಡ್ಸೋದು.

Chamaraj Savadi said...

ಸಿನಿಮಾ ನೋಡಿ ಲವ್‌ ಮಾಡಬಹುದು ಲೋಹಿತ್‌. ಆದರೆ, ಜಾಹೀರಾತು ನೋಡಿ ಅದರ ಅಪಾಯಗಳನ್ನು ತಿಳಿದುಕೊಳ್ಳುವವರು ಕಡಿಮೆ. ಏಕೆಂದರೆ, ಪ್ರೀತಿಗೂ ತರ್ಕಕ್ಕೂ ಸಂಬಂಧವೇ ಇಲ್ಲ.

Dr. B.R. Satynarayana said...

ಸವಡಿ ಸಾರ್
ಲವ್ ಜಿಹಾದ್ ಬಗ್ಗೆ ಇದುವರೆಗೆ ನಾನು ಕೇಳಿದ್ದು ಅಂತೆ-ಕಂತೆಗಳನ್ನೇ! ನೀವು ಒಂದು ಸತ್ಯಘಟನೆಯನ್ನು ಹತ್ತಿರದಿಂದ ಕಂಡವರು ಅದನ್ನು ಬರೆದಾಗ ಅದರ ಬಗ್ಗೆ ಯೋಚಿಸುವಂತೆ ಮಾಡಿದೆ. ಇಂತಹ ವಿಷಯಗಳಲ್ಲಿ ಮೀಡಿಯಾಗಳು, ರಾಮಸೇನೆಯಂತವರು ರಾಡಿ ಎಬ್ಬಿಸುವುದೇ ಹೆಚ್ಚು. ಇವರ ನಡುವೆ ಸತ್ಯ ಎಲ್ಲೋ ಕಳೆದು ಹೋಗುತ್ತದೆ. ಇಂತಹುದೊಂದು ವ್ಯವಸ್ಥಿತ ಜಿಹಾದ್ ಇದ್ದರೆ ಅದನ್ನು ಖಂಡಿಸಲೇಬೇಕು. ಆದರೆ ನಿಜವಾದ ಪ್ರೇಮವಾಗಿದ್ದರೆ (ಈ ಲೇಖನದ ಪ್ರೇಮಿಗಳಂತಲ್ಲ)ಅದನ್ನು ಪುರಸ್ಕರಿಸಲೂ ಬೇಕು. ಆಗ ಮಾತ್ರ ಮಾನವ ಜನಾಂಗ ಒಂದು ಎಂಬ ಭಾವಕ್ಕೆ ಅರ್ಥವೊದಗುತ್ತದೆ.
ನಿರ್ಲಿಪ್ತವಾದ ನಿಮ್ಮ ಬರಹದ ಶೈಲಿ ಬಹಳ ಇಷ್ಟವಾಯಿತು.

Chamaraj Savadi said...

ಥ್ಯಾಂಕ್ಸ್‌ ಸತ್ಯನಾರಾಯಣ ಸರ್‌.

ವಾಸ್ತವಕ್ಕೂ ರೋಚಕತೆಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಆದರೆ, ಅವೆರಡೂ ಒಂದೇ ಎಂಬಂತೆ ವರದಿ ಮಾಡಲು ಹೋದಾಗ ಅನಾಹುತಗಳೇ ಆಗೋದು. ಮಾಧ್ಯಮದಲ್ಲಿ ಬರುವ ಬಹುತೇಕ ರೋಚಕ ವರದಿಗಳ ವಾಸ್ತವ ಬೇರೆಯೇ ಆಗಿರುತ್ತದೆ. ಆದರೆ, ಸತ್ಯ ತಿಳಿಯುವುದು ತುಂಬ ಜನರಿಗೆ ಬೇಕಾಗಿರುವುದಿಲ್ಲ. ಹೀಗಾಗಿ, ಮಾಧ್ಯಮ ರೋಚಕತೆಯ ಬೆನ್ನು ಹತ್ತಿದೆ. ಅತಿಯಾದ ರೋಚಕತೆ ನಡುವೆ ಸತ್ಯ ಕಳೆದುಹೋಗುತ್ತಿದೆ. ನಮಗೆ ನೆರೆ ಸಂತ್ರಸ್ತರ ವಿಷಯಕ್ಕಿಂತ ರಾಜಕೀಯ ಸಂತ್ರಸ್ತರ ವಿಷಯ ಢಾಳಾಗಿ ರಾಚುತ್ತಿರುವುದು ಈ ಕಾರಣಕ್ಕೆ.

ಇದೊಂಥರಾ ಪ್ರಚಾರ ಜಿಹಾದ್‌.

Sahana said...

Sahana Rao

How we found Mohan @ seriel killer Mohan ? just because of so called love Jehad. THere are 60 cases of unbraced girl missing cases in Dakshina Kannada. Last month pro Hindu groups protest against police and demanded trace missing girl Anitha & book "love Jehiadis" ..
The this missing girl came from a some what well to do family and close to HIndu orgs..
Police started LJ investigation and arrested MOhan..!

Chamaraj Savadi said...

ಅಂಥದೊಂದು ಸಾಧ್ಯತೆಯ ಎಳೆಯನ್ನು ಪೊಲೀಸ್‌ ದೃಷ್ಟಿಕೋನದಿಂದ ಪರಿಶೀಲಿಸಿದ್ದು ಒಳ್ಳೆಯದೇ. ಆದರೆ, ಎಲ್ಲಾ ಪ್ರಕರಣಗಳೂ ಲವ್‌ ಜಿಹಾದ್‌ ಎಂಬ ಹಣೆಪಟ್ಟಿ ಹೊರುವುದು ಬೇಡ, ಅಲ್ಲವೆ?