ನ್ಯಾನೊ ಮತ್ತು ವೈಚಾರಿಕ ಸಣ್ಣತನ

13 Jan 2008

ಬಹುತೇಕ ಭಾರತೀಯರ ಸಂಕುಚಿತ ಮನಃಸ್ಥಿತಿಯನ್ನು ಎರಡು ಪ್ರಮುಖ ಬೆಳವಣಿಗೆಗಳು ಬಹಿರಂಗಪಡಿಸಿವೆ.

ಮೊದಲನೆಯದು, ಕಳೆದ ಒಂದೆರಡು ತಿಂಗಳುಗಳಿಂದ ನಡೆದಿರುವ ಉಡುಪಿ ಪರ್ಯಾಯ ವಿವಾದ. ಎರಡನೆಯದು, ವಾರಾಂತ್ಯದಲ್ಲಿ ಪ್ರದರ್ಶಿಸಲ್ಪಟ್ಟ ಜಗತ್ತಿನ ಅತಿ ಕಡಿಮೆ ಬೆಲೆಯ ಕಾರು ’ನ್ಯಾನೊ’.

ಪರ್ಯಾಯ ಪೀಠ, ಕೃಷ್ಣ ಪೂಜೆ ಹಾಗೂ ಪುತ್ತಿಗೆ ಶ್ರೀಗಳ ವಿದೇಶಿ ಪಯಣದ ಕಥೆಯನ್ನು ಓದುತ್ತಿದ್ದರೆ ನಗೆ ಬರುತ್ತದೆ, ವಿಷಾದವೂ ಆಗುತ್ತದೆ. ಏಕೆಂದರೆ, ಕೃಷ್ಣ ಅತ್ಯಂತ ಮುಕ್ತ ಮನಸ್ಸಿನಿಂದ ಬದುಕಿದ ವ್ಯಕ್ತಿ. ಜೀವನ ಪ್ರೀತಿಯನ್ನು ಕಡೆತನಕ ಉಳಿಸಿಕೊಂಡು ಬಂದ ವ್ಯಕ್ತಿ. ಯಾವ ಪಾರಂಪರಿಕ ಕಟ್ಟುಪಾಡುಗಳಿಗೂ ಬಂಧಿಯಾಗದೆ, ತನ್ನ ಕಾಲದ ಎಲ್ಲ ಮೂಢ ನಂಬಿಕೆಗಳನ್ನು ಹಾಗೂ ಆಷಾಡಭೂತಿತನ (ಹಿಪೊಕ್ರಸಿ)ವನ್ನು ವಿರೋಧಿಸಿದ್ದ ವ್ಯಕ್ತಿ ಆತ. ಎಲ್ಲರ ನಂಬಿಕೆಗೆ ವಿರುದ್ಧವಾಗಿ, ಎಲ್ಲರ ಕನಸುಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡ ಈ ಅಪರೂಪದ ವ್ಯಕ್ತಿಯ ಪೂಜೆಯ ಹೆಸರಿನಲ್ಲಿ ನಮ್ಮ ಧಾರ್ಮಿಕ ಹಿರಿ ತಲೆಗಳು ಮಾಡುತ್ತಿರುವುದಾದರೂ ಏನು?

ಕೃಷ್ಣ ಪಂಥ ಸಾವಿರಾರು ವರ್ಷಗಳ ಹಿಂದೆಯೇ ಸಾಗರ ದಾಟಿತ್ತು. ಆಧುನಿಕ ಕಾಲದಲ್ಲಿ ಇಸ್ಕಾನ್ ಆ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದೆ. ಧಾರ್ಮಿಕ ನಂಬಿಕೆಗಳಿಗೆ ದೇಶಗಳ, ನದಿ-ಕಡಲುಗಳ ಗಡಿಗಳು ಇರುವುದಿಲ್ಲ. ಒಂದು ವೇಳೆ ಅಂತಹ ಕಟ್ಟುಪಾಡುಗಳಡಿ ಯಾವುದಾದರೂ ಧರ್ಮ ಅಥವಾ ನಂಬಿಕೆ ಸಿಕ್ಕಿಕೊಂಡಿದ್ದರೆ, ಅದು ಖಂಡಿತ ಧರ್ಮವಲ್ಲ.

ಹೀಗಿದ್ದರೂ, ಉಡುಪಿ ಅಷ್ಟಮಠಗಳ ಬಹುತೇಕ ಶ್ರೀಗಳು ಯಾವುದೇ ನೆಲೆಗಟ್ಟಿಲ್ಲದ, ತರ್ಕಬದ್ಧವಲ್ಲದ ನಂಬಿಕೆಗೆ ಜೋತು ಬಿದ್ದು, ತಮ್ಮದೇ ಪಂಥದ ವ್ಯಕ್ತಿಯ ಸಹಜ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ. ಅದಕ್ಕೆ ಪೇಜಾವರ ಶ್ರೀಗಳಂತಹ ಧಾರ್ಮಿಕ ರಾಜಕಾರಣಿಗಳು ಕೈಜೋಡಿಸಿದ್ದಾರೆ. ವಿವಾದಗಳಿದ್ದಲ್ಲಿ ಸಾಮಾನ್ಯವಾಗಿ ಚಿದಾನಂದಮೂರ್ತಿಗಳು, ಚಂಪಾ-ವಾಟಾಳ್-ಪಾಟೀಲ ಪುಟ್ಟಪ್ಪರಂಥವರು ಇದ್ದೇ ಇರುತ್ತಾರೆ. ಆದರೆ, ಈಗ ಆ ಸಾಲಿಗೆ ಪೇಜಾವರ ಶ್ರೀಗಳೂ ಸೇರಿದ್ದು ವಿಷಾದಕರ.

ನಮಗೆ ಕೃಷ್ಣನ ಸಂದೇಶ ಮುಖ್ಯವೇ, ಆತನನ್ನು ಪೂಜಿಸುವ ವಿಧಿ-ವಿಧಾನಗಳು ಮುಖ್ಯವೆ? ’ಪತ್ರಂ ಪುಷ್ಪಂ ಫಲಂ ತೋಯಂ...’ ಎಂದಿದ್ದಾನೆ ಕೃಷ್ಣ ಗೀತೆಯಲ್ಲಿ. ಎಲೆ, ಹೂ, ಹಣ್ಣು- ಹೀಗೆ ಯಾವುದನ್ನು ನನಗೆ ಅರ್ಪಿಸಿದರೂ ಅದು ಪ್ರಿಯವೇ. ಎಲ್ಲಕ್ಕಿಂತ ಪ್ರಿಯ ಭಕ್ತಿ ತುಂಬಿದ ಪ್ರಾರ್ಥನೆ’ ಎಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದನ್ನು ಅಷ್ಟಮಠಗಳ ನಾಯಕರು, ಅವರ ನಂಬಿಕೆಗಳನ್ನು ಬೆಂಬಲಿಸುವ ಕುರುಡು ಮನಸ್ಸುಗಳು ಎಂದಾದರೂ ಅರ್ಥ ಮಾಡಿಕೊಳ್ಳುವುದು ಸಾಧ್ಯವೆ?

******

ಎರಡನೆಯದು, ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ೧ ಲಕ್ಷ ರೂಪಾಯಿ ಬೆಲೆಯ ನ್ಯಾನೊ ಕಾರಿನ ಬಗ್ಗೆ.
ಮಾಧ್ಯಮದಲ್ಲಿ ಕಾರಿನ ಭರಾಟೆಯಂತೂ ಜೋರಾಗಿಯೇ ಇದೆ. ವಾದ-ಪ್ರತಿವಾದಗಳೂ ಕೇಳಿ ಬಂದಿವೆ. ಅವುಗಳ ಪೈಕಿ ನನ್ನ ಗಮನ ಸೆಳೆದ ಒಂದೆರಡು ವಾದಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತೇನೆ.

ಒಬ್ಬ ಮಹನೀಯರು, ’ಟಾಟಾ ಮಾಡಿದ್ದು ಒಂದಿಷ್ಟೂ ಸರಿಯಿಲ್ಲ. ಕಡಿಮೆ ವೆಚ್ಚೆದಲ್ಲಿ ಕಾರು ದೊರೆಯುವಂತಾದರೆ ಮೊದಲೇ ಗಿಜಿಗುಟ್ಟುತ್ತಿರುವ ಭಾರತದ ರಸ್ತೆಗಳು ಉಸಿರುಕಟ್ಟುವಂತಾಗುತ್ತವೆ. ವಾಯು ಮಾಲಿನ್ಯ ಹೆಚ್ಚುತ್ತದೆ. ಸಹಾಯಧನದ ಮರ್ಜಿಯಲ್ಲಿರುವ ತೈಲೋತ್ಪನ್ನಗಳ ಆಮದು ಇನ್ನಷ್ಟು ಹೆಚ್ಚಿ, ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಉಂಟಾಗುತ್ತದ’ ಎಂದು ’ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಹೇಳಿದ್ದಾರೆ.

ವಾರೆವ್ಹಾ ಆಷಾಡಭೂತಿತನವೇ!

ಹತ್ತಾರು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ, ಬಡ ರೈತರಿಂದ ಭೂಮಿ ವಶಪಡಿಸಿಕೊಂಡು ವಿಮಾನ ನಿಲ್ದಾಣ ಮಾಡಿದರೆ ಈ ಮಹನೀಯರು ಅದನ್ನು ಪ್ರಗತಿ ಎಂದು ಬಣ್ಣಿಸುತ್ತಾರೆ. ರೈತನ ಭೂಮಿಯನ್ನು ಕ್ಷುಲ್ಲಕ ಬೆಲೆಗೆ ಕೊಂಡು ಐ.ಟಿ. ಕಂಪನಿ ಮಾಡಿದರೆ, ಅದನ್ನು ದೇಶ ಹೆಮ್ಮೆ ಪಡಬೇಕಾದ ಬೆಳವಣಿಗೆ ಎಂದು ಮೆಚ್ಚುತ್ತಾರೆ. ಆದರೆ, ಮಧ್ಯಮವರ್ಗದ ವ್ಯಕ್ತಿಯೊಬ್ಬ, ತನ್ನ ಬಜೆಟ್‌ಗೆ ನಿಲುಕುವ ಮಿತಿಯಲ್ಲಿ ಕಾರೇ ದೊರೆಯುತ್ತದೆ ಎಂದು ಸಂಭ್ರಮಿಸಿದರೆ, ಈ ವ್ಯಕ್ತಿಗೆ ಅದು ವಾತಾವರಣಕ್ಕೆ, ವಾಹನ ಸಂದಣಿಗೆ, ದೇಶದ ಕೀಸೆಗೆ ನುಗ್ಗಲು ಯತ್ನಿಸುತ್ತಿರುವ ಭೂತದಂತೆ ಕಾಣುತ್ತದೆ.

ನಿಜವಾದ ಆಷಾಡಭೂತಿತನ ಎಂದರೆ ಇದೇ ಇರಬೇಕು.

ಮಧ್ಯಮವರ್ಗದವರು, ಅವರಿಗಿಂತ ಕೆಳಗಿರುವವರು ಆರ್ಥಿಕವಾಗಿ ಮುಂದೆ ಬರಬಾರದು ಎಂಬ ಸಣ್ಣತನ ಬಿಟ್ಟರೆ ಈ ವಾದದಲ್ಲಿ ಮೆಚ್ಚುವಂಥದ್ದು ಏನೂ ಕಾಣುತ್ತಿಲ್ಲ. ಕೆಲವೇ ಕೆಲವು ಜನರು ಬಳಸುವ ವಿಮಾನ ನಿಲ್ದಾಣಕ್ಕೆ ಹತ್ತಾರು ಸಾವಿರ ಕೋಟಿ ರೂಪಾಯಿಗಳು, ಸಾವಿರಾರು ಎಕರೆ ಭೂಮಿ ಖರ್ಚಾದರೆ ಪರವಾಗಿಲ್ಲ. ಆದರೆ, ತನ್ನ ಮಿತಿಯಲ್ಲಿ ನಿಲುಕುವ ಒಂದು ಕಾರನ್ನು ಮಧ್ಯಮವರ್ಗದ ವ್ಯಕ್ತಿ ಖರೀದಿಸಲು ಉತ್ಸುಕನಾದರೆ, ಅದರ ಹಿಂದೆ ವಿನಾಶದ ಭೀತಿ ಕಾಣುತ್ತದೆ. ಅಡುಗೆ ಅನಿಲ ಖರೀದಿಸಲು ಶಕ್ತನಲ್ಲದ ವ್ಯಕ್ತಿ ಸೌದೆ ಉರಿ ಹಚ್ಚಿ ಅಡುಗೆ ಮಾಡಿದರೆ, ಅದನ್ನು ಪರಿಸರ ಮಾಲಿನ್ಯ ಕ್ರಮ ಎಂದು ಬಣ್ಣಿಸಿದಂತಿದೆ ಈ ಮಹನೀಯರ ವಾದ.

ಇದಕ್ಕೂ, ಅಷ್ಟಮಠಗಳ ಶ್ರೀಗಳು ಎಬ್ಬಿಸುತ್ತಿರುವ ವೈಚಾರಿಕ ಮಾಲಿನ್ಯಕ್ಕೂ ಏನೂ ವ್ಯತ್ಯಾಸವಿಲ್ಲ. ಎರಡೂ ಬೌದ್ಧಿಕ ಅಧಃಪತನದ ಸಂಕೇತಗಳೇ.

6 comments:

Anonymous said...

ನ್ಯಾನೋ ಕಾರ್ ಬಗ್ಗೆ ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ. ನಿಮ್ಮ ಲೇಖನ ಓದುವ ತನಕ ನಾನೂ ಸಹಾ ನ್ಯಾನೋ ದ ಕೆಟ್ಟ ಪರಿಣಾಮಗಳ ಬಗ್ಗೆ ಮಾತ್ರ ಓದುತ್ತಿದ್ದೆ. “ದೇಶದಲ್ಲಿ ಶ್ರೀಮಂತರ ಸಂಖ್ಯೆ ಕಡಿಮೆ. ಮದ್ಯಮ ವರ್ಗದವರು ಜಾಸ್ತಿ. ಆದ್ದರಿಂದ ಹೊಸ ಏರ್‌ಪೋರ್ಟು ಮಾಡಿದರೆ ಅಷ್ಟೇನೂ ಕೆಟ್ಟದಾಗುವುದಿಲ್ಲ !” ಅಂತ ಅಂದುಕೊಂಡಿದ್ದೆ.

Anonymous said...

Good effort

Anonymous said...

You've attacked those foolish people very nicely... any persons indulging in such acts of any relegion is shame thing... worshiping and adoring a person like krishna is personel thing but in the name of Bhakthi these swameejis conspiring some thing is really a offence

Anonymous said...

ನಿಮ್ಮ ಲೇಖನ ನಿಮ್ಮ ವಿನೂತನ ದೃಷ್ಟಿ ಶ್ಲಾಘನೀಯ. ಕೃಷ್ಣ ವಾಸ್ತವವಾಗಿ ಬದುಕಿದ್ದೇ ಸಮುದ್ರದ ಮಧ್ಯೆ ಇದ್ದ ದ್ವಾರಕೆಯಲ್ಲಿ ಅಲ್ಲವೇ?? ಅಲ್ಲಿಗೆ ಸಮುದ್ರದಾಟಿದರೆ ಹೇಗೆ ಧಮ೵ಕ್ಕೆ ಅಪಚಾರವಾಗುತ್ತದೆ?? ಈ ಎಲ್ಲವೂ ಮನುಷ್ಯನ ಸಣ್ಣತನಗಳ ಪ್ರತೀಕ.

ಆದರೆ, ನಿಮ್ಮ ನ್ಯಾನೋ ಕಾರಿನ ಬಗೆಗೆ ನನ್ನ ಸಹಮತ ಇಲ್ಲ. ವಿಮಾನನಿಲ್ದಾಣಗಳಿಂದ ದೂರ ದೇಶಕ್ಕೆ ಹೋಗಿ (ವಿದ್ಯಾಭ್ಯಾಸಕ್ಕಾಗಿ, ಉದ್ಯೋಗಕ್ಕಾಗಿ, ವ್ಯಾಪಾರಕ್ಕಾಗಿ...) ಬರಬಹುದು. ಇದರಿಂದ ದೇಶಕ್ಕೆ ಲಾಭವಲ್ಲವೇ?? ಆದರೆ ಕಾರುಗಳನ್ನು ತೆಗೆದುಕೊಂಡರೆ ಏನು ಲಾಭ?? (ಕಾರು ತಯಾರಿಸಿದ ಕಂಪೆನಿಗೆ ಬಿಟ್ಟು) ಕಾರಿನಲ್ಲಿ ಹೋದ ಮಾತ್ರಕ್ಕೆ ಎಲ್ಲವೂ ಸರಿಹೋಗುತ್ತದೆಯೇ?

ಇಲ್ಲಿ ನೋಡಿ, ಎಲ್ಲಾ ಐಷಾರಾಮಿ ವಸ್ತುಗಳ ಹಿಂದಿನ ಹುನ್ನಾರ ಎಂದರೆ ನಮ್ಮನ್ನು ಸಾಲಗಾರರನ್ನಾಗಿಸುವುದು. ಮೊಬೈಲ್, ಟಿ.ವಿ.ಯಾವುದೇ ಇರಬಹುದು ಅವುಗಳನ್ನು ಕೊಳ್ಳಲು ಕೇವಲ ಶ್ರೀಮಂತರಷ್ಟೆ ಮುಂದೆ ಬರುವುದಿಲ್ಲ ಮಧ್ಯಮ ವಗ೵ದವರು ಸಾಲ ಮಾಡಿ ಕೊಳ್ಳುತ್ತಾರೆ ಅಲ್ಲವೇ??

ಇದರಿಂದ ಲಾಭವಾಗುವುದು ಸಮಾಜದ ಮೇಲ್ತರಗತಿಯಲ್ಲಿರುವ ಬಂಡವಾಳಶಾಹಿಗಳಿಗೆ ಮಾತ್ರ! ಪರಿಸರ ಮಾಲಿನ್ಯವನ್ನು ಬದಿಗಿರಿಸಿ ಈ ವಿಚಾರಗಳತ್ತ ಒಮ್ಮೆ ನೋಡಿ.

ನಾಲ್ಕೈದು ವಷ೵ದ ಹಿಂದೆ ನಾವೆಲ್ಲಾ ಮೊಬೈಲ್ ಇಲ್ಲದೆ ಜೀವಿಸುತ್ತಿದ್ದೇವು ಅಲ್ಲವೆ??? ಈಗ.....? ಪರಿಸ್ಥಿತಿ ಏನಾಗಿದೆ. ಮೊಬೈಲ್ ಗಳಿಂದ ಬಂಡವಾಳ ಶಾಹಿಗಳಿಗೆ ಲಾಭ ಇಲ್ಲಿನ ಜನಗಳಿಗೆ ನಷ್ಟ.

ಅದೇ ರೀತಿ ಈ ನ್ಯಾನೋ ಕಾರು ಕೂಡ!!
ಮದುವೆಗೆ ವರದಕ್ಷಿಣೆಯಾಗಿ ಸ್ಕೂಟರ್ ಬಯಸುತ್ತಿದ್ದವ ಈಗ ಕಾರು ಬಯಸುತ್ತಾನೆ....

ಈ ಕಾರಿನ ಬದಲಿಗೆ ಸಾವ೵ಜನಿಕ ಸಾರಿಗೆಯನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ನಮ್ಮ ಬಂಡವಾಳ ಶಾಹಿಗಳು ಯೋಚಿಸಿ ಏನಾದರೂ ಮಾಡಿದ್ದರೆ, ಪರಿಸರವೂ ಉಳಿತಿತ್ತು. ಜನಕ್ಕೆ ನಷ್ಟವೂ ತಪ್ಪುತ್ತಿತ್ತು. ಸಾಲದ ಹೊರೆಯೂ ತಪ್ಪುತ್ತಿತ್ತು ಅಲ್ಲವೇ?

ಐಷಾರಾಮಿ ವಸ್ತುಗಳನ್ನು ಹೊಂದುವುದೇ, ಬಾಹ್ಯ ಆಡಂಬರಗಳನ್ನು ಹಾಕಿಕೊಳ್ಲೂವುದೇ, ಕಾರಿನಲ್ಲಿ ಕೊಂಡು ಪಯಣೀಸುವುದೇ ಜೀವನದ ಮೌಲ್ಯವಲ್ಲ. ಅದರಾಚೆಗೂ ನಾವು ಯೋಚಿಸಬೇಕು ಅಲ್ಲವೆ.?

ಗಿರೀಶ ಕೆ.ಎಸ್.

ಚಾಮರಾಜ ಸವಡಿ said...

ಧನ್ಯವಾದಗಳು ದಿಲ್‌
- ಚಾಮರಾಜ

ಚಾಮರಾಜ ಸವಡಿ said...

ಪ್ರೀತಿಯ ಗಿರೀಶ್‌,
ಮೊದಲೇ ಹೇಳಿದಂತೆ, ಇಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯಗಳನ್ನು ಮುಕ್ತವಾಗಿ ದಾಖಲಿಸುವ ಸ್ವಾತಂತ್ರವಿದೆ. ನನ್ನ ಅಭಿಪ್ರಾಯಗಳು ನನ್ನವು. ಹಾಗೇ, ನಿಮ್ಮ ಅಭಿಪ್ರಾಯಗಳು ನಿಮ್ಮವು. ಇವೆರಡನ್ನೂ ಓದಿ ಮೂರನೇ ವ್ಯಕ್ತಿ ತನ್ನ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಲಿ ಎಂಬುದಷ್ಟೇ ಈ ಬ್ಲಾಗ್‌ ಪ್ರಾರಂಭಿಸಿರುವ ಆಶಯ.
ಓದಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.

- ಚಾಮರಾಜ ಸವಡಿ