ಹದಿನಾಲ್ಕು ವರ್ಷದ ಹಿಂದಿನ ಕವಿತೆಗಳು

25 Apr 2008

ಮನಸ್ಸಿನ ಬೇರುಗಳು ಬಲು ಆಳ, ಬಲು ಸಮೃದ್ಧ. ಒಳಗೊತ್ತಿ, ಆಳಕ್ಕಿಳಿಸಿ, ಹೂತು ಹಾಕಿದ್ದ ನೆನಪುಗಳೆಲ್ಲ ಬೇರುಗಳ ಮೂಲಕ ತುತ್ತ ತುದಿಗೆ ಬಂದು ಬಿಡುತ್ತವೆ. ಅರಳಿ, ಹೂವಾಗಿ, ಕಾಯಾಗಿ ಹಣ್ಣಾಗಿ ಬೆಚ್ಚಿಸುತ್ತದೆ.

ಹಾಗೆ ಆಳದಿಂದ ತುದಿಗೇರಿ, ಹಚ್ಚಗೆ ಅರಳಿ ಬೆಚ್ಚಿಸಿದ ಒಂದಿಷ್ಟು ನೆನಪುಗಳಿವು. ಮರೆತೇನೆಂದರೆ ಮರೆಯಲಿ ಹ್ಯಾಂಗ ಎಂಬ ಕವಿವಾಣಿಯಂತೆ, ಇವು ಮತ್ತೆ ಬಂದಿವೆ. ಆಳದಿಂದ ಮೇಲಕ್ಕೆ, ಹಾಳೆಯಿಂದ ಬ್ಲಾಗಿಗೆ ಬಂದ ಇವಕ್ಕೆ ಯಾವ ಮೌಲ್ಯವಿದೆಯೋ ಗೊತ್ತಿಲ್ಲ.

ಆದರೆ, ಇವು ನನ್ನ ನೆನಪಿನ ತುಣುಕುಗಳು. ಇವನ್ನು ಜೋಡಿಸಬೇಕೆ, ರೂಪ ಕೊಡಬೇಕೆ ತಿಳಿಯದೇ ಬಂದ ಹಾಗೆ, ಹೆಕ್ಕಿ ಪೋಣಿಸಿದ್ದೇನೆ.

ಕವಿತೆ/ಕವಿ ಎಂದರೆ ನಾನೇ ಓಟ ಕೀಳುವ ಈ ದಿನಗಳಲ್ಲಿ, ನನ್ನ ಹಳೆಯ ಕವಿತೆಗಳನ್ನು ಓದುತ್ತ ಮನಸ್ಸು ಆಳ ಆಳಕ್ಕೆ ಜಾರುತ್ತಿದೆ. ಏನೋ ನೆನಪು, ಏನೋ ನೋವು. ಓದುತ್ತ, ಓದುತ್ತ ಮನಸ್ಸು ಹದಿನಾಲ್ಕು ವರ್ಷ ಹಿಂದೆ ಹೋಗಿದೆ.

ಈ ಗುಂಗು ಯಾವಾಗ ಬಿಡುತ್ತದೋ!

- ಚಾಮರಾಜ ಸವಡಿ


೧.
ಹುಡುಕುವಾಗ

ಎಂದೋ ಬರೆದಿಟ್ಟ ಕವನದ ದೂಳು
ಸವರಿ ಕಣ್ಣಾಡಿಸುತ್ತೇನೆ
ಇಲ್ಲೆಲ್ಲ ನನ್ನ ಹೃದಯ
ಮಸಿಯಾಗಿ ಹರಿದು
ಅಕ್ಷರಗಳಾಗಿ ಚದುರಿ ಬಿದ್ದಿದೆ

ಇದೊಂದು ವಿಚಿತ್ರವೇ ಸರಿ-
ಹೃದಯ ಹಿಂಡುವ ನೆನಪುಗಳನ್ನು
ಅಕ್ಷರಗಳನ್ನಾಗಿಸುವುದು
ಏರು ಹೃದಯ ಬಡಿತವನ್ನು
ಒಸರುವ ಕಣ್ಣೀರನ್ನು
ಸಾಲುಗಳನ್ನಾಗಿಸುವುದು

ಮತ್ತು
ಆ ಪ್ರೇಮಪತ್ರ ಬರೆದಾಗ ಸಹ
ನನ್ನ ಹೃದಯ ಅಕ್ಷರಗಳಾಗಿತ್ತು
ನಂತರ ಇವೇ ಸೊಟ್ಟ ಗೆರೆಗಳು
ನನ್ನ ಅಳಲನ್ನು ಬಿಂಬಿಸಿದ್ದವು

ಇವತ್ತು
ಈ ಅಕ್ಷರಗಳ ಮೇಲೆ ದೂಳಿದೆ
ನರೆತ ಕೂದಲಿನ ವ್ಯಕ್ತಿ
ಬಾಲ್ಯದ ಫೋಟೊ ನೋಡುವಂತೆ
ಚದುರಿದ ಅಕ್ಷರಗಳನ್ನು ನೋಡುತ್ತೇನೆ

ಇಲ್ಲ,
ಇವು ಬರಿಯ ಅಕ್ಷರಗಳಲ್ಲ
ಏಕೆಂದರೆ
ಈ ಜೋಡಣೆಗೊಂದು ಅರ್ಥವಿದೆ.

- ಚಾಮರಾಜ ಸವಡಿ

೨.
ಬರೆಯಬೇಕೆಂದರೆ...

ಕಾಗದ-ಪೆನ್ನೆತ್ತಿಕೊಂಡರೆ
ತಿಳಿಯಾಗಿದ್ದ ಮನಸ್ಸು
ಕಲಕಿಬಿಡುತ್ತದೆ
ಮುಸ್ಸಂಜೆ ಕಳೆದುಕೊಂಡ
ಗೋಲಿ ಹುಡುಕಿದಂತೆ
ಶಬ್ದ, ವಾಕ್ಯಗಳಿಗೆ ತಡಕಾಡುವೆ
ಇಲ್ಲೇ ಎಲ್ಲೋ ಇವೆ
ಆದರೆ ಎಲ್ಲಿವೆ? ಸಿಗಲೊಲ್ಲವು

ಪರಚಿಕೊಳ್ಳಬೇಕೆನಿಸುತ್ತದೆ
ಉಪಯೋಗವಿಲ್ಲ
ಮುನಿಯಂತೆ ಕೂತು
ನುಣುಚಿಕೊಳ್ಳುತ್ತಿರುವ
ಶಬ್ದ, ವಾಕ್ಯಗಳನ್ನು ಗಬಕ್ಕನೇ ಹಿಡಿದು
ಮಸಿಯಾಗಿ
ಕಾಗದದ ಮೇಲೆ ಕಾರಿಸಲೆತ್ನಿಸುತ್ತೇನೆ

ಕೆಲವು
ಒಳಗಿನದನ್ನೆಲ್ಲ ಕಾರಿಕೊಂಡರೆ
ಇನ್ನು ಕೆಲವು ಮಲ-ಮೂತ್ರ ಮಾಡುತ್ತವೆ
ಅಸಹ್ಯ
ಚಿತ್ರ ಕೆಟ್ಟು ನಾರುತ್ತದೆ

ಬೇಸರಗೊಂಡು
ಹಾಳೆ ಮುದುರಿ ಎಸೆದು
ಪೆನ್ನು ಬಿಸುಟು
ಛಾವಣಿ ನೋಡುತ್ತ ಕೂತಾಗ
ನುಣುಚಿಕೊಂಡು ಓಡಿದ್ದ ಶಬ್ದ-ವಾಕ್ಯಗಳು
ಬಿಳಿ ಛಾವಣಿ ಮೇಲೆ ಕುಣಿದು
ಚಂದದ ಚಿತ್ತಾರ ಬಿಡಿಸಿ
ಗೇಲಿ ಮಾಡುತ್ತವೆ.

- ಚಾಮರಾಜ ಸವಡಿ

೩.
ಮೊಗ್ಗರಳಿ...ಕವಿಶೈಲ

ಹತ್ತು ವರ್ಷದ ಹಿಂದೆ ನೋಡಿದ ಹುಡುಗಿ
ಅರ್ಧ ಲಂಗ, ಗಾಜಿನ ಬಳೆ, ಜಡೆ, ರಿಬ್ಬನ್ನು
ಖೋ ಖೋ, ಹಗ್ಗದಾಟ, ಕುಂಟೋ ಬಿಲ್ಲೆ
ಗಟ್ಟಿ ನಗು, ಕೇಕೆ, ಬಿಕ್ಕಳಿಕೆ
ಮೊನ್ನೆ ಮೊನ್ನೆ ಕಂಡಂತೆ
ಅಚ್ಚಳಿಯದ ನೆನಪು

ಈ ಹುಡುಗಿ
ಆಗ ಗೊಂದಲಕ್ಕೆ ಕೆಡವಿರಲಿಲ್ಲ
ಅವಳ ಆಟ, ನೋಟ
ಕಂಡಾಗೆಲ್ಲ ಕಣ್ಣು-ತುಟಿ ಅರಳಿಸುವುದು
ಏನೂ ಅನ್ನಿಸಿರಲಿಲ್ಲ

ಮೊನ್ನೆ
ಓಣಿಯ ತಿರುವಿನಲ್ಲಿ
ಆಕಸ್ಮಿಕವಾಗಿ ಕಂಡಾಗ
ಕತ್ತಲಲ್ಲಿ ಕೆಮ್ಮಣ್ಣುಗುಂಡಿ ತಲುಪಿ
ಬೆಳಿಗ್ಗೆ ಕಿಟಕಿ ತೆರೆದು ನೋಡಿದಾಗಿನ
ಬೆರಗು, ಖುಷಿ

ಇವಳೀಗ ಪ್ರಕೃತಿ
ಆಕರ್ಷಕ, ಗೂಢ
ದಟ್ಟವಾಗಿ ಬೆಳೆದ ಮಲೆನಾಡ ಕಾಡು
ನಾನೋ ಇನ್ನೂ ಎಳಸು
ಹುಡುಕಬೇಕು ಕವಿಶೈಲ
ಮಲೆಯ ನಡುವೆ

- ಚಾಮರಾಜ ಸವಡಿ

೪.
ಬಯಲು ಸೀಮೆಯ ಕನಸು

ಊರಿನಿಂದ
ಸಾವಿರಾರು ಮೈಲು ದೂರದಲ್ಲಿ
ಭಾರತ-ಪಾಕಿಸ್ತಾನದ ಗಡಿಯಲ್ಲಿ
ಉಸುಕು-ನೀರಿನ ಹಿನ್ನೆಲೆಯಲ್ಲಿ
ಬಿಸಿಲು ದಿಟ್ಟಿಸುತ್ತ ಕೂತ ನನಗೆ
ಬಯಲು ಸೀಮೆಯ ಕನಸು

ನಮ್ಮಜ್ಜ
’ಕಪಿಯೇ, ಮನುಷ್ಯನಾಗುವುದ ಕಲಿ’
ಎಂದು ಅಂಗೈಗೆ ಐದು ಪೈಸೆ ಹಾಕುತ್ತ
ಊರ ಸಂತೆಗೆ ಅರ್ಥ ತರಿಸಿದ್ದು
ಅಪ್ಪ ತಂದ ಪೇರಲ ಹಣ್ಣು
ಅವ್ವ ಹಚ್ಚಿದ ಕಾರಮಂಡಾಳ
ಐದು ಪೈಸೆ ತಂದಿತ್ತ
ಜಗತ್ತನ್ನೇ ಕೊಂಡೇನೆಂಬ ಆತ್ಮವಿಶ್ವಾಸ
ಎಲ್ಲಾ ನೆನಪಾಗಿ
ಎಲ್ಲೋ ದೂರದಲ್ಲಿ ಬರುತ್ತಿದ್ದ ಗಾಡಿ
ಎಬ್ಬಿಸಿದ ದೂಳಿನ ನಡುವೆ
ನಮ್ಮೂರ ಸಂತೆ ಕಂಡ ಹಾಗಾಗಿ
ಕಣ್ಣು ಮಂಜು ಮಂಜು

ಗದಗಿನವರೆಗೆ ಬಸ್ಸಲ್ಲಿ
ಹುಬ್ಬಳ್ಳಿಯಿಂದ ರೈಲು ಹತ್ತಿ
ಮುಂಬೈ ದಾಟಿ ಇಷ್ಟು ದೂರ ಬರುವ ಮೊದಲು
ನನ್ನ ಬಯಲು ಸೀಮೆ ಎಷ್ಟೊಂದು ಚಂದವಿತ್ತು

ಅಲ್ಲಿಯ ಜೋಗಪ್ಪ, ಜೋಗವ್ವ
ಪೀರಸಾಬನ ದರಗಾದ ಉರುಸು
ಸಿದ್ಧೇಶ್ವರನ ಜಾತ್ರೆ, ಬಯಲಾಟ
ಕಲಿತ ಕಳ್ಳ ನಾಟಕ, ಬಂಬೈ ಮಿಠಾಯ್‌
ದನದ ಜಾತ್ರೆ, ಹಂಪಿ ಪ್ರವಾಸ
ಬೆತ್ತಲೆ ಬಯಲಲ್ಲಿ ಬೆತ್ತಲೆ ಓಡಾಟ

ಅಯ್ಯೋ ತಾಳಲಾರೆ, ಕಳೆದು ಹೋದೇನು
ಗೆಳೆಯಾ ನನ್ನನ್ನೆಚ್ಚರಿಸು
ಬಯಲು ಸೀಮೆಯ ಕನಸು ನನಗೆ

- ಚಾಮರಾಜ ಸವಡಿ

೫.
ಸಂಬಂಧದಾಚೆಯವಳು

ಎಲ್ಲಾ ನೆನಪಾಗುತ್ತವೆ ಮರೆಯಬೇಕೆಂದಾಗ

ಸೋದರಿಯಾಗಿಸಲ್ಪಟ್ಟ ಗೆಳತಿ
ಅವಳ ಚಟುವಟಿಕೆ, ಚುರುಕುತನ
ಯಾರೊಂದಿಗೋ ಸಿನಿಮಾದಲ್ಲಿ ಅವಳ ನೋಡಿ
ತಳಮಳಗೊಂಡಿದ್ದು, ಹೇಳಲಾರದ ನೋವುಂಡಿದ್ದು

ಎಲ್ಲಾ ನೆನಪಾಗುತ್ತವೆ ಮರೆಯಬೇಕೆಂದಾಗ

ಎದೆ ತೆರೆಯಲು, ಮನಸ ಎಳೆ ಬಿಡಿಸಿಡಲು
ಒಳಗಿನದನ್ನೆಲ್ಲ ಹೊರ ಹಾಕಲು ಯತ್ನಿಸಿದರೂ
ಎದೆ ಭಾರವಾಗಿದ್ದು, ಮನದ ಎಳೆ ಗಂಟಾದದ್ದು
ಒಳಗಿನದೆಲ್ಲ ಒಳಗೇ ಉಳಿದಿದ್ದು, ನೋವಾಗಿ ಬೆಳೆದಿದ್ದು

ಎಲ್ಲಾ ನೆನಪಾಗುತ್ತವೆ ಮರೆಯಬೇಕೆಂದಾಗ

ಅವಳ ಸಂಗ ಕಡಿಮೆ ಮಾಡಬೇಕು ಅಂದುಕೊಳ್ಳುತ್ತಾ
ಸೋತು ಸೋತು, ಪ್ರತಿ ರಜೆಗೆ ಹಾಜರಿ ಹಾಕಿ
ಅವಳ ತಮಾಷೆಗೆ ನಗದೇ, ಸುಮ್ಮನಿರಲೂ ಆಗದೇ
ಗೊಂದಲಗೊಂಡಿದ್ದು, ತೊಳಲಾಡಿದ್ದು

ಎಲ್ಲಾ ನೆನಪಾಗುತ್ತವೆ ಮರೆಯಬೇಕೆಂದಾಗ

ಮಿಕ್ಕಿದ್ದೆಲ್ಲ ಇನ್ನೊಮ್ಮೆಗೆ ಅಂದುಕೊಂಡರೂ
ಡೈರಿಯಲ್ಲಿ, ಗೆಳೆಯನೆದುರು
ಅಪರಿಚಿತ ಯುವ ಕವಿಯೊಂದಿಗೆ
ಹೇಳಿಕೊಂಡಿದ್ದು, ಬಿಕ್ಕಿದ್ದು, ಮೌನಿಯಾಗಿದ್ದು

ಎಲ್ಲಾ ನೆನಪಾಗುತ್ತವೆ ಮರೆಯಬೇಕೆಂದಾಗ

- ಚಾಮರಾಜ ಸವಡಿ

೬.
ಬೆದೆಗೊಂದು ಭಾಷ್ಯ

ಯಾವ ಸೊಗಸಿನ ಅಂಶಕ್ಕೆ
ವರ್ಷವೂ ಬೋಳು ಮರ ಚಿಗುರುವುದು
ಕಟ್ಟಿ ಹಾಕಿದ ನಾಯಿ ಜಗ್ಗಾಡುವುದು
ರಾತ್ರಿ ಕಡಲು ಮುಸುಗುಡುವುದು, ಅಪ್ಪಳಿಸುವುದು?

ಒಣಗಿ ಸೆಟೆದ ಕೊಂಬೆಗಳೂ
ಹಸಿರ ಮುಗುಳ್ನಗುವುದು, ಕೆಂಪಾಗಿ ನಾಚುವುದು
ಕರ್ರನ್ನ ದುಂಬಿಯ ಕೊರೆತಕ್ಕೆ
ಕೆರಳುವುದು, ಹಿತವಾಗಿ ನರಳುವುದು?

ಕೈಯೂರಿ ಎದ್ದು, ಕಾಲೂರಿ ಬಿದ್ದು, ಮತ್ತೇಕೆ
ಕೋಲೂರಿ ಆಯ ಕಾಯುವ ಕಾತರ?
ಪಡಿಯಚ್ಚುಗಳ ಮದುವೆಯಲಿ
ಸಾಲಸೋಲದ ಭೂರಿಭೋಜನ?

ಎಲ್ಲಾ ತುಡಿತಗಳಿಗೆ ಅರ್ಥ:
ಮಳೆಯಂತೆ ಬಿತ್ತಿ
ಭುವಿಯಂತೆ ಬೆಳೆಯುವುದು
ಪಡಿಯಚ್ಚುಗಳ ನೋಡಿ, ನಲಿದು
ಹಣ್ಣಾಗಿ ಅಳಿಯುವುದು

- ಚಾಮರಾಜ ಸವಡಿ

೭.
ಅಲ್ಲೆಲ್ಲ ಅವಳ ನೆನಪು

ದೊಡ್ಡ ಗೇಟು, ಮಹಡಿ ಮೆಟ್ಟಿಲು
ಲೈಬ್ರರಿಯ ಬಾಗಿಲು, ಪುಸ್ತಕದ ದೂಳಿನಲ್ಲಿ
ಆ ಸರಸ್ವತಿ ವಿಗ್ರಹ, ಆ ಪುಡಿ ಕುಂಕುಮದಲ್ಲಿ
ಗಾಳಿಯಲ್ಲಿ ಕರಗಿದ ಸುಗಂಧದಂತೆ

ಅಲ್ಲೆಲ್ಲ ಅವಳ ನೆನಪು

ಪುಸ್ತಕದ ಕೊನೆಯ ಪುಟದ ಸೀಲಿನಲ್ಲಿ
ಒಳಪುಟದಲ್ಲೆಲ್ಲೋ ಇಟ್ಟ ಗುರುತಿನ ರಟ್ಟಿನಲ್ಲಿ
ಕೆಳಗೆರೆ ಹೊಡೆದ ಸಾಲುಗಳಲ್ಲಿ
ಖಾಲಿ ಪುಟದ ರಂಗೋಲೆಯಲ್ಲಿ

ಅಲ್ಲೆಲ್ಲ ಅವಳ ನೆನಪು

ಇಂದವಳು ಬಂದಾಳೆಂಬ ನಿರೀಕ್ಷೆಯಲ್ಲಿ
ಬಂದೇಬಿಟ್ಟಳೆಂಬ ಸಡಗರದಲ್ಲಿ
ಅವಳನ್ನು ನೋಡುವ, ಮಾತಾಡಿಸುವ ತವಕದಲ್ಲಿ
ಸೋಲಿನ ನಿರಾಶೆಯಲ್ಲಿ, ನೋವಿನಲ್ಲಿ

ಅಲ್ಲೆಲ್ಲ ಅವಳ ನೆನಪು

ಗಂಟೆ ಐದಾಗಿ, ತರಗತಿಗಳು ಖಾಲಿಯಾಗಿ
ಕಾರಿಡಾರಿನಲ್ಲಿ ಕಾಲುಗಳು ಸರಿದಾಡಿ
ಕೊಠಡಿಗಳ ಬೀಗ ಹಾಕಿ, ಕಾರಿಡಾರಿನ ಲೈಟು ಹಾಕಿ
ಇವತ್ತು ಸತ್ತು, ನಾಳೆಯಿನ್ನೂ ದೂರವಿರುವಾಗ

ಅಲ್ಲೆಲ್ಲ ಅವಳ ನೆನಪು

- ಚಾಮರಾಜ ಸವಡಿ

೮.
ಮನಸು ಕರಗುವ ಹೊತ್ತು

ತಲೆದಡವಿ, ಮೈ ತಟ್ಟಿ, ಅಭಯ ನೀಡಿ
ರಾತ್ರಿಯೆಲ್ಲ ಹಿತ ನುಡಿದು
ಕೈಕೈ ಹಿಡಿದು ಮಾಡಿದ ಪಯಣ
ಬಸ್ಸಿನ ಕಂಬಿ ಹಿಡಿದು ಹಾಕಿದ ಕಣ್ಣೀರು
ಎಲ್ಲಾ ಅವನ ಬೆರಳ ಸ್ಪರ್ಶಕ್ಕೆ ಕರಗಿತೆ?

ಅಂದು ಅತ್ತಿದ್ದು, ಜಗತ್ತು ನಿಂದಿಸಿದ್ದು
ಊರಿಂದೂರಿಗೆ ನೆಮ್ಮದಿ ಅರಸಿ ಅಲೆದಿದ್ದು
ಆ ಮಳೆಯ ಹನಿಯಲ್ಲಿ ಹನಿಯಾಗಿ
ಆ ಬಿಸಿಲ ಬೇಗೆಯಲಿ ಬೆವರಾಗಿ
ಇನ್ನೆಂದೂ, ಎಂದೂ ಇಲ್ಲ ಅಂದ ನುಡಿ
ಇಂದವನ ಬೆರಳ ಸ್ಪರ್ಶಕ್ಕೆ ಕರಗಿತೆ?

ಬಂಗಾರದ ಕನಸ ಎಳೆಗೆ
ಮುತ್ತಿನ ನೆನಪು ಜೋಡಿಸಿ
ನೀ ನೇಯ್ದ ನವಿರು ವಸ್ತ್ರ ಬಿಟ್ಟು
ಹಾಲ್ಗಲ್ಲದ ಕಣ್ಣೀರ ಒರೆಸಿ
ತುಟಿಯೊಳಗಿನ ಬಿಕ್ಕದುಮಿ ಬಂದವಳು
ಇನ್ನೆಂದೂ ಕರಗೆನೆಂದವಳ ಕಲ್ಮನಸು
ಮತ್ತೆ ಅವನ ಬೆರಳ ಸ್ಪರ್ಶಕ್ಕೆ ಕರಗಿತೆ?

ಕರಗಲಿ ಬಿಡು ಹುಡುಗಿ ಕರಗುವ ವಸ್ತು ಪ್ರೀತಿ
ಕರಗಿ ಹೋದ ಬಳಿಕ ಮರುಗದಿರು ಮತ್ತೆ
ನಾನಿರುವೆ ಇಲ್ಲಿ ಹೀಗೇ ಹೇಗೋ
ಕರಗುತ್ತ, ಕೊರಗುತ್ತ
ಮತ್ತೆ ಮತ್ತೆ ನಿನ್ನ
ಮರೆಯಲೆತ್ನಿಸುತ್ತ

- ಚಾಮರಾಜ ಸವಡಿ

No comments: