ಅನು ದಿನ, ನಿನ್ನ ನೆನೆದು ನೆನೆದು, ಮನವೂ ನಿನ್ನಲೇ ನಿಲ್ಲಲಿ...

18 Dec 2010

ಏಕೋ ಗೊತ್ತಿಲ್ಲ, ಮನಸ್ಸಿನ ತುಂಬ ಮಂಕು.

ಗೋಳು ಬರೆಯಬಾರದು ಅಂತ ದಿನಗಳನ್ನು ತಳ್ಳಿದ್ದಾಯ್ತು. ಮತ್ತದೇ ಬೇಸರವನ್ನು ಊರಿಗೆಲ್ಲ ಹಂಚೋದು ಸರಿಯಲ್ಲ ಅಂತ ಸುಮ್ಮನಿದ್ದಾಯ್ತು. ಆದರೆ, ಹಸಿ ನೆಲ ಹೊಕ್ಕ ಬೀಜದಂತೆ, ಬೇಸರ ಪಲ್ಲವಿಸಿ ಬೆಳೆಯುತ್ತಿದೆ. ಮತ್ತೆ ಅಲೆಮಾರಿಯಾಗುವ ಹುಚ್ಚು ಕನಸು ಮೈ ತುಂಬ.

ನನಗೆ ಗೊತ್ತು: ತುಂಬ ಜನರಿಗೆ ಇತರರ ದುಃಖಗಳ ಬಗ್ಗೆ, ನೋವಿನ ಬಗ್ಗೆ, ಅವರ ವ್ಯಥೆಯ ಬಗ್ಗೆ ಆಸಕ್ತಿ ಇರುವುದಿಲ್ಲ. ಇದ್ದರೂ ಅದು ಕೇವಲ ಕೆಲವೊಂದು ವಿಶೇಷ ಅನ್ನಬಹುದಾದ ಸಂದರ್ಭಗಳ ಬಗ್ಗೆ ಮಾತ್ರ. ನಗೆಯ ಹಿಂದೆ ಮರುಳಾದ ಮಗುವಿನಂತೆ ಈ ಜಗತ್ತು. ದುಃಖ ಅದಕ್ಕೆ ಬೇಡ. ವ್ಯಥೆ ಅದಕ್ಕೆ ಇಷ್ಟವಿಲ್ಲ. ಹೀಗಾಗಿ, ನೋವು ಹಂಚುವುದನ್ನು ನಾನು ಆದಷ್ಟು ದೂರ ತಳ್ಳುತ್ತೇನೆ.

ಆದರೆ, ಈ ಸಾರಿ ನೋವನ್ನು ಹಂಚಿಕೊಳ್ಳುತ್ತಿಲ್ಲ. ಅದನ್ನು ಹಂಚಿಕೊಳ್ಳುವುದರಲ್ಲಿ ನನಗೆ ನಂಬಿಕೆಯೂ ಇಲ್ಲ. ಇದು ನನ್ನ ದಾಖಲೆಗಾಗಿ ಮಾತ್ರ ಬರೆದುಕೊಂಡಿರುವಂಥದು. ಬ್ಲಾಗ್ ಬಿಟ್ಟರೆ ಬೇರೆ ಸಾರ್ವಜನಿಕ ಅಭಿವ್ಯಕ್ತಿ ಇಲ್ಲದ್ದರಿಂದ, ಇದನ್ನು ಇಲ್ಲಿ ಹಾಕುತ್ತಿದ್ದೇನೆ. ಇದರಾಚೆ ಓದುವ ಇಚ್ಛೆ ಇಲ್ಲದವರು, ಇಲ್ಲಿಗೇ ಮುಗಿಸಬಹುದು.

*****
ಹಿಂದೆಲ್ಲ ಒಮ್ಮೊಮ್ಮೆ ಹೀಗಾಗುತ್ತಿತ್ತು. ಇದ್ದಕ್ಕಿದ್ದಂತೆ ಮನಸ್ಸು ಮಂಕಾಗುತ್ತಿತ್ತು. ಇರುವುದೆಲ್ಲವನ್ನೂ ಬಿಟ್ಟು ದೂರ ಹೋಗುವ ಹುಚ್ಚು ಹಂಬಲ. ಇದಕ್ಕೆ ಯಾವುದೇ ಘಟನೆಯಾಗಲಿ, ಸಮಸ್ಯೆಯಾಗಲಿ, ಸಂದರ್ಭವಾಗಲಿ ಪ್ರೇರಣೆ ಆಗಿರುವುದಿಲ್ಲ. ಅದ್ಹೇಗೆ ಹುಟ್ಟುತ್ತದೋ, ಅದೆಲ್ಲಿಂದ ಒಕ್ಕರಿಸುತ್ತದೋ ಒಂದೂ ತಿಳಿಯುವುದಿಲ್ಲ. ಇರುವುದನ್ನೆಲ್ಲ ಹೀಗೇ, ಇದ್ದಕ್ಕಿದ್ದಂತೆ ಬಿಟ್ಟು ದೂರ ಹೋಗಿಬಿಡಬೇಕು. ಒಂದಷ್ಟು ದಿನ ಮಾತು ಮರೆತು ಬದುಕಬೇಕು. ಗಡಿಯಾರದ ಮುಖ ನೋಡದೇ, ಮನುಷ್ಯರ ಮುಖಗಳನ್ನು ಮರೆಮಾಚಿ, ಮಾನವ ನಿರ್ಮಿತ ವಸ್ತುಗಳಾಚೆ, ಜಗತ್ತಿನಾಚೆ ಹೋಗಿ ಇದ್ದುಬಿಡಬೇಕೆಂಬ ಹುಚ್ಚು ಹಂಬಲ. ಕಾಡುವ ಪ್ರಶ್ನೆಗಳಿಗೆ ಆ ಮೌನದಲ್ಲಿ ಉತ್ತರ ಸಿಕ್ಕೀತೆಂಬ ಆಸೆ. ಪುಸ್ತಕಗಳ ಹಂಗಿಲ್ಲದ, ಇಂಟರ್‌ನೆಟ್‌ನ ಜಾಲವಿಲ್ಲದ, ಯಾರೂ ಮಾತಾಡಿಸದ, ಯಾರಿಗೂ ಉತ್ತರ ಹೇಳಬೇಕಾದ ಅನಿವಾರ್ಯತೆ ಇರದ ಶುದ್ಧ, ನೀರವ ಜಗತ್ತಿನೊಳಗೆ ಹೋಗಿಬಿಡಬೇಕು. ನನ್ನ ಪಾಡಿಗೆ ನಾನು ಇದ್ದುಬಿಡಬೇಕು. ನೆನಪುಗಳನ್ನು ಬಿಟ್ಟು, ಕನಸುಗಳನ್ನು ಬಿಸುಟು ಒಬ್ಬನೇ ಹೋಗಿಬಿಡಬೇಕೆಂಬ ಹುಚ್ಚು ಆಸೆ.

ಕಳೆದ ಕಾಲು ಶತಮಾನದಿಂದ ಇಂಥದೊಂದು ಆಸೆ ಆಗಾಗ ಬರುತ್ತಿರುತ್ತದೆ. ತುಂಬ ಸಾರಿ ಪ್ರಶ್ನಿಸಿಕೊಂಡಿದ್ದೇನೆ: ಇಂಥದೊಂದು ಹುಚ್ಚು ಯಾಕೆ ಬರುತ್ತದೆ ಅಂತ. ಉತ್ತರ ಸಿಕ್ಕಿಲ್ಲ. ಒಮ್ಮೆ ಹೋಗಿ ನೋಡು, ಉತ್ತರ ಸಿಕ್ಕರೂ ಸಿಗಬಹುದು ಎನ್ನುತ್ತದೆ ಒಳಮನಸ್ಸು. ನಂಗೊತ್ತು, ನನ್ನ ಒಳಮನಸ್ಸು ನನ್ನನ್ನು ಇದುವರೆಗೆ ವಂಚಿಸಿಲ್ಲ, ಸುಳ್ಳು ಹೇಳಿಲ್ಲ, ಏನನ್ನೂ ಮರೆಮಾಚಿಲ್ಲ. ನನ್ನೊಬ್ಬನ ಕಿವಿಯಲ್ಲಿ, ಸದ್ದಿಲ್ಲದ ಶಬ್ದಗಳನ್ನು ಉಸುರುತ್ತ ನನ್ನನ್ನು ಪೊರೆಯುತ್ತಿರುತ್ತದೆ. ಅದರ ಮಾತನ್ನು ಉಲ್ಲಂಘಿಸಿದಾಗೆಲ್ಲ ಪೆಟ್ಟು ತಿಂದಿದ್ದೇನೆ. ನನ್ನತನ ಮರೆತಿದ್ದೇನೆ. ಕೆಲವೊಂದು ಶಾಶ್ವತ ನೋವಿನ ಘಟನೆಗಳಿಗೆ ಕಾರಣನಾಗಿದ್ದೇನೆ.

ಒಳಮನಸ್ಸು ಹಾಗೆ ಹೇಳಿದಾಗೆಲ್ಲ, ಯಾಕೆ ಒಮ್ಮೆ ಪ್ರಯತ್ನಿಸಬಾರದು ಅಂತ ಅನೇಕ ಸಲ ಅಂದುಕೊಂಡಿದ್ದೇನೆ. ಒಂದಿಷ್ಟು ದಿನ ಹಾಗೆ ಹೋಗಿಬಿಡಬೇಕು. ನನ್ನ ಪಾಡಿಗೆ ನಾನು. ಪುಸ್ತಕ, ಮೊಬೈಲ್, ಪೆನ್ನು, ಗಡಿಯಾರದ ಹಂಗಿಲ್ಲದಂತೆ. ಕನಿಷ್ಟ ಮಟ್ಟದ ಉಡುಪು ಮಾತ್ರ ತೆಗೆದುಕೊಂಡು ಹೋಗಬೇಕು. ಒಂದು ವೇಳೆ ಅವೂ ಕಳೆದುಹೋದರೆ ಬೇಸರ ಪಟ್ಟುಕೊಳ್ಳಬಾರದಷ್ಟು ಕನಿಷ್ಟ ವಸ್ತುಗಳನ್ನು ಒಯ್ಯಬೇಕು. ಊಟವಿಲ್ಲದೇ ವಾರವೋ, ಹತ್ತು ದಿನವೋ ಇವತ್ತಿಗೂ ಆರಾಮವಾಗಿ ಕಳೆಯಬಲ್ಲೆ ನಾನು. ಹೀಗಾಗಿ, ಊಟ ಸಿಗುತ್ತದೋ ಇಲ್ಲವೋ ಎಂಬ ಚಿಂತೆ ಖಂಡಿತ ಕಾಡದು.

ಹಾಗೆ ಸದ್ದಿಲ್ಲದೇ ಎದ್ದು ಹೀಗಿ, ದಿವ್ಯ ಮೌನದೊಳಗೆ ಕಳೆದುಹೋಗಬೇಕೆಂಬ ಕನಸು ಎಷ್ಟು ಬಲವಾಗಿ ಕಾಡುತ್ತದೆ ಎಂದರೆ, ನಿದ್ದೆ ಬರದು, ಹಸಿವೆ ಆಗದು, ಮಹತ್ವಾಕಾಂಕ್ಷೆಗಳು ಕಾಡವು. ಮಹಾನ್ ವ್ಯಾಮೋಹಿಗಳೇ ಇಂಥ ನಿರಾಸಕ್ತಿ ಹೊಂದಬಲ್ಲರು ಎಂಬುದನ್ನು ಎಲ್ಲೋ ಓದಿದ್ದೂ ನನ್ನ ಆಸೆಗೆ ಇಂಬು ಕೊಡುತ್ತಿದೆ. ಏಕೆಂದರೆ, ಏನೇ ಬಯಸಲಿ, ಅದನ್ನು ನಾನು ತುಂಬ ಉತ್ಕಟವಾಗಿ ಬಯಸುತ್ತೇನೆ. ಇಲ್ಲದಿದ್ದರೆ, ಪರಮ ನಿರಾಸಕ್ತಿ. ಅಪಾರ ತುಡಿತ ಅಥವಾ ಕಡು ನಿರಾಸಕ್ತಿಗಳೆರಡೂ ಅದ್ಹೇಗೆ ಒಟ್ಟೊಟ್ಟಿಗೇ ನೆಲೆಸಿವೆ ಅಂತ ನನಗೇ ಅಚ್ಚರಿಯಾಗುತ್ತದೆ. ಯಾವುದಕ್ಕೆ ಒಮ್ಮೆ ಅಪಾರವಾಗಿ ಹಂಬಲಿಸಿರುತ್ತೇನೋ, ಒಂದು ಹಂತದ ನಂತರ ಅದರ ಬಗ್ಗೆ ತೀವ್ರ ನಿರ್ಲಿಪ್ತತೆ ಬೆಳೆದುಬಿಡುತ್ತದೆ. ಈ ಮಾನಸಿಕ ಪಲ್ಲಟ ಅರಿಯದೇ ಹತ್ತಿರದವರು ತೀವ್ರ ಗೊಂದಲಗೊಳ್ಳುತ್ತಾರೆ. ನನ್ನ ಮನಃಸ್ಥಿತಿಯ ಬಗ್ಗೆ ಕಳವಳಪಡುತ್ತಾರೆ. ನನ್ನ ಹಿತಶತ್ರುಗಳಿಗೆ ಟೀಕಿಸಲು ಇದೇ ಸುಲಭ ಅಸ್ತ್ರವೂ ಹೌದು.

ಆದರೆ, ನನಗೆ ಮಾತ್ರ ಸದಾ ಗೊಂದಲ. ಏಕೆ ಹೀಗಾಗುತ್ತದೋ ಗೊತ್ತಿಲ್ಲ. ಆದರೆ, ಇದರಿಂದ ನನಗೆ ಅಂಥ ಕೆಡುಕೇನೂ ಆಗಿಲ್ಲ. ಗೊಂದಲವಿದ್ದರೆ ಅದು ನನ್ನೊಳಗೇ ಇರುತ್ತದೆ. ಆಗೆಲ್ಲ ಅಂತರ್ಮುಖಿಯಾಗಿಬಿಡುತ್ತೇನೆ. ಮಾತು ಹಿಡಿಸುವುದಿಲ್ಲ. ನನ್ನ ಪಾಡಿಗೆ ನಾನಿದ್ದುಬಿಡುತ್ತೇನೆ. ಮೂಡ್ ಸ್ವಿಂಗ್ ಅಂದರೆ ಇದೇನಾ ಅಂತ ಅಚ್ಚರಿಯಾಗುತ್ತದೆ. 


ಏಕೋ ಡಲ್ಲಾಗಿದ್ದೀಯಲ್ಲ? ಅಂತಾರೆ ಮನೆಯವರು, ಮಿತ್ರರು. ಏನು ಹೇಳುವುದು? ಉತ್ತರ ಗೊತ್ತಿದ್ದರೆ ತಾನೆ? ಇಂಥ ಸಂದರ್ಭಗಳು ಇನ್ಯಾವುದೋ ಗೊಂದಲಗಳಿಗೆ ಕಾರಣವಾಗಿ, ಒಟ್ಟಾರೆ ಪರಿಸ್ಥಿತಿಯೇ ಹದಗೆಟ್ಟು ಹೋಗಿದ್ದೂ ಇದೆ. ಅದು ನನ್ನನ್ನು ಇನ್ನಷ್ಟು ಆಳಕ್ಕೆ ನೂಕುತ್ತದೆ. ಮತ್ತಷ್ಟು ಅಂತರ್ಮುಖಿಯಾಗಿಸುತ್ತದೆ.

ಇದೊಂದು ಸಮಸ್ಯೆಯೇ ಹೊರತು ದೈವಿಕ ಗುಣವೇನಲ್ಲ ಅಂತ ನನಗೆ ತೀವ್ರವಾಗಿ ಅನಿಸಿದ್ದು, ಈಗ ಹದಿನೈದು ವರ್ಷಗಳಿಂದ. ಅಲ್ಲಿಯವರೆಗೆ ಇದೊಂದು ಸಿದ್ಧಪುರುಷನ ಮನಃಸ್ಥಿತಿ ಅಂತ ಅಂದುಕೊಂಡು ಬಹಳ ಹೆಮ್ಮೆಪಡುತ್ತಿದ್ದೆ. ಆದರೆ, ಏರ್‌ಫೋರ್ಸ್‌ನಿಂದ ನಾಗರಿಕ ಜೀವನಕ್ಕೆ ಹಿಂತಿರುಗಿದ ಮೇಲೆ ಈ ಮನಃಸ್ಥಿತಿ ನನ್ನನ್ನು ಇನ್ನಿಲ್ಲದ ಕಷ್ಟಗಳಿಗೆ ನೂಕಿತು. ಬಹುಶಃ ನನ್ನನ್ನು ಕಾಡುವ ಖಿನ್ನತೆಗೆ ಇದೂ ಒಂದು ಮುಖ್ಯ ಕಾರಣವೇನೋ.

ಕ್ರಮೇಣ ಪರಿಸ್ಥಿತಿ ಬಿಗಡಾಯಿಸಿತು. ಒಂಟಿಯಾಗಿ ಇರಬಯಸುವ ವ್ಯಕ್ತಿಯನ್ನು ಜಗತ್ತು ನೋಡುವ ರೀತಿಯೇ ಬೇರೆ. ಅಂಥವನು ಯಾರಿಗೂ ಬೇಡವಾದ ವ್ಯಕ್ತಿ. ಏಕೆಂದರೆ, ಅವನು ಯಾರೊಂದಿಗೂ ಬೆರೆಯುವುದಿಲ್ಲ. ಅವನಿಂದ ಜಗತ್ತಿಗೆ ಯಾವುದೇ ಲಾಭವಿಲ್ಲ. ಜಗತ್ತಿನ ಓಟದ ಗತಿಗೆ ಅವ ಸ್ಪಂದಿಸಲಾರ. ಜಗತ್ತಿನ ಕೊಡುಗೆಗಳನ್ನು ಸ್ವೀಕರಿಸಲಾರ. ಅನುಭವಿಸಲಾರ. ಅದಕ್ಕೆ ತನ್ನ ಕೊಡುಗೆ ಸೇರಿಸಲಾರ. ಅಂಥವನನ್ನು ಜಗತ್ತು ಆದರಿಸೀತಾದರೂ ಹೇಗೆ?

ಕ್ರಮೇಣ ನಾಗರಿಕ ಸಮಾಜ ನನ್ನನ್ನು ತಿರಸ್ಕರಿಸಿತು. ಅದು ತಿರಸ್ಕರಿಸಿದಷ್ಟೂ ನಾನು ಅಂತರ್ಮುಖಿಯಾದೆ. ನನ್ನೊಳಗೇ ನಾನು ಇರತೊಡಗಿದೆ. ಬರೆಯುವ ಹುಚ್ಚೊಂದು ಇಲ್ಲದಿದ್ದರೆ, ಈ ಜಗತ್ತಿನ ಪಾಲಿಗೆ ನಾನು ಇಷ್ಟೊತ್ತಿಗೆ ಕಳೆದುಹೋಗಿರುತ್ತಿದ್ದೆ.


ಮುಂದೆ ಪತ್ರಿಕೋದ್ಯಮ ಸೆಳೆಯಿತು. ಪೂರ್ವಾನುಭವ ಇಲ್ಲದ, ಸಾಂಪ್ರದಾಯಿಕ ಶಿಕ್ಷಣ ಪಡೆಯದ ನನ್ನಂಥವನಿಗೆ ಪತ್ರಿಕೋದ್ಯಮದಲ್ಲಿ ನೌಕರಿ ಸಿಗುತ್ತದೆ ಅಂತ ಖಂಡಿತ ಅಂದುಕೊಂಡಿರಲಿಲ್ಲ. ಬರೆಯುವ ಹುಚ್ಚು, ಬರೆದಿದ್ದನ್ನು ತಿದ್ದುವ ಹುಚ್ಚುಗಳೆರಡೂ ನೌಕರಿ ಕೊಡಿಸಿದವು. ಕೊನೆಗೂ ದಡ ಸೇರಿದ ಅಂದುಕೊಂಡೆ.

ಆದರೆ, ಮತ್ತೆ ನಿರಾಶೆ. ಸಂಸ್ಥೆಯಿಂದ ಸಂಸ್ಥೆಗೆ ಜಿಗಿತ. ಇನ್ನಿಲ್ಲಿ ಇರಲು ಆಗದು ಅಂತ ಅನಿಸಿದಾಗೆಲ್ಲ ಕೊಡು ರಾಜೀನಾಮೆ, ಪಡೆ ನಿರುದ್ಯೋಗ ಎಂಬ ಸ್ಥಿತಿ. ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಸರ್ವೀಸ್‌ ಮಾಡಿದ ನಂತರ, ಸಂಸ್ಥೆಗಳ ಹಂಗೇ ಬೇಡ ಅಂತ ಆಗಾಗ ಒಂದೆರಡು ವರ್ಷ ಕಡ್ಡಾಯ ರಜೆಯನ್ನೂ ಅನುಭವಿಸಿದ್ದಾಯ್ತು. ಬದುಕು ಹೇಗೋ ಸಾಗುತ್ತದೆ ಎಂಬುದು ಪಕ್ಕಾ ಆದ ನಂತರ, ನಿರುದ್ಯೋಗದ ತೀವ್ರತೆಯೂ ತಾಕದಂತಾಯ್ತು. 

ಆಗ ಮತ್ತೆ ಎದ್ದು ನಿಂತಿತು- ಇರುವುದೆಲ್ಲವ ಬಿಟ್ಟು ದೂರ ಹೋಗುವ ತುಡಿತ. 

ಏರ್‌ಫೋರ್ಸ್‌‌ನ ನೀರವ ಸಂಜೆ, ರಾತ್ರಿಯ ದಿನಗಳು ಮತ್ತೆ ಮತ್ತೆ ನೆನಪಾಗುತ್ತವೆ. ಅರೆ ಮರುಭೂಮಿಯ ಬೋಳು ದಿಣ್ಣೆಗಳ ಪ್ರಶಾಂತ ಮೌನ, ಎರಡೂ ಕೈ ಚಾಚಿದರೂ, ಅದರಾಚೆ ಹಿಗ್ಗುವಷ್ಟು ದೊಡ್ಡದಾಗಿ ಕಾಣುವ ಸಂಜೆ ಸೂರ್ಯ, ವಿರಳ ಹಕ್ಕಿಗಳು, ಅತಿ ವಿರಳ ಜನವಸತಿ, ಮೈಲುಗಟ್ಟಲೇ ಬೋಳು ಬಿದ್ದ ನೆಲ, ಅದರಾಚೆ ತಣ್ಣಗೇ ಇರುವ ಪಾಕಿಸ್ತಾನದ ಗಡಿ, ಒಂಟೆಗಳು, ಕಡುಕಪ್ಪು ಗಡಿ ಹೆದ್ದಾರಿ, ಸಿಂಧಿ ಹಸುಗಳು, ಗುಜರಾತಿ ಗೌಳಿಗರು, ಅಪರೂಪಕ್ಕೊಮ್ಮೆ ಕೇಳಿ ಬರುವ ಮನಕಲಕುವ ತಂತಿ ವಾದ್ಯ, ಅಪರೂಪಕ್ಕೊಮ್ಮೆ ಭರ‍್ರೋ ಎಂದು ಓಡುವ ಬಸ್‌ಗಳು, ಟ್ರಕ್‌ಗಳು, ಯಾರೋ ನಡೆದು ಹೋದ ಮಂಕು ಕಾಲ್ದಾರಿ, ನನ್ನ ಸ್ಪೋರ್ಟ್ಸ್‌ ಶೂಗಳ ಗುರುತು, ಸೂರ್ಯ ಮುಳುಗುತ್ತಿದ್ದಂತೆ ಮೆದುವಾಗಿ ಬೀಸತೊಡಗುವ ತಂಗಾಳಿ, ಹುಟ್ಟೂರು ಅಳವಂಡಿಯ ಸಾವಿರ ಸಾವಿರ ನೆನಪುಗಳು, ಅಷ್ಟೇ ಪ್ರಮಾಣದ ನಿರಾಶೆಗಳು, ಮೊಗೆದಷ್ಟೂ ಜಿನುಗುವ ಒಡನಾಡಿ ಖಿನ್ನತೆ-   

ನೆನಪುಗಳ ಮೆರವಣಿಗೆಗೆ ಕೊನೆಯೆಲ್ಲಿ?  

ಇತ್ತೀಚೆಗೆ ಅವೆಲ್ಲ ಮತ್ತೆ ಮತ್ತೆ ನೆನಪಾಗುತ್ತಿವೆ. ಬದುಕು ಸವಿಯುವ ಸಮಯದಲ್ಲೇ ಶುರುವಾಗುತ್ತದಾ ವಾನಪ್ರಸ್ಥಾಶ್ರಮದ ಹಂಬಲ? 

ನಿದ್ರೆ ದೂರವಾಗಿ, ಹಸಿವು ಇಂಗಿ ಹೋಗಿ, ಕನಸುಗಳು ಮುರುಟುವ ಸಮಯ ಹತ್ತಿರ ಬಂದಿತೆ? ಅಂತ ಕಳವಳಪಡುತ್ತೇನೆ. ಯಾರದೋ ಕನಸಿಗೆ ಕೈ ಹಾಕಿದೆನಾ ಎಂಬ ಅಪರಾಧಿ ಭಾವ. ಪಡೆಯುವುದಕ್ಕೆ ಮುನ್ನವೇ ಕಳೆದುಕೊಂಡ ಕನಸುಗಳು ಮತ್ತೆ ಮತ್ತೆ ಮೊಳೆಯುತ್ತವೆ. ಮತ್ತೆ ಮತ್ತೆ ಸಾಯುತ್ತವೆ. ಖಿನ್ನತೆಯ ಪಳೆಯುಳಿಕೆಗಳನ್ನು ಬಿಟ್ಟು ಇಲ್ಲವಾಗುತ್ತವೆ. 

ಮನಸ್ಸು ದೂರ ಹೋಗಬಯಸುತ್ತದೆ. 

ನಿತ್ಯದ ಶಬ್ದಗಳಾಚೆ, ವಾಸನೆಗಳಾಚೆ, ಭಾವನೆಗಳಾಚೆ, ವಿದ್ಯುತ್ತಿಲ್ಲದ ಶುದ್ಧ ಕತ್ತಲಿನ ಕಡೆಗೆ, ಮಾಲಿನ್ಯವಿಲ್ಲದ ಮೆದು ತಂಗಾಳಿಯತ್ತ, ದೃಷ್ಟಿ ಹರಿಸಿದಷ್ಟೂ ದೂರಕ್ಕೆ ಇರುವ ಮಹಾಮೌನದ ಕಡೆಗೆ ಮನಸ್ಸು ಮತ್ತೆ ಮತ್ತೆ ಹರಿಯುತ್ತದೆ. ಒಂದೊಂದೇ ಬಂಧನಗಳನ್ನು ಕಡಿದುಕೊಳ್ಳಬೇಕು. ಒಂದೊಂದೇ ತಂತುಗಳನ್ನು ಹರಿಯಬೇಕು. ಕೊರಳಪ್ಪಿ ಮಲಗಿದ್ದ ಮಗುವಿನ ಮೆದುಕೈಗಳನ್ನು ಹುಷಾರಾಗಿ ಪಕ್ಕಕ್ಕೆ ಸರಿಸುವಂತೆ, ಉಕ್ಕಿ ಬರುವ ಸುನೀತ ಭಾವನೆಗಳನ್ನು ಹುಷಾರಾಗಿ ತಳ್ಳಿ ಎದ್ದು ಹೋಗಬೇಕು. ಹೆಜ್ಜೆಗಳ ಸದ್ದಾಗದಂತೆ, ನಿಟ್ಟುಸಿರು ಬಿರುಗಾಳಿಯಾಗದಂತೆ, ಎಲ್ಲಾ ತರಂಗಗಳನ್ನು ಅಲ್ಲಲ್ಲೇ ನಿಲಿಸಿ, ಮೌನವಾಗಿ ದೂರವಾಗಬೇಕು. 

ರಾತ್ರಿ ತುಂಬ ಹೊತ್ತು ಕೂತು ಯೋಚಿಸುತ್ತೇನೆ. ಮನುಷ್ಯ ಸಂಬಂಧಗಳ ವಿಚಿತ್ರ ತಂತುಗಳು ಮತ್ತೆ ಮತ್ತೆ ಕೆಣಕುತ್ತವೆ. ವ್ಯಕ್ತಿಯೊಬ್ಬನ ಪಾತ್ರ ಪ್ರಪಂಚ ಅಚ್ಚರಿ ಹುಟ್ಟಿಸುತ್ತದೆ. ನಾನು ಯಾರಿಗೋ ಮಗ, ಮೊಮ್ಮಗ, ಗಂಡ, ತಂದೆ, ಅಣ್ಣ, ತಮ್ಮ, ಗೆಳೆಯ, ಶತ್ರು, ಸಹೋದ್ಯೋಗಿ, ಗ್ರಾಹಕ, ತಪ್ಪಿತಸ್ಥ, ಪ್ರೀತಿಪಾತ್ರ, ಸ್ಪರ್ಧಿ, ಅನಾಮಧೇಯ, ಹಿರಿಯ, ಕಿರಿಯ, ಸಮವಯಸ್ಕ, ಸಮಾನ ಮನಸ್ಕ, ನಿರ್ದಯಿ, ದಯಾಮಯಿ, ನಿರುಪಯೋಗಿ, ಮಾದರಿ-  

ಪಟ್ಟಿ ವಿಸ್ತರಿಸುತ್ತಲೇ ಹೋಗುತ್ತದೆ. 

ಇವೆಲ್ಲ ಸಂಬಂಧಗಳನ್ನು, ಇದ್ದಕ್ಕಿದ್ದಂತೆ, ಈಗಿಂದೀಗಲೇ, ಇನ್ನಿಲ್ಲದಂತೆ ಕತ್ತರಿಸಿ ಎಲ್ಲಿಗೆ ಹೋಗಬೇಕು? ಎಲ್ಲೋ ಹೋಗಬೇಕೆಂಬ ತುಡಿತವೇ ಮತ್ತೊಂದು ಬಂಧನವಲ್ಲವೆ? ಅಲ್ಲಿ ಇನ್ಯಾರಿಗೋ ನಾನು ಇನ್ನೇನೋ ಆಗುತ್ತೇನೆ. ಏನೋ ಪಡೆಯಬೇಕೆಂದು ಹೋದವ ಇನ್ನೇನನ್ನೋ ಪಡೆಯಬೇಕಾದೀತು. ಹುಡುಕುತ್ತ ಹೋಗಲು, ನಾನು ಕಳೆದುಕೊಂಡಿದ್ದಾದರೂ ಏನು? ಎಲ್ಲಿ ಕಳೆದುಕೊಂಡೆ? 

ಡಿಜಿಟಲ್‌ ಗಡಿಯಾರದಲ್ಲಿ ಅಂಕೆಗಳು ಸದ್ದಿಲ್ಲದೇ ಬದಲಾಗುತ್ತವೆ. ಹೊರಗೆಲ್ಲೋ ದೂರ ಗೂರ್ಖಾನ ಸೀಟಿ ಸದ್ದು. ಅಲ್ಲೆಲ್ಲೂ ವರ್ತುಲ ರಸ್ತೆಯಲ್ಲಿ ಹಾಲಿನ ವ್ಯಾನು ಹೋಗುತ್ತಿರಬೇಕು. ಕಿರಿಯ ಮಗಳು ನಿದ್ದೆಯಲ್ಲೇ ಮುಲುಕುತ್ತಾಳೆ. ನಿದ್ದೆಯಲ್ಲೇ ತಾಯಿಯ ಮಮತೆಯ ಕೈ ಅವಳನ್ನು ಸಂತೈಸಿರಬೇಕು, ಸದ್ದು ನಿಲ್ಲುತ್ತದೆ. ಕೀಲಿಮಣೆಯಿಂದ ಕೈ ತೆಗೆದವ ಶಬ್ದ ನಿಶ್ಯಬ್ದವಾಗುವ ಪರಿ ನೆನೆಯುತ್ತ ಅಚ್ಚರಿಪಡುತ್ತೇನೆ.

