ಒಂದು ಕಲಿತವನಿಗೆ ಇನ್ನೊಂದು ಸುಲಭ

10 Oct 2008

ಒಂದು ಭಾಷೆಯನ್ನು ಚೆನ್ನಾಗಿ ಕಲಿತವನಿಗೆ ಇನ್ನೊಂದು ಭಾಷೆ ಕಲಿಯುವುದು ಕಷ್ಟವಲ್ಲ ಬಿಡಿ.

ಅನುಮಾನ ಬಂದರೆ, ನಿಮ್ಮ ಭಾಷಾ ಕಲಿಕೆ ಸಾಮರ್ಥ್ಯವನ್ನು ಒಮ್ಮೆ ನೆನಪಿಸಿಕೊಳ್ಳಿ. ಹಾಲು ಎಂಬ ಶಬ್ದದ ಅರ್ಥ ಗೊತ್ತಿದ್ದವನಿಗೆ ಮಿಲ್ಕ್ ಎಂಬ ಇಂಗ್ಲಿಷ್ ಶಬ್ದದ ಅರ್ಥ ಸಹಜವಾಗಿ ಮನದಟ್ಟಾಗುತ್ತದೆ. ದೂದ್ ಎಂಬ ಹಿಂದಿ ಶಬ್ದ ಸಹ ಸಹಜವಾಗಿ ಮನವರಿಕೆಯಾಗುತ್ತದೆ. ಯಾವಾಗ ಮಿಲ್ಕ್ ಅಥವಾ ದೂದ್ ಎಂಬ ಶಬ್ದಗಳು ಬರುತ್ತವೋ ಆಗ ಹಾಲು ಎಂಬ ಕನ್ನಡ ಶಬ್ದ ಸಹಜವಾಗಿ ಮೆದುಳಿನಲ್ಲಿ ಮಿನುಗುತ್ತ ಹೊಸ ಶಬ್ದದ ವ್ಯಾಪ್ತಿಯನ್ನು ಮನದಟ್ಟು ಮಾಡುತ್ತ ಹೋಗುತ್ತದೆ. ಈ ಪ್ರಕ್ರಿಯೆ ಎಷ್ಟು ಸಹಜವಾಗುತ್ತದೆಂದರೆ, ಮಿಲ್ಕ್ ಅಥವಾ ದೂದ್ ಶಬ್ದಗಳು ಪರಕೀಯ ಅನಿಸುವುದಿಲ್ಲ.

ಹೊಸ ಹೊಸ ಶಬ್ದಗಳ ಕಲಿಕೆ ಸುಲಭವಾಗುತ್ತ ಹೋಗುವುದು ಹೀಗೆ.

ಹೀಗಾಗಿ ಇನ್ನೊಂದು ಭಾಷೆ ನಿಧಾನವಾಗಿ ಮನಸ್ಸಿನಲ್ಲಿ ಇಳಿಯುತ್ತ ಹೋಗುತ್ತದೆ. ಪ್ರತಿಯೊಂದು ಹೊಸ ಶಬ್ದಕ್ಕೂ ಪರ್ಯಾಯವಾಗಿ ಕನ್ನಡದ ಶಬ್ದ ಮನಸ್ಸಿನಲ್ಲಿ ನಿಲ್ಲುತ್ತದೆ. ಅದರ ಅರ್ಥವನ್ನು ಹೋಲಿಸಿ ನೋಡುತ್ತದೆ. ನಿಧಾನವಾಗಿ ಅದನ್ನು ಜೀರ್ಣಿಸಿಕೊಳ್ಳುತ್ತದೆ. ಒಂಚೂರು ಆಸಕ್ತಿ ತೋರಿಸಿದರೂ ಸಾಕು, ಇನ್ನೊಂದು ಭಾಷೆಯನ್ನು ಸುಲಭವಾಗಿ ಕಲಿಯಬಹುದು. ನಮ್ಮ ಮಾತೃಭಾಷೆಗೂ ಇನ್ನೊಂದು ಭಾಷೆಗೂ ಇರುವ ಸಾಮ್ಯತೆ ಹಾಗೂ ಭಿನ್ನತೆಯನ್ನು ಗುರುತಿಸುವ ಮೂಲಕ ಅದನ್ನು ಅರ್ಥ ಮಾಡಿಕೊಳ್ಳುತ್ತೇವೆ. ಎಷ್ಟು ಸಮರ್ಥವಾಗಿ ನಮ್ಮ ಮಾತೃಭಾಷೆಯನ್ನು ನಾವು ವ್ಯಕ್ತಪಡಿಸುತ್ತೇವೆಯೋ, ಅಷ್ಟೇ ಸುಲಭವಾಗಿ ಇನ್ನೊಂದು ಭಾಷೆಯಲ್ಲಿಯೂ ಅಭಿವ್ಯಕ್ತಿ ಸಾಧ್ಯವಾಗುತ್ತದೆ.

ಪ್ರತಿಯೊಂದು ಕಲಿಕೆಯೂ ಸುಲಭವಾಗುತ್ತ ಹೋಗುವುದು ಹೀಗೆ. ಒಂದು ಮಾದರಿಯ ಬೈಕ್ ಓಡಿಸಬಲ್ಲವನಿಗೆ ಇನ್ನೊಂದು ವಿನ್ಯಾಸದ ಬೈಕ್ ಕಲಿಯುವುದು ಕಷ್ಟವಾಗುವುದಿಲ್ಲ. ಮೊದಮೊದಲು ಒಂಚೂರು ಹಿಂಜರಿಕೆ ಇದ್ದರೂ, ಕೆಲವೇ ದಿನಗಳಲ್ಲಿ ಅದು ರೂಢಿಯಾಗುತ್ತದೆ. ಯಾವುದೇ ಒಂದು ಪರಿಸರವನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ವ್ಯಕ್ತಿ ಇನ್ನೊಂದು ಪರಿಸರವನ್ನು ಬಲುಬೇಗ ತನ್ನದಾಗಿಸಿಕೊಳ್ಳುತ್ತಾನೆ. ಒಂದು ವೃತ್ತಿಯ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡವನಿಗೆ ಇನ್ನೊಂದು ವೃತ್ತಿಯ ಸೂಕ್ಷ್ಮಗಳು ಬೇಗ ಗೊತ್ತಾಗುತ್ತವೆ. ಬಹುಶಃ ಉಪನಿಷತ್ತಿನಲ್ಲಿ ಹೇಳಿದ್ದು ಅನಿಸುತ್ತದೆ:’ಒಂದು ಹಿಡಿ ಮಣ್ಣನ್ನು ಚೆನ್ನಾಗಿ ಅರಿಯಬಲ್ಲೆಯಾದರೆ, ಇಡೀ ಭೂಮಿಯನ್ನೇ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು’. ಇದು ಎಲ್ಲ ರೀತಿಯ ಕಲಿಕೆಗಳಿಗೂ ಅನ್ವಯಿಸುತ್ತದೆ.

ಇಂಥ ಕಲಿಕೆ ಕೊಡುವ ಆತ್ಮವಿಶ್ವಾಸ ಅಪಾರ. ನಮ್ಮಲ್ಲಿ ಬಹುತೇಕ ಜನ ಓದಿದ್ದು ಕನ್ನಡದಲ್ಲಿ. ಅವರು ಯೋಚಿಸಲು ಪ್ರಾರಂಭಿಸಿದ್ದು, ಅಭಿವ್ಯಕ್ತಿ ತೋರಿದ್ದು ಕನ್ನಡದಲ್ಲಿ. ಇದ್ದಕ್ಕಿದ್ದಂತೆ ಇನ್ನೊಂದು ಭಾಷೆ ಕಲಿಯುವ, ಅದರಲ್ಲೇ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ಅನಿವಾರ್ಯತೆ ಒದಗಿದಾಗ, ಹಿನ್ನೆಲೆಯಲ್ಲಿ ಕನ್ನಡ ಇದ್ದೇ ಇರುತ್ತದೆ. ಅವರ ಕನ್ನಡ ಎಷ್ಟು ಬಲವಾಗಿರುತ್ತದೋ, ಇನ್ನೊಂದು ಭಾಷೆಯಲ್ಲಿ ಅಭಿವ್ಯಕ್ತಿಗೊಳಿಸುವುದು ಅಷ್ಟೇ ಸುಲಭವಾಗುತ್ತದೆ.

ಇದನ್ನು ಎಷ್ಟು ಬೇಕಾದರೂ ವಿಸ್ತರಿಸಬಹುದು. ಈ ಮಾದರಿಯನ್ನು ಜೀವನದ ಯಾವುದೇ ರಂಗಕ್ಕೂ ಅನ್ವಯಿಸಿ ನೋಡಬಹುದು. ಕಲಿಕಾ ಸಾಮರ್ಥ್ಯ ವಿಸ್ತಾರವಾಗಬೇಕೆಂದರೆ, ಯಾವುದೋ ಒಂದು ಮಾದರಿಯ ಬಗ್ಗೆ, ವಿಶೇಷತೆಯ ಬಗ್ಗೆ ಹೆಚ್ಚು ಗೊತ್ತಿದ್ದಷ್ಟೂ ಉತ್ತಮ. ನಮಗೆ ಕನ್ನಡ ಕಾವ್ಯದ ಬಗ್ಗೆ ಚೆನ್ನಾಗಿ ಗೊತ್ತಿದ್ದರೆ, ಆಸಕ್ತಿ ಇದ್ದರೆ, ಇನ್ನೊಂದು ಭಾಷೆಯ ಕಾವ್ಯವೂ ಸುಲಭವಾಗಿ ಗೊತ್ತಾಗುತ್ತದೆ, ಅರ್ಥವಾಗುತ್ತದೆ. ಅದೇ ರೀತಿ ಕನ್ನಡ ರಂಗಭೂಮಿಯ ಬಗ್ಗೆ ಗೊತ್ತಿದ್ದರೆ, ಬೇರೆ ಭಾಷೆಯ ರಂಗಭೂಮಿಯ ವಿಶೇಷತೆಗಳು ಸುಲಭವಾಗಿ ಗೋಚರವಾಗುತ್ತವೆ. ಸರಳವಾಗಿ ಅರ್ಥವಾಗುತ್ತವೆ. ಸಂಗೀತ, ಚಿತ್ರಕಲೆ, ತಂತ್ರಜ್ಞಾನ, ಪತ್ರಿಕೆ, ಬರವಣಿಗೆ- ಹೀಗೆ ಬಹುತೇಕ ಕ್ಷೇತ್ರಗಳು ಸುಲಭವಾಗಿ ತಿಳಿಯುತ್ತ ಹೋಗುವುದು ಹೀಗೆ.

ಆದ್ದರಿಂದ ಕನ್ನಡವನ್ನಷ್ಟೇ ಓದಿದವರು ಖಂಡಿತ ಹಿಂಜರಿಯಬೇಕಾಗಿಲ್ಲ. ನಿಮಗೆ ಕನ್ನಡ ಚೆನ್ನಾಗಿ ಗೊತ್ತಿದ್ದರೆ, ಕೊಂಚ ಆಸಕ್ತಿ ಹಾಗೂ ಶ್ರಮ ಹಾಕುವ ಮೂಲಕ ಇನ್ನೊಂದು ಭಾಷೆಯನ್ನು ಸುಲಭವಾಗಿ ಕಲಿಯಬಹುದು. ನಮ್ಮ ಸುತ್ತಮುತ್ತ ಇರುವ ಬಹುತೇಕ ಜನ ಇನ್ನೊಂದು ಭಾಷೆಯನ್ನು ಸುಲಭವಾಗಿ ಕಲಿತಿದ್ದೇ ಹೀಗೆ.

ಹೀಗಾಗಿ, ಕೀಳರಿಮೆ ಬೇಡ. ಹಿಂಜರಿಯುವ ಅವಶ್ಯಕತೆಯಿಲ್ಲ. ನಡೆಯುವುದನ್ನು ಕಲಿತವ ಕರ್ನಾಟಕದಲ್ಲೂ ನಡೆದಾಡಬಲ್ಲ, ಇಂಗ್ಲಂಡ್‌ನಲ್ಲೂ ನಡೆಯಬಲ್ಲ. ಅದೇ ರೀತಿ ಒಂದು ನುಡಿಯನ್ನು ಚೆನ್ನಾಗಿ ಕಲಿತವ ಇನ್ನೊಂದು ಭಾಷೆಯನ್ನೂ ಅಷ್ಟೇ ಚೆನ್ನಾಗಿ ನುಡಿಯಬಲ್ಲ. ಒಂಚೂರು ಆಸಕ್ತಿ ಇದ್ದರೆ ಕಲಿಕೆ ಸುಲಭವಾಗುತ್ತ ಹೋಗುತ್ತದೆ.

ಅಂಥದೊಂದು ಮನಃಸ್ಥಿತಿ ನಮ್ಮಲ್ಲಿರಬೇಕಷ್ಟೇ.

- ಚಾಮರಾಜ ಸವಡಿ


2 comments:

Harisha - ಹರೀಶ said...

ಇನ್ನೊಂದು ವಿಷಯ ಗಮನಿಸಿದ್ದೀರಾ? ನೀವು ಯಾವುದೇ ಭಾಷೆಯಲ್ಲಿ ಮಾತನಾಡುತ್ತಿದ್ದರೂ ಅದು ಮೊದಲು ಮಾತೃಭಾಷೆಗೆ ತರ್ಜುಮೆ ಹೊಂದಿಯೇ ಅರ್ಥವಾಗುತ್ತದೆ. ಮನಸ್ಸು ನಮಗರಿವಿಲ್ಲದಂತೆ ಈ ಪರಿವರ್ತನೆ ಮಾಡುತ್ತಿರುತ್ತದೆ.

Chamaraj Savadi said...

ನಿಜ ಹರೀಶ್‌, ಅದಕ್ಕೆಂದೇ ಮಾತೃಭಾಷೆ ಇತರ ಭಾಷೆಗಳಿಗೆ ತಾಯಿಬೇರಿನಂತಿರುತ್ತದೆ. ಅದು ಬಲಗೊಂಡಷ್ಟೂ ನಮ್ಮ ಇತರ ಭಾಷೆಯ ಅಭಿವ್ಯಕ್ತಿ ಬಲಗೊಳ್ಳುತ್ತದೆ.

- ಚಾಮರಾಜ ಸವಡಿ