ಗುರುವಾದ ಮಗಳಿಗೆ ಈಗ ಹತ್ತು ವರ್ಷ

20 Apr 2012

ಮನೆ ಎದುರಿನ ರಸ್ತೆಯಲ್ಲಿ ಮಕ್ಕಳ ಗುಂಪು, ಗದ್ದಲ. ಈಗ ತಾನೇ ನಡೆಯಲು ಕಲಿತ ಮಗುವಿನಿಂದ ಹಿಡಿದು ಹೈಸ್ಕೂಲು ಮೆಟ್ಟಿಲು ಹತ್ತಲಿರುವ ವಯಸ್ಸಿನವರೆಗಿನ ಮಕ್ಕಳು ಅಲ್ಲಿದ್ದಾರೆ. ಅವರು ಆಡಿದ್ದೇ ಆಟ. ಹಾಕಿದ್ದೇ ನಿಯಮ. ಪರೀಕ್ಷೆ ಮುಗಿದ ಸಂತಸದಲ್ಲಿ ಕೂಗಾಡುತ್ತ ಆಡುತ್ತಿದ್ದಾರೆ.
 

ಅವರ ಗುಂಪಿನಿಂದ ದೂರ, ಮನೆ ಎದುರಿಗೆ ಹಾಸಿದ ಪುಟ್ಟ ಕಟ್ಟೆಯಂತಿರುವ ಜಾಗದಲ್ಲಿ ಆಯಾ ಮನೆಗಳ ತಾಯಂದಿರು, ಅಜ್ಜಿಯರು ಕೂತಿದ್ದಾರೆ. ಅವರ ಮಧ್ಯೆ ಮಗುವೊಂದು ಕೂತಿದೆ. ಅದಕ್ಕೆ ಆಡುವ ಮಕ್ಕಳ ಕೇಕೆಯ ಕಡೆ ಗಮನವಿಲ್ಲ. ಅದರ ಲೋಕವೇ ಬೇರೆ.
 

ಆಕೆ ಗೌರಿ.
 

ಹತ್ತು ವರ್ಷಗಳ ಹಿಂದೆ, ಇದೇ ದಿನ (ಏಪ್ರಿಲ್ ೧೯) ಗೌರಿ ಜನಿಸಿದಾಗ ನಾನು ಕೊಪ್ಪಳದಲ್ಲಿದ್ದೆ. ಬದುಕು ಕಟ್ಟಿಕೊಳ್ಳುವ ಹೆಣಗಾಟದ ದಿನಗಳವು. ಅನಿವಾರ್ಯವಾಗಿ ಶುರು ಮಾಡಿದ್ದ ವಾರಪತ್ರಿಕೆಯೊಂದಕ್ಕೆ ಬರೆಯುತ್ತ ಕೂತವನನ್ನು ಫೋನ್ ಮಾಡಿ ಕರೆಸಿದ್ದರು ಮಾವ. ನೀವು ಬಿಜಿ ಇರ್ತೀರಂತ ಹೇಳಿರಲಿಲ್ಲ. ರೇಖಾಳನ್ನು ನಿನ್ನೆ ರಾತ್ರಿಯೇ ಆಸ್ಪತ್ರೆಗೆ ಸೇರಿಸಿದ್ವಿ. ಬೇಗ ಬನ್ನಿ ಎಂದಿದ್ದರು.
 

ರಾತ್ರಿಯಿಡೀ ನಿದ್ದೆಗೆಟ್ಟವನು ಹಾಗೇ ಪೆನ್ನು ಮುಚ್ಚಿಟ್ಟು ಅವಸರದಲ್ಲಿ ಆಸ್ಪತ್ರೆಗೆ ಬಂದಿದ್ದೆ. ನನ್ನನ್ನೇ ಕಾಯುತ್ತಿದ್ದ ಡಾಕ್ಟರ್, ಸಿಸೇರಿಯನ್ ಆಗ್ಬೇಕು, ನೀವಿಲ್ಲಿ ಸೈನ್ ಮಾಡಿ ಎಂದು ಮುಂದೆ ಹಿಡಿದ ಹಾಳೆಯಲ್ಲಿ ಸಹಿ ಮಾಡಿ ಅರ್ಧ ಗಂಟೆ ಸುಮ್ಮನೇ ಕೂತಿದ್ದೆ. ವರ್ಷದ ಹಿಂದೆ ಡಿಗ್ರಿ ಕೊನೆಯ ವರ್ಷದ ಪರೀಕ್ಷೆ ಬರೆದು, ರಜೆಯಲ್ಲಿ ಮದುವೆಯಾಗಿದ್ದ ರೇಖಾ ಒಳಗೆ ಲೇಬರ್ ರೂಮಿನಲ್ಲಿ ತಾಯಾಗಲಿದ್ದಳು.
 

ಏನಿದ್ದವು ನನ್ನ ಭಾವನೆಗಳಾಗ?
 

ಇದ್ದ ಇಬ್ಬರೇ ಬಲು ಸಾಧಾರಣ ಜೀವನ ಸಾಗಿಸಲೂ ಕಷ್ಟಪಡಬೇಕಿತ್ತು. ಈಗ ನಮ್ಮ ಮಧ್ಯೆ ಇನ್ನೊಂದು ಜೀವ ಬರಲಿದೆ. ಅದಕ್ಕಾಗಿ ಹರ್ಷ ಪಡಬೇಕೋ, ಚಿಂತೆ ಮಾಡಬೇಕೋ ಎಂಬ ಗೊಂದಲ.
 

ಸುಮ್ಮನೇ ಕೂತವನೆದುರು ಬಂದು ನರ್ಸ್ ಹೇಳಿದ್ದಳು: ಹೆಣ್ಣುಮಗು!
 

ಗೌರಿ ಹುಟ್ಟಿದ್ದು ಹಾಗೆ.
 

*****
 

ಬಲು ಕೆಂಪಗಿತ್ತು ಮಗು. ಆಕೆಯನ್ನು ಮೊದಲ ಬಾರಿ ನೋಡಿದಾಗಿನ ಕ್ಷಣಗಳು ಇವತ್ತಿಗೂ ನೆನಪಿನಲ್ಲಿ ಹಚ್ಚಹಸಿರು. ಹೆರಿಗೆ ನೋವು, ಸಿಸೇರಿಯನ್ ರಗಳೆಯಲ್ಲಿ ಬಾಡಿದಂತಿದ್ದ ರೇಖಾಳ ಮೊಗದಲ್ಲಿ ಬೆಳದಿಂಗಳು. ಪಕ್ಕದಲ್ಲೇ ಮಲಗಿತ್ತು ಪುಟ್ಟ ಗೌರಿ- ಕೆಂಪಗೆ, ದಪ್ಪಗೆ, ಮುಷ್ಠಿ ಬಿಗಿದುಕೊಂಡು.
 

ಆ ಕ್ಷಣದಲ್ಲಿ, ಈಕೆ ಮುಂದೆ ನನಗೆ ಗುರುವಾಗುತ್ತಾಳೆಂದು ಖಂಡಿತ ಅಂದುಕೊಂಡಿರಲಿಲ್ಲ.
 

*****
 

ಮೂರು ತಿಂಗಳಾದರೂ ಗೌರಿಯ ಕತ್ತು ಸ್ಥಿರವಾಗಲಿಲ್ಲ. ದೃಷ್ಟಿ ಎತ್ತಲೋ. ಮಗು ಗೆಲುವಾಗಿತ್ತು. ಊಟ, ನಿದ್ದೆ, ತನ್ನ ಪಾಡಿಗೆ ತಾನು ಆಟವಾಡುವುದು ಎಲ್ಲಾ ಇದ್ದರೂ, ಸುತ್ತಲಿನ ಜಗತ್ತಿನೊಂದಿಗೆ ಸಂಬಂಧ ಇಲ್ಲದಂತಿತ್ತು. ತೊಟ್ಟಿಲ ಮೇಲೆ ಬಾಗಿ, ಲಟಿಕೆ ಹೊಡೆದು, ಗಿಲಿಗಿಲಿ ಆಡಿಸಿದರೂ ನಮ್ಮತ್ತ ದೃಷ್ಟಿ ಕೊಟ್ಟು ನೋಡುತ್ತಿರಲಿಲ್ಲ. ಶಬ್ದಕ್ಕೆ ಮುಖವರಳಿಸುತ್ತಿದ್ದುದನ್ನು ಬಿಟ್ಟರೆ, ಬಾಹ್ಯ ಜಗತ್ತಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ.
 

‘ಕೆಲ ಮಕ್ಕಳು ಹಾಗೇ. ಅದರಲ್ಲೂ ಮೊದಲ ಮಗು ಕೊಂಚ ನಿಧಾನ’ ಅಂದರು ಹಿರಿಯರು.
 

ಆರು ತಿಂಗಳುಗಳಾದವು. ಕತ್ತು ಕೊಂಚ ಸ್ಥಿರವಾಗಿದ್ದರೂ, ಉಳಿದೆಲ್ಲ ವಿಷಯಗಳಲ್ಲಿ ಅದಿನ್ನೂ ಹಸುಗೂಸೇ.
 

‘ಕೆಲ ಮಕ್ಕಳು ಹಾಗೇ. ನಿಧಾನವಾಗಿ ಪ್ರತಿಕ್ರಿಯಿಸುತ್ತವೆ’ ಅಂದರು ಕೊಪ್ಪಳದ ಮಕ್ಕಳ ಡಾಕ್ಟರು.
 

ಎಂಟು ತಿಂಗಳಾದರೂ ಗೌರಿ ಅದೇ ಸ್ಥಿತಿಯಲ್ಲಿ ಉಳಿದಾಗ ಪಕ್ಕದ ಹೊಸಪೇಟೆಗೆ ಹೋಗಿ ಬೇರೊಬ್ಬ ಮಕ್ಕಳ ತಜ್ಞರಿಗೆ ತೋರಿಸಿದೆವು. ಕೆಲ ಪರೀಕ್ಷೆಗಳನ್ನು ಮಾಡಿ, ಗೌರಿಯ ತಲೆಯ ಗಾತ್ರವನ್ನು ಟೇಪ್‌ನಲ್ಲಿ ಅಳೆದ ಆ ವೈದ್ಯರು ಹೇಳಿದರು:
 

ಈಕೆಯ ಮೆದುಳಿನ ಬೆಳವಣಿಗೆ ಸಹಜವಾಗಿಲ್ಲ. ಬುದ್ಧಿಮಾಂದ್ಯತೆಯ ಲಕ್ಷಣಗಳು ಕಾಣಿಸ್ತಿವೆ. ನೀವೊಮ್ಮೆ ಸ್ಕ್ಯಾನ್ ಮಾಡಿಸೋದು ಉತ್ತಮ. ಹುಬ್ಬಳ್ಳಿ ಅಥವಾ ಬೆಂಗಳೂರಿಗೆ ಹೋಗಿ ಎಂದರು.
 

ಮಗುವನ್ನು ಕರೆದುಕೊಂಡು ಹತ್ತಿರದ ಒಣಗಿದ ಪಾರ್ಕ್‌ನಲ್ಲಿ ಮೌನವಾಗಿ ಕೂತೆವು. ರೇಖಾ ನಿರಂತರವಾಗಿ ಅಳುತ್ತಿದ್ದರೆ, ನಾನು ಒಳಗೊಳಗೇ ಅಳುತ್ತ ಮಂಕಾಗಿ ಕೂತಿದ್ದೆ. ಗೌರಿಯೊಬ್ಬಳೇ ತನ್ನ ಪಾಡಿಗೆ ತಾನು ನಗುತ್ತಿದ್ದಿದ್ದು.
 

*****
 

ಧಾರವಾಡದ ಮಕ್ಕಳ ವೈದ್ಯರು ಆಕೆಯ ಮೆದುಳಿನ ಬೆಳವಣಿಗೆ ಅಸಮರ್ಪಕವಾಗಿದ್ದನ್ನು ಸ್ಕ್ಯಾನಿಂಗ್ ಮಾಡಿ ತೋರಿಸಿದರು. ಅಲ್ಲಿಗೆ ಚಿತ್ರಣ ಸ್ಪಷ್ಟವಾಗಿತ್ತು.
 

ನಡೆಸುತ್ತಿದ್ದ ಪತ್ರಿಕೆ ಮುಚ್ಚಿ ರೇಖಾ ಮತ್ತು ಗೌರಿಯನ್ನು ಕರೆದುಕೊಂಡು ಬೆಂಗಳೂರಿಗೆ ಬಂದೆ. ಓ ಮನಸೇ ಪತ್ರಿಕೆಯಲ್ಲಿ ಕೆಲಸ ಮಾಡುತ್ತ ನಿಮ್ಹಾನ್ಸ್‌ನಲ್ಲಿ ಗೌರಿಯನ್ನು ತೋರಿಸಿದೆವು. ಅವರ ಚಿತ್ರಣ ಇನ್ನೂ ನಿಖರವಾಗಿತ್ತು. ಗೌರಿಯ ಮೆದುಳಿನ ಶೇ.೪೦ರಿಂದ ೪೫ ಭಾಗದಲ್ಲಿ ಚಟುವಟಿಕೆಯೇ ಇರಲಿಲ್ಲ.
 

‘ಸಾಮಾನ್ಯ ಮಗುವಿನೊಂದಿಗೆ ಮಾತಾಡುವಂತೆ ಆಕೆಯ ಜೊತೆ ಮಾತಾಡಿ. ಆಟ ಆಡಿಸಿ. ಫಿಸಿಯೋಥೆರಪಿ ಮಾಡಿಸಿ. ಆಕೆ ಸಾಮಾನ್ಯ ಸ್ಥಿತಿಗೆ ಬರುತ್ತಾಳೆಂದು ಹೇಳಲಾರೆವು. ಆದರೆ, ಆ ಸ್ಥಿತಿಗೆ ಹತ್ತಿರವಾಗಿಸಲು ಪ್ರಯತ್ನಿಸಿ. ಒಳ್ಳೆಯದಾಗಲಿ’ ಎಂದರು ನಿಮ್ಹಾನ್ಸ್‌ನ ಕರುಣಾಮಯಿ ವೈದ್ಯರು.
 

ಅವತ್ತು ಮತ್ತೆ ಅತ್ತಿದ್ದೆವು ಇಬ್ಬರೂ.
 

*****
 

ಈಕೆ ದೇವರಿಗೆ ಹರಕೆ ಹೊತ್ತಳು. ನಾನು ತಜ್ಞರ ಶೋಧದಲ್ಲಿ ತೊಡಗಿದೆ. ಭರವಸೆ ಹುಟ್ಟಿಸಿದ ಪ್ರತಿಯೊಬ್ಬ ವೈದ್ಯರಲ್ಲೂ ತೋರಿಸಿದೆವು. ಅವರ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿದೆವು. ನಿಮ್ಹಾನ್ಸ್‌ನಲ್ಲೇ ಇದ್ದ ಆಯುರ್ವೇದ ವಿಭಾಗದಲ್ಲಿ ವಾರಪೂರ್ತಿ ಚಿಕಿತ್ಸೆ ಆಯಿತು. ಅವನ್ನೇ ಮನೆಯಲ್ಲೂ ಮಾಡುತ್ತ ಹೋದೆವು.
 

ಊಹೂಂ. ಅವ್ಯಾವೂ ತಕ್ಷಣದ ಭರವಸೆ ಮೂಡಿಸಲಿಲ್ಲ.
 

ಹೋಮಿಯೋಪತಿ ಚಿಕಿತ್ಸೆಯ ಬೆನ್ನು ಹಿಡಿದು ಹುಬ್ಬಳ್ಳಿ, ಪುಣೆ ಎಂದೆಲ್ಲಾ ಓಡಾಡಿದೆವು. ಯಾವುದೂ ಕೈ ಹಿಡಿಯಲಿಲ್ಲ.
 

ಅಷ್ಟೊತ್ತಿಗೆ ಪ್ರಜಾವಾಣಿ ಸೇರಿಕೊಂಡಿದ್ದ ನಾನು ಧಾರವಾಡಕ್ಕೆ ವರ್ಗ ಕೇಳಿ ಪಡೆದೆ. ಹೋದಲ್ಲೆಲ್ಲ ದೇವರು, ಶಾಸ್ತ್ರದವರು, ತಜ್ಞರು ಎಂದೆಲ್ಲಾ ಅಲೆದೆವು.
 

ಇವೆಲ್ಲ ಪ್ರಯೋಗಗಳು ಫಲ ನೀಡದೇ ಹೋದಾಗ ನಿಮ್ಹಾನ್ಸ್‌ನ ವೈದ್ಯರ ಮಾತು ನೆನಪಾದವು.
 

ಸಾಮಾನ್ಯ ಮಗುವಿನೊಂದಿಗೆ ಮಾತಾಡುವಂತೆ ಗೌರಿಯೊಂದಿಗೆ ಮಾತಾಡುವುದು ಶುರುವಾಯ್ತು. ಫಿಜಿಯೋಥೆರಪಿ ಪ್ರಾರಂಭಿಸಿದೆವು. ವಿಶೇಷ ಶಾಲೆಗೂ ಗೌರಿಯನ್ನು ಸೇರಿಸಿದೆವು. ಬದುಕು ನಿಧಾನವಾಗಿ ತಿರುಗಲು ಶುರುವಾಯ್ತು.
 

*****
 

ಗೌರಿ ಕೂಡಲು ಕಲಿತಿದ್ದು ಎರಡು ವರ್ಷಗಳ ನಂತರ. ಅಂಬೆಗಾಲಿಟ್ಟಿದ್ದು ನಾಲ್ಕು ವರ್ಷಗಳಿಗೆ. ತಡವರಿಸುತ್ತ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟಿದ್ದು ಆರು ವರ್ಷಗಳ ನಂತರ.
 

ಇವತ್ತಿಗೂ ಆಕೆ ನಮ್ಮ ಕಣ್ಣನ್ನು ೨-೩ ಸೆಕೆಂಡ್‌ಗಳಿಗಿಂತ ಹೆಚ್ಚು ನೋಡುವುದಿಲ್ಲ. ಕೆಲವು ಶಬ್ದಗಳನ್ನು ಬಿಟ್ಟರೆ ಬೇರೆ ಶಬ್ದಗಳನ್ನು ಆಡಿಲ್ಲ. ಇವತ್ತಿಗೂ ನಡಿಗೆ ಅಸಹಜ. ತಂಗಿಯೊಂದಿಗೆ ಬೆರೆಯುವುದು ತೀರಾ ಕಡಿಮೆ.
 

ಆಟಿಸಂ ಮತ್ತು ಬುದ್ಧಿ ಮಾಂದ್ಯತೆಗಳೆರಡರ ಲಕ್ಷಣಗಳನ್ನೂ ಆಕೆಯಲ್ಲಿ ಗುರುತಿಸಿದ್ದಾರೆ ತಜ್ಞರು. ಈಗ ವಿಶೇಷ ಶಾಲೆಗೆ ಹೋಗುತ್ತಿದ್ದಾಳೆ. ಫಿಜಿಯೋಥೆರಪಿ, ಸ್ಪೀಚ್ ಥೆರಪಿ ಮುಂತಾದವೆಲ್ಲ ನಡೆದಿವೆ. ಈಗ ಆಕೆಗೆ ತಿಳಿವಳಿಕೆ ನಿಧಾನವಾಗಿ, ಬಲು ನಿಧಾನವಾಗಿ ಬೆಳೆಯುತ್ತಿದೆ. ಕೆಲವೊಂದು ಸರಳ ಮಾತುಗಳು ಅರ್ಥವಾಗುತ್ತವೆ. ಕೆಲವು ಸರಳ ಕೆಲಸಗಳನ್ನು ಮಾಡುತ್ತಾಳೆ. ಇವತ್ತಿಗೆ ಹತ್ತು ತುಂಬಿದ್ದರೂ ಗೌರಿ ನಮ್ಮ ಪಾಲಿಗೆ ಒಂದು ವರ್ಷದ ಮಗು.
 

*****
 

ಎಷ್ಟೋ ಸಾರಿ ಯೋಚಿಸುತ್ತೇನೆ: ಮಾತೇ ಆಡದ ಈಕೆ ನಮಗೆ ಎಷ್ಟೊಂದು ಕಲಿಸಿದಳಲ್ಲ ಎಂದು. ಆಕೆ ಬದುಕಿನ ರೀತಿ ನೀತಿಗಳ ಬಗ್ಗೆ ನನಗಿದ್ದ ಎಷ್ಟೊಂದು ಭ್ರಮೆಗಳನ್ನು ಹೋಗಲಾಡಿಸಿದಳು! ವಾಸ್ತವ ಪ್ರಪಂಚದ ಮಗ್ಗುಲಗಳನ್ನು ಪರಿಚಯಿಸಿದಳು. ನನಗೇ ಗೊತ್ತಿರದ ನನ್ನ ಮಿತಿ ಮತ್ತು ಸಾಮರ್ಥ್ಯವನ್ನು ತಿಳಿಸಿದಳು. ಕಿರಾಣಿ ಅಂಗಡಿಗೆ ಹೋಗಿ ರೇಶನ್ ತರಲು ಹಿಂಜರಿಯುತ್ತಿದ್ದ ರೇಖಾಳಿಗೆ ಇಡೀ ಬೆಂಗಳೂರನ್ನು ಕಾರಲ್ಲಿ ಸುತ್ತಿಬರುವಂತೆ ಮಾಡಿದಳು. ನಾನು ಕೆಲಸದ ಮೇಲೆ ಕೆಲಸಕ್ಕೆ ರಾಜೀನಾಮೆ ಬೀಸಾಡಿ ಬಂದು ಕೂತಾಗ, ಹೊಸ ಭರವಸೆ ಇನ್ನೂ ಇದೆ ಎಂಬುದನ್ನು ತೋರಿಸಿದಳು. ಮಂಕಾಗಿ ಕೂತವನಲ್ಲಿ ಹೊಸ ಕನಸು, ಸೋತ ಭಾವದ ಜಾಗದಲ್ಲಿ ಗೆಲುವಿನ ದಾರಿ ಮೂಡಿಸಿದಳು.
 

ಅವಳು ಮೂಡಿಸಿದ ಸ್ಫೂರ್ತಿಯಿಂದ ರೇಖಾ ಮತ್ತೆ ಸಂಗೀತ ಕಲಿಯಲು, ದಿನಾ ಜಿಮ್‌ಗೆ ಹೋಗಲು, ನಾನು ವೃತ್ತಿಯ ಹೊಸ ಸಾಧ್ಯತೆಗಳತ್ತ ಮುಖ ಮಾಡಲು ಸಾಧ್ಯವಾಯಿತು. ಗೌರಿಯಂಥ ಮಗುವನ್ನು ನಾವೇ ನೋಡಿಕೊಳ್ಳಬೇಕೆಂಬ ಅನಿವಾರ್ಯತೆ ನಮ್ಮನ್ನು ನಿತ್ಯ ಚುರುಕಾಗಿರಿಸಿದೆ. ನಿತ್ಯ ಗೆಲುವಾಗಿರಿಸಿದೆ. ಅಪರಿಚಿತರಲ್ಲಿ ಆತ್ಮೀಯರನ್ನು ಹುಟ್ಟುಹಾಕಿದೆ. ಸವಾಲಿನ ಜಾಗದಲ್ಲಿ ಅವಕಾಶ, ಸೋಲಿನ ಜಾಗದಲ್ಲಿ ಹೊಸ ಯತ್ನವನ್ನು ಮೂಡಿಸಿದೆ.
 

ಮಾತೇ ಆಡದ ಗೌರಿ ನಮಗೆ ಬದುಕಲು ಕಲಿಸಿದ್ದಾಳೆ. ಭರವಸೆ ಮೂಡಿಸಿದ್ದಾಳೆ. ನಿತ್ಯ ಹೊಸದೊಂದನ್ನು ಕಲಿಸುತ್ತ, ಹೊಸ ಭರವಸೆ ಮೂಡಿಸುತ್ತ, ತನ್ನ ಪಾಡಿಗೆ ತಾನು ನಗುತ್ತಲೇ ಇದ್ದಾಳೆ.
 

*****
 

ಥ್ಯಾಂಕ್ಸ್ ಗೌರಿ, ನೀನು ನಮ್ಮ ಮಗಳಾಗಿದ್ದಕ್ಕೆ. ನಮ್ಮ ಗುರುವಾಗಿದ್ದಕ್ಕೆ.
 

ಹ್ಯಾಪಿ ಬರ್ತ್‌ಡೇ ನಿನಗೆ.
 

- ಚಾಮರಾಜ ಸವಡಿ

14 comments:

ರಾಘವೇಂದ್ರ ಜೋಶಿ said...

ಚಾಮರಾಜರೇ,
ಈ ನಿಮ್ಮ ಬರಹ ಓದಿ ಪ್ರತಿಕ್ರಿಯಿಸುವ ಪ್ರಯತ್ನ ಖಂಡಿತ ಮಾಡಲಾರೆ.
ಇಲ್ಲಿರುವ ಭಾವನೆಗಳು,ಜೀವನಪ್ರೀತಿ ಎಲ್ಲ ವ್ಯಾಕರಣಗಳಿಗೂ ಮೀರಿದ್ದು.
ನಿಜ.ಗುರು ಎಂಬುವವನು ಯಾವ ರೂಪದಲ್ಲಾದರೂ ಬರಬಹುದು.
ನಿಮ್ಮ ಮಾತು ಕೇಳಿ ನನಗೊಂದು ಘಟನೆ ನೆನಪಾಗುತ್ತಿದೆ.
ಕೆಲ ವರ್ಷಗಳ ಹಿಂದೆ ಯಾವುದೋ ಒಂದು ಪ್ರಾಜೆಕ್ಟಿಗೆ ಎಂಟತ್ತು ಜನರನ್ನು
ತಾತ್ಕಾಲಿಕವಾಗಿ ನೇಮಿಸಿಕೊಂಡಿದ್ದೆವು.ಅದರಲ್ಲಿ ಮೂರು ಜನ ಹುಡುಗಿಯರು ಮತ್ತು
ಮೂವರಿಗೂ ಮಾತು ಬರುತ್ತಿರಲಿಲ್ಲ ಹಾಗೂ ಶ್ರವಣದ ತೊಂದರೆಯಿತ್ತು.ಆ ಪ್ರಾಜೆಕ್ಟ್
ತೀರ technical based ಇರಲಿಲ್ಲವಾದ್ದರಿಂದ ಪರಿಚಯದ ಒಂದು ಹುಡುಗಿಗೆ ನಾನೇ ಅವಕಾಶ ಕೊಟ್ಟಿದ್ದೆ.ಅವಳು ತನ್ನಿಬ್ಬರು ಗೆಳತಿಯರನ್ನು ಕರೆದುಕೊಂಡು ಬಂದಿದ್ದಳು.ನಿಮಗೆ ಆಶ್ಚೈರ್ಯವಾಗಬಹುದು, ಈ ಮೂರು ಹುಡುಗಿಯರು ಬೇರೆ candidate ಗಳಿಗಿಂತ ಜಾಸ್ತಿ ಕೆಲಸ ಮಾಡಿದ್ದರು ಮತ್ತು ಬೇಗ ರಿಸಲ್ಟ್ ಕೊಟ್ಟಿದ್ದರು.ಬೇರೆ ಏನೂ ಇಲ್ಲ,ಅವರು ಅರ್ಥಮಾಡಿಕೊಳ್ಳುವದು ಕೊಂಚ ತಡ ಅಷ್ಟೇ,ಆದರೆ ಒಮ್ಮೆ ಅರ್ಥವಾದರೆ ಎಲ್ಲರಿಗಿಂತ ಮೊದಲು ತಮ್ಮ ಕೆಲಸ ಮಾಡಿ ಮುಗಿಸಬಲ್ಲರು.ಆದರೆ ಅರ್ಥ ಮಾಡಿಸಲು ಕೊಂಚ ಸಹನೆ,ಪ್ರೀತಿ ಇರಬೇಕು ಅಷ್ಟೇ!

Swarna said...

Happy Bday to Gouri

nenapina sanchy inda said...

ಪುಟ್ಟ ಗೌರಿಗೆ ಮಾಲತಿ ಆಂಟಿಯ ಶುಭಾಶಯಗಳು. My daughter has worked with such special children and i too used to go with her. ನಮ್ಮ ಆಫಿಸ್ ನ ಶ್ರೀ ಸತ್ಯಮಾಧವ ಅವರ ಮಗ ಈ ತರಹದ special child. But we find he has a special affinity to music and hums all lovely songs without a hitch.
I can understand each and every outpouring of your words and feelings in this post and i am glad u have made your peace with the situation
love
malathi S

ಬಿಸಿಲ ಹನಿ said...

ಗೌರಿ ಬೇಗ ಗುಣಮುಖಳಾಗಿ ಎಲ್ಲ ಮಕ್ಕಳಂತೆ ಗೆಲುವಿನಿಂದ ಓಡಾಡುವಂತಾಗಲಿ ಎಂದು ಅವಳ ಹುಟ್ಟುಹಬ್ಬದ ಸಂದರ್ಭದಲ್ಲಿ ಹಾರೈಸುವೆ. Happy birthday to Gouri!

Siri Chenni said...

There is no therapy than love.. and you and Rekha have proved it. Happy birthday Gowri and congratulation to both of you for being such wonderful parents..
Vidya Joseph

Unknown said...

ishtoo bhaavakke kevala nanna comment uttarisalu saadhyavilla sir...namma kundugalu..bereyorige holisidaaga enoo irolla..aadaru insecured aagi naralutteve...
adara madhyadalli intaha samasye neevu nodiruva bageye vibhinna...haagu adbhuta..hats off to u....
gowri antaha tangige noorkaala aayushyada shubhaashaya...

sunil s said...

ಗಾರಿ ನಿನ್ನ ನೆನಪು ಯಾವಾಗಲು ಕಾಡುತ್ತೆ ಅದೇ ಧರಾವಾಡದ ಮನೆ ಎಲ್ಲವು ಮನದಲ್ಲಿ ಮಡುಗಟ್ಟಿದೆ. ನಾವು ಸ್ವರ್ಥಿಗಳು ನಮ್ಮ ಜಂಜಾಟದಲ್ಲಿ ನಿನ್ನನ್ನು ಮತ್ತೆ ನೋಡಲಾಗಲಿಲ್ಲ. ಆದ್ರು ನೀನು ಮನದಿಂದ ಮರೆಯಾಗಲಿಲ್ಲ ಇದು ಸತ್ಯ. ಶುಭವಾಗಲಿ ಮುದ್ದು ಗೌರಿ. ನಿನ್ನಮ್ಮನಿಗೆ ಮತ್ತು ಈ ವಿಷಯದಲ್ಲಿ ಚಾಮರಾಜ ನನಗೆ ಮಾದರಿ.

minchulli said...

nimma jeevana preethige salaam... "guru" vaagi "guri"yaagi baalu belagida muddu gowrige sahasra pranaama mattu shubha haraike...

- shama , nandibetta

Uma Bhat said...

ಮುದ್ದು ಗೌರಿಗೆ ಹುಟ್ಟು ಹಬ್ಬದ ಶುಭಾಶಯಗಳು..............

speakingsofsoil said...

ಚಾಮರಾಜ್ ಅಕಸ್ಮಾತ್ ನಿಮ್ಮ "ಗುರು-ಮಗಳ" ಬರಹ ಓದಿದೆ ಏನೂ ಹೇಳಲಾರೆ ನಿಮ್ಮ ಜೀವ ಪ್ರೀತಿಗೆ ಅರದ ರೀತಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಮಗಳ ಜೊತೆ ನಿಮ್ಮ ನಿಮ್ಮ ಸಂಗಾತಿಯ ಬಾಳ ಪಯಣ ಸುಖಕರವಾಗಿರಲಿ.

ಡಾ. ಚನ್ನೇಶ್ (ರಾಘವೇಂದ್ರ ಻ಅವರ ಜತೆ ಒಮ್ಮೆ ಭೇಟಿಯಾಗಿದ್ದೆ)
ಕೃಷಿ ವಿಶ್ ವಿದ್ಯಾನಿಲಯ ಬೆಂಗಳೂರು.

ದೊಡ್ಡಿ ಮೂರ್ತಿ said...

ಪ್ರೀತಿಯ ಚಾಮರಾಜರೆ, ನಾನು ನಿಮ್ಮನ್ನು ನಿಮ್ಮ ಬರಹಗಳನ್ನು ಮೊದಲ ಬಾರಿಗೆ ಸಂಧಿಸುತ್ತಿದ್ದೇನೆ. ಆದರೆ ನೀವು ಮತ್ತು ಗೌರಿ ನನಗೆ ಅಪರಿಚಿತರೆನಿಸುತ್ತಿಲ್ಲ. ಯಾಕೆಂದರೆ ನಾನು ನಿಮ್ಮ ಸ್ಥಾನದಲ್ಲಿದ್ದೇನೆ, ನನ್ನ ಆರೂವರೆ ವರ್ಷದ ಮಗಳು ಸಾಧನಾ, ಗೌರಿಯ ಸ್ಥಾನದಲ್ಲಿದ್ದಾಳೆ. ಸಾಧನಾಳ ಸಮಸ್ಯೆಯನ್ನು 'ಲಾರೆನ್ಸ್ ಮೂನ್ ಬೀಡ್ಲ್ ಸಿಂಡ್ರೋಮ್' ಎಂದು ತಜ್ಞ ವೈದ್ಯರು ಗುರುತಿಸಿದ್ದಾರೆ.
ಬಹಳ ಗಂಭೀರವಾದ ಹಾಗೂ ಸರಿಪಡಿಸಲಾಗದ ದೃಷ್ಟಿ ದೋಷ. ಕಳದ ಮೂರು ವರ್ಷಗಳಿಂದಲೂ ದಪ್ಪ ಕನ್ನಡಕ ಅವಳಿಗೆ ಅಂಟಿಕೊಂಡಿದೆ. ಸ್ವಲ್ಪ ಮಂದಗತಿಯ ಬೆಳವಣಿಗೆ ಎಂಬುದನ್ನು ಬಿಟ್ಟರೆ ಉಳಿದ ವಿಷಯಗಳಲ್ಲಿ ಕ್ರಮೇಣ ಸಾಧನಾ ಇಂಪ್ರೂವ್ ಆಗುತ್ತಿದ್ದಾಳೆ. ಮಲ್ಲೇಶ್ವರದ ಒಂದು ಸಂಸ್ಥೆಯಲ್ಲಿ ವಿಶೇಷ ತರಬೇತಿ ವಾರಕ್ಕೊಂದು ದಿನ. ಅವಳಿಗೂ ಒಂದು ಬದುಕಿದೆ, ಆದರೆ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನನಗಿನ್ನೂ ಸಾಧ್ಯವಾಗಿಲ್ಲ. ಪ್ರಯತ್ನದಲ್ಲಿದ್ದೇನೆ, ಈ ಸಂದರ್ಭದಲ್ಲಿ ನಿಮ್ಮ ಜೀವನ ದೃಷ್ಟಿ ಅನುಕರಣೀಯವಾದುದು.
ಗೌರಿಗೆ ಶುಭಾಶಯಗಳು.

Aswath kumar said...

ನಮಸ್ತೆ,
ಗೌರಿಯ ಕುರಿತು ಓದಿದೆ, ನಾನೂ ಕೊಪ್ಪಳ ಜಿಲ್ಲೆಯ ಮುನಿರಾಬದಿನಲ್ಲಿದ್ದೇನೆ. ಕಳೆದ ಕೆಲವು ವರ್ಷಗಳಿಂದ ನಾನು ಅಂಗವಿಕಲ ಮತ್ತು ಬುದ್ದಿ ಮಾಂಧ್ಯ ಮಕ್ಕಳ ಕುರಿತು ಸಾಕಷ್ಟು ಕೆಲಸ ಮಾಡುವ ಪ್ರಯತ್ನ ಮಾಡಿದ್ದೇನೆ. ಇ ಹಿನ್ನೆಲೆಯಲಿಯೇ ನಾನು ಪ್ರಜಾವಾಣಿಗೆ ಹೊಂಬೆಳಕು ಎಂಬ ಅಂಕಣವನ್ನು ಬರೆಯುತ್ತಿದ್ದೆ. ಇದೀಗ ಅದೇ ಹೆಸರಿನಲ್ಲಿ ಒಂದು ಪುಸ್ತಕವು ಪ್ರಕಟವಾಗಿದೆ. ಸಾವಿರಾರು ಜನರಿಗೆ ಅದರಿಂದ ಉಪಯೋಗವು ಆಗಿದೆ. ಈಗ ಮೂರನೆ ಮುದ್ರಣಕ್ಕೆ ಹೋಗುತ್ತಿದೆ. ಒಮ್ಮೆ ನೀವು ಅದನ್ನು ಓದಿರಿ. ಸಪ್ನಾ ದಲ್ಲಿ ಸಿಕ್ಕುತ್ತದೆ. ಈಗಲೂ ಯಾವುದಾದರು ಪತ್ರಿಕೆಗೆ ಇಂಥಹ ಲೇಖನಗಳನ್ನು ಬರೆಯುವ bayake ಇದೆ ಆದರೆ ಅವಕಾಶ ಸಿಕ್ಕಿಲ್ಲ. ನಿಮ್ಮ ಪ್ರಯತ್ನಗಳು ಮತ್ತು ಗೌರಿಯ ಸಾಧನೆಗಳು ಇತರರಿಗೂ ದಾರಿದಿಪವಾಗಳಿವೆ.
ನನ್ನ ಮೊಬೈಲ್ ನಂ - ೯೯೧೬೩೬೯೩೬೯.

rupa said...

Namaste,

I am a special mother to a special child.i can totally relate to all the things you have written.my son has taught me so many things in life..which I did not learn my whole life.just like your wife I used to be very shy.not any more.i can start conversation with any stranger.i can read and understand any theory or philosophy.thanks to my son.parents of typical children do not understand what it is to meet a milestone of development.every small accomplishment and every new word my son says or does gets into my journal and I can't even remember when my younger girl started talking.

PV Sudarshan Bharateeya said...

Dear Chaams-Rekha,
the wonder couple,
Having been initiated to more than two healing techniques, I'm reminded of in one such training, we were told that we do not beget a child. On the other hand, the soul chooses a suitable womb to get reborn into this world. The soul of most dear , loving Chi.Gowri has thus chosen, 138 months ago, finding that you both would support her in this life.
God Almighty has thus been empowering you to cater to all her needs in the best possible way, so much so that, she has a cake walk in this journey.
We, the journos have seen your grit and commitment, which alone can sail all the three of you and that tiny Chi.Nidhi to more lovelier 'morrows.
Can we explore the 'whys' and 'ifs'
and employ this human life to identify the 'unidentified', through spiritual sense than just mundane sights.
Yah! there're such ways and means, may the Lord confer on you three (thru the 4th) to 'see' the light, the healing light...soon...very soon...God Bless..Hare Krishnaa..
Sudarshana Bharatiya