ಅಲ್ಲಿ ಬಯಲು ಮುಗಿದಿತ್ತು, ಆಲಯ ಕರೆದಿತ್ತು...

4 Dec 2009


ಅಲ್ಲಿ ಬಯಲು ಮುಗಿದಿತ್ತು. ದಟ್ಟಡವಿ ನಿಂತಿತ್ತು. ಸುರಿಯುತ್ತಿರುವ ಸೋನೆಮಳೆ ಒಮ್ಮೊಮ್ಮೆ ಬಿರುಮಳೆಯಾಗುತ್ತ, ಮತ್ತೆ ಸೋನೆಗೆ ತಿರುಗುತ್ತ ಕಾಡಿನ ನಿಗೂಢತೆಗೆ ಮೆರುಗು ನೀಡಿತ್ತು. ನಾವು ಹೊರಟಿದ್ದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ದಟ್ಟ ಕಾನನದತ್ತ. ಮೈಲುಗಟ್ಟಲೇ ಹಬ್ಬಿರುವ ಮಹಾ ಮಲೆನಾಡಿನ ಒಡಲಿಗೆ. ಕುವೆಂಪು ಬಣ್ಣಿಸಿದ ಮಲೆಗಳ ನಿಗೂಢತೆಗೆ. ಪೂರ್ಣಚಂದ್ರ ತೇಜಸ್ವಿ ಹಂಬಲಿಸಿ ಹಿಂತಿರುಗಿದ ಕಾನನಕ್ಕೆ. ಬಿಜಿಎಲ್‌ ಸ್ವಾಮಿ ಬಣ್ಣಿಸಿದ ಮಾತ ಮೂದಲಿಸುವ ಮಹಾರಣ್ಯದೆಡೆಗೆ. ಜೋಗದ ನಾಡಿಗೆ. ಶ್ರೀಗಂಧದ ಬೀಡಿಗೆ...
 

ಶಿವಮೊಗ್ಗ ಎಂಬುದು ಪಶ್ಚಿಮಘಟ್ಟದ ಹೆಬ್ಬಾಗಿಲು. ಮಳೆ ಎಂಬುದು ಇಲ್ಲಿ ಮನೆಮಗಳು. ಹಸಿರೆಂಬುದು ಜೀವನದ ಉಸಿರು. ಎಷ್ಟೇ ಸುರಿದರೂ ಮಳೆ ಇಲ್ಲಿ ಪ್ರವಾಹವಾಗುವುದಿಲ್ಲ. ಮನೆ ಮಗಳು ಮುಗುಳ್ನಕ್ಕಂತೆ, ಮಳೆ ಇಲ್ಲಿಯ ಜನಕ್ಕೆ ಪುಳಕ. ಅರಣ್ಯಕ್ಕೆ ಅಭ್ಯಂಜನದ ಜಳಕ. ಮಳೆಗೆ ಕಾಡು ಉಕ್ಕುತ್ತದೆ. ಹಸಿರು ಚಿಮ್ಮುತ್ತದೆ. ನೆಲ-ಮುಗಿಲಿಗೆ ಸೇತುವೆ ಕಲ್ಪಿಸುತ್ತ ಬದುಕನ್ನು ಧನ್ಯವಾಗಿಸುತ್ತದೆ...

ಕಾಡಿನ ರೋಚಕತೆಯನ್ನು ತಮ್ಮ 'ಕಲ್ಕಿ' ಕವನದಲ್ಲಿ ಕುವೆಂಪು ಬಣ್ಣಿಸಿದ್ದು ಹೀಗೆ:


ನಿದ್ದೆಯ ಲೋಕದಿ ಕನಸಿನ ಬೀದಿ
ತಿರುಗಿದೆ ತೊಳಲಿದೆ ತಪ್ಪಿದೆ ಹಾದಿ!
ಮುಂದೆ ಕಾಣಿಸಿತೊಂದು ಅರಣ್ಯ
ಅನಂತವಾದುದು ವನವಿಸ್ತೀರ್ಣ
ಹೆಮ್ಮರಗಳು ಕಿಕ್ಕಿರಿದುವು ಅಲ್ಲಿ
ಬಿಡುವಿಲ್ಲದೆ ಹೆಣೆದಿದ್ದವು ಬಳ್ಳಿ... 

