ನ್ಯಾನೊ ಮತ್ತು ವೈಚಾರಿಕ ಸಣ್ಣತನ

13 Jan 2008

6 ಪ್ರತಿಕ್ರಿಯೆ
ಬಹುತೇಕ ಭಾರತೀಯರ ಸಂಕುಚಿತ ಮನಃಸ್ಥಿತಿಯನ್ನು ಎರಡು ಪ್ರಮುಖ ಬೆಳವಣಿಗೆಗಳು ಬಹಿರಂಗಪಡಿಸಿವೆ.

ಮೊದಲನೆಯದು, ಕಳೆದ ಒಂದೆರಡು ತಿಂಗಳುಗಳಿಂದ ನಡೆದಿರುವ ಉಡುಪಿ ಪರ್ಯಾಯ ವಿವಾದ. ಎರಡನೆಯದು, ವಾರಾಂತ್ಯದಲ್ಲಿ ಪ್ರದರ್ಶಿಸಲ್ಪಟ್ಟ ಜಗತ್ತಿನ ಅತಿ ಕಡಿಮೆ ಬೆಲೆಯ ಕಾರು ’ನ್ಯಾನೊ’.

ಪರ್ಯಾಯ ಪೀಠ, ಕೃಷ್ಣ ಪೂಜೆ ಹಾಗೂ ಪುತ್ತಿಗೆ ಶ್ರೀಗಳ ವಿದೇಶಿ ಪಯಣದ ಕಥೆಯನ್ನು ಓದುತ್ತಿದ್ದರೆ ನಗೆ ಬರುತ್ತದೆ, ವಿಷಾದವೂ ಆಗುತ್ತದೆ. ಏಕೆಂದರೆ, ಕೃಷ್ಣ ಅತ್ಯಂತ ಮುಕ್ತ ಮನಸ್ಸಿನಿಂದ ಬದುಕಿದ ವ್ಯಕ್ತಿ. ಜೀವನ ಪ್ರೀತಿಯನ್ನು ಕಡೆತನಕ ಉಳಿಸಿಕೊಂಡು ಬಂದ ವ್ಯಕ್ತಿ. ಯಾವ ಪಾರಂಪರಿಕ ಕಟ್ಟುಪಾಡುಗಳಿಗೂ ಬಂಧಿಯಾಗದೆ, ತನ್ನ ಕಾಲದ ಎಲ್ಲ ಮೂಢ ನಂಬಿಕೆಗಳನ್ನು ಹಾಗೂ ಆಷಾಡಭೂತಿತನ (ಹಿಪೊಕ್ರಸಿ)ವನ್ನು ವಿರೋಧಿಸಿದ್ದ ವ್ಯಕ್ತಿ ಆತ. ಎಲ್ಲರ ನಂಬಿಕೆಗೆ ವಿರುದ್ಧವಾಗಿ, ಎಲ್ಲರ ಕನಸುಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡ ಈ ಅಪರೂಪದ ವ್ಯಕ್ತಿಯ ಪೂಜೆಯ ಹೆಸರಿನಲ್ಲಿ ನಮ್ಮ ಧಾರ್ಮಿಕ ಹಿರಿ ತಲೆಗಳು ಮಾಡುತ್ತಿರುವುದಾದರೂ ಏನು?

ಕೃಷ್ಣ ಪಂಥ ಸಾವಿರಾರು ವರ್ಷಗಳ ಹಿಂದೆಯೇ ಸಾಗರ ದಾಟಿತ್ತು. ಆಧುನಿಕ ಕಾಲದಲ್ಲಿ ಇಸ್ಕಾನ್ ಆ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದೆ. ಧಾರ್ಮಿಕ ನಂಬಿಕೆಗಳಿಗೆ ದೇಶಗಳ, ನದಿ-ಕಡಲುಗಳ ಗಡಿಗಳು ಇರುವುದಿಲ್ಲ. ಒಂದು ವೇಳೆ ಅಂತಹ ಕಟ್ಟುಪಾಡುಗಳಡಿ ಯಾವುದಾದರೂ ಧರ್ಮ ಅಥವಾ ನಂಬಿಕೆ ಸಿಕ್ಕಿಕೊಂಡಿದ್ದರೆ, ಅದು ಖಂಡಿತ ಧರ್ಮವಲ್ಲ.

ಹೀಗಿದ್ದರೂ, ಉಡುಪಿ ಅಷ್ಟಮಠಗಳ ಬಹುತೇಕ ಶ್ರೀಗಳು ಯಾವುದೇ ನೆಲೆಗಟ್ಟಿಲ್ಲದ, ತರ್ಕಬದ್ಧವಲ್ಲದ ನಂಬಿಕೆಗೆ ಜೋತು ಬಿದ್ದು, ತಮ್ಮದೇ ಪಂಥದ ವ್ಯಕ್ತಿಯ ಸಹಜ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ. ಅದಕ್ಕೆ ಪೇಜಾವರ ಶ್ರೀಗಳಂತಹ ಧಾರ್ಮಿಕ ರಾಜಕಾರಣಿಗಳು ಕೈಜೋಡಿಸಿದ್ದಾರೆ. ವಿವಾದಗಳಿದ್ದಲ್ಲಿ ಸಾಮಾನ್ಯವಾಗಿ ಚಿದಾನಂದಮೂರ್ತಿಗಳು, ಚಂಪಾ-ವಾಟಾಳ್-ಪಾಟೀಲ ಪುಟ್ಟಪ್ಪರಂಥವರು ಇದ್ದೇ ಇರುತ್ತಾರೆ. ಆದರೆ, ಈಗ ಆ ಸಾಲಿಗೆ ಪೇಜಾವರ ಶ್ರೀಗಳೂ ಸೇರಿದ್ದು ವಿಷಾದಕರ.

ನಮಗೆ ಕೃಷ್ಣನ ಸಂದೇಶ ಮುಖ್ಯವೇ, ಆತನನ್ನು ಪೂಜಿಸುವ ವಿಧಿ-ವಿಧಾನಗಳು ಮುಖ್ಯವೆ? ’ಪತ್ರಂ ಪುಷ್ಪಂ ಫಲಂ ತೋಯಂ...’ ಎಂದಿದ್ದಾನೆ ಕೃಷ್ಣ ಗೀತೆಯಲ್ಲಿ. ಎಲೆ, ಹೂ, ಹಣ್ಣು- ಹೀಗೆ ಯಾವುದನ್ನು ನನಗೆ ಅರ್ಪಿಸಿದರೂ ಅದು ಪ್ರಿಯವೇ. ಎಲ್ಲಕ್ಕಿಂತ ಪ್ರಿಯ ಭಕ್ತಿ ತುಂಬಿದ ಪ್ರಾರ್ಥನೆ’ ಎಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದನ್ನು ಅಷ್ಟಮಠಗಳ ನಾಯಕರು, ಅವರ ನಂಬಿಕೆಗಳನ್ನು ಬೆಂಬಲಿಸುವ ಕುರುಡು ಮನಸ್ಸುಗಳು ಎಂದಾದರೂ ಅರ್ಥ ಮಾಡಿಕೊಳ್ಳುವುದು ಸಾಧ್ಯವೆ?

******

ಎರಡನೆಯದು, ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ೧ ಲಕ್ಷ ರೂಪಾಯಿ ಬೆಲೆಯ ನ್ಯಾನೊ ಕಾರಿನ ಬಗ್ಗೆ.
ಮಾಧ್ಯಮದಲ್ಲಿ ಕಾರಿನ ಭರಾಟೆಯಂತೂ ಜೋರಾಗಿಯೇ ಇದೆ. ವಾದ-ಪ್ರತಿವಾದಗಳೂ ಕೇಳಿ ಬಂದಿವೆ. ಅವುಗಳ ಪೈಕಿ ನನ್ನ ಗಮನ ಸೆಳೆದ ಒಂದೆರಡು ವಾದಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತೇನೆ.

ಒಬ್ಬ ಮಹನೀಯರು, ’ಟಾಟಾ ಮಾಡಿದ್ದು ಒಂದಿಷ್ಟೂ ಸರಿಯಿಲ್ಲ. ಕಡಿಮೆ ವೆಚ್ಚೆದಲ್ಲಿ ಕಾರು ದೊರೆಯುವಂತಾದರೆ ಮೊದಲೇ ಗಿಜಿಗುಟ್ಟುತ್ತಿರುವ ಭಾರತದ ರಸ್ತೆಗಳು ಉಸಿರುಕಟ್ಟುವಂತಾಗುತ್ತವೆ. ವಾಯು ಮಾಲಿನ್ಯ ಹೆಚ್ಚುತ್ತದೆ. ಸಹಾಯಧನದ ಮರ್ಜಿಯಲ್ಲಿರುವ ತೈಲೋತ್ಪನ್ನಗಳ ಆಮದು ಇನ್ನಷ್ಟು ಹೆಚ್ಚಿ, ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಉಂಟಾಗುತ್ತದ’ ಎಂದು ’ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಹೇಳಿದ್ದಾರೆ.

ವಾರೆವ್ಹಾ ಆಷಾಡಭೂತಿತನವೇ!

ಹತ್ತಾರು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ, ಬಡ ರೈತರಿಂದ ಭೂಮಿ ವಶಪಡಿಸಿಕೊಂಡು ವಿಮಾನ ನಿಲ್ದಾಣ ಮಾಡಿದರೆ ಈ ಮಹನೀಯರು ಅದನ್ನು ಪ್ರಗತಿ ಎಂದು ಬಣ್ಣಿಸುತ್ತಾರೆ. ರೈತನ ಭೂಮಿಯನ್ನು ಕ್ಷುಲ್ಲಕ ಬೆಲೆಗೆ ಕೊಂಡು ಐ.ಟಿ. ಕಂಪನಿ ಮಾಡಿದರೆ, ಅದನ್ನು ದೇಶ ಹೆಮ್ಮೆ ಪಡಬೇಕಾದ ಬೆಳವಣಿಗೆ ಎಂದು ಮೆಚ್ಚುತ್ತಾರೆ. ಆದರೆ, ಮಧ್ಯಮವರ್ಗದ ವ್ಯಕ್ತಿಯೊಬ್ಬ, ತನ್ನ ಬಜೆಟ್‌ಗೆ ನಿಲುಕುವ ಮಿತಿಯಲ್ಲಿ ಕಾರೇ ದೊರೆಯುತ್ತದೆ ಎಂದು ಸಂಭ್ರಮಿಸಿದರೆ, ಈ ವ್ಯಕ್ತಿಗೆ ಅದು ವಾತಾವರಣಕ್ಕೆ, ವಾಹನ ಸಂದಣಿಗೆ, ದೇಶದ ಕೀಸೆಗೆ ನುಗ್ಗಲು ಯತ್ನಿಸುತ್ತಿರುವ ಭೂತದಂತೆ ಕಾಣುತ್ತದೆ.

ನಿಜವಾದ ಆಷಾಡಭೂತಿತನ ಎಂದರೆ ಇದೇ ಇರಬೇಕು.

ಮಧ್ಯಮವರ್ಗದವರು, ಅವರಿಗಿಂತ ಕೆಳಗಿರುವವರು ಆರ್ಥಿಕವಾಗಿ ಮುಂದೆ ಬರಬಾರದು ಎಂಬ ಸಣ್ಣತನ ಬಿಟ್ಟರೆ ಈ ವಾದದಲ್ಲಿ ಮೆಚ್ಚುವಂಥದ್ದು ಏನೂ ಕಾಣುತ್ತಿಲ್ಲ. ಕೆಲವೇ ಕೆಲವು ಜನರು ಬಳಸುವ ವಿಮಾನ ನಿಲ್ದಾಣಕ್ಕೆ ಹತ್ತಾರು ಸಾವಿರ ಕೋಟಿ ರೂಪಾಯಿಗಳು, ಸಾವಿರಾರು ಎಕರೆ ಭೂಮಿ ಖರ್ಚಾದರೆ ಪರವಾಗಿಲ್ಲ. ಆದರೆ, ತನ್ನ ಮಿತಿಯಲ್ಲಿ ನಿಲುಕುವ ಒಂದು ಕಾರನ್ನು ಮಧ್ಯಮವರ್ಗದ ವ್ಯಕ್ತಿ ಖರೀದಿಸಲು ಉತ್ಸುಕನಾದರೆ, ಅದರ ಹಿಂದೆ ವಿನಾಶದ ಭೀತಿ ಕಾಣುತ್ತದೆ. ಅಡುಗೆ ಅನಿಲ ಖರೀದಿಸಲು ಶಕ್ತನಲ್ಲದ ವ್ಯಕ್ತಿ ಸೌದೆ ಉರಿ ಹಚ್ಚಿ ಅಡುಗೆ ಮಾಡಿದರೆ, ಅದನ್ನು ಪರಿಸರ ಮಾಲಿನ್ಯ ಕ್ರಮ ಎಂದು ಬಣ್ಣಿಸಿದಂತಿದೆ ಈ ಮಹನೀಯರ ವಾದ.

ಇದಕ್ಕೂ, ಅಷ್ಟಮಠಗಳ ಶ್ರೀಗಳು ಎಬ್ಬಿಸುತ್ತಿರುವ ವೈಚಾರಿಕ ಮಾಲಿನ್ಯಕ್ಕೂ ಏನೂ ವ್ಯತ್ಯಾಸವಿಲ್ಲ. ಎರಡೂ ಬೌದ್ಧಿಕ ಅಧಃಪತನದ ಸಂಕೇತಗಳೇ.

ಅಸೂಯೆ ಎಂಬ ತಡೆಗೋಡೆ...

12 Jan 2008

1 ಪ್ರತಿಕ್ರಿಯೆ
ಇತ್ತೀಚೆಗೆ ಪುಸ್ತಕವೊಂದನ್ನು ಓದುತ್ತಿದ್ದಾಗ, ಸುಮಾರು ಹತ್ತು ವರ್ಷಗಳ ಹಿಂದೆ ಅನಾಮಿಕ ಸಾಧುವೊಬ್ಬ ಹೇಳಿದ ಮಾತು ನೆನಪಾಯ್ತು.

’ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಅಪಾರ ಶಕ್ತಿ ಇರುತ್ತದೆ. ವಿಶಿಷ್ಟ ಪ್ರತಿಭೆ ಇರುತ್ತದೆ. ತನ್ನ ಸುತ್ತಮುತ್ತಲಿನ ಸಂದರ್ಭಗಳನ್ನು ಬಳಸಿಕೊಂಡು ಬೆಳೆಯುವಂತಹ ಅವಕಾಶಗಳು ಎಲ್ಲರಿಗೂ ಇದ್ದೇ ಇರುತ್ತವೆ.

ಆದರೆ, ತುಂಬ ಜನರು ತಮ್ಮಲ್ಲಿ ಅಡಗಿರುವ ಸಾಮರ್ಥ್ಯದ ಬಗ್ಗೆ ಯೋಚಿಸುವುದೇ ಇಲ್ಲ. ತಮಗೆ ಲಭ್ಯವಾಗುವ ಅವಕಾಶಗಳನ್ನು ಬಳಸಿಕೊಳ್ಳುವುದೇ ಇಲ್ಲ. ಅವರ ಗಮನವೆಲ್ಲ ಇನ್ನೊಬ್ಬರ ಪ್ರಯತ್ನ, ಸಾಧನೆಯತ್ತಲೇ ಇರುತ್ತದೆ. ಆದರೆ, ಅದನ್ನು ಮೆಚ್ಚುಗೆಯ, ಪ್ರೇರಣೆಯ ಕಣ್ಣುಗಳಿಂದ ಗಮನಿಸುವುದಿಲ್ಲ. ಬದಲಾಗಿ, ಅಸೂಯೆಯಿಂದ ಇನ್ನೊಬ್ಬರ ಸಾಧನೆಯನ್ನು ನೋಡುತ್ತಾರೆ. ಆ ಸಾಧನೆಯ ವೇಗವನ್ನು, ಪರಿಣಾಮವನ್ನು ತಗ್ಗಿಸುವುದು ಹೇಗೆಂದು ತಲೆ ಕೆಡಿಸಿಕೊಳ್ಳುತ್ತಾರೆ. ತಮ್ಮೆಲ್ಲ ಶ್ರಮ, ಸಾಮರ್ಥ್ಯವನ್ನು ಇನ್ನೊಬ್ಬರ ಪ್ರಗತಿಗೆ ತಡೆ ಒಡ್ಡಲು ಬಳಸುತ್ತಾರೆ.

’ಪರಿಣಾಮ ಏನಾಗುತ್ತದೆ?

’ವ್ಯಕ್ತಿಯೊಬ್ಬನ ಸಹಜ ಸಾಮರ್ಥ್ಯದ ದುರ್ಬಳಕೆಯಾಗುತ್ತದೆ. ಯಾರು ಇನ್ನೊಬ್ಬರ ಪ್ರಗತಿಗೆ ತಡೆ ಒಡ್ಡಲು ಪ್ರಯತ್ನಿಸುತ್ತಿರುತ್ತಾರೋ, ಅವರ ಪ್ರಗತಿ ಸಹಜವಾಗಿ ಕುಂಠಿತವಾಗುತ್ತದೆ. ಅವರ ಎಲ್ಲ ಸಮಯ ಹಾಗೂ ಯೋಚನೆ ಇನ್ನೊಬ್ವ ವ್ಯಕ್ತಿಯ ನಡೆಯನ್ನು ಅವಲಂಬಿಸತೊಡಗುತ್ತದೆ. ಅಸೂಯಾಪರ ವ್ಯಕ್ತಿಯ ಮನಸ್ಸನ್ನು ಇನ್ನೊಬ್ಬ ವ್ಯಕ್ತಿ ತುಂಬಿಕೊಳ್ಳುತ್ತಾನೆ. ನಾಶದ ಉದ್ದೇಶ ಈಡೇರುವತನಕ ಈ ವ್ಯಕ್ತಿ ಬೇರೊಂದು ವಿಷಯದತ್ತ ಗಮನ ಹರಿಸುವುದಿಲ್ಲ. ತನ್ನ ಗುರಿ ಸಾಧಿಸಿದ ನಂತರವೇ ಆತನಿಗೆ ನೆಮ್ಮದಿ.

’ಆದರೆ ಇದರಿಂದ ಅಸೂಯಾಪರನಿಗೆ ಏನು ಸಿಕ್ಕಂತಾಯಿತು? ಕ್ಷುದ್ರ ತೃಪ್ತಿ ಬಿಟ್ಟರೆ ಬೇರೆ ಏನೂ ಇಲ್ಲ. ಬದಲಾಗಿ, ಅವನ ಸಮಯ, ಶಕ್ತಿ ಹಾಗೂ ಸಾಮರ್ಥ್ಯ ವ್ಯರ್ಥ್ಯವಾಗುತ್ತದೆ. ಅವನ ಬುದ್ಧಿಶಕ್ತಿ ಕ್ರಿಯಾತ್ಮಕವಾದುದನ್ನು ಮಾಡಲಾಗದ ಸ್ಥಿತಿ ತಲುಪುತ್ತದೆ. ಕ್ರಮೇಣ ಅಸೂಯಾಭಾವನೆ ಅವನನ್ನು ಎಷ್ಟೊಂದು ಆವರಿಸಿಕೊಳ್ಳುತ್ತದೆಂದರೆ, ಸಹಜ ಸಮಾಧಾನ, ಸಂತೃಪ್ತಿ, ವಿವೇಕವನ್ನು ಕಳೆದುಕೊಂಡು ಆತ ಮಾನಸಿಕ ರೋಗಿಯಾಗುತ್ತಾನೆ.

’ಅಸೂಯೆ ಕೆಟ್ಟದ್ದು. ಅದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು. ಇನ್ನೊಬ್ಬರ ಪ್ರಗತಿಯನ್ನು ತಡೆದೆವು, ಅದಕ್ಕೆ ತೊಂದರೆ ಉಂಟು ಮಾಡಿದೆವು ಎಂಬ ಕ್ಷುದ್ರ ತೃಪ್ತಿ ಬಿಟ್ಟರೆ, ಅಸೂಯಾಪರನಿಗೆ ಏನೂ ದಕ್ಕುವುದಿಲ್ಲ. ಬದಲಾಗಿ ಆತ ತನ್ನದೇ ಮಾರ್ಗವನ್ನು ಕಳೆದುಕೊಂಡು, ಇನ್ನೊಬ್ಬರ ನಡೆಯನ್ನು ಕಾಯುತ್ತ ಇದ್ದಲ್ಲೇ ಇದ್ದುಬಿಡುತ್ತಾನೆ.’
ಪುಸ್ತಕ ಓದುತ್ತ ಹೋದಂತೆ ನನಗೆ ಸಾಧು ಹೇಳಿದ ಮಾತುಗಳು ಮತ್ತೆ ನೆನಪಾದವು.

ಒಬ್ಬ ಮನುಷ್ಯ ಇನ್ನೊಬ್ಬನನ್ನು ಕಂಡು ಏಕೆ ಅಸೂಯೆ ಪಡುತ್ತಾನೆ ಎಂಬುದಕ್ಕೆ ಬೇಕಾದಷ್ಟು ಕಾರಣಗಳಿರಬಹುದು. ಆದರೆ, ಅವು ಸಮರ್ಥನೀಯ ಎಂದು ಅನ್ನಿಸುವುದಿಲ್ಲ. ನಿಜವಾದ ಸತ್ವ ಇರುವ ವ್ಯಕ್ತಿ ಹೊಸ ಹೊಸ ಸಾಧನೆಗಳನ್ನು ಮಾಡುತ್ತಲೇ ಹೋಗುತ್ತಾನೆ. ಅಸೂಯಾಪರನೊಬ್ಬನ ಅಡ್ಡಗಾಲು ಆತನನ್ನು ಶಾಶ್ವತವಾಗಿ ಮುಗಿಸಲಾರದು.

ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅಲ್ಲೊಂದಿಷ್ಟು ಜನ ಅಸೂಯಿಗಳು ಸಿಕ್ಕೇ ಸಿಗುತ್ತಾರೆ. ಅವರು ನಮ್ಮ ಜತೆಗೇ ಇರುತ್ತಾರೆ. ಒಮ್ಮೊಮ್ಮೆ ನಮ್ಮ ಪರಮಾಪ್ತರಂತೆ ನಟಿಸುತ್ತಿರುತ್ತಾರೆ. ನಮ್ಮ ಒಂದೇ ಒಂದು ತಪ್ಪನ್ನು ಹಿಗ್ಗಿಸಿ ತೋರಿಸಲು, ನಮ್ಮನ್ನು ಅವಮಾನಿಸಲು, ನಮ್ಮ ಅವಕಾಶಗಳನ್ನು ಕಸಿದುಕೊಳ್ಳಲು ಪ್ರತಿ ಕ್ಷಣವೂ ಕಾಯುತ್ತಿರುತ್ತಾರೆ. ಅವರ ನಿತ್ಯದ ಬದುಕು ನಮ್ಮನ್ನು, ನಮ್ಮ ನಡೆಯನ್ನು ಅವಲಂಬಿಸಿರುತ್ತದೆ. ಇವರೊಂಥರಾ ಮಾನಸಿಕ ಅವಲಂಬಿಗಳು. ಮಾನಸಿಕ ರೋಗಿಗಳು.

ಎಷ್ಟೋ ಸಾರಿ ಅವರಿಂದ ನಮಗೆ ತೊಂದರೆಯಾಗುತ್ತದೆ. ಕೆಲವೊಮ್ಮೆ ಅವಮಾನವೂ ಆಗುತ್ತದೆ. ಅವರಿಗೆ ತಕ್ಕ ಬುದ್ಧಿ ಕಲಿಸಬೇಕು ಎಂದು ಮನಸ್ಸು ರೊಚ್ಚಿಗೇಳುತ್ತದೆ. ಆದರೆ, ಒಂದೇ ಒಂದು ನಿಮಿಷ ಯೋಚಿಸಿ ನೋಡಿ! ನಮ್ಮನ್ನು ಕೆಣಕುವ ವ್ಯಕ್ತಿಗೆ, ನಮ್ಮನ್ನು ತನ್ನ ಮಟ್ಟಕ್ಕೆ, ತನ್ನ ಕ್ಷೇತ್ರಕ್ಕೆ ತಂದು ಕದನಕ್ಕಿಳಿಸುವ ಉದ್ದೇಶ ಮಾತ್ರ ಇರುತ್ತದೆ. ನಾವು ರೊಚ್ಚಿಗೆದ್ದರೆ, ಮನಸ್ಸಿನ ಸಮತೋಲನ ಕಳೆದುಕೊಂಡರೆ, ಅಸೂಯಿಯ ಉದ್ದೇಶವನ್ನು ಈಡೇರಿಸಿದಂತೆ.

ಸಾಮಾನ್ಯವಾಗಿ ಇಂಥ ಅಸೂಯಿಗಳು ಬಲು ಬೇಗ ಪತ್ತೆಯಾಗುತ್ತಾರೆ. ಅವರನ್ನು ಗುರುತಿಸಲು ತುಂಬ ಕಷ್ಟಪಡಬೇಕಿಲ್ಲ. ಎಷ್ಟೋ ಸಾರಿ ಅಸೂಯಿಗಳು ನಮಗಿಂತ ಮೇಲಿನ ಹಂತದಲ್ಲಿರುತ್ತಾರೆ. ಆಗ ಕಷ್ಟ ಇನ್ನೂ ಜಾಸ್ತಿ. ನಮ್ಮನ್ನು ಹೀಯಾಳಿಸಿ, ನಮಗೆ ಸಹಜವಾಗಿ ದಕ್ಕಬಹುದಾದ ಅವಕಾಶಗಳನ್ನು ನಿರಾಕರಿಸಿ, ಅಥವಾ ಅವನ್ನು ನಮಗಿಂತ ಕಡಿಮೆ ಬುದ್ಧಿಮತ್ತೆ, ಪ್ರತಿಭೆ ಇರುವವರಿಗೆ ಕೊಡುವ ಮೂಲಕ ಅವರು ವಿಲಕ್ಷಣ ಆನಂದ ಅನುಭವಿಸುತ್ತಾರೆ.

ಆಗೆಲ್ಲ, ನಮ್ಮ ಮನಸ್ಸು ರೊಚ್ಚಿಗೇಳುತ್ತದೆ. ಇದನ್ನು ಖಂಡಿಸಬೇಕು, ಅಸೂಯಿಗೆ ತಕ್ಕ ಬುದ್ಧಿ ಕಲಿಸಬೇಕು ಎಂದು ಹಂಬಲಿಸುತ್ತದೆ. ಆದರೆ, ಹಾಗೆ ಮಾಡಲು ಹೋದರೆ, ಅಸೂಯಿಗೂ ನಮಗೂ ಯಾವ ವ್ಯತ್ಯಾಸವೂ ಇರುವುದಿಲ್ಲ. ಏಕೆಂದರೆ, ಮನಸ್ಸಿನೊಳಗೆ ನಮ್ಮ ಪ್ರಗತಿಗಿಂತ ಇನ್ನೊಬ್ಬನ ವಿನಾಶದ ವಿಚಾರವೇ ತುಂಬಿಕೊಳ್ಳುತ್ತದೆ. ನಮ್ಮ ಗುರಿಯನ್ನು ಮರೆತು, ಇನ್ನೊಬ್ಬರಿಗೆ ಕೆಟ್ಟದು ಮಾಡುವುದು ಹೇಗೆ? ಎಂದು ತಲೆ ಕೆಡಿಸಿಕೊಳ್ಳುತ್ತೇವೆ. ಕ್ರಮೇಣ ನಮ್ಮ ಮನಸ್ಸು ರೋಗಿಯಾಗುತ್ತದೆ.

ಅದರ ಬದಲು, ಸಮಾಧಾನದಿಂದ ಇರಲು ಪ್ರಯತ್ನಿಸೋಣ. ನಮ್ಮ ಅಸಲಿ ಪ್ರತಿಭೆಯನ್ನು ಮತ್ತಷ್ಟು ಸಾಣೆ ಹಿಡಿಯುವುದರಲ್ಲಿ ಸಮಯ ವಿನಿಯೋಗಿಸೋಣ. ಹೊಸ ಹೊಸ ವಿಷಯಗಳನ್ನು ಕಲಿಯಲು ಯತ್ನಿಸೋಣ. ನಮ್ಮ ಕೆಲಸವನ್ನು ಇನ್ನಷ್ಟು ಚೆನ್ನಾಗಿ ಕಲಿಯುವ ಮೂಲಕ, ಮಾಡಲು ಯತ್ನಿಸುವ ಮೂಲಕ, ನಿರಾಶೆಯನ್ನು ಅವಕಾಶವನ್ನಾಗಿ ಬದಲಾಯಿಸಿಕೊಳ್ಳೋಣ. ನಮ್ಮ ಭಾವನೆಗಳ ಮೇಲಿನ ಹಿಡಿತ ಬಲಗೊಳ್ಳುತ್ತ ಹೋದಂತೆ, ಹೊಸ ಆತ್ಮವಿಶ್ವಾಸ ಬೆಳೆಯುತ್ತ ಹೋಗುತ್ತದೆ. ಅಸೂಯಿಗಳ ಸಣ್ಣತನ ಕಂಡು ನಗುವ, ಅವರ ಅಡ್ಡಗಾಲನ್ನು ಅವಕಾಶವಾಗಿ ಬದಲಾಯಿಸಿಕೊಳ್ಳುವ ಸಾಮರ್ಥ್ಯ ನಮ್ಮದಾಗುತ್ತದೆ.

ತುಂಬ ಜನ, ತಾವು ಅಸೂಯಿಗಳಲ್ಲ ಎಂದೇ ಅಂದುಕೊಳ್ಳುತ್ತಾರೆ. ನನಗೆ ಸವಾಲಾಗಬಲ್ಲ ವ್ಯಕ್ತಿಯ ಸಾಮರ್ಥ್ಯವನ್ನು ಕುಂದಿಸಲು ಯತ್ನಿಸುತ್ತಿದ್ದೇನೆ ಎಂದಷ್ಟೇ ಭಾವಿಸುತ್ತಾರೆ. ಆದರೆ, ಎಲ್ಲಿಯವರೆಗೆ ನಮ್ಮಿಂದ ಕ್ರಿಯಾಶೀಲತೆ ಸಾಧ್ಯವಾಗುವುದಿಲ್ಲವೋ, ಹೊಸದನ್ನು ಕಲಿಯಲು ಕಷ್ಟವಾಗುತ್ತದೋ, ಇನ್ನೊಬ್ಬರ ಬಗ್ಗೆ ಹೆಚ್ಚು ಯೋಚಿಸುತ್ತಿರುತ್ತೇವೆಯೋ ಅಲ್ಲಿಯವರೆಗೆ ಅಸೂಯೆಯ ಒಂದಂಶ ನಮ್ಮಲ್ಲೂ ಇದೆ ಎಂದೇ ಅರ್ಥ.
ಅದನ್ನು ದೂರ ಮಾಡಿದರೆ ಮಾತ್ರ ನಾವು ಕ್ರಿಯಾಶೀಲರಾಗುತ್ತೇವೆ. ಇಲ್ಲದಿದ್ದರೆ ಯಾವುದೋ ಒಂದು ಅನುಪಯುಕ್ತ ಸಿದ್ಧಾಂತಕ್ಕೆ ಕಟ್ಟುಬಿದ್ದು, ಅದರಲ್ಲಿಯೇ ಮುಳುಗೇಳುತ್ತ, ನಮ್ಮದೇ ಒಂದು ಸೀಮಿತ ವಲಯವನ್ನು ಕಟ್ಟಿಕೊಂಡು, ಅದರಲ್ಲಿಯೇ ಈಜಾಡುತ್ತ ಇದ್ದು ಬಿಡುತ್ತೇವೆ. ನಮ್ಮ ವಲಯದಾಚೆಗೂ ಜಗತ್ತಿದೆ ಎಂಬುದನ್ನೇ ಮರೆತು ಬಾವಿ ಕಪ್ಪೆಗಳಾಗುತ್ತೇವೆ. ವ್ಯಕ್ತಿಗಳು, ಸಿದ್ಧಾಂತಗಳು, ಪಕ್ಷಗಳು, ಜಾತಿಗಳು, ಧರ್ಮಗಳ ನಡುವೆ ಗೋಡೆ ಎದ್ದಿರುವುದೇ ಈ ಕಾರಣಕ್ಕೆ.

ಹಾಗಂತ ಆ ಸಾಧು ಹೇಳಿದ್ದ. ಇವತ್ತಿನ ಕ್ಷಣದವರೆಗೂ, ಒಂದೇ ಒಂದು ಸಾರಿಯೂ, ಅದು ಸುಳ್ಳು ಎಂದು ನನಗೆ ಅನ್ನಿಸಿಲ್ಲ!

ಒಮ್ಮೊಮ್ಮೆ ಹೀಗೇ...

8 Jan 2008

0 ಪ್ರತಿಕ್ರಿಯೆ
ಆತ್ಮೀಯರೇ,

ತಂತ್ರಜ್ಞಾನ ಅಗಾಧವಾಗಿ ವಿಸ್ತರಿಸುತ್ತಿರುವ ಈ ದಿನಗಳಲ್ಲಿ, ಪತ್ರಿಕೋದ್ಯಮವೂ ಸೇರಿದಂತೆ ಬಹುತೇಕ ಕ್ಷೇತ್ರಗಳು ಸೂಕ್ತವಾಗಿ ಬದಲಾಗಬೇಕು ಎಂದು ನನಗೆ ಯಾವಾಗಲೂ ಅನ್ನಿಸಿದೆ.

ದೃಶ್ಯ ಮಾಧ್ಯಮಗಳು ಕ್ಷಣಕ್ಷಣ ಬೆಳವಣಿಗೆಗಳನ್ನು ವಿವರವಾಗಿ ತಲುಪಿಸುತ್ತಿರುವಾಗ, ಹಳೆಯ ಸುದ್ದಿಯನ್ನು ಇನ್ನಷ್ಟು ಕೆಟ್ಟ ಶೈಲಿಯಲ್ಲಿ ಉಣಬಡಿಸುತ್ತಿರುವ ಪತ್ರಿಕೋದ್ಯಮದ ದಡ್ಡತನದ ಬಗ್ಗೆ ಹಾಗೂ ಅದನ್ನು ಬದಲಾಯಿಸಲು ತಕ್ಷಣ ಆಗದ ನನ್ನ ಅನಿವಾರ್ಯತೆ ಕುರಿತು ನನಗೆ ಖೇದವಿದೆ.
ಇದನ್ನು ಸೂಕ್ತವಾಗಿ ಬದಲಾಯಿಸುವ ಮನಃಸ್ಥಿತಿಯನ್ನು ರೂಪಿಸುವುದು ಈ ಬ್ಲಾಗ್‌ ರೂಪಿಸುವ ಉದ್ದೇಶಗಳಲ್ಲಿ ಒಂದು.

ಉಳಿದಂತೆ, ನಾವೆಲ್ಲ ಪರಸ್ಪರ ಹಂಚಿಕೊಳ್ಳುವುದು ಎಷ್ಟೊಂದು ಇದೆಯಲ್ಲವೆ?ಬೆಳಿಗ್ಗೆ ಎದ್ದಾಗಿನ ಎಂಥದೋ ಭಾವನೆ, ಬಸ್‌ನಲ್ಲಿ ಬರುವಾಗ ಕಂಡ ಮೋಹಕ ಮುಖ, ಶಾಲೆಯ ಗೇಟ್‌ ಬಳಿ ನಿಂತಿರುವ ಅಚ್ಚರಿಗಣ್ಣಿನ ಮಗು, ಮಗುವಿಗೆ ಹಾಲೂಡಿ ಮತ್ತೆ ಇಟ್ಟಿಗೆ ಹೊತ್ತುಕೊಂಡು ಹೋಗುವ ಕಟ್ಟಡದ ಕೂಲಿಯಾಳು, ತಿನ್ನುವುದನ್ನೇ ಕಾಯಕ ಮಾಡಿಕೊಂಡ ಡುಮ್ಮ-ಡುಮ್ಮಿಯರು, ಅನಗತ್ಯದ ಬಿಂಕ ತೋರುವವರು, ಮುಗುಳ್ನಗುವ ಅಪರಿಚಿತರು, ಮುಖ ಗಂಟಿಕ್ಕಿಕೊಂಡು ಸಾಗುವ ಪರಿಚಯದವರು, ಗೊತ್ತಿರುವ ಅಲ್ಪವನ್ನು ಜಗತ್ತಿಗೆ ಹಂಚುವವರು, ಗುಪ್ತ ಅಸೂಯಿಗಳು, ಅನಸೂಯಿಗಳು, ಸೊಗಸುಗಾರರು, ಮೋಜುಗಾರರು, ಕಳ್ಳರು, ಸುಳ್ಳರು (ಈ ಎಲ್ಲ ರೀತಿಯ ಜನರಲ್ಲಿ ಸ್ತ್ರೀಯರೂ ಇದ್ದಾರೆ!)- ಹೀಗೆ ಎಷ್ಟೊಂದು ಜನರು ಎಷ್ಟೊಂದು ರೀತಿಯ ಭಾವನೆಗಳನ್ನು ನಿತ್ಯ ನಮ್ಮಲ್ಲಿ ಹುಟ್ಟಿಸುತ್ತ, ನಮ್ಮೊಳಗೆ ಪ್ರತಿಕ್ರಿಯೆ ಹುಟ್ಟಿಸುತ್ತ, ನಮ್ಮ ವ್ಯಕ್ತಿತ್ವವನ್ನು ನಮಗರಿವಿಲ್ಲದಂತೆ ರೂಪಿಸುತ್ತ ಹೋಗುತ್ತಾರೆ! ಇಂಥವನ್ನೆಲ್ಲ ಪರಸ್ಪರ ಹಂಚಿಕೊಳ್ಳಬೇಡವೆ?

ನಿಮ್ಮ ಅಭಿಪ್ರಾಯ ನಿಮ್ಮದು. ಯಾರೂ ಯಾರನ್ನೂ ಪ್ರಭಾವಗೊಳಿಸುವುದು ಬೇಡ. ಆದ್ದರಿಂದ ಅನಿಸಿದಂತೆ ಬರೆಯಿರಿ. ಬರೆದಂತೆ ಬದುಕೋಣ. ಯಾವತ್ತಾದರೂ ಒಂದಿನ, ಇಂಥದೊಂದು ಪ್ರಯತ್ನ ಮಾಡಿದ್ದಕ್ಕೆ ಬೆನ್ನು ಚಪ್ಪರಿಸಿಕೊಳ್ಳುವ ಸಂದರ್ಭ ಬಂದೀತು.

ಅಂಥ ಪ್ರತಿಕ್ರಿಯೆಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇನೆ.

