ವಸುಧೈವ ಕುಟುಂಬಕಂ (ಭಾಗ-೨)

15 Dec 2009



ಲಗ್ನಪತ್ರವನ್ನೊಮ್ಮೆ ನೀವು ನೋಡಬೇಕು. ಅದರ ತುಂಬ ಜೋಡಿಗಳ ಹೆಸರೋ ಹೆಸರು. ಹಾಗಿದ್ದರೂ ಆ ಸಲ ಮದುವೆಯಾಗುತ್ತಿರುವವರ ಸಂಖ್ಯೆ ಕಡಿಮೆ ಇತ್ತು. ಕೇವಲ ಒಂಬತ್ತು ಜೋಡಿಯ ಮದುವೆ. ಅತಿ ಹೆಚ್ಚು ಎಂದರೆ ೨೦ ಜೋಡಿಯ ವಿವಾಹ ಒಮ್ಮೆ ನಡೆದಿತ್ತಂತೆ.

ಅಲ್ಲಿ ಹೋಗಿ ನೋಡಿದರೆ ಸಾಮೂಹಿಕ ಮದುವೆ ನಡೆಯುತ್ತಿದೆಯೇನೋ ಎಂಬಂಥ ವಾತಾವರಣ. ಉದ್ದವಾಗಿ ನಿರ್ಮಿಸಿದ ವೇದಿಕೆಯಲ್ಲಿ ಒಂಬತ್ತು ಮತ್ತು ಒಂಬತ್ತು- ಒಟ್ಟು ೧೮ ನವವಿವಾಹಿತರು ಸಾಲಾಗಿ ಕೂತಿದ್ದರು. ಅಡ್ಡ ಬೇರೆ ಜನ ಬಾರದಂತೆ, ಅಷ್ಟೂ ಜನರ ಫೋಟೊವನ್ನು ಒಂದೇ ಫ್ರೇಮಿನಲ್ಲಿ ತೆಗೆಯುವುದು ಹೇಗೆಂಬ ಪೇಚಾಟ ನಮ್ಮ ಛಾಯಾಗ್ರಾಹಕ ಕೇದಾರನಾಥ ಅವರದು. ಹಾಗೂ ಹೀಗೂ ಯತ್ನಿಸಿ, ಅಡ್ಡ ಬರುತ್ತಿದ್ದವರನ್ನು ಒಂದೆಡೆ ಸರಿಸಿ ಫೋಟೊ ತೆಗೆಯುವ ಹೊತ್ತಿಗೆ ಸಾಕಾಯಿತು.

ಮದುವೆಗೆ ಬಂದವರ ಪೈಕಿ ಮುಕ್ಕಾಲು ಜನ ಮನೆಯವರೇ. ಎಲ್ಲರೂ ಬಳಗವೇ. ಎಲ್ಲರೂ ಎಲ್ಲರಿಗೂ ಪರಿಚಿತರೇ. ಅಪರಿಚಿತರೆಂದರೆ ನಮ್ಮಂಥವರು ಮಾತ್ರ. ಅಕ್ಷತೆ ಹಾಕಿದ ಪ್ರತಿಯೊಬ್ಬರಿಗೂ ಪ್ರತಿಯೊಂದು ಜೋಡಿಯಿಂದ ಪರಿಚಿತ ಮುಗುಳ್ನಗೆ. ಕೈಹಿಡಿದು ಕುಶಲ ವಿಚಾರಣೆ. ದೂರದಲ್ಲಿ ನಿಂತ ಭೀಮಣ್ಣ ನರಸಿಂಗನವರ ಮುಖದ್ಲಲಿ ಧನ್ಯತೆ. ಈ ಒಂಬತ್ತು ಜೋಡಿಯಿಂದ ಮತ್ತೆ ಬದುಕು ಕುಡಿಯೊಡೆಯುತ್ತದೆ. ಬಳಗ ಬೆಳೆಯುತ್ತದೆ. ಜಾನಪದ ಹಾಡಿನಲ್ಲಿ ಮುಗುದೆಯೊಬ್ಬಳು ’ಕರಕಿಯ ಕುಡಿ ಹಂಗ, ಹಬ್ಬಲಿ ಅವರ ರಸಬಳ್ಳಿ’ ಎಂದು ಹಾಡಿದಂತೆ ಲೋಕೂರಿನ ಈ ಅವಿಭಕ್ತ ಕುಟುಂಬ ಚಲ್ಲವರಿದು ಹಬ್ಬುತ್ತ ಹೋಗುತ್ತದೆ.

’ವಸುಧೈವ ಕುಟುಂಬಕಂ’ ಎಂಬ ಸಂದೇಶವನ್ನು ಸದ್ದಿಲ್ಲದೇ ಸಾರುತ್ತದೆ.
 

ಇದು ಒಂದು ಮನೆಯ ಕಥೆ

ನರಸಿಂಗನವರ ಕುಟುಂಬದ ಮೂಲ ಮನೆ ದೊಡ್ಡದು. ನೂರು ಮನೆಗಳಿರಬಹುದಾದ ಈ ಊರಿನಲ್ಲಿ ಇವರಿಗೆ ಒಟ್ಟು ಎಂಟು ಮನೆಗಳಿವೆ. ದೊಡ್ಡ ಮನೆ ಎಂಬುದು ೩೩ ಅಂಕಣಗಳುಳ್ಳ, ೨೨ ಕೋಣೆಗಳುಳ್ಳ, ೪,೦೩೦ ಚದರಡಿ ವಿಸ್ತಾರದ ದೊಡ್ಡ ಬಂಗಲೆ. ಆದರೆ ಇಲ್ಲಿ ವಾಸಿಸುವವರ ಸಂಖ್ಯೆ ಕಡಿಮೆ. ಊಟ, ಮಕ್ಕಳು ಹಾಗೂ ಹೆಣ್ಣುಮಕ್ಕಳ ವಾಸಕ್ಕಾಗಿ ಇದನ್ನು ಬಳಸಲಾಗುತ್ತಿದೆ. ಕುಟುಂಬದ ಬಳಕೆಯಲ್ಲಿ ಇದು ಊಟದ ಮನೆ. ಇನ್ನಿತರ ಮನೆಗಳ ಪೈಕಿ ಒಂದರಲ್ಲಿ ಹಾಲಿನ ಡೈರಿಯಿದೆ, ಇನ್ನೊಂದರಲ್ಲಿ ಹಿಟ್ಟಿನ ಗಿರಣಿ, ಮತ್ತೊಂದರಲ್ಲಿ ಉಗ್ರಾಣ... ಪಟ್ಟಿ ಹೀಗೇ ಬೆಳೆಯುತ್ತದೆ. 

ಮಕ್ಕಳು, ವೃದ್ಧರು ಹಾಗೂ ಹುಡುಗ-ಹುಡುಗಿಯರು ಮೊದಲ ಅಂತಸ್ತಿನಲ್ಲಿರುವ ಸಿನಿಮಾ ಥೇಟರ್ ಮಾದರಿಯ ದೊಡ್ಡ ಹಾಲ್‌ನಲ್ಲಿ ಮಲಗುತ್ತಾರೆ. ದಂಪತಿಗಳಿಗಾಗಿ ಹಾಲ್‌ನ ಎರಡೂ ಕಡೆ ವಸತಿಗೃಹಗಳಲ್ಲಿ ಇರುವಂತೆ ಎದುರುಬದರು ಕೋಣೆಗಳಿವೆ. ಉಳಿದಂತೆ ಕೆಲಸದ ಮೇಲಿರುವವರು ಬಾಕಿ ಏಳು ಮನೆಗಳಲ್ಲಿ ತಂತಮ್ಮ ಪಾಳಿ ಇರುವ ಕಡೆ ಮಲಗುತ್ತಾರೆ.
 

ತೊಟ್ಟಿಲುಗಳೆಲ್ಲ ಕೆಳ ಅಂತಸ್ತಿನಲ್ಲಿ. ಬಾಣಂತಿಯರ ಕೋಣೆಗಳೂ ಅಲ್ಲಿಯೇ. ಉಳಿದಂತೆ ಸ್ನಾನದ ಮನೆ, ಊಟದ ಮನೆಗಳು ಕೆಳಗಿವೆ. ಕೆಳ ಅಂತಸ್ತಿನಲ್ಲಿ ಏನಿಲ್ಲವೆಂದರೂ ಏಳೆಂಟು ತೊಟ್ಟಿಲುಗಳಿವೆ. ಮಗು ದೊಡ್ಡದಾದಂತೆ ತೊಟ್ಟಿಲನ್ನು ಒಂದೆಡೆ ಕಂಬಕ್ಕೆ ಬಿಗಿದು ಕಟ್ಟುತ್ತಾರೆ. ಆದರೆ ಯಾವತ್ತೂ ಅದನ್ನು ಬಿಚ್ಚಿ ಇಡುವುದಿಲ್ಲ. ಏಕೆಂದರೆ ಒಬ್ಬರಲ್ಲ ಒಬ್ಬರು ಗರ್ಭಿಣಿಯರಾಗಿರುವಾಗ ಅದನ್ನು ತುಂಬ ದಿನ ಹಾಗೆ ಇಡುವ ಪ್ರಮೇಯವೇ ಒದಗುವುದಿಲ್ಲ!

ಹೆಗ್ಗಡೆ ಮೆಚ್ಚುಗೆ
 

ಲೋಕೂರಿನ ಅವಿಭಕ್ತ ಕುಟುಂಬದ ಬಗ್ಗೆ ಸ್ಥಳೀಯ ಪತ್ರಿಕೆಗಳ ನಂತರ, ದೊಡ್ಡ ಮಟ್ಟದಲ್ಲಿ ಮೊದಲು ಸುದ್ದಿ ಮಾಡಿದ್ದು ‘ದಿ ಹಿಂದು’ ಆಂಗ್ಲ ಪತ್ರಿಕೆ. ಇದನ್ನು ನೋಡಿದ ಬಿಬಿಸಿ ತಂಡ ಗಿರೀಶ ಕಾರ್ನಾಡ್ ಅವರನ್ನು ಸಂಪರ್ಕಿಸಿ, ಸ್ಥಳೀಯ ಸಹಕಾರಕ್ಕೆ ಕೋರಿತು. ಎಲ್ಲ ವ್ಯವಸ್ಥೆಯಾದ ನಂತರ ಬಿಬಿಸಿಯ ದೊಡ್ಡ ತಂಡ ಲೋಕೂರಿಗೆ ಬಂದು ೧೮ ದಿನಗಳ ಕಾಲ ಚಿತ್ರೀಕರಣ ನಡೆಸಿತು.

ನಂತರ ನಡೆದಿದ್ದು ಇತಿಹಾಸ.
 

ಬಿಬಿಸಿ ಸಾಕ್ಷ್ಯಚಿತ್ರ ನೋಡಿದ ನಂತರ ಜಪಾನ್ ಹಾಗೂ ಕೊರಿಯಾ ದೇಶಗಳಿಂದಲೂ ಬಂದ ಟಿವಿ ತಂಡಗಳು ವಿಸ್ತೃತ ಚಿತ್ರೀಕರಣ ನಡೆಸಿ ಲೋಕೂರು ಅವಿಭಕ್ತ ಕುಟುಂಬದ ಕತೆಯನ್ನು ಇಡೀ ಜಗತ್ತಿಗೆ ಸಾರಿ ಹೇಳಿದವು.

ಒಮ್ಮೆ ಈ ಕಡೆ ಬಂದಾಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಮ್ಮ ಕುಟುಂಬದೊಂದಿಗೆ ಲೋಕೂರಿಗೆ ಭೇಟಿ ನೀಡಿ ಒಂದಿಡೀ ಹಗಲನ್ನು ನರಸಿಂಗನವರ ಕುಟುಂಬದ ಜತೆಗೆ ಕಳೆದರು. ಸಹಬಾಳ್ವೆ ಬೋಧಿಸಿದ ಜೈನ ತೀರ್ಥಂಕರರ ಮಾದರಿಯನ್ನು ಸಾಕಾರ ಮಾಡಿರುವ ಕುಟುಂಬವನ್ನು ಕೊಂಡಾಡಿದರು. ನರಸಿಂಗನವರ ಕುಟುಂಬಕ್ಕೆ ಅದೊಂದು ಮರೆಯಲಾಗದ ದಿನ.
 

ಎಲ್ಲರ ಹೆಸರು ನೆನಪಿಲ್ಲ!
 

ನರಸಿಂಗನವರ ಕುಟುಂಬದ ಹಿರಿಯ ಭೀಮಣ್ಣನವರಿಗೆ ಕುಟುಂಬದ ಹಿರಿಯ ಸದಸ್ಯರನ್ನು ಬಿಟ್ಟರೆ ಮಕ್ಕಳೆಲ್ಲರ ಹೆಸರುಗಳು ನೆನಪಿಲ್ಲ. 
ಅದು ಸಾಧ್ಯವೂ ಇಲ್ಲ. ‘ಸಣ್ಣ ಮಕ್ಕಳ ಹೆಸರು ನೆನಪಿಡುವುದು ಕಷ್ಟ. ಹೆಸರಿಡಿದು ಕರೆಯಬೇಕಾದಾಗ ಅವರವರ ತಾಯಂದಿರನ್ನು ಕೇಳುತ್ತೇನೆ. ಇಲ್ಲದ್ದಿದರೆ ಏ ಪುಟ್ಟ, ಏ ಪುಟ್ಟಿ, ಏ ತಮ್ಮಾ ಎಂದು ಮಾತಾಡಿಸುತ್ತೇನೆ. ಮನೆಯ ನೂರಾರು ಜನರ ಹೆಸರನ್ನು ನೆನಪಿಡುವುದಾದರೂ ಹೇಗೆ?’ ಎಂದು ತಲೆ ಕೊಡವುತ್ತಾರೆ ಅವರು.

ಆದರೆ, ಇವು ತಮ್ಮ ಮನೆ ಮಕ್ಕಳು, ಇವು ಬೇರೆಯವರವು ಎಂಬುದು ಅವರಿಗೆ ಗೊತ್ತಾಗುತ್ತದೆ. ಅಲ್ಲದೇ, ಈ ಮಗುವಿನ ತಂದೆ ಇಂಥವರು, ತಾಯಿ ಇಂಥವರು ಎಂಬುದೂ ಗೊತ್ತಾಗುತ್ತದೆ. ಮನೆಯಲ್ಲಿರುವ ಎಲ್ಲರಿಗೂ ಮನೆಯ ಸದಸ್ಯರಾರು, ಹೊರಗಿನವರಾರು ಎಂಬುದು ಚೆನ್ನಾಗಿ ಗೊತ್ತಿದೆ.

ಸ್ವಂತ ಡೇರಿ, ಹಿಟ್ಟಿನ ಗಿರಣಿ!
 

ನರಸಿಂಗನವರ ಕುಟುಂಬದ ಬಳಕೆಗೆಂದೇ ಹಿಟ್ಟಿನ ಗಿರಣಿಯೊಂದನ್ನು ಹಾಕಲಾಗಿದೆ. ಕುಟುಂಬದ ಬಳಕೆಗೆಂದೇ ಸ್ವಂತ ಡೇರಿ ಇದೆ. ನಾವು ನೋಡಿದಾಗ ಅಲ್ಲಿ ೪೦ರಿಂದ ೪೫ ಹಸು-ಎಮ್ಮೆಗಳಿದ್ದವು. ‘ಮೊದಲು ಎಂಬತ್ತಕ್ಕೂ ಹೆಚ್ಚು ದನಕರುಗಳ್ಳಿದ್ದವು. ಆದರೆ ಮೂರು ವರ್ಷ ಸತತ ಕಾಡಿದ ಬರಗಾಲದಲ್ಲಿ ಮೇವಿನ ಸಮಸ್ಯೆ ಬಂದು ಅರ್ಧದಷ್ಟು ದನಕರುಗಳನ್ನು ಮಾರಿಬಿಟ್ಟೆ. ದಿನಕ್ಕೆ ೩೦ರಿಂದ ೪೦ ಲೀಟರ್ ಹಾಲು ಬೇಕಾಗುತ್ತದೆ. ಹೀಗಾಗಿ ಡೇರಿ ಇಡುವುದು ಅನಿವಾರ್ಯ’ ಎನ್ನುತ್ತಾರೆ ಭೀಮಣ್ಣ.
ಮನೆಯ ಸದಸ್ಯರಲ್ಲಿ ಅರ್ಧಕ್ಕರ್ಧ ಜನ ಚಹ-ಕಾಫಿ ಕುಡಿಯುವುದಿಲ್ಲ. ಹೀಗಾಗಿ ಇಷ್ಟು ಮಾತ್ರದ ಹಾಲು ಸಾಕು. ಮನೆ ತುಂಬ ಇರುವ ಚಿಕ್ಕ ಮಕ್ಕಳಿಗೆಂದೇ ಅರ್ಧಕ್ಕಿಂತ ಹೆಚ್ಚು ಹಾಲು ಬಳಕೆಯಾಗುತ್ತದೆ. ಉಳಿದಂತೆ ದಿನಸಿ ಸಾಮಾನುಗಳನ್ನಷ್ಟೇ ಹೊರಗಿನಿಂದ ಖರೀದಿ ಮಾಡಲಾಗುತ್ತದೆ. ಮಳೆಗಾಲ ಬಿಟ್ಟರೆ, ಉಳಿದ ದಿನಗಳ್ಲಲಿ ತರಕಾರಿಯೂ ಹೊರಗಿನಿಂದ ಬರುತ್ತದೆ. ಎಷ್ಟೇ ಕಡಿಮೆ ಬಳಸಿದರೂ ಮನೆಯ ವಿದ್ಯುತ್ ಬಿಲ್ ತಿಂಗಳಿಗೆ ರೂ.೧೦,೦೦೦ದಿಂದ ೧೨,೦೦೦ ಬರುತ್ತದೆ.

