ಕೊಡೆಯೊಂದಿಗೆ ಅರಳುವ ನೆನಪುಗಳು

27 Apr 2008

ಧಾರವಾಡಕ್ಕೆ ಬಾರದೇ ನೀವೆಲ್ಲ ಎಲ್ಲಿ ಹೋಗಿದ್ದೀರಿ?

ಹಳೆಯ ಧಾರವಾಡವನ್ನು ನೆನಪಿಸುವಂತೆ ಇಲ್ಲಿ ಮುಂಗಾರು ಹದವಾಗಿ ಕುಟ್ಟತೊಡಗಿದೆ. ತಿಂಗಳುಗಟ್ಟಲೇ ಸೂರ್ಯನ ದರ್ಶನವಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ದಟ್ಟ ಮರಗಿಡಗಳ ಮೇಲ್ಭಾಗದಲ್ಲಿ ಹಸಿರು ಹಾವಸೆ ತುಂಬಿಕೊಂಡು, ಹಾಡಹಗಲಲ್ಲೇ ತುಂಬಿರುವ ಕತ್ತಲೆಗೆ ಮಂಕು ಫ್ಲೋರೋಸೆಂಟ್‌ ಬೆಳಕಿನ ಪ್ರಭೆ. ಈಚೆಗೆ ಒಂದಿಷ್ಟು ರಸ್ತೆಗಳು ಡಾಂಬರ್‌ನ ಪುಣ್ಯ ಕಂಡಿವೆ. ಹೀಗಾಗಿ, ನೀನು ಕಪ್ಪೋ, ನಾನು ಕಪ್ಪೋ ಎಂಬಂತೆ ಮುಂಗಾರು ಮೋಡಗಳು ರಸ್ತೆ ಬಣ್ಣದ ಜೊತೆ ಸ್ಪರ್ಧೆಗೆ ಇಳಿಯುತ್ತವೆ. ಆಗೆಲ್ಲ ಕ್ಯಾಂಪಸ್ ತುಂಬ ಭರ್ಜರಿ ಮಳೆ.

ನೋಡಬೇಕಾದ ನೀವೇ ಇನ್ನೂ ಬಂದಿಲ್ಲ!

ಈಗಂತೂ ಕ್ಯಾಂಪಸ್‌ ತುಂಬ ಕಾಣುವುದು, ಒಂದೋ ಉದ್ದನೆಯ ಸಾಲುಗಳು, ಇಲ್ಲವೇ ಅಲ್ಲಲ್ಲಿ ನಿಂತ ಗುಂಪುಗಳು. ಸಾಲುಗಳ ಕತೆ ನಿಮಗೆ ಗೊತ್ತೇ ಇದೆ. ಜಗತ್ತಿನ ಎಲ್ಲೆಡೆ ಕಂಪ್ಯೂಟರ್‌ ತಂತ್ರಜ್ಞಾನ ಬಂದಿರಬಹುದು. ಅದನ್ನು ಹಳ್ಳಿಗಳ ಜನ ಕೂಡ ಬಳಸುತ್ತಿರಬಹುದು. ಆದರೆ, ನಮ್ಮ ವಿಶ್ವವಿದ್ಯಾಲಯದ ಅಡ್ಮಿಶನ್‌ ಫಾರ್ಮ್‌ ಕೊಡುವುದರಿಂದ ಹಿಡಿದು ಫೀಸ್‌ ಕಟ್ಟಿಸಿಕೊಂಡು ಪ್ರವೇಶ ನೀಡುವವರೆಗೆ, ಎಲ್ಲ ವಿಧಾನವೂ ಓಬಿರಾಯನ ಕಾಲದ್ದೇ ಅಲ್ಲವೆ?