- ಚಾಮರಾಜ ಸವಡಿ

ನಿಮ್ಮೊಂದಿಗೆ...

0 ಪ್ರತಿಕ್ರಿಯೆ
ಆತ್ಮೀಯರೇ,

ಇಂಥದೊಂದು ಬ್ಲಾಗ್ ಪ್ರಾರಂಭಿಸಲು ಕನಸು ಕಾಣುತ್ತಿದ್ದ ನನಗೆ, ಬರೆದ ಬರಹಗಳನ್ನು ಅಂತರ್ಜಾಲ ತಾಣಕ್ಕೆ ತರುವುದು ಹೇಗೆ ಎಂಬ ಸಮಸ್ಯೆ ಕಾಡುತ್ತಿತ್ತು. ಯಾರ ಸಹಾಯವೂ ಇಲ್ಲದೆ, ಇದ್ದ ಸ್ವಲ್ಪ ಸಮಯದಲ್ಲಿ ಉತ್ತಮವಾದ ಬರಹಗಳನ್ನು, ನಿಧಾನಗತಿಯಲ್ಲಿ, ಬರಹ ತಂತ್ರಾಂಶದಲ್ಲಿ ಟ್ಯೆಪ್ ಮಾಡುವುದು ಸುಲಭವಾಗಿರಲಿಲ್ಲ.

ಈ ಸಂದರ್ಭದಲ್ಲಿ ಸಮಾನ ಮನಸ್ಕರಾದ ನಾವೊಂದಿಷ್ತು ಜನ ನಿತ್ಯ ಸ್ವಲ್ಪ ಸಮಯ ಬರೆದು ’ಬ್ಲಾಗ್ ಬ್ಯಾಗ’ ತುಂಬುವುದು ಎಂದು ನಿರ್ಧರಿಸಿದೆವು. ಹಾಗೆ ಶುರುವಾಗಿದ್ದು ಚಾಮರಾಜ ಸವಡಿ ಹೆಸರಿನ ಈ ಬ್ಲಾಗ್‌.

ಕನ್ನಡದಲ್ಲಿ ಈಗಾಗಲೇ ತುಂಬ ಬ್ಲಾಗ್‌ಗಳಿವೆ. ಎಷ್ಟು ಬ್ಲಾಗ್‌ಗಳಿವೆ ಎಂಬ ಲೆಕ್ಕವೇ ಸರಿಯಾಗಿ ಸಿಗದಿರುವ ಈ ದಿನಗಳಲ್ಲಿ ಇನ್ನೊಂದು ಬ್ಲಾಗ್ ಬೇಕಿತ್ತೆ ಎಂದು ಅನ್ನಿಸುವುದು ಸಹಜ. ಆದರೆ, ಪ್ರತಿಯೊಂದು ಬ್ಲಾಗ್ ತನ್ನದೇ ವೈಶಿಷ್ಟ್ಯತೆ ಹೊಂದಿರುವುದರಿಂದ, ನಮ್ಮ ನಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಪ್ರತ್ಯೇಕ ಬ್ಲಾಗ್ ಇರಲಿ ಎಂದು ಚಾಮರಾಜ ಸವಡಿ ಹೆಸರಿನ ಬ್ಲಾಗ್‌ ಅನ್ನು ನಿಮ್ಮ ಮುಂದಿಡುತ್ತಿದ್ದೇವೆ.ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ವೈಯಕ್ತಿಕ ಅನಿಸಿಕೆಗಳು, ಅಭಿಪ್ರಾಯಗಳು, ಕನಸುಗಳು, ಟೀಕೆ-ವಿಮರ್ಶೆ ಮುಂತಾದವನ್ನು ಹಂಚಿಕೊಳ್ಳಬಹುದು. ಯಾರೂ ಯಾರೊಬ್ಬರ ಅಭಿಪ್ರಾಯಗಳನ್ನು ಒಪ್ಪಬೇಕೆಂದಿಲ್ಲ. ಆದರೆ, ಪ್ರತಿಯೊಬ್ಬರಿಗೂ ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ ಇದೆ. ಅದು ಹಾಗಿದ್ದರೇ ಚೆನ್ನ.

ಈ ಬ್ಲಾಗ್ ಕೊಂಚ ಅವಸರದಿಂದ ಪ್ರಾರಂಭವಾಗುತ್ತಿದೆ. ಆದ್ದರಿಂದ ಹಲವಾರು ಅನಪೇಕ್ಷಿತ ತಪ್ಪುಗಳು ನುಸುಳಿರಬಹುದು. ಅಂಥವನ್ನೆಲ್ಲ ಒಂದೊಂದಾಗಿ ತಿದ್ದಲಾಗುತ್ತದೆ. ತೀಡಲಾಗುತ್ತದೆ. ಕಾಲಕ್ರಮೇಣ ಸುಂದರ ಕನಸೊಂದು ನಿಮ್ಮ ಮುಂದೆ ನಳನಳಿಸುವಂತೆ ಮಾಡಲಾಗುತ್ತದೆ.

ಅಲ್ಲಿಯವರೆಗೆ, ದೂರದಿರಿ, ದುಡುಕದಿರಿ, ಒಂದಿಷ್ಟು ಪ್ರೀತಿ ತುಂಬಿದ ಸಹನೆ ಇರಲಿ.

- ಚಾಮರಾಜ ಸವಡಿ

ಎಲ್ಲರಿಗೂ ಸ್ವಾಗತ

4 ಪ್ರತಿಕ್ರಿಯೆ
ಆತ್ಮೀಯರೇ,

ಬನ್ನಿ, ನಿಮ್ಮ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಳ್ಳಿ.

- ಚಾಮರಾಜ ಸವಡಿ