ನೆನಪು ಚಿಗುರುವ ಸಮಯ

26 May 2008

3 ಪ್ರತಿಕ್ರಿಯೆ
ಇವತ್ತು ಬೆಂಗಳೂರಿನಲ್ಲಿ ಹದವಾದ ಮಳೆ ಬಿತ್ತು.

ನಾನು, ರೇಖಾ ಹಾಗೂ ಮಗಳು ಗೌರಿ ಮನೆಯ ದೊಡ್ಡ ಗೇಟಿನ ಸರಳಿಗೆ ಮುಖವಾನಿಸಿಕೊಂಡು ನಿಂತು, ಸಣ್ಣಗೆ ಬೀಳುತ್ತಿದ್ದ ಮಳೆ ನೋಡಿದೆವು. ಡಾಂಬರ್‌ ಬಳಿದುಕೊಂಡು ಚೆಂದವಾದ ರಸ್ತೆಯಲ್ಲಿ, ಹಳದಿ ದೀಪದ ಪ್ರತಿಫಲನ. ಅದು ರಂಗಸ್ಥಳವೇನೋ ಎಂಬಂತೆ ಮಳೆ ಹನಿಗಳು ಉಲ್ಲಾಸದಿಂದ ಸಿಡಿದು, ಚದುರಿ ಮಾಯವಾಗುತ್ತಿದ್ದ ಅಪೂರ್ವ ದೃಶ್ಯವನ್ನು ಗೌರಿ ತನ್ನ ಪುಟ್ಟ ಮನಸ್ಸಿನ ಕುತೂಹಲದಿಂದ ನೋಡಿದಳು.

ನನಗೆ ಊರು ನೆನಪಾಯಿತು.

ಮೇ ತಿಂಗಳಿನ ಈ ದಿನಗಳಲ್ಲಿ ಕೊಪ್ಪಳ ತಾಲ್ಲೂಕಿನ ನನ್ನೂರು ಅಳವಂಡಿಯಲ್ಲಿ ಕಡು ಬೇಸಿಗೆ. ಫೆಬ್ರುವರಿ ತಿಂಗಳಿಂದಲೇ ಚುಚ್ಚತೊಡಗುವ ಬಿಸಿಲಿಗೆ ಮಾರ್ಚ್‌ ತಿಂಗಳ ಹೊತ್ತಿಗೆ ತುಂಬು ಪ್ರಾಯ. ಏಪ್ರಿಲ್‌-ಮೇ ತಿಂಗಳಲ್ಲಂತೂ ಕಡು ಬೇಸಿಗೆ. ಎಂಥಾ ಮಳೆಯನ್ನೂ ಮೊಗೆದು ಕುಡಿದು ಮತ್ತೆ ಒಣಗಿ ನಿಲ್ಲುವ ಬಿಸಿಲ ಬಯಲುಗಳು. ಕಾಲಿನ ಮೀನಖಂಡದವರೆಗೂ ನುಂಗಬಲ್ಲ, ಕಪ್ಪು ಮಣ್ಣಿನ ಬಿರುಕುಗಳು. ಮಸಾರಿ (ಕೆಂಪು) ಹೊಲದ ಬೆಣಚುಕಲ್ಲುಗಳು ಕಾಯ್ದು ಹೆಂಚಿನಂತೆ ಧಗಿಸುತ್ತವೆ. ನಮ್ಮ ಬಡಬಾಲ್ಯದ ಬರಿಗಾಲನ್ನು ಅವು ಅದೆಷ್ಟು ಸಾರಿ ಸುಟ್ಟು ಬೊಬ್ಬೆ ಏಳಿಸಿದ್ದವೋ!

ಕಾರೊಂದು ನಿಧಾನವಾಗಿ ಹರಿದು ಹೋಯಿತು. ಡಾಂಬರು ರಸ್ತೆ ಕ್ಷಣ ಕಾಲ ಮರೆಯಾಗಿ, ಮಳೆಯ ಪುಟ್ಟ ಪುಟ್ಟ ಹನಿಗಳು ಕಾರಿನ ದೇಹದ ಮೇಲೆ ಪುಟಿಪುಟಿದು ಹೊಳೆದು ಕಂಗೊಳಿಸಿದವು. ವೈಪರ್‌ ಮಾತ್ರ ನಿರ್ಲಕ್ಷ್ಯದಿಂದ ಗಾಜೊರೆಸುತ್ತಿತ್ತು. ಅದು ಸರಿದಾಡಿದ ಕಡೆ ಅಳುವ ಕಾರು, ಧಾರೆಯಾಗಿ ಸುರಿವ ನೀರು.

ಬಾಲ್ಯಕ್ಕೆ ಬಿಸಿಲು ಇರುವುದಿಲ್ಲ. ಕಹಿಯ ನೆನಪೂ ತುಂಬ ಹೊತ್ತು ನಿಲ್ಲುವುದಿಲ್ಲ. ಅಂಥ ಬಿಸಿಲಲ್ಲೇ ಬೇಸಿಗೆ ರಜಾ. ಹಿರಿಯರೆಲ್ಲ ಬೀಸಣಿಕೆಯಿಂದ ಗಾಳಿ ಹಾಕಿಕೊಳ್ಳುತ್ತಾ ಸಗಣಿ ಸಾರಿಸಿದ ಮನೆಯ ನೆಲದ ಮೇಲೆ ಉಸ್ಸೆಂದು ಮಲಗಲು ಯತ್ನಿಸುತ್ತಿದ್ದಾಗ, ಮಕ್ಕಳಾದ ನಾವು ಊರ ಹಳ್ಳ ಸುತ್ತಲು ಹೋಗುತ್ತಿದ್ದೆವು. ಆವಾಗಿನ್ನೂ ಹಳ್ಳ ಒಣಗಿರಲಿಲ್ಲ. ಬಿರು ಬೇಸಿಗೆಯಲ್ಲೂ ತೆಳ್ಳನೆಯ ನೀರು ಅಲ್ಲಲ್ಲಿ ಹರಿಯುತ್ತಿತ್ತು. ಸುತ್ತ ಕಡು ಹಸಿರು ಪಾಚಿ. ಅವೇ ನೀರು ಕುಡಿಯುತ್ತಿದ್ದ ಎಮ್ಮೆಗಳು. ಮುಖ ತೊಳೆಯುವ ದನ ಕಾಯುವ ಹುಡುಗರು. ನೀರು ಚಿಕ್ಕ ಮಡುವಾಗಿ ನಿಂತ ಕಡೆ ಕಪ್ಪು ಬಣ್ಣದ ಕಿರು ಬೆರಳ ಗಾತ್ರದ ಮೀನುಗಳನ್ನು ಹಿಡಿಯುವ ದುಸ್ಸಾಹಸದಲ್ಲಿ ನಾವು. ಅದನ್ನೇ ಹಿರಿಯರಂತೆ ಅಸಮಾಧಾನದ ಬಿರುಗಣ್ಣಿನಿಂದ ದಿಟ್ಟಿಸುವ ಸೂರ್ಯ.

ಕೊಡೆ ಹಿಡಿದಿದ್ದ ಹುಡುಗಿಯೊಬ್ಬಳು ಲಗುಬಗೆಯಿಂದ ಸಾಗಿ ಹೋದಳು. ಮಳೆ ಹನಿಗಳಿಗೆ ಈಗ ಕೊಡೆಯ ಮೇಲೆ ನರ್ತಿಸುವ ಸುಯೋಗ.

ಬಾಲ್ಯದ ನೆನಪಿನ ತುಂಬ ಊರ ಹಳ್ಳ ಹರಿಯುತ್ತಲೇ ಇರುತ್ತದೆ. ಮಳೆಗಾಲದಲ್ಲಿ ಕಡುಗಪ್ಪು ನೀರನ್ನು ಚಿಕ್ಕ ನದಿಯಂತೆ ಹರಿಸುವ ಹಳ್ಳ ನನ್ನ ಸುಂದರ ನೆನಪುಗಳಲ್ಲಿ ಒಂದು. ’ಹಳ್ಳ ಬಂತು’ ಎಂಬ ಉದ್ಗಾರ ಇಡೀ ಊರನ್ನು ಹಳ್ಳದ ದಂಡೆಯುದ್ದಕ್ಕೂ ನಿಲ್ಲಿಸುತ್ತಿತ್ತು. ನೂರು ಮೀಟರ್‌ ಉದ್ದಕ್ಕೂ ಭೋರ್ಗರೆದು ಹರಿಯುವ ಹಳ್ಳದಲ್ಲಿ ತೇಲಿ ಹೋಗುವ ಲೆಕ್ಕವಿಲ್ಲದಷ್ಟು ಎಲೆ-ಕಸಕಡ್ಡಿಗಳು, ಹಾವು ಚೇಳುಗಳು. ಅಪರೂಪಕ್ಕೆ ಎಮ್ಮೆ, ಆಡು, ಕುರಿಗಳು. ಹಳ್ಳದ ಇನ್ನೊಂದು ದಿಕ್ಕಿಗೆ, ನೆರೆ ಇಳಿಯುವುದನ್ನೇ ಕಾಯುತ್ತ ನಿಂತ ಕೊಪ್ಪಳ-ಮುಂಡರಗಿ ಖಾಸಗಿ ಬಸ್‌ನ ಪ್ರಯಾಣಿಕರ ದಂಡು. ಕೂಲಿ ಕೆಲಸಕ್ಕೆ ಹೋಗಿ ಹಿಂತಿರುಗುವ ಆಳುಗಳು, ದನ ಕಾಯುವ ಹುಡುಗರು. ಬೆದರಿ ದೂರ ನಿಂತಿರುತ್ತಿದ್ದ ದನಗಳು. ನಾವು ಈ ಕಡೆಯಿಂದ ಕೂಗುತ್ತಿದ್ದೆವು. ಅವರು ಆ ಕಡೆಯಿಂದ ಕೇಕೆ ಹಾಕಿ ಪ್ರತಿಕ್ರಿಯೆ ನೀಡುತ್ತಿದ್ದರು. ನಡುವೆ ನಿರ್ಲಕ್ಷ್ಯದಿಂದ ಹರಿಯುವ ಹಳ್ಳ.

ಬೇಸಿಗೆಯಲ್ಲಿ ಸೊರಗುತ್ತ ಬಸವಳಿಯುವ ಹಳ್ಳದ ದಂಡೆಗಳಲ್ಲಿ ದಟ್ಟವಾಗಿ ಬೆಳೆದ ಜಾಲಿ ಗಿಡಗಳು. ಅವುಗಳ ನೆರಳಲ್ಲಿ, ಒಣ ಉಸುಕಿನ ಮೇಲೆ ಇಸ್ಪೀಟಾಡುವ ಸೋಮಾರಿ ಜನ. ಕದ್ದು ಬೀಡಿ ಸೇದುವ ಪ್ರಾಯದ ಹುಡುಗರು. ಶೇಂದಿ ಕುಡಿವ ಜನರು. ಬಾಲ್ಯದ ಕುತೂಹಲಕ್ಕೆ ಸಾವಿರ ಕಣ್ಗಳು. ಸಾವಿರ ಸಾವಿರ ದೃಶ್ಯಗಳು.

ಸೂರ್ಯ ಕಂದುತ್ತಿದ್ದಂತೆ ಮನೆಗೆ ಓಟ. ಪರೀಕ್ಷೆ ಮುಗಿದಿರುತ್ತಾದ್ದರಿಂದ ಲಾಟೀನದ ಸುತ್ತ ಕೂತು ಓದುವ ಪ್ರಮೇಯ ಇರುತ್ತಿರಲಿಲ್ಲ. ಜೋಳದ ಅಂಬಲಿಗೆ ಮಜ್ಜಿಗೆ ಸಾರು ಉಂಡು, ಹಾಸಿಗೆ ಸಮೇತ ಮಾಳಿಗೆ ಏರಿದರೆ, ಕೈಗೆಟಕುವ ಎತ್ತರದಲ್ಲಿ ಸ್ವಚ್ಛ ನಕ್ಷತ್ರಗಳು. ನನ್ನ ಅತಿ ಸುಂದರ ಶಾಂತ ರಾತ್ರಿಗಳನ್ನು ಹೀಗೆ ಆಕಾಶ ನಿಟ್ಟಿಸುತ್ತ ಕಳೆದಿದ್ದೇನೆ. ಎಳೆಯ ಕಂಗಳ ತುಂಬ ಸಾವಿರಾರು ಭರವಸೆಯ ಚುಕ್ಕಿಗಳು. ವಿದ್ಯುತ್‌ ಇಲ್ಲದ ನೀರವ ರಾತ್ರಿಗಳಲ್ಲಿ, ಮಿನುಗುತ್ತ ಭರವಸೆ ಹುಟ್ಟಿಸುತ್ತಿದ್ದ ದೀಪಗಳವು. ಅಣ್ಣಂದಿರೆಲ್ಲ ಮಲಗಿ, ಊರಿನ ಎಲ್ಲ ಸದ್ದೂ ನಿದ್ದೆ ಹೋದ ನಂತರವೂ ತುಂಬ ಹೊತ್ತು ನಕ್ಷತ್ರಗಳನ್ನೇ ನೋಡುತ್ತ ಎಚ್ಚರವಾಗಿರುತ್ತಿದ್ದೆ. ಯಾವ ಮಾಯದಲ್ಲಿ ಬಂದಿರುತ್ತಿತ್ತೋ ನಿದ್ದೆ. ಕಿವಿಗಳ ಹತ್ತಿರವೇ ಗುಬ್ಬಿಗಳು ಚಿಂವ್‌ಗುಟ್ಟುತ್ತ ಕಾಣದ ಕಾಳುಗಳಿಗಾಗಿ, ಹುಳು ಹುಪ್ಪಟೆಗಳಿಗಾಗಿ ಹುಡುಕಾಡುವಾಗಲೇ ಎಚ್ಚರ. ರಾತ್ರಿಯಲ್ಲಿ ಚೆಂದಗೆ ನಿದ್ದೆ ಮಾಡಿದ್ದ ಸೂರ್ಯ ಕಣ್ಣು ಬಿಡುವ ಹೊತ್ತಿಗೆ ಅಂಗಳ ಗುಡಿಸುವ, ನೀರು ಚಿಮುಕಿಸುವ ಹೆಂಗಳೆಯರು. ಕೈಯಲ್ಲಿ ಹಿತ್ತಾಳೆ ಚೊಂಬುಗಳನ್ನು ಹಿಡಿದು ಬಹಿರ್ದೆಶೆಗೆ ಹೊರಟ ಗಂಡಸರು. ಗುಡಿಸಿದ ಅಂಗಳಗಳಿಂದ ಏಳುವ ತೆಳ್ಳನೆಯ ದೂಳಿನ ಮೋಡದಿಂದ ಕೆಂಪಾಗಿ ನಗುವ ಸೂರ್ಯ. ನನ್ನ ಕಣ್ತುಂಬ ರಾತ್ರಿ ಕಂಡ ನಕ್ಷತ್ರಗಳ ಚಿತ್ರ.

ಮಳೆ ಬೀಳುತ್ತಲೇ ಇದೆ. ಸದ್ದಿಲ್ಲದೆ, ಸಣ್ಣಗೆ. ಹೊಡೆದು ತುಂಬ ಹೊತ್ತಾದರೂ ಬಿಕ್ಕಳಿಸುತ್ತಲೇ ಇರುವ ಮಗುವಿನಂತೆ.

ಆದರೆ, ನನ್ನೂರಲ್ಲಿ ಈಗ ಹಳ್ಳ ಮಳೆಗಾಲದಲ್ಲೇ ಬತ್ತುತ್ತದೆ. ಹಗಲು ಹೊತ್ತು ಬೀಸಣಿಕೆಗಳು ಕಾಣುವುದಿಲ್ಲ- ಪಂಖಾಗಳು ತಿರುಗುತ್ತವೆ. ಸಗಣಿ ಸಾರಿಸಿದ ನೆಲ ಈಗ ಅಪರೂಪ. ಕಪ್ಪು ಕಡಪಾ ಕಲ್ಲಿನ ಮೇಲೆ ನಿದ್ದೆ ಹೋಗುವ ಜನರಿಗೆ ಕನಸುಗಳು ಬೀಳುವುದೂ ಅನುಮಾನ. ಬಿರು ಬೇಸಿಗೆಯಲ್ಲಿ ಹಳ್ಳ ಸುತ್ತುವ ಮಕ್ಕಳು ಈಗಿಲ್ಲ. ಅವರೆಲ್ಲ ಟಿವಿ ನೋಡುತ್ತಾರೆ. ಸಂಜೆ ವೇಳೆ ಹೊರಹೊರಟರೂ ಅದು ಹಳ್ಳದ ಕಡೆಗಲ್ಲ. ಬ್ಯಾಟ್‌ ಹಿಡಿದು ಶಾಲೆಯ ಮೈದಾನಕ್ಕೆ ನುಗ್ಗುತ್ತಾರೆ. ರಾತ್ರಿ ಲಾಟೀನು ಉರಿಯುವುದಿಲ್ಲ. ಲೈಟ್ ಹಾಕುತ್ತಾರೆ. ಕಡು ಬಡವ ಕೂಡ ಅಂಬಲಿ ಉಣ್ಣುವುದಿಲ್ಲ. ರೇಶನ್‌ದಾದರೂ ಸರಿ, ಅಕ್ಕಿ ಇರುತ್ತದೆ. ಉಂಡು, ಮಾಳಿಗೆ ಏರುವ ಉಮೇದು ಎಷ್ಟು ಜನರಿಗೆ ಉಳಿದಿದೆಯೋ! ಊರ ತುಂಬ ಹರಡಿರುವ ಬೀದಿ ದೀಪಗಳ ಬೆಳಕಿನ ಎದುರು ನಕ್ಷತ್ರಗಳೇಕೋ ಮಂಕು ಮಂಕು.

ನೋವಿನ ಎಳೆಗಳಂತೆ ಮಳೆ ಬೀಳುತ್ತಲೇ ಇದೆ. ಸುಮ್ಮನೇ ನಿಂತ ಇವಳ ಮನಸ್ಸಿನಲ್ಲಿ ತೌರು ಮನೆಯ ಚಿತ್ರ ಮೂಡಿರಬೇಕು. ಜಗತ್ತು ತಿಳಿಯದ ಗೌರಿಯ ಮನಸ್ಸಿನಲ್ಲಿ ಯಾವ ಚಿತ್ರವಿದೆಯೋ. ಅವಳೂ ಮೌನವಾಗಿ ಮಳೆ ದಿಟ್ಟಿಸುತ್ತಿದ್ದಾಳೆ. ಬೆಂಗಳೂರಿನ ರಾತ್ರಿ ದೀಪಗಳ ಪ್ರಭೆಗೆ ಕಡುಕಪ್ಪು ಮೋಡಗಳೂ ಸುಟ್ಟ ಹಪ್ಪಳದಂತೆ ಕಾಣುತ್ತಿವೆ. ಮಳೆಗೆ ಬೆದರಿದವರಂತೆ ಜನ ಮನೆಯೊಳಗೆ ಟಿವಿ ಮುಂದೆ ಕೂತಿದ್ದಾರೆ. ರಸ್ತೆಯನ್ನೆಲ್ಲ ಮಳೆ ಹನಿಗಳ ನೃತ್ಯಕ್ಕೆ ಬಿಟ್ಟುಕೊಟ್ಟಿದ್ದಾರೆ.

ನನ್ನ ಮಗಳು ಬೆಂಗಳೂರಲ್ಲೇ ಬೆಳೆಯುತ್ತಾಳೆ. ಅವಳ ಪಾಲಿಗೆ ಊರಿನ ಹಳ್ಳ ಇಲ್ಲ. ಬಿರು ಬೇಸಿಗೆ ಇಲ್ಲ. ಅಂಬಲಿ-ಮಜ್ಜಿಗೆ ಊಟವಿಲ್ಲ. ಲಾಟೀನಿನ ಬೆಳಕಿಲ್ಲ. ಉಂಡ ಕೂಡಲೇ ಹಾಸಿಗೆ ಹೊತ್ತು ಮಾಳಿಗೆ ಏರುವುದಿಲ್ಲ. ದೊಡ್ಡವಳಾಗಿ ಬುದ್ಧಿ ಬಲಿತ ಮೇಲೆ, ಮಳೆ ಎಂದರೆ ಡಾಂಬರು ರಸ್ತೆಯ ಮೇಲೆ ಹನಿಗಳ ನಾಟ್ಯ ಎಂದು ನೆನಪಿಸಿಕೊಳ್ಳುತ್ತಾಳೇನೋ! ಮಳೆ ಮುಗಿಲು ಎಂದರೆ ಸುಟ್ಟ ಹಪ್ಪಳ ನೆನಪಾಗುವುದೇನೋ! ಗೇಟಿನ ಸರಳುಗಳ ಚೌಕಟ್ಟುಗಳ ಮೂಲಕ, ಹರಿದು ಹೋಗುವ ವಾಹನಗಳ ಮೇಲೆ ಸಿಡಿವ ಹನಿಗಳ ಚಿತ್ರದ ಮೂಲಕ ಮಳೆಯನ್ನು ನೆನಪಿಸಿಕೊಳ್ಳುತ್ತಾಳೇನೋ! ಯಾರು ಬಲ್ಲರು?

ನಿಂತಷ್ಟೂ ನೆನಪುಗಳು ಉಕ್ಕುತ್ತಲೇ ಇವೆ. ಭೋರ್ಗರೆಯುತ್ತಲೇ ಇವೆ. ಅವರವರ ಬಾಲ್ಯದ ದಿನಗಳು ಅವರವರ ಪಾಲಿಗೆ ಸೊಗಸೇ ಅಂದುಕೊಂಡರೂ ವಿಷಾದ ಹೋಗದು. ನೆನಪು ಜಾರದು. ಥೇಟ್ ಮಳೆಯ ಹನಿಗಳಂತೆ ಮತ್ತೆ ಮತ್ತೆ ಅಪ್ಪಳಿಸುತ್ತವೆ. ಥಟ್ಟನೇ ಸಿಡಿದು ಬಣ್ಣವರಳಿಸಿ ಪ್ರತಿಫಲಿಸಿ ಕರಗುತ್ತವೆ. ಮತ್ತೆ ಹನಿ, ಮತ್ತೆ ಪ್ರತಿಫಲನ. ಡಾಂಬರು ರಸ್ತೆ ಯಾವುದನ್ನೂ ಹೀರಿಕೊಳ್ಳುವುದಿಲ್ಲ. ಎಲ್ಲ ಹನಿಗಳನ್ನೂ ಬಳಿದು ಚರಂಡಿಗೆ ಹರಿಸುತ್ತದೆ. ಅಲ್ಲಿಂದ ಅವು ಎಲ್ಲಿಗೆ ಹೋಗುತ್ತವೋ! ಉಕ್ಕಿ ಹರಿಯಬೇಕೆಂದರೂ ಬೆಂಗಳೂರಿನಲ್ಲಿ ಹಳ್ಳವಾದರೂ ಎಲ್ಲಿದೆ?

ದಿಢೀರನೇ ಅಪ್ಪಳಿಸಿದ ಸಿಡಿಲಿಗೆ ಬೆದರಿ ವಿದ್ಯುತ್‌ ಕಣ್ಮುಚ್ಚಿತು. ಎಲ್ಲೆಡೆ ಆವರಿಸಿಕೊಂಡ ಅಂಧಕಾರ. ಈಗ ಮಳೆ ಕಾಣಿಸದು. ಅದರ ನರ್ತನ ಗೋಚರಿಸದು. ಟಾರು ರಸ್ತೆಯೂ ಇಲ್ಲ, ಬೀದಿ ದೀಪಗಳೂ ಇಲ್ಲ. ಮಳೆ ಬೀಳುತ್ತಿದೆ ಎಂಬ ಅರಿವಿನ ಹೊರತಾಗಿ ಏನೆಂದರೆ ಏನೂ ಕಾಣುತ್ತಿಲ್ಲ.

ಮೂವರೂ ಮೌನವಾಗಿ ನಿಂತಿದ್ದೆವು. ಮಳೆ ಬೀಳುವ ಮೆದು ಮರ್ಮರ ಈಗ ಸ್ಪಷ್ಟವಾಗಿ ಕೇಳುತ್ತಿತ್ತು. ಊರಿನ ಬಾನಿನಗಲ ಹರಡಿದ ನಕ್ಷತ್ರಗಳು ನೆನಪಾದವು. ಕಪ್ಪು ಬಾಣಲೆಯಲ್ಲಿ ಅರಳು ಚೆಲ್ಲಿದಂತೆ ಹರಡಿದ ನಕ್ಷತ್ರಗಳು ತುಂಬಿದ ನನ್ನ ಬಾಲ್ಯ ನೆನಪಾಯಿತು. ತಲೆ ಎತ್ತಿ ನೋಡಿದೆ. ಅಳುವ ಕಪ್ಪು ಮೋಡಗಳೇ ಎಲ್ಲೆಡೆ. ಇನ್ನು ನಕ್ಷತ್ರಗಳು ಎಲ್ಲಿಂದ ಬಂದಾವು?

ಮೆಲ್ಲಗೇ ಮಗಳ ಕೈ ಹಿಡಿದುಕೊಂಡೆ. ಆಕೆಯ ಇನ್ನೊಂದು ಕೈಯನ್ನು ರೇಖಾ ಹಿಡಿದುಕೊಂಡಳು. ಮೂವರೂ ಕತ್ತಲಲ್ಲೇ ಮನೆ ಹೊಕ್ಕೆವು. ಇವತ್ತು ರಾತ್ರಿಯಿಡೀ ಮಳೆ ಬಿಡುವ ಲಕ್ಷಣಗಳಿಲ್ಲ. ನಕ್ಷತ್ರಗಳು ಕಾಣುವುದಿಲ್ಲ. ಒಂದು ವೇಳೆ ಮೋಡ ಕರಗಿ, ಚದುರಿ ಬಾನು ಸ್ವಚ್ಛವಾದರೂ ಬೆಂಗಳೂರಿನ ದೀಪಗಳ ಬೆಳಕು, ದೂಳು ಅವುಗಳ ನಗೆಯನ್ನು, ತುಂಟತನವನ್ನು ಕಿತ್ತುಕೊಂಡಿರುತ್ತವೆ.

ಅದನ್ನೇ ಯೋಚಿಸುತ್ತ ಹಾಸಿಗೆ ಮೇಲೆ ಒರಗಿಕೊಂಡವನಿಗೆ ಯಾವಾಗ ನಿದ್ರೆ ಬಂದಿತ್ತೋ! ಫಕ್ಕನೆ ಬಿದ್ದ ಬೆಳಕಿಗೆ ಎಚ್ಚರವಾಯಿತು. ರಾತ್ರಿ ತಡವಾಗಿ ಕರೆಂಟ್ ಬಂದಿತ್ತು. ಸ್ವಿಚ್‌ಗಳನ್ನು ಆಫ್‌ ಮಾಡದೆ ಮಲಗಿದ್ದರಿಂದ ಅಪರಾತ್ರಿಯಲ್ಲಿ ಇಡೀ ಮನೆಯ ತುಂಬ ಬೆಳ್ಳಂಬೆಳಕು.

ಮಗಳು ಎದ್ದಾಳೆಂಬ ಧಾವಂತದಿಂದ ಲೈಟ್‌ಗಳನ್ನು ಆರಿಸಿದೆ. ಫ್ಯಾನ್‌ನ ವೇಗ ಕಡಿಮೆ ಮಾಡಿದೆ. ಕೊನೆಯ ಲೈಟ್‌ ಆರಿಸಿದಾಗ- ಹಿತವಾದ ಮಬ್ಬುಗತ್ತಲು. ಅರೆ ಕ್ಷಣ ಮೌನವಾಗಿ ಕೂತೆ. ಮನಸ್ಸಿನ ತುಂಬ ಊರ ನಕ್ಷತ್ರಗಳದೇ ಜಾತ್ರೆ.

ತಕ್ಷಣ ಎದ್ದು, ಟೇಬಲ್‌ ಲ್ಯಾಂಪ್‌ ಉರಿಸಿ ಕೂತು ಇದನ್ನೆಲ್ಲ ಬರೆದೆ.

- ಚಾಮರಾಜ ಸವಡಿ
೨೨-೫-೨೦೦೮

ಕಿಟಕಿಯಾಚೆ ಚಂದ್ರ

19 May 2008

5 ಪ್ರತಿಕ್ರಿಯೆ
ಮೊನ್ನೆ ಮೊನ್ನೆಯಷ್ಟೇ ಕರಗಿ ಹೋದಂತಿದ್ದ ಚಂದ್ರ ಮತ್ತೆ ಬಂದಿದ್ದಾನೆ.

ಇಷ್ಟೇ ಇಷ್ಟು ಚೂರು. ಈಕೆ ಮಗ್ಗಲು ಹೊರಳಿ, ತಲೆಯನ್ನು ದಿಂಬಿನಂತೆ ಅಡ್ಡ ಇಟ್ಟಾಗ ಮುರಿದ ಬಳೆ ಚೂರಿನಂತೆ. ಆದರೆ, ಬೆಳ್ಳಗೆ ತಂಪಾಗಿ ನಳನಳಿಸುತ್ತಿದ್ದಾನೆ.

ಇದಕ್ಕೂ ಮೊದಲು, ಯಾವ ದುಃಖದಲ್ಲಿದ್ದನೋ ಏನೋ, ಬೆಳ್ಳಗೆ ಲಕಲಕಿಸುತ್ತ ದುಂಡಗಿದ್ದವ ಇದ್ದಕ್ಕಿದ್ದಂತೆ ಸೊರಗತೊಡಗಿದ್ದ ರಾತ್ರಿ ತಡವಾಗಿ, ತೂಕಡಿಕೆಯಲ್ಲಿದ್ದವನಂತೆ, ಕುಡಿದು ಕೂತವನು ಎದ್ದು ಹೋಗಲು ಮರೆತಂತೆ ತಾರಾಡುತ್ತ ಬರುತ್ತಿದ್ದ. ಮುಖದಲ್ಲಿ ಮೊದಲಿನ ಕಳೆಯಿದ್ದಿಲ್ಲ. ಹೀಗೆ ಸೊರಗುತ್ತ, ಕರಗುತ್ತ ಹೋದವ ಒಂದಿನ ಬರಲೇ ಇಲ್ಲ.

ಅವತ್ತೇಕೋ ಮನಸ್ಸಿನ ತುಂಬ ಕತ್ತಲು.

ಇನ್ನು ಅವ ಬರಲಾರ ಅಂದುಕೊಂಡಿದ್ದೆ. ಪಾಪದವ. ಯಾಕೆ ನವೆಯುತ್ತಿದ್ದನೋ. ಏನು ಕಾರಣವೋ. ಯಾರೊಂದಿಗೂ ಹೇಳಿಕೊಂಡವನಲ್ಲ. ಹೇಳಿಕೊಳ್ಳಲಾದರೂ ಅವನಿಗೆ ಯಾರಿದ್ದರು? ದೂರದಲ್ಲಿ ನಿಂತು ತಣ್ಣಗೆ ಮುಸಿನಗುವ ಚಿಕ್ಕಿಯರು. ಸೆರಗಿನ ಮರೆಯಲ್ಲಿ ಬಚ್ಚಿಟ್ಟುಕೊಂಡಂತೆ ಮಾಡುತ್ತಲೇ ಬಿಚ್ಚಿ ಓಡುವ ಮೋಡಗಳು. ಕೆಟ್ಟ ಮುಖದ ಸೂರ್ಯ ಉರಿಯುತ್ತ ಬಂದರೆ ಇವನ ಮುಖ ಮಂಕು.

ಉರಿವ ಸೂರ್ಯನಿರುವಾಗ ಮಂಕು ಚಂದ್ರಮ ಯಾರಿಗೆ ಬೇಕು?

ಆದರೂ, ರಾತ್ರಿ ಆಗೀಗ ಅವನ ನೆನಪಾಗುತ್ತಿತ್ತು. ಆದರೆ, ಅವನು ಬರುವುದು ಯಾವಾಗೋ ಏನೋ. ಊರ ದೀಪಗಳು ನೈಟ್‌ ಡ್ಯೂಟಿ ಪ್ರಾರಂಭಿಸಿದಾಗ, ರಾತ್ರಿ ಪಾಳಿ ಮುಗಿಸಿ ಎಲ್ಲರೂ ತಂತಮ್ಮ ನೆಲೆಗಳಲ್ಲಿ ನಿದ್ರೆಗೆ ಜಾರುವ ಹೊತ್ತು, ಒಲ್ಲದ ಅತಿಥಿಯಂತೆ, ಅಪರಾಧಿಯಂತೆ, ದೂಷಣೆಗೆ ಒಳಗಾದವನಂತೆ, ಪಾಪಪ್ರಜ್ಞೆಯಿಂದ ಬಳಲುವವನಂತೆ ಕಳ್ಳ ಹೆಜ್ಜೆ ಇಟ್ಟು ಬರುತ್ತಿದ್ದ. ಅವನಿಗೆ ಕಾಯುತ್ತ ಕೂರಲಾದರೂ ಯಾರಿದ್ದರು?

ಆದರೂ ನನಗೆ ಅವನ ನೆನಪು ತುಂಬಾ ತುಂಬಾ ಆಗುತ್ತಿತ್ತು. ಏಕೋ ಏನೋ, ಅವನ ಬದುಕು ನನಗಿಷ್ಟ. ಎಷ್ಟೋ ಸಾರಿ ನಾನೂ ಚಂದ್ರನಂತೆ ಬದುಕಿದ್ದೇನೆ. ಸೊರಗುತ್ತ, ಕರಗುತ್ತ, ಇಲ್ಲವಾಗುತ್ತ, ಮತ್ತೆ ಬೆಳೆಯುತ್ತ, ಬೆಳಗುತ್ತ, ತುಂಬಿಕೊಂಡು ದುಂಡಗಾಗಿದ್ದೇನೆ. ಅವನಂತೆ ನನಗೂ ನೋವುಗಳಿದ್ದವು. ಅವಮಾನಗಳಿದ್ದವು. ಸಲ್ಲದ ದೂಷಣೆಗಳು, ಗೆಲ್ಲದ ದೌರ್ಬಲ್ಯಗಳಿದ್ದವು. ಇವೆಲ್ಲ ಅತಿರೇಕಕ್ಕೆ ಹೋಗಿ, ಅವನಂತೆ ನಾನೂ ಆಗಾಗ ಇಲ್ಲವಾಗುತ್ತಿದ್ದೆ. ಮತ್ತೆ ಬೀಜದಷ್ಟು ಶ್ರದ್ಧೆ ಬೆಳೆಯುತ್ತಿತ್ತು. ಹೊಸ ಕನಸು ತುಂಬಿಕೊಳ್ಳುತ್ತಿತ್ತು. ಚಿಕ್ಕಿಗಳ ಗೇಲಿ ಲೆಕ್ಕಿಸದೇ ಹುಡುಗಿಯರು ಮೋಹದ ಸೆರಗಿನ ತಡೆಯನ್ನು ದಾಟಿ ಬೆಳೆದು ನಳನಳಿಸುತ್ತಿದ್ದೆ.

ಚಂದ್ರ ನನಗೆ ಇಷ್ಟವಾಗುವುದಕ್ಕೆ ಹಲವಾರು ಕಾರಣಗಳಿವೆ.

ಅವ ಕಿಟಕಿಯಾಚೆಗೇ ಸಿಗುತ್ತಾನೆ. ಕೈ ಚಾಚಿದರೆ ಸಿಕ್ಕೇಬಿಡುತ್ತಾನೇನೋ ಎನ್ನುವಷ್ಟು ಹತ್ತಿರ. ಏನನ್ನಾದರೂ ಹೇಳಿಕೊಂಡರೆ ತುಂಬ ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತಾನೆ. ತಂಪಗೇ ಸಮಾಧಾನ ಮಾಡುತ್ತಾನೆ. ತನ್ನ ಮಿತಿಯಲ್ಲೇ ಸಾಧ್ಯವಾದಷ್ಟೂ ದಾರಿ ತೋರುತ್ತಾನೆ. ಸರಳುಗಳಾಚೆ ಇದ್ದರೂ ಬಂಧನ ದಾಟಿ ಒಳಬಂದು ಸಂತೈಸುತ್ತಾನೆ. ನಾನು ಹೇಳಿದ ಕತೆಗಳ ಗುಟ್ಟನ್ನು, ನೋವುಗಳ ಕಾರಣಗಳನ್ನು ಯಾರೆದುರೂ ಬಯಲು ಮಾಡುವುದಿಲ್ಲ. ನನ್ನ ಕತೆಗಳನ್ನು ಗೇಲಿ ಮಾಡುವುದಿಲ್ಲ. ಮೌನವಾಗೇ ಕೇಳಿಸಿಕೊಳ್ಳುತ್ತಾನೆ. ತನ್ನ ಬಗ್ಗೆ ಮೌನವಾಗೇ ಹೇಳಿಕೊಳ್ಳುತ್ತಾನೆ. ಹೇಳುತ್ತ, ಕೇಳುತ್ತ ರಾತ್ರಿ ಯಾವ ಮಾಯದಲ್ಲೋ ಇಬ್ಬರೂ ನಿದ್ರೆಗೆ ಜಾರಿಬಿಟ್ಟಿರುತ್ತೇವೆ.

ಸರಳಿನಾಚೆಯ ಚಂದ್ರನ ಮೌನ ಸಂದೇಶ, ಸಾಂತ್ವನ, ಸಹೃದಯತೆ ನನ್ನನ್ನು ಸಾವಿರ ಸಾವಿರ ಸಲ ಜೀವನ್ಮುಖಿ ಮಾಡಿವೆ. ಬದುಕು ಎದುರಿಸುವಂಥ ಭರವಸೆ ಕೊಟ್ಟಿವೆ. ಎಲ್ಲ ಮೋಡಗಳ ಸೆರಗಿನಾಚೆಗೂ, ತಡೆಗಳಾಚೆಗೂ, ಮೂದಲಿಕೆ, ಹೀಯಾಳಿಕೆ, ಆರೋಪ, ನಿರ್ಲಕ್ಷ್ಯದಾಚೆಗೂ ಬೆಳಗಬಲ್ಲ ವಿಶ್ವಾಸ ತುಂಬಿವೆ. ಏರಿಳಿತಗಳಿವೆ ನಿಜ. ಆದರೆ, ಸಾವಿಲ್ಲ. ಮತ್ತೆ ಮತ್ತೆ ತಲೆ ಎತ್ತಿ ನೋಡುವಂತೆ, ನೋಡಿ ಮೆಚ್ಚುವಂತೆ, ಮೆಚ್ಚಿ ಆದರಿಸುವಂತೆ ಮಾಡಿವೆ.

ಆದ್ದರಿಂದಲೇ ಮನಸ್ಸಿಗೆ ಕಾವಳ ಕವಿದಾಗೆಲ್ಲ ಸರಳಿನಾಚೆ ದಿಟ್ಟಿಸಿ ನೋಡುತ್ತೇನೆ.

ಅಲ್ಲಿ ಚಂದ್ರ ಕಾಣುತ್ತಾನೆ- ಭರವಸೆಯಂತೆ, ಬದುಕಿನಂತೆ, ಅವುತಂದು ಕೊಡುವ ನೆಮ್ಮದಿಯಂತೆ. ತಂಪಾಗಿ, ಚೆಂದಗೆ, ಬೆಳ್ಳಗೇ ಕಳೆಯಾಗಿ ಕಾಣುತ್ತಾನೆ.

ಮನಸ್ಸಿಗೆ ಹಾಯ್‌ ಅನ್ನಿಸುತ್ತದೆ!

- ಚಾಮರಾಜ ಸವಡಿ

ಕರ್ನಾಟಕ ಚುನಾವಣೆ-ಎರಡು ಹಂತಗಳು

18 May 2008

0 ಪ್ರತಿಕ್ರಿಯೆ

ಕರ್ನಾಟಕ ಚುನಾವಣೆ ಹೊಸದೊಂದು ಹೊಸ್ತಿಲು ತಲುಪಿದೆ.

ಎಲ್ಲ ಲೆಕ್ಕಾಚಾರಗಳು ಬಹುತೇಕ ಸರಿಯಾದರೆ, ಬಿಜೆಪಿ ಸರಳ ಬಹುಮತದ ಹತ್ತಿರ ಬರಲಿದೆ. ಎಲ್ಲ ವಾದ-ವಿವಾದಗಳನ್ನು ಮೀರಿ ಪ್ರಥಮ ಬಿಜೆಪಿ ಸರ್ಕಾರ (ಈ ಹಿಂದೆ ಆಗಿದ್ದು ಸಮ್ಮಿಶ್ರ ಸರ್ಕಾರ) ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಲಕ್ಷಣಗಳು ಸ್ಪಷ್ಟ.

ಮೊದಲ ಹಂತದ ಚುನಾವಣೆಯಲ್ಲಿ ೮೯ ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಮೀಕ್ಷೆಗಳ ಪ್ರಕಾರ ಬಿಜೆಪಿ ಸುಮಾರು ೩೯ ಸ್ಥಾನಗಳನ್ನು ಗಳಿಸಲಿದೆ. ಅಂದರೆ, ಜೆಡಿಎಸ್‌ ಪ್ರಬಲವಾಗಿರುವ ಹಳೆಯ ಮೈಸೂರು ವಿಭಾಗದಲ್ಲಿ ಅದು ಮುಂದಿದೆ ಎಂದಾಯಿತು. ಎರಡನೇ ಹಂತದಲ್ಲಿ ನಡೆದ ಹತ್ತು ಜಿಲ್ಲೆಗಳ ೬೬ ಕ್ಷೇತ್ರಗಳ ಚುನಾವಣೆಯಲ್ಲಿ ಅದು ಕನಿಷ್ಠ ೩೫ ಸ್ಥಾನಗಳನ್ನು ಗಳಿಸಲಿದೆ. ಅಂದರೆ, ಚುನಾವಣೆ ಮುಗಿದಿರುವ ೧೫೫ ಕ್ಷೇತ್ರಗಳಲ್ಲಿ ಬಿಜೆಪಿ ಗಳಿಸಬಹುದಾದ ಸ್ಥಾನಗಳು ೭೦ಕ್ಕೂ ಅಧಿಕ. ಮೂರನೇ ಹಂತದ ಚುನಾವಣೆಯಲ್ಲಿ ೬೯ ಸ್ಥಾನಗಳಿಗೆ ನಡೆಯಲಿರುವ ಸ್ಪರ್ಧೆಯಲ್ಲಿಯೂ ಇದೇ ಪ್ರಮಾಣದ ಮೇಲುಗೈ ಸಾಧಿಸುವ ಲಕ್ಷಣಗಳು ಸ್ಪಷ್ಟವಾಗಿವೆ.

ಅಂದರೆ, ಕರ್ನಾಟಕ ವಿಧಾನಸಭೆಯ ಒಟ್ಟು ೨೨೪ ಸ್ಥಾನಗಳ ಪೈಕಿ ಬಿಜೆಪಿ ೧೦೦ರಿಂದ ೧೧೦ ಸ್ಥಾನಗಳನ್ನು ಪಡೆಯುವ ಸಾಧ್ಯತೆಗಳಿವೆ. ಸರಳ ಬಹುಮತಕ್ಕೆ ೧೧೩ ಸ್ಥಾನಗಳು ಸಾಕು. ತನ್ನ ಹಾಗೂ ಇತರ ಪಕ್ಷದ ಬಂಡಾಯ ಅಭ್ಯರ್ಥಿಗಳು ಹಾಗೂ ಪಕ್ಷೇತರರನ್ನು ತನ್ನೆಡೆಗೆ ಸೆಳೆಯುವುದು ಬಿಜೆಪಿಗೆ ಕಷ್ಟವಾಗದು. ಆಗ ಸರಳ ಬಹುಮತಕ್ಕೆ ಇರುವ ಕೊರತೆ ಸರಳವಾಗಿಯೇ ನಿವಾರಣೆಯಾಗುತ್ತದೆ.

ಇವೆಲ್ಲ ಲಕ್ಷಣಗಳನ್ನು ನೋಡಿದರೆ, ರಾಜ್ಯಕ್ಕೆ ಈ ಬಾರಿ ಅತಂತ್ರ ವಿಧಾನಸಭೆ ಬೆದರಿಕೆ ಕಾಡುವುದಿಲ್ಲ. ಸ್ಪಷ್ಟ ಬಹುಮತ ಇಲ್ಲದಿದ್ದರೂ ಸರಳ ಬಹುಮತಕ್ಕೆ ಮೋಸವಿಲ್ಲ. ಬಿ.ಎಸ್‌. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಎಂದು ಬಿಂಬಿಸಿರುವುದರಿಂದ, ಆ ಗೊಂದಲವೂ ನಿವಾರಣೆಯಾಗಿದೆ. ರಾಜಕೀಯ ಪಂಡಿತರ ಲೆಕ್ಕಾಚಾರ, ಭವಿಷ್ಯ, ಊಹಾಪೋಹಗಳನ್ನು ಮೀರಿ ಮತದಾರ ಬಿಜೆಪಿ ಪರ ನಿಂತಿದ್ದಾನೆ.

ಇದು ಇವತ್ತಿನ ಪರಿಸ್ಥಿತಿ.

ಮಾಧ್ಯಮದ ಮೇಲೆ ಆರೋಪ

ಹಲವಾರು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಅಗತ್ಯ. ಮೊದಲನೆಯದು, ಮಾಧ್ಯಮಗಳು ಬಿಜೆಪಿ ಪರ ನಿಂತವು ಎಂಬ ಆರೋಪದ ಬಗ್ಗೆ:

ಪತ್ರಿಕೆಗಳು ಹಾಗೂ ಪತ್ರಕರ್ತರು ಒಂದು ಪಕ್ಷ ಅಥವಾ ನಾಯಕನ ಪರ ನಿಲ್ಲುವುದು ಮೊದಲಿನಿಂದಲೂ ನಡೆದೇ ಇದೆ. ಆದರೆ, ಬಿಜೆಪಿಗೆ ’ಇದು ನಮ್ಮ ಪತ್ರಿಕೆ’ ಎಂಬ ಭಾವನೆ ಹುಟ್ಟಿಸಿದ ಪತ್ರಿಕೆಗಳು ಸದ್ಯಕ್ಕೆ ಯಾವೂ ಇಲ್ಲ. ಸಂಯುಕ್ತ ಕರ್ನಾಟಕ ಕಾಂಗ್ರೆಸ್‌ ಪರ. ಅದು ಬಹಿರಂಗವಾಗಿಯೇ ಕಂಡು ಬರುವಂಥದ್ದು. ಸ್ವಲ್ಪ ಮಟ್ಟಿಗೆ ವಿಜಯ ಕರ್ನಾಟಕ ಬಿಜೆಪಿ ಪರ ನಿಂತಿರುವುದೂ ಹೌದು. ಪ್ರಜಾವಾಣಿ ಇದ್ದುದರಲ್ಲಿಯೇ ನಿರ್ಲಿಪ್ತ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ, ಕನ್ನಡಪ್ರಭ ಕೊಂಚ ಮಟ್ಟಿಗೆ ಜೆಡಿಎಸ್‌ ಪರ ವಾಲಿದ್ದು ಸ್ವಯಂಗೋಚರ.

ಆದರೆ, ಯಾವ ಪತ್ರಿಕೆಯೂ ಬಿಜೆಪಿ ಪರ ಬಹಿರಂಗ ಪ್ರಚಾರ ನಡೆಸಿಲ್ಲ. ಅದೇ ರೀತಿ ದೃಶ್ಯ ಮಾಧ್ಯಮಗಳೂ ಪಕ್ಷ ನಿಷ್ಠೆ ವ್ಯಕ್ತಪಡಿಸಿಲ್ಲ. ಅಂಥದೊಂದು ಒಳ ಒಪ್ಪಂದ ಆದ ಹಾಗೂ ಕಂಡಿಲ್ಲ. ಚುನಾವಣೆ ಹತ್ತಿರ ಬಂದಾಗ, ಎಲ್ಲ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ಸಾರ್ವತ್ರಿಕ ಗೊಂದಲವನ್ನೇ ಬಿಂಬಿಸಿದವು. ಈ ಸಾರಿಯೂ ಅತಂತ್ರ ವಿಧಾನಸಭೆಯೇ ಬರಬಹುದು ಎಂದು ಅನುಮಾನ ವ್ಯಕ್ತಪಡಿಸಿದವು. ಬಿಜೆಪಿಗೆ ಸಹಾನುಭೂತಿ ವ್ಯಕ್ತವಾಗುತ್ತದಾದರೂ, ಅದು ಸರಳ ಬಹುಮತ ಗಳಿಸಿ ಕೊಡಲಾರದು ಎಂದೇ ಹೇಳಿದ್ದವು.

ಈ ನಿಟ್ಟಿನಲ್ಲಿ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ವಾಸ್ತವವನ್ನೇ ಬಿಂಬಿಸುತ್ತ ಬಂದಿವೆ. ಅಲ್ಲಲ್ಲಿ ಪಕ್ಷ ನಿಷ್ಠೆ ಹಾಗೂ ನಾಯಕ ನಿಷ್ಠೆ ಕಂಡಿದೆಯಾದರೂ ಅದು ಮತದಾರರನ್ನು ಪ್ರಭಾವಗೊಳಿಸುವ ಮಟ್ಟಿಗಂತೂ ಇದ್ದಿಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ಅಂಥದ್ದೊಂದು ಪ್ರಭಾವ ಬೀರಬಲ್ಲ ಮಾಧ್ಯಮವೂ ಇಲ್ಲ. ಪತ್ರಿಕೆಗಳ ಸಂಖ್ಯೆ, ಚಾನೆಲ್‌ಗಳ ಸಂಖ್ಯೆ ಹೆಚ್ಚಾದಂತೆ, ಪಕ್ಷ ನಿಷ್ಠೆ ಹರಿದು ಹಂಚಿಹೋಗಿದೆ. ಒಂದು ವೇಳೆ ಯಾವುದೇ ಪತ್ರಿಕೆ ಅಥವಾ ಚಾನೆಲ್‌ ಬಯಸಿದರೂ, ಅಂಥದೊಂದು ಪ್ರಭಾವ ವಲಯವನ್ನು ಸೃಷ್ಟಿಸಲಾರದು. ಇದು ಮಾಧ್ಯಮದ ಮಿತಿ.

ಒಬ್ಬ ಪತ್ರಕರ್ತನಾಗಿ ನಾನು ಮಾಧ್ಯಮಗಳ ಪರ ಮಾತನಾಡುತ್ತಿಲ್ಲ. ವಾಸ್ತವ ಏನಿದೆ ಎಂಬುದನ್ನು ಹೇಳುತ್ತಿದ್ದೇನೆ. ರಂಜನೀಯ ವರದಿಗಳು, ವಿಶೇಷ ವರದಿಗಳು ಹಾಗೂ ಸಂವಾದ ಕಾರ್ಯಕ್ರಮಗಳ ಹೊರತಾಗಿಯೂ ಮತದಾರ ತನಗನಿಸಿದ್ದನ್ನು ಮಾಡಬಲ್ಲ ಎಂಬುದಕ್ಕೆ ಚುನಾವಣೆ ಸಾಕ್ಷಿ. ಅಂತಿಮವಾಗಿ, ಒಂದು ಚುನಾವಣೆಯನ್ನು ಗೆಲ್ಲಿಸುವುದು ಆಯಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನೇ ಹೊರತು, ವರದಿಗಾರರೂ ಅಲ್ಲ, ಮಾಧ್ಯಮವೂ ಅಲ್ಲ, ಪಕ್ಷದ ನಾಯಕನೂ ಅಲ್ಲ. ಕಾರ್ಯಕರ್ತ ಪ್ರೇರಿತನಾಗಿದ್ದರೆ, ಆತ ಮಾಡಬಹುದಾದ ಅಪೂರ್ವ ಕೆಲಸವನ್ನು ಮಾಧ್ಯಮಗಳು ಮಾಡಲಾರವು. ಅದು ಸತ್ಯ.

ಈ ಚುನಾವಣೆ ಇಂತಹ ಹಲವಾರು ವಾಸ್ತವ ಸಂಗತಿಗಳನ್ನು ಬಯಲಿಗೆ ತಂದಿದೆ.

ಜೆಡಿಎಸ್‌ನ ಅಧೋಗತಿ

ಎರಡನೆಯದು ಜೆಡಿಎಸ್‌ನ ಸ್ಥಿತಿ.

ಆ ಪಕ್ಷ ತಾನು ಆಡಿದ್ದೇ ಆಟ ಎಂದು ಭಾವಿಸಿಕೊಂಡಿತ್ತು. ಜೆಡಿಎಸ್‌ನವರು ಅದಕ್ಕೆ ತಕ್ಕಂತೆ ನಡೆದೂಕೊಂಡಿದ್ದೂ ಆಯಿತು. ಪಕ್ಷವನ್ನು ಸ್ವಂತ ಆಸ್ತಿ ಎಂಬಂತೆ ನಡೆದುಕೊಂಡ ಎಚ್‌.ಡಿ. ದೇವೇಗೌಡರ ಮಾತೇ ಅಲ್ಲಿ ಅಂತಿಮ. ಉಳಿದವರು ಅದನ್ನು ಒಪ್ಪಬೇಕು ಇಲ್ಲವೆ ಹೊರನಡೆಯಬೇಕು ಎಂಬಂಥ ವಾತಾವರಣ ನಿರ್ಮಾಣವಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಅದೆಲ್ಲ ನಡೆಯಬಹುದು. ಆದರೆ, ಚುನಾವಣೆ ಎಂಬುದು ಎಲ್ಲ ಅನಿವಾರ್ಯತೆಗಳನ್ನು ಹೋಗಲಾಡಿಸುವಂಥ ಸಮಯ.

ಹೀಗಾಗಿ, ಚುನಾವಣೆ ಘೋಷಣೆಯಾದಂತೆ, ಜೆಡಿಎಸ್‌ನ ಭ್ರಮೆಗಳು ಒಂದೊಂದಾಗಿ ಕರಗತೊಡಗಿದವು. ಅದರ ಹಿರಿಯ ನಾಯಕರು ಪಕ್ಷ ತೊರೆದು ಹೋದರು. ಅದೇ ರೀತಿ, ಟಿಕೆಟ್‌ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇತರ ಪಕ್ಷಗಳ ನಾಯಕರು ಜೆಡಿಎಸ್‌ ಕಡೆ ಬಂದರು. ತಮ್ಮ ಜೊತೆಗೆ ಚುನಾವಣೆ ಗೆಲ್ಲಬಲ್ಲ ಪ್ರಭಾವವೂ ಬರುತ್ತದೆ ಎಂದು ವಲಸೆ ನಾಯಕರು ಭ್ರಮೆ ಇಟ್ಟುಕೊಂಡಿದ್ದರು. ಅದು ನಡೆಯುವುದಿಲ್ಲ ಎಂಬುದನ್ನು ಪ್ರಾಥಮಿಕ ಸಮೀಕ್ಷೆ ಈಗ ಸ್ಪಷ್ಟಪಡಿಸಿದೆ.

ಅದಕ್ಕೇ ಇರಬೇಕು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಹೇಳಿಕೆ ನೀಡಿದ್ದು. ಬಿಜೆಪಿ ಜೊತೆ ಯಾವ್ಯಾವ ಪತ್ರಕರ್ತರು ಒಪ್ಪಂದ ಮಾಡಿಕೊಂಡಿದ್ದಾರೆ, ಎಷ್ಟು ಹಣ ಪಡೆದಿದ್ದಾರೆ ಎಂಬುದನ್ನು ಪಾರ್ಟಿ ಏರ್ಪಡಿಸಿ ವಿವರಿಸುತ್ತೇನೆ ಎಂದಿದ್ದಾರೆ. ಒಂದು ವೇಳೆ ಸಮೀಕ್ಷಾ ವರದಿ ಜೆಡಿಎಸ್‌ ಮುನ್ನಡೆ ಸೂಚಿಸಿದ್ದರೆ, ಕುಮಾರಸ್ವಾಮಿ ಇಂಥ ಮಾತನ್ನು ಹೇಳುತ್ತಿರಲಿಲ್ಲ. ಇದು ಸೋಲುವವನ ಹತಾಶ ಕೂಗಾಗುತ್ತದೆಯೇ ಹೊರತು ಸತ್ಯವಾಗದು.

ಮಾಧ್ಯಮಗಳು ವರದಿ ಮಾಡಿದ್ದು ಜೆಡಿಎಸ್‌ನ ಅನಾಚಾರವನ್ನು. ವಚನಭ್ರಷ್ಟತೆಯನ್ನು. ಎಡಬಿಡಂಗಿತನವನ್ನು. ಏಕವ್ಯಕ್ತಿ ಸಿದ್ಧಾಂತವನ್ನು. ಕುಟುಂಬ ರಾಜಕಾರಣವನ್ನು. ಅದೇ ರೀತಿ, ಮಾಧ್ಯಮಗಳು ಬಿಜೆಪಿಯ ಬಂಡವಾಳವನ್ನೂ ಬಯಲಿಗಿಟ್ಟಿವೆ. ಮುಖ್ಯಮಂತ್ರಿಯಾಗಬೇಕು ಎಂಬ ಒಂದೇ ತಪನೆಯಿಂದ ಇಡೀ ಪಕ್ಷವನ್ನೇ ಅಡ ಇಡಲು ಮುಂದಾಗಿದ್ದ ಯಡಿಯೂರಪ್ಪನವರ ಕ್ರಮವನ್ನು ಕಟುವಾಗಿ ಟೀಕಿಸಿವೆ. ಒಬ್ಬ ಶೋಭಾ ಕರಂದ್ಲಾಜೆಗಾಗಿ ಅವರು ಬಡಿದಾಡಿದ ಬಡಿವಾರವನ್ನು ಬಯಲು ಮಾಡಿವೆ. ಅದೇ ರೀತಿ, ಕಾಂಗ್ರೆಸ್‌ನ ಸೋಮಾರಿತನವನ್ನು, ಯಾವತ್ತೂ ಜನರೊಂದಿಗೆ ಬೆರೆಯದ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಡಂಬಾಚಾರವನ್ನು, ದೂರದೃಷ್ಟಿಯೇ ಇಲ್ಲದ ಧರಂ ಸಿಂಗ್‌ ಹಾಗೂ ಮಲ್ಲಿಕಾರ್ಜುನ ಖರ್ಗೆಯವರನ್ನೂ ಟೀಕಿಸಿವೆ.

ಅಷ್ಟೇ ಏಕೆ? ಸಜ್ಜನ, ಸಂಸ್ಕಾರವಂತ ಎಂದೆಲ್ಲ ’ಅಪವಾದ’ ಹೊತ್ತಿರುವ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ ಅವರ ಸೈದ್ಧಾಂತಿಕ ದಿವಾಳಿತನವನ್ನೂ ಮಾಧ್ಯಮಗಳು ಬಯಲಿಗಟ್ಟಿವೆ. ಬಿಜೆಪಿ ಅಥವಾ ಕಾಂಗ್ರೆಸ್‌ನಲ್ಲಿ, ಯಾರೊಬ್ಬರು ಕರೆದರೂ ಹೋಗುತ್ತೇನೆ ಎಂಬ ಹೇಳಿಕೆ ನೀಡಿದ್ದ ಪ್ರಕಾಶ್‌ ಅವರಲ್ಲಿ ಯಾವ ಆದರ್ಶಗಳಿವೆ? ಸ್ವಂತ ಜಿಲ್ಲೆ ಬಳ್ಳಾರಿಯಲ್ಲಿ ಅವರು ಏಕೆ ವಿಫಲರಾಗುತ್ತ ಬಂದಿದ್ದಾರೆ? ತಾವು ಸಚಿವರಾಗಿದ್ದ ಅವಧಿಯಲ್ಲಿ ಪ್ರಕಾಶ್‌ ಮಾಡಿರುವ ಸಾಧನೆಗಳಾದರೂ ಏನು? ಅವಕಾಶವಾದಿತನವನ್ನು ದೇವೇಗೌಡರು ಬಹಿರಂಗವಾಗಿ ಮಾಡುತ್ತ ಬಂದಿದ್ದರೆ, ಎಂ.ಪಿ. ಪ್ರಕಾಶ್‌ ಅದನ್ನೇ ಸಂಸ್ಕಾರದ ಸೋಗಿನಲ್ಲಿ ಮಾಡುತ್ತ ಬಂದಿದ್ದಾರೆ. ಇಬ್ಬರಿಗೂ ಅಂತಹ ವ್ಯತ್ಯಾಸವೇನಿಲ್ಲ.

ಈ ಸಲದ ಚುನಾವಣೆ ಇಂತಹ ಎಲ್ಲರ ಢೋಂಗಿತನವನ್ನು ಬಯಲಿಗೆ ಎಳೆದಿದೆ. ಎಲ್ಲ ಪಕ್ಷಗಳೂ ಅಷ್ಟೇ ಕೆಟ್ಟಿವೆ ಎಂಬುದನ್ನು ಸ್ಪಷ್ಟಪಡಿಸಿವೆ.

ಜನಾದೇಶ ಬಿಜೆಪಿ ಪರ ಅಲ್ಲ

ಮೂರನೆಯದಾಗಿ, ಬಿಜೆಪಿಗೆ ಬಹುಮತ ಬರುತ್ತದಾದರೆ, ಆ ಪಕ್ಷ ಚೆನ್ನಾಗಿದೆ ಎಂಬ ಕಾರಣಕ್ಕಂತೂ ಖಂಡಿತ ಅಲ್ಲ. ಅದಕ್ಕೂ ಒಂದು ಅವಕಾಶ ಕೊಟ್ಟು ನೋಡೋಣ ಎಂಬ ಪ್ರಯೋಗಶೀಲತೆಯಿಂದ. ಅಧಿಕಾರ ಎಂದರೆ ಯಡಿಯೂರಪ್ಪನವರಿಗೆ ಎಷ್ಟು ಪ್ರೀತಿ ಎಂಬುದನ್ನು ಮತದಾರ ಬಲ್ಲ. ಅದಕ್ಕಾಗಿ, ಅವರು ಎಷ್ಟು ಬಾಗಬೇಕೋ ಅಷ್ಟೂ ಬಾಗಿದ್ದಾರೆ, ಜಾಡಿಸಿ ಒದ್ದ ಮೇಲೂ ಮತ್ತೆ ಮತ್ತೆ ಬಾಗಿದ್ದಾರೆ. ಇನ್ನು ಕೆಲಸವಾಗದು ಎಂದು ಸ್ಪಷ್ಟವಾದ ಮೇಲಷ್ಟೇ ಅವರು ಎದ್ದು ಚುನಾವಣೆಗೆ ಸಜ್ಜಾಗಿದ್ದು. ಅವರಿಂದಲೂ ಜನರಿಗೆ ಹೆಚ್ಚಿನ ನಿರೀಕ್ಷೆಗಳೇನಿಲ್ಲ. ಆದರೆ, ಅತಂತ್ರ ವಿಧಾನಸಭೆ ಬಂದರೆ, ಹೆಚ್ಚಿನ ಕಷ್ಟ ನಮಗೇ ಎಂಬ ಅರಿವಿನಿಂದಾಗಿ, ಇದುವರೆಗೆ ಅಧಿಕಾರಕ್ಕೆ ಬಂದಿರದ ಪಕ್ಷಕ್ಕೊಂದು ಅವಕಾಶ ಕೊಟ್ಟು ನೋಡೋಣ ಎಂದು ಬಿಜೆಪಿ ಬೆಂಬಲಿಸಿದ್ದಾರೆ. ಅಷ್ಟೇ.

ಹೀಗಾಗಿ, ಇದು ಯಾವ ಪಕ್ಷದ ವಿಜಯವೂ ಅಲ್ಲ. ಈ ಜನಾದೇಶ ಶಾಶ್ವತವೂ ಅಲ್ಲ. ಒಂದು ವೇಳೆ ಹಿಂದೆಯೇ ಲೋಕಸಭಾ ಚುನಾವಣೆಗಳು ಬಂದರೆ, ಆಗ ಲೆಕ್ಕಾಚಾರ ಖಂಡಿತ ಬದಲಾಗುತ್ತದೆ. ಗೆದ್ದ ಪಕ್ಷ, ಇದು ತನ್ನ ಸ್ವಂತ ವಿಜಯ ಎಂದು ಬೀಗುವಂತಿಲ್ಲ. ಸೋತ ಪಕ್ಷಗಳು, ಇದು ನಮ್ಮ ಸೋಲು ಎಂದು ನಿರಾಶರಾಗಬೇಕಿಲ್ಲ. ಇದು ಇವತ್ತಿನ ಸಂದರ್ಭಕ್ಕೆ ಮಾತ್ರ ನೀಡಲಾದ ಜನಾದೇಶ.

ಮತದಾರನ ಎಚ್ಚರಿಕೆ

ಇದರ ಜೊತೆಗೆ, ಈ ಸಲದ ಚುನಾವಣೆ ಹಲವಾರು ಸಂದೇಶಗಳನ್ನೂ ರವಾನಿಸಿದೆ.

  • ಅಧಿಕಾರದ ಹಪಾಹಪಿಯ ಬಹಿರಂಗ ಪ್ರದರ್ಶನ ಮತದಾರನಿಗೆ ಇಷ್ಟವಾಗುವುದಿಲ್ಲ. ರಾಜಕೀಯ ಪಕ್ಷಗಳಿಗೆ ಅಧಿಕಾರವೇ ಪರಮಧ್ಯೇಯ ಎಂದಾದರೆ, ನಮ್ಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರು? ಎಂಬ ಪ್ರಶ್ನೆ ಅವರಲ್ಲಿ ಏಳುತ್ತದೆ. ಆಗ, ಪಕ್ಷ ಪ್ರೀತಿ ಹೊರಟುಹೋಗಿ, ಮತದಾರ ಕೂಡ ರಾಜಕೀಯ ನೇತಾರರಂತೆ ವ್ಯವಹಾರ ಬುದ್ಧಿ ಬೆಳೆಸಿಕೊಳ್ಳುತ್ತಾನೆ. ಆಗ ರಾಜಕೀಯ ಪಕ್ಷಗಳಿಗೆ ಆತನನ್ನು ವಂಚಿಸುವುದು, ಸುಳ್ಳು ಭರವಸೆ ಕೊಟ್ಟು ನಂಬಿಸುವುದು ಕಷ್ಟವಾಗುತ್ತದೆ. ಈ ಸಲ ಆಗಿರುವುದೇ ಅದು.
  • ಚುನಾವಣಾ ಆಯೋಗದ ಬಿಗಿ ಕ್ರಮದಿಂದಾಗಿ, ಮತದಾರನ ಮೇಲೆ ’ವಾತ್ಸಲ್ಯ’ ತೋರಿಸುವುದು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಆದರೆ, ತುಂಬ ಜನ ಮತದಾರರು ಇದನ್ನು ಅರ್ಥ ಮಾಡಿಕೊಂಡಿಲ್ಲ. ಬೇಕಂತಲೇ ರಾಜಕೀಯ ಪಕ್ಷಗಳು ನಮ್ಮನ್ನು ನಿರ್ಲಕ್ಷ್ಯಸಿವೆ. ಅಧಿಕಾರದಲ್ಲಿ ಇದ್ದಾಗಂತೂ ಸರಿಯಾಗಿ ಕೆಲಸ ಮಾಡಿಲ್ಲ. ಚುನಾವಣೆ ಸಮಯದಲ್ಲಾದರೂ ಕೈಬಿಚ್ಚಿ ಕೊಡಲು ಏನು ರೋಗ ಎಂದು ಭಾವಿಸಿದ್ದಾರೆ. ಹೀಗಾಗಿ, ಮತದಾನ ಮಾಡುವ ಉತ್ಸಾಹ ಕಡಿಮೆಯಾಗಿದೆ. ಚುನಾವಣೆಯಿಂದ ಚುನಾವಣೆಗೆ ಆಯೋಗದ ಹಿಡಿತ ಬಿಗಿಯಾಗುತ್ತ ಹೋಗುತ್ತಿದ್ದು, ಆಮಿಷ ಒಡ್ಡಿ ಮತದಾರರನ್ನು ಸೆಳೆಯುವುದು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗದು. ಹೀಗಾಗಿ, ಕೆಲಸಗಳ ಮೂಲಕವೇ ಆತನನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಉಂಟಾಗಿದೆ.
  • ಯಾವ ಪಕ್ಷಕ್ಕೂ ಮತದಾರ ನಿಷ್ಠೆ ವ್ಯಕ್ತಪಡಿಸಿಲ್ಲ. ಎಲ್ಲ ಪಕ್ಷಗಳ ಬಗ್ಗೆಯೂ ಆತನಿಗೆ ಒಂದೇ ತೆರನಾದ ನಿರ್ಲಕ್ಷ್ಯ ಅಥವಾ ತಿರಸ್ಕಾರ. ಎಲ್ಲರೂ ತಂತಮ್ಮ ಹಿತವನ್ನಷ್ಟೇ ನೋಡಿಕೊಳ್ಳುವವರು ಎಂಬ ತಾತ್ಸಾರ. ಹೀಗಾಗಿ, ಜನಪರ ಕೆಲಸಗಳ ಮೂಲಕ ಮಾತ್ರ, ಜನರ ವಿಶ್ವಾಸ ಉಳಿಸಿಕೊಳ್ಳಬಹುದೇ ಹೊರತು ಭಾಷಣ ಅಥವಾ ಪತ್ರಿಕಾ ಹೇಳಿಕೆಗಳಿಂದ ಸಾಧ್ಯವಿಲ್ಲ.
  • ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಮತದಾರ ಜಾಗೃತನಾಗಿದ್ದಾನೆ. ಅದರಲ್ಲೂ ಮೊದಲ ಬಾರಿ ಮತದಾನ ಮಾಡುತ್ತಿರುವವರು ನಿಜಕ್ಕೂ ಜಾಗೃತ ಮತದಾರರು. ತಮ್ಮ ಕ್ಷೇತ್ರದ ಅಭಿವೃದ್ಧಿ ಏಕೆ ಆಗಿಲ್ಲ? ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ. ಅಧಿಕಾರದಲ್ಲಿದ್ದಾಗ ನೀವೇನು ಮಾಡಿದಿರಿ? ಎಂಬ ಪ್ರಶ್ನೆಗಳು ಕೇಳಿ ಬರತೊಡಗಿವೆ. ಆರಿಸಿ ತಂದರೆ ಏನು ಮಾಡಬಲ್ಲಿರಿ? ಎಂಬ ವಿಚಾರಣೆ ಶುರುವಾಗಿದೆ. ಇದು ಹೊಸ ಬೆಳವಣಿಗೆ. ಬಹುಶಃ ಮಾಧ್ಯಮಗಳ ವಿಸ್ತರಣೆಯಿಂದ ಮೂಡಿರುವ ಅರಿವಿದು.
  • ಎಲ್ಲಕ್ಕಿಂತ ಮುಖ್ಯ: ಮಾಧ್ಯಮಗಳನ್ನು ಮತದಾರ ಪೂರ್ತಿಯಾಗಿ ನಂಬದಿರುವುದು. ಪತ್ರಿಕೆಗಳು ಹಾಗೂ ಟಿವಿಗಳಿಂದ ಆತ ತನಗೆ ಬೇಕಾದ ಮಾಹಿತಿಯನ್ನು ಪಡೆಯುತ್ತಾನೆಯೇ ಹೊರತು, ಅವು ಹೇರುವ ಅಭಿಪ್ರಾಯಗಳನ್ನಲ್ಲ. ’ಮಾಧ್ಯಮಗಳಲ್ಲಿ ಕೆಲಸ ಮಾಡುವವರೂ ಮನುಷ್ಯರು ತಾನೆ? ಅವರು ಆಮಿಷಕ್ಕೆ ಒಳಗಾಗಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ?’ ಎಂಬ ಅಭಿಪ್ರಾಯಗಳೂ ಬಹಳಷ್ಟು ಕಡೆ ಕೇಳಿ ಬಂದಿವೆ. ನೀವು ಪತ್ರಕರ್ತರು ದುಡ್ಡು ಕೊಟ್ಟವರ ಪರ ಬರೆಯುತ್ತೀರಿ ಎಂದು ಜನ ಆರೋಪಿಸುತ್ತಿದ್ದುದನ್ನು ಬಹಳ ಸಾರಿ ನಾನೇ ಕೇಳಿದ್ದೇನೆ. ಅದು ಸತ್ಯವೂ ಹೌದು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪತ್ರಿಕಾಗೋಷ್ಠಿಗಳು ರಂಗಾದಷ್ಟು ಬೇರೆ ಯಾವ ಅವಧಿಯಲ್ಲೂ ಆಗಲಿಲ್ಲ. ಪತ್ರಕರ್ತನ ನಿಷ್ಠೆ ಈ ಪರಿ ಖರೀದಿಯಾದ ಉದಾಹರಣೆಗಳು ಹಿಂದೆ ಯಾವತ್ತೂ ಸಿಗಲಿಕ್ಕಿಲ್ಲ.

ಆದರೆ, ಮತದಾರ ರಾಜಕೀಯ ಪಕ್ಷಗಳು, ಮಾಧ್ಯಮಗಳು ಹಾಗೂ ಭವಿಷ್ಯವಾದಿಗಳ ಲೆಕ್ಕಾಚಾರವನ್ನು ಒಂದೇ ಹೊಡೆತಕ್ಕೆ ತಲೆ ಕೆಳಗಾಗಿಸಿದ್ದಾನೆ. ಹೀಗಾಗಿ, ಈ ಸಲದ ಚುನಾವಣೆಯ ಗೆಲುವು ಆತನದೇ.

- ಚಾಮರಾಜ ಸವಡಿ

http://chamarajsavadi.blogspot.com

ಮೊದಲ ಹಂತದ ಚುನಾವಣೆಯ ಮುನ್ಸೂಚನೆ

12 May 2008

2 ಪ್ರತಿಕ್ರಿಯೆ
ಸ್ನೇಹಿತರೇ,

ಮೊದಲ ಹಂತದ ಚುನಾವಣೆ ಮುಗಿದಿದೆ. ಶಾಂತಿಯುತವಾಗಿ ಮುಗಿದಿದೆ ಎಂಬ ಸಮಾಧಾನ ಒಂದೆಡೆಯಾದರೆ, ಮತದಾನ ಪ್ರಮಾಣ ಕಡಿಮೆಯಾಗಿದ್ದರೂ, ತಕ್ಕ ಮಟ್ಟಿಗೆ ವಿವೇಚನೆಯುಳ್ಳ ಮತದಾರರು ಪಾಲ್ಗೊಂಡಿದ್ದರು ಎಂಬ ಸಮಾಧಾನ ಇನ್ನೊಂದೆಡೆ.

ಇದಕ್ಕೆ ಹಲವಾರು ಕಾರಣಗಳಿವೆ.

ಮೊದಲನೆಯದಾಗಿ ಚುನಾವಣಾ ಆಯೋಗ ಕೈಗೊಂಡಿದ್ದ ಕಟ್ಟುನಿಟ್ಟಿನ ಕ್ರಮಗಳು. ಚುನಾವಣೆ ಪ್ರಕ್ರಿಯೆ ಘೋಷಣೆಯಾದ ಕೂಡಲೇ ರಾಜ್ಯದ ವಿವಿಧೆಡೆ ಕೈಗೊಂಡ ಭದ್ರತಾ ಕ್ರಮಗಳಿಂದಾಗಿ ಕೋಟ್ಯಂತರ ರೂಪಾಯ ಮೌಲ್ಯದ ಮದ್ಯ, ಮತದಾರರಿಗೆ ಹಂಚಲು ತಂದಿದ್ದ ಸೀರೆಗಳು, ಬಟ್ಟೆ-ಬರೆಗಳು, ಪಾತ್ರೆ ಪಡಗಗಳು, ಟಿವಿ, ಕೈಗಡಿಯಾರ ಇತ್ಯಾದಿ ವಸ್ತುಗಳ ಜೊತೆಗೆ ವಾಹನಗಳು ಹಾಗೂ ನಗದನ್ನು ಸಹ ವಶಪಡಿಸಿಕೊಳ್ಳಲಾಯಿತು. ಇದರಿಂದ ಬೆದರಿದ ರಾಜಕೀಯ ಪಕ್ಷಗಳು ಹಾಗೂ ಉಳ್ಳ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡಲು ಹಿಂದೆಮುಂದೆ ನೋಡುವಂತಾಯಿತು.

ಎರಡನೆಯದಾಗಿ, ಪ್ರತಿ ಸಲ ಚುನಾವಣೆಯಲ್ಲಿ ದೊರೆಯುತ್ತಿದ್ದ ಉಚಿತ ಊಟ, ಬಟ್ಟೆ-ಬರೆ, ಮದ್ಯ ಹಾಗೂ ಹಣ ಈ ಸಲ ಸಿಗದಿದ್ದರಿಂದ ಬಡ ಹಾಗೂ ಅಶಿಕ್ಷಿತ ಮತದಾರರ ಪೈಕಿ ಬಹಳಷ್ಟು ಜನ ಮತದಾನ ಮಾಡಿಲ್ಲ. ಆದರೆ, ಮತದಾನದ ಮಹತ್ವ ಕುರಿತು ಸಾಕಷ್ಟು ಪ್ರಚಾರ ನಡೆದಿದ್ದರಿಂದ ವಿದ್ಯಾವಂತ ಹಾಗೂ ಇದೇ ಮೊದಲ ಬಾರಿ ಮತದಾನದ ಅರ್ಹತೆ ಪಡೆದಿದ್ದ ಯುವ ಜನಾಂಗ ದೊಡ್ಡಪ್ರಮಾಣದಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತು.

ಹೀಗಾಗಿ, ಒಟ್ಟಾರೆ ಮತದಾನ ಪ್ರಮಾಣದಲ್ಲಿ ಗಮನಾರ್ಹ ವ್ಯತ್ಯಾಸ ಇಲ್ಲದಿದ್ದರೂ, ಆಗಿರುವ ಮತದಾನದ ಪೈಕಿ ಪ್ರಜ್ಞಾವಂತರ, ವಿದ್ಯಾವಂತರ ಪಾಲು ದೊಡ್ಡದಿದೆ ಎಂಬುದು ಸಮಾಧಾನದ ಸಂಗತಿ. ಇದರ ನೇರ ಪರಿಣಾಮ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಮೇಲೆ ಆಗಲಿದೆ ಎನ್ನಬಹುದು.

ಏಕೆಂದರೆ, ಇದುವರೆಗಿನ ಅನುಭವದ ಪ್ರಕಾರ, ವಿದ್ಯಾವಂತರು ಬಿಜೆಪಿ ಬೆಂಬಲಿಸುವುದು ಹೆಚ್ಚು. ಅದು ಸತ್ಯ ಎನ್ನುವುದಾದರೆ, ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ ಖಂಡಿತ ಮುನ್ನಡೆ ಸಾಧಿಸಲಿದೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬರಲಿದೆ ಎಂಬುದು ಒಂದು ಅಂದಾಜು.

ಇದು ದೂರದಲ್ಲಿರುವ ಎಲ್ಲ ಕನ್ನಡಿಗರ ಗಮನಕ್ಕೆ ಎಂದು ಬರೆದಿದ್ದೇನೆ. ಉಳಿದಿದ್ದನ್ನು ನೀವೇ ಬಲ್ಲಿರಿ. ಅಲ್ಲವೆ?

- ಚಾಮರಾಜ ಸವಡಿ
(ನನ್ನ ಬ್ಲಾಗ್‌: http://chamarajsavadi.blogspot.com)

ಡ್ರೈವರ್‌ ಎಂಬ ಆಪತ್ಬಾಂಧವ

9 May 2008

2 ಪ್ರತಿಕ್ರಿಯೆ

ಆಗಿನ್ನೂ ಚುಮು ಚುಮು ಬೆಳಕು.

ಬೆಂಗಳೂರಿನಿಂದ ರಾತ್ರಿ ಹೊರಟ ಬಸ್ಸಿಗೆ ಆದಷ್ಟು ಬೇಗ ಕೊಪ್ಪಳ ಸೇರುವ ತವಕ. ಅದು ಬೆಂಗಳೂರು-ಯಲಬುರ್ಗಾ ಬಸ್‌. ಚಾಲಕ ಮೂವತ್ತೈದರ ಹರೆಯದ ಯುವಕ. ಬಸ್‌ ಕೂಡ ಹರೆಯದ್ದೇ.

ರಾತ್ರಿ ಹತ್ತು ಗಂಟೆಯ ಸುಮಾರು ಬೆಂಗಳೂರಿನ ಬಸ್‌ ನಿಲ್ದಾಣದಲ್ಲಿ ಬಸ್‌ ಏರಿದಾಗ ಡ್ರೈವರ್‌ ಇನ್ನೂ ಬಂದಿರಲಿಲ್ಲ. ಕೊಂಚ ಹೊತ್ತು ಕಾದಂಬರಿಯೊಂದನ್ನು ಓದುತ್ತಾ ಕುಳಿತೆ. ಡ್ರೈವರ್‌ ಬಂದ. ಕಂಡಕ್ಟರ್‌ ರೈಟ್‌ ಎಂದು ಕೂಗಿದ ಕೂಡಲೇ ಗುರುಗುಡುತ್ತಿದ್ದ ಬಸ್‌ನ ಗೇರ್‌ ಮೇಲಿನ ಕಾಲನ್ನು ತೆಗೆದವನೇ ಆಕ್ಸಿಲೇಟರ್‌ ಒತ್ತಿದ. ಏಟು ತಿಂದ ಬೆಕ್ಕಿನಂತೆ ಚೆಂಗನೇ ಮುಲುಗಿದ ಬಸ್ಸು ಸ್ಟ್ಯಾಂಡ್‌ನ ಆ ಮಹಾ ಸಂದಣಿಯಲ್ಲಿ ದಾರಿ ಸಿಕ್ಕ ಕಡೆ ನುಗ್ಗತೊಡಗಿತು.

ನನಗೆ ಗಾಬರಿಯಾಯಿತು. ಇನ್ನೂ ಎಂಟು ಗಂಟೆಗಳ ಕಾಲ ಬಸ್ಸಿನಲ್ಲಿ ಕೂತಿರಬೇಕು. ಈ ಮನುಷ್ಯ ನೋಡಿದರೆ ಲೋಡ್‌ ಆಗಿ ಬಂದವನಂತೆ ಕಾಣುತ್ತಾನೆ. ಇನ್ನು ೪೨೫ ಕಿಮೀ ಹೇಗೆ ಓಡಿಸುತ್ತಾನೋ ಎಂದು ಚಿಂತಿತನಾದೆ. ಬಸ್‌ ಅಷ್ಟೊತ್ತಿಗಾಗಲೇ ಬಸ್‌ಸ್ಟ್ಯಾಂಡ್‌ನಿಂದ ಹೊರಗೆ ರಾಕೆಟ್‌ನಂತೆ ನುಗ್ಗಿ, ಒಂದು ಬಲವಾದ ತಿರುವು ತೆಗೆದುಕೊಂಡು ಮುಖ್ಯ ರಸ್ತೆ ಪ್ರವೇಶಿಸಿತ್ತು. ಬಸ್‌ ಅಲ್ಲಾಡಿದ ರಭಸಕ್ಕೆ ಪ್ರಯಾಣಿಕರೆಲ್ಲ ಶಬರಿಮಲೆಗೆ ಹೊರಟ ಭಕ್ತರಂತೆ ’ಹೋ’ ಎಂದು ಕಿರುಚಿಕೊಂಡರು. ಚಿಕ್ಕಮಕ್ಕಳು ಬೆಚ್ಚಿ ಬಿದ್ದು ಕಿರುಲತೊಡಗಿದವು.

ಸುದೀರ್ಘ ಪ್ರಯಾಣವೊಂದು ಪ್ರಾರಂಭವಾಗಿತ್ತು.

ಸಾಮಾನ್ಯವಾಗಿ ಬಸ್‌ ನಗರದ ಹೊರವಲಯಕ್ಕೆ ಬರುತ್ತಿದ್ದಂತೆ ನಿದ್ರೆ ಹೋಗುವ ನನಗೆ ಅವತ್ತು ರಾತ್ರಿಯಿಡೀ ಕಣ್ಣು ಮುಚ್ಚಲಾಗಲಿಲ್ಲ. ಮೆಜೆಸ್ಟಿಕ್‌ ದಾಟಿದ ಬಸ್‌ ಮುಂದೆ ಹೋಗುತ್ತಿದ್ದ ವಾಹನಗಳನ್ನೆಲ್ಲ ತನ್ನ ಪ್ರತಿಸ್ಪರ್ಧಿಗಳೆಂದೇ ಭಾವಿಸಿತ್ತು. ಅವರನ್ನೆಲ್ಲ ಹಿಂದೆ ಹಾಕಿ ಮುಂದೆ ಹೋಗುವುದೇ ತನ್ನ ತಕ್ಷಣದ ಕರ್ತವ್ಯ ಎಂದು ಡ್ರೈವರ್‌ ಭಾವಿಸಿಕೊಂಡಂತಿತ್ತು. ತನ್ನೆದುರು ಓಡುತ್ತಿದ್ದ ವಾಹನಗಳನ್ನು ಮುಲಾಜಿಲ್ಲದೇ ಹಿಂದೆ ಹಾಕುತ್ತಾ, ಯಾವನಾದರೂ ಸೈಡ್‌ ಕೊಡದಿದ್ದರೆ ಅವನನ್ನು ತನ್ನ ಉತ್ತರ ಕರ್ನಾಟಕದ ಅಚ್ಚ ಕನ್ನಡದ ಬೈಗುಳಗಳಿಂದ ಪಾವನಗೊಳಿಸುತ್ತ, ಓವರ್‌ಟೇಕ್‌ ಮಾಡಿದ ಕೂಡಲೇ ’ಹೋ’ ಎಂದು ತನಗೆ ತಾನೇ ವಿಜಯೋತ್ಸವ ಆಚರಿಸಿಕೊಳ್ಳುತ್ತಾ ನಮ್ಮ ಡ್ರೈವರ್‌ ರೇಸ್‌ನಲ್ಲಿ ಭಾಗವಹಿಸಿದವನಂತೆ ಹೊರಟ.

ನನ್ನ ಅಳಿದುಳಿದ ನಿದ್ದೆಯೂ ಹಾರಿಹೋಯಿತು.

ಅಷ್ಟೊತ್ತಿಗಾಗಲೇ ಅಕ್ಕಪಕ್ಕದ ಸಣ್ಣಪುಟ್ಟ ವಾಹನಗಳು ಈ ಬಸ್‌ ನುಗ್ಗಿ ಬರುತ್ತಿದ್ದ ವೇಗ ಕಂಡು ನಿಬ್ಬೆರಗಾಗಿ ಹೋಗಿದ್ದವು. ಆದರೆ, ನಮ್ಮ ಬಸ್‌ನ ಮುಂದೆ ಹೋಗುತ್ತಿದ್ದ ಖಾಸಗಿ ಬಸ್ಸೊಂದು ಮಾತ್ರ ಏನು ಮಾಡಿದರೂ ಸೈಡ್‌ ಕೊಡಲಿಲ್ಲ. ನಮ್ಮ ಡ್ರೈವರ್‌ ತನಗೆ ಗೊತ್ತಿರುವ ಉತ್ತರ ಕರ್ನಾಟಕದ ಅಷ್ಟೂ ಬೈಗುಳಗಳನ್ನು ಮನ ಬಂದಂತೆ ಪ್ರಯೋಗಿಸಿದರೂ ಕೆಲಸವಾಗಲಿಲ್ಲ. ಕೊನೆಗೆ, ’ಭಾಂಚೋತ್‌’ ಎಂದು ಹಿಂದಿ ಬೈಗುಳ ಭಂಡಾರ ಉದ್ಘಾಟಿಸಿದ. ಬಸ್ಸು ಅಷ್ಟೊತ್ತಿಗೆ ಜಿಂದಾಲ್‌ ಹತ್ತಿರ ಬಂದಿತ್ತು.

ಎಂದಿನಂತೆ ಅಲ್ಲೊಂದು ಚಿಕ್ಕ ಟ್ರಾಫಿಕ್‌ ಜಾಮ್‌. ಲಾರಿ ಮಹಾತ್ಮರು ಪೂರ್ತಿ ಲೋಡಾಗಿದ್ದ ತಮ್ಮ ಗಾಡಿ ಮತ್ತು ಬಾಡಿಗಳ ಸಹಿತ, ಮೆರವಣಿಗೆ ಹೊರಟಿದ್ದಾರೋ ಎಂಬಂತೆ ಲಾರಿಗಳನ್ನು ಒಂದರ ಹಿಂದೆ ಒಂದು ನಿಲ್ಲಿಸಿಕೊಂಡು ಶ್ರದ್ಧೆಯಿಂದ ನಿರಂತರವಾಗಿ ಹಾರ್ನ್‌ ಬಾರಿಸುತ್ತಿದ್ದರು. ಆ ಮೇಳಕ್ಕೆ ನಮ್ಮ ಮುಂದಿದ್ದ ಖಾಸಗಿ ಬಸ್‌ ಹಾಗೂ ನಾನು ಕೂತಿದ್ದ ಸರ್ಕಾರಿ ಬಸ್‌ಗಳು ಸೇರಿಕೊಂಡವು. ನಮ್ಮ ಡ್ರೈವರ್‌ ಏನೇನೋ ಕಸರತ್ತು ಮಾಡಿ, ಆ ಖಾಸಗಿ ಬಸ್‌ನ ಪಕ್ಕವೇ ತನ್ನ ಬಸ್‌ ನಿಲ್ಲಿಸಿ, ಸ್ಟೀರಿಂಗ್‌ ಮೇಲೆಯೇ ಕೊಂಚ ಬಾಗಿ, ತನ್ನ ಏರ್‌ ಹಾರ್ನ್‌ ಇನ್ನಷ್ಟು ತೀಕ್ಷ್ಣವಾಗಿ ಬಾರಿಸುತ್ತ, ಅದಕ್ಕಿಂತ ಜೋರಾಗಿ ಆ ಖಾಸಗಿ ಬಸ್‌ನ ಡ್ರೈವರ್‌ನಿಗೆ, ’ಯಾಕಲೇ ಬೋಸುಡಿಕೆ, ಮುಕಳಿ ಸಣ್ಣಗ ಕಡಿತತೇನು?’ ಎಂದು ಬೈದ.

ಅಲ್ಲಿಗೆ ಇತರ ಪ್ರಯಾಣಿಕರ ನಿದ್ರೆಯೂ ಹಾರಿ ಹೋಯಿತು.

ಮುಂದಿನ ಐದು ನಿಮಿಷಗಳಲ್ಲಿ ಎರಡೂ ಬಸ್‌ನ ಡ್ರೈವರ್‌ಗಳು ತಂತಮ್ಮ ಹಾರ್ನ್‌‌ಗಳನ್ನು ಮೊಳಗಿಸುತ್ತ, ತಮ್ಮ ಮುಂದೆ ಹಾಗೂ ಹಿಂದೆ ಇದ್ದ ವಾಹನಗಳು ಹೊರಡಿಸುತ್ತಿದ್ದ ಹಾರ್ನ್‌ ಹಿಮ್ಮೇಳದಲ್ಲಿ ಪರಸ್ಪರ ವಾಚಾಮಗೋಚರವಾಗಿ ಬೈದುಕೊಂಡರು. ಆ ಐದು ನಿಮಿಷಗಳಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ವಿಶಿಷ್ಟ, ಅತಿ ವಿಶಿಷ್ಟ ಹಾಗೂ ಪರಮ ವಿಶಿಷ್ಟ ಬೈಗುಳಗಳಷ್ಟೂ ನನ್ನ ಕಿವಿಗೆ ಬಿದ್ದು ನಾನು ಪಾವನನಾಗಿ ಹೋದೆ.

ನಿಧಾನವಾಗಿ ಟ್ರಾಫಿಕ್‌ ಸರಾಗವಾಗತೊಡಗಿತು. ಯಾವಾಗ ತಮ್ಮ ಮುಂದಿನ ವಾಹನಗಳು ಕಟು ಹೊಗೆ ಕಕ್ಕುತ್ತ, ಗುರುಗುಡುತ್ತ ನಿಧಾನವಾಗಿ ಚಲಿಸತೊಡಗಿದವೋ, ಈ ಇಬ್ಬರೂ ಬೈಗುಳ ಭೀಷ್ಮರು ಜಾಗೃತರಾದರು. ಬೈಯುವುದನ್ನು ನಿಲ್ಲಿಸಿ, ತಮ್ಮ ವಾಹನಗಳನ್ನು ಮುಂದೆ ಒಯ್ಯಲು ಪ್ರಯತ್ನಿಸತೊಡಗಿದರು. ಮತ್ತೊಂದು ರೇಸ್‌ ಪ್ರಾರಂಭವಾಯಿತು.

ನಾನು ಮುಂದಿನ ಸೀಟ್‌ನ ಹ್ಯಾಂಡಲ್‌ ಹಿಡಿದುಕೊಂಡು, ಒಂದು ಕಾಲನ್ನು ಓಡುವ ಸ್ಪರ್ಧೆಯಲ್ಲಿ ಕ್ರೀಡಾಪಟು ಇಟ್ಟುಕೊಂಡಿರುತ್ತಾನಲ್ಲ, ಹಾಗೆ ಮುಂಚಾಚಿ, ಬರಬಹುದಾದ ಯಾವುದೇ ರೀತಿಯ ಅವಘಡ ಎದುರಿಸಲು ಸನ್ನದ್ಧನಾಗಿ ಕೂತುಕೊಂಡೆ. ಬಹುಶಃ ತಮ್ಮದೇ ಆದ ವಿಧಾನಗಳಲ್ಲಿ ಇತರ ಪ್ರಯಾಣಿಕರೂ ತಯಾರಾಗಿದ್ದಿರಬಹುದು. ಏಕೆಂದರೆ, ಬಸ್‌ ಓಡುವ ರೀತಿಯೇ ಹಾಗಿತ್ತು. ಒಬ್ಬ ಪ್ರಯಾಣಿಕನೂ ಕಣ್ಣು ಮುಚ್ಚಿದ್ದಿಲ್ಲ. ಮುಚ್ಚಿದ್ದರೂ ಅದು ಪ್ರಾರ್ಥನೆಗಾಗಿ. ಮಹತ್ವದ್ದಾದ ಏನೋ ಘಟಿಸಲಿದೆಯೋ ಎಂಬಂತೆ ಚಿಕ್ಕ ಮಕ್ಕಳು ಸಹ ಎದ್ದಿದ್ದವು.

ಇದ್ದಕ್ಕಿದ್ದಂತೆ ನಮ್ಮ ಬಸ್‌ ವೇಗ ಪಡೆದುಕೊಂಡಿತು. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ, ನಮ್ಮ ಡ್ರೈವರ್‌ ವಿಜಯೋತ್ಸಾಹದಿಂದ ಪರಮ ಅಶ್ಲೀಲ ಬೈಗುಳವೊಂದನ್ನು ಹಿಂದೆ ಬಿದ್ದಿದ್ದ ಆ ಖಾಸಗಿ ಬಸ್‌ನ ಡ್ರೈವರ್‌ಗೆ ರವಾನಿಸಿ, ಯಮವೇಗದಲ್ಲಿ ಮುಂದೆ ಹೊರಟ. ನಂತರ, ಆ ಖಾಸಗಿ ಬಸ್‌ ಡ್ರೈವರ್‌ ಏನೇ ತಿಪ್ಪರಲಾಗ ಹಾಕಿದರೂ ಇವ ಸೈಡ್‌ ಕೊಡಲಿಲ್ಲ. ’ಸೈಡ್‌ ಬೇಕನ್ಲೇ ಕಳ್ಳಿ? ಬಾ ಒಂದು ಕೈ ನೋಡ್ತೀನಿ’ ಎಂದು ಉತ್ಸಾಹದಿಂದ ಕೂಗುತ್ತ, ಆಕ್ಸಿಲೇಟರ್‌ ಒತ್ತತೊಡಗಿದ.

ಆ ಭರದಲ್ಲಿ ತುಮಕೂರು ಸಮೀಪಿಸಿದ್ದು ಯಾರ ಗಮನದಲ್ಲೂ ಇರಲಿಲ್ಲ. ಅಷ್ಟೊತ್ತಿಗೆ ಟ್ರಾಫಿಕ್‌ ಸರಾಗವಾಗಿತ್ತು. ಆ ಖಾಸಗಿ ಬಸ್‌ ಸಹ ಕಣ್ಣಿಗೆ ಬೀಳಲಿಲ್ಲ. ನಮ್ಮ ಡ್ರೈವರ್‌ನ ಬೈಗುಳಗಳಿಗೆ ಬಲಿಯಾಗಬಲ್ಲ ಯಾವ ಪಾಪಾತ್ಮನೂ ಮುಂದೆ ಸಿಗಲಿಲ್ಲ. ಹೀಗಾಗಿ ನಮ್ಮ ಬಸ್‌ ಒಂದು ಹದವಾದ ವೇಗದಲ್ಲಿ ಓಡತೊಡಗಿತು. ಅದರ ಇಂಜಿನ್‌ನ ’ಗುಂಯ್‌’ ಎಂಬ ಶಬ್ದ ಜೋಗುಳದಂತಾಗಿ, ಬಹುಪಾಲು ಪ್ರಯಾಣಿಕರು ಒಬ್ಬೊಬ್ಬರಾಗಿ ನಿದ್ದೆಗೆ ಜಾರಿದರು. ನಾನೂ ಸಹ, ಹ್ಯಾಂಡಲ್‌ ಮೇಲಿನ ಹಿಡಿತ ಸಡಿಲಿಸಿ, ಸೀಟನ್ನು ಹಿಂದಕ್ಕೆ ವಾಲಿಸಿಕೊಂಡು, ಕೈಗಳನ್ನು ಎದೆಯ ಮೇಲೆ ಮಡಿಚಿಕೊಂಡು ಗತಕಾಲದ ನೆನಪುಗಳಿಗೆ ಜಾರತೊಡಗಿದೆ.

ಚಿತ್ರದುರ್ಗ ಬಂತು. ಕೆಲ ಪ್ರಯಾಣಿಕರು ಇಳಿದರು. ನಾನೂ ಸಹ ಇಳಿದು ಕೊಂಚ ಹೊತ್ತು ಅಲ್ಲೇ ಅಡ್ಡಾಡಿದೆ. ಬಸ್‌ ಮತ್ತೆ ಹೊರಟಾಗ, ನನ್ನ ನಿದ್ರೆ ಹಾರಿಹೋಗಿತ್ತು. ’ಮುಂದೆ ಹೆದ್ದಾರಿ ಮುಗಿದು, ರಾಜ್ಯ ಹೆದ್ದಾರಿ ಎಂಬ ಕೆಟ್ಟ ರಸ್ತೆ ಶುರುವಾಗಿ ಧಕ್ಕಡಿಯಾಗುತ್ತದೆ’ ಎಂದು ಮಹಿಳೆಯೊಬ್ಬರು ವಿನಂತಿಸಿಕೊಂಡಿದ್ದರಿಂದ, ನನ್ನ ಸೀಟ್‌ ಬಿಟ್ಟುಕೊಟ್ಟು ಡ್ರೈವರ್‌ ಕ್ಯಾಬಿನ್‌ಗೇ ಹೋದೆ.

ಆಗಲೇ ನಾನು ಅವನ ಮುಖವನ್ನು ಸರಿಯಾಗಿ ನೋಡಿದ್ದು.

ರಾಜ್ಯ ಹೆದ್ದಾರಿಯೆಂಬ ಕೆಮ್ಮಣ್ಣುಗುಂಡಿ ಪ್ರವೇಶಿಸಿದಾಗ ಬಸ್‌ನ ವೇಗ ತಂತಾನೇ ಕಡಿಮೆಯಾಯಿತು. ಡ್ರೈವರ್‌ ಮಾತ್ರ ತನ್ನ ಎಂದಿನ ಧಾಟಿಯಲ್ಲೇ ಬಸ್‌ ಓಡಿಸುತ್ತಿದ್ದನಾದರೂ ಅವನಲ್ಲಿ ಈಗ ಮೊದಲಿನ ಉದ್ವೇಗ ಇರಲಿಲ್ಲ. ಅಲ್ಲದೇ ಬೈಸಿಕೊಳ್ಳಲು ಅವನ ಮುಂದೆ ಯಾವ ವಾಹನವೂ ಹೋಗುತ್ತಿರಲಿಲ್ಲ.

ಗತಕಾಲದ ನೆನಪುಗಳಲ್ಲಿ ಮುಳುಗಿದ್ದ ನನಗೆ ಧಡಕ್ಕನೇ ಎಚ್ಚರವಾದಾಗ ಹೊರಗೆ ತಿಳಿ ಬೆಳಕು. ಬಹುಶಃ ನಸುಕಿನ ಐದೂವರೆಯಾಗಿತ್ತು ಅನಿಸುತ್ತದೆ. ಬಸ್‌ ಯಾವ ಊರಿನ ಹತ್ತಿರವಿದೆ ಎಂಬುದು ತಕ್ಷಣಕ್ಕೆ ಗೊತ್ತಾಗುವಂತಿರಲಿಲ್ಲ. ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿ ಇನ್ನೂ ದೂರವಿತ್ತೇನೋ. ಇದ್ದಕ್ಕಿದ್ದಂತೆ ಬಸ್‌ ನಿಂತಿತ್ತು. ಕಣ್ತೆರೆದ ನನಗೆ ಕಾಣಿಸಿದ್ದು ಡ್ರೈವರ್‌ನ ಭೀತಿ ತುಂಬಿದ ಮುಖ. ಆತ ತನ್ನ ಬಲಕ್ಕೆ ನೋಡುತ್ತಿದ್ದ. ಒಂದು ಕ್ಷಣ ಸುಮ್ಮನೇ ಕೂತಿದ್ದ ಆತ ಧಡಕ್ಕನೇ ಪಕ್ಕದ ಬಾಗಿಲು ತೆಗೆದುಕೊಂಡು ನಿಧಾನವಾಗಿ ಕೆಳಗೆ ಇಳಿದ.

ತೆರೆದ ಬಾಗಿಲಿನಿಂದ ಆಗ ಆ ದೃಶ್ಯ ಕಾಣಿಸಿತು.

ಬಿಳಿ ಮಾರುತಿ ಕಾರೊಂದು ರಸ್ತೆ ಪಕ್ಕದ ತಗ್ಗಿನಲ್ಲಿದ್ದ ಸಾಮಾನ್ಯ ಗಾತ್ರದ ಮರಕ್ಕೆ ಮೂತಿ ಹಚ್ಚಿಕೊಂಡು ನಿಂತಿತ್ತು. ಕಾರಿಗೆ ಹೆಚ್ಚು ಹಾನಿಯಾದ ಹಾಗೆ ಕಾಣಲಿಲ್ಲ. ಕಾರಿನ ಡ್ರೈವರ್‌ ಸ್ಟೀರಿಂಗ್‌ ಮೇಲೆ ಮುಖ ಇಟ್ಟುಕೊಂಡು ಮಲಗಿದಂತಿದ್ದ. ಅವನ ಪಕ್ಕದಲ್ಲಿದ್ದ ಯುವಕ ಕೂಡ ಅದೇ ಭಂಗಿಯಲ್ಲಿ, ಡ್ಯಾಷ್‌ ಬೋರ್ಡ್‌‌ಗೆ ಮುಖ ಆನಿಸಿಕೊಂಡಿದ್ದ. ತಲೆ ಬಗ್ಗಿಸಿದ್ದರಿಂದ ಇಬ್ಬರ ಮುಖಗಳೂ ಕಾಣುತ್ತಿರಲಿಲ್ಲ. ಆದರೆ, ಹಿಂದಿನ ಸೀಟ್‌ನಲ್ಲಿದ್ದ ಒಬ್ಬ ಮಧ್ಯವಯಸ್ಕ ಮತ್ತು ಇಬ್ಬರು ಯುವತಿಯರ ಮುಖಗಳು ಸ್ಪಷ್ಟವಾಗಿದ್ದವು. ಮೂವರ ತುಟಿಯಂಚಿನಿಂದ ಕಂಡೂ ಕಾಣದಂತೆ ರಕ್ತ ಒಸರುತ್ತಿತ್ತು.

ಗಾಬರಿಗೊಂಡಿದ್ದ ನಮ್ಮ ಡ್ರೈವರ್‌ನ ಹಿಂದೆಯೇ ನಾವೊಂದಿಷ್ಟು ಪ್ರಯಾಣಿಕರು ಅತ್ತ ಧಾವಿಸಿದೆವು. ಬಹುಶಃ ಅಪಘಾತ ಕೆಲವೇ ನಿಮಿಷಗಳ ಹಿಂದೆ ಸಂಭವಿಸಿರಬೇಕು. ಹೀಗಾಗಿ ಸ್ಥಳದಲ್ಲಿ ಯಾರೂ ಇದ್ದಿಲ್ಲ. ಹತ್ತಿರ ಹೋದಂತೆ ಕಾರ್‌ನ ಸ್ಟಿರಿಯೋದಿಂದ ಸುಪ್ರಭಾತವೊಂದು ಕೇಳಿ ಬರತೊಡಗಿತು.

ಆದರೆ, ಕಾರ್‌ನಲ್ಲಿ ಕೂತವರಿಗೆ ಅದರ ಬಗ್ಗೆ ಗಮನವಿದ್ದಂತೆ ಕಾಣಲಿಲ್ಲ. ನಾವು ಕೂಗಿದಾಗಲೂ ಯಾರೂ ಓಗೊಡಲಿಲ್ಲ. ಅವರ ಭುಜಗಳನ್ನು ನಿಧಾನವಾಗಿ ಅಲ್ಲಾಡಿಸಿದೆವು. ಅವರು ಸ್ಪಂದಿಸಲಿಲ್ಲ. ಮೂಗಿನ ಹತ್ತಿರ ಬೆರಳಿಟ್ಟು ನೋಡಿದರೆ ಉಸಿರು ತಾಕಲಿಲ್ಲ.

ಕಾರಿನಲ್ಲಿದ್ದವರೆಲ್ಲ ಸತ್ತಿದ್ದರು. ಅದೂ ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ.

ನನ್ನನ್ನು ದಿಗ್ಭ್ರಮೆಗೊಳಿಸಿದ್ದೇ ಅದು. ಕಾರನ್ನು ರಸ್ತೆ ತಿರುವಿನಲ್ಲಿ ನಿಯಂತ್ರಿಸಲು ವಿಫಲನಾಗಿದ್ದ ಡ್ರೈವರ್‌, ಅದನ್ನು ಪಕ್ಕದಲ್ಲಿದ್ದ ಮರಕ್ಕೆ ಅಪ್ಪಳಿಸಿದ್ದ. ನಿದ್ದೆಯಲ್ಲಿದ್ದ ಇತರ ನಾಲ್ವರು ಪ್ರಯಾಣಿಕರ ಯಾವ ಅಂಗಕ್ಕೆ ಪೆಟ್ಟು ಬಿದ್ದಿತ್ತೋ, ಎಲ್ಲ ಒಟ್ಟಿಗೇ ಜೀವ ಬಿಟ್ಟಿದ್ದರು. ಡ್ರೈವರ್‌ನ ಎದೆಗೆ ಸ್ಟೀರಿಂಗ್‌ ವ್ಹೀಲ್‌ ಗುದ್ದಿರಬೇಕು. ಅವನ ಮುಖ ಎತ್ತಿ ನೋಡಲು ಯಾರಿಗೂ ಮನಸ್ಸಾಗಲಿಲ್ಲ. ಒಂದು ಸಮಾನ ಆಘಾತ ನೆರೆದಿದ್ದ ಬಸ್‌ನ ಪ್ರಯಾಣಿಕರನ್ನು ಆವರಿಸಿಕೊಂಡು ದಿಗ್ಭ್ರಮೆಗೊಳಿಸಿತ್ತು.

ಅಷ್ಟೊತ್ತಿಗೆ ಬರುವ-ಹೋಗುವ ವಾಹನಗಳು ಅಲ್ಲಲ್ಲಿ ನಿಂತಿದ್ದವು. ಅಪಘಾತ ನೋಡಲು ನೂಕುನುಗ್ಗಲು ಶುರುವಾಗಿತ್ತು. ಜನರ ಗುಜು ಗುಜು, ವಾಹನಗಳ ದಟ್ಟಣೆಯಿಂದ ಎಚ್ಚೆತ್ತ ನಮ್ಮ ಬಸ್‌ನ ಡ್ರೈವರ್‌ ವಾಪಸ್‌ ಬಸ್ಸೇರಿ ಹಾರ್ನ್‌ ಬಾರಿಸಿದ. ನಾನು ಮತ್ತೆ ಕ್ಯಾಬಿನ್‌ ಹೊಕ್ಕಾಗ, ಅವನ ಮ್ಲಾನವಾದ ಮುಖ ನನ್ನನ್ನು ಸೆಳೆಯಿತು.

ಅಪಘಾತ ಸ್ಥಳದ ದಟ್ಟಣೆ ದಾಟಿಕೊಂಡು ಹೊರಟಾಗ ಬಸ್‌ನ ವೇಗ ತಂತಾನೆ ಕಡಿಮೆಯಾಗಿತ್ತು. ’ನಿಧಾನವಾಗಿ ಓಡಿಸು’ ಎಂದು ಯಾರೋ ನಿರ್ದೇಶಿಸಿದರೇನೋ ಎಂಬಂತೆ ಚಾಲಕ ಬಸ್‌ ಓಡಿಸುತ್ತಿದ್ದ. ಅವನಲ್ಲೀಗ ಬೈಗುಳಗಳಿರಲಿಲ್ಲ. ಅವಸರವಿರಲಿಲ್ಲ. ಸಾವಿನ ಸಮೀಪ ದರ್ಶನ ಅವನಲ್ಲಿದ್ದ ಮನುಷ್ಯತ್ವ ಎಚ್ಚರಿಸಿದೆಯೇನೋ ಎಂದು ನನಗೆ ಅನ್ನಿಸಿತು.

ಇದ್ದಕ್ಕಿದ್ದಂತೆ ನನ್ನ ಮುಖ ನೋಡಿದ ಆತ, ’ಸಾಹೇಬ್ರ ಇವತ್ತು ನನ್ನ ಮಗಳ ಹುಟ್ಟಿದ ಹಬ್ಬಾರೀ’ ಎಂದುಬಿಟ್ಟ.

ದೂರದ ಯಾವುದೋ ಊರಿನಲ್ಲಿದ್ದ ಮಗಳು ತನ್ನ ದಾರಿ ಕಾಯುತ್ತಿರುವ ಚಿತ್ರ ಅಲ್ಲಿ ಕಾಣುತ್ತಿದೆಯೇನೋ ಎಂಬಂತೆ ರಸ್ತೆಯನ್ನು ದಿಟ್ಟಿಸಿ ನೋಡುತ್ತಿದ್ದ ಅವನಲ್ಲಿ ಈಗ ಉದ್ವೇಗ ಇರಲಿಲ್ಲ. ಮನಸ್ಸು ಒಳಮುಖವಾಗಿತ್ತು.

ಅಷ್ಟೊತ್ತಿಗೆ ಹೊರಗೆ ಬೆಳ್ಳಂಬೆಳಕು.

ಪಾಪ, ಈ ಡ್ರೈವರ್‌ ಯಾವ ಊರಿನವನೋ. ಸಾವಿನ ದೃಶ್ಯ ಇವನ ಬದುಕಿನ ಬಳ್ಳಿಯನ್ನು ಕದಲಿಸಿದೆ ಎಂದು ಅನ್ನಿಸಿತು. ನಾವೆಲ್ಲ ಇವತ್ತು ಜೀವಂತವಾಗಿ ಓಡಾಡಲು ಸಾಧ್ಯವಾಗಿರುವುದು ಇಂತಹ ಸಾವಿರಾರು ಚಾಲಕರ ಕರ್ತವ್ಯಪ್ರಜ್ಞೆಯಿಂದ ಮಾತ್ರ ಎಂದು ಕೃತಜ್ಞತೆ ಉಕ್ಕಿತು. ಅದುವರೆಗಿನ ಅವನ ಬೈಗುಳಗಳು, ಕೆಟ್ಟ ಚಾಲನೆ, ಹುಂಬತನ ಮರೆತುಹೋದವು. ಅವನ ಮನುಷ್ಯ ಸಹಜ ಸ್ಪಂದನೆ ಮನಸ್ಸು ತಟ್ಟಿತು. ಮತ್ತೊಮ್ಮೆ ಅವನ ಮುಖ ದಿಟ್ಟಿಸುತ್ತಿದ್ದಂತೆ, ಇಡೀ ಚಾಲಕ ವರ್ಗದ ಬಗ್ಗೆ ನನ್ನಲ್ಲೊಂದು ಅಪಾರ ಗೌರವ ಅರಳತೊಡಗಿತು.

ಇವರು ಸರಿಯಾಗಿ ಚಾಲನೆ ಮಾಡಿದ್ದರಿಂದಲೇ ಅಲ್ಲವೇ ನಾವೆಲ್ಲ ಇವತ್ತು ಬದುಕಿದ್ದು? ಇಲ್ಲವಾಗಿದ್ದರೆ ನಾವೆಲ್ಲ ಯಾವತ್ತೋ ಸತ್ತಿರುತ್ತಿದ್ದೆವು- ಆ ಕಾರಿನ ಪ್ರಯಾಣಿಕರ ಹಾಗೆ.

ಬಸ್‌ಗೆ ಈಗ ಹದವಾದ ವೇಗ. ದಾರಿಯಲ್ಲಿ ಸಿಕ್ಕ ಚಿಕ್ಕ ಊರೊಂದರಲ್ಲಿ ಸಮವಸ್ತ್ರ ಧರಿಸಿದ್ದ ಬರಿಗಾಲ ಶಾಲಾ ಮಕ್ಕಳು ಕಣ್ಣಿಗೆ ಬಿದ್ದವು. ಅವರನ್ನು ನೋಡುತ್ತಿದ್ದಂತೆ ಡ್ರೈವರ್‌ ಜಾಗರೂಕನಾದ. ಬಸ್‌ ಹತ್ತಿರ ಬಂದಾಗ, ಆ ಮಕ್ಕಳು ಕುಣಿಯುತ್ತ ಡ್ರೈವರ್‌ ಮಾಮಾನಿಗೆ ಟಾಟಾ ಮಾಡಿ ಕೇಕೆ ಹಾಕಿದವು.

ನನಗೆ ಅಚ್ಚರಿಯಾಗುವಂತೆ, ನಮ್ಮ ಡ್ರೈವರ್‌ ಮುಗುಳ್ನಗುತ್ತ ವಾಪಸ್‌ ಟಾಟಾ ಮಾಡಿ ಮೆಲುವಾಗಿ ಹಾರ್ನ್‌ ಹೊಡೆದ. ಮಕ್ಕಳು ರಸ್ತೆ ದಾಟಿದಾಗ ಮತ್ತೆ ಬಸ್‌ನ ವೇಗ ಹೆಚ್ಚಿತು. ಆದರೆ, ಅದರಲ್ಲಿ ಉದ್ವೇಗವಿರಲಿಲ್ಲ, ಹಿಡಿತವಿತ್ತು. ಯಾವುದೋ ನಿರಾಳ ಭಾವ ಆವರಿಸಿದಂತಾಗಿ ನಾನು ಸೀಟ್‌ಗೆ ತಲೆಯಾನಿಸಿಕೊಂಡು ಕಣ್ಮುಚ್ಚಿದೆ. ಅದುವರೆಗೆ ಎಲ್ಲೋ ಮಾಯವಾಗಿದ್ದ ನಿದ್ದೆ ನಿಧಾನವಾಗಿ ಆವರಿಸಿಕೊಳ್ಳತೊಡಗಿತು.

ಬಸ್‌ ಒಂದೇ ಹದದಲ್ಲಿ ಓಡುತ್ತಲೇ ಇತ್ತು.

- ಚಾಮರಾಜ ಸವಡಿ

(೨೦೦೨ ಜನವರಿಯಲ್ಲಿ ಬರೆದಿದ್ದು)



ಹೇಳಿಕೊಳ್ಳಲು ಒಂದೆರಡು ಹಾಡು, ಓದಿಕೊಳ್ಳಲು ಒಂದೆರಡು ಸಾಲು

1 May 2008

3 ಪ್ರತಿಕ್ರಿಯೆ

ನಾನು ನಿನ್ನನ್ನು ಏನೂ ಕೇಳುವುದಿಲ್ಲ ಬದುಕೇ.

ಯಾವುದನ್ನು ಇದುವರೆಗೆ ಸಾಮಾನ್ಯ ಜೀವನ ಅಂದುಕೊಂಡಿದ್ದೆನೋ, ಅದನ್ನು ಕೊಡ ಮಾಡಿದರೆ ಸಾಕು. ಒಂದಾರು ತಾಸು ನಿದ್ದೆ, ಎದ್ದಾಗ ಒಂದಿಷ್ಟು ಇನಿ ಬೆಳಕು, ರಾತ್ರಿಯಿಡೀ ಆರಿದ ಬಾಯಿಗೆ ಒಂದು ಲೋಟ ಸಿಹಿ ನೀರು, ಎಳೆದುಕೊಂಡರೆ ಪುಪ್ಫುಸ ತುಂಬುವ ಬೆಳಗಿನ ತಂಪು ಗಾಳಿ, ತಲೆ ಎತ್ತಿ ನೋಡಿದರೆ ಉದಯಿಸುವ ಸೂರ್ಯ, ಇಂದು ಯಾವ ಪಾಪಿಯ ಕುರಿತೂ ಮಾತನಾಡದ ನಿಗ್ರಹ, ಯಾರ ಮೇಲೂ ಕೋಪಿಸಿಕೊಳ್ಳದ ನಿಲುವು, ಸಾಕು.

ಯಾರಿಗೂ ನನ್ನ ಪ್ರತಿಭಾ ಪರಿಚಯ ಬೇಡ. ಯಾರಿಗೂ ನನ್ನ ನೋವಿನ ಪಡಿತರ ಬೇಡ. ಮನೆ ಬಿಡುವಾಗ ಒಂದು ಮುಗುಳ್ನಗುವಿರಲಿ. ಟ್ರಾಫಿಕ್‌ನಲ್ಲಿ ಅಸಹನೆ ಉಕ್ಕದಿರಲಿ. ಈ ಗಾಡಿ ನಲ್ವತ್ತು ಕಿಮೀ ಮೇಲೆ ಓಡದು ಎಂಬ ಬೇಸರ ಬೇಡ. ರಸ್ತೆಯಲ್ಲಿ ಕಡಿಮೆ ಗುಂಡಿಗಳಿದ್ದರೆ ಸಾಕು.

ದಾರಿಯುದ್ದಕೂ ನೂರಾರು ಗಾಡಿ. ಒಂದಕ್ಕಿಂತ ಒಂದು ಭಿನ್ನ. ಅದು ಹಾಗಿದ್ದರೇ ಚೆನ್ನ. ಎಲ್ಲೆಲ್ಲಿಂದಲೋ ಬಂದವರು ಎಲ್ಲೆಲ್ಲೋ ಹೊರಟಿದ್ದಾರೆ. ನನ್ನಂತೇ ಅವರು, ನೆಮ್ಮದಿ ಹುಡುಕುವವರು.

ಕಚೇರಿಗೆ ಎಲ್ಲರಿಗಿಂತ ಮುಂಚೆ ಬಂದೆ ಎಂಬ ಹಳಹಳಿ ಬೇಡ. ತಡವಾಯಿತು ಎಂಬ ಆತಂಕವೂ ಬೇಡ. ಲಿಫ್ಟ್‌ ಕೆಲಸ ಮಾಡದಿದ್ದರೆ ಏನಂತೆ, ಮೆಟ್ಟಿಲುಗಳಿವೆ ಎಂಬ ಸಮಾಧಾನ ಬರಲಿ. ಏರಲು ಕಾಲುಗಳು ಗಟ್ಟಿಯಾಗಿವೆ ಎಂಬ ಕೃತಜ್ಞತೆ ಇರಲಿ.

ನಾ ಕೂತ ಕಡೆ ತಂಪು ಗಾಳಿ ಇಲ್ಲ ಎಂದೇಕೆ ಕಿರಿಕ್ಕು? ಕನಸ ಹಂಚಿಕೊಳ್ಳಲು ಕಂಪ್ಯೂಟರ್‌ ಇದೆ ಎಂಬ ನೆಮ್ಮದಿ ಸಾಕು. ಅರ್ಥ ಮಾಡಿಕೊಳ್ಳುವವರು ಕಡಿಮೆ ಎಂಬ ತಗಾದೆಗಿಂತ, ಅರ್ಥ ಮಾಡಿಕೊಳ್ಳಲು ಕೆಲವರಾದರೂ ಇದ್ದಾರಲ್ಲ ಎಂಬ ಸಮಾಧಾನವಿರಲಿ.

ಎಲ್ಲವನ್ನೂ ಬಲ್ಲೆ ಎಂಬ ಬಿಂಕ ಇಳಿಯಲಿ. ಕಲಿಯುವುದು ಇನ್ನೂ ಇದೆ ಎಂಬ ವಿನಯ ಬೆಳೆಯಲಿ. ಬುದ್ಧಿವಂತಿಕೆ ಕಾಡಿನ ಹಸಿರಿನಂತೆ ಎಂಬ ಅರಿವು. ನಾನೊಬ್ಬನೇ ಮರ ಅಲ್ಲ ಎಂಬ ತಿಳಿವು.

ಟಿವಿ ಒಟಗುಟ್ಟುತ್ತದೆ. ಸಹೋದ್ಯೋಗಿಗಳು ಪಿಸುಗುಟ್ಟುತ್ತಾರೆ. ಎಲ್ಲರಿಗೂ ಎಲ್ಲದರ ಬಗ್ಗೆ ಮಾತನಾಡುವ ಹಂಬಲ. ಥ್ಯಾಂಕ್ಸ್‌ ಬದುಕೇ, ಕೇಳಿಸಿಕೊಳ್ಳಲು ಎರಡು ಕಿವಿ ಕೊಟ್ಟಿದ್ದಕ್ಕೆ.

ಬೆಳಿಗ್ಗೆ ಹೋಗಿ ಮಧ್ಯಾಹ್ನವಾಗುತ್ತದೆ. ಆರೋಗ್ಯವಂತನಿರಬೇಕು ನಾನು, ಅದಕ್ಕೇ ಹೊಟ್ಟೆ ಹಸಿಯುತ್ತೆ. ಒಬ್ಬನೇ ಉಣ್ಣಲು ಮತ್ತದೇ ಬೇಸರ. ಯಾರಾದರೂ ಜೊತೆ ಕೂರಲಿ ಎಂಬ ಕಾತರ.

ಊಟದ ನಂತರ ಮನಸ್ಸೇಕೋ ಮಂಕು. ಬ್ಲಾಗ್‌ ತೆರೆದರೆ ಅಲ್ಲಿ ಕನಸುಗಳದೇ ಇಂಕು. ಯಾರಾರೋ ಬಿಡಿಸಿದ ಮನಸುಗಳ ಚಿತ್ರ. ಅದರೊಂದಿಗೆ ಅಚ್ಚಾಗಲಿ ನನ್ನದೂ ಒಂದು ಪತ್ರ.

ನಿದ್ದೆ ಎಳೆವ ದೇಹಕ್ಕೆ ಬಿಸಿ ಬಿಸಿ ಚಹ. ಇನ್ನು ಕೆಲಸ ಮುಂದುವರೆಸಬೇಕೆಂಬ ತಹತಹ. ಬರೆದಷ್ಟೂ ಮುಗಿಯದು ಬರವಣಿಗೆಯ ಬಯಕೆ. ಇದು ಹೀಗೇ ಇರಲಿ ಎಂಬುದೊಂದೇ ಕೋರಿಕೆ.

ಸಂಜೆಯಾದಂತೆ ಸಹೋದ್ಯೋಗಿಗಳ ಸಡಗರ. ಸಂದರ್ಶನಕ್ಕೆ ಬಂದ ಹೊಸಬರಲ್ಲಿ ಮುಜುಗರ. ಎಲ್ಲವನ್ನೂ ನೋಡುತ್ತ ಕಾಯುತ್ತಿದ್ದಾರೆ ಕೆಲವರು. ಗಾಡಿ ತಂದವರ ಜೊತೆ ಹೋಗಲು ಕೂತಿದ್ದಾರೆ ಅವರು.

ಸೂರ್ಯನಿಗೂ ಸುಸ್ತಾಗಿರಬೇಕು, ಕೆಂಪಾಗಿದ್ದಾನೆ. ಸದ್ದಿಲ್ಲದೇ ಮನೆಗೆ ಮರಳುವ ಸಿದ್ಧತೆಯಲ್ಲಿದ್ದಾನೆ. ಸಂಜೆ ಸೊಗಸಿಗೆ ಸಮ ಯಾವುದಿದೆ? ಏಕೋ ಏನೋ ನನ್ನ ಮನಸ್ಸೂ ಮುದಗೊಂಡಿದೆ.

ಬಾಕಿ ಉಳಿದ ಕೆಲಸ ಮುಗಿಸಲು ಅವಸರಿಸುತ್ತೇನೆ. ತಿಂಡಿ ತಿಂದೇ ಇಲ್ಲ? ಎಂದು ಗೆಳೆಯ ಎಚ್ಚರಿಸುತ್ತಾನೆ. ’ಹಸಿವಿದ್ದು ಉಂಡರೆ ತಾನೆ ಸೊಗಸು? ಈ ತಿಂಡಿಯನ್ನೂ ನೀನೇ ಮುಗಿಸು.’

ಮಾನಿಟರ್‌ ಮುಂದೆ ಅಕ್ಷರಗಳ ಮಾಲೆ. ಹೊರಗೆ ಗಗನಚುಂಬಿಗಳಲ್ಲಿ ದೀಪಗಳ ಲೀಲೆ. ಕೊನೆಯ ಪ್ರಿಂಟ್‌ ಔಟ್‌ ನೋಡುತ್ತ ಎಂಥದೋ ಸಡಗರ. ಇವತ್ತಿನ ಕೆಲಸ ಮುಗಿಯಿತು ಹಗುರ.

ಬ್ಯಾಗೆತ್ತಿಕೊಳ್ಳುತ್ತ ಎಲ್ಲರಿಗೂ ಬೈ, ವಿದಾಯ. ಆಗಲೇ ಅರ್ಧಕ್ಕರ್ಧ ಕಚೇರಿಯೇ ಮಾಯ. ಇಳಿಯುವಾಗ ಲಿಫ್ಟ್‌ನ ಚಿಂತೆಯಿಲ್ಲ. ಮನೆಗೆ ಹೊರಟಾಗ ಅದರ ಅವಶ್ಯಕತೆಯೇ ಇಲ್ಲ.

ದಾರಿ ಕಾಯುತ್ತಿದೆ ನನ್ನ ಪುಟ್ಟ ಗಾಡಿ. ಬಿಸಿಲಿಗೇಕೋ ಬಾಡಿದಂತಿದೆ ಖೋಡಿ. ಸೀಟೊರಸಿ ಕೂತರೆ ಅದಕ್ಕೆ ಎಂಥದೋ ಪುಳಕ. ಭರ್ತಿಯಾದ ರಸ್ತೆಯೊಂದಿಗೆ ಹಾಕುತ್ತದೆ ತಳುಕ.

ಸಿಗ್ನಲ್‌ ಲೈಟ್‌ಗಳು ಕಣ್ಣಾಮುಚ್ಚಾಲೆ ಆಡುತ್ತವೆ. ಅವಕ್ಕೆ ತಕ್ಕಂತೆ ಟ್ರಾಫಿಕ್‌ ಪೊಲೀಸ್‌ ಪೀಪಿ ಊದುತ್ತಾನೆ. ನಾವೇನು ಕಡಿಮೆ ಎಂದು ವಾಹನಗಳು ಹಾರ್ನ್‌ ಹೊಡೆಯುತ್ತವೆ. ಹಸಿರು ದೀಪ ಕಾಣುತ್ತಲೇ ಗೂಳಿಯಂತೆ ನುಗ್ಗುತ್ತವೆ.

ಎಲ್ಲರಿಗೂ ಮನೆ ತಲುಪುವ ಆತುರ. ಆದರೆ, ಟ್ರಾಫಿಕ್‌ ಇರೋದೇ ಈ ಥರ. ಗಾಡಿ ಮೇಲೆ ಕೂತಿದ್ದರೂ ಎಲ್ಲರೂ ನಿಂತು ನಿಂತೇ ಹೋಗಬೇಕು. ದೀಪ ಬಿದ್ದಾಗೊಮ್ಮೆ ಕಂತು ಕಂತಾಗಿ ಸಾಗಬೇಕು.

ಮನೆ ತಲುಪಿದಾಗ ದೇಹಕ್ಕೆ ಸುಸ್ತು. ಆದರೆ, ಮನಸ್ಸು ಫ್ರೆಶ್‌ ಮತ್ತು ಮಸ್ತು. ಗೇಟಿಗೆ ನಿಂತ ದೊಡ್ಡ ಮಗಳು ಕೇಕೆ ಹಾಕುತ್ತಾಳೆ. ಅಮ್ಮನ ಕಂಕುಳಲ್ಲಿ ಕೂತ ಚಿಕ್ಕವಳು ಕೈ ಚಾಚುತ್ತಾಳೆ.

ಎಲ್ಲರನ್ನೂ ಮಾತನಾಡಿಸಿ ಮಕ್ಕಳಿಗೆ ಸಿಹಿ ಮುತ್ತು. ಹೆಂಡತಿಗೆ ಕೊಡಲು ಇನ್ನೂ ಇದೆ ಹೊತ್ತು. ಉಂಡು, ಆಡಿ, ದಣಿದ ಮಕ್ಕಳು ನಿದ್ರೆಗೆ ಜಾರುತ್ತವೆ. ಇಡೀ ದಿನದ ಬೆಳವಣಿಗೆಗಳು ಕಣ್ಣೆದುರು ಮೂಡುತ್ತವೆ.

ಬೆಳಿಗ್ಗೆ ನಾನು ಕೇಳಿಕೊಂಡಿದ್ದು ಇದನ್ನೇ ಅಲ್ಲವೆ? ಒಂದು ಸಾಮಾನ್ಯ ಬದುಕು ಕೊಡು ಎಂದು ತಾನೆ? ಅವಸರದಿಂದ ಓಡುವ ಜಗದಲ್ಲಿ ಆಸರೆಗೊಂದು ನೆರಳು. ಹೇಗಾದರೂ ಸರಿ, ಸರಿಯಾಗಲಿ ಮಗಳು.

ಮೌನವಾಗಿ ಕೂತ ಇವಳ ಮನದಲ್ಲೂ ಅದೇ ಯಾಚನೆ. ದೊಡ್ಡ ಮಗಳ ಭವಿಷ್ಯ ಬೆಳಗಲಿ ಎಂಬ ಪ್ರಾರ್ಥನೆ. ನಮಗಿಷ್ಟು ದಕ್ಕಿದರೆ ಸಾಕು ಬದುಕೇ. ಚಿಂತೆ ಮಾಡದೇ ಇದ್ದೇವು ನಾನು ಮತ್ತು ಈಕೆ.

ನಮ್ಮೆಲ್ಲ ಹಮ್ಮುಬಿಮ್ಮುಗಳು ಪಕ್ಕಕ್ಕೆ ಸರಿಯಲಿ. ಮನದ ತಿಳಿಗೊಳದಲ್ಲಿ ಒಂಚೂರು ನೆಮ್ಮದಿ ಮೀಯಲಿ. ಕಷ್ಟದಲ್ಲಿದ್ದವರಿಗೂ ಚಾಚಲಿ ನಮ್ಮ ಬೆರಳು. ಅವರಿಗೂ ದಕ್ಕಲಿ ನೆಮ್ಮದಿಯ ನೆರಳು.

- ಚಾಮರಾಜ ಸವಡಿ

ಕುವೆಂಪು ಜೊತೆ ಕಂಪ್ಯೂಟರೂ ಬೇಕು!

0 ಪ್ರತಿಕ್ರಿಯೆ
ಹೈಸ್ಕೂಲ್‌ನಲ್ಲಿರಬೇಕು!

ಒಂದು ಕಣ್ಣು ಮುಚ್ಚಿಕೊಂಡು ನೋಡಬೇಕಾದ ಸೂಕ್ಷ್ಮದರ್ಶಕ ಯಂತ್ರದ ಎದುರು ನಾವೆಲ್ಲ ಸಾಲಾಗಿ ನಿಂತಿದ್ದೆವು. ಎಲ್ಲರಿಗೂ ಕುತೂಹಲ. ಯಂತ್ರದ ಕಿಂಡಿಯಲ್ಲಿ ಕಣ್ಣಿಟ್ಟು ನೋಡುತ್ತಿದ್ದವರ ಬೆರಗನ್ನು ಆಸೆಯಿಂದ ಗಮನಿಸುತ್ತ, ಮುಂದೆ ನಿಂತವ ಸರಿಯದ್ದಕ್ಕೆ ಅಸಹನೆ ಪಟ್ಟುಕೊಳ್ಳುತ್ತ ನಮ್ಮ ಸರದಿಗಾಗಿ ಚಡಪಡಿಸುತ್ತಿದ್ದೆವು. ಕೊನೆಗೂ ನಮ್ಮ ಪಾಳಿ ಬಂದು, ಸೂಕ್ಷ್ಮದರ್ಶಕದ ಕಣ್ಣೊಳಗೆ ಇಣುಕಿ ನೋಡಿದಾಗ, ಗಾಜಿನ ಪಟ್ಟಿಯ ಮೇಲಿದ್ದ ನೀರ ಹನಿಯಲ್ಲಿ ಬಾಲ ಬೀಸಿಕೊಂಡು ಈಜುತ್ತಿದ್ದ ಪ್ಯಾರಮೀಸಿಯಂ ಏಕಾಣು ಜೀವಿಗಳು ಕಂಡವು. ಅಲ್ಲೆಲ್ಲೋ, ಮೂಲೆಯಲ್ಲಿ ಆಕಾರವಿಲ್ಲದ ಅಮೀಬಾ!

ಆ ರೋಮಾಂಚನ ಹೇಗೆ ಬಣ್ಣಿಸುವುದು?

ಬರಿಗಣ್ಣೀಗೆ ಕಾಣದ ಸೂಕ್ಷ್ಮ ಜೀವಿಗಳ ವೈವಿಧ್ಯತೆ ಹಾಗೂ ಪ್ರಮಾಣ ದೊಡ್ಡದು ಎಂದು ಜೀವ ವಿಜ್ಞಾನ ಬೋಧಿಸುವ ಶಿಕ್ಷಕರು ಹೇಳಿದಾಗ ಬುರುಡೆ ಬಿಡುತ್ತಾರೆ ಎಂದೇ ಅಂದುಕೊಂಡಿದ್ದೆವು. ಚಿತ್ರವಿಚಿತ್ರ ಆಕಾರದ ಜೀವಿಗಳನ್ನು ಪಠ್ಯಪುಸ್ತಕದಲ್ಲಿ ನೋಡಿದಾಗ ಆಸಕ್ತಿ ಕೆರಳಿರಲಿಲ್ಲ. ಅವುಗಳನ್ನೇ ಯಥಾವತ್ತಾಗಿ ಬೋರ್ಡಿನ ಮೇಲೆ ಇಳಿಸಿ, ’ಇದು ಹೊರ ಪೊರೆ, ಇದು ಒಳ ಪೊರೆ, ಇದು ನ್ಯೂಕ್ಲಿಯಸ್‌, ಇದು ಸೈಟೋಪ್ಲಾಸಂ’ ಎಂದೆಲ್ಲ ನೀಡುತ್ತಿದ್ದ ವಿವರಣೆಗಳು ಬೇಸರ ತಂದಿದ್ದವು.

ಬಹುಶಃ ಶಿಕ್ಷಕರಿಗೂ ಇದು ಗೊತ್ತಾಯಿತು ಎಂದು ಕಾಣುತ್ತದೆ. ಮರುದಿನವೇ ಮೈಕ್ರೋಸ್ಕೋಪ್‌ ತರಿಸಿ, ನಮ್ಮೂರ ಅಳವಂಡಿಯ ಜಕ್ಕಂಬಾವಿಯ ಕೊಳೆ ನೀರನ್ನು ತಂದು, ಸ್ಲೈಡ್‌ ಮೇಲೆ ಒಂದು ಹನಿ ಸವರಿ, ಮೈಕ್ರೋಸ್ಕೋಪ್‌ ಅಡಿ ಇಟ್ಟು ನಮ್ಮನ್ನು ನೋಡಲು ಕರೆದರು.

ಕಂಡಿದ್ದು ಮಾತ್ರ ಅದ್ಭುತ ಲೋಕ

*****

ತಂತ್ರಜ್ಞಾನ ತರುವ ಸೊಗಸಿದು. ಕಣ್ಣಿಗೆ ಕಾಣುವುದೇ ಅಂತಿಮ ಎಂಬ ಭ್ರಮೆಯಲ್ಲಿ ಇರುವ ವ್ಯಕ್ತಿಗೆ, ಕಾಣದ ಜಗತ್ತನ್ನು ತೋರಿಸಿ ಅಚ್ಚರಿಪಡಿಸುವ ಸಾಮರ್ಥ್ಯ ತಂತ್ರಜ್ಞಾನ ಬಿಟ್ಟರೆ ಬಹುಶಃ ಅಧ್ಯಾತ್ಮಕ್ಕೆ ಮಾತ್ರ ಸಾಧ್ಯವೇನೋ. ಬೋರ್ಡ್‌, ಚಾಕ್‌ಪೀಸ್‌, ಇಕ್ಕಟ್ಟಾದ ತರಗತಿಯೊಳಗೇ ಒತ್ತೊತ್ತಾಗಿ ಕೂತು, ಶಿಕ್ಷಕರು ಹೇಳುವುದನ್ನೇ ನೋಟ್ಸ್‌ ಬರೆದುಕೊಳ್ಳುತ್ತ ಓದುವುದೇ ಕ್ರಮವಾಗಿದ್ದರೆ ಶಿಕ್ಷಣದಷ್ಟು ಬೇಸರದ ಸಂಗತಿ ಇನ್ನೊಂದಿಲ್ಲ.

ಈ ಕಾರಣಕ್ಕಾಗಿಯೇ ಸಾಮಾನ್ಯ ಸೂಕ್ಷ್ಮದರ್ಶಕದಂಥ ಯಂತ್ರವೂ ಕಲಿಕೆಯನ್ನು ಆಸಕ್ತಿಯ ವಿಷಯವಾಗಿಸುತ್ತದೆ. ಒಂದು ಸಾಮಾನ್ಯ ಗ್ಲೋಬ್‌ ಜಗತ್ತನ್ನು ಸುತ್ತಿಸುತ್ತದೆ. ಸೌರವ್ಹೂಹದ ಮಾದರಿ ಆಸಕ್ತಿಯನ್ನು ಅಂತರಿಕ್ಷದಾಚೆಗೆ ವಿಸ್ತರಿಸುತ್ತದೆ. ನಕಾಶೆಗಳು, ಗಣಿತದ ಚಿತ್ರವಿಚಿತ್ರ ಮಾದರಿಗಳು, ಪ್ರಯೋಗಾಲಯದಲ್ಲಿ ನೀರಲ್ಲಿಟ್ಟ ಬಿಳಿ ಗಂಧಕ ಗಾಳಿಯ ಸಂಪರ್ಕಕ್ಕೆ ಬಂದೊಡನೇ ಉರಿಯುವುದು, ಲಿಟ್ಮಸ್‌ ಹಾಳೆ ಬಣ್ಣ ಬದಲಿಸುವುದು, ಒಂದು ನಿರ್ದಿಷ್ಟ ಪ್ರಮಾಣಕ್ಕೆ ಪ್ರಣಾಳದಲ್ಲಿರುವ ದ್ರವ ಗುಲಾಬಿ ಬಣ್ಣಕ್ಕೆ ತಿರುಗುವುದು, ಹರಳುಗಳು ಬೆಳೆಯುವುದು, ಜೀವ ವಿಜ್ಞಾನ ವಿಭಾಗದಲ್ಲಿ, ಫಾರ್ಮಾಲ್ಡಿಹೈಡ್‌ ದ್ರಾವಣದಲ್ಲಿ ಮುಳುಗಿಸಿಟ್ಟ ಚಿತ್ರ ವಿಚಿತ್ರ ಜೀವಿಗಳು, ಅವುಗಳ ವಿಚಿತ್ರ ವೈಜ್ಞಾನಿಕ ಹೆಸರುಗಳು ಹೊಸ ಲೋಕವನ್ನೇ ತೆರೆದಿಡುತ್ತವೆ.

ಇನ್ನು, ಇಂಥ ಸಣ್ಣಪುಟ್ಟ ಚೋದ್ಯಗಳಿಗೆ ಕಂಪ್ಯೂಟರ್‌, ಜೈವಿಕ ತಂತ್ರಜ್ಞಾನ, ಆನಿಮೇಶನ್‌ನಂಥ ಇತ್ತೀಚಿನ ಮಹತ್ವದ ಸಂಶೋಧನೆಗಳ ಪ್ರವೇಶವಾದರೆ ಕಲಿಕೆ ಹೇಗಿರಬಹುದು?

ಊಹಿಸಿಕೊಂಡರೇ ರೋಮಾಂಚನವಾಗುತ್ತದೆ.

ನಿಜ. ಕಲಿಕೆ ಇವತ್ತು ಪೂರ್ತಿಯಾಗಿ ಬದಲಾಗುತ್ತಿದೆ. ಕೇವಲ ಹತ್ತು ವರ್ಷಗಳ ಹಿಂದೆ ಕಂಪ್ಯೂಟರ್‌ ಎಂದರೆ ಕಣ್ಕಣ್ಣು ಬಿಡುತ್ತಿದ್ದ ನಾವೆಲ್ಲ ಇವತ್ತು ಬದುಕಿಗೆ ಅದನ್ನೇ ಅವಲಂಬಿಸಿದ್ದೇವೆ. ಪತ್ರಿಕೋದ್ಯಮದಲ್ಲಿರುವ ನಮಗೆ ಸುದ್ದಿಗಳು ಬರುವುದು, ಹೋಗುವುದು, ಗುಲ್ಲೆಬ್ಬಿಸುವುದು, ಮೆಚ್ಚುಗೆ, ವಿರೋಧ, ಭಿನ್ನಾಭಿಪ್ರಾಯ, ಬೆಳವಣಿಗೆ ಹುಟ್ಟಿಸುವುದೇ ಕಂಪ್ಯೂಟರ್‌ನಿಂದ. ಲೇಖನ ಬರೆಯಲು ಬೇಕಾದ ಪೂರಕ ಸಾಮಾಗ್ರಿ ಹುಡುಕಿಕೊಂಡು ಪತ್ರಕರ್ತರ್ಯಾರೂ ಗ್ರಂಥಾಲಯಗಳಿಗೆ ಹೋಗುವುದಿಲ್ಲ. ಅಥವಾ, ಆ ಪರಿ ಬೆಳೆಯುತ್ತಿರುವ ವಿವಿಧ ಮಜಲುಗಳ ಸಾಮಾಗ್ರಿಗಳನ್ನೆಲ್ಲ ತಂದಿಡಲು ಗ್ರಂಥಾಲಯದಲ್ಲಿ ಜಾಗವೂ ಸಾಕಾಗುವುದಿಲ್ಲ.

ಹೀಗಾಗಿ, ಅಂತರ್ಜಾಲ (ಇಂಟರ್‌ನೆಟ್‌) ನಮ್ಮ ಅನಿವಾರ್ಯ ಅಂಗವಾಗಿದೆ. ಅತ್ಯುತ್ತಮ ಗೆಳೆಯನೂ ಆಗಿದೆ. ಅಲ್ಲಿ ಸಿಗದಿರುವ ವಿಷಯಗಳೇ ಇಲ್ಲ. ಏನೋ ಹುಡುಕಲು ಹೋಗಿ ಇನ್ಯಾವುದೇ ಸಂಗತಿ ಗೋಚರಿಸುತ್ತದೆ. ಅದರ ಹಿಂದೆ ಹೊರಟು ಇನ್ನೆಲ್ಲೋ ತಲುಪುತ್ತೇವೆ. ಕ್ಷಣಕ್ಷಣಕ್ಕೂ ಅಚ್ಚರಿಪಡುತ್ತ, ಕೈಗೆ ಸಿಕ್ಕ ವಿಷಯವನ್ನು ಕನ್ನಡಕ್ಕೆ ಆಕರ್ಷಕವಾಗಿ ಇಳಿಸುವುದು ಹೇಗೆಂದು ಯೋಚಿಸುತ್ತ, ಆ ದಿಕ್ಕಿನಲ್ಲಿ ಯತ್ನಿಸುತ್ತ, ನಾವೂ ಬೆಳೆಯುತ್ತಲೇ ಇದ್ದೇವೆ. ತಂತ್ರಜ್ಞಾನದ ಅಪಾರ ಸಾಧ್ಯತೆಗಳು ಓದು ಮುಗಿದ ನಂತರವೂ ನಮ್ಮನ್ನು ವಿದ್ಯಾರ್ಥಿಯಾಗಿಸಿವೆ. ಬರೆಯುವುದನ್ನೇ ಬದುಕಾಗಿಸಿಕೊಂಡ ನಮ್ಮನ್ನು ಓದಲು ಹಚ್ಚಿವೆ.

*****

ಕಲಿಕೆ ಇವತ್ತು ಹೈಟೆಕ್‌ ಆಗಿದೆ.

ಹಾಗೆ ಆಗಬೇಕಾಗಿರುವುದು ಅನಿವಾರ್ಯವೂ ಹೌದು. ಪೈಥಾಗೊರಸ್‌ನ ಪ್ರಮೇಯ ಕಲಿಯಲು ಗ್ರಾಫಿಕ್ಸ್‌ಗಳ ನೆರವು ದೊರೆತಿದೆ. ಸೌರವ್ಯೂಹ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಲು ಆನಿಮೇಶನ್‌ ಇದೆ. ನಿಮ್ಮ ಗುಂಡುಪಿನ್ನಿನ ಮೊನೆ ಹೆಬ್ಬರಳಿನಷ್ಟು ಅಗಲವಾಗಿ, ಅದರ ಮೇಲೆ ಕೂತ ಬ್ಯಾಕ್ಟೀರಿಯಾಗಳನ್ನು ನೋಡಬೇಕೆಂದರೆ ಎಲೆಕ್ಟ್ರಾನಿಕ್‌ ಸೂಕ್ಷ್ಮದರ್ಶಕ ಯಂತ್ರ ಇದೆ. ಮನುಷ್ಯ ಮಾತ್ರದವರು ಮುಳುಗಲು ಸಾಧ್ಯವಾಗದ ಸಾಗರ ತಳದ ಅಚ್ಚರಿಗಳನ್ನು ಹೆಕ್ಕಿ ತರಲು ರೋಬಾಟ್‌ಗಳು ಬಂದಿವೆ. ಕಲಿಕೆ ಈಗ ತರಗತಿಗಳ ನಾಲ್ಕು ಗೋಡೆ ದಾಟಿ ದಾಂಗುಡಿಯಿಟ್ಟಿದೆ.

ಹೀಗಾಗಿ, ಶಿಕ್ಷಣ ಕ್ಷೇತ್ರದ ಸಾಧ್ಯತೆಗಳು ಮೊದಲಿಗಿಂತ ವಿಸ್ತಾರವಾಗುತ್ತ ನಡೆದಿವೆ. ಹಿಂದಿನಂತೆ ಊರಲ್ಲಿಯ ಹೈಸ್ಕೂಲ್‌ನಲ್ಲಿ ಓದಿ, ಪಕ್ಕದ ದೊಡ್ಡ ಊರಲ್ಲಿ ಕಾಲೇಜ್‌, ನಗರದಲ್ಲಿ ಡಿಗ್ರಿ ಮುಗಿಸಿ ನಿರುದ್ಯೋಗಿಯಾಗಿ ಊರಿಗೆ ಮರಳುವ ಪ್ರಮೇಯ ಈಗಿಲ್ಲ. ಪಿಯುಸಿ ಎಂದರೆ ಆರ್ಟ್ಸ್‌, ಸೈನ್ಸ್‌, ಕಾಮರ್ಸ್‌ ಎಂಬ ಸಿದ್ಧ ಮಾದರಿಯ ಕಾಲ ಹೋಯಿತು. ಪಿಯುಸಿಗೆ ಸೇರುವಾಗಲೇ ಆದ್ಯತೆ ಸ್ಪಷ್ಟವಾಗಿರುತ್ತದೆ. ಮುಂದೆ ಎಂಜನಿಯರಿಂಗ್‌ ಹೋಗಬೇಕೆ? ಡಾಕ್ಟರ್‌ ಆಗಬೇಕೆ? ಪಶುವೈದ್ಯ ಕೋರ್ಸ್‌ ಹೇಗೆ? ಅಥವಾ ಸಾಫ್ಟ್‌ವೇರ್‌ ಎಂಜನಿಯರ್‌ ಆದರೆ ಹೇಗೆ? ಎಂಬೆಲ್ಲ ವಿಷಯಗಳನ್ನು ಗಮನಿಸಿಯೇ ಸೈನ್ಸ್‌ ತೆಗೆದುಕೊಳ್ಳುತ್ತಾರೆ. ಕಾಮರ್ಸ್‌ ಆದರೆ ಸಿ.ಎ. ಅಥವಾ ದೊಡ್ಡ ಕಂಪನಿಗಳಲ್ಲಿ ಅಕೌಂಟ್ಸ್‌ ಆಫೀಸರ್‌ ಆಗಲು ಬೇಕಾದ ವಿಷಯಗಳನ್ನೇ ಒತ್ತು ಕೊಟ್ಟು ಕಲಿಯಬೇಕು ಎಂಬ ಬೀಜ ಮೊಳಕೆಯೊಡೆದಿರುತ್ತದೆ. ಆರ್ಟ್ಸ್‌ ತೆಗೆದುಕೊಳ್ಳುವವರು ಎಲ್‌ಎಲ್‌ಬಿ, ಕೆಎಎಸ್‌ ಅಥವಾ ಐಎಎಸ್‌ ಕನಸು ಹೊತ್ತೇ ಅಡ್ಮಿಶನ್‌ ಪಡೆದಿರುತ್ತಾರೆ. ಕೊನೆಗೆ ಏನಿಲ್ಲವೆಂದರೂ, ಡಿ.ಇಡಿ., ಮುಂದೆ ಬಿ.ಇಡಿ. ಇದೆ ಎಂಬ ನಿರಾಳತೆ.

ಇಂಥ ಎಲ್ಲ ಬೆಳವಣಿಗೆಗಳ ಹಿಂದೆ ತಂತ್ರಜ್ಞಾನ ಸದ್ದಿಲ್ಲದೇ ಕೆಲಸ ಮಾಡುತ್ತಿದೆ. ನಿಮಗೆ ಒಂದು ವಿಷಯ ಹೇಳಿದರೆ ಅಚ್ಚರಿಯಾಗಬಹುದು. ಇವತ್ತು ಬೆಂಗಳೂರಿನ ಬಿಪಿಒ (ಹೊರಗುತ್ತಿಗೆ) ಕಂಪನಿಗಳಲ್ಲಿ ಕೆಲಸಕ್ಕಿರುವ ಶೇ.೭೦ರಿಂದ ೮೦ರಷ್ಟು ಉದ್ಯೋಗಿಗಳು ಎಂಜನಿಯರ್‌ಗಳೂ ಅಲ್ಲ, ವೈದ್ಯಕೀಯ ಓದಿದವರೂ ಅಲ್ಲ. ಅವರೆಲ್ಲ ಕೇವಲ ಬಿ.ಎ., ಬಿ.ಕಾಂ. ಓದಿದವರು. ಆದರೆ, ಬರೀ ಬಿ.ಎ. ಓದಿದರೆ ನೌಕರಿಯ ಮಾತಿರಲಿ, ಹಳ್ಳಿಯ ಬಸ್‌ಸ್ಟ್ಯಾಂಡ್‌ನ ಚಾದಂಗಡಿಯಲ್ಲಿ ಉದ್ರಿ ಕೂಡ ಹುಟ್ಟುವುದಿಲ್ಲ ಎಂಬ ಸತ್ಯದರ್ಶನ ಆಗಿರುವುದರಿಂದ, ಅವರೆಲ್ಲ ಕಂಪ್ಯೂಟರ್‌ ಕೋರ್ಸ್‌ ಮಾಡಿದರು. ನೌಕರಿ ಬೇಕೆಂದರೆ ಇಂಗ್ಲಿಷ್‌ ಗೊತ್ತಿರಬೇಕಿರುವುದು ಕಡ್ಡಾಯವಾಗಿದ್ದರಿಂದ ಮೂರು ತಿಂಗಳ ಸ್ಪೋಕನ್‌ ಇಂಗ್ಲಿಷ್‌ ತರಗತಿ ಮುಗಿಸಿ ಹೊರಬರುವ ಹೊತ್ತಿಗೆ ಆತ್ಮವಿಶ್ವಾಸ ಕುದುರಿತ್ತು. ಬಹುರಾಷ್ಟ್ರೀಯ ಬಿಪಿಒ ಕಂಪನಿಗಳು ಕೈಬೀಸಿ ಕರೆದವು. ಅವಕ್ಕೆ ಬೇಕಾದ ಕನಿಷ್ಠ ಅರ್ಹತೆಯನ್ನು ಗಳಿಸಿದ್ದರಾದ್ದರಿಂದ ನೌಕರಿಯೂ ಸಿಕ್ಕಿತು.

ಇಂಥದೇ ಮನಃಸ್ಥಿತಿ ಇತರ ಕೋರ್ಸ್‌‌ಗಳಲ್ಲಿಯೂ ಕಾಣಿಸಿಕೊಂಡಿದೆ. ತಂತ್ರಜ್ಞಾನ ಅಗಾಧವಾಗಿ ಬೆಳೆಯುತ್ತಿರುವುದರಿಂದ ಅದರ ಅಗತ್ಯ ಪೂರೈಸಲು ವಿಶೇಷ ತರಬೇತಿ ಹೊಂದಿದ ಮೆದುಳುಗಳ ಅವಶ್ಯಕತೆ ಇದೆ. ಈಗಂತೂ ಹೊಸ ಹೊಸ ರೋಗಗಳು ಬಂದಿವೆ. ಹಳೆಯ ಔಷಧಿ ಅವಕ್ಕೆ ನಾಟುವುದಿಲ್ಲ. ಅಲ್ಲೆಲ್ಲೋ ನಾಟಿ ಔಷಧಿಯೊಂದು ಕೆಲಸ ಮಾಡುತ್ತಿದೆ ಎಂಬ ಸುದ್ದಿ ಬರುತ್ತದೆ. ಅದರ ಮೇಲೆ ಸಂಶೋಧನೆ ಆಗಬೇಕು. ಅಲ್ಲಿಗೆ ಬಯೋಟೆಕ್ನಾಲಜಿಯ (ಜೈವಿಕ ತಂತ್ರಜ್ಞಾನ) ಪ್ರವೇಶವಾಗುತ್ತದೆ.

ತುಂಬ ಸೂಕ್ಷ್ಮ ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಮೆದುಳಿನ ಒಳಮೂಲೆಯ ಎಲ್ಲೋ ರಕ್ತ ಗಡ್ಡೆಕಟ್ಟಿದೆ. ತಲೆಬುರುಡೆ ಕೊರೆದು, ಹೆಪ್ಪುಗಟ್ಟಿದ ರಕ್ತ ಹೀರಬೇಕು. ಅದಕ್ಕೆ ವಿಶೇಷ ಉಪಕರಣಗಳೂ, ತಂತ್ರಜ್ಞಾನವೂ ಬೇಕು. ಅಲ್ಲಿ ನ್ಯಾನೋ ಟೆಕ್ನಾಲಜಿಯ (ಅತಿ ಸೂಕ್ಷ್ಮ ತಂತ್ರಜ್ಞಾನ) ಪ್ರವೇಶ ಅನಿವಾರ್ಯ.

ಹುಟ್ಟುವ ಹತ್ತು ಮಕ್ಕಳಲ್ಲಿ ಒಂದು ಮಗು ನರಸಂಬಂಧಿ ರೋಗಗಳಿಂದ ಬಳಲುತ್ತದೆ ಎಂಬುದು ಆಘಾತಕಾರಿಯಾದ ಅಂಶ. ಆಹಾರದಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ರಾಸಾಯನಿಕಗಳ ಬಳಕೆಯೂ ಇದಕ್ಕೆ ಕಾರಣವಾಗಿರಬಹುದು. ಗರ್ಭಧಾರಣೆಯಲ್ಲಿ ಉಂಟಾಗುವ ಕೋಶ ವಿಭಜನೆಯಲ್ಲಿ ಪುರುಷ ಹಾಗೂ ಸ್ತ್ರೀಯ ವಂಶವಾಹಿನಿಗಳಲ್ಲಿರುವ ಜೀನ್‌ಗಳು ಜೋಡಣೆಯಾಗುವಾಗ ಯಾವುದೋ ಒಂದು ಜೀನ್‌, ಯಾವ ಕಾರಣಕ್ಕೋ ಏನೋ, ತನ್ನ ಜಾಗದಿಂದ ನೆಗೆದು ಇನ್ನೆಲ್ಲೋ ಕೂತುಬಿಡುತ್ತದೆ. ಇದರಿಂದಾಗಿ ಹುಟ್ಟುವ ಮಗುವಿನಲ್ಲಿ ಬುದ್ಧಿಮಾಂದ್ಯವೋ, ಆಟಿಸಮ್ಮೋ ಕಾಣಿಸಿಕೊಳ್ಳುತ್ತದೆ. ಅಮೆರಿಕದಂತಹ ಮುಂದುವರೆದ ದೇಶಗಳಲ್ಲಿ ಈ ಸಮಸ್ಯೆ ಸಾಕಷ್ಟು ಬೆಳೆದಿದೆ. ಇದಕ್ಕೆಲ್ಲ ದೊಡ್ಡ ಪ್ರಮಾಣದ ಸಂಶೋಧನೆಗಳಾಗಬೇಕು. ಹೊಸ ಹೊಸ ಚಿಕಿತ್ಸಾ ಕ್ರಮಗಳು ಬರಬೇಕು. ಅವಕ್ಕೆಲ್ಲ ಹೊಸ ತಂತ್ರಜ್ಞಾನ ಬೇಕೇ ಬೇಕು.

ಹೀಗಾಗಿ ನಾವೆಲ್ಲ ಮತ್ತೆ ಹೊರಳುವುದು ಹಳ್ಳಿಯ ಮೂಲೆಗಳಲ್ಲಿರುವ ಇಕ್ಕಟ್ಟಾದ ತರಗತಿಗಳತ್ತಲೇ. ಅಲ್ಲಿರುವ ಉತ್ಸಾಹಿ, ಎಳೆ ಮನಸ್ಸುಗಳಿಗೆ ತಂತ್ರಜ್ಞಾನದ ನೆರವು ದೊರಕಿಸಬೇಕಿದೆ. ಕಲಿಕೆ ಆಕರ್ಷಕವಾಗಲು, ವೇಗವಾಗಲು, ಪರಿಣಾಮಕಾರಿಯಾಗಲು ಕುವೆಂಪು ಜೊತೆಗೆ ಕಂಪ್ಯೂಟರುಗಳೂ ಬೇಕು. ಅವನ್ನು ಬಳಸಲು ಗೊತ್ತಿರುವ, ಕಲಿಸಲು ಆಸಕ್ತರಾದ ಶಿಕ್ಷಕರೂ ಬೇಕು. ಹೈಸ್ಕೂಲ್‌ನಲ್ಲಿ ಮೈಕ್ರೋಸ್ಕೋಪ್‌ ಬಳಸಲು ಗೊತ್ತಿರುವ ವಿದ್ಯಾರ್ಥಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್‌ ಮೈಕ್ರೋಸ್ಕೋಪ್‌ ಕಂಡಾಗ ಅಳುಕುವುದಿಲ್ಲ. ಹೈಸ್ಕೂಲ್‌ನಲ್ಲಿಯೇ ಕಂಪ್ಯೂಟರ್‌ ಬಳಸುವುದನ್ನು ಗೊತ್ತು ಮಾಡಿಕೊಂಡಿರುವ ವಿದ್ಯಾರ್ಥಿನಿ, ಸಾಫ್ಟ್‌ವೇರ್‌ ರೂಪಿಸುವಾಗ ಗೊಂದಲಗೊಳ್ಳುವುದಿಲ್ಲ. ತುಳಿದ ಹಾದಿ ಹಳೆಯದಾದಷ್ಟೂ ವೇಗವಾಗಿ ಹೊಸ ಹಾದಿ ನಮಗಾಗಿ ತೆರೆದುಕೊಳ್ಳುತ್ತ ಸಾಗುತ್ತದೆ.

ಆದರೆ, ಎಲ್ಲಿಯವರೆಗೆ ನಮ್ಮ ಶಿಕ್ಷಕರು ಪಠ್ಯಪುಸ್ತಕಗಳನ್ನಷ್ಟೇ ಬೋಧನೆಯ ಆಕರಗಳನ್ನಾಗಿ ಮಾಡಿಕೊಂಡಿರುತ್ತಾರೆಯೋ, ಅಲ್ಲಿಯವರೆಗೆ ಮಕ್ಕಳ ಮನಸ್ಸುಗಳಲ್ಲಿ ಅವರು ಕ್ರಿಯಾಶೀಲತೆ ತುಂಬಲಾರರು. ವಿಜ್ಞಾನದ ಶಿಕ್ಷಕನಿಗೆ ಕೊಂಚ ತಂತ್ರಜ್ಞಾನವೂ ಗೊತ್ತಿರಬೇಕು. ಕನ್ನಡ ಪಂಡಿತರಿಗೆ ಷೇಕ್ಸ್‌ಪಿಯರ್‌ ಗೊತ್ತಿದ್ದರೆ ಅನುಕೂಲವೇ ಅಲ್ಲವೆ? ಗಣಿತ ಮೇಷ್ಟ್ರರಿಗೆ ಕ್ಯಾಲ್ಕುಲೇಟರ್‌ ಬಳಸುವುದೂ ಗೊತ್ತಿಲ್ಲ ಎಂದರೆ ಹೇಗೆ? ನಮ್ಮ ದಿಗಂತಗಳು ವಿಸ್ತಾರವಾದರೆ ತಾನೆ ನಮ್ಮ ಮಕ್ಕಳು ಹೊಸ ದಿಗಂತ ಕಾಣುವುದು?

ತಂತ್ರಜ್ಞಾನ ಎಂಬುದೊಂದು ಓಡುವ ಕುದುರೆ. ನಾವೆಲ್ಲ ಅಶ್ವಾರೋಹಿಗಳು. ಸಣ್ಣ ವಯಸ್ಸಿನಲ್ಲಿಯೇ ಕುದುರೆಯನ್ನು ಕೊಂಚ ಮುಟ್ಟಿದರೆ, ಅದರ ಸಂಪರ್ಕ ಬಂದರೆ, ಬೆಳೆಯುತ್ತ ಹೋದಂತೆ ನಾವೇ ಅದನ್ನು ಪಳಗಿಸುತ್ತೇವೆ. ನಮಗೆ ಬೇಕೆನ್ನಿಸಿದ ಕಡೆ, ಬೇಕಾದ ಹಾಗೆ ಅದನ್ನು ಓಡಿಸುವುದು ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ಸವಾರಿ ಗೊತ್ತಿರದವರನ್ನು ದಾರಿಯಲ್ಲೇ ಕೆಡುವುವ ಕುದುರೆ ತನ್ನ ಪಾಡಿಗೆ ತಾನು ಓಡುತ್ತ ಹೋಗುತ್ತದೆ.

ಹಾಗಾಗಬಾರದಲ್ಲವೆ?

- ಚಾಮರಾಜ ಸವಡಿ