ಎಸ್.ಎಲ್. ಭೈರಪ್ಪನವರ ಕವಲು ಕಾದಂಬರಿ ವಿಮರ್ಶೆಗಳು ಹೇಗಿವೆಯೆಂದರೆ, ‘ಯಾರಿಗೆ ಏನು ನೋಡಬೇಕೆನಿಸುತ್ತದೋ ಅದೇ ಕಾಣುತ್ತದೆ’.
ಕಾದಂಬರಿಯ ಒಂದೊಂದು ಪಾತ್ರಗಳನ್ನು ಪ್ರತ್ಯೇಕಗೊಳಿಸಿ ನೋಡುವ ಮೂಲಕ ವಿಮರ್ಶೆ ಮಾಡಿದ್ದೇ ಹೆಚ್ಚು. ಇದು ಹೇಗೆಂದರೆ, ದೇಹದಲ್ಲಿ ಪ್ರತಿಯೊಂದು ಅಂಗವನ್ನೂ ಪ್ರತ್ಯೇಕವಾಗಿ ನೋಡಿ ವಿಮರ್ಶಿಸಿದ ಹಾಗೆ. ಕಾದಂಬರಿ ವಿಮರ್ಶೆಗಿಂತ ಭೈರಪ್ಪನವರ ವಿಮರ್ಶೆಯೇ ಹೆಚ್ಚಾಗಿ ನಡೆದಿದೆ.
ಕಾದಂಬರಿ, ಕಾದಂಬರಿಕಾರ ಮತ್ತು ವಾಸ್ತವ ಒಂದಕ್ಕೊಂದು ಪೂರಕವಾಗಿರುವಂತೆ ಪ್ರತ್ಯೇಕವಾಗಿಯೂ ನಿಲ್ಲುವಂಥವು. ಒಂದು ಅಜೆಂಡಾ ಅಥವಾ ಕಾರ್ಯಸೂಚಿ ಇಟ್ಟುಕೊಂಡು ಸಾಹಿತ್ಯಿಕ ಕೃತಿ ರಚಿಸುವುದು ಸುಲಭವಲ್ಲ. ಹಾಗೆ ರಚನೆಯಾದರೂ ಅದಕ್ಕೆ ಸಾಹಿತ್ಯಿಕ ಮೌಲ್ಯಗಳು ದಕ್ಕುವುದು ಸಾಧ್ಯವಿಲ್ಲ. ಭೈರಪ್ಪನವರು ಯಾವುದೋ ಅಜೆಂಡಾ ಇಟ್ಟುಕೊಂಡು ಅದನ್ನು ಸಾಹಿತ್ಯಿಕ ಚೌಕಟ್ಟಿನಲ್ಲಿ ತಂದಿದ್ದಾರೆ ಎಂಬ ವಾದವನ್ನು ಒಪ್ಪುವುದು ಕಷ್ಟ.
ಲೇಖಕ ಬರೆಯುತ್ತಾ ಹೋಗುತ್ತಾನೆ. ಆತನಿಗೆ ಮಿತಿಗಳು, ಚೌಕಟ್ಟುಗಳು ಇರಬಾರದು ಎಂದಲ್ಲ. ಅವು ಅದೃಶ್ಯವಾಗಿರುತ್ತವೆ. ಅದೃಶ್ಯವಾಗಿರಬೇಕು. ಏಕೆಂದರೆ, ಕ್ರಿಯಾಶೀಲ ಮಾಧ್ಯಮ ಚೌಕಟ್ಟಿಗೆ ಒಳಪಟ್ಟರೆ ಕ್ರಿಯಾಶೀಲತೆ ಸತ್ತುಹೋಗುತ್ತದೆ. ಅಜೆಂಡಾ ಇಟ್ಟುಕೊಂಡು ಬರೆದ ಅನೇಕ ಬರವಣಿಗೆಗಳು ಆಯಾ ಕಾಲಘಟ್ಟದ ನಂತರ ಅಪ್ರಸ್ತುತವಾದ ಉದಾಹರಣೆಗಳು ಸಾಕಷ್ಟಿವೆ. ರಷ್ಯಾ ಕ್ರಾಂತಿಯ ನಂತರ ಬಂದ ಸಾಹಿತ್ಯವನ್ನೇ ನೋಡಿದರೂ ಈ ವಿಷಯ ಸ್ಪಷ್ಟವಾಗುತ್ತದೆ. ಎಡಪಂಥೀಯ ಹಾಗೂ ಬಲಪಂಥೀಯ ಬರವಣಿಗೆಗಳು ಸೀಮಿತಗೊಂಡಿದ್ದೂ ಇಂಥವೇ ಕಾರಣಗಳಿಗಾಗಿ. ದೇಶಪ್ರೇಮದ ಬರಹಗಳ ಮಿತಿಯೂ ಇಷ್ಟೇ.