ಹಳ್ಳಿಯಾಗಿದ್ದರಿಂದ ಕರೆಂಟ್ ಇಲ್ಲದಿರುವುದೇ ಹೆಚ್ಚು. ಕತ್ತಲ್ಲಲಿ ರೊಟ್ಟಿ ಸುಡುವ ಫಜೀತಿ ನೋಡಲಾಗದೇ ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಉಚಿತವಾಗಿ ಸೋಲಾರ್ ಲೈಟಿಂಗ್ ವ್ಯವಸ್ಥೆ ಮಾಡಿಕೊಟ್ಟಿದೆ. ಬಿಬಿಸಿಯವರು ಸಾಕ್ಷ್ಯಚಿತ್ರ ಮಾಡಿದ ನಂತರ ಟಿವಿ ಒಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಹಾಲ್ ಮಧ್ಯೆ ಇರುವ ಟಿವಿಯಲ್ಲಿ ಕನ್ನಡ ಸಿನಿಮಾ ನೋಡಲು ಮನೆ ಮಂದಿ ಕೂತರೆ ಟಾಕೀಸ್‌ಗಳು ನಾಚಬೇಕು.


ವ್ಯಾಪಾರವೂ ಆಗುತ್ತದೆ ಹಾಗೂ ಮನೆ ಬಳಕೆಗೂ ಆಗುತ್ತದೆ ಎಂದು ಮೊದಲು ಕಿರಾಣಿ (ದಿನಸಿ) ಅಂಗಡಿಯೊಂದನ್ನು ತೆರೆಯಲಾಗಿತ್ತು. ಆದರೆ ಸದಾ ಮನೆಯಲ್ಲಿರುವ ಮೂವತ್ತಕ್ಕೂ ಹೆಚ್ಚು ಮಕ್ಕಳು ಅಂಗಡಿಯಲ್ಲಿದ್ದ ಸಿಹಿ ತಿನಿಸು, ಪೆಪ್ಪರ್‌ಮಿಂಟ್, ಬೆಲ್ಲ, ಹುರಿಗಡಲೆ ಇತ್ಯಾದಿ ಸುಲಭ ಖಾದ್ಯ ವಸ್ತುಗಳನ್ನು ಎರಡೇ ದಿನಗಳಲ್ಲಿ ಖಾಲಿ ಮಾಡಿದ್ದರಿಂದ, ಅಂಗಡಿಯನ್ನು ಮುಚ್ಚಲಾಯಿತು.


ನಿತ್ಯದ ದಾಸೋಹಕ್ಕೆ ಸಾಮಾನು ಸರಬರಾಜು ಮಾಡುವ ಕೆಲಸವನ್ನು ಒಬ್ಬನಿಗೆ ವಿಧಿಸಲಾಗಿದೆ. ಆತನ ಕೆಲಸ ಏನೆಂದರೆ, ಬೆಳಿಗ್ಗೆ ಉಗ್ರಾಣದಿಂದ ರೊಟ್ಟಿಗೆ ಹಿಟ್ಟು, ಉಪ್ಪು, ಸೌದೆ ವ್ಯವಸ್ಥೆ, ಚಹ-ಕಾಫಿ-ಸಕ್ಕರೆ ಎತ್ತಿಡುವುದು, ಅವತ್ತಿನ ಅಕ್ಕಿ, ಗೋದಿ, ಬೇಳೆ ಕಾಳು, ತರಕಾರಿ, ತುಪ್ಪ ಇತ್ಯಾದಿ ವಸ್ತುಗಳನ್ನು ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ನೀಡುವುದು; ಕೊರತೆಯಾದ ವಸ್ತುಗಳ ಯಾದಿ ತಯಾರಿಸಿ, ಹಿರಿಯರಿಗೆ ತೋರಿಸಿ ಖರೀದಿ ಮಾಡುವುದು, ಇತ್ಯಾದಿ. ಹೀಗಾಗಿ ಅಡುಗೆಗೆ ಯಾವ ಸಾಮಾನುಗಳ ಕೊರತೆಯೂ ಕಾಡುವುದಿಲ್ಲ. 


ಅಡುಗೆ ಮಾಡಲು ಪಾಳಿ
 

ಇಲ್ಲಿ ನಿತ್ಯ ೧,೨೦೦ಕ್ಕೂ ಹೆಚ್ಚು ರೊಟ್ಟಿಗಳನ್ನು ಮಾಡಲಾಗುತ್ತದೆ. ಹಬ್ಬ ಅಥವಾ ಮದುವೆ ಬಂದರೆ ಈ ಸಂಖ್ಯೆ ಇನ್ನೂ ಹೆಚ್ಚು. ಕುಟುಂಬದ ಸದಸ್ಯರ ಪೈಕಿ ಅರ್ಧದಷ್ಟು ಹೆಣ್ಣುಮಕ್ಕಳೇ ಇರುವುದರಿಂದ ಅಡುಗೆ ಮಾಡಲು ಪಾಳಿ ರೂಪಿಸಲಾಗಿದೆ. ಬೆಳಿಗ್ಗೆ ೪ ಗಂಟೆಗೆ ಮೊದಲ ಪಾಳಿ ಹೆಣ್ಣುಮಕ್ಕಳು ಎದ್ದು ಕೆಲಸಕ್ಕೆ ತೊಡಗುತ್ತಾರೆ. ೫ ಗಂಟೆಯಿಂದ ರೊಟ್ಟಿ ಬಡಿಯಲು ಶುರು ಮಾಡಿದರೆ, ನೀವು ನಂಬುತ್ತೀರೋ ಇಲ್ಲವೋ, ರಾತ್ರಿ ೧೧ರವರೆಗೆ ರೊಟ್ಟಿ ಬಡಿಯುವ ಸಪ್ಪಳ ನಿಲ್ಲುವುದೇ ಇಲ್ಲ.

ಮೊದಲ ಪಾಳಿಯಲ್ಲಿ ನಾಲ್ಕು ಜನ ಹೆಣ್ಣುಮಕ್ಕಳು. ಇವರ ಪೈಕಿ ಇಬ್ಬರು ಊಟಕ್ಕೆ ಅಥವಾ ಬೇರೆ ಕೆಲಸಗಳಿಗೆ ಎದ್ದರೆ ಇನ್ನಿಬ್ಬರು ರೊಟ್ಟಿ ಬಡಿಯುವದನ್ನು ಮುಂದುವರೆಸುತ್ತಾರೆ. ಒಂದು ಕಡೆ ರೊಟ್ಟಿ ಬೇಯುತ್ತಿದ್ದರೆ, ಹೊರಗೆ ಪಡಸಾಲೆಯಲ್ಲಿ ತಮಗೆ ಅನುಕೂಲವಾದ ಸಮಯದಲ್ಲಿ ಊಟ ಮಾಡಲು ಬಂದು ಹೋಗುವವರು ಇದ್ದೇ ಇರುತ್ತಾರೆ. ಯಾರೂ ಇಲ್ಲ ಎಂದಾಗ ಮಾತ್ರ ರೊಟ್ಟಿ ಬಡಿಯುವವರಿಗೆ ಬಿಡುವು. 


ಬೆಳಗಿನ ಪಾಳಿ ಮಧ್ಯಾಹ್ನ ೪ಕ್ಕೆ ಮುಗಿದರೆ ಎರಡನೇ ಪಾಳಿ ರಾತ್ರಿ ೧೧ಕ್ಕೆ ಮುಕ್ತಾಯವಾಗುತ್ತದೆ. ಪ್ರತಿ ವಾರ ಪಾಳಿ ಸಮಯ ಬದಲಾಗುತ್ತದೆ. ರೊಟ್ಟಿ ಬಡಿಯುವುದನ್ನು ಬಿಟ್ಟರೆ, ಚಿಕ್ಕ ಮಕ್ಕಳ ಕೆಲಸ ಮಾಡುವುದು, ನೀರು ಕಾಯಿಸುವುದು, ಬಟ್ಟೆ ತೊಳೆಯುವುದು, ಶಾಲೆಗೆ ಹೋಗುವ ಮಕ್ಕಳನ್ನು ಸಿದ್ಧಗೊಳಿಸುವುದು- ಹೀಗೆ ತರಹೇವಾರಿ ಕೆಲಸಗಳಿರುತ್ತವೆ.
 

ಊಟಕ್ಕೆ ಯಾವ ನಿಗದಿತ ಸಮಯವೂ ಇಲ್ಲ. ಎಲ್ಲರೂ ತಮ್ಮ ಕೆಲಸಗಳ ಮಧ್ಯೆ ಬಿಡುವು ಮಾಡಿಕೊಂಡು ಬಂದು ಊಟ ಮಾಡಿ ಹೋಗುತ್ತಾರೆ. ಬೇರೆ ಯಾವ ಸಮಯದಲ್ಲಿ ಸಿಗದಿದ್ದರೂ  ಊಟದ ಸಮಯದಲ್ಲಿ ಮನೆಯ ಸದಸ್ಯರು ಬಂದೇ ಬರುತ್ತಾರೆ. ಹೋಟೆಲ್‌ಗೆ ಹೋಗುವ ಚಟ ಯಾರಲ್ಲೂ ಇಲ್ಲದಿರುವುದರಿಂದ ಊಟಕ್ಕೆ ಬರುವುದು ಗ್ಯಾರಂಟಿ.
 


ಮನೆ ತುಂಬ ಸಮಾನತೆ
 

ಜೈನ ಸಮಾಜದಲ್ಲಿ ಮಹಿಳೆಯರಿಗೆ ತುಂಬ ಗೌರವ.
 

ಆ ಪರಂಪರೆ ಲೋಕೂರಿನ ನರಸಿಂಗನವರ ಮನೆಯಲ್ಲಿಯೂ ಇದೆ. ಇಲ್ಲಿ ಮಹಿಳೆ ಕೆಲಸ ಮಾಡುವ ಯಂತ್ರವಲ್ಲ. ಆಕೆ ಹೊರಗೆ ಹೋಗಿ ದುಡಿಯುವ ಸಂದರ್ಭ ಬಂದಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿಯೇ ಉಳಿದಿದ್ದಾಳೆ. ಓದುತ್ತೇನೆಂದ ೨೦-೨೨ ಹುಡುಗ-ಹುಡುಗಿಯರಿಗೆಂದೇ ಧಾರವಾಡದ ಮಾಳಮಡ್ಡಿಯಲ್ಲಿ ದೊಡ್ಡ ಮನೆ ಮಾಡಲಾಗಿದೆ. ಮನೆ ನೋಡಿಕೊಳ್ಳಲು ಇಬ್ಬರು ಹಿರಿಯ ಹೆಣ್ಣುಮಕ್ಕಳನ್ನು ಅಲ್ಲಿಗೆ ಕಳಿಸಲಾಗಿದೆ.

ಲೋಕೂರಿನ ಮನೆಯಲ್ಲಿ ಸ್ನಾನ ಮಾಡಿದ ನಂತರ ಎಲ್ಲ ಗಂಡಸರೂ ತಮ್ಮ ಒಳ ಉಡುಪುಗಳನ್ನು ತಾವೇ ತೊಳೆದುಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಮನೆಯ ಹೆಣ್ಣುಮಕ್ಕಳಿಗೆ ಕೆಲಸ ಕಡಿಮೆಯಾಗುತ್ತದೆ ಎಂಬ ಭಾವನೆ ಅವರದು. ಪ್ರತಿಯೊಬ್ಬರೂ ಸಾಧ್ಯವಾದಷ್ಟೂ ತಂತಮ್ಮ ಕೆಲಸಗಳನ್ನು ತಾವೇ ಮಾಡುವುದರಿಂದ ಹೆಣ್ಣುಮಕ್ಕಳು ನಿರಾಳ.


ಯಾವೊಬ್ಬ ತಾಯಿಯೂ ಇದು ತನ್ನ ಮಗು, ಅದು ಪರರದು ಎಂಬ ಭೇದ ಮಾಡುವುದಿಲ್ಲ. ಹಾಲೂಡಿಸುವ ಹಂತ ದಾಟಿದ ನಂತರ ಮಗು ಎಲ್ಲರಿಗೂ ಸೇರಿದ್ದು. ಶಾಲೆಗೆ ಹೋಗುವ ಹೆಣ್ಣುಮಕ್ಕಳು ತಮ್ಮ ತಾಯಿಯ ಕೈಯಿಂದಲೇ ಜಡೆ ಹಾಕಿಸಿಕೊಳ್ಳಬೇಕು ಎಂಬ ನಿಯಮ ಇಲ್ಲ. ಯಾರು ಖಾಲಿ ಇರುತ್ತಾರೋ ಅವರ ಮುಂದೆ ಹೋಗಿ ಮಗು ಕೂಡುತ್ತದೆ. ಹೀಗಾಗಿ ಹೆಣ್ಣುಮಕ್ಕಳಲ್ಲಿ ಒಗ್ಗಟ್ಟು ಬೆಳೆದಿದೆ. ಕಷ್ಟ ಮತ್ತು ಸುಖವನ್ನು ಒಟ್ಟಿಗೇ ಹಂಚಿಕೊಳ್ಳುವುದನ್ನು ಕಲಿಸಿದೆ. 


ಜವಳಿ ಖರೀದಿ!
 

ವರ್ಷಕ್ಕೆ ಎರಡು ಮೂರು ಸಂದರ್ಭಗಳಲ್ಲಿ ಮನೆ ಮಂದಿಗೆಲ್ಲ ಹೊಸ ಬಟ್ಟೆ ಖರೀದಿಸಲಾಗುತ್ತದೆ. ಆ ಸಂಭ್ರಮ ನೋಡಲು ಎರಡು ಕಣ್ಣು ಸಾಲವು. ಅತ್ಯಂತ ಸಾಧಾರಣ ಬಟ್ಟೆ ಖರೀದಿಸಿದರೂ, ಒಂದು ಸಲದ ಖರೀದಿ ಮೌಲ್ಯ ರೂ.೪೦,೦೦೦ಕ್ಕಿಂತ ಕಡಿಮೆಯಾಗುವುದಿಲ್ಲ. 

ಮದುವೆ ಜವಳಿ ಖರೀದಿ ಇನ್ನೂ ಸಂಭ್ರಮದ್ದು. ಏನಿಲ್ಲವೆಂದರೂ ರೂ.೨ರಿಂದ ೨.೫ ಲಕ್ಷ ಜವಳಿ ಖರೀದಿಯಾಗುತ್ತದೆ. ಅದನ್ನು ಟ್ರಾಕ್ಟರ್ ಅಥವಾ ಟ್ರ್ಯಾಕ್ಸ್ ಮೂಲಕ ಹೇರಿಕೊಂಡು ಬರಲಾಗುತ್ತದೆ. ಬಟ್ಟೆ ಹೊಲಿಯುವವರಿಗಂತೂ ತಿಂಗಳಗಟ್ಟಲೆ ಬಿಡುವಿಲ್ಲದ ಕೆಲಸ.

ಮದುವೆಯಲ್ಲಿ ಖರ್ಚು ಐದಾರುಪಟ್ಟು ಹೆಚ್ಚಾಗುತ್ತದೆ. ಬೆಲ್ಲ ಹಾಕಿದ ಉಂಡಿ ಮಾಡಿಸಿದರೆ, ಮನೆಯ ಜನರಿಗೇ ಸಾವಿರಾರು ಉಂಡಿ ಬೇಕಾಗುತ್ತವೆ. ಕ್ವಿಂಟಾಲ್‌ಗಟ್ಟಲೇ ಅನ್ನ, ಕಡಾಯಿಗಟ್ಟಲೇ ಸಾರು ಮನೆ ಮಂದಿಗೇ ಬೇಕು. ಇದರ ಜತೆಗೆ ಮದುವೆಗೆ ಬಂದ ನೆಂಟರು, ಊರ ಜನರು ಸೇರಿದರೆ ಅದೊಂದು ಜಾತ್ರೆ. ಆದರೂ ಯಾವ ವಸ್ತುವಿಗೂ ಕೊರತೆಯಾಗುವುದಿಲ್ಲ. ಒಬ್ಬರಲ್ಲಿಯೂ ಅಸಮಾಧಾನ ತೋರುವುದಿಲ್ಲ. 


ನೂರು ಮತ, ಒಬ್ಬ ತಾ.ಪಂ. ಸದಸ್ಯ!
 