ಮನಸೇ ಮನಸಿನ ಮನಸಾ ನಿಲ್ಲಿಸುವುದು ಎಂಬ ಶಿಶುನಾಳ ಶರೀಫಜ್ಜನ ಮಾತು ಮತ್ತೆ ಕೆಣಕುತ್ತದೆ. ಮನಸೆಂಬ ನಿತ್ಯ ಹರಿವ ನೀರಿಗೆ ನಿಲುಗಡೆಯಾದರೂ ಎಲ್ಲಿದೆ ಅಜ್ಜಾ? ಎಂದು ಮೌನವಾಗಿ ಕೇಳುತ್ತೇನೆ. ‘ಹೊರಗಿರುವ ಪರಿ ಎಲ್ಲಾ ಅಡಗಿಹುದೇ ಒಳಗೆ. ಹುಡುಕಿದರೆ ಕೀಲಿ ಕೈ ಸಿಗದೇ ಎದೆಯೊಳಗೆ...’ ಎಂಬ ಭಾವಗೀತೆ ನೆನಪಾಗುತ್ತದೆ. ಎಲ್ಲಿ ಹುಡುಕಲಿ? ಏನಂತ ಕೇಳಲಿ? ಮಾತಿಲ್ಲದೇ ಎಲ್ಲ ತಿಳಿಸುವ ಜಾಣೆಯಂತೆ ಈ ಮನಸು ಎಂದು ಬೈದುಕೊಂಡು ಸುಮ್ಮನಾಗುತ್ತೇನೆ. 

ಬರೆದ ಬಿಡಿಗನಸುಗಳನ್ನೆಲ್ಲ ಒಮ್ಮೆ ಓದಿ, ಕಂಪ್ಯೂಟರ್‌ ಆಫ್‌ ಮಾಡಿ, ಕ್ಷಣ ಕಾಲ ಮೌನವಾಗಿ ರೂಮನ್ನು ದಿಟ್ಟಿಸುತ್ತೇನೆ. ಸಾಲಾಗಿ ಕೂತ ಪುಸ್ತಕಗಳು, ಓದಿಸಿಕೊಳ್ಳಲು ಸಿದ್ಧವಾದ ಪತ್ರಿಕೆಗಳು, ಬರೆಯಲು ಸಿದ್ಧವಾದ ಪೆನ್ನುಗಳು, ಮಾತನಾಡೆಂದು ಆಹ್ವಾನಿಸುವ ಫೋನ್‌ ಮೌನವಾಗಿ ಕರೆಯುತ್ತವೆ. ಇನ್ನೆರಡು ತಾಸು ಕಳೆದರೆ ಗಂಟೆ ಐದಾಗಿರುತ್ತದೆ. ಮೆದುವಾಗಿ ನಡುಗಿಸುವ ಡಿಸೆಂಬರ್‌ ಚಳಿಯಲ್ಲಿ ಬೆಳಗಿನ ಮೊದಲ ಚಟುವಟಿಕೆಗಳ ಸದ್ದು ಕೇಳುವ ಸಮಯ ಅದು. ಈಗ ಮಲಗಿದರೆ ನಿದ್ದೆಯೂ ಬರದು, ಎದ್ದು ಕೂಡುವ ಮನಸ್ಸೂ ಬಾರದು ಅಂತ ಮಲಗುವ ವಿಚಾರ ಕೈ ಬಿಡುತ್ತೇನೆ.  

ಸದ್ದಾಗದಂತೆ ಬಾಗಿಲು ತೆರೆದು ಮಲಗಿದ್ದ ಮಕ್ಕಳನ್ನು ದಿಟ್ಟಿಸುತ್ತೇನೆ. ನಾನು ಬಂದೆನೆಂಬುದನ್ನು ಅದ್ಹೇಗೆ ಅರ್ಥ ಮಾಡಿಕೊಂಡಿತೋ ಏನೋ, ಸಣ್ಣವಳು ಮುಲುಗುತ್ತಾಳೆ. ಹತ್ತಿರ ಹೋಗಿ ಮೈದಡವುತ್ತೇನೆ. ನಿದ್ದೆಯಲ್ಲೇ ಬೆರಳ್ಹಿಡಿದುಕೊಂಡು ಹಾಗೇ ನಿದ್ದೆಗೆ ಜಾರುತ್ತಾಳೆ.  

ನನ್ನನ್ನು ದೂರ ಹೋಗದಂತೆ ಕಾಪಿಟ್ಟಿದ್ದು ಇಂಥ ಎಳೆ ಕೈಗಳಾ? ಅಥವಾ  ಸುನೀತ ಭಾವಗಳಾ? 

ಯೋಚಿಸುತ್ತ ಕೂತವನನ್ನು ಐದು ಗಂಟೆಗೆ ಮೊಬೈಲ್ ಅಲಾರಾಂ ಎಚ್ಚರಿಸುತ್ತದೆ. ಮಗಳಿಂದ ಕೈ ಬಿಡಿಸಿಕೊಂಡು, ಪ್ರಾತಃರ್ವಿಧಿಗಳತ್ತ ಗಮನ ಹರಿಸುತ್ತೇನೆ. ಐದೂವರೆಗೆ ಕಚೇರಿ ಕ್ಯಾಬ್‌ ಮನೆ ಮುಂದೆ ಬಂದು ನಿಂತ ಸದ್ದು. ಹುಷಾರಾಗಿ ಬಾಗಿಲು ಮುಚ್ಚಿ, ಕಿರ್‌ ಎನ್ನುವ ಗೇಟನ್ನು ಮೆಲ್ಲಗೇ ತೆರೆದು ವಾಹನ ಸೇರಿಕೊಳ್ಳುತ್ತೇನೆ.

ಅಲ್ಲಿ ಡ್ರೈವರ್‌ನ ನಿದ್ದೆಗಣ್ಣಿನ ಮುಗುಳ್ನಗು ಸ್ವಾಗತಿಸುತ್ತದೆ. 

ನಿನ್ನೆ ನಿದ್ದೆ ಆಗಲಿಲ್ವಾ? ಎಂದು ವಿಚಾರಿಸುತ್ತೇನೆ. ‘ಇಲ್ಲ ಸಾರ್‌. ರಾತ್ರಿಯೆಲ್ಲ ಬರೀ ಕ್ರೈಮ್‌ ಸುದ್ದಿಗಳೇ. ಒಂದು ಮರ್ಡರು, ಎರಡು ಕಳ್ಳತನ...’ ಆತ ವರದಿ ಒಪ್ಪಿಸುತ್ತ ಗಾಡಿ ಶುರು ಮಾಡುತ್ತಾನೆ. ನಿಮ್ಮ ನಿದ್ದೆಯಾಯ್ತಾ? ಎಂದು ಪ್ರಶ್ನಿಸುತ್ತಾನೆ.

ಇಲ್ಲ ಮಾರಾಯಾ ಎನ್ನುತ್ತೇನೆ. ಆದರೆ, ಮನಸ್ಸು ಯೋಚಿಸತೊಡಗುತ್ತದೆ: ನಾನೆಷ್ಟು ಮರ್ಡರ್‌ ಮಾಡಿದೆ? ಕಳ್ಳತನಗಳೆಷ್ಟು? 

ಗೊಂದಲಗೊಳ್ಳತೊಡಗಿದಾಗ ಚಂದ್ರಾಲೇಔಟ್‌ ಕಡೆಯಿಂದ ಪೂರ್ವದ ತಂಗಾಳಿ  ಮೆದುವಾಗಿ ತಾಕುತ್ತದೆ. ಕ್ಯಾಬ್‌ ಅತ್ತ ಕಡೆಗೇ ಶರವೇಗದಿಂದ ಧಾವಿಸುತ್ತದೆ. ಎಫ್‌.ಎಂ.ನಲ್ಲಿ ಮೆದು ಭಕ್ತಿಗೀತೆ. ‘ಅನು ದಿನ, ನಿನ್ನ ನೆನೆದು ನೆನೆದು, ಮನವೂ ನಿನ್ನಲಿ ನಿಲ್ಲಲಿ...’ 

ಅರೆ ಕ್ಷಣ ಕಣ್ಮುಚ್ಚುತ್ತೇನೆ. ಸುನೀತ ಭಾವವೊಂದು ತಂಗಾಳಿ ಜೊತೆಜೊತೆಗೆ ಆವರಿಸತೊಡಗುತ್ತದೆ. ಮನದೊಳಗೊಂದು ಪ್ರಶ್ನೆ ಎದ್ದು ನಿಲ್ಲುತ್ತದೆ: 

ನನ್ನನ್ನು ದೂರ ಹೋಗದಂತೆ ತಡೆದಿದ್ದು ಇದೇನಾ?   

- ಚಾಮರಾಜ ಸವಡಿ

5 comments:

ವಿನಾಯಕ ಕೆ.ಎಸ್ said...

sir,
olle baraha ista aaytu. nimmante halavarige annisuttade anta nanage eega gottaytu!
-kodsara

Chamaraj Savadi said...

ಸಮಾನಸ್ತರದಲ್ಲಿ ತುಂಬ ಜನ ವಿಚಾರ ಮಾಡುತ್ತಿರುತ್ತಾರೆ ವಿನಾಯಕ್‌. ಹೀಗಾಗಿ, ಇನ್ನೊಬ್ಬರ ಬರಹ, ಕೃತಿ, ಪ್ರಸ್ತುತಿಯನ್ನು ಆಸ್ವಾದಿಸುವುದು ನಮಗೆ ಸಾಧ್ಯವಾಗುತ್ತದೆ. ಅನಿಸಿದ್ದನ್ನು ಅನಿಸಿದಂತೆ ಬರೆಯುತ್ತ ಹೋಗುವುದೇ ಉತ್ತಮ ಮಾರ್ಗ. ಮೆಚ್ಚಿದ್ದಕ್ಕೆ ಥ್ಯಾಂಕ್ಸ್‌. :)

ಗುರುರಾಜ ಕುಲಕರ್ಣಿ said...

ನಮಸ್ಕಾರ ಚಾಮರಾಜ್,

ಇವತ್ತು ಏಕೋ ಬೆಳಗ್ಗಿನಿಂದಲೇ ನನ್ನ ಮನಸು ತುಂಬಾ ಉದಾಸವಾಗಿತ್ತು,ಕಾರಣವಿಲ್ಲದೇ! ಈಗ ತಾನೇ ನಿಮ್ಮ ಬರಹ ಓದಿದೆ,ತುಂಬಾ ಸಮಾಧಾನವಾಯ್ತು! ಯಾಕೆ ಗೊತ್ತಾ? ಈ ಅಂತರ್ಮುಖತೆಯ ರೋಗ ನನಗೊಬ್ಬನಿಗೆ ಇಲ್ಲ ಅಂತ.

Chamaraj Savadi said...

ತುಂಬ ಜನರಿಗೆ ಅಂತರ್ಮುಖತೆ ಇರುತ್ತದೆ ಗುರುರಾಜ್‌. ಅದೊಂಥರಾ ಒಳ್ಳೇದೇ ಬಿಡಿ.

ಮೌನಿ said...

ಸರ್. ಬಹಳ ದಿನ ಆಗಿತ್ತು. ನಿಮ್ಮನ್ನ ನೋಡಿ. ನಿಮ್ಮ ಬ್ಲಾಗ್ ಓದಿ. ಶ್ಯಾನೆ ಇಷ್ಟ ಆಯ್ತು. ಅಷ್ಟೇ ಕಷ್ಟವೂ.....ಅನುದಿನವೂ ಕಾಡದಿರಲೀ ಸುನೀತಭಾವಗಳು...