ಗೋಲದೊಳಗೆ ತಿರುಗುತ್ತಾ ತಿರುಗುತ್ತಾ...

21 May 2012

ನಾನು ಮತ್ತೆ ಮತ್ತೆ ಮೊಬೈಲ್‌ನ ಪುಟ್ಟ ಪರದೆಯನ್ನು ದಿಟ್ಟಿಸಿದೆ.

ಅಲ್ಲಿ ನೀನಿದ್ದಿಲ್ಲ.

ನಿರಾಶೆಯಾಯಿತು. ಅದು ಹಾಗೇ ಬಿಡು, ಆಗಾಗ ಎನ್ನುವುದಕ್ಕಿಂತ ಬಹುತೇಕ ಸಮಯದಲ್ಲಿ ಅದು ಹಾಗೇ.

ನಿರಾಶೆ. ಯಾವುದೇ ಹೊಸ ಭರವಸೆ ಮೂಡಿಸದ ಮಾಮೂಲಿ ಭಾವ ಎನ್ನುವಷ್ಟರಮಟ್ಟಿಗೆ ಅದು ರೂಢಿಯಾಗಿಹೋಗಿದೆ. ಮೊಬೈಲ್ ಮುಖವನ್ನು ಆಗಾಗ ದಿಟ್ಟಿಸುವುದು, ಅದರಲ್ಲಿ ಹೊಸದೇನಾದರೂ ಮೂಡಿದೆಯೋ ಎಂದು ಪರೀಕ್ಷಿಸುವುದು, ಇಲ್ಲವೆಂದಾಗ, ಚಿಕ್ಕದೊಂದು ನಿರಾಶೆ ಅನುಭವಿಸುವುದು, ಮತ್ತೆ ಮೊಬೈಲ್ ಮುಚ್ಚಿ, ಕೆಲಸದತ್ತ ಗಮನ ಹರಿಸುವುದು ಬದುಕಿನ ಭಾಗವಾಗೇ ಹೋಗಿದೆ.

ಎಷ್ಟು ದಿನದಿಂದ ಇದು ಹೀಗೆ ಎಂದು ಯೋಚಿಸುವುದೂ ಉಂಟು. ಆಗೆಲ್ಲ ತಲೆ ಕೊಡವಿ ಸುಮ್ಮನಾಗುತ್ತೇನೆ. 

ಹಳೆಯದನ್ನು ನೆನಪಿಸಿಕೊಳ್ಳುತ್ತ ಕೂಡುವುದರಲ್ಲಿ ಅರ್ಥವಿಲ್ಲ ಎಂಬುದನ್ನು ನಿನಗಿಂತ ಇಷ್ಟೊಂದು ಪರಿಣಾಮಕಾರಿಯಾಗಿ ಬೇರ‍್ಯಾರೂ ನನಗೆ ಮನದಟ್ಟು ಮಾಡಿಸಿಲ್ಲ. ಈಗ ನಾನು ಮುಳುಗಿರುವ ಆಳ ನೋಡಿದರೆ, ಬಹುಶಃ ಮತ್ಯಾರೂ ಆ ಸ್ಥಾನವನ್ನು ಕದಿಯಲು ಸಾಧ್ಯವೂ ಇಲ್ಲ.

ಹೀಗಾಗಿ, ಮೊಬೈಲ್ ಪರದೆಯನ್ನು ದಿಟ್ಟಿಸುವುದರ ಹಿಂದಿನ ಭಾವನೆಗಳೇ ಬೇರೆ. 

ನಿನ್ನನ್ನು ಬಿಟ್ಟು ಮತ್ಯಾರೂ ಅದರಲ್ಲಿ ಸಂತೋಷ ಉಕ್ಕಿಸಲಾರರು. 

ಮತ್ತು, ದುಃಖವನ್ನೂ ಸಹ.

