ನಕ್ಷತ್ರಗಳಿಗೊಂದು ಮೊರೆ

16 Apr 2011

ಹೊರಗೆ ಸಣ್ಣಗೆ ಮಳೆ.
ಒಳಗೆ ದಟ್ಟೈಸಿದ ಕಾರ್ಮೋಡ. ಮಿಂಚಿಲ್ಲ, ಗುಡುಗಿಲ್ಲ. ಹನಿಯುತ್ತಿರುವ ಸೋನೆ ಮಳೆ ಬಿರುಮಳೆಯಾಗುವ ಸೂಚನೆಯೂ ಇಲ್ಲ.
ನನ್ನ ಹುಟ್ಟೂರು ಅಳವಂಡಿ ನೆನಪಾಗುತ್ತಿದೆ. 
ಯಾವುದೇ ಸಣ್ಣ ಖುಷಿಯಿರಲಿ, ನೋವಿರಲಿ, ವಂಚನೆ ಆಘಾತ ಕಳವಳ ಖಿನ್ನತೆ ಅಪರಾಧಿ ಭಾವನೆ- ಹೀಗೆ ಯಾವ ಭಾವ ಉಕ್ಕಿದರೂ ಜೊತೆಗೆ ಊರ ನೆನಪು ಉಕ್ಕುತ್ತದೆ. ಇವತ್ತೂ ಹಾಗೇ ಆಯಿತು. ಬಹುದಿನಗಳಿಂದ ರೂಢಿ ಮಾಡಿಕೊಂಡಿರುವ, ಇನ್ನೂ ಅನಾವರಣಗೊಳ್ಳಬೇಕಾಗಿರುವ ವೆಬ್‌ಸೈಟೊಂದಕ್ಕೆ ಎಂದಿನಂತೆ ದಿನದ ಸುದ್ದಿಗಳನ್ನು ಪೋಣಿಸುತ್ತಿದ್ದ ಹೊತ್ತಿನಲ್ಲಿ, ಸದ್ದಿಲ್ಲದೇ ಕರೆಂಟ್ ಮಾಯ. ನಾನಿದ್ದೇನೆ ಬಿಡು ಎಂಬಂತೆ ಯುಪಿಎಸ್ ವಿದ್ಯುತ್ ಬೆಳಗಿದರೂ ಹೊರಗೆ ಓಣಿಯಲ್ಲೆಲ್ಲ ಕವಿದ ಕತ್ತಲಲ್ಲಿ, ಲೈಟಿರುವ ನನ್ನ ಮನೆ ವಿಚಿತ್ರವಾಗಿ ಕಾಣುತ್ತಿದೆ. ಮನೆಯೊಳಗಿನ ಅನಗತ್ಯ ದೀಪಗಳನ್ನಾರಿಸಿ, ಮತ್ತೆ ನನ್ನ ಕೋಣೆಯಲ್ಲಿ ಬಂದು ಕೂತೆ. 
ಹೊರಗೆ ಬೆಳಕಿದ್ದರೂ ಒಳಗೆ ಕತ್ತಲು.
ನನ್ನ ಬಹುತೇಕ ಬದುಕು ಸಾಗಿ ಬಂದ ಪರಿಗೆ ಸಾಕ್ಷಿಯೆಂಬಂತೆ ಈ ವೈರುದ್ಧ್ಯ ರಾಚುತ್ತದೆ. ಹೊರಗೆ ಬೆಳಕಿದ್ದಾಗ ನನ್ನೊಳಗೆ ಕತ್ತಲು, ಒಳಗೆ ಬೆಳಕು ಅರಳಿ ನಿಂತ ಹೊತ್ತಿನಲ್ಲಿ ಹೊರಗೆ ಕತ್ತಲು ಕವಿದಿರುತ್ತದೆ. ಸ್ವಾನುಕಂಪವಲ್ಲ. ಹುಚ್ಚುತನವೂ ಅಲ್ಲ. ಎಷ್ಟೋ ಸಾರಿ ಈ ವೈರುದ್ಧ್ಯ ಕುರಿತು ಯೋಚಿಸಿದ್ದೇನೆ. ಪದೆ ಪದೆ ಏಕೆ ಹೀಗಾಗುತ್ತದೆ ಅಂತ ಅಚ್ಚರಿಪಟ್ಟಿದ್ದೇನೆ. ಬ್ಯಾಟಿಂಗ್ ಬರುವ ಹೊತ್ತಿಗೆ ಓವರ್‌ಗಳು ಮುಗಿದಂತೆ, ನಿರೀಕ್ಷಿಸಿದ್ದು ಬಂತೆಂಬ ಸಡಗರದಿಂದ ಎದ್ದು ನಿಲ್ಲುವ ಮುನ್ನವೇ ಅದು ಸದ್ದಿಲ್ಲದೇ ಇಲ್ಲವಾಗಿರುತ್ತದೆ.
ಹೊರಗೆ ಸಣ್ಣಗೆ ಮಳೆ.
ಸುದ್ದಿ ಜೋಡಿಸಿಯಾಯ್ತು. ದಿನದ ಮುಖ್ಯ ಘಟ್ಟವೊಂದು ಮುಗಿದ ನಿರಾಳತೆ. ಸಿದ್ಧಗೊಳ್ಳುತ್ತಿರುವ ವೆಬ್‌ಸೈಟ್‌ನಲ್ಲಿ ಈ ಸುದ್ದಿಗಳು ಹೇಗೆ ಕಾಣಬಹುದೆಂಬ ಬಸಿರಿ ತಾಯಿಯ ಕನಸೊಂದು ಎಂದಿನಂತೆ ಅರಳುತ್ತದೆ. ಕೆಲ ಕ್ಷಣ ಆ ನಿರಾಳತೆಯಲ್ಲಿ ಮನಸಾರೆ ಮುಳುಗುತ್ತೇನೆ. 
ಆದರೆ, ಅದು ಕೆಲ ಕ್ಷಣಗಳ ಕಾಲ ಮಾತ್ರ.
ಸಣ್ಣಗೇ ಉಕ್ಕತೊಡಗುವ ಖಿನ್ನತೆ ಊರಿನ ನೆನಪುಗಳನ್ನು ಹೊತ್ತು ತರುತ್ತದೆ. ನನ್ನೂರಿನ ಮಣ್ಣಿನ ಮಾಳಿಗೆಯ ಮೇಲೆ, ನೆಲದ ಮೇಲೆ ಏನನ್ನೂ ಹಾಸದೇ, ಹಾಗೇ ಮಲಗಿ, ಕಣ್ಣು ಕೋರೈಸುವ ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದ ದಿನಗಳು ನೆನಪಾಗುತ್ತವೆ. ನನ್ನೊಳಗಿರುವ ಕನಸುಗಳಿಗೆ ಶಕ್ತಿ ಕೊಟ್ಟ ದಿವ್ಯ ದೇವತೆಗಳವು. ಸವಾಲುಗಳನ್ನು ಎದುರಿಸುವ ಕೆಚ್ಚು ತುಂಬಿದ ಕಿಡಿಗಳವು. ಇವತ್ತೇಕೋ ಹನಿಯುತ್ತಿರುವ ಮಳೆಯ ನಡುವೆ, ಉಕ್ಕತೊಡಗಿರುವ ಖಿನ್ನತೆಯ ಮಧ್ಯೆ, ನನ್ನೂರಿನ ದಿವ್ಯ ಆಗಸದ ಆ ನಕ್ಷತ್ರಕಿಡಿಗಳು ಮತ್ತೆ ಮತ್ತೆ ನೆನಪಾಗತೊಡಗಿವೆ.
ಕೆಲಸ ಮುಗಿದಿದ್ದರಿಂದ, ಯುಪಿಎಸ್ ಏಕೆ ದಣಿಸಬೇಕೆಂದು ಲೈಟಾರಿಸಿ ಕತ್ತಲಲ್ಲಿ ಸುಮ್ಮನೇ ಕೂಡುತ್ತೇನೆ. ಊರ ಮುಗಿಲಿನೊಳಗೆ ಅರಳಿ ನಿಲ್ಲುತ್ತಿದ್ದ ನಕ್ಷತ್ರಗಳು ಛಾವಣಿಯಲ್ಲಿ ಕಂಡಾವೇನೋ ಎಂಬ ವಿಚಿತ್ರ ಆಸೆ. ಆದರೆ, ಬೆಂಗಳೂರಿನ ಬಯಲಲ್ಲಿ ನಿಂತರೂ ಬೆಳಕಿನ ಮೋಡದ ಮಧ್ಯೆ ಮಂಕಾಗುವ ನಕ್ಷತ್ರಗಳು, ಲೈಟಾರಿಸಿದ ಛಾವಣಿಯಲ್ಲಿ ಕಂಡಾವಾದರೂ ಹೇಗೆ? ಮತ್ತದೇ ಕತ್ತಲು, ಏಕಾಂತ, ಖಿನ್ನತೆ. 
ಒಂದು ಸ್ನಿಗ್ಧ ಪ್ರೀತಿಗಾಗಿ ಹಂಬಲಿಸುತ್ತಿದ್ದ ದಿನಗಳು ನೆನಪಾಗುತ್ತಿವೆ. ಓದಲು ಪಠ್ಯಪುಸ್ತಕ ಬಿಟ್ಟು ಬೇರೊಂದು ಸಿಗದ ವಾತಾವರಣದಲ್ಲಿ ಪುಕ್ಕಟೆ ಕನಸುಗಳನ್ನು ಕಾಣುವುದು ಬಿಟ್ಟು ಬೇರೆ ದಾರಿ ಇದ್ದಿಲ್ಲ. ರಜಾ ದಿನಗಳು ಬಂದಾಗ, ಪಠ್ಯಪುಸ್ತಕಗಳ ಓದೂ ಇಲ್ಲವಾಗುತ್ತಿತ್ತು. ನನ್ನ ಮುಂದಿನ ತರಗತಿಯ ಕನ್ನಡ ವಿಷಯದ ಪುಸ್ತಕವನ್ನು ಅದ್ಹೇಗೋ ಹೊಂಚಿಕೊಂಡು ಒಂದೇ ದಿನದಲ್ಲಿ ಓದಿ ಮುಗಿಸುತ್ತಿದ್ದೆ. ನಂತರ ಬಿರು ಬಿಸಿಲು, ಕಡು ಸೆಕೆ ಮತ್ತು ಕನಸುಗಳೊಳಗೆ ಬದುಕು ಮುಳುಗಿಹೋಗುತ್ತಿತ್ತು. ಮನೆಯಲ್ಲಿ ನಡೆಯುತ್ತಿದ್ದ ಹಪ್ಪಳ-ಸಂಡಿಗೆ-ಉಪ್ಪಿನಕಾಯಿ-ಶ್ಯಾವಿಗೆ ತಯಾರಿಯ ಸಡಗರದಲ್ಲಿ ಅರೆಮನಸ್ಸಿನಿಂದ ತೊಡಗಿಕೊಂಡ ಮನಸ್ಸು ಸಂಜೆಯಾಗುವುದನ್ನೇ ಕಾಯುತ್ತಿತ್ತು.
ಸಾಮಾನ್ಯವಾಗಿ ಕರೆಂಟಿಲ್ಲದಿರುತ್ತಿದ್ದ ರಾತ್ರಿಗಳಲ್ಲಿ ಮಾಳಿಗೆ ಮೇಲೆ ಹೋಗಿ ಅಂಗಾತ ಮಲಗಿಕೊಂಡು ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದೆ. ಸಾವಿರಾರು ಕನಸುಗಳನ್ನು ಆ ನಕ್ಷತ್ರಗಳು ನನ್ನೊಳಗೆ ತುಂಬಿವೆ. ಅವುಗಳೊಂದಿಗೆ ಸುದೀರ್ಘ ಮೌನ ಸಂಭಾಷಣೆ ನಡೆಸಿದ್ದೇನೆ. ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದೇನೆ. ನನ್ನ ನಿರಾಶೆಗಳನ್ನು ಅವು ಸಂತೈಸಿವೆ. ನೋವನ್ನು ಸಹನೀಯವಾಗಿಸಿವೆ. ಮೌನ ಸಾಂಗತ್ಯದಲ್ಲೂ ಪರಮಶಕ್ತಿಯಿದೆ ಎಂಬುದನ್ನು ಮೌನವಾಗಿಯೇ ನನ್ನೊಳಗೆ ತುಂಬಿವೆ. ನಕ್ಷತ್ರಗಳ ಲೋಕದೊಳಗಿನ ಆ ಪಯಣ ಇವತ್ತಿಗೂ ನನ್ನ ಅತ್ಯಂತ ಸ್ಮರಣೀಯ ನೆನಪುಗಳಲ್ಲಿ ಒಂದು.
‘ಕತ್ತಲ್ದಾಗ ಒಬ್ನ ಕೂತು ಏನ್ ಮಾಡ್ತೀ?’ ಎಂದು ಮನೆಯವರು ಆಗಾಗ ಕೇಳುತ್ತಿದ್ದರು. ಏನಂತ ಹೇಳೋದು. ಓರಗೆಯ ಹುಡುಗರು ಕತ್ತಲು ತುಂಬಿದ ಓಣಿಗಳಲ್ಲಿ ಕಳ್ಳ-ಪೊಲೀಸ್ ಆಟವಾಡುತ್ತಿರುವಾಗ ಇವನೊಬ್ಬ ಮೇಲೆ ಹೋಗಿ ಏನು ಮಾಡ್ತಾನೆ ಎಂಬ ಗೊಂದಲ ಅವರದಾಗಿತ್ತು. ಕ್ರಮೇಣ ನನ್ನ ಅನ್ಯಮನಸ್ಕತೆ, ಅಂತರ್ಮುಖತೆ ಅವರಿಗೆ ಅರ್ಥವಾಯಿತೋ ಅಥವಾ ಇವನಿಗೆ ಹೇಳಿ ಉಪಯೋಗವಿಲ್ಲ ಎಂದು ಅಂದುಕೊಂಡರೋ- ಒಟ್ಟಿನಲ್ಲಿ ಪ್ರಶ್ನಿಸುವುದು ತಪ್ಪಿತು. ನಾನು ಮತ್ತಷ್ಟು ಆನಂದದಿಂದ ನಕ್ಷತ್ರ ಸಾಂಗತ್ಯದಲ್ಲಿ ಮುಳುಗಿಹೋದೆ.
ಎಸ್ಸೆಸ್ಸೆಲ್ಸಿ ಮುಗಿಸಿ ಮುಂದಿನ ಓದಿಗೆಂದು ಮೊದಲ ಬಾರಿ ಹುಟ್ಟಿ ಬೆಳೆದ ಊರು ಬಿಡಬೇಕಾಗಿ ಬಂದಾಗ ಇವೇ ನಕ್ಷತ್ರಗಳ ಬಳಿ ಅತ್ತಿದ್ದೆ. ಮುಂದಿನ ಬದುಕು ಹೇಗೋ ಎಂದು ಕಳವಳಪಟ್ಟಿದ್ದೆ. ಉಕ್ಕುತ್ತಿದ್ದ ಕನಸುಗಳಿಗೆ, ನವಿರು ಭಾವನೆಗಳಿಗೆ ಸ್ಪಷ್ಟರೂಪ ಕೊಡಲಾಗದೇ ಒದ್ದಾಡಿದ್ದೆ. ಏರ್‌ಫೋರ್ಸ್‌ಗೆ ನೇಮಕವಾದಾಗಲೂ ಇವೇ ನಕ್ಷತ್ರಗಳು ನನಗೆ ದಾರಿ ತೋರಿದ್ದವು. ನನ್ನೂರಿನಲ್ಲಿ ಕಂಡ ಅವೇ ನಕ್ಷತ್ರಗಳನ್ನು ಕಚ್ಛ್‌ನ ರಣಪ್ರದೇಶದ ಆಗಸದಲ್ಲೂ ಕಂಡಿದ್ದೇನೆ. ಊರು ಸೇರಿದ ನೆಮ್ಮದಿ ಅನುಭವಿಸಿದ್ದೇನೆ.
ಮೋಡ ಮುಸುಕಿ ಮುಸುಮುಸು ಅಳುತ್ತಿರುವ ಬೆಂಗಳೂರಿನ ಆಗಸ ಏಕೋ ನನ್ನೂರ ನಕ್ಷತ್ರಗಳನ್ನು ನೆನಪಿಸುತ್ತಿದೆ. ಸಣ್ಣಗೇ ಖಿನ್ನತೆ ಉಕ್ಕುತ್ತಿದೆ. ಅಂದುಕೊಂಡಿದ್ದಕ್ಕಿಂತ ವೇಗವಾಗಿ ಬದಲಾಗುತ್ತಿರುವ ವೃತ್ತಿ ಜೀವನದ ಮಧ್ಯೆ ನನ್ನ ಪ್ರವೃತ್ತಿ ಬದಲಾಗದೇ ಹಾಗೇ ಉಳಿದಿರುವ ಬಗ್ಗೆ ಅಚ್ಚರಿಯೂ ಆಗುತ್ತಿದೆ. ನನ್ನ ಸೋಲುಗಳಿಗೆ ಈ ನಿರ್ಲಿಪ್ತಭಾವವೇ ಕಾರಣವಾ ಎಂಬ ಗೊಂದಲವೂ ಕಾಡುತ್ತಿದೆ.
ಕೂತ ಕೋಣೆಯ ಛಾವಣಿಯನ್ನೇ ಮತ್ತೆ ಮತ್ತೆ ದಿಟ್ಟಿಸುತ್ತೇನೆ. ಇವತ್ತೇಕೋ ನಾನು ಗೊಂದಲದಲ್ಲಿದ್ದೇನೆ. ಮಿತಿ ದಾಟಿದ ಮಾತೊಂದು ಮನನೋಯಿಸಿತಾ ಎಂಬ ಅಪರಾಧಿ ಭಾವನೆಯೊಂದಿದೆ. ಇತ್ತೀಚೆಗೇಕೋ ತೋರದ ಹಸಿವು ಬಾರದ ನಿದ್ದೆಗಳ ಬಗ್ಗೆ ತಕರಾರಿದೆ. ಇವೆಲ್ಲ ಸೇರಿ ಗೊಂದಲಗೊಂಡಿದ್ದೇನೆ. ಮಂಕಾಗಿದ್ದೇನೆ. ನಕ್ಷತ್ರಗಳ ಬಳಿ ಪರಿಹಾರ ಕಂಡುಕೊಳ್ಳಬೇಕಿದೆ.
ಆದರೆ, ಹೊರಗೆ ಮೋಡ ಮುಸುಕಿದ ಆಗಸ. ಒಳಕೋಣೆಯ ಛಾವಣಿಯೂ ಏಕೋ ಖಾಲಿಖಾಲಿ. ಕರೆಂಟಿಲ್ಲದ ರಾತ್ರಿಯಾಗಿದ್ದರೂ ನಕ್ಷತ್ರಗಳು ಕಾಣುತ್ತಿಲ್ಲ. ಮನಸ್ಸಿನ ಮಂಕು ಕಳೆಯುತ್ತಿಲ್ಲ. ನಾನು ಮತ್ತೆ ಮತ್ತೆ ಅವನ್ನು ಕರೆಯುತ್ತಿದ್ದೇನೆ. ನನ್ನೂರಿನ ಕಡು ಕತ್ತಲೆಯ ಆಗಸದಲ್ಲಿ ಸದ್ದಿಲ್ಲದೇ ಮಿನುಗುತ್ತ ಸಂತೈಸುತ್ತಿದ್ದ ಅವು ಮತ್ತೆ ಮತ್ತೆ ನೆನಪಾಗುತ್ತಿವೆ. 
ಮಳೆ ಸದ್ದಿಲ್ಲದೇ ಹನಿಯುತ್ತಲೇ ಇದೆ, ಒಳಮನೆಯೊಳಗೆ ಕೂತ ನನ್ನಳಲನ್ನು ಅರ್ಥ ಮಾಡಿಕೊಂಡಂತೆ!
- ಚಾಮರಾಜ ಸವಡಿ

2 comments:

ಬಾಲು said...

ಚೆನ್ನಾಗಿ ಬರ್ದಿದ್ದಿರಿ.
ಕಪಟವಿಲ್ಲದ ಬರವಣಿಗೆ ಮನಸ್ಸಿಗೆ ತುಂಬಾ ಹಿಡಿಸಿತು.

ಮೌನಿ said...

ಉಕ್ಕಿ ಬಂದ ಭಾವಾವಳಿ
ಚುಕ್ಕಿ ಇಟ್ಟ ರಂಗೋಲಿ
ಹಂಗಾss ಚೆಲುವು.....ಇಷ್ಟವಾಯ್ತು ಸರ್