ಇತ್ತೀಚೆಗೆ ರಾತ್ರಿ ತಡವಾಗಿ ಮಲಗೋದು ಶುರುವಾಗಿಬಿಟ್ಟಿದೆ. ಅದು ಇದು ಓದುತ್ತ, ಬರೆಯಲೇಬೇಕಾಗಿದ್ದನ್ನು ಬರೆಯುತ್ತ ಕೂತವನಿಗೆ ನಿದ್ದೆ ಬರುತ್ತಿದೆ ಅನ್ನಿಸಿದಾಗ ರಾತ್ರಿ ಒಂದೋ-ಎರಡೋ ಗಂಟೆಯಾಗಿರುತ್ತದೆ. ಹೀಗಾಗಿ ಬೆಳಿಗ್ಗೆ ಏಳುವಾಗ ಏಳಾಗಿರುತ್ತದೆ.
ಮೊನ್ನೆ ಬೆಳಿಗ್ಗೆ ಕ್ಲೈಂಟ್ ಒಬ್ಬರ ಕೆಲಸಕ್ಕೆಂದು ಬೇಗ ಏಳಬೇಕಾಯ್ತು. ಹಾಗೆ ನೋಡಿದರೆ ಏಳಲು ಮನಸ್ಸಿರಲಿಲ್ಲ. ಅರೆ ಮನಸ್ಸಿನಿಂದಲೇ ಎದ್ದು, ಬೆಳಗಿನ ಎಲ್ಲ ವಿಧಿಗಳನ್ನು ವಿಧ್ಯುಕ್ತವಾಗಿ ಮುಗಿಸಿ, ಬಾಗಿಲು ತೆರೆದು ಈಚೆ ಬಂದರೆ, ಹೊರಗೆ ಮಜವಾದ ಚಳಿ.
ರಸ್ತೆಗಳು ಸ್ವಚ್ಛವಾಗಿದ್ದವು. ಜನ ಮತ್ತು ವಾಹನಗಳಿಲ್ಲದ್ದರಿಂದ ನನಗೆ ಹಾಗನ್ನಿಸಿತೋ! ಗಾಳಿ ಕೂಡ ನಡುಕ ಹುಟ್ಟಿಸುವಷ್ಟು ಹಿತವಾಗಿತ್ತು. ನಾಗರಬಾವಿಯಿಂದ ಬಸವೇಶ್ವರನಗರದ ಆ ತುದಿಗೆ ಹೋಗಲು ಬೆಳಗಿನ ಸಮಯದಲ್ಲಿ ಹದಿನೈದು ನಿಮಿಷಗಳು ಸಾಕು. ಆದರೆ, ಇಷ್ಟು ಸಣ್ಣ ಅವಧಿ ಎಷ್ಟೊಂದು ವಿಶೇಷತೆಗಳನ್ನು ಪರಿಚಯಿಸಿತೆಂದರೆ, ‘ಛೇ ಇನ್ಮೇಲೆ ಬೇಗ ಏಳಬೇಕು’ ಅಂತ ಪದೆ ಪದೆ ಅನ್ನಿಸಿತು.
ಕಾಲೇಜಿಗೆ, ಬೆಳಗಿನ ಪಾಳಿಯ ಕೆಲಸಕ್ಕೆ ಹೋಗುವವರೆಲ್ಲ ಆರು ಗಂಟೆಗೆಲ್ಲ ಬಸ್ ಸ್ಟಾಪ್‌ಗಳಲ್ಲಿ ಹಾಜರು. ಎಲ್ಲರೂ ತಾಜಾ ಗಾಳಿಯಷ್ಟೇ ಫ್ರೆಶ್. ಪೇಪರ್ ಹಾಗೂ ಹಾಲು ಹಾಕುವ ಹುಡುಗರಷ್ಟೇ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಓಡಾಡುತ್ತಿದ್ದುದನ್ನು ಬಿಟ್ಟರೆ, ಉಳಿದವರೆಲ್ಲ ಚಳಿಗಾಲದ ಶುರುವಿನ ದಿನಗಳ ಸೊಗಸನ್ನು ಅನುಭವಿಸಲೆಂದೇ ಅಷ್ಟೊತ್ತಿಗೇ ಎದ್ದು ಬಂದಂತಿದ್ದರು. ಫುಟ್‌ಪಾತ್ ಅಗಲವಾಗಿರುವ ಕಡೆ ದಿನಪತ್ರಿಕೆಗಳ ವಿಂಗಡಣೆ ನಡೆದಿತ್ತು. ಇದ್ದಕ್ಕಿದ್ದಂತೆ ‘ಛಾಯಾಕನ್ನಡಿ’ ಬ್ಲಾಗ್ ಬರೆಯುವ ಶಿವು ನೆನಪಾದರು. ಮಳೆ ಬರಲಿ, ಬಿಡಲಿ. ಚಳಿ ಇರಲಿ, ಇಲ್ಲದಿರಲಿ. ಪಾಪ, ನಸುಕಿನಲ್ಲೇ ಎದ್ದು, ನಮ್ಮ ಬೆಳಗಿನ ಕಾಫಿ ಹೊತ್ತಿಗೆ ಪತ್ರಿಕೆ ತಲುಪಿಸುವ ಕಾಯಕ ಅವರು ಹೇಗೆ ಮಾಡ್ತಾರಪ್ಪ ಅಂತ ಅನ್ನಿಸಿತು. ಮನಸ್ಸಿನಲ್ಲೇ ಅವರಿಗೆ, ಅವರ ವೃತ್ತಿ ಬಾಂಧವರಿಗೆ ಸಲಾಮ್ ಹೊಡೆದು ಮುಂದಕ್ಕೆ ಹೋದೆ.
ತರಕಾರಿ ಮಾರುವವರು ಒಬ್ಬೊಬ್ಬರಾಗಿ ಕೂಗಲು ಆರಂಭಿಸಿದ್ದರು. ಬೆಳಿಗ್ಗೆಯೇ ಶುರುವಾದ ಬಸ್‌ಗಳಲ್ಲಿ ದಟ್ಟಣೆ ಇರಲಿಲ್ಲ. ಸಿಗ್ನಲ್‌ಗಳು ಹಳದಿ ದೀಪಗಳನ್ನು ಮಿನುಗಿಸುತ್ತ, ‘ಹೋಗಿ ಬನ್ನಿ’ ಎಂದು ಹೇಳುತ್ತಿದ್ದವು. ಮರಗಳು ದಟ್ಟವಾಗಿರುವ ಕಡೆ ಹಕ್ಕಿಗಳ ಚಿಲಿಪಿಲಿ ಬಿಟ್ಟರೆ ಮತ್ತೆ ಕಿವಿಗೆ ಬಿದ್ದಿದ್ದು ಎಫ್.ಎಂ. ರೇಡಿಯೋದ ಬಾನುಲಿಗಳೇ.
ಅಶ್ವಥ್ವ ವೃಕ್ಷಗಳಿರುವೆಡೆ ಮರ ಸುತ್ತುವ ಆಸ್ತಿಕ ಮಹಿಳೆಯರು. ಅವರ ಪೈಕಿ ಹುಡುಗಿಯರೇ ಹೆಚ್ಚು. ದೇವಸ್ಥಾನಗಳು ಬಾಗಿಲು ತೆರೆದುಕೊಂಡಿದ್ದವು. ಹೂ, ಹಣ್ಣು, ತೆಂಗಿನಕಾಯಿ, ಊದುಬತ್ತಿ ಮಾರುವವರ ಗುಂಪು ಹೊರಗೆ. ಸಣ್ಣ ಸಣ್ಣ ದರ್ಶಿನಿಗಳಲ್ಲಿ ಬಿಸಿ ಬಿಸಿ ಇಡ್ಲಿ-ಸಾಂಬಾರಿನ ಘಮ. ಬೇಗ ಎದ್ದಿದ್ದೆನಾದ್ದರಿಂದ ಸಣ್ಣಗೆ ಹಸಿವು ಕೆರಳಿದಂತಾಯ್ತು.
ಅಂಥ ಬೆಳ್ಳಂಬೆಳಿಗ್ಗೆಯೂ ಅಲ್ಲಲ್ಲಿ ಸಣ್ಣ ಸಣ್ಣ ಬಾರ್‌ಗಳು ಬಿಸಿನೆಸ್ ಶುರು ಮಾಡಿದ್ದವು. ಅಲ್ಲಿ ಕೂಡ ಕೇಳಿಬಂದಿದ್ದು ಸುಪ್ರಭಾತವೇ. ‘ಎದ್ದೇಳು ಮಂಜುನಾಥ...’ ಎಂಬ ಸೊಗಸಾದ ಹಾಡು. ಬಹುಶಃ ಹಾಡು ಕೇಳಿದ ಕುಡುಕರು ಬೇಗ ಎದ್ದು ಬರಲಿ ಅಂತ ಇರಬೇಕು. ದಣಿದು ಕುಡಿಯುವ ಮಜಾ ಒಂದು ರೀತಿಯದಾದರೆ, ಫ್ರೆಶ್ಶಾಗಿ ಕುಡಿಯುವ ಮಜಾ ಇನ್ನೊಂದು ರೀತಿಯೇನೋ. ಅದಕ್ಕೆಂದೇ ಅಷ್ಟೊತ್ತಿಗೆ ಕುಡುಕರೂ ಹಾಜರಾಗಿದ್ದರು. ಬೋಣಿ ಚೆನ್ನಾಗಿರಬೇಕು. ಬಾರ್ ಮಾಲೀಕನ ಮುಖದಲ್ಲಿ ಭರ್ಜರಿ ಲವಲವಿಕೆ.
ಹೌಸಿಂಗ್ ಬೋರ್ಡ್ ಕಾಲೋನಿ ದಾಟಿ ಬಸವೇಶ್ವರ ನಗರದ ಕಡೆ ತಿರುಗಿಕೊಂಡಾಗ ರಭಸದಿಂದ ವಾಕಿಂಗ್ ಮಾಡುತ್ತಿದ್ದ ಒಂದಿಷ್ಟು ಜನ ಧಡೂತಿ ಆಂಟಿಯರು, ಚೂಟಿ ಅಂಕಲ್‌ಗಳು ಕಾಣಿಸಿದರು. ಕಿವಿಯಲ್ಲಿ ಇಯರ್‌ಫೋನ್ ಹಾಕಿಕೊಂಡವರೇ ಬಹಳಷ್ಟು. ಹಾಡು ಕೇಳುತ್ತ, ವಾಕ್ ಮಾಡುತ್ತ ಮಸ್ತ್ ಮಜಾ ಮಾಡ್ತಿದ್ರು. ನಕ್ಕು ಮುಂದೆ ಹೋದೆ.
ಪವಿತ್ರ ಪ್ಯಾರಡೈಸ್ ಎಂಬ ಖ್ಯಾತ ಹೋಟೆಲ್ ದಾಟಿ ಎಂಟನೇ ಮುಖ್ಯರಸ್ತೆಯ ಒಳ ಹೊಕ್ಕಾಗ, ಬೆಂಗಳೂರಿನ ಈ ಭಾಗ ಇನ್ನೂ ನಿದ್ದೆಯಲ್ಲಿದೆ ಅನ್ನಿಸಿತು. ಅಗಲ ರಸ್ತೆಯಲ್ಲಿ ವಿರಳ ಜನ-ವಾಹನ ಸಂಚಾರ. ಸುತ್ತಲೂ ಇರುವ ವಿವಿಧ ಪಾರ್ಕ್‌ಗಳ ಮರಗಿಡಗಳು ಉಸಿರಾಡಿದ ಗಾಳಿ ತಾಜಾ ಇದ್ದರೂ, ಇಲ್ಲಿ ಚಳಿ ಕೊಂಚ ಹೆಚ್ಚೇ ಇದೆ ಅನಿಸಿತು. ಕ್ಲೈಂಟ್ ಮನೆ ಹತ್ತಿರವಾಗುತ್ತಿದ್ದಂತೆ, ಟೈಮ್ ನೋಡಿಕೊಂಡೆ. ಮನೆ ಬಿಟ್ಟು ಕೇವಲ ಹದಿನೈದು ನಿಮಿಷಗಳಾಗಿದ್ದವು.
ಬೇರೆ ಸಮಯದಲ್ಲಾಗಿದ್ದರೆ, ಇದೇ ದೂರ ಕ್ರಮಿಸಲು ಏನಿಲ್ಲವೆಂದರೂ ಅರ್ಧ ಗಂಟೆ ಬೇಕಾಗುತ್ತಿತ್ತು. ಟ್ರಾಫಿಕ್ ಶಪಿಸುತ್ತ ವಾಹನ ಓಡಿಸುವಾಗ, ಸುತ್ತಮುತ್ತಲಿನ ಅಚ್ಚರಿಗಳತ್ತ ಗಮನ ಹರಿಯುವುದಾದರೂ ಹೇಗೆ? ಬೆಳ್ಳಂಬೆಳಿಗ್ಗೆಯ ಈ ಹದಿನೈದು ನಿಮಿಷಗಳಿಗೆ ಅದೆಂಥ ಮಾಂತ್ರಿಕ ಸ್ಪರ್ಶ ಇದೆಯಲ್ಲ ಅನಿಸಿ ಅಚ್ಚರಿಯಾಯ್ತು.
ಕ್ಲೈಂಟ್ ಮನೆಯಲ್ಲಿ ಬಿಸಿ ಬಿಸಿ ಕಾಫಿ, ಬಿಸಿ ಬಿಸಿ ದಿನಪತ್ರಿಕೆಗಳು ಕಾಯ್ದಿದ್ದವು. ಹಾಯಾಗಿ ಕಾಫಿ ಕುಡಿಯುತ್ತ, ಪೇಪರ್ ಓದುವಾಗ, ಮತ್ತೆ ಮತ್ತೆ ಅಂದುಕೊಂಡೆ- ಇನ್ಮೇಲೆ ಬೆಳಿಗ್ಗೆ ಬೇಗ ಏಳಬೇಕು!
ಏಳ್ತೀನಾ?
- ಚಾಮರಾಜ ಸವಡಿ
Subscribe to:
Post Comments (Atom)
6 comments:
ಫ್ರಷ್ ಆದ ಮುಂಜಾನೆಯೊಂದರ ಫ್ರೆಷ್ ಆದ ಅನುಭವದ ಅಕ್ಷರ ರೂಪ. ಓದಿ ನಾವೂ ಆ ಚುಮುಚುಮು ಚಳಿಯಲ್ಲಿ ಓಡಾಡಿದಷ್ಟೇ ಖುಷಿಯಾಯಿತು.
ಥ್ಯಾಂಕ್ಸ್ ಸತ್ಯನಾರಾಯಣ ಸರ್.
ನಿಮ್ಮ ಅನುಭವ ಚನ್ನಾಗಿದೆ.
ನಾನು ಕೂಡ ಬಹಳ ಲೇಟ್ ಆಗೇ ಏಳೋದು... (ಬೆಳಿಗ್ಗೆ ಒಂಬತ್ತು ವರೆಗೆ)
ಬೆಳಗಿನ ವಾತಾವರಣದ ಸೌಂದರ್ಯವನ್ನು ಅನುಭವಿಸಿದ್ದೇನೆ. ಅದೇ ಅನುಭವಗಳನ್ನು ತಾಜಾಗೊಳಿಸಿತು ನಿಮ್ಮ ಲೇಖನ.
ನಾನಂತ್ರೂ ಬೆಳಗ್ಗೆ ಬೇಗ ಏಳ್ಬೇಕು ಅಂತ ಅದೆಷ್ಟು ಸಲ ಸಾಹಸ ಪಟ್ಟಿದ್ದೀನೋ..
ಈಗಂತೂ ಅಂಥದ್ದೆಲ್ಲ ನನಗೆ ಆಗಿ ಬರಲ್ಲ ಅಂತ ಬಿಟ್ಬಿಟ್ಟಿದ್ದೀನಿ. :(
ನಿಮ್ಮ ಬರಹ, ನಾನು ಬೇಗ ಎದ್ದಿದ್ದರೆ ಹೀಗಿರ್ತಿತ್ತು ನೋಡು ಅಂತ ಅಣಕಿಸಿತು. :)
ಶಿವಪ್ರಕಾಶ್ ಬೇಗ ಏಳಿ. ಇಲ್ಲದಿದ್ದರೆ ಹುಡುಗೀರು ಅಶ್ವತ್ಥ ವೃಕ್ಷ ಸುತ್ತೋದು ವ್ಯರ್ಥವಾಗುತ್ತೆ. :)
ಥ್ಯಾಂಕ್ಸ್ ಸುಮ. ಬೆಳಿಗ್ಗೆ ಬೇಗ ಏಳುತ್ತೀರೆಂದರೆ, ನೀವೂ ಅಶ್ವತ್ಥ ವೃಕ್ಷ ಸುತ್ತೋದು ಗ್ಯಾರಂಟಿ ಅಂತಾಯ್ತು. :)
ಮರಳಿ ಯತ್ನವ ಮಾಡಿ ಆನಂದ್. ಎದ್ದೇಳುವುದಷ್ಟೇ ಅಲ್ಲ ಸಾಹಸ, ಎದ್ದ ನಂತರ ಆ ಸಮಯದ ಸದ್ಬಳಕೆ ಮಾಡೋದೂ ಅಷ್ಟೇ ಸಾಹಸಮಯ ಕೆಲಸ. :)
Post a Comment