ಗಾಡಿ ಓಡಿಸುವಾಗ, ಸಿಗ್ನಲ್‌ನಲ್ಲಿ ಮತ್ತೆ ಮೊಬೈಲ್ ಮುಖ ದಿಟ್ಟಿಸುತ್ತೇನೆ. ಖಾಲಿ ಪರದೆ ಅಣಕಿಸುತ್ತದೆ. ಮೊಬೈಲ್ ಮುಚ್ಚಿ ಸುಮ್ಮನೇ ರಸ್ತೆ ದಿಟ್ಟಿಸುತ್ತೇನೆ. ಎದುರಿಗೆ ನಿಂತಿರುವ ಗಾಡಿಯ ನಂಬರ್ ಪ್ಲೇಟ್‌ಗಳೊಮ್ಮೆ ಅವಲೋಕಿಸುತ್ತೇನೆ. ಅಲ್ಲಿರುವ ನಂಬರ್‌ಗಳನ್ನು ಕೂಡಿಸಿದರೆ ಬರುವ ಸಂಖ್ಯೆಯನ್ನು ಲೆಕ್ಕ ಹಾಕುತ್ತೇನೆ. ಒಂದಕ್ಕಿಂತ ಒಂದು ನಂಬರ್‌ಗಳು ಅಧ್ವಾನವಾಗಿರುತ್ತವೆ. 

ಅಷ್ಟೊತ್ತಿಗೆ ಸಿಗ್ನಲ್ ಹಸಿರಾಗುತ್ತದೆ. 

ಮತ್ತೆ ಓಟ ಶುರು. ಎಲ್ಲಿಗೆ ಓಡುತ್ತಿದ್ದಾರೋ ಇವರೆಲ್ಲ ದಿಕ್ಕೆಟ್ಟವರಂತೆ ಎಂದು ಬೈದುಕೊಳ್ಳುತ್ತಲೇ ನಾನೂ ಓಟದಲ್ಲಿ ಸೇರಿಕೊಳ್ಳುತ್ತೇನೆ. ಬಹುಶಃ ಅವರೂ ನನ್ನಂತೆ ಯೋಚಿಸುತ್ತಿರಬಹುದು. 

ಕಚೇರಿಗೆ ಹೋದಾಗ, ಮೊಬೈಲ್ ಜಾಗವನ್ನು ಮೇಲ್ ಆವರಿಸುತ್ತದೆ.

ನಿನ್ನ ಹೆಸರಿನ ಮುಂದೆ ದೀಪವೇನಾದರೂ ಬೆಳಗುತ್ತಿದೆಯಾ ಎಂದು ದಿಟ್ಟಿಸುತ್ತೇನೆ.

ದೀಪ ಕಂಡರೆ ಹೇಳತೀರದ ಖುಷಿ. ನಂಗೊತ್ತು ನೀನು ಚಾಟ್‌ಗೆ ಬರಲ್ಲ ಅಂತ. ಆದರೂ ಖುಷಿ. ಬಲೂನು ಮಾರುವವನನ್ನು ಕಂಡ ಮಗುವಿನಂತೆ. 

ಬಲೂನು ಸಿಗುತ್ತೋ ಇಲ್ಲವೋ ಎಂಬುದು ಗೊತ್ತಿರದಿದ್ದರೂ, ಬಲೂನು ಕಂಡ ಅಮಾಯಕ ಖುಷಿಯದು. 

ಆಗಾಗ ಮೇಲ್‌ನ ದೀಪ ನೋಡುತ್ತ ಕೆಲಸ ಮಾಡುತ್ತ ಕೂಡುತ್ತೇನೆ. ಮೀಟಿಂಗ್‌ಗಳಿಗೆ ಎದ್ದು ಹೋಗುವಾಗ, ಲಾಗೌಟ್ ಆದರೂ, ವಾಪಸ್ ಬಂದಾಗ ಮತ್ತೆ ಲಾಗಿನ್ ಆಗಿ ದೀಪ ನಿಟ್ಟಿಸುತ್ತೇನೆ. 

ಎಷ್ಟೋ ಸಾರಿ ದೀಪ ಇರಲ್ಲ.

ಮನಸ್ಸು ಮುದುಡುತ್ತದೆ. 

