ಸಿದ್ಧವಾಗಿದ್ದ ಬ್ಯಾಗನ್ನು ಎತ್ತಿಕೊಂಡು, ರೂಮು ಪೂರ್ತಿಯಾಗಿ ಖಾಲಿಯಾಗಿರುವುದನ್ನು ಕಣ್ಣಂದಾಜಿನಲ್ಲೇ ಪರೀಕ್ಷಿಸಿ, ಬೀಗ ಹಾಕಿ ಮಾಲೀಕನಿಗೆ ಕೊಟ್ಟು, ರಜೆ ಮುಗಿದ ನಂತರ ಬರುವೆ ಎಂದು ಹೇಳಿದವನೇ ಒಂದು ಕಿಮೀ ದೂರವಿದ್ದ ಬಸ್ ಸ್ಟ್ಯಾಂಡ್ ಕಡೆ ಹೊರಟೆ. ಆಗ ಗಂಟೆ ಒಂದೂವರೆ.
ಪರೀಕ್ಷೆ ಮುಗಿಸಿಕೊಂಡು ಬಂದ ಮಿತ್ರ, ‘ಏನಂಥ ಅರ್ಜೆಂಟ್? ಇವತ್ತೊಂದಿನ ಇದ್ದು ನಾಳೆ ಹೋಗುವಿಯಂತೆ. ಊರಲ್ಲೇನು ಅಂಥ ಕೆಲಸ?’ ಎಂದು ಕೇಳುತ್ತಿದ್ದರೂ ಗಮನಿಸದೇ, ‘ಮಾರಾಯ, ನನ್ನ ಬಸ್ ಸ್ಟ್ಯಾಂಡ್ ಹತ್ರ ಬಿಡ್ತಿಯಾ?’ ಎಂದೆ. ಅವನ ಸೈಕಲ್ ಹಿಂದೆ ಕೂತು ಬಸ್‌ಸ್ಟ್ಯಾಂಡ್ ತಲುಪಿದಾಗ, ಗದಗ್‌ಗೆ ಹೊರಟಿದ್ದ ಬಸ್‌ನ ಬಾಗಿಲು ಹಾಕುತ್ತಿದ್ದ ಕಂಡಕ್ಟರ್. ಸೈಕಲ್‌ನಿಂದ ನೆಗೆದವನೇ, ಬಸ್ ಏರುತ್ತ, ಗೆಳೆಯನಿಗೆ ಕೈ ಬೀಸುತ್ತ, ಬೆವರೊರೆಸಿಕೊಳ್ಳುತ್ತ ಕೂತೆ.
ನರೇಗಲ್‌ನ ನನ್ನ ಪಿಯುಸಿ ಮೊದಲ ವರ್ಷದ ಪರೀಕ್ಷೆಯ ಕೊನೆಯ ಪೇಪರ್ ಮುಗಿಸಿ ನಾನಷ್ಟು ತುರ್ತಾಗಿ ಹೊರಟಿದ್ದು ಗದಗ್‌ಗೆ. ಬಸ್‌ಸ್ಟ್ಯಾಂಡ್ ಹತ್ತಿರದಲ್ಲೇ ಇರುವ ಕೃಷ್ಣಾ ಟಾಕೀಸನ್ನು ಮೂರು ಗಂಟೆಯೊಳಗೆ ತಲುಪುವುದು ನನ್ನ ಉದ್ದೇಶ. ಏಕೆಂದರೆ, ಮೂರು ಗಂಟೆಗೆ ಮ್ಯಾಟ್ನಿ ಷೋ ಶುರುವಾಗುತ್ತದೆ. ತಪ್ಪಿಸಿಕೊಂಡರೆ, ಒಂದನೇ ಷೋಗೇ ಹೋಗಬೇಕು. ಆಗ ಅಲ್ಲಿಂದ ಐವತ್ತು ಕಿಮೀ ದೂರವಿರುವ ಊರಿಗೆ ಹೋಗಲು ಬಸ್ ಸಿಗುವುದಿಲ್ಲ.
ಬಸ್ ತುಂಬ ನಿಧಾನವಾಗಿ ಹೋಗುತ್ತಿದೆ ಅನಿಸುತ್ತಿತ್ತು. ನರೇಗಲ್‌ನಿಂದ ಗದಗ್ ಕೇವಲ ೩೦ ಕಿಮೀ ದೂರದಲ್ಲಿದ್ದರೂ, ಕೆಟ್ಟ ರಸ್ತೆಯಿಂದಾಗಿ ಒಂದು ಗಂಟೆಯೊಳಗೆ ತಲುಪುವುದು ಸಾಧ್ಯವಿದ್ದಿಲ್ಲ. ಲೆಕ್ಕಾಚಾರದ ಪ್ರಕಾರ, ಬಸ್ ಎಲ್ಲಿಯೂ ಕೆಟ್ಟು ನಿಲ್ಲದಿದ್ದರೆ, ೨.೪೫ಕ್ಕೆ ಗದಗ್ ತಲುಪುತ್ತದೆ. ಕೃಷ್ಣಾ ಟಾಕೀಸ್ ತಲುಪಲು ಐದು ನಿಮಿಷಗಳು ಸಾಕು. ಟಿಕೆಟ್ ತಗೊಂಡು ಸೀಟಲ್ಲಿ ಕೂಡುವ ಹೊತ್ತಿಗೆ ಸರಿಯಾಗಿ ಸಿನಿಮಾ ಶುರುವಾಗುತ್ತದೆ ಎಂದು ಮನಸ್ಸು ಪದೆ ಪದೆ ಎಣಿಕೆ ಹಾಕುತ್ತಿತ್ತು.
ಅದೃಷ್ಟವಶಾತ್ ಬಸ್ ಕೆಟ್ಟು ನಿಲ್ಲಲಿಲ್ಲ. ಗದಗ್ ಹತ್ತಿರವಾಗುತ್ತಿದ್ದಂತೆ, ಬಾಗಿಲ ಹತ್ತಿರ ಬಂದು ನಿಂತಿದ್ದೆ. ಬಸ್‌ಸ್ಟ್ಯಾಂಡ್ ಪ್ರವೇಶಿಸುತ್ತಿದ್ದಂತೆ, ಬಾಗಿಲು ತೆರೆದು ಹೊರ ನೆಗೆದವ, ಮತ್ತದೇ ಓಡು ನಡಿಗೆಯಲ್ಲಿ ಕೃಷ್ಣಾ ಟಾಕೀಸ್‌ನತ್ತ ಹೊರಟೆ. ಆಗ ಗಂಟೆ ೨.೫೫.
ಟಿಕೆಟ್ ಕೌಂಟರ್ ಖಾಲಿಯಾಗಿತ್ತು. ಪಕ್ಕದಲ್ಲೇ ‘ಹೌಸ್‌ಫುಲ್’ ಬೋರ್ಡ್. ಅದನ್ನು ನೋಡುತ್ತಲೇ ಮನಸ್ಸು ಸೂಜಿ ಚುಚ್ಚಿದ ಬಲೂನಿನಂತಾಯ್ತು. ಅಭ್ಯಾಸ ಬಲದಿಂದ, ಆಚೀಚೆ ಕಳ್ಳನೋಟ ಹರಿಸಿದಾಗ, ಸೆಟಲ್‌ಮೆಂಟ್ ಪ್ರದೇಶದ ಯುವಕನೊಬ್ಬ ಸಮೀಪಿಸಿದ. ಪಿಸುದನಿಯಲ್ಲಿ, ‘ಎರಡು ಟಿಕೆಟ್ಟಿವೆ’ ಎಂದ. ಎಷ್ಟೆಂದು ಕೇಳಿದವ, ಹತ್ತು ಸೆಕೆಂಡ್‌ಗಳಲ್ಲಿ ಚೌಕಾಸಿ ಮುಗಿಸಿ, ಟಿಕೆಟ್ ಕೊಂಡು ಥೇಟರ್ ಪ್ರವೇಶಿಸಿದೆ. ನನ್ನ ನಂಬರ್‌ನ ಸೀಟ್‌ನಲ್ಲಿ ಕೂತು ಬೆವರೊರೆಸಿಕೊಳ್ಳುತ್ತಿದ್ದಂತೆ, ಲೈಟುಗಳು ಆರಿದವು.
ಹೃದಯಾಘಾತದಿಂದ ಮೃತರಾದ ಖ್ಯಾತ ನಟ ವಿಷ್ಣುವರ್ಧನ್ ಅವರ ‘ಬಂಧನ’ ಸಿನಿಮಾ ನಾನು ನೋಡಿದ್ದು ಹೀಗೆ.
*****
ಬೇಸಿಗೆ ರಜೆಯ ಎರಡು ತಿಂಗಳಿಡೀ ಬಂಧನ ಸಿನಿಮಾದ್ದೇ ಗುಂಗು. ನನಗೊಬ್ಬನಿಗಷ್ಟೇ ಅಲ್ಲ, ನನ್ನ ಓರಗೆಯ ಹುಡುಗರಿಗಷ್ಟೇ ಅಲ್ಲ, ಬಹುತೇಕ ಎಲ್ಲರಿಗೂ ಬಂಧನ ಸಿನಿಮಾ ಹುಚ್ಚು ಹಿಡಿಸಿತ್ತು. ರೇಡಿಯೋದಲ್ಲಿ ದಿನಕ್ಕೆ ಮೂರು ಹೊತ್ತು, ಸರಾಸರಿ ನಲ್ವತ್ತು ನಿಮಿಷ ಬರುತ್ತಿದ್ದ ರೇಡಿಯೋದ ಚಿತ್ರಗೀತೆಗಳಲ್ಲಿ ಆ ಸಿನಿಮಾದ ಎರಡು ಹಾಡುಗಳಂತೂ ಇದ್ದೇ ಇರುತ್ತಿದ್ದವು. ಹಾಡು ಕೇಳುತ್ತ, ಸಿನಿಮಾವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತ ನನ್ನ ಕಾಲೇಜಿನ ದಿನಗಳ ಮೊದಲ ದೀರ್ಘ ರಜೆಯನ್ನು ನಾನು ಹೀಗೆ ಕಳೆದಿದ್ದು ೧೯೮೫ರಲ್ಲಿ.
ಮುಂದೆ ಅದೇ ಸಿನಿಮಾ ೨೩ ಕಿಮೀ ದೂರದ ಕೊಪ್ಪಳಕ್ಕೆ ಬಂದಾಗ, ನನ್ನೂರು ಅಳವಂಡಿ ಹಾಗೂ ಸುತ್ತಲಿನ ಊರುಗಳ ಎಷ್ಟೋ ಜನ ಎತ್ತಿನ ಬಂಡಿ ಕಟ್ಟಿಕೊಂಡು ಹೋಗಿ ನೋಡಿ ಬಂದರು. ಆಗ ತಾನೆ ಕ್ಯಾಸೆಟ್‌ಗಳು ದೊಡ್ಡ ಪ್ರಮಾಣದಲ್ಲಿ ಬರಲಾರಂಭಿಸಿದ್ದವು. ಬಂಧನ ಸಿನಿಮಾದ ಕ್ಯಾಸೆಟ್‌ಗಳನ್ನು ಮಾರಿ ಮಾರಿಯೇ ಎಷ್ಟೋ ಜನ ಉದ್ಧಾರವಾಗಿ ಹೋದರು. ಸಿನಿಮಾವೊಂದು ಜನಮಾನಸವನ್ನು ಆವರಿಸಿಕೊಳ್ಳುತ್ತಿದ್ದ ಪರಿಯನ್ನು ನೆನಪಿಸಿಕೊಂಡರೆ ಈಗಲೂ ಅಚ್ಚರಿಯಾಗುತ್ತದೆ.
ಮುಂದೆ ವಿಷ್ಣುವರ್ಧನ್ ಅವರ ಎಷ್ಟೋ ಸಿನಿಮಾಗಳನ್ನು ನೋಡಿದೆ. ನಮ್ಮೂರಿನ ಟೆಂಟ್ ಟಾಕೀಸಿಗೆ ಬರುತ್ತಿದ್ದುವೇ ಹಳೆಯ ಸಿನಿಮಾಗಳು. ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಸಿನಿಮಾ ಬಂದರೆ ಮುಗೀತು, ಎರಡು-ಮೂರು ಬಾರಿ ನೋಡುವುದು ಗ್ಯಾರಂಟಿ. ಮನರಂಜನೆಗೆ ಬೇರೇನೂ ಇಲ್ಲದ ಸಣ್ಣ ಊರಿನಲ್ಲಿ ಈ ಸಿನಿಮಾ ಹಾಗೂ ಚಿತ್ರಗೀತೆಗಳೇ ನಮ್ಮ ಏಕೈಕ ಮನರಂಜನೆಯಾಗಿದ್ದವು.
ನನ್ನ ಯೌವನದ ಮೊದಲ ದಿನಗಳನ್ನು ಆಪ್ತ ನೆನಪಿನಿಂದ ಸಮೃದ್ಧವಾಗಿಸಿದ ಸಿನಿಮಾ ತಾರೆಯರ ಪೈಕಿ ವಿಷ್ಣುವರ್ಧನ್ ಹಲವಾರು ಕಾರಣಗಳಿಗಾಗಿ ಪ್ರಮುಖರು. ರಾಜಕುಮಾರ್‌ಗಿಂತ ಈ ವ್ಯಕ್ತಿ ಎಷ್ಟೋ ಭಿನ್ನ ಎಂದು ಯಾವಾಗಲೂ ಅನಿಸುತ್ತಿತ್ತು. ಸಿದ್ಧಮಾದರಿಯಲ್ಲದ ಚಿತ್ರಗಳಿಂದಾಗಿಯೂ ಅವರು ಇಷ್ಟವಾಗುತ್ತಿದ್ದರು. ಆಗ ತಾನೆ ಮೊಳಕೆಯೊಡೆಯುತ್ತಿದ್ದ ರಂಗಿನ ಕನಸುಗಳಿಗೆ ಈ ನಟ ಒದಗಿಸಿದ ವೇದಿಕೆ ಸಮೃದ್ಧವಾದದ್ದು. ಅವನ್ನು ಯಾವತ್ತೂ ಮರೆಯಲಾಗದು.
*****
ಎಂದಿನಂತೆ ರಾತ್ರಿ ತಡವಾಗಿ ಮಲಗಿದ್ದರಿಂದ ಬೆಳಿಗ್ಗೆ ಬೇಗ ಏಳದೇ ಮುಸುಕು ಹಾಕಿಕೊಂಡು ಮಲಗಿದ್ದವನನ್ನು ಎಬ್ಬಿಸಿದ್ದು ಮಿತ್ರ ಮಂಜುನಾಥ ಬಂಡಿ ಅವರ ಎಸ್ಸೆಮ್ಮೆಸ್. ವಿಷ್ಣುವರ್ಧನ್ ಇನ್ನಿಲ್ಲ ಎಂಬ ಎರಡಕ್ಷರದ ಸಂದೇಶ ಓದಿದ ಕೂಡಲೇ ನಿದ್ದೆ ಹಾರಿಹೋಗಿ, ಇನ್ನೊಂಥರದ ಮಂಕು ಆವರಿಸಿಬಿಟ್ಟಿತು. ಟಿವಿ ಹಾಕಿದರೆ, ಪುಂಖಾನುಪುಂಖವಾಗಿ ವಿವರಗಳು ಬರತೊಡಗಿದವು. ಹೃದಯಾಘಾತದಿಂದ ತಕ್ಷಣ ಸಾವನ್ನಪ್ಪಿದ ವಿಷ್ಣು, ಎಲ್ಲ ಬಂಧನಗಳಿಂದ ಮುಕ್ತರಾಗಿದ್ದರು.
ರಾಜ್ ಕುಟುಂಬದ ದಬ್ಬಾಳಿಕೆ ಸಹಿಸಿಯೂ ಈ ಪರಿಯ ಎತ್ತರಕ್ಕೆ ಬೆಳೆದಿದ್ದೊಂದೇ ಅಲ್ಲ, ಇಳಿವಯಸ್ಸಿನಲ್ಲಿಯೂ ಸೊಗಸಾಗಿ ನಟಿಸುತ್ತಿದ್ದುದು ವಿಷ್ಣು ಸಾಧನೆ. ಎಲ್ಲಿಯೂ ಬಾಯ್ಬಿಡದಂತೆ ಸಹ ಕಲಾವಿದರಿಗೆ ನೆರವಾಗುತ್ತಿದ್ದುದು ಅಪರೂಪದ ಹೃದಯವಂತಿಕೆ. ವಿವಾದಗಳಿಂದ ದೂರ ನಿಲ್ಲುತ್ತಿದ್ದ ವಿನಯ, ತಮಗೆ ಕಿರುಕುಳ ನೀಡಿದವರ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡದ ಸಜ್ಜನಿಕೆ, ಬೇಸರವಾದರೆ ಮೌನವಾಗಿ ತಮ್ಮ ಪಾಡಿಗೆ ತಾವಿರುತ್ತಿದ್ದ ನಿರ್ಲಿಪ್ತತೆ- ಇವೆಲ್ಲ ಕಾರಣಗಳಿಗೂ ವಿಷ್ಣು ಇಷ್ಟವಾಗುತ್ತಾರೆ.
ಈಗ ಅವೆಲ್ಲ ಬರೀ ನೆನಪು ಮಾತ್ರ. ಸಿನಿಮಾ ಮುಗಿದಿದೆ. ಥೇಟರ್ ಖಾಲಿಯಾಗಿದೆ. ಉಳಿದಿದ್ದು ಸವಿ ಸವಿ ನೆನಪುಗಳು ಮಾತ್ರ. ಆದರೆ, ಈ ದುಃಖದ ಸಂದರ್ಭದಲ್ಲಿ, ಆ ನೆನಪುಗಳೂ ವಿಷಾದ ಒಸರಿಸತೊಡಗಿವೆ. ‘ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...’ ಅಂತ ಮನಸ್ಸು ಒರಲತೊಡಗಿದೆ.
- ಚಾಮರಾಜ ಸವಡಿ