ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈತ ನಿರಕ್ಷರಸ್ಥ. ಆದರೆ, ಹದಿನಾರು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾನೆ.
ಬಾಗಲಕೋಟೆ ಜಿಲ್ಲೆ ಬೀಳಗಿಯ ಸಿದ್ದಪ್ಪ ಸಾಬಣ್ಣ ಬಿದರಿ ಎಂಬ ನಿರಕ್ಷರ ಆಶುಕವಿಯ ಸಾಹಸಗಾಥೆಯಿದು. ದೊಡ್ಡ ಕುಟುಂಬದಲ್ಲಿ ಜನಿಸಿ, ಬಡತನದಿಂದಾಗಿ ಬಾಲ್ಯದಿಂದಲೇ ಕೃಷಿಯಲ್ಲಿ ತೊಡಗಿದ ಸಿದ್ದಪ್ಪನಿಗೆ ಓದುವ ಭಾಗ್ಯ ದೊರೆಯಲಿಲ್ಲ.
ಆದರೇನಂತೆ, ಕಾವ್ಯ ಸರಸ್ವತಿ ಒಲಿದಿದ್ದಳು. ಚಿಕ್ಕಂದಿನಿಂದಲೇ ಪದ್ಯದ ಗೀಳು. ಸುತ್ತಲಿನ ಪರಿಸರವೇ ಕವಿತೆಯ ವಸ್ತುಗಳಾದವು. ಅವನ್ನೇ ಪ್ರಾಸಬದ್ಧವಾಗಿ, ಜಾನಪದ ಶೈಲಿಯಲ್ಲಿ ಜೋಡಿಸಿ ಹಾಡುತ್ತಿದ್ದ ಸಿದ್ದಪ್ಪ ಸುತ್ತಲಿನ ಜನರನ್ನು ಆಕರ್ಷಿಸಿದ. ಚೆನ್ನಾಗಿವೆ ಎಂದು ಅನ್ನಿಸಿದ ಕವಿತೆಗಳನ್ನು ಊರಿನ ಕೆಲವು ಅಕ್ಷರಸ್ಥರು ಆತನಿಗೆ ಬರೆದು ಕೊಟ್ಟರು. ಅವನ್ನೇ ನೋಟ್‌ಬುಕ್‌ನಲ್ಲಿ ಇಟ್ಟುಕೊಂಡು ಹರ್ಷಪಡುತ್ತ ದಿನಗಳೆದ ಸಿದ್ದಪ್ಪ.
ಕ್ರಮೇಣ ನೋಟ್‌ಬುಕ್‌ಗಳ ಸಂಖ್ಯೆ ಬೆಳೆಯಿತು. ಆಗ ಯಾರೋ ಒಬ್ಬರು, ’ಒಂದು ಕವಿತಾ ಸಂಕಲನ ಪ್ರಕಟಿಸಬಹುದಲ್ಲ?’ ಎಂದು ಸೂಚಿಸಿದರು. ಅಕ್ಷರವೇ ಬಾರದ ತಾನು ಏನಂತ ಪ್ರಕಟಿಸಬೇಕು ಎಂದು ಅನ್ನಿಸಿದರೂ, ಹಿತೈಷಿಗಳು ಒತ್ತಾಯಿಸಿದರು. ಕವಿತೆ ಕೇಳಿ ಮೆಚ್ಚಿದ ಸಹೃದಯರು ಪ್ರಕಟಿಸಲು ಮುಂದೆ ಬಂದರು. ಒಂದಷ್ಟು ಹಣ ಸಂಗ್ರಹಿಸಿ, ೧೯೯೦ರಲ್ಲಿ ಮೊದಲ ಕವಿತಾ ಸಂಕಲನ ’ಹೊಳಿ ಸಾಲಿನ ಹೋರಿ’ ಪ್ರಕಟಿಸಿದ ಸಿದ್ದಪ್ಪ.
ಅಲ್ಲಿಂದ ಹೊಳೆ ಸಾಲಿನ ಈ ಕವಿತಾ ಹೋರಿ ನಮ್ಮ ಷೇರುಮಾರುಕಟ್ಟೆಯ ಗೂಳಿಗಿಂತ ಜೋರಾಗಿ, ಹಳಿ ತಪ್ಪದಂತೆ ಓಡುತ್ತಲೇ ಇದೆ. ಕಳೆದ ೧೭ ವರ್ಷಗಳಲ್ಲಿ ೧೬ ಪುಸ್ತಕಗಳನ್ನು ಪ್ರಕಟಿಸಿದ್ದಾನೆ ಈತ. ಇವುಗಳಲ್ಲಿ ಕವನ ಸಂಕಲನಗಳೇ ಹೆಚ್ಚು. ಈಗ ತಾನೆ ೧೭ನೇ ಕೃತಿ ’ಕೂಸಿನ ಕನಸು’ ಅಚ್ಚಿನಲ್ಲಿದೆ.
ಕವಿತೆಗಳನ್ನು ನೆನಪಿಟ್ಟಷ್ಟು ಸುಲಭವಾಗಿ ಅಚ್ಚಾದ ತನ್ನ ಎಲ್ಲ ಕವನ ಸಂಕಲನಗಳ ಶೀರ್ಷಿಕೆಗಳು ಸಿದ್ದಪ್ಪನಿಗೆ ನೆನಪಿಲ್ಲ. ’ಪುಸ್ತಕಾನ ಬಂದ ಮ್ಯಾಲ ಅದರ ಹೆಸರು ತಗೊಂಡು ಏನು ಆಗಬೇಕಾಗೈತಿ?’ ಎಂಬ ನಿರ್ಲಕ್ಷ್ಯ ಆತನದು. ಆದರೆ, ಯಾವುದಾದರೂ ವಿಷಯ ಹೇಳಿ, ’ಇದರ ಮ್ಯಾಗ ಕವಿತಾ ಬರ್ದೀಯೆನು?’ ಎಂದು ಕೇಳಿದರೆ, ಥಟ್ಟಂತ ಪೂರ್ತಿ ಕವಿತೆ ಹಾಡುತ್ತಾನೆ.
’ಕವಿತಾ ಹ್ಯಾಂಗಿರಬೇಕು ಸಿದ್ದಪ್ಪ?’ ಎಂದು ಕೇಳಿ ನೋಡಿ?
ಕವಿ ಅಂದರ ಇರಬೇಕ ಹೆಂಗೋ
ಕೈಕಾಲು ಬಿಚ್ಚಿ ಕೂಸ ಆಡಿದಂಗೋ
ಕಟ್ಟಿದ ಕವಿತಾ ಹ್ಯಾಂಗಿರಬೇಕೋ
ಬೆಳಗ ಸೂರ್ಯನ ಹೊಳಪಿರಬೇಕೋ
ತಾಯಿ ಮಾರಿ ನೋಡಿ ಕೂಸ ನಕ್ಕಂಗ
ತೋರಿ ಆಕಳಗಿ ಕರಾ ಬಿಟ್ಟಾಂಗ
ತಿಪ್ಪಿ ಕೆದರಿ ಮೇದಂಗ ಕೋಳಿ
ಖುಷಿ ಆಗಬೇಕು ಕವಿತಾ ಕೇಳಿ
ಹಸದ ಹೊಟ್ಟೀಗಿ ಹಾಕಿದಂಗ ಅನ್ನ
ಹರದ ತಿಂದಂಗ ಮಾಗೀದ ಹಣ್ಣ
ಮಗ್ಗಿ ಅರಳಿದಂಗ ಗಿಡದಾನ ಹೂವಾ
ಕವಿತಾ ಕೇಳಿ ಕರಗಬೇಕೋ ಜೀವಾ
ಹೂಡಿ ಹೊಡದಂಗ ಜೋಡೆತ್ತಿನ ಗಾಡಿ
ಹಾಡೀಗಿ ಕೊಡಬೇಕ ಶಬ್ದದ ಜೋಡಿ
ಕವಿತಾಕ ಒಂದು ಇರಬೇಕೋ ಅರ್ಥ
ಮನಸಿನ ಹಸಿಯಾ ಹೆಜ್ಜೇಯ ಗುರ್ತಾ
(ಕವಿ ಹೆಜ್ಜೆ)
ಎಂದು ಪೂರ್ತಿ ಕವಿತೆ ಹಾಡಿಬಿಡುತ್ತಾನೆ.
ಸಿದ್ದಪ್ಪ ತನ್ನ ಕವಿತೆಗಳನ್ನು ಎಂದೂ ಓದುವುದಿಲ್ಲ. ಏಕೆಂದರೆ ಆತನಿಗೆ ಓದಲು ಬರುವುದಿಲ್ಲ. ಆದರೆ, ಹಾಡುತ್ತಾನೆ. ಅಚ್ಚ ಕಂಚಿನ ಕಂಠದಲ್ಲಿ, ಬಿಗಿ ಎಳೆಯುವ ಧ್ವನಿಯಲ್ಲಿ ದೊಡ್ಡದಾಗಿ ಹಾಡುತ್ತಾನೆ. ಹಾಡುತ್ತ, ಹಾಡುತ್ತ ಕಣ್ಣರಳಿಸಿ ಖುಷಿಯಾಗುತ್ತಾನೆ. ’ಸಿದ್ಧೇಶ್ವರ ಸ್ವಾಮ್ಯಾರು ಈ ಕವಿತಾ ಕೇಳಿ ಖುಷಿಪಟ್ರು’ ಎಂದು ಆನಂದ ಪಡುತ್ತಾನೆ. ತನ್ನ ಕವಿತೆಯಲ್ಲಿ ತಾನೇ ಲೀನವಾಗುತ್ತಾನೆ.
ಸಿದ್ದಪ್ಪ ಬಿದರಿಯ ಕವಿತೆಗಳನ್ನು ಹೆಂಗರುಳಿನ ಕವಿ ಚೆನ್ನವೀರ ಕಣವಿ ಕೇಳಿ ಮೆಚ್ಚಿದ್ದಾರೆ. ಮುನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ. ಚಂದ್ರಶೇಖ ಕಂಬಾರ ಅವರಿಗಂತೂ ಸಿದ್ದಪ್ಪ ಜಾನಪದದ ಅಪ್ಪಟ ಅವತಾರ. ಯು.ಆರ್. ಅನಂತಮೂರ್ತಿ, ಸಾ.ಶಿ. ಮರುಳಯ್ಯ ಮುಂತಾದವರು ಈತನ ಕವಿತೆಗಳನ್ನು ಮೆಚ್ಚಿದ್ದಾರೆ. ವಿಜಾಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಯಂತೂ, ’ಓದು ಬರಹಗಳಿಲ್ಲ, ಸಿರಿಯ ಬಲುಹುಗಳಿಲ್ಲ, ಛಂದೋ ವಿಧಾನಗಳನರಹುವ ಸ್ನೇಹಿಗಳಿಲ್ಲ, ಹಳ್ಳಿಯ ಪರಿಸರ, ನೆಲವ ನಂಬಿ ದುಡಿವ ಜನರ ಸಂಗ, ಕಥೆ ಗೀತೆಗಳನರಿಯದ ಗ್ರಾಮೀಣರ ಒಡನಾಟ, ಆದರೇನು? ಜಾನಪದ ಕವಿ ಸಿದ್ದಪ್ಪ ಬಿದರಿ ಅವರಿಗೆ ಶಾರದೆಯ ಒಲುಮೆ!’ ಎಂದು ಮುನ್ನುಡಿ ಬರೆದು ಆಶೀರ್ವದಿಸಿದ್ದಾರೆ.
ಒಮ್ಮೆ ಮನೆಗೆ ಬಂದಿದ್ದ ಧೋತರಧಾರಿ ಸಿದ್ದಪ್ಪನನ್ನು ಕಂಡು ಬಾಗಿಲಾಚೆಯೇ ನಿಲ್ಲಿಸಿ ಮಾತನಾಡಿಸಿದ್ದ ಕವಿ ನಿಸಾರ್ ಅಹ್ಮದ್ ಅವರಿಗೆ, ’ನಾನೂ ಕವಿ ಅದೀನ್ರೀ ಯಪ್ಪಾ’ ಎಂದವನೇ,
ಎಷ್ಟೋ ಜನ್ಮ ಹುಟ್ಟಿದರ ಕನ್ನಡ ಮಣ್ಣಾಗ ಇರತೀನಿ
ಸತ್ಯುಳ್ಳ ಶರಣರ ಮಾತಿನ ಸವಿ ಜೇನಾಗಿರತೀನಿ
ಕನ್ನಡಿಗರ ಮಸ್ತಕದೊಳಗ ಪುಸ್ತಕಾಗಿರತೀನಿ
ಕನ್ನಡಿಗರ ದೀಪದ ಬತ್ತಿ ಎಣ್ಯಾಗ ಪಣತ್ಯಾಗಿರತೀನಿ
ಕನ್ನಡಿಗರು ಹರಿದು ತಿನ್ನು ಗಿಡದ ಹಣ್ಣಾಗಿರತೀನಿ
ಕನ್ನಡಿಗರ ಎದಿಯಾಗ ಅರಳಿದ ಮಲ್ಲಿಗಿ ಹೂವಾಗಿರತೀನಿ
ಎಂದು ಪೂರ್ತಿ ಹಾಡು ಹೇಳಿಯೇಬಿಟ್ಟ. ಅವಾಕ್ಕಾದ ನಿಸಾರ ಅಹ್ಮದ ಈತನ ಕೈಹಿಡಿದು ಒಳಗೆ ಕರೆದುಕೊಂಡು ಹೋಗಿ, ತಾವೇ ಬಾಳೆಹಣ್ಣು ಸುಲಿದು ತಿನ್ನಲು ಕೊಟ್ಟು, ಗಂಟೆಗಟ್ಟಲೇ ಮಾತಾಡಿ, ಆತನ ಹಾಡು ಕೇಳಿ ಸಂತಸಪಟ್ಟರಂತೆ. ಅವರ ಕಡೆಯಿಂದಲೂ ತನ್ನದೊಂದು ಕವಿತಾ ಸಂಕಲನಕ್ಕೆ ಮುನ್ನುಡಿ ಬರೆಸಿಕೊಂಡಿದ್ದಾನೆ ಸಿದ್ದಪ್ಪ.
ಇಂತಹ ಆಶು ಕವಿ ಸಿದ್ದಪ್ಪ ದಸರಾ ಕವಿಗೋಷ್ಠಿಗಳೂ ಸೇರಿದಂತೆ ಬೆಂಗಳೂರು, ಚಿತ್ರದುರ್ಗ, ಬೆಳಗಾವಿ, ಬಾಗಲಕೋಟೆ, ವಿಜಾಪುರ, ಚಾಲುಕ್ಯೋತ್ಸವ, ೭೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವಿತೆ ಹಾಡಿದ್ದಾನೆ. ಧಾರವಾಡ ಮತ್ತು ಮೈಸೂರು ಆಕಾಶವಾಣಿಗಳು ಈತನ ಸಂದರ್ಶನ ಪ್ರಸಾರ ಮಾಡಿವೆ. ಉದಯ ಟಿವಿ ಪರಿಚಯ ಸಂದರ್ಶನ ಪ್ರಸಾರ ಮಾಡಿದೆ. ರಾಜ್ಯದ ಹದಿಮೂರು ಕಡೆ ಈತನನ್ನು ಕರೆಸಿ ಸನ್ಮಾನಿಸಲಾಗಿದೆ. ಎಲ್ಲಕ್ಕಿಂತ ಹೆಮ್ಮೆಯ ಸಂಗತಿ ಎಂದರೆ, ೨೦೦೩ರಲ್ಲಿ ಬಾಗಲಕೋಟೆ ಜಿಲ್ಲೆಯ ೯ನೇ ತರಗತಿಯ ವಾರ್ಷಿಕ ಪ್ರಶ್ನೆಪತ್ರಿಕೆಯಲ್ಲಿ, ಸಿದ್ದಪ್ಪನ ಕುರಿತು ಗದ್ಯಭಾಗದ ಪ್ರಶ್ನೆ ಕೇಳಲಾಗಿದೆ.
ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳ ತಂದೆಯಾಗಿರುವ ಸಿದ್ದಪ್ಪ, ಎಲ್ಲ ಮಕ್ಕಳಿಗೆ ಸಾಧ್ಯವಾದಷ್ಟೂ ವಿದ್ಯಾಭ್ಯಾಸ ಮಾಡಿಸಿದ್ದಾನೆ. ಈಗ ಆತನ ಕವಿತೆಗಳಿಗೆ ಮಕ್ಕಳೇ ಲಿಪಿಕಾರರು. ಹಾಡು ಹೇಳುತ್ತ, ಹೊಲದಲ್ಲಿ ದುಡಿಯುತ್ತ ಈ ಹಾಡುಹಕ್ಕಿ ಬೆಳೆಯುತ್ತಲೇ ಇದೆ. ಅದಕ್ಕೆ ತಕ್ಕಂತೆ ಕವನ ಸಂಕಲನಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ.
ಸಿದ್ದಪ್ಪನ ಹಾಡು ಕೇಳಬೇಕೆಂದರೆ, ಬಾಗಲಕೋಟೆ ಜಿಲ್ಲೆ ಬಿಳಗಿಯ ಜನತಾ ಪ್ಲಾಟ್‌ಗೆ ಹೋಗಿ. ದೂರದಿಂದಲೇ ಹಾರೈಸಬೇಕೆಂದರೆ, ದೂರವಾಣಿ (ಪಿಪಿ) ೦೮೫೩೪-೪೭೬ ೦೧೪ಗೆ ಕರೆ ಮಾಡಿ.
- ಚಾಮರಾಜ ಸವಡಿ
Subscribe to:
Post Comments (Atom)
No comments:
Post a Comment