ಇವೆಲ್ಲ ಅರ್ಥವಿಲ್ಲದ ಭಾವಾತಿರೇಕಗಳು ಅಂತ ನನ್ನನ್ನು ನಾನೇ ಬೈದುಕೊಳ್ಳುತ್ತ ಮತ್ತೆ ಕೆಲಸದಲ್ಲಿ ಮಗ್ನನಾಗುತ್ತೇನೆ. ಒಂದಿಷ್ಟು ಕೆಟ್ಟ ಅನುವಾದಗಳು ಬರುತ್ತವೆ. ಅವಕ್ಕೆ ಜೀವ ತುಂಬಿ, ಅನುವಾದಿಸಿ, ಮತ್ಯಾರದೋ ಕೆಟ್ಟ ಬರವಣಿಗೆಯನ್ನು ಒಪ್ಪವಾಗಿ ಎಡಿಟ್ ಮಾಡಿ, ಅವಕ್ಕೆ ತಕ್ಕುದಾದ ಚಿತ್ರಗಳನ್ನು ಹುಡುಕಿ, ಪುಟ ವಿನ್ಯಾಸಕರಿಗೆ ಕಳಿಸಿಕೊಟ್ಟು, ಈ ಮಧ್ಯೆ ಮತ್ತೆ ಮತ್ತೆ ದೀಪ ದಿಟ್ಟಿಸುತ್ತಾ-

ಎಷ್ಟೋ ಸಾರಿ ಅಂದುಕೊಳ್ಳುತ್ತೇನೆ: ಈ ಮೂರ್ಖತನವನ್ನು ಬಿಟ್ಟು ಗಂಭೀರವಾಗಿ ಏನನ್ನಾದರೂ ಮಾಡಬೇಕು.

ಹಾಗೆ ತಿಂಗಳುಗಟ್ಟಲೇ ಅಂದುಕೊಂಡಾಗ ಹುಟ್ಟಿದ್ದು ಈ ನಿರ್ಧಾರ.

ಇನ್ಮೇಲೆ ಮೇಲ್‌ನ ದೀಪ ದಿಟ್ಟಿಸುವುದಿಲ್ಲ. ಪದೆ ಪದೆ ಮೊಬೈಲ್‌ನ ಪರದೆಯಲ್ಲಿ ನಿನ್ನ ಸಂದೇಶ ಹುಡುಕುವುದಿಲ್ಲ. 

ಹಾಗಂದುಕೊಂಡ ಮೊದಲೆರಡು ದಿನ ವಿಪರೀತ ಖಿನ್ನತೆ. ತವಕ ಹುಟ್ಟಿಸುತ್ತಿದ್ದ ಇವೆರಡು ಸಣ್ಣ ಖುಷಿಗಳು ಒಮ್ಮೆಲೇ ಇಲ್ಲವಾದವು. ಮನಸ್ಸು ಖಾಲಿ. 

ಆ ಜಾಗವನ್ನು ತುಂಬಲು ಏನಾದರೂ ಬರೆಯಲು ಶುರು ಮಾಡಿದೆ. ಬರೆದು ಮಾಡುವುದಾದರೂ ಏನು ಅಂತ ಅವನ್ನೆಲ್ಲ ಡಿಲೀಟ್ ಮಾಡಿದೆ.

ಆಗ ಮನಸ್ಸು ಇನ್ನಷ್ಟು ಖಾಲಿಯಾಯ್ತು. ಅದರ ಜಾಗದಲ್ಲಿ ಸಿಡುಕು, ಮಂಕುತನ.

ಕಳೆದುಹೋದವನಂತೆ ಕೂಡುವುದು ರೂಢಿಯಾಯ್ತು. ಗೆಳೆಯರು ಹುಬ್ಬೇರಿಸಿ ನೋಡಿ ಕ್ರಮೇಣ ಸುಮ್ಮನಾದರು. 

ಕೆಲವೊಮ್ಮೆ ನೀನು ಫೋನ್ ಮಾಡುತ್ತೀ. ನಂಗೊತ್ತು, ಅದು ವೃತ್ತಿಪರ ವಿಷಯಕ್ಕೆ ಸಂಬಂಧಿಸಿದ್ದು ಅಂತ. 

ಮತ್ತೇನು ವಿಷಯ ಅನ್ನುತ್ತೀ. ಏನಿಲ್ಲ ಅಂತೀನಿ. ನೀನು ಅದೂ ಇದು ಮಾತಾಡುತ್ತೀ. ನನ್ನ ಗಮನ ಇರಲ್ಲ. ಮತ್ತೇನು ಸಮಾಚಾರ ಅನ್ನುತ್ತೀ. ಏನಿಲ್ಲ ಅಂತೀನಿ. ಏಕೋ ನೀವು ಮೂಡಿಯಾಗ್ತಿದ್ದೀರಾ ಅನ್ನುತ್ತೀ. ಹಾಗೇನಿಲ್ಲ ಅಂತೀನಿ. ಸ್ವಲ್ಪ ಹೊತ್ತು ನೀನು ಸುಮ್ಮನಾಗ್ತೀ. ನಾನು ಸುಮ್ಮನೇ ಇರ್ತೀನಿ. ಸರಿ ಹಾಗಾದ್ರೆ ಅಂತ ಫೋನಿಡ್ತೀ. ನನ್ನ ಮನಸ್ಸು ಪೂರ್ತಿ ಖಾಲಿ.

ಏನಿದೆಲ್ಲ? ಏಕಿದೆಲ್ಲ? ಕಬ್ಬಿಣದ ಪಟ್ಟಿಯ ಗೋಲದಲ್ಲಿ ಸರ್ಕಸ್‌ನವ ಬೈಕ್ ಓಡಿಸುತ್ತಾ ಅಲ್ಲೇ ತಿರುಗುವಂತೆ ಈ ಪ್ರಶ್ನೆಗಳು ಮತ್ತೆ ಮತ್ತೆ ರೊಂಯ್‌ಗುಟ್ಟುತ್ತ ಮನಸ್ಸಲ್ಲಿ ಸುತ್ತುತ್ತವೆ. ಗೋಲದೊಳಗಿನ ಬೈಕ್‌ನವ ಹೇಗೆ ಎಲ್ಲೂ ಹೋಗದೇ ಅಲ್ಲೇ ಸುತ್ತುತ್ತಾನೋ, ಹಾಗೆ ಈ ಪ್ರಶ್ನೆಗಳೂ ಉತ್ತರವಿಲ್ಲದೇ ಸುತ್ತುತ್ತಲೇ ಹೋಗುತ್ತವೆ. ಸುತ್ತಿ ಸುತ್ತಿ ಸುಸ್ತಾಗ್ತವೆ.

ನಿನಗೂ ಹೀಗೆಲ್ಲ ಅನಿಸುತ್ತಾ? ನೀನು ಆಗಾಗ ಮೊಬೈಲ್‌ನ ಪರದೆ ನೋಡಿ ನಿರಾಶಳಾಗ್ತೀಯಾ? ಮೇಲ್‌ನ ದೀಪ ನೋಡ್ತಿರ್ತಿಯಾ? ಕರೆಯೊಂದು ಬರುತ್ತೆ ಅಂತ ಕಾಯ್ತಿರ್ತಿಯಾ? ನಿಂಗೂ ಇದೆಲ್ಲ ಏಕೆ? ಏನು? ಎಂಬೆಲ್ಲ ಪ್ರಶ್ನೆಗಳು ಕಾಡುತ್ವಾ?

ಇಂಥ ಪ್ರಶ್ನೆಗಳು ನಿನ್ನನ್ನು ಕಾಡದಿದ್ರೇ ಒಳ್ಳೆಯದು. 

ಕಾಡಿದ್ರೆ, ನೀನು ನನ್ನ ಹಾಗೇ ಆಗಿಬಿಡ್ತೀ. ಹಾಗಾಗದಿರಲಿ.

ನೀನು ನೀನೇ ಆಗಿರು.

ನಾನು ನಾನೇ ಆಗಿರ್ತೀನಿ. 

ಗೋಲದೊಳಗೆ ತಿರುಗುತ್ತಾ ತಿರುಗುತ್ತಾ...

- ಚಾಮರಾಜ ಸವಡಿ

1 comment:

Swarna said...

ಬಲೂನು ಮತ್ತು ಮಗುವಿನ ಹೋಲಿಕೆ ಇಷ್ಟವಾಯಿತು.
Swarna