ಮೈಕೇಲ್, ಮೊಬೈಲ್‌ಮತ್ತು ಗ್ರಾಮೀಣ ಅಭಿವೃದ್ಧಿ

6 Sept 2009

(ಮೈಕೇಲ್‌ ರಿಗ್ಸ್. ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಜ್ಞಾನ ಮತ್ತು ಮಾಹಿತಿ ನಿರ್ವಹಣೆ ಅಧಿಕಾರಿ. ಐ.ಸಿ.ಟಿ. (ಇನ್‌ಫರ್ಮೇಶನ್ ಅಂಡ್ ಕಮ್ಯನಿಕೇಶನ್‌ ಟೆಕ್ನಾಲಜಿ) ಅಂದರೆ, ಮಾಹಿತಿ ಮತ್ತು ದೂರಸಂಪರ್ಕ ತಂತ್ರಜ್ಞಾನವನ್ನು ಗ್ರಾಮೀಣ ಅಭಿವೃದ್ಧಿಗೆ ಬಳಸಲು ಪ್ರೇರೇಪಿಸುವುದು ಅವರ ಜವಾಬ್ದಾರಿ. ಆಗಸ್ಟ್ ಕೊನೆಯ ವಾರದಲ್ಲಿ ಬೆಂಗಳೂರಿಗೆ ಬಂದಿದ್ದ ರಿಗ್ಸ್ ಕನಿಂಗ್‌ಹ್ಯಾಮ್‌ ರಸ್ತೆಯಲ್ಲಿರುವ ದಿ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯಲ್ಲಿ ಭಾಷಣ ಮಾಡಿದರು. ತಂತ್ರಜ್ಞಾನದ ನೆರವಿನಿಂದ ಗ್ರಾಮೀಣ ಅಭಿವೃದ್ಧಿ ಸುಲಭ ಎಂಬುದು ಅವರ ಮಾತಿನ ಸಾರಾಂಶ. ಆ ಸಂದರ್ಭದಲ್ಲಿ ಹಾಜರಿದ್ದ ಕೃಷಿ ಸಂಪದ ತಂಡ ಗ್ರಹಿಸಿದ ವಿವರ ಇಲ್ಲಿದೆ)

ಒಂದು ಸರಳ ಮಾಹಿತಿ ಸಾಧನವೊಂದು ನಮ್ಮ ಗ್ರಾಮೀಣ ಪ್ರದೇಶದ ಬದುಕನ್ನೇ ಪ್ರಗತಿಯತ್ತ ಕೊಂಡೊಯ್ಯಬಲ್ಲುದೆ? ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಅಧಿಕಾರಿ ಮೈಕೇಲ್ ರಿಗ್ಸ್ ಪ್ರಕಾರ ಅದು ಖಂಡಿತ ಸಾಧ್ಯ. ಇದಕ್ಕೆ ಅವರು ನೀಡುವ ಉದಾಹರಣೆ ಮೊಬೈಲ್.

ಮೊಬೈಲ್‌ಯಂತ್ರದ ಬಳಕೆಯ ಸಾಧ್ಯತೆಗಳು ಅಪಾರ ಅಂತಾರೆ ರಿಗ್ಸ್. ಇದರಿಂದ ರೈತ ಮತ್ತು ಮಾಹಿತಿ ಭಂಡಾರದ ನಡುವಿನ ದೂರ ಇಲ್ಲವಾಗುತ್ತದೆ. ರೈತನಿಗೆ ಬೇಕಾದ ಮಾಹಿತಿಯನ್ನು ಸಂಬಂಧಿಸಿದ ಸಂಸ್ಥೆ ಅಥವಾ ಸರ್ಕಾರ ತಕ್ಷಣ ಅವರಿಗೆ ತಲುಪಿಸಬಹುದು. ಬರ, ಅತಿವೃಷ್ಟಿ, ಕೀಟಬಾಧೆ, ಬೆಲೆ ಏರಿಳಿತ, ಯಾವ ಪ್ರದೇಶಕ್ಕೆ ಯಾವ ಬೆಳೆ ಸೂಕ್ತ, ಬಿತ್ತನೆ ಹೇಗೆ, ಕಾಲಕಾಲಕ್ಕೆ ಅನುಸರಿಸಬೇಕಾದ ಬೇಸಾಯ ಕ್ರಮಗಳಾವವು, ಯಾವ ಮಣ್ಣಿಗೆ ಎಂಥ ಬೆಳೆ ಸೂಕ್ತ- ಹೀಗೆ ಕೃಷಿ ಸಂಬಂಧಿ ವಿಷಯಗಳೆಲ್ಲವನ್ನೂ ಮೊಬೈಲ್‌ ಮೂಲಕ ಅಪ್‌ಡೇಟ್ ಮಾಡುತ್ತ ಹೋಗಬಹುದು. ಒಂದೇ ಸಂದೇಶವನ್ನು ಸಂಬಂಧಿಸಿದ ಎಲ್ಲ ರೈತರಿಗೂ ಏಕಕಾಲಕ್ಕೆ ತಲುಪಿಸುವುದು ಮೊಬೈಲ್ ಮೂಲಕ ಸುಲಭ. ಅಷ್ಟೇ ಅಲ್ಲ, ರೈತರೈತರ ನಡುವೆ ಕೂಡ ಇದು ಸಂಪರ್ಕ ಸಾಧನವಾಗಿ, ಮಾಹಿತಿ ವಿನಿಮಯಕ್ಕೆ ನೆರವಾಗಬಲ್ಲುದು.

ಇಂಥದೇ ಇನ್ನೊಂದು ತಂತ್ರಜ್ಞಾನ ವಿಡಿಯೋ ಕಾನ್ಫೆರೆನ್ಸಿಂಗ್. ರೈತನ ಹೊಲದ ವಾಸ್ತವ ಪರಿಸ್ಥಿತಿ ಏನೆಂಬುದನ್ನು ಇಲ್ಲಿ ತಕ್ಷಣ ಅರಿಯಬಹುದು. ಸಂಬಂಧಿಸಿದ ರೈತರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ನೇರವಾಗಿ ಮಾತನಾಡಿ, ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬಹುದು. ಇದರಿಂದ ಹಣ ಮತ್ತು ಸಮಯದ ಅಪಾರ ಉಳಿತಾಯವಾಗುತ್ತದೆ ಮತ್ತು ಪರಿಹಾರ ಕೂಡ ಶೀಘ್ರವಾಗಿ ಲಭಿಸುತ್ತದೆ ಅಂತಾರೆ ಮೈಕೇಲ್‌ ರಿಗ್ಸ್.

ಈ ಎಲ್ಲ ಉದಾಹರಣೆಗಳು ಕೇವಲ ಆದರ್ಶಗಳಲ್ಲ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ವಿವಿಧ ದೇಶಗಳಲ್ಲಿ ಇದನ್ನು ಯಶಸ್ವಿಯಾಗಿ ಪ್ರಯೋಗಿಸಿದೆ. ರೈತರೆಂದರೆ ಏನೂ ಗೊತ್ತಿರದ ಜನ ಎಂಬ ಭ್ರಮೆಯನ್ನು ಬದಿಗಿಟ್ಟು, ತಂತ್ರಜ್ಞಾನವನ್ನು ಅವರ ಕೈಗೆ ತಲುಪಿಸಿದರೆ ಪ್ರಗತಿ ಖಂಡಿತ. ಗ್ರಾಮೀಣ ಪ್ರದೇಶದ ಜನ ಹೇಗೆ ಬದುಕುತ್ತಿದ್ದಾರೆ ಎಂಬ ಕಲ್ಪನೆಯೇ ಬಹಳಷ್ಟು ಕಡೆ ಸ್ಪಷ್ಟವಾಗಿಲ್ಲ. ಹೀಗಿರುವಾಗ, ಅವರಿಗಾಗಿ ರೂಪಿಸುವ ಯೋಜನೆಗಳು ಅವರನ್ನು ತಲುಪುವುದಾದರೂ ಹೇಗೆ ಎಂಬುದು ರಿಗ್ಸ್ ಪ್ರಶ್ನೆ.

ತಂತ್ರಜ್ಞಾನವನ್ನು ಬಳಸಿ, ಗ್ರಾಮೀಣ ಪ್ರದೇಶವನ್ನು ಕಾಡುತ್ತಿರುವ ಸಮಸ್ಯೆಗಳನ್ನು ಅರಿತುಕೊಳ್ಳಿ. ನಂತರ, ಅವನ್ನು ನಿವಾರಿಸುವ ಕುರಿತು ಯೋಜನೆಗಳನ್ನು ರೂಪಿಸಿ. ಅವುಗಳ ಮಾಹಿತಿಯನ್ನು ಸಂಬಂಧಿಸಿದವರಿಗೆ ತಲುಪಿಸಿ. ಅವರೂ ಈ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಉತ್ತೇಜಿಸಿ. ಮೊಬೈಲ್‌ಕಂಪನಿಗಳು ಕೂಡ ಈ ಕೆಲಸಕ್ಕೆ ಕೈಜೋಡಿಸಬಲ್ಲವು. ಆಗ ