ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

4 Oct 2008


ಪತ್ರಿಕೆ ಓದುವುದನ್ನು ಕೇಳಿದ್ದೀರಾ?

ಗೊಂದಲ ಬೇಡ, ನಾನು ಸರಿಯಾಗಿಯೇ ಕೇಳುತ್ತಿದ್ದೇನೆ. ನಾವೆಲ್ಲ ಪತ್ರಿಕೆ ಓದುತ್ತೇವೆ. ಬಹುತೇಕ, ಮನಸ್ಸಿನೊಳಗೇ ಓದುತ್ತೇವೆ. ಆದರೆ, ಹಳ್ಳಿಗಳಲ್ಲಿ ಪತ್ರಿಕೆಯನ್ನು ಗಟ್ಟಿಯಾಗಿ ಓದುವುದನ್ನು ಕೇಳಿದ್ದೀರಾ?

ಒಮ್ಮೆ ಕೇಳಬೇಕು ನೀವು. ಬಲೇ ತಮಾಷೆಯಾಗಿರುತ್ತದೆ. ಹೆಡ್ಡಿಂಗ್‌ನಿಂದ ಹಿಡಿದು, ಕೊನೆಗೆ ಅಚ್ಚಾಗಿರುವ ಏಜೆನ್ಸಿ ಹೆಸರುಗಳಿಂದ ಅಥವಾ ಬೈಲೈನ್‌ಗಳಿಂದ ಹಿಡಿದು ಪ್ರತಿಯೊಂದನ್ನೂ ಗಟ್ಟಿಯಾಗಿ ಓದುತ್ತಾರೆ ಕೆಲವರು. ಅವರು ಓದುವುದನ್ನು ಸುತ್ತಮುತ್ತ ಹತ್ತಾರು ಜನ ಗಮನವಿಟ್ಟು ಕೇಳುತ್ತಿರುತ್ತಾರೆ. ಅಲ್ಲಿ ಚರ್ಚೆಗಳು ನಡೆಯುತ್ತವೆ. ವಾದಗಳಾಗುತ್ತವೆ. ವಿವಾದಗಳೂ ಹುಟ್ಟಿಕೊಳ್ಳುತ್ತವೆ. ಸುದ್ದಿಯ ಪರ ಮತ್ತು ವಿರೋಧಿ ಗುಂಪುಗಳು ಸೃಷ್ಟಿಯಾಗಿ ಸಣ್ಣ ಜಗಳಗಳೂ ನಡೆಯುವುದುಂಟು. ಅದಕ್ಕೇ ಕೇಳಿದ್ದು, ಪತ್ರಿಕೆ ಓದುವುದನ್ನು ಕೇಳಿದ್ದೀರಾ ಎಂದು.

ಒಂದೆರಡು ತಮಾಷೆ ಪ್ರಸಂಗಗಳು ಇಲ್ಲಿ ನೆನಪಾಗುತ್ತವೆ.

ನಮ್ಮ ಕಡೆ ಸಂಯುಕ್ತ ಕರ್ನಾಟಕ ಏಕಮೇವಾದ್ವಿತೀಯ ಪತ್ರಿಕೆಯಾಗಿದ್ದ ಕಾಲವದು. ನಮ್ಮೂರಿಗೆ ಬರುತ್ತಿದ್ದ ಪತ್ರಿಕೆಗಳ ಪೈಕಿ ಸಂ.ಕ.ದ್ದೇ ಸಿಂಹಪಾಲು. ಅದು ಬೆಳಿಗ್ಗೆ ಹತ್ತಕ್ಕೆ ಬಂದರೆ, ಪ್ರಜಾವಾಣಿ ಮಧ್ಯಾಹ್ನ ಮೂರು ಗಂಟೆಗೆ ಬರುತ್ತಿತ್ತು. ಕನ್ನಡಪ್ರಭ ಬಂದರೆ ಬಂತು ಇಲ್ಲವೆಂದರೆ ಇಲ್ಲ. ಹೀಗಾಗಿ, ಸಂ.ಕ. ಬರುವುದನ್ನೇ ಕಾಯುತ್ತ ಹೋಟೆಲ್ ಪಕ್ಕದ ಬಸ್‌ಸ್ಟ್ಯಾಂಡ್‌ನಲ್ಲಿ ಜನ ಕೂತಿರುತ್ತಿದ್ದರು. ಪತ್ರಿಕೆ ಬರುವುದೊಂದೇ ತಡ, ಹೋಟೆಲ್ ಕಾಪಿ ಹಾಕಿದ ಹುಡುಗ, ಊರೊಳಗೆ ಪತ್ರಿಕೆ ಹಂಚಲು ಹೋಗುತ್ತಿದ್ದ. ಇದ್ದ ಒಂದು ಪತ್ರಿಕೆ ಅಷ್ಟೂ ಪುಟಗಳನ್ನು ಹಂಚಿಕೊಂಡು ಜನ ಓದಲು ಗುಂಪುಗುಂಪಾಗಿ ಕೂಡುತ್ತಿದ್ದರು. ಅವರ ಪೈಕಿ ಬಹುತೇಕರು ಅನಕ್ಷರಸ್ಥರು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಪತ್ರಿಕೆಗಳ ಸುದ್ದಿಗಳೂ ಬಲೇ ತಮಾಷೆಯಾಗಿರುತ್ತಿದ್ದವು. ಅಪರಾಧ ಸುದ್ದಿಗಳಿಗೆ ಎಲ್ಲಿಲ್ಲದ ರೋಚಕತೆ. ಪುಟಗಳು ಹಂಚಿಹೋಗಿರುತ್ತಿದ್ದುದರಿಂದ, ಮುಖ್ಯ ಸುದ್ದಿ ಯಾವುದು ಎಂಬುದು ನಗಣ್ಯವಾಗುತ್ತಿತ್ತು. ಸಿಕ್ಕ ಪುಟದಲ್ಲಿನ ಸುದ್ದಿಗಳನ್ನೇ ಒಬ್ಬ ಜೋರಾಗಿ ಓದುತ್ತ ಹೋಗುತ್ತಿದ್ದ. ಪ್ರತಿಯೊಂದು ಪ್ಯಾರಾಕ್ಕೂ ಆತ ನಿಲ್ಲಲೇಬೇಕು. ಏಕೆಂದರೆ, ಸುದ್ದಿ ಕೇಳುತ್ತಿದ್ದವರ ಕಾಮೆಂಟ್‌ಗಳಿಗೆ ಅವಕಾಶ ಬೇಕಲ್ಲ! ಆಗ (ಈಗ ಕೂಡಾ) ಸಂಯುಕ್ತ ಕರ್ನಾಟಕದ ನ್ಯೂಸ್ ಪ್ರಿಂಟ್ ಗುಣಮಟ್ಟ ಅಷ್ಟಕ್ಕಷ್ಟೇ. ಎರಡು ಕೈಗಳು ಬದಲಾಯಿಸುವುದರಲ್ಲಿ ಪತ್ರಿಕೆಯ ಅಕ್ಷರಗಳು ಮಸುಕಾಗಿ, ಹಾಳೆ ಮುದ್ದೆಯಾಗಿ ಓದುವುದು ಕಷ್ಟವಾಗಿಬಿಡುತ್ತಿತ್ತು. ಆಗ ಬಣ್ಣದ ಮುದ್ರಣ ಬಂದಿದ್ದಿಲ್ಲ. ಅಥವಾ ಸಂ.ಕ. ಅದನ್ನು ಅಳವಡಿಸಿಕೊಂಡಿರಲಿಲ್ಲ. ಚಿತ್ರಗಳೋ ಚುಕ್ಕೆಚುಕ್ಕೆಗಳ ಗುಪ್ಪೆಗಳು. ಆದರೂ, ಅದು ತರುತ್ತಿದ್ದ ಸುದ್ದಿಗಳು ರೋಚಕವಾಗಿರುತ್ತಿದ್ದವು.

ಪತ್ರಿಕೆ ಬಿಡಿಸಿಕೊಂಡು ಮೇಲಿನಿಂದ ಓದಲು ಶುರು ಮಾಡಿದರೆ ಜನ ನಿಶ್ಯಬ್ದವಾಗಿ ಕೇಳುತ್ತಿದ್ದರು. ಅದೇನೋ ಗೊತ್ತಿಲ್ಲ, ಅವತ್ತಿಗೂ ಇವತ್ತಿಗೂ ಸಂ.ಕ.ದ ಬಹುತೇಕ ಸುದ್ದಿಗಳು ’ನಮ್ಮ ಪ್ರತಿನಿಧಿಯಿಂದ’ ಎಂಬ ಒಕ್ಕಣೆಯಿಂದ ಶುರುವಾಗುತ್ತವೆ. ಹೆಡ್ಡಿಂಗ್ ಮುಗಿದ ಕೂಡಲೇ ಕಂಸದಲ್ಲಿ ’ನಮ್ಮ ಪ್ರತಿನಿಧಿಯಿಂದ’ ಎಂಬುದು ಶುರುವಾಗಬೇಕು. ಹಾಗಂದರೇನು ಎಂಬುದು ಆಗ ಗೊತ್ತಿದ್ದಿಲ್ಲ. ಅದರ ನಿಜಾರ್ಥ ತಿಳಿದಿದ್ದೇ ನಾನು ಪತ್ರಿಕೋದ್ಯಮಕ್ಕೆ ಬಂದಾಗ. ತಮ್ಮ ವರದಿಗಾರ ನೀಡಿದ ಸುದ್ದಿಗಳನ್ನೇ ಸಂ.ಕ. ನಮ್ಮ ಪ್ರತಿನಿಧಿಯಿಂದ ಎಂದು ಬಲೇ ಹೆಮ್ಮೆಯಿಂದ ಅಚ್ಚು ಹಾಕಿಕೊಳ್ಳುತ್ತಿತ್ತು. ಅದು ಈಗಲೂ ಇದೆ.

ಅವತ್ತು ಬಂದ ಸುದ್ದಿ ಯಾವುದೋ ಹಳೆಯ ಕ್ರೈಂ. ವಿವಾಹಿತೆಯ ಮೇಲೆ ಅತ್ಯಾಚಾರ ಎಸಗಿದ್ದ ಸುದ್ದಿಯದು. ಕಟ್ಟೆಯ ಮೇಲೆ ಕೂತವ ರಾಗವಾಗಿ ಓದಲು ಶುರು ಮಾಡಿದ: ವಿವಾಹಿತೆಯ ಮೇಲೆ ಅತ್ಯಾಚಾರ ನಮ್ಮ ಪ್ರತಿನಿಧಿಯಿಂದ...

ಅತ್ಯಾಚಾರ ಎಲ್ಲಾಯಿತು, ಹೇಗಾಯಿತು, ಪೊಲೀಸರು ಏನು ಹೇಳುತ್ತಾರೆ, ಇತ್ಯಾದಿ ವಿವರಗಳೆಲ್ಲ ಮುಗಿದ ನಂತರ, ಸಮಾಜ ಕೆಟ್ಟು ಹೋಗುತ್ತಿದೆ, ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂಬ ಕಳವಳದೊಂದಿಗೆ ವರದಿ ಮುಕ್ತಾಯವಾಗುತ್ತಿತ್ತು. ಮುಂದಿನ ಸುದ್ದಿಗೆ ಹೋಗುವ ಮುನ್ನ, ಕಟ್ಟೆಯ ಮೇಲೆ ಕೂತವರಿಂದ ಕಾಮೆಂಟ್‌ಗಳು, ಚರ್ಚೆ, ವಾಗ್ವಾದ.

ತಾಕತ್ತಿದ್ದರೆ ಸ್ಪರ್ಧಿಸಿ, ಸಚಿವರಿಗೆ ಪಾಟೀಲ್ ಸವಾಲ್ ನಮ್ಮ ಪ್ರತಿನಿಧಿಯಿಂದ ಗದಗ ಜೂನ್ ೨೯ ಒಂದು ವೇಳೆ ...ರಿಗೆ ನಿಜವಾದ ತಾಕತ್ತಿದ್ದರೆ ಗದಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಹುಲಕೋಟಿ ಹುಲಿ ಕೆ.ಎಚ್. ಪಾಟೀಲ್ ಕಾಂಗ್ರೆಸ್ ಸಚಿವರಿಗೆ ಸವಾಲು ಹಾಕಿದ್ದಾರೆ. ಖಾಸಗಿ ಸಮಾರಂಭಕ್ಕೆ ಇಲ್ಲಿಗೆ ಆಗಮಿಸಿದ್ದ ಅವರು ಈ ಸವಾಲು ಒಡ್ಡಿದ್ದಾರೆ... - ಹೀಗೆ ಸುದ್ದಿಗಳು ಪುಂಖಾನುಪುಂಖವಾಗಿ ಓದಲ್ಪಡುತ್ತಿದ್ದವು. ಅಲ್ಲಿ ಕೂತ ಯಾರಿಗೂ ಅರ್ಜೆಂಟ್ ಕೆಲಸಗಳಿರುತ್ತಿದ್ದಿಲ್ಲ. ಮಧ್ಯಾಹ್ನದವರೆಗೆ ಸಮಯ ಕಳೆಯುತ್ತಿದ್ದುದೇ ಹೀಗೆ.

ಟಿವಿ ಎಂಬ ವಸ್ತುವಿನ ಅಸ್ತಿತ್ವವೇ ಇಲ್ಲದ, ಟೇಪ್ ರೆಕಾರ್ಡರ್‍ಗಳಿನ್ನೂ ಕಾಲಿಟ್ಟಿರದ ದಿನಗಳಲ್ಲಿ ಪತ್ರಿಕೆಗಳು ಹಾಗೂ ಅವುಗಳಲ್ಲಿ ಬರುತ್ತಿದ್ದ ಚಿತ್ರ-ವಿಚಿತ್ರ ಸುದ್ದಿಗಳು ಹಳ್ಳಿಗಳನ್ನು ಆವರಿಸಿಕೊಂಡಿದ್ದವು. ನನಗೆ ಓದುವ ಆಸಕ್ತಿ ಹುಟ್ಟಿದ್ದೇ ಇವುಗಳಿಂದ. ನಮ್ಮ ಹಳ್ಳಿಯ ಆಚೆ ಬೇರೆಯದೇ ಆದ ಜಗತ್ತಿದೆ ಎಂಬ ಸತ್ಯವನ್ನು ನಿತ್ಯವೂ ಬಿತ್ತರಿಸುತ್ತ, ಆ ಜಗತ್ತನ್ನೊಮ್ಮೆ ಕಾಣಬೇಕೆಂಬ ಹುಚ್ಚನ್ನು ಬಿತ್ತಿದ್ದು ಅವು.

ಇದೆಲ್ಲಾ ಏಕೆ ನೆನಪಾಯಿತೆಂದರೆ, ಇವತ್ತು ನಸುಕಿನಲ್ಲಿ ಹೋದ ಕರೆಂಟ್ ಬೇಗ ಬರಲೇ ಇಲ್ಲ. ಕಂಪ್ಯೂಟರ್ ಗೌರಮ್ಮನಂತೆ ಕೂತಿತ್ತು. ಟಿವಿ ಸತ್ತುಹೋಗಿತ್ತು. ರೇಡಿಯೋದಲ್ಲಿ ಸುದ್ದಿ ಬರುವ ಸಮಯ ಪತ್ತೆ ಹಚ್ಚುವುದೇ ಕಷ್ಟ. ಬಂದರೂ ಅವು ಸರ್ಕಾರಿ ಸುದ್ದಿಗಳು. ಏನು ಮಾಡುವುದು? ಪತ್ರಿಕೆ ಹಾಕುವ ಹುಡುಗನ ದಾರಿ ಕಾಯುತ್ತ ನಿಂತಾಗ ಹಳೆಯ ದಿನಗಳು ಕಣ್ಮುಂದೆ ಸುಳಿದವು. ಹಳ್ಳಿ, ಹೋಟಲ್, ಬಸ್‌ಸ್ಟ್ಯಾಂಡ್ ಹೆಸರಿನ ಸಣ್ಣ ಕಟ್ಟೆ, ಅಲ್ಲಿನ ಜನ, ಅವರ ಸುದ್ದಿ ದಾಹ ಎಲ್ಲಾ ನೆನಪಾಗುತ್ತ ಹೋದವು.

- ಚಾಮರಾಜ ಸವಡಿ

2 comments:

ಆಲಾಪಿನಿ said...

ಸರ್‌, ನಿಜವಾಗಲೂ ತುಂಬಾ ಇಂಟ್ರೆಸ್ಟಿಂಗ್ ಆಗಿದೆ

Chamaraj Savadi said...

ಥ್ಯಾಂಕ್ಸ್‌.

- ಚಾಮರಾಜ ಸವಡಿ