ಅರಣ್ಯದ ಒಳ ಹೊಕ್ಕಂತೆ ನಾಗರಿಕತೆ ಹಿಂದಾಗುತ್ತದೆ. ಮೊಬೈಲ್‌ ಸಿಗ್ನಲ್‌ಗಳು ಮುದುರಿಕೊಂಡು ಮಾತು ಮೂಕವಾಗುತ್ತದೆ. ಮುಂದೆ ಎಲ್ಲಾ ಅರಣ್ಯದ್ದೇ ಮಾತು. ಅದರದ್ದೇ ಕಾರುಬಾರು. ಬಿಸಿಲನ್ನು ಬಿಡಲಾರೆ ಎಂಬಂತೆ ಸಣ್ಣಗೆ ಸುರಿಯುವ ಜಡಿಮಳೆಗೆ ಮರಗಿಡಗಳು ಪ್ರೀತಿಯಿಂದ ಒಡ್ಡಿಕೊಂಡಿವೆ. ಹನಿಹನಿಯನ್ನೂ ಆಸ್ವಾದಿಸುತ್ತವೆ. ಅಲ್ಲಿ ಕೇಳಿಬರುವುದು ಮಳೆ ಬೀಳುವ ಮೃದು ಸದ್ದು, ಅಷ್ಟೇ.

ಬಿದ್ದ ಹನಿಹನಿಯನ್ನೂ ತರಗಲೆಗಳಿಂದ ಸಮೃದ್ಧವಾಗಿರುವ ಮಣ್ಣು ಹೀರಿಕೊಳ್ಳುತ್ತದೆ. ಅಂಥ ಜೀವದಾಯಕ ನೆಲದಲ್ಲಿ ಬಿದ್ದ ಪ್ರತಿಯೊಂದು ಬೀಜವೂ ಮೊಳಕೆಯೊಡೆಯುತ್ತದೆ. ಸೂರ್ಯನನ್ನು ಹುಡುಕುತ್ತ ಮೇಲೇಳುತ್ತವೆ. ಅರಣ್ಯಕ್ಕೆ ಅರಣ್ಯವೇ ಹಸಿರುಕ್ಕುವಂತೆ ಬೆಳೆಯುತ್ತವೆ. ಪ್ರತಿಯೊಂದು ಮರಗಿಡಕ್ಕೂ ಆಕಾಶವೇ ದಿಕ್ಕು. ಮೇಲೆ ಏನೋ ಇದೆ ಎಂಬಂತೆ ಮುಗಿಲಿಗೆ ಮುಖವೊಡ್ಡಿ ಏರುತ್ತ ಹೋಗುತ್ತವೆ. ಗಗನಕ್ಕೆ ಮುತ್ತಿಡುವ ಮತ್ತಿನಲ್ಲಿ ಸೊಕ್ಕಿ ಮೇಲೇಳುತ್ತವೆ. 

ಎಲ್ಲಾ ಇರುವ ಈ ಮಹಾರಣ್ಯದಲ್ಲಿ ಸೂರ್ಯನ ಬೆಳಕಿಗೆ ಮಾತ್ರ ಅಭಾವ. ಇಲ್ಲಿನ ಎಲ್ಲ ಜೀವಿಗಳಿಗೆ, ಅಮ್ಮನ ಸೆರಗಿನಡಿ ಮಲಗಿರುವ ಕಂದನಂಥ ಭಾವ. ಹಸಿಯ ಒಡಲಲ್ಲಿ ಜೀವದಾಯಕ ಬಿಸಿ. ಜೀವ ಸೃಷ್ಟಿಯಾಗುವಂಥ ಅರೆಗತ್ತಲು. ಕಾಡಿನ ಇಂಥ ನಸುಗತ್ತಲಿನಲ್ಲಿ ನಿಗೂಢ ಲೋಕವೊಂದು ತೆರೆದುಕೊಳ್ಳುತ್ತದೆ. ಮನುಷ್ಯ ನಿರ್ಮಿಸಿದ ದಾರಿ ಮಾಯವಾಗಿ, ಕಾಡಿನ ದಾರಿ ಬಿಚ್ಚಿಕೊಳ್ಳುತ್ತದೆ. ಹನಿಯಿಕ್ಕುವ ಮರಗಳ ನಡುವೆ, ಮಂತ್ರಮುಗ್ಧರಾದವರಂತೆ ಹೊರಟಾಗ, ಇದ್ದಕ್ಕಿದ್ದಂತೆ ಕಾಡಿನ ಮಧ್ಯೆ ಆಲಯವೊಂದು ಧುತ್ತೆಂದು ಎದುರಾಗುತ್ತದೆ...


ಅದು ಹೊಸಗುಂದದ ಉಮಾ ಮಹೇಶ್ವರ ದೇವಳ. 
ಒಂದು ಸಾವಿರ ವರ್ಷಗಳ ಇತಿಹಾಸವನ್ನು ಒಡಲಲ್ಲಿಟ್ಟುಕೊಂಡ ಊರು ಹೊಸಗುಂದ. ಒಂದಾನೊಂದು ಕಾಲದಲ್ಲಿ ನಾಡಾಗಿದ್ದ ಇಲ್ಲೀಗ ದಟ್ಟ ಕಾಡಿದೆ. ಹನ್ನೊಂದನೇ ಶತಮಾನದಲ್ಲಿ ಇದನ್ನು ಹುಂಚ ಮೂಲದ ಸಾಂತರು ಆಳಿದ್ದರು. ಸುಮಾರು ಮುನ್ನೂರು ವರ್ಷಗಳ ಕಾಲ ವೈಭವದಿಂದ ಮೆರೆದ ಹೊಸಗುಂದ ನಂತರ ಯಾವುದೋ ಕಾರಣಕ್ಕೆ ಅಳಿದುಹೋಯಿತು.

ಕ್ರಮೇಣ ನಾಡನ್ನು ಕಾಡು ಆವರಿಸಿತು. ಜನರಿಲ್ಲದ ಕಡೆ ನೆಲೆಯೂರಿ ನಿಂತ ಕಾಡು ಕ್ರಮೇಣ ಊರಿನ ಕೇಂದ್ರ ಬಿಂದು ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಹಾಗೂ ಸುತ್ತಲಿನ ದೇವಳಗಳನ್ನು ತನ್ನ ಒಡಲಲ್ಲಿ ಸೇರಿಸಿಕೊಂಡಿತು. ದೇಗುಲದ ಒಡಲಲ್ಲಿ ಮರಗಳು ಬೆಳೆದು ನಿಂತವು. ಅದರ ಗೋಪುರದ ಎತ್ತರಕ್ಕೂ ಏರಿದವು. ನಾಡಿನಿಂದ ಕಾಡಿನ ಪಾಲಾದ ಉಮಾ ಮಹೇಶ್ವರನಿಗೆ ಮರಗಿಡಗಳ ಪೂಜೆ ಶುರುವಾಯ್ತು. ಒಂದಲ್ಲ ಎರಡಲ್ಲ, ಸುಮಾರು ಆರುನೂರು ವರ್ಷಗಳ ಕಾಲ, ಅರಣ್ಯಪಾಲಾದ ಉಮಾ ಮಹೇಶ್ವರ.

ಮನುಷ್ಯ ಕಾಲಿಡದ ಕಾಡಾಗಿದ್ದರಿಂದ ಸಸ್ಯಪ್ರಭೇದಗಳು ಹೆಚ್ಚಿದವು. ಮರಗಿಡಗಳು ಸೊಕ್ಕಿ ಬೆಳೆದವು. ಕ್ರಮೇಣ ದೇಗುಲದ ಗೋಡೆ, ತೊಲೆಗಳನ್ನು ಸೀಳಿಕೊಂಡು ಹರಡಿದವು. ಅಲ್ಲೊಂದು ರಾಜವಂಶ ಆಳಿತ್ತು, ದೇಗುಲ ಸಮುಚ್ಚಯವಿತ್ತು ಎಂಬುದನ್ನೇ ಮುಚ್ಚಿಹಾಕುವಂತೆ ಕಾಡು ಬೆಳೆಯಿತು. ಮನುಷ್ಯನ ಹಸ್ತಕ್ಷೇಪ ಇಲ್ಲದಿದ್ದರೆ, ಪ್ರಕೃತಿ ಏನು ಮಾಡಬಲ್ಲುದು ಎಂಬುದಕ್ಕೆ ಸಾಕ್ಷಿಯೆಂಬಂತೆ ಹಬ್ಬಿತು. ದೇಗುಲದ ವ್ಯಾಪ್ತಿ ದಾಟಿ, ಸುತ್ತಲಿನ ಪ್ರದೇಶಗಳನ್ನು ಆವರಿಸುತ್ತ ಬೆಳೆದ ಕಾಡು ಸುಮಾರು ಆರುನೂರು ಎಕರೆ ವಿಸ್ತಾರವಾಯ್ತು. ಸೊಕ್ಕಿ ಹರಡಿದ ಕಾಡಿನ ನಡುವೆ ಉಮಾ ಮಹೇಶ್ವರ ದೀರ್ಘ ವನವಾಸಕ್ಕೆ ಈಡಾದ.

ನೈಸರ್ಗಿಕ ಉತ್ಪನ್ನಗಳ ಉದ್ಯಮ ಹೊಂದಿರುವ ’ಫಲದ’ ಸಂಸ್ಥೆಯ ಮುಖ್ಯಸ್ಥ ಸಿಎಂಎನ್‌ ಶಾಸ್ತ್ರಿಯವರು ಒಮ್ಮೆ ಕಾಡಿನಲ್ಲಿ ಸುತ್ತಾಡುತ್ತಿದ್ದಾಗ ಅಲ್ಲಲ್ಲಿ ದೇಗುಲದ ಅವಶೇಷಗಳು ಇರುವುದನ್ನು ಕಂಡರು. ಇದಕ್ಕೂ ಮುನ್ನ ಚಾರಣಿಗರು ಹಾಗೂ ಪ್ರಾಚೀನ ದೇಗುಲಗಳ ಬಗ್ಗೆ ಆಸಕ್ತಿ ಇರುವವರನ್ನು ಬಿಟ್ಟರೆ, ಈ ದಟ್ಟ ಕಾಡಿನ ಮಧ್ಯೆ ದೇವಾಲಯಗಳಿವೆ ಎಂಬುದು ಹೊರಜಗತ್ತಿಗೆ ಅಷ್ಟಾಗಿ ಗೊತ್ತಿದ್ದಿಲ್ಲ. ಕುತೂಹಲಗೊಂಡ ಶಾಸ್ತ್ರಿಯವರು ಅವುಗಳ ಜೀರ್ಣೋದ್ಧಾರಕ್ಕೆ ಮುಂದಾದರು. ಶ್ರೀ ಉಮಾ ಮಹೇಶ್ವರ ಸೇವಾ ಟ್ರಸ್ಟ್‌ ಸ್ಥಾಪನೆಯಾಯಿತು. ಪ್ರಾಚ್ಯವಸ್ತು ಇಲಾಖೆ ಜೊತೆಗೆ ಇಂಥ ದೇಗುಲಗಳ ಜೀರ್ಣೋದ್ಧಾರ ಕೆಲಸದಲ್ಲಿ ಪರಿಣಿತಿ ಹೊಂದಿರುವ ಶ್ರೀ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್‌ ಕೂಡ ಕೈಜೋಡಿಸಿತು. ೨೦೦೧ರಲ್ಲಿ ಜೀರ್ಣೋದ್ಧಾರ ಕೆಲಸ ಶುರುವಾಯ್ತು.

ಆದರೆ, ಜೀರ್ಣೋದ್ಧಾರ ಸುಲಭವಾಗಿದ್ದಿಲ್ಲ. ದೇಗುಲದ ತಳಪಾಯ ಮಣ್ಣಿನೊಳಗೆ ಹೂತು ಹೋಗಿ ಬಿರುಕು ಬಿಟ್ಟಿತ್ತು. ದಕ್ಷಿಣದ ಗೋಡೆಯ ಕಡೆ ದೊಡ್ಡ ಮರವೊ೦ದು ಬೆಳೆದಿದ್ದರಿಂದ ಇಡೀ ದೇವಸ್ಥಾನ ಶಿಥಿಲಗೊಂಡಿತ್ತು. ದೊಡ್ಡ ದೊಡ್ಡ ಕಲ್ಲಿನ ತೊಲೆಗಳು, ಹಾಸುಗಳು ಹಲವಾರು ತುಂಡುಗಳಾಗಿದ್ದವು. ಗರ್ಭಗುಡಿಯಲ್ಲಿದ್ದ ಶಿವಲಿಂಗ ಮಾಯವಾಗಿತ್ತು. ನಿಧಿಯ ಆಸೆಯಲ್ಲಿ ದೇವಸ್ಥಾನದ ಹಲವಾರು ಭಾಗಗಳನ್ನು ಅಗೆದು ಹಾಕಲಾಗಿತ್ತು.

ಈ ಪರಿ ದುಃಸ್ಥಿತಿಯಲ್ಲಿದ್ದ ದೇಗುಲವನ್ನು ಮೂಲಸ್ಥಿತಿಗೆ ತರುವಲ್ಲಿ ಸಿಎಂಎನ್‌ ಶಾಸ್ತ್ರಿ ನೇತೃತ್ವದ ಶ್ರೀ ಉಮಾ ಮಹೇಶ್ವರ ಟ್ರಸ್ಟ್‌ ಅಳವಡಿಸಿಕೊಂಡ ಕ್ರಮಗಳು ನಿಜಕ್ಕೂ ವಿಶಿಷ್ಟ. ಜೀರ್ಣೋದ್ಧಾರದ ಮೊದಲ ಹಂತವಾಗಿ ಹಳೆ ದೇಗುಲವನ್ನು ಹಂತಹಂತವಾಗಿ ಬಿಚ್ಚಲಾಯ್ತು. ಬಿಚ್ಚಿದ ಪ್ರತಿಯೊ೦ದು ಭಾಗಕ್ಕೂ ಗುರುತಿನ ಸಂಖ್ಯೆ ಕೊಡಲಾಯ್ತು. ಹೊರಗಿನ ವಸ್ತುಗಳನ್ನು ಸೇರಿಸದೇ, ಇದ್ದ ಅವಶೇಷಗಳನ್ನು ಬಳಸಿಕೊಂಡೇ ಇಡೀ ದೇವಾಯಲವನ್ನು ಪುನರ್‌ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್‌ ಮುಂದಿಟ್ಟಿತು.

ಈಗ ದೇವಸ್ಥಾನದ ಅರ್ಧಕ್ಕೂ ಹೆಚ್ಚು ಭಾಗ ಪುನರ್‌ ನಿರ್ಮಾಣವಾಗಿದೆ. ಇದಕ್ಕಾಗಿ ಹೊರಗಿನ ವಸ್ತುಗಳನ್ನು ಬಳಸಿದ್ದು ಬಲು ಅಪರೂಪ. ಕಬ್ಬಿಣದ ಸರಳುಗಳನ್ನು ಸೇರಿಸಿ ಮುರಿದುಹೋಗಿದ್ದ ಕಲ್ಲಿನ ತೊಲೆಗಳನ್ನು ಮೂಲರೂಪಕ್ಕೆ ತರಲಾಗಿದೆ. ’ಒಂದು ಮಳೆ ಬಂದರೆ ಸಾಕು, ಈ ಜೋಡಣೆ ಮೂಲ ಕಲ್ಲಿನ ಬಣ್ಣಕ್ಕೇ ತಿರುಗುತ್ತದೆ. ಇಡೀ ರಚನೆಯನ್ನೇ ಪೂರ್ತಿಯಾಗಿ ಕಳಚಿ, ಅವೇ ವಸ್ತುಗಳನ್ನು ಬಳಸಿ ಪುನರ್‌ರೂಪಿಸಿದ ಉದಾಹರಣೆ ಬಹುಶಃ ಅಪರೂಪ’ ಎನ್ನುತ್ತಾರೆ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಧರ್ಮಸ್ಥಳ ಟ್ರಸ್ಟ್‌ನ ಎಂಜನಿಯರ್‌ ರಾಘವೇಂದ್ರ.

ಸುತ್ತಲಿನ ಪ್ರದೇಶಲ್ಲಿ ದೊರೆತ ಶಿಲಾಲೇಖಗಳಲ್ಲಿರುವ ಮಾಹಿತಿಯ ಪ್ರಕಾರ, ದೇವಳದ ನಿರ್ಮಾಣ ಕಾಲ ಸುಮಾರು ಕ್ರಿ.ಶ. ೧೦೦೦ದಿಂದ ೧೧೦೦. ಆದರೆ, ಇದನ್ನು ನಿರ್ಮಿಸಿದವರಾರು ಎಂಬ ಬಗ್ಗೆ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಚಾಲುಕ್ಯ ಶೈಲಿಯ ಈ ದೇವಾಲಯ ಸೊಗಸಾದ ಕೆತ್ತನೆಗಳನ್ನು ಒಳಗೊಂಡಿದೆ. ಸಾಕಷ್ಟು ಮಿಥುನ ಶಿಲ್ಪಗಳೂ ಇಲ್ಲಿವೆ. ಮುಖಮಂಟಪದಲ್ಲಿ ೨೦ ನಯವಾದ ಆಕರ್ಷಕ ಕೆತ್ತನೆಯುಳ್ಳ ಕಂಬಗಳಿವೆ. ಜೀರ್ಣೋದ್ಧಾರ ಶುರುವಾದ ನಂತರ ಉಮಾಮಹೇಶ್ವರ ದೇವಸ್ಥಾನ ಕ್ರಮೇಣ ತನ್ನ ಮೊದಲಿನ ವೈಭವ ಪಡೆದುಕೊಳ್ಳತೊಡಗಿತು.

ಜನ ಮನಸ್ಸು ಮಾಡಿದರೆ ಯಾವೊಂದು ಕೆಲಸವೂ ಕಷ್ಟವಲ್ಲ ಎಂಬುದಕ್ಕೆ ಹೊಸಗುಂದವೇ ಸಾಕ್ಷಿ. ಅತ್ತ ದೇಗುಲ ಮೇಲೇಳುತ್ತಿದ್ದಂತೆ, ಇತ್ತ ಇಡೀ ಊರಿನಲ್ಲಿ ಈಗ ಪ್ರಗತಿಯ ಗಾಳಿ. ದೇಗುಲ ಜೀರ್ಣೋದ್ಧಾರವಾದರೆ ಸಾಲದು, ತಾವು ಕೂಡ ಅಭಿವೃದ್ಧಿ ಹೊಂದಬೇಕೆಂಬ ಹಂಬಲ. ತಮ್ಮೂರಿನ ವಿಶಿಷ್ಟ ಸಂಸ್ಕೃತಿ ಮೂಡಿಸಿದ ಹುಮ್ಮಸ್ಸು ಅವರನ್ನು ಹೊಸ ಬದುಕಿನತ್ತ ತಿರುಗಿಸಿದೆ.

ಈಗ ದೇಗುಲದ ಸುತ್ತಲಿನ ಸುಮಾರು ೫೦೦ ಎಕರೆ ಅರಣ್ಯಪ್ರದೇಶವನ್ನು ದೇವರ ಕಾಡೆಂದು ಘೋಷಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ದಾಖಲೆಗಳ ಪ್ರಕಾರ ಇಲ್ಲಿರುವುದು ಕಂದಾಯ ಜಮೀನು. ಅಂದರೆ, ಮುಂಚೆ ಇಲ್ಲಿ ಈ ಪರಿ ಕಾಡು ಇದ್ದಿಲ್ಲ! ನೂರಾರು ವರ್ಷಗಳ ಕಾಲ ಯಾರ ವಾಸವೂ ಇಲ್ಲದ್ದರಿಂದ ಇಲ್ಲಿ ದಟ್ಟ ಕಾಡು ನಿರ್ಮಾಣವಾಗಿದೆ! ಕುವೆಂಪು ವಿಶ್ವವಿದ್ಯಾಲಯದ ಸಸ್ಯ ವಿಜ್ಞಾನ ವಿಭಾಗದ ತಂಡ ಇಲ್ಲಿಯ ಜೀವವೈಧ್ಯತೆಯ ಸಮಗ್ರ ಅಧ್ಯಯನ ಮತ್ತು ದಾಖಲೀಕರಣ ಕೆಲಸ ನಡೆಸಿದೆ. ಸುಮಾರು 350 ಜಾತಿಯ ಗಿಡಮರಗಳನ್ನು ಗುರುತಿಸಿದ ತಂಡ, ಇಲ್ಲಿನ ಹೆಚ್ಚಿನ ಮರಗಳ ಪ್ರಾಯ ಸುಮಾರು 300-500 ವರ್ಷಗಳೆ೦ದು ಅ೦ದಾಜು ಮಾಡಿದೆ. ಇಲ್ಲಿನ ಒ೦ದು ಜಾತಿಯ ಮಾವಿನ ಮರವಂತೂ 650 ವರ್ಷ ಹಳೆಯದು!

ಈ ಎಲ್ಲ ಬೆಳವಣಿಗೆಗಳಿಂದ ಖುಷಿಯಾಗಿರುವ ಹೊಸಗುಂದ ಸುತ್ತಮುತ್ತಲಿನ ಜನತೆಗೆ ದೇವರಕಾಡನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಇದು ಪರಿಸರ ಪ್ರೇಮಿಗಳ ಮತ್ತು ವಿದ್ಯಾರ್ಥಿಗಳ ಸ೦ಶೋಧನೆಯ ತಾಣವಾಗಲಿ ಎಂಬುದು ಅವರ ಆಶಯ. ಇಲ್ಲಿನ ಜೀವವೈವಿಧ್ಯವನ್ನು ಇನ್ನಷ್ಟು ಸಮೃದ್ಧಗೊಳಿಸಬೇಕೆಂಬುದು ಅವರ ಕನಸು. ನಶಿಸಿಹೋಗುತ್ತಿರುವ ಹಾಗೂ ನಾಶವಾಗಿರುವ ಸಸ್ಯಸ೦ಕುಲಗಳನ್ನು ಇಲ್ಲಿ ಬೆಳೆಸಲು ಮುಂದಾಗಿರುವ ಅವರು, ಪ್ರತಿ ವರ್ಷ 108 ಜಾತಿಯ ಸಸ್ಯಗಳನ್ನು ಹಾಗೂ ಪ್ರತಿಯೊಂದು ಸಸ್ಯದ 108 ಗಿಡಗಳನ್ನು ನೆಡಲು ಯೋಜನೆ ರೂಪಿಸಿದ್ದಾರೆ. ಈಗ ಯೋಜನೆ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ೧೨ ಸಾವಿರಕ್ಕೂ ಹೆಚ್ಚು ಸಸ್ಯ ಪ್ರಭೇದಗಳು ದೇವರಕಾಡಿನಲ್ಲಿ ಬೆಳೆಯತೊಡಗಿವೆ.
ಕಾಡಿನ ಪ್ರೀತಿ ಜನರಿಗೆ ನೀರಿನ ಮಹತ್ವ ಮನಗಾಣಿಸಿದೆ. ಹೊಸಗುಂದ ಮತ್ತು ಸುತ್ತಲ ಪರಿಸರದಲ್ಲಿ ದಟ್ಟ ಕಾಡು ಇದ್ದರೂ ಕೂಡ ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿಗೂ ಕೂಡಾ ಪರದಾಡಬೇಕಾದ ಪರಿಸ್ಥಿತಿ ಇತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮೂರು ವರ್ಷಗಳ ಹಿಂದೆ ಮಳೆ ನೀರು ಸಂಗ್ರಹ ಯೋಜನೆ ರೂಪಿಸಲಾಯ್ತು. ಇಂಗುಗುಂಡಿಗಳನ್ನು ದೊಡ್ಡ ಸಂಖ್ಯೆಯಲ್ಲಿ ನಿರ್ಮಿಸಲಾಯ್ತು. ಅದರ ಪರಿಣಾಮ: ಡಿಸೆ೦ಬರ್‍-ಜನವರಿ ತಿಂಗಳಲ್ಲಿಯೇ ಬತ್ತಿ ಹೋಗುತ್ತಿದ್ದ ದೇವಾಲಯದ ಪುಷ್ಕರಣಿಯಲ್ಲಿ ಈಗ ಮಳೆಗಾಲದವರೆಗೂ ನೀರು ನಿಲ್ಲತೊಡಗಿದೆ. ಸುತ್ತಮುತ್ತಲಿನ ಕೆರೆಕಟ್ಟೆಗಳಲ್ಲಿಯೂ ನೀರು ಸಮೃದ್ಧ. ರೈತರ ಗಮನ ಈಗ ನೈಸರ್ಗಿಕ ಕೃಷಿಯ ಕಡೆ ಹೊರಳಿದ್ದು ರಾಸಾಯನಿಕ ವಿಷವನ್ನು ಭೂಮಿಗೆ ಉಣಿಸದಿರಲು ನಿರ್ಧರಿಸಿದ್ದಾರೆ. ಪರಂಪರೆ ಅನುಸರಿಸುವುದರಲ್ಲಿಯೇ ನೆಮ್ಮದಿಯಿದೆ ಎಂಬುದನ್ನು ಮನಗಾಣತೊಡಗಿದ್ದಾರೆ.

ಹೊಸಗುಂದ ಈಗ ಮಾದರಿ ಗ್ರಾಮ. ಅಲ್ಲೀಗ ಎಲ್ಲವೂ ಇದೆ. ಪರಂಪರೆಯ ಬೇರುಗಳಿವೆ. ದಟ್ಟ ಕಾಡಿದೆ. ಪ್ರಕೃತಿಯ ಭಾಗವಾದರೆ ಮಾತ್ರ ಪ್ರಗತಿ ಎಂಬ ತಿಳಿವಳಿಕೆಯಿದೆ. ಬೀಳುವ ಪ್ರತಿಯೊಂದು ಮಳೆಹನಿಯನ್ನು ಆಸ್ವಾದಿಸುವ, ಅದನ್ನು ಇಂಗಿಸುವ, ಪ್ರಕೃತಿಯೊಂದಿಗೆ ಒಂದಾಗಿ ಬಾಳುವ ಜೀವನ ಪ್ರೀತಿ ಇದೆ. ಆರು ನೂರು ವರ್ಷಗಳ ಕಾಲ ಅರಣ್ಯದಲ್ಲಿ ಮುಚ್ಚಿಹೋಗಿದ್ದ ದೇಗುಲದ ಜೊತೆಗೆ ಜನರ ಬದುಕೂ ಈಗ ಅರಳತೊಡಗಿದೆ. ಹೊಸ ರೀತಿಯ ಪ್ರಗತಿಯ ಕಂಪು ಎಲ್ಲೆಡೆ ಪಸರಿಸತೊಡಗಿದೆ.

- ಚಾಮರಾಜ ಸವಡಿ

(ಚಿತ್ರ ಕೃಪೆ:  http://sumstrust.blogspot.com)

2 comments:

Unknown said...

ಹಲವಾರು ವರ್ಷಗಳಿಂದ ೀ ದೇವಾಲಯಗಳ ಗೀಳು ಅಂಟಿಸಿಕೊಂಡು ಅಲೆದಾಡುತ್ತಿದ್ದಾಗ, ಈ ಹೊಸಗುಂದದ ದೇವಾಲಯದ ಬಗ್ಗೆ ಕೇಳಿದ್ದೆ. ಆದರೆ ಅಲ್ಲಿಗೆ ಹೋಗಲಾಗಿರಲಿಲ್ಲ. ನಿಮ್ಮ ಸಚಿತ್ರ ಲೇಖನ ಮಾಹಿತಿಯತುಕ್ತವಾಗಿದೆ, ಹಾಗೂ ನನ್ನ ನಿರಾಶೆಯನ್ನು ತಣಿಸಿದೆ. ಧನ್ಯವಾದಗಳು.

Chamaraj Savadi said...

ಥ್ಯಾಂಕ್ಸ್‌ ಡಾ. ಸತ್ಯನಾರಾಯಣ ಸರ್‌. ದೇವಳದ ಬಗ್ಗೆ ನಿಮ್ಮ ಬರಹಗಳನ್ನು ನಿರೀಕ್ಷಿಸುತ್ತೇನೆ. ಏಕೆಂದರೆ, ನೀವು ಆಳವಾಗಿ ಅಧ್ಯಯನ ಮಾಡಿ, ಸಾಕಷ್ಟು ವಿವರಗಳ ಸಹಿತ ಬರೆಯುತ್ತೀರಾದ್ದರಿಂದ.