ಈ ಎಲ್ಲ ಚೌಕಟ್ಟುಗಳ ಮಿತಿಯಾಚೆ ಕವಲು ಕಾದಂಬರಿ ಇದೆ ಅಂತ ನಾನು ಭಾವಿಸಿದ್ದೇನೆ. ಭೈರಪ್ಪನವರ ಬಹುತೇಕ ಕಾದಂಬರಿಗಳನ್ನು ಓದಿರುವ ನಾನು, ಅವುಗಳು ಕಟ್ಟಿಕೊಟ್ಟ ಪಾತ್ರವೈಭವವನ್ನು, ವೈಚಾರಿಕತೆಯನ್ನು, ವಿಷಯ ಪ್ರಸ್ತುತಿಯನ್ನು ಹಾಗೂ ಭಾವತೀವ್ರತೆಯನ್ನು ಆಸ್ವಾದಿಸಿದ್ದೇನೆ. ಆದರೆ, ಕೆಲವರು ಹೇಳುವಂತೆ, ಅವುಗಳಲ್ಲಿ ಅಡಗಿದೆ ಎನ್ನಲಾದ ಅಜೆಂಡಾ ನನ್ನನ್ನು ಪ್ರಭಾವಿಸಿಲ್ಲ.
ಲೈಂಗಿಕತೆ ಸುತ್ತ ಕಾದಂಬರಿ ಸುತ್ತುತ್ತಿದೆ ಎಂಬುದನ್ನು ಒಪ್ಪುವುದು ಕಷ್ಟ. ಕವಲು ಕಾದಂಬರಿಯಲ್ಲಿ ಬಂದ ಪಾತ್ರಗಳನ್ನು ಹೋಲುವ ಅನೇಕ ವ್ಯಕ್ತಿಗಳನ್ನು ಹಾಗೂ ಸಂಸಾರಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಇನ್ನು ಮಹಿಳೆಯರನ್ನು ತುಚ್ಛವಾಗಿ ಚಿತ್ರಿಸಿದ್ದಾರೆ ಎಂಬ ಆರೋಪದಲ್ಲೂ ಹುರುಳಿಲ್ಲ. ಆ ಕಾದಂಬರಿಯಲ್ಲಿ ಬಂದಂಥ ಪಾತ್ರಗಳು ನಮ್ಮ ಸುತ್ತಮುತ್ತಲೇ ಕಾಣುತ್ತವೆ. ತುಚ್ಛತೆಗೆ ಮಹಿಳೆ-ಪುರುಷ ಎಂಬ ಭೇದವಿಲ್ಲ. ಹೀಗಾಗಿ, ಕಾದಂಬರಿಯ ವಸ್ತು, ಪ್ರಸ್ತುತಿ, ಪಾತ್ರಗಳು ಅಪ್ರಸ್ತುತವೆಂಬುದನ್ನು, ಅಜೆಂಡಾ ಇಟ್ಟುಕೊಂಡು ರೂಪಿಸಿದವುಗಳೆಂಬುದನ್ನು ನಾನು ಒಪ್ಪಲಾರೆ.
ನನ್ನ ಪ್ರಕಾರ ಕವಲು ಕಾದಂಬರಿ ವಾಸ್ತವಕ್ಕೆ ಹಿಡಿದ ಕನ್ನಡಿ. ಒಂದು ವೇಳೆ ಇದನ್ನು ಭೈರಪ್ಪನವರು ಬರೆದಿರದಿದ್ದರೆ ನಮ್ಮ so called ಬುದ್ಧಿಜೀವಿಗಳು, ವಿಚಾರವ್ಯಾಧಿಗಳು ಹಾಗೂ ಮಹಿಳಾವ್ಯಾಧಿಗಳು ಮನಃಪೂರ್ವಕ ಸ್ವಾಗತಿಸಿರುತ್ತಿದ್ದರೇನೋ!
ಒಂದು ಕಾದಂಬರಿಯನ್ನು ಕಾದಂಬರಿಯಾಗಿ ಓದಬೇಕು ಎಂಬುದು ನನ್ನ ನಂಬಿಕೆ. ಆದರೆ, ಅದನ್ನು ಸುದ್ದಿಯೆಂಬಂತೆ ಓದಿ, ತಂತಮ್ಮ ನಂಬಿಕೆಗಳೊಂದಿಗೆ ಹೋಲಿಸಿ ನೋಡೋರಿಗೆ ಏನು ಹೇಳೋದು? ಕಾಮನ್ಸೆನ್ಸ್ ಇರದ ಬುದ್ಧಿಜೀವಿಗಳು, ವಾಸ್ತವ ಧಿಕ್ಕರಿಸಿ ಯೋಚಿಸುವ ವಿಚಾರವ್ಯಾಧಿಗಳು ಇಂಥ ಎಲ್ಲ ಬರವಣಿಗೆ/ ಬೆಳವಣಿಗೆಯನ್ನೂ ವಿರೋಧಿಸುತ್ತಾರೆ. ಆದರೆ, ಇವರ ಸಾಲಿಗೆ ಮಹಿಳಾವಾದಿಗಳು ಕೂಡ ಸೇರಿರುವುದು ವಿಚಿತ್ರ ಅನಿಸುತ್ತಿದೆ.
ಈ ಬಗ್ಗೆ ವಿಸ್ತೃತವಾಗಿ ಬರೆಯಬೇಕಿದೆ. ಸದ್ಯಕ್ಕೆ ಇಷ್ಟು ಸಾಕು.
- ಚಾಮರಾಜ ಸವಡಿ
10 comments:
ಸಾರ್...
ಕವಲು ಕಾದಂಬರಿಯ ಬಗ್ಗೆ ಅತ್ಯಂತ ಸರಳವಾಗಿ... ಅದನ್ನು ಕಾದಂಬರಿಯೆಂಬಂತೆ ಚೆನ್ನಾಗಿ ಹೇಳಿದ್ದೀರಿ... ನಾನಿನ್ನೂ ಈಗ ಓದಲು ಶುರು ಮಾಡಿದ್ದೇನೆ. ಚಿತ್ರ ವಿಚಿತ್ರವಾದ, ತರಹೇವಾರಿ ಅಭಿಪ್ರಾಯಗಳನ್ನೂ, ವಿಚಾರ ವಿಮರ್ಶೆಗಳನ್ನೂ ಓದಿ... ನನಗೆ ಬೇಸರವಾಗಿ ಬಿಟ್ಟಿತ್ತು. ಲೈಂಗಿಕತೆ ಎಂದು ಬಡಬಡಿಸುವವರೆಲ್ಲರೂ ಅದನ್ನು ಬರಿಯ ಹೊರ ಪದರದಷ್ಟು ಮಾತ್ರ ನೋಡಿದ್ದಾರೆಂಬುದು ವಿಮರ್ಶೆ ಓದುವವರಿಗೆ ಚೆನ್ನಾಗಿಯೇ ಅರ್ಥವಾಗುತ್ತದೆ. ಕಥೆಯ ಆಳ, ನಿರೂಪಣೆ, ಕಾಳಜಿ, ಪಾತ್ರಗಳ ಬೆಳವಣಿಗೆ, ವಸ್ತು ಸ್ಥಿತಿ ಎಲ್ಲವನ್ನೂ ಬದಿಗೆ ಸರಿಸಿ ಬರಿಯ ಲೈಗಿಕತೆಯ ಬಗ್ಗೆಯೇ ಅತ್ಯಂತ ಪ್ರಭಾವೀ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ ಎಲ್ಲರೂ. ಇದೆಲ್ಲದರ ಮಧ್ಯೆ ನಿಮ್ಮ different angleನಲ್ಲಿ ಕಾದಂಬರಿಯನ್ನು ನೋಡಿರುವ ರೀತಿ ನಂಗೆ ತುಂಬಾ ಹಿಡಿಸಿತು ಮತ್ತು ಕಾದಂಬರಿ ಓದುವ ಹುರುಪು ಕೂಡ ಬಂತು. ಧನ್ಯವಾದಗಳು ಸಾರ್.......
ಶ್ಯಾಮಲ
ನಿಮ್ಮ ಬರಹದ ಆಶಯಕ್ಕೆ ನನ್ನ ಸಹಮತವಿದೆ. ಒ೦ದು ಕಾದ೦ಬರಿ ಯನ್ನು "ಕಾದ೦ಬರಿ" ಎ೦ಬ೦ತೆ ಓದದೆ ಅದನ್ನು ತಮ್ಮ ವ್ಯಕ್ತಿಗತ ನ೦ಬಿಕೆಗಳೊ೦ದಿಗೆ ಹೋಲಿಸಿ ವಿಚಿತ್ರ ರೀತಿಯಲ್ಲಿ ವಿಮರ್ಶೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಆರೋಗ್ಯಕರ ಅಲ್ಲ.
ಸರ್ ನಾನು ನಿಮ್ಮ ಕವಲು ಕಾದಂಬರಿಯ ಲೇಖನ ಓದಿದೆ ಚೆನ್ನಾಗಿದೆ . ಮೊದಲಿಂದಲು ನಿಮ್ಮ ಬ್ಲಾಗನ್ನು ಓದುತ್ತೇನೆ ಅದರೆ comment ಮಾಡಿರಲಿಲ್ಲ. ಈ ಕಾದಂಬರಿಯನ್ನು ಸ್ವಲ್ಪ ಓದಿದ್ದೇನೆ.
ವಿಮರ್ಶೆಗಳಿಗೆ ಮುನ್ನ ಕಾದಂಬರಿಯನ್ನು ಓದಿ ನಂತರದ ತರಹಾವರಿ ವಿಮರ್ಶೆಗಳಿಗೆ ಬೇಸತ್ತು ಅದಕ್ಕೆಲ್ಲ ಉತ್ತರ ಬರೆಯುವುದು ವ್ಯರ್ತ, ಅವರ ಮೂಗಿನ ನೇರಕ್ಕೆ ಅವರವರು ಅರ್ಥೈಸಿದ್ದಾರೆ ಎಂಬ ಸಾಂತ್ವನದೊಂದಿಗೆ ಇದ್ದ ಸಮಯದಲ್ಲೇ ನಿಮ್ಮ ಅನಿಸಿಕೆ ಓದಿ ಬಹಳವೇ ಸಂತಸವಾಯ್ತು. ಒಂದು ಕೃತಿಯನ್ನು ಅದರ ಕರ್ತೃವಿನಿಂದಾಚೆಗೆ ನೋಡಿದಾಗಲೇ ಅದರ ಸ್ಪಷ್ಟ ಅಭಿವ್ಯಕ್ತಿ ನಮಗಾಗಲು ಸಾಧ್ಯ ಎಂದು ನಾನು ನಂಬಿದ್ದೇನೆ. ಕವಲು ಕಾದಂಬರಿಯಲ್ಲಿ ವಾಸ್ತವತೆಯ ಚಿತ್ರಣ ಸಹಜವಾಗೇ ಮೂಡಿಬಂದಿದೆ. ಅದರಲ್ಲಿ ಯಾವುದೇ ಅಜೆಂಡಾದ ಅಥವಾ ಚೌಕಟ್ಟಿನ ಶಿಫಾರಸ್ಸು ನನಗೂ ಕಾಣಲಿಲ್ಲ.. ನಿಮ್ಮ ವಿಸ್ತೃತವಾದ ಲೇಖನಕ್ಕೆ ಕಾದಿದ್ದೇನೆ..
ಪ್ರೀತಿಯ ಶಾಮಲಾ,
ಇನ್ನೊಬ್ಬರ ಅಭಿಪ್ರಾಯದ ಮೇಲೆ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಡಿ. ಖುದ್ದು ಕಾದಂಬರಿ ಓದಿದ ನಂತರ ನಿಮಗೆ ಏನನ್ನಿಸುತ್ತದೋ, ಅದು ಮಾತ್ರ ನಿಮ್ಮದು. ಕಾದಂಬರಿಯ ರಸಸ್ವಾದನೆ ವಿಮರ್ಶೆಗಿಂತ ಮುಖ್ಯ. ಸಾಹಿತ್ಯಕೃತಿಯನ್ನು ಆತ್ಮಚರಿತ್ರೆಯಂತೆ, ಪ್ರಣಾಳಿಕೆಯಂತೆ, ಪ್ರಚಲಿತ ವಿಷಯಗಳ ಪುಸ್ತಕದಂತೆ ನೋಡಬಾರದು ಎಂಬುದಷ್ಟೇ ನನ್ನ ಉದ್ದೇಶ.
ಓದುವ ಖುಷಿ ನಿಮ್ಮದಾಗಲಿ.
ಪರಾಂಜಪೆಯವರೇ,
ನೀವಂದಿದ್ದು ನಿಜ: ವ್ಯಕ್ತಿಗತ ನಂಬಿಕೆಗಳೊಂದಿಗೆ ವಿಮರ್ಶೆ ಮಾಡಿದರೆ, ಅದು ವಸ್ತುನಿಷ್ಠವಾಗುವುದಿಲ್ಲ. ವಿಮರ್ಶೆ ಎನ್ನುವುದು ನಮ್ಮ ಖಾಸಗಿ ಅಭಿವ್ಯಕ್ತಿಯೇ ಹೊರತು ಸಾರ್ವತ್ರಿಕವಲ್ಲ. ನಾವ್ಯಾರೂ ಸಾರ್ವತ್ರಿಕ ಅಭಿಪ್ರಾಯ ಕೊಡಲಾರೆವು. ಅಷ್ಟೊಂದು ಪ್ರಬುದ್ಧತೆ, ನಿರ್ಲಿಪ್ತತೆ ನಮ್ಮಲ್ಲಿಲ್ಲ.
ವಿನಾಯಕ,
ಕಾದಂಬರಿಯನ್ನು ಪೂರ್ತಿ ಓದಿ. ನಂತರ ನಿಮ್ಮ ಅಭಿಪ್ರಾಯವನ್ನು ರೂಪಿಸಿಕೊಳ್ಳಿ. ಇತರರ ಅಭಿಪ್ರಾಯಗಳು ನಿಮ್ಮವಾಗಲಾರವು. ಆಗುವುದೂ ಬೇಡ. ಅಲ್ವೆ?
ಸುಹಾಸ್,
ಹೇಗಿದ್ದೀರಿ? ಎಲ್ಲಿದ್ದೀರಿ ಈಗ? ಒಂದು ಕೃತಿಯನ್ನು ನಿಮಗೆ ಅನಿಸಿದಂತೆ ಓದಿ. ನಿಮ್ಮ ಅಭಿಪ್ರಾಯ ನಿಮ್ಮದು. ಅದನ್ನು ಇನ್ನೊಬ್ಬರು ಒಪ್ಪಬೇಕೆಂದೇನಿಲ್ಲ. ಒಪ್ಪುವಂತೆ ಮಾಡುವ ಪ್ರಯತ್ನವೂ ಬೇಡ.
ವಿಸ್ತೃತ ಲೇಖನ ಬರೆಯಲು ಇನ್ನೊಂಚೂರು ಕಾಯುತ್ತೇನೆ.
ನನ್ನ ಪ್ರಕಾರ, ಕಾದಂಬರಿ ಓದಿ ನಂತರ ವಿಮರ್ಶೆ ಬರೆಯಿರಿ ಮತ್ತು ಓದಿರಿ, ವಿಮರ್ಶೆ ವ್ಯಕ್ತಿಗತ. ನಿಮ್ಮ ವಿಮರ್ಶೆ ಓದಿ ಸಂತಸವಾಯಿತು, ಮೊದಲೊಂದು ವಿಮರ್ಶೆ ಇದಕ್ಕೆ ವಿರುದ್ದವಾದುದನ್ನು ಓದಿದ್ದೆ, ಅಷ್ಟು ಸಮ ಕಾಣಲಿಲ್ಲ.
ಕವಲು ಇನ್ನು ಓದಿಲ್ಲ, ಬಿಡಿವಿಲ್ಲದ ಬದುಕಲ್ಲಿ ಒಂದಿಷ್ಟು ಬಿಡುವು ಮಾಡಿಕೊಂಡು ಆದಷ್ಟು ಬೇಗ ಓದಬೇಕೆಂಬ ಆಸೆ ಇದೆ.
Post a Comment