ಹದಿನಾಲ್ಕು ವರ್ಷದ ಹಿಂದಿನ ಒಂದಿಷ್ಟು ಚುಟುಕುಗಳು

25 Apr 2008

೧.

ಇದ್ದಕ್ಕಿದ್ದಂತೆ
ಮಾತು ಕಳೆದುಕೊಂಡು
ಮೌನಿಯಾಗಿ
ಎಲ್ಲೋ ದಿಟ್ಟಿಸುವವ
ಹೆಗಲ ಮೇಲೆ ಕೈಇಟ್ಟರೆ
ಬೆಚ್ಚುವವ
ಕಾರಣವಿಲ್ಲದೇ
ಭಾವುಕನಾಗುವವ
ಮೂಕ ಪ್ರೇಮಿ

೨.

ದುಷ್ಯಂತನನ್ನು
ಶಕುಂತಲೆ ಪ್ರೇಮಿಸಿದ್ದ
ಅವನು ಮಹಾರಾಜನೆಂದಲ್ಲ
ಪುರುಷನೆಂದು

೩.

ಸಲೀಸಾಗಿ
ಪಾಗಾರ ಹತ್ತಿಳಿಯುವ ಹುಡುಗಿ
ಹುಡುಗನ ಗಡ್ಡ-ಮೀಸೆ ಗೇಲಿ ಮಾಡುವವಳು
ಬಾಯಿಗೆ ಕೈ ಅಡ್ಡ ಹಿಡಿದು ನಗುವವಳು
ಒಮ್ಮಲೇ
ಮಾತಿಲ್ಲದೇ, ನಗುವಿಲ್ಲದೇ
ಗಂಟೆಗಟ್ಟಲೇ ಕೂಡುವುದು
ಏನನ್ನೋ ಧೇನಿಸುವುದು
ಕಂಡಾಗೆಲ್ಲ
ಪ್ರಾಯ ಅಚ್ಚರಿ ಹುಟ್ಟಿಸುತ್ತದೆ

೪.

ಆಯ
ತಪ್ಪುವುದು
ಅನಾಯಾಸವಾಗಿ

೫.

ಅಳು
ಬದುಕು

೬.

ಈ ಕೈಗಳಿಗೂ
ಕಣ್ಣಿದೆ
ಏಕೆಂದರೆ
ಇದು
ಮುಟ್ಟಿ ನೋಡಬಲ್ಲುದು

೭.

ಇಲ್ಲಿ ಹುಟ್ಟಿದ್ದೊಂದೇ ಅಲ್ಲ
ಈ ಮಣ್ಣು, ನೀರು, ಊರು, ಜನರ
ಮಧ್ಯೆ
ಕಣ್ತೆರೆದು, ಅಂಬೆಗಾಲಿಕ್ಕಿ
ಮೀಸೆ ಬೆಳೆಸಿಕೊಂಡು ಬೆಳೆದಿದ್ದು
ನೋವು-ನಲಿವು ಉಂಡಿದ್ದು, ಕಂಡಿದ್ದು
ಎಲ್ಲವೂ ಲಾಭ

೮.

ಕಾಮವಿನ್ನೂ ಹುಟ್ಟದ ವಯಸ್ಸಿನಲ್ಲಿ
ಆಡಿದ ಆಟ, ಓದಿದ ಓದು
ನಗು, ಸಡಗರ, ಕೇಕೆ
ಮತ್ತು ನೋವಿನ ವಿದಾಯ
ಎಷ್ಟೊಂದು ಚಂದವಿತ್ತು!

ಇವತ್ತು
ದೇಹದಲ್ಲಿ ಪ್ರಾಯ ತುಂಬಿ
ಕಾಮ ತುಂಬಿ
ಪ್ರತಿ ನಡೆಯಲ್ಲಿ ಹಿಂಜರಿತ, ಪುಳಕ
ಮತ್ತು ಖಾಲಿತನ!

೯.

ಕಾವಿಯೊಳಗಿನ ಈ ದೇಹಗಳು
ಬಾಲ್ಯದಲ್ಲೋ, ಯೌವನದಲ್ಲೋ
ಸೆರಗ ಮರೆಗೆ ಮೊರೆ ಹೋಗಿ
ಜೀವ ಸೆಲೆ ಪಡೆದವುಗಳೇ!