ನರಸಿಂಗನವರ ಮನೆಯಲ್ಲಿಯೇ ಕನಿಷ್ಠ ನೂರು ಮತಗಳಿವೆ. ಹೀಗಾಗಿ ಚುನಾವಣೆ ಬಂತೆಂದರೆ ಈ ಮನೆಗೆ ಆಗಮಿಸದ ಅಭ್ಯರ್ಥಿಯೇ ಇಲ್ಲ. ಅವರಿವರಿಗೆ ಓಟು ಹಾಕುವುದೇಕೆ ಎಂಬ ವಿಚಾರ ಬಂದಾಗ ಕುಟುಂಬದ ಸದಸ್ಯನೊಬ್ಬ ಚುನಾವಣೆಗೆ ನಿಲ್ಲಲು ಮುಂದಾದ. ಟಿಕೆಟ್ ಕೊಡಲು ರಾಜಕೀಯ ಪಕ್ಷಗಳ ನಡುವೆಯೇ ಸ್ಪರ್ಧೆ ನಡೆಯಿತು. ಕೊನೆಗೂ ಗೆದ್ದಿದ್ದು ಜೆಡಿಎಸ್. ಆ ಪಕ್ಷದ ಟಿಕೆಟ್ ಪಡೆದ ನರಸಿಂಗನವರ್ ಕುಟುಂಬದ ಮಂಜುನಾಥ ತಾಲ್ಲೂಕು ಪಂಚಾಯತಿ ಸ್ಪರ್ಧೆಗೆ ನಿಂತ. ಅನಾಯಾಸವಾಗಿ ಆರಿಸಿಯೂ ಬಂದ.

ಇಡೀ ಮನೆ ಮಂದಿಯ ಸಾಮಾನ್ಯ ಕಾಯಿಲೆಗಳಿಗೆಂದೇ ಚಿಕ್ಕ ಔಷಧ ಭಂಡಾರ ಮನೆಯಲ್ಲಿದೆ. ಕಾಯಿಲೆ ಕೊಂಚ ಉಲ್ಬಣಿಸಿದರೆ ನೋಡಲು ಕುಟುಂಬ ವೈದ್ಯ ಹುಬ್ಬಳ್ಳಿಯ ಡಾ. ಆರ್.ಬಿ. ಪಾಟೀಲ ಇದಾರೆ.


ನರಸಿಂಗನವರ್ ಕುಟುಂಬ ಕುಸ್ತಿಪಟುಗಳಿಗೆ ಹೆಸರುವಾಸಿ. ಮನೆಯ ಸಾಮಾನುಗಳು, ಯಂತ್ರಗಳು ದುರಸ್ತಿಗೆ ಬಂದರೆ ಇರಲಿ ಎಂದು ಕುಟುಂಬದ ಸದಸ್ಯ ದೇವೇಂದ್ರನಿಗೆ ತರಬೇತಿ ಕೊಡಿಸಲಾಗಿದೆ. ಟ್ರಾಕ್ಟರ್, ಟ್ರ್ಯಾಕ್ಸ್, ಹಿಟ್ಟಿನ ಗಿರಣಿ- ಇತ್ಯಾದಿ ವಾಹನಗಳು ಹಾಗೂ ಯಂತ್ರಗಳ ದುರಸ್ತಿ ಈತನ ಕೆಲಸ. ಸರ್ಕಾರಿ ಕೆಲಸ ನೋಡಿಕೊಳ್ಳಲು ತಾ.ಪಂ. ಸದಸ್ಯ ಮಂಜುನಾಥ, ಕೃಷಿ ನೋಡಿಕೊಳ್ಳಲು ಪದ್ಮಣ್ಣ, ಮನೆ ವ್ಯವಹಾರ ನಿಭಾಯಿಸಲು ಮಹಾವೀರ, ಡೇರಿ ನೋಡಿಕೊಳ್ಳಲು ಧರ್ಮೇಂದ್ರ ಇದ್ದಾರೆ. ಇವರೆಲ್ಲರ ಮೇಲೆ ಭೀಮಣ್ಣನವರ ಉಸ್ತುವಾರಿ ಇದೆ.
 

ಕರ್ಮ ದೂರಾದವು...
 

ನರಸಿಂಗನವರ್ ಅವರ ಅವಿಭಕ್ತ ಕುಟುಂಬ ಒಂದು ಪ್ರೇಕ್ಷಣೀಯ ಸ್ಥಳವೇ ಸರಿ. ಪ್ರತಿ ವಾರ ಒಬ್ಬಿಬ್ಬರು ಪ್ರವಾಸಿಗರು ಇದ್ದೇ ಇರುತ್ತಾರೆ. ಒಮ್ಮೊಮ್ಮೆ ದೂರದ ಊರುಗಳ ಶಾಲೆಯಿಂದ ಮಕ್ಕಳು ಪ್ರವಾಸ ಬರುವುದೂ ಉಂಟು. ಆಗೆಲ್ಲ ಮಕ್ಕಳ ಊಟ ಈ ಮನೆಯಲ್ಲಿಯೇ. ಜಗಳವಾಡಿ ದೂರಾದ ದಂಪತಿಗಳು, ಬೇರೆ ಮನೆ ಮಾಡಬೇಕೆಂದು ಮೊಂಡು ಕೂತ ಎಳೆಯ ದಂಪತಿಗಳನ್ನು ಕರೆದುಕೊಂಡು ಹಿರಿಯರು ಈ ಮನೆಗೆ ಬರುವುದೂ ಉಂಟು. ಯಾರೇ ಬಂದರೂ ಮನೆಯವರಿಗೆ ಬೇಸರವಿಲ್ಲ. ಅವರು ಕೇಳುವ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಉತ್ತರ ಕೊಡುತ್ತಾರೆ.
ಬಂದವರೂ ಅಷ್ಟೇ, ತೆರಳುವಾಗ, ‘ನಿಮ್ಮ ಮನೆಗೆ ಬಂದು ನಮ್ಮ ಕರ್ಮ ದೂರಾದವು. ದೇವರು ನಿಮ್ಮನ್ನು ಹೀಗೇ ಚೆನ್ನಾಗಿಟ್ಟಿರಲಿ’ ಎಂದು ಹರಸುತ್ತಾರೆ. ಅದೇ ನಮ್ಮ ಪಾಲಿಗೆ ದೊಡ್ಡ ಆಶೀರ್ವಾದ ಎನ್ನುತ್ತಾರೆ ಭೀಮಣ್ಣ. 


ಆಸಕ್ತರು ‘ಭೀಮಣ್ಣ ನರಸಿಂಗನವರ್, ಅಂಚೆ: ಲೋಕೂರು, ತಾ/ಜಿ. ಧಾರವಾಡ’ ಇಲ್ಲಿಗೆ ಅಥವಾ ಮಂಜುನಾಥ ಅವರನ್ನು ದೂರವಾಣಿ: ೯೩೪೩೧ ೦೯೫೨೭ ಮೂಲಕ ಸಂಪರ್ಕಿಸಬಹುದು. 

ಕುಟುಂಬಗಳ ಮಾತು ಹಾಗಿರಲಿ, ರಾಜ್ಯ-ದೇಶಗಳೇ ತುಂಡಾಗಿಹೋಗುತ್ತಿರುವ ಈ ದಿನಗಳಲ್ಲಿ
ಲೋಕೂರಿನ  ಈ ಅವಿಭಕ್ತ ಕುಟುಂಬ ಅಚ್ಚರಿ ಹುಟ್ಟಿಸುವ ತಾಣ. ಈ ಮನೆಯನ್ನು ನೋಡುತ್ತಿದ್ದಂತೆ ‘ವಸುಧೈವ ಕುಟುಂಬಕಮ್‌’ ಎಂಬ ಮಾತಿನ ಅರ್ಥ ತನಗೆ ತಾನೇ ಹೊಳೆಯುತ್ತದೆ. ಮನಸ್ಸು ತುಂಬಿ ಬರುತ್ತದೆ. 



- ಚಾಮರಾಜ ಸವಡಿ
(ಚಿತ್ರಗಳು: ಬಿ.ಎಂ. ಕೇದಾರನಾಥ್‌)

8 comments:

Anonymous said...

ತುಂಬಾ ಚೆನ್ನಾದ ಬರಹ. ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸವಡಿ ಸರ್!

Chamaraj Savadi said...

ನಿಮ್ಮ ಹೆಸರನ್ನು ಉಚ್ಛರಿಸುವುದೇ ಗೊತ್ತಾಗ್ತಿಲ್ಲ Carpe Diem ಅವರೇ. ಪ್ರತಿಕ್ರಿಯೆಗಾಗಿ ಥ್ಯಾಂಕ್ಸ್‌.

shivu.k said...

ಸಾವಡಿ ಸರ್,

ಇತ್ತೀಚಿನ ದಿನಗಳಲ್ಲಿ ಇಷ್ಟು ಸ್ಪೂರ್ತಿ ನೀಡಿದ ಲೇಖನವನ್ನು ನಾನು ಓದಿಯೇ ಇರಲಿಲ್ಲ. ನಾನು ಆ ಜಾಗಕ್ಕೆ ಬೇಟಿ ನೀಡಬೇಕೆನ್ನಿಸಿದೆ. ಹಾಲು ಕುಡಿದಾದ ನಂತರ ಆ ಮಗುವಿಗೆ ಎಲ್ಲರೂ ತಾಯೆಂದಿರು. ಹೆಣ್ಣು ಮಕ್ಕಳು ಜಡೆ ಹಾಕಿಸಿಕೊಳ್ಳಲು ಯಾರ ಬಳಿ ಬೇಕಾದರೂ ಹೋಗಬಹುದು. ಇದೆಲ್ಲಾ ಓದಿ ನನ್ನ ಶ್ರೀಮತಿ ಬೊಕ್ಕಸ ಬೆರಗಾದಳು. ನನಗೂ ಅನೇಕ ವಿಚಾರಗಳಲ್ಲಿ ಅಚ್ಚರಿ ಉಂಟಾಗಿದ್ದರಿಂದ ನಾನು ಅಲ್ಲಿಗೆ ಹೋಗಬೇಕೆನಿಸಿದೆ...
ಬಿಡುವು ಮಾಡಿಕೊಂಡು ಅಂತ ವಸುದೈವ ಕುಟುಂಬಕಂ ನೋಡಬೇಕಿದೆ..

ಉತ್ತಮ ಮಾಹಿತಿಯುಕ್ತ ಲೇಖನಕ್ಕೆ ಧನ್ಯವಾದಗಳು.

ಆನಂದ said...

ಉತ್ತಮ ಬರಹ, ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್ !

Chamaraj Savadi said...

ಥ್ಯಾಂಕ್ಸ್‌ ಶಿವು, ಖಂಡಿತ ನೀವು ಭೇಟಿ ನೀಡಬೇಕು ಅಲ್ಲಿಗೆ. ನೀವು ಹಾಗೂ ನಿಮ್ಮ ಕ್ಯಾಮೆರಾ ಖುಷಿಯಿಂದ ದಣಿಯುವಷ್ಟು ದೃಶ್ಯಗಳು, ಸ್ಫೂರ್ತಿ ಅಲ್ಲಿ ಸಿಗುತ್ತದೆ. ಲೇಖನದ ಕೊನೆಗೆ ವಿಳಾಸ ಕೊಟ್ಟಿದ್ದೇನೆ. ಫೋನ್‌ ನಂಬರ್‌ ಬದಲಾಗಿದ್ದರೂ ವಿಳಾಸ ಅದೇ. ಹೋಗಿ ಬನ್ನಿ. ಹೊಸ ಸ್ಫೂರ್ತಿ ನಿಮ್ಮದಾಗಲಿ.

hamsanandi said...

ಬಹಳ ಆಶ್ಚರ್ಯ ಆಯಿತು ಓದಿ! ಲೋಕೂರು ಎಲ್ಲಿದೆ?

Chamaraj Savadi said...

ಥ್ಯಾಂಕ್ಸ್‌ ಆನಂದ್‌.

Chamaraj Savadi said...

ಧಾರವಾಡ ಜಿಲ್ಲೆ ಅಂತ ಪ್ರಾರಂಭದಲ್ಲೇ ಬರೆದಿದ್ದೇನಲ್ಲ ರಾಮಪ್ರಸಾದ್. ವಿಳಾಸದಲ್ಲಿಯೂ ಅದು ಸ್ಪಷ್ಟವಿದೆ.