ಅಪರೂಪದ ವಸುಧೈವ ಕುಟುಂಬಕಂ!

7 Dec 2009

ಮನೆಯೊಳಗೇ ಊರು ತುಂಬಿಕೊಂಡ ಅಚ್ಚರಿ ಇದು. ಧಾರವಾಡದ ಹತ್ತಿರ ಇರುವ ಲೋಕೂರು ಒಂದು ಚಿಕ್ಕ ಊರು. ಇಲ್ಲಿರುವ ಮನೆಗಳಲ್ಲಿಯೇ ಅತ್ಯಂತ ದೊಡ್ಡ ಮನೆಯಲ್ಲಿ ರಾಜ್ಯಕ್ಕೇ ದೊಡ್ಡದೆನ್ನಬಹುದಾದ ಕುಟುಂಬವೊಂದು ಕಳೆದ ನಾಲ್ಕುನೂರು ವರ್ಷಗಳಿಂದ ಒಟ್ಟಿಗೇ ವಾಸಿಸುತ್ತಿದೆ. ಕಟ್ಟಿದಾಗಿನಿಂದ ಜೈನರ ಈ ಮನೆ ವಿಭಜನೆಗೊಂಡಿಲ್ಲ. ನೌಕರಿಗಾಗಿ ದೂರ ಹೋದವರು ನಿವೃತ್ತರಾದ ನಂತರ ಮತ್ತೆ ಮನೆ ಸೇರಿದ್ದಾರೆ. ಎಲ್ಲರೂ ಒಟ್ಟಿಗೇ ದುಡಿಯುತ್ತಾರೆ. ಒಂದೇ ಕಡೆ ಉಣ್ಣುತ್ತಾರೆ. ಜಗಳವಿಲ್ಲ. ಆಸ್ತಿ ಹೋರಾಟ ಇಲ್ಲ. ೧೮೦ಕ್ಕೂ ಹೆಚ್ಚು ಜನ ಒಂದೇ ಕಡೆ ಇರುತ್ತ, ಮದುವೆಯಂಥ ಸಂದರ್ಭದಲ್ಲಿ ದೂರ ಹೋದವರೆಲ್ಲ ಬಂದಾಗ ೩೦೦ಕ್ಕೂ ಹೆಚ್ಚು ಜನ ಒಟ್ಟಿಗೇ ಸೇರಿ ಸಮಾರಂಭ ಮಾಡುತ್ತ ’ವಸುಧೈವ ಕುಟುಂಬಕಂ’ ಎಂಬ ಮಾತಿಗೆ ಸಾಕ್ಷಿಯಾಗುತ್ತ ಬಂದಿದ್ದಾರೆ... 




'ಬನ್ನಿ' ಎಂದರು ಯಜಮಾನರು.

ಒಳಗೆ ಮಕ್ಕಳು ಆಡುತ್ತಿದ್ದವು. ಫಕ್ಕನೇ ’ಶಾಲೆ ಇರಬಹುದಾ’ ಅನ್ನಿಸಿತು. ಆದರೆ, ಒಳಗೆಲ್ಲೋ ರೊಟ್ಟಿ ಬಡಿಯುತ್ತಿದ್ದ ಸದ್ದು. ಜೋಳದ ರೊಟ್ಟಿ ಬೇಯುತ್ತಿದ್ದ ಕಮ್ಮನೆ ಪರಿಮಳ. ಎಲ್ಲೋ ಮಗುವೊಂದು ಬಿಕ್ಕಿದಂತೆ, ಹೆಣ್ಣು ಧ್ವನಿಯೊಂದು ಅದನ್ನು ಮಮತೆಯಿಂದ ಸಂತೈಸಿದಂತೆ ಕೇಳಿ ಬಂದಾಗ, ಹೌದು, ಇದು ಮನೆಯೇ ಅನ್ನಿಸಿತು.

ಛಾಯಾಗ್ರಾಹಕ ಮಿತ್ರ ಕೇದಾರನಾಥ ಅವಾಕ್ಕಾಗಿ ನಿಂತಿದ್ದರು.

ಮತ್ತೊಮ್ಮೆ, ’ಬನ್ನಿ’ ಎಂದರು ಯಜಮಾನರು. ಅವರಿಗೆ ೯೦ ವರ್ಷ ವಯಸ್ಸು. ಹೆಸರು ತಮ್ಮಣ್ಣ ಜಿನ್ನಪ್ಪ ನರಸಿಂಗನವರ.

ಅವರಿಗೆ ವಯಸ್ಸಾಗಿರುವುದರಿಂದ ತಮಗಿಂತ ಐದು ವರ್ಷ ಚಿಕ್ಕವರಾಗಿರುವ ತಮ್ಮ ಭೀಮಣ್ಣ ನರಸಿಂಗನವರ ಅವರಿಗೆ ಮನೆಯ ಉಸ್ತುವಾರಿ ವಹಿಸಿಕೊಟ್ಟಿದ್ದಾರೆ. ಮನೆಯ ಅತಿ ಚಿಕ್ಕ ಸದಸ್ಯನಿಗೆ ಇನ್ನೂ ನಾಮಕರಣವಾಗಬೇಕಿದೆ. ತೊಟ್ಟಿಲು ನಿಲ್ಲದ ಮನೆಯಲ್ಲಿ ಸಣ್ಣವರ ಸ್ಥಾನ ಬದಲಾಗುತ್ತಲೇ ಇರುತ್ತದೆ.

ಇದು ಧಾರವಾಡದಿಂದ ೨೦ ಕಿಮೀ ದೂರದಲ್ಲಿರುವ ಲೋಕೂರು ಎಂಬ ಗ್ರಾಮದ ಅವಿಭಕ್ತ ಕುಟುಂಬದ ಕತೆ.


ಕುಟುಂಬದಲ್ಲಿರುವ ಹಾಲಿ ಸದಸ್ಯರ ಸಂಖ್ಯೆ ೧೮೦. ಪ್ರತಿ ತಿಂಗಳು-ಎರಡು ತಿಂಗಳಿಗೆ ಈ ಸಂಖ್ಯೆ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗದು. ಈ ಅವಧಿಯಲ್ಲಿ ಗರ್ಭಿಣಿಯರ ಪೈಕಿ ಒಬ್ಬರಲ್ಲ ಒಬ್ಬರು ಹೆರುತ್ತಾರೆ. ದೊಡ್ಡ ಮನೆ ತುಂಬ ಕಟ್ಟಿರುವ ಹತ್ತಕ್ಕೂ ಹೆಚ್ಚು ತೂಗು ತೊಟ್ಟಿಲುಗಳಲ್ಲಿ ಅರ್ಧಕ್ಕೂ ಹೆಚ್ಚು ಆಡುತ್ತಲೇ ಇರುತ್ತವೆ. ಬಾಣಂತಿಯನ್ನು ಬೆಚ್ಚಗಿಡಲೆಂದು ಮನೆಯ ಮುಂದೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಹಚ್ಚಿಡುವ ಬೆರಣಿ ಬೆಂಕಿ ಹೊಗೆಯಾಡುವುದನ್ನು ನಿಲ್ಲಿಸುವುದಿಲ್ಲ.

ನಿತ್ಯ ೧೮೦ ಜನರು ಒಂದೇ ಕಡೆ ಉಣ್ಣುತ್ತ, ವಿವಿಧೆಡೆ ಮಲಗುತ್ತ, ಊರ ಸುತ್ತ ಹಬ್ಬಿರುವ ಹೊಲಗಳಲ್ಲಿ ಕೆಲಸ ಮಾಡುತ್ತ, ಯಾವ ಜಗಳ, ಕಿರಿಕಿರಿ ಇಲ್ಲದೇ ನೆಮ್ಮದಿಯಿಂದ ಬದುಕುತ್ತ ಇದ್ದಾರೆ ಎಂದರೆ ನಾಗರಿಕ ಪ್ರಪಂಚಕ್ಕೆ ನಂಬಲು ಕಷ್ಟವಾಗುತ್ತದೆ. ಅಲ್ಲವೆ?

ಆದರೆ ನರಸಿಂಗನವರ ಕುಟುಂಬಕ್ಕೆ ಇದು ನೀರು ಕುಡಿದಷ್ಟು ಸುಲಭ.

’ನಮಗ ನೆನಪಿರಾಗಿಂದ ನಾವೆಲ್ಲ ಹಿಂಗ ಅದೀವ್ರಿ. ಒಬ್ಬೊಬ್ರ ಇದ್ದು ರೂಢಿನಾ ಇಲ್ಲ. ನಮಗ ಸುತ್ತ ಕಡೆ ಜನ ಇರಬೇಕು. ಮಕ್ಳುಮರಿ ಆಡ್ತಿರಬೇಕು, ಆಗ ಮಾತ್ರ ಸಮಾಧಾನ’ ಎನ್ನುತ್ತಾರೆ ದೊಡ್ಡ ಕುಟುಂಬದ ಉಸ್ತುವಾರಿ ನೋಡಿಕೊಳ್ಳುವ ಭೀಮಣ್ಣ ನರಸಿಂಗನವರ.

’ನಾವಷ್ಟ ಅಲ್ಲ, ನಮ್ಮ ಮನಿಗೆ ಹೊರಗ್ನಿಂದ ಬರೋ ಸೊಸೆಯಂದ್ರೂ ಹಿಂಗ ಹೇಳ್ತಾರ. ಮೊದಮೊದ್ಲು ಅವರಿಗೆ ಕಷ್ಟ ಅನಿಸಿದ್ರೂ ಸ್ವಲ್ಪ ದಿನದಾಗ ಎಲ್ರೂ ಹೊಂದಿಕೊಂಡುಬಿಡ್ತಾರ. ಒಬ್ರ ಇರಾಕ ಅವ್ರಿಗೂ ಬ್ಯಾಸರ ಆಗಾಕ ಶುರು ಆಗುತ್ತ. ಮನ್ಯಾಗ ಇರೋ ಎಲ್ರೂ ಹಿಂಗ...’ ಅನ್ನುತ್ತಾರೆ ಅವರು.

ಅದು ಸತ್ಯವೂ ಹೌದು. ನರಸಿಂಗನವರ ಮನೆಯಲ್ಲಿ ನೂರಾರು ಜನರಿದ್ದರೂ ಅದು ಗುಂಪು ಅನ್ನಿಸುವುದಿಲ್ಲ. ಜಂಗುಳಿ ಎಂಬ ಭಾವನೆ ಬರುವುದಿಲ್ಲ. ಅಳುವ ಮಕ್ಕಳು ಅಲ್ಲಿ ಯಾರಿಗೂ ಕಿರಿಕಿರಿ ಅಲ್ಲ. ಆಡುವ ಮಕ್ಕಳ ಸದ್ದು ಗಲಾಟೆ ಅನ್ನಿಸುವುದಿಲ್ಲ. ತೊಟ್ಟಿಲಲ್ಲಿ ಮಲಗಲು ಮಕ್ಕಳು ಇರುವಂತೆ ತೂಗುವ ಕೈಗಳೂ ಅಲ್ಲಿವೆ. ಯಾರು ಯಾರಿಗೂ ಭಾರ ಅಲ್ಲ.

ಏಕೆಂದರೆ ಪ್ರತಿಯೊಬ್ಬರೂ ತಂತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತ ಹೋಗುತ್ತಾರೆ. ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತ ಹೋಗುತ್ತಾರೆ. ಒಬ್ಬ ಕಾಯಿಲೆ ಮಲಗಿದ ಎಂದರೆ ಅವನ ಕೆಲಸವನ್ನು ಇತರರು ಹಂಚಿಕೊಳ್ಳುತ್ತಾರೆ. ಮಲಗಿದವನ ಯೋಗಕ್ಷೇಮ ನೋಡಿಕೊಳ್ಳಲು ಇತರರು ಸಿದ್ಧರಾಗುತ್ತಾರೆ. ಹೀಗಾಗಿ ಎಲ್ಲರಿಗೂ ನೆಮ್ಮದಿ. ತಮಗೇನೇ ಆದರೂ ಇತರರು ಇರುತ್ತಾರೆ ಎಂಬ ಸಮಾಧಾನ. ಖಾಲಿತನವಿಲ್ಲ. ಬೇಸರ ಎನ್ನುವ ಪ್ರಶ್ನೆ ಇಲ್ಲ, ಏಕಾಂಗಿತನ ಕಾಡುವುದಿಲ್ಲ. ಸುತ್ತ ಮುತ್ತ ಜನ ಇದ್ದೇ ಇರುತ್ತಾರೆ. ಆಸರಕ್ಕೆ ಬೇಸರಕ್ಕೆ ಕೈ ಚಾಚುತ್ತಾರೆ.

ಹೀಗಾಗಿ ಇದೊಂದು ಅಪರೂಪದ ಕುಟುಂಬ. ಮಾದರಿ ಕುಟುಂಬ.

ಮೂಲ ಮಹಾರಾಷ್ಟ್ರ

’ಮಹಾರಾಷ್ಟ್ರ ರಾಜ್ಯದ ಮೀರಜ್, ಕೊಲ್ಲಾಪುರ, ಸಾಂಗಲಿ ನಡುವೆ  ಇರುವ ಹಾತಕಲ್ ಅಂಗಡಾ ಎಂಬ ಪ್ರದೇಶದಲ್ಲಿದ್ದ ಜೈನ ಕುಟುಂಬ ನಮ್ಮದು. ಅಲ್ಲಿಯ ನರಸೋಬಾ ದೇವಸ್ಥಾನದ ಅರ್ಚಕರಾಗಿದ್ದ ನಮ್ಮ ಹಿರೀಕರ ಪೈಕಿ ಮೂವರು ಹಿರಿಯರು ಯಾವುದೋ ಕಾರಣಕ್ಕಾಗಿ ೧೬ನೇ ಶತಮಾನದಲ್ಲಿ ತಮ್ಮ ಮೂಲಸ್ಥಳ ಬಿಟ್ಟು ದೇಶಾಂತರ ಹೊರಟು ಇಲ್ಲಿಗೆ ಬಂದರು. ಇವರ ಪೈಕಿ ನರಸಿಂಗಪ್ಪ ಎಂಬ ಪೈಲ್ವಾನ್ ಲೋಕೂರಿನ ದುರ್ಗಾದೇವಿ ದೇವಸ್ಥಾನದಲ್ಲಿ ರಾತ್ರಿ ಮಲಗಿದ್ದ. ಆತನಿಗೆ ಇಲ್ಲಿಯೇ ಉಳಿಯಬೇಕೆಂಬ ಪ್ರೇರಣೆಯಾಯಿತು.

’ತನ್ನಲ್ಲಿದ್ದ ಹಣದಿಂದ ದೇವಸ್ಥಾನದ ಹತ್ತಿರದ ಪ್ರದೇಶವನ್ನು ಖರೀದಿಸಿ, ಅಲ್ಲೊಂದು ಸಣ್ಣ ಮನೆ ಕಟ್ಟಿದ. ಮದುವೆಯಾದ. ಆತನಿಗೆ ಏಳು ಮಕ್ಕಳಾದವು. ಅಲ್ಲಿಂದ ಶುರುವಾದ ಸಂತಾನವೃಕ್ಷ ಹಬ್ಬುತ್ತಲೇ ಇದೆ. ಆತನಿಂದಾಗಿ ನಮ್ಮ ಕುಟುಂಬಕ್ಕೆ ನರಸಿಂಗನವರ ಎಂಬ ಅಡ್ಡ ಹೆಸರು ಬಂದಿತು’ ಎಂದು ಕುಟುಂಬದ ಕತೆ ಪ್ರಾರಂಭಿಸುತ್ತಾರೆ ಭೀಮಣ್ಣ ನರಸಿಂಗನವರ.

’ಈಗ ನಾವು ಕೂತಿರುವುದು ಆತ ಖರೀದಿಸಿದ ಜಾಗದಲ್ಲಿ ಕಟ್ಟಿಸಿದ ಮನೆಯಲ್ಲಿ. ಕ್ರಮೇಣ ಸಂಸಾರ ಬೆಳೆಯಿತು. ಮನೆ ದೊಡ್ಡದಾಗುತ್ತ ಹೋಯಿತು. ದೂರದ ಊರಿನಿಂದ ನೆಲೆ ಹುಡುಕಿಕೊಂಡು ಬಂದವರು ನಾವು. ಮಕ್ಕಳೆಲ್ಲ ಬೇರೆ ಹೋದರೆ ಆಸ್ತಿ ಮೂರಾಬಟ್ಟೆಯಾಗಿ, ಯಾರಿಗೂ ತುಂಡು ನೆಲವೂ ದೊರೆಯುವುದಿಲ್ಲ ಎಂಬ ವಿವೇಕ ಮೊದಲಿನಿಂದಲೇ ಇತ್ತು. ಹೀಗಾಗಿ ಮದುವೆಯಾದ ಹೆಣ್ಣುಮಕ್ಕಳು ಹೊರಹೋಗಿದ್ದು ಬಿಟ್ಟರೆ ಯಾವೊಂದು ಗಂಡು ಕುಡಿಯೂ ಇಲ್ಲಿಂದ ಹೊರಹೋಗಿಲ್ಲ. ಹಾಗೆ ಹೋದ ಒಂದಿಬ್ಬರೂ ಹಿಂದೆಯೇ ವಾಪಸ್ಸಾಗಿದ್ದಾರೆ. ಹೀಗಾಗಿ ನಾಲ್ಕು ಶತಮಾನಗಳಿಂದ ನಮ್ಮದು ಅವಿಭಕ್ತ ಕುಟುಂಬವೇ’ ಎನ್ನುತ್ತಾರೆ ಅವರು.

ಅದು ಸತ್ಯವೂ ಹೌದು. ಒಬ್ಬ ನರಸಿಂಗಪ್ಪನಿಂದ ಪ್ರಾರಂಭವಾದ ಕುಟುಂಬದ ಸದಸ್ಯರ ಸಂಖ್ಯೆ ಬರ, ರೋಗ-ರುಜಿನ, ಸಾವು-ನೋವು, ಯುದ್ಧ, ಬಡತನ ಎಲ್ಲವನ್ನೂ ಎದುರಿಸುತ್ತ ಈ ನಾಲ್ಕುನೂರು ಚಿಲ್ಲರೆ ವರ್ಷಗಳಲ್ಲಿ ೩೦೦ ದಾಟಿದೆ. ಎಲ್ಲರೂ ಒಟ್ಟಾಗಿ ದುಡಿಯುವ ಕಾರಣ ಆದಾಯದ ಪ್ರಮಾಣದಲ್ಲಿಯೂ ಹೆಚ್ಚಳವಾಗುತ್ತ ನಡೆದಿದೆ. ಕೈಯಲ್ಲಿ ಸ್ವಲ್ಪ ದುಡ್ಡಿಟ್ಟುಕೊಂಡು ಬಂದಿದ್ದ ಒಬ್ಬ ವ್ಯಕ್ತಿಯ ಸಂತಾನ ಹಾಗೂ ಆಸ್ತಿ ಈ ಪರಿ ಬೆಳೆಯಲು ಕಾರಣ ಒಗ್ಗಟ್ಟೇ ಹೊರತು ಬೇರೇನೂ ಅಲ್ಲ.

ಒಗ್ಗಟ್ಟಿನಿಂದಾಗಿ ಪ್ರಗತಿ

’ಒಂದು ವೇಳೆ ಊರಲ್ಲಿರೋ ನಾವು ೧೮೦ ಮಂದಿ ಬ್ಯಾರೆ ಆದ್ರ ಎಲ್ರೂ ಬಡವರಾಗೇ ಬದುಕಬೇಕಾಗುತ್ತ’ ಎಂದು ಎಚ್ಚರಿಸುತ್ತಾರೆ ಭೀಮಣ್ಣ. ’ಏಕೆಂದರೆ ನಮ್ಮ ಹತ್ತಿರ ಈಗ ೨೭೦ ಎಕರೆ ಭೂಮಿ ಇದೆ. ಇದರ ಪೈಕಿ ೮ ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತದೆ. ನೀರಾವರಿ ಭೂಮಿಯ ಪ್ರಮಾಣ ಕೇವಲ ೩೩ ಎಕರೆ ಮಾತ್ರ. ನೂರೆಂಬತ್ತು ಜನರ ಪೈಕಿ ೬ ಜನ ಮಾತ್ರ ಸರ್ಕಾರಿ ನೌಕರಿಯಲ್ಲಿದ್ದಾರೆ. ಖರ್ಚು ತೆಗೆದರೆ ಅವರ ಬಾಕಿ ಆದಾಯವೂ ಇಲ್ಲಿಗೇ ಬರುತ್ತದೆ. ಒಂದು ವೇಳೆ ಎಲ್ಲರೂ ಬೇರೆ ಆದರೆ ಒಬ್ಬರಿಗೆ ಒಂದು ಎಕರೆ ಭೂಮಿಯೂ ಬರುವುದಿಲ್ಲ. ಆಗ ಜೀವನ ನಡೆಯೋದು ಹೇಗೆ?’ ಎಂದು ಅವರು ಪ್ರಶ್ನಿಸುತ್ತಾರೆ.

ಇವರ ಖರ್ಚು ಕೂಡ ಆದಾಯಕ್ಕೆ ತಕ್ಕ ಹಾಗೆ ಇದೆ. ದಿನಕ್ಕೆ ೫೦ರಿಂದ ೬೦ ಕೆಜಿ ಜೋಳ, ೧೫ರಿಂದ ೨೦ ಕೆಜಿ ಗೋದಿ ಖರ್ಚಾಗುತ್ತದೆ. ನಿತ್ಯ ೩೦ರಿಂದ ೪೦ ಲೀಟರ್ ಹಾಲು ಬೇಕು. ಹಬ್ಬ ಬಂದರೆ ದಿನಕ್ಕೆ ಒಂದು ಕ್ವಿಂಟಲ್ ಜೋಳ ಖರ್ಚಾಗುತ್ತದೆ. ಕುಟುಂಬದಲ್ಲಿ ಯಾರೂ ಹೋಟೆಲ್‌ಗೆ ಹೋಗುವುದಿಲ್ಲ. ರೊಟ್ಟಿಪ್ರಿಯರಾಗಿದ್ದರಿಂದ ಅನ್ನದ ಅವಲಂಬನೆ ಕಡಿಮೆ.

ಮದುವೆ... ಮದುವೆ...

ಇಂಥ ಬೃಹತ್ ಕುಟುಂಬದಲ್ಲಿ ನಿತ್ಯದ ಅಡುಗೆಯೇ ಮದುವೆ ಅಡುಗೆ ಮೀರಿಸುವಾಗ, ಇನ್ನು ನಿಜವಾದ ಮದುವೆ ನಡೆದರೆ ಹೇಗಿರುತ್ತದೆ?

ಇಂಥದೊಂದು ಅವಕಾಶಕ್ಕಾಗಿ ಮೂರು ತಿಂಗಳಿಂದ ಕಾಯ್ದುಕೊಂಡಿದ್ದ ನಮಗೆ ನಿರಾಶೆಯಾಗಲಿಲ್ಲ. ’ಮೇ ೧ರಂದು ನಮ್ಮ ಮನೆಯಲ್ಲಿ ಮದುವೆ ನೀವು ಬರಬೇಕು’ ಎಂಬ ಆಮಂತ್ರಣ ಅದೊಂದಿನ ನರಸಿಂಗನವರ ಕುಟುಂಬದಿಂದ ಬಂದಿತು.


(ಮುಂದಿನ ಭಾಗದಲ್ಲಿ ಮುಕ್ತಾಯ)
 

- ಚಾಮರಾಜ ಸವಡಿ
(ಚಿತ್ರಗಳು:
ಬಿ.ಎಂ. ಕೇದಾರನಾಥ. ಹೆಚ್ಚಿನ ಚಿತ್ರಗಳನ್ನು ವೀಕ್ಷಿಸಿ http://picasaweb.google.com/chamarajs/Lokur# )

13 comments:

ಆನಂದ said...

nuclear family ಗಳೇ ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ಇಷ್ಟು ದೊಡ್ಡ ಕುಟುಂಬವಿದೆ (ಜಡೆಗಳ ಜಗಳವಿಲ್ಲದೆ!) ಅಂದರೆ ಅಚ್ಚರಿ.
ನಮ್ಮ ರಾಜ್ಯದಲ್ಲಿಯೇ ಇರುವುದು ಒಂದು ರೀತಿ ಖುಶಿ.
ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು

ಬಿಹಾರದಲ್ಲೊಂದು ಈ ರೀತಿಯ ಕುಟುಂಬದ ಬಗ್ಗೆ, ತುಂಬಾ ಹಿಂದೆ ಕರ್ಮವೀರದಲ್ಲಿ ಓದಿದ ನೆನಪು.

Unknown said...

ಹಿಂದೊಮ್ಮೆ ಟೀವಿಯಲ್ಲಿ ಈ ಕುಟುಂಬದ ಬಗ್ಗೆ ನೋಡಿದ ನೆನಪು. ನಿಮ್ಮ ಅಕ್ಷರ ರೂಪ ಬೆಹಳ ಚೆನ್ನಾಗಿ ಓದಿಸಿಕೊಂಡು ಹೋಯಿತು. ಆ ಮಹಾಕುಟುಂಬದ ಮದುವೆಯ ಸಂಭ್ರಮದ ನಿಮ್ಮ ಬರಹಕ್ಕಾಗಿ ಕಾಯುತ್ತಿರುತ್ತೇನೆ.

Chamaraj Savadi said...

ಥ್ಯಾಂಕ್ಸ್‌ ಸತ್ಯನಾರಾಯಣ ಸರ್‌. ನಾಲ್ಕು ವರ್ಷಗಳ ಹಿಂದೆ ಬರೆದಿದ್ದ ಈ ಲೇಖನವನ್ನು ಸುಧಾದಲ್ಲಿ ಮುಖಪುಟ ಲೇಖನವನ್ನಾಗಿ ಪ್ರಕಟಿಸಲಾಗಿತ್ತು. ಈ ಟಿವಿ ಕನ್ನಡದಲ್ಲಿ ಅದು ಬಂದಿದ್ದು ನಂತರ ಅನಿಸುತ್ತದೆ. ಅದಕ್ಕಿಂತ ಮುಂಚೆ ಹಲವಾರು ಮಾಧ್ಯಮಗಳು ಈ ಕುಟುಂಬದ ಬಗ್ಗೆ ಬರೆದಿವೆ. ತರಂಗ ಕೂಡ ಈ ಕುರಿತು ನಂತರ ಲೇಖನ ಪ್ರಕಟಿಸಿತ್ತು.

ಶೀಘ್ರದಲ್ಲೇ ಮದುವೆ ಬಗ್ಗೆಯೂ ಬರೆಯಲಿದ್ದೇನೆ.

ರಾಘವೇಂದ್ರ ಗಣಪತಿ said...

ಆ ಕುಟುಂಬದಲ್ಲಿ ವಾಸಿಸುವವರ ನೆನಪಿನ ಶಕ್ತಿ ಅಗಾಧವಾಗಿರಲೇಬೇಕು. 180 ಜನ ಹೆಸರು, ಮುಖ ಪರಿಚಯ ನೆನಪಿನಲ್ಲಿಟ್ಟುಕೊಂಡು ಗುರುತಿಸುವುದು ಅದ್ಭುತವೇ ಸರಿ.

Chamaraj Savadi said...

ಹೌದು ಆನಂದ್‌, ಅವಿಭಕ್ತ ಕುಟುಂಬಗಳು ಅಪರೂಪವಾಗುತ್ತಿವೆ. ಹೀಗಾಗಿ, ಲೋಕೂರಿನ ಈ ಕುಟುಂಬ ಮನ ಸೆಳೆಯುತ್ತದೆ. ಕರ್ನಾಟಕದ ಬಹಳಷ್ಟು ಕಡೆ ಈ ರೀತಿಯ ಅವಿಭಕ್ತ ಕುಟುಂಬಗಳಿವೆ. ಆದರೆ, ನನಗೆ ಗೊತ್ತಿರುವ ಮಟ್ಟಿಗೆ ಲೋಕೂರಿನ ಈ ಕುಟುಂಬ ಅವೆಲ್ಲವುಗಳಿಗಿಂತ ತುಂಬ ದೊಡ್ಡದು ಮತ್ತು ಹಳೆಯದು.

Chamaraj Savadi said...

ಕುಟುಂಬದ ಎಲ್ಲ ಕಿರಿಯ ಸದಸ್ಯರ ಹೆಸರು ಹಳಬರಿಗೆ ನೆನಪಿಲ್ಲ ರಾಘವೇಂದ್ರ. ಆದರೆ, ಇವು ತಮ್ಮನೆ ಮಕ್ಕಳು ಎಂಬುದು ಮಾತ್ರ ಅವರಿಗೆ ಗೊತ್ತಾಗುತ್ತದೆ. :)

umesh desai said...

ಸವಡಿ ಸರ್ ಅಪರೂಪದ ಕುಟುಂಬದ ಪರಿಚಯ ಮಾಡಿಕೊಟ್ರಿ ಧನ್ಯವಾದಗಳು.ನಮ್ಮ ಹಳ್ಳಿಕಡೆ ಇನ್ನೂ ಬದುಕು ಉಸಿರಾಡ್ತದ
ಅನ್ನೂದಕ್ಕ ಇಂಥಾ ಕುಟುಂಬ ಸಾಕ್ಷಿ ಹೇಳ್ತಾವ

AntharangadaMaathugalu said...

ಚಾಮರಾಜ್ ಸಾರ್...
ತರಂಗದಲ್ಲಿ ಓದಿದ್ದೆ... ನಿಮ್ಮ ಮುಂದಿನ ಭಾಗಕ್ಕಾಗಿ ಎದುರು ನೋಡುತ್ತಿದ್ದೇನೆ...

ಶ್ಯಾಮಲ

Chamaraj Savadi said...

ಥ್ಯಾಂಕ್ಸ್‌ ಉಮೇಶ್‌. ‌ಗ್ರಾಮೀಣ ಪ್ರದೇಶಗಳಷ್ಟೇ ಅಲ್ಲ, ಹಲವಾರು ಪಟ್ಟಣ ಪ್ರದೇಶಗಳಲ್ಲಿ ಈಗಲೂ ಸಾಕಷ್ಟು ಸಂಖ್ಯೆಯ ಅವಿಭಕ್ತ ಕುಟುಂಬಗಳಿವೆ. ಅದು ಅಚ್ಚರಿಯಷ್ಟೇ ಅಲ್ಲ, ಸಂತಸದ ಸಂಗತಿಯೂ ಹೌದು.

Chamaraj Savadi said...

ಥ್ಯಾಂಕ್ಸ್‌ ಶಾಮಲಾ, ನಾನು ಈ ಲೇಖನ ಬರೆದಿದ್ದು ಸುಧಾ ವಾರಪತ್ರಿಕೆಗೆ ಮುಖಪುಟ ಲೇಖನವಾಗಿ. ನೀವು ಓದಿದ ತರಂಗದಲ್ಲಿ ಬೇರೆಯವರು ಬರೆದ ಇದೇ ವಿಷಯದ ಲೇಖನ ನಾಲ್ಕೈದು ತಿಂಗಳುಗಳ ನಂತರ ಅಚ್ಚಾಗಿತ್ತು. ನನ್ನ ಮುಂದಿನ ಮತ್ತು ಕೊನೆಯ ಭಾಗ ಶೀಘ್ರದಲ್ಲಿ ಬರಲಿದೆ. :)

shivu.k said...

ಸಾವಡಿ ಸರ್,

ನಿಮ್ಮ ಈ ಲೇಖನಕ್ಕೆ ತಡವಾಗಿ ಬರುತ್ತಿದ್ದೇನೆ. ಈಗ ಲೇಖನ ಓದಿದ ಮೇಲೆ ನನಗೆ ಅಸೂಯೆ ಅನ್ನಿಸಿದ್ದು ಇಷ್ಟು ದೊಡ್ಡ ಕುಟುಂಬದ ಪೋಟೊ ನಾನು ತೆಗೆಯಲಿಲ್ಲವಲ್ಲ ಅಂತ. ಇರಲಿ ಬಿಡಿ. ನೀವು ತೆಗೆದು ಅವರ ಬಗ್ಗೆ ಬರೆದು ನಮಗೆ ಕೊಟ್ಟಿದ್ದೀರಿ. ಅಲ್ಲಿನ ವಾತಾವರಣವನ್ನು ನೋಡಿದಾಗ ನಿಜಕ್ಕೂ ನಾವೊಂದು ದಿನ ಅಲ್ಲಿದ್ದರೇ ಹೇಗೆ ಅನ್ನಿಸದಿರದು.

ನೀವು ಅವರ ಮದುವೆ ಕಾರ್ಯಕ್ರಮಕ್ಕೆ ಹೋಗಿ ಬನ್ನಿ ಅದರ ಬಗ್ಗೆ ಲೇಖನ ಮತ್ತು ಚಿತ್ರಗಳನ್ನು ಕಾಯುತ್ತೇನೆ.

Anonymous said...

ತುಂಬಾ ಚೆನ್ನಾಗಿದೆ ನಿಮ್ಮ ಬರಹ. ಓದಿ ತುಂಬಾ ಸಂತೋಷವಾಯಿತು.
ಮುಂದಿನ ಭಾಗಕ್ಕೆ ಕಾತುರದಿಂದ ಕಾಯುತ್ತಿದ್ದೇನೆ.

hamsanandi said...

ಎರಡನೇ ಭಾಗ ಓದಿದ ಮೇಲೆ ಮೊದಲ ಭಾಗ ಓದಿದೆ :)