೧೦.

ಎಲ್ಲಾ ಋಷಿಗಳ
ತಪಸ್ಸಿಗೆ
ಅರ್ಥ ಬಂದಿದ್ದು
ಅವರು ಹೆಣ್ಣಿಗೆ
ಸೋತಾಗಲೇ

೧೧.

ನೀನು ದೂರವಾದದ್ದಕ್ಕಲ್ಲ
ನಿನ್ನ
ನೆನಪಾಗುತ್ತಿರುವುದಕ್ಕೆ
ಮತ್ತು
ಅದನ್ನು ಮರೆಯಲಾಗದ್ದಕ್ಕೆ

೧೨.

ಖಚಿತ ವ್ಯಾಖ್ಯೆ ನೀಡಬಲ್ಲೆನಾದರೆ
ಪ್ರೇಮದ ಬಗ್ಗೆ
ಏನೂ ಗೊತ್ತಿಲ್ಲ
ಎಂದೇ ಅರ್ಥ

೧೩.

ಬದುಕು ಶುರುವಾಗುವುದು
ಎಲ್ಲರಿಗೂ ಬೋಧಿಸಬೇಕೆಂಬ
ಆಸೆಯಾಚೆ
ಎಲ್ಲರಿಗೂ ಮಾದರಿಯಾಗಬೇಕೆಂಬ
ಬಯಕೆಯಾಚೆ
ಈ ಹುಲ್ಲು ಗರುಕೆಯಂತೆ, ಈ ನೀರ ಹನಿಯಂತೆ
ಸುಮ್ಮನೇ ಹುಟ್ಟಿ, ನಗತೊಡಗಿದಾಗ

೧೪.

ಅಪ್ಪ
ಕಿರಿಯ ಜೀವಿಗಳ ಬಣ್ಣ
ಮಿಂಚು, ತೀವ್ರತೆಗಳ ನಡುವೆ
ಬೆಚ್ಚಿದವನಂತೆ, ತಳ್ಳಲ್ಪಟ್ಟವನಂತೆ
ಕಂಡಾಗೆಲ್ಲ
’ಅಪ್ಪಾ, ಈ ವ್ಯತ್ಯಾಸ ವಯಸ್ಸಿನದು’
ಎಂದು ಹೇಳಬೇಕೆನಿಸಿದರೂ
ಆಗದೇ ಮೌನಿಯಾಗುತ್ತೇನೆ

೧೫.

ಮಳೆ,
ಜೀರುಂಡೆ, ದೀಪದ ಹುಳು,
ಕಪ್ಪೆಗಳ ಕಛೇರಿ
ವಿದ್ಯುತ್ ಇಲ್ಲದ ರಾತ್ರಿ
ಎಲ್ಲೋ ಕಿರುಚಿ ಅಳುವ ಮಗು-

ನನ್ನ ಬಾಲ್ಯವೇಕೆ ನೆನಪಾಗುತ್ತಿದೆ?

೧೬.

ಕುರುಹುಗಳೆಂದರೆ:
ವಾದಿಸದೇ ಒಪ್ಪಿಕೊಳ್ಳುವುದು
ಮತ್ತು
ಒಪ್ಪಿಕೊಳ್ಳದೇ ವಾದಿಸುವುದು

೧೭.

ನನ್ನ ಪ್ರತಿಭೆಗೆ
ಬೆಲೆ ಬಂದಿದ್ದು
ನನ್ನ ಮೂರ್ಖತನದಿಂದ

ನನ್ನ ಗೆಲುವುಗಳಿಗೆ
ಮೆರುಗಿನ ಅಂಚು ಕೊಟ್ಟಿದ್ದು
ನನ್ನ ಸೋಲುಗಳು

೧೮.

ಕನಸುಗಳೇಕೆ ಚಂದ ಅಂದರೆ
ಅವು ನನಸಾಗುವುದಿಲ್ಲ
ಅದಕ್ಕೆ

ಬದುಕುವುದೇಕೆ ಚಂದ ಅಂದರೆ
ಸಾಯಲೇಬೇಕು ನೋಡು
ಅದಕ್ಕೆ

೧೯.

ಬದುಕು
ಕಾಮದ ಸೊಗಸು
ಮತ್ತು
ಕಾಮದಾಚೆಯ ಸೊಗಸು

೨೦.

ಕಣ್ಣು
ಮುಚ್ಚುವುದು
ದಣಿವಿಗೆ
ಅಮಲಿಗೆ
ಮತ್ತು ಸಾವಿಗೆ

ಅರಳುವುದು
ಒಸಗೆಗೆ
ಬೆಸುಗೆಗೆ
ಮತ್ತು ಬದುಕಿಗೆ

೨೧.

ಕಾಲದೊಂದಿಗೆ ಕಾಲು ಹಾಕು ಮನಸೇ
ಹಿಂದೆ ಉಳಿದು ನರಳಬೇಡ
ನಿನ್ನೆ ಮುಗಿದಿದೆ, ನಾಳೆ ದೂರವಿದೆ
ನಿನ್ನ ಕೈಲೇ ಇದೆ ಇಂದಿನ ದಿನವೆಲ್ಲ

೨೨.

ಅವಳೆದುರು ನಿಂತಾಗ ನಿಟ್ಟುಸಿರಿಡಬೇಡ
ಸುರಿಸಿದ ಕಣ್ಣೀರ ಲೆಕ್ಕ ಹೇಳಬೇಡ
ಮಳೆ ಸುರಿಸಿ ಕಳೆಯಾದ ಮುಗಿಲಂತಿರು
ಕೆಸರಿಳಿದು ತಿಳಿಯಾದ ಕೆರೆಯಂತಿರು

೨೩.

ಮಾತೆಂಬ ಭರ್ಚಿ ಎಸೆದೆ
ಪ್ರೀತಿ ಸತ್ತು ಹೋಯಿತು
ಉಳಿದಿದ್ದು ಅದರ ಅವಶೇಷ ಮಾತ್ರ

ಬಾಯಿ ತೆರೆಯುವ ಮುನ್ನ
ಹೃದಯ ತುಸು ಧ್ಯಾನಿಸಲಿ
ಪ್ರೀತಿ ಅರಳಲು ಇದೊಂದೇ ಸೂತ್ರ

೨೪.

ನಿನ್ನನ್ನು ನೋಡಿದರೆ
ಖುಷಿಯಾಗುತ್ತದೆ
ಎಷ್ಟು ಖುಷಿಯಾಗುತ್ತದೆ ಎಂದರೆ
ಹೇಗೆ ಹೇಳಲಿ?

೨೫.

ತಾನು ಬೀಸಿಯೇ ಇಲ್ಲ ಎಂಬಂತೆ
ಗಾಳಿ ಸುಮ್ಮನಾಯಿತು
ತಾನು ಉಕ್ಕಿಯೇ ಇಲ್ಲ ಎಂಬಂತೆ
ಕಡಲು ಸುಮ್ಮನಾಯಿತು

ಆದರೆ
ಬೋರಲು ಬಿದ್ದ ಮರಕ್ಕೆ
ಹಾಗೆ ಅಂದುಕೊಳ್ಳಲು ಆಗಲಿಲ್ಲ

ನನ್ನ ಸ್ಥಿತಿಯೂ ಅದೇ ಕಣೇ
ಪ್ರೀತಿಸಿಯೇ ಇಲ್ಲ ಎಂದು
ಹೇಗೆ ಹೇಳಲಿ?

- ಚಾಮರಾಜ ಸವಡಿ

2 comments:

VENU VINOD said...

chendada chutukugaLa surimaLe...
innu bareyuttiri

ಚಾಮರಾಜ ಸವಡಿ said...

ಖಂಡಿತ ವೇಣು,
ಬರೆಯುವುದು ಕೇವಲ ವೃತ್ತಿಯಲ್ಲ, ನನ್ನ ಪ್ರವೃತ್ತಿಯೂ ಹೌದು.

ಪ್ರತಿಕ್ರಿಯೆಗಾಗಿ ಧನ್ಯವಾದಗಳು.
- ಚಾಮರಾಜ ಸವಡಿ
www.sampada.net/blog/chamaraj