ಯಾವುದಾದರೂ ಕೋರ್ಸ್‌‌ಗೆ ಅರ್ಜಿ ಹಾಕಿದರೆ ಪ್ರವೇಶ ಸಿಕ್ಕಿಬಿಡುವ ಕಾಲವಲ್ಲ ಇದು. ಹೀಗಾಗಿ, ಎರಡು-ಮೂರು ಕೋರ್ಸ್‌‌ಗಳಿಗೆ ಅರ್ಜಿ ಹಾಕುವುದು ಸಾಮಾನ್ಯ ತಾನೆ? ಅದಕ್ಕಾಗಿ ನೀವು ಮೊದಲು ಬ್ಯಾಂಕ್‌ನಲ್ಲಿ ನಿಂತು ಚಲನ್‌ ತುಂಬಬೇಕು. ನಂತರ, ಅದನ್ನು ಪ್ರಸಾರಾಂಗಕ್ಕೆ ತಂದು ಅರ್ಜಿ ಪಡೆದುಕೊಳ್ಳಬೇಕು. ತುಂಬಿದ ಅರ್ಜಿಗೆ ಅಟೆಸ್ಟ್‌ ಮಾಡಿಸಿದ ಹತ್ತಾರು ದಾಖಲೆಗಳನ್ನು ಸೇರಿಸಬೇಕು. ಅಟೆಸ್ಟ್‌ ಮಾಡಿಸಲು ಗೆಜೆಟೆಡ್‌ ದರ್ಜೆಯ ದರ್ಪಿಷ್ಠರನ್ನು ಹುಡುಕಿಕೊಂಡು ಅಲೆಯಬೇಕು. ನೀವು ಪ್ರತಿಭಾವಂತರಾಗಿದ್ದರೂ ಸರಿ, ಇಡೀ ಜಗತ್ತಿಗೆ ತಂತ್ರಜ್ಞಾನ ಬಂದಿದ್ದರೇನಂತೆ? ನಮ್ಮ ವಿಶ್ವವಿದ್ಯಾಲಯಗಳು, ಅವುಗಳ ತಮ್ಮಂದಿರಾದ ಮಹಾವಿದ್ಯಾಲಯಗಳು, ಅವುಗಳ ಮರಿ ತಮ್ಮಂದಿರಾದ ಪದವಿಪೂರ್ವ ಕಾಲೇಜುಗಳು ಬದಲಾಗುವುದು ಅಷ್ಟು ಸುಲಭವಲ್ಲ. ಅವಕ್ಕೆ ಓಬಿರಾಯನೇ ಇಷ್ಟ.

ಹೋಗಲಿ ಬಿಡು, ಚೆಂದದ ಮುಂಗಾರು ಮಳೆಯ ಮುನ್ನುಡಿಗೆ ಓಬಿರಾಯನೇ ಮೊದಲ ಅಧ್ಯಾಯವಾಗುವುದು ಬೇಡ. ಈ ದರಿದ್ರ ಪ್ರವೇಶ ಪದ್ಧತಿಯನ್ನು ಮುಗಿಸಿದರೆ ಸಾಕು, ಓದು ಮುಗಿಯುವತನಕ ಧಾರವಾಡ ಅತಿ ಸುಂದರ. ಅದಕ್ಕೆಂದೇ ಅಲ್ಲವೆ ಈ ಊರಲ್ಲಿ ಕಲಿಯಬೇಕೆಂದು ನಾವು ನೀವೆಲ್ಲ ಹಂಬಲಿಸಿದ್ದು? ದೂರದ ಊರು ಎಂದು ಮನೆಯಲ್ಲಿ ಧಾವಂತ ಪಟ್ಟರೂ, ಮುಂಗಾರಿನೂರಿನ ಬಣ್ಣಬಣ್ಣದ ಹಸಿರಿನ ಕನಸುಗಳು ಕೈಬೀಸಿ ಕರೆದಿದ್ದು? ಅಲ್ಲಲ್ಲ, ಮೋಡಗಳ ಮೂಲಕ ಸಂದೇಶ ಕಳಿಸಿದ್ದು? ಹತ್ತಿರದ ಬಸ್‌ ರಸ್ತೆಯವರೆಗೆ ನಡೆದು ಬಂದು, ಅಲ್ಲಿಂದ ಟೆಂಪೋ ಹತ್ತಿ ಹತ್ತಿರದ ದೊಡ್ಡ ಊರಿಗೆ ಬಂದು, ಅಲ್ಲಿಂದ ಎರಡು ಬಸ್‌ಗಳನ್ನು ಬದಲಾಯಿಸಿದ ಮೇಲೆ ಅಲ್ಲವೆ ಹುಬ್ಬಳ್ಳಿ ಸಿಕ್ಕಿದ್ದು?

ಅಲ್ಲಿಂದ ಧಾರವಾಡಕ್ಕೆ ಮಾತ್ರ ಒಂದೇ ಬಸ್‌ ಸಾಕು. ನವಿಲೂರಿನ ಸೇತುವೆ ಇಳಿಯುತ್ತಲೇ ಇದ್ದಕ್ಕಿದ್ದಂತೇ ವಾತಾವರಣ ಬದಲಾಯಿಸಿಬಿಡುತ್ತದೆ, ಅಲ್ಲವೆ? ಕಾಂಕ್ರೀಟ್‌ನ ಹುಬ್ಬಳ್ಳಿ ಹಿಂದಾಗಿ, ಕಾಡಿನಂತಹ ಧಾರವಾಡ ಅರಳುತ್ತ ಹೋಗುತ್ತದೆ. ವಿದ್ಯಾಗಿರಿ ಪ್ರವೇಶಿಸುತ್ತಲೇ ಕನಸಿನ ಊರು ಬಂದ ಅನುಭವ.

ಇದಪ್ಪ ಧಾರವಾಡ! ಅದಕ್ಕೇ ಅಲ್ಲವೇ ಓದುವ ಹುಚ್ಚಿನ ಅಥವಾ ಪಕ್ಕಾ ಹುಚ್ಚು ಕೆರಳಿರುವ ಜನ ಇದನ್ನು ಹುಡುಕಿಕೊಂಡು ಅಷ್ಟು ದೂರದಿಂದ ಬರುವುದು? ವಿದ್ಯಾಗಿರಿಯಿಂದ ದಾರಿಯುದ್ದಕ್ಕೂ ಸಿಗುವ ಟ್ಯೂಷನ್‌ ಬೋರ್ಡ್‌‌ಗಳನ್ನು ಓದುತ್ತ ಸಾಗುವಷ್ಟೊತ್ತಿಗೆ ಸಿಬಿಟಿ ಬಂದುಬಿಡುತ್ತದೆ. ’ಕರ್ನಾಟಕ ವಿಶ್ವವಿದ್ಯಾಲಯ’ ಎಂದು ಕೆಟ್ಟ ಕಪ್ಪಕ್ಷರದ ಬೋರ್ಡ್‌ ಹೊತ್ತ ಕಾಫಿ ಬಣ್ಣದ ಬಸ್ಸೊಂದು ಮೂರ್ಛೆ ರೋಗಿ ಮುಲಗುಟ್ಟುವಂತೆ ಅದುರುತ್ತಿರುತ್ತದೆ. ಹೌದು ಮಾರಾಯಾ, ಇದು ನಿಜಕ್ಕೂ ಬಸ್ಸೇ. ರಸ್ತೆ ಕೊಚ್ಚೆ ಸಿಡಿದು ಬಣ್ಣ ಬದಲಾಗಿದೆಯಷ್ಟೇ. ಇನ್ನು ಬಸ್ಸೋ, ಅದೂ ಓಬಿರಾಯನ ಕಾಲದ್ದೇ ತಮ್ಮಾ. ಮುಟ್ಟುವ ಗ್ಯಾರಂಟಿಯಂತೂ ಉಂಟು. ಬೇಗ ಹತ್ತು. ಸೀಟಾದರೂ ಸಿಕ್ಕೀತು.

ಅಲ್ಲೆಲ್ಲೋ ನಿಂತು ಎಲೆಯಡಿಕೆ ಜಗಿಯುತ್ತಿದ್ದ ಡ್ರೈವರ್‌ ಎಂಬ ಆಸಾಮಿ ಯಾರೋ ಕರೆದರೆಂಬಂತೆ ಥಟ್ಟನೇ ಒಳ ಬಂದು ಅದುರುತ್ತಿರುವ ಬಸ್‌ನ ಆಕ್ಸಿಲೇಟರ್‌ ಅದುಮುತ್ತ ಏಕೋ ಹೊರಳಿ ನೋಡುತ್ತಾನೆ. ನಾವೇ ಅಲ್ಲವೇ ಅವನ ಕಣ್ಣಿಗೆ ಬೀಳುವುದು? ಇಷ್ಟು ದೊಡ್ಡ ಟ್ರಂಕ್‌, ಗೊಬ್ಬರ ಚೀಲದ ಒಂದಿಷ್ಟು ಲಗೇಜ್‌, ಸೂಕ್ಷ್ಮವಾಗಿ ಮೂಗೆಳೆದುಕೊಂಡರೆ ಘಮ್ಮೆಂದು ರಾಚುವ ಜೋಳದ ಬಿರುಸು ರೊಟ್ಟಿ, ಗುರೆಳ್ಳು ಚಟ್ನಿ ಪುಡಿಯ ಸುವಾಸನೆ ಬಲ್ಲ ಅವ, ’ಕ್ಯಾಂಪಸ್‌ಗೆ ಹೊಂಟಾರ’ ಎಂಬಂತೆ ನಕ್ಕು ಗೇರ್‌ ಬದಲಿಸುತ್ತಾನೆ. ಅದುವರೆಗೆ ಸಂಬಂಧವಿಲ್ಲದವರಂತೆ ಕೆಳಗೆ ನಿಂತಿದ್ದ ಜವಾರಿ ಮಂದಿ, ಸಿಕ್ಕಸಿಕ್ಕಲ್ಲೆಲ್ಲ ಎಲೆಯಡಿಕೆ ದ್ರಾವಣ ಉಗುಳಿ ಅವಸರದಿಂದ ಬಸ್‌ ಹತ್ತುತ್ತಾರೆ.

ನಿಮ್ಮ ಯುನಿವರ್ಸಿಟಿ ಪ್ರವಾಸ ಪ್ರಾರಂಭವಾಗಿದ್ದು ಹೀಗೆ ತಾನೆ?

ಅಷ್ಟೊತ್ತಿಗೆ ಮಳೆ ಪ್ರಾರಂಭವಾಗಿರುತ್ತದೆ. ಬೆಂಗಳೂರಿನಲ್ಲೀಗ ಸಂಜೆ ಐದರ ಮಳೆ ಅಪರೂಪ. ನಮ್ಮ ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ಅದನ್ನು ನೋಡಬೇಕೆಂದರೂ ಧಾರವಾಡಕ್ಕೇ ಬರಬೇಕು. ಇದ್ದಕ್ಕಿದ್ದಂತೆ ಕವಿದುಕೊಂಡ ಮೋಡ, ಮಳೆಯಾಗಿ ರಪರಪ ಬೀಳತೊಡಗುತ್ತದೆ. ಧಾರವಾಡದಲ್ಲಿ ಇಂತಹ ಮಳೆಯಿಂದಾಗಿಯೇ ಬಸ್‌ಗಳು ರಾಡಿಯಾಗುವುದು ಹಾಗೂ ಇದ್ದ ರಾಡಿ ಕಳೆದುಕೊಂಡು ಸ್ವಚ್ಛವಾಗುವುದು. ಡ್ರೈವರ್‌ ಎಂಬ ಆಪತ್ಬಾಂಧವ ಬಸ್‌ ಅನ್ನು ಮಾರಿನಿಂದ ಮಾರಿಗೆ ನಿಲ್ಲಿಸುತ್ತ, ಎನ್ನ ಸಮಾನರಾರಿಹರು ಎಂಬಂತೆ ಒರಲುವ ಅದನ್ನು ಮರಗಳ ಹಸಿರು ಕತ್ತಲೆ ತುಂಬಿಕೊಂಡ ರಸ್ತೆಗಳೊಳಗಿಂದ ನುಗ್ಗಿಸುತ್ತ, ಜುಬಿಲಿ ಸರ್ಕಲ್‌, ಕೆಸಿಡಿ ಸರ್ಕಲ್‌, ಸಪ್ತಾಪುರ ಬಾವಿ, ಚೆನ್ನಬಸವನಗರ, ಶ್ರೀನಗರ ಸರ್ಕಲ್‌ನಲ್ಲಿ ಎಡಕ್ಕೆ ತಿರುಇ, ರೈಲ್ವೇ ಹಳಿ ದಾಟಿ ಒಳ ನುಗಿದನೆಂದರೆ-

ಅಗೋ ಬಂತು ಕರ್ನಾಟಕ ವಿಶ್ವವಿದ್ಯಾಲಯ!

ಇಲ್ಲೇ ಅಲ್ಲವೇನೋ ನಾವೆಲ್ಲ ಎರಡು ವರ್ಷ ಇದ್ದುದು? ಎಲ್ಲರೂ ಹೀಗೇ ಅಲ್ಲವಾ ಒಳಗೆ ಬಂದಿದ್ದು? ಏನೆಲ್ಲ ಅಂದುಕೊಂಡಿದ್ದ, ಅಂದುಕೊಂಡಿದ್ದಕ್ಕಿಂತ ಬೇರೇನೆಲ್ಲ ಆಗಿದ್ದ ಇಲ್ಲೇ ಅಲ್ಲವೇ ನಮ್ಮ ಬದುಕುಗಳು ಅರಳಿದ್ದು? ಟೊಂಗೆಗಳು ಕವಲೊಡೆದಿದ್ದು? ಮತ್ತು, ದೂರದ ಊರುಗಳಲ್ಲಿ ಅನ್ನ-ಆಶ್ರಯ ಅರಸಿಕೊಂಡು ಇಲ್ಲಿಂದ ಹೋಗಿದ್ದು? ಅದ್ಹೇಗೋ ನಾನೊಬ್ಬ ಮಾತ್ರ ಮರಳಿ ಇಲ್ಲಿಗೆ ಬಂದುಬಿಟ್ಟಿದ್ದೇನೆ. ಕ್ಯಾಂಪಸ್‌ನ ಹಸಿರು ಕತ್ತಲೆಯ ಜೊಂಪಿನಲ್ಲಿ, ಮಳೆ ಹನಿಗಳ ತಂಪಿನಲ್ಲಿ, ನಿಮ್ಮನ್ನೆಲ್ಲ ನೆನಪಿಸಿಕೊಳ್ಳುತ್ತ ಒಂಟಿಯಾಗಿಬಿಟ್ಟಿದ್ದೇನೆ.

ನಿಮ್ಮನ್ನೆಲ್ಲ ಹುಡುಕಿಕೊಂಡು ಮುಂಗಾರು ಆಗಲೇ ಇಲ್ಲಿ ಬಂದಾಯ್ತು. ಕ್ಯಾಂಪಸ್‌ ಕಾಯುತ್ತಿದೆ. ಹಸಿರು ಕಾಯುತ್ತಿದೆ. ನಿರ್ಜನ ಡಾಂಬರ್‌ ರಸ್ತೆಗಳು, ಶಾಲ್ಮಲಾ ಕಣಿವೆಯ ನವಿಲುಗಳು ಕಾಯುತ್ತಿವೆ. ನೀವು ಬರುವುದು ಯಾವಾಗ?

ತಡ ಮಾಡಬೇಡಿ. ಬೇಗ ಬಂದುಬಿಡಿ.

- ಚಾಮರಾಜ ಸವಡಿ

(೨೦೦೬ರಲ್ಲಿ ಧಾರವಾಡದ ಪ್ರಜಾವಾಣಿ ವರದಿಗಾರನಾಗಿದ್ದಾಗ ಬರೆದಿದ್ದು)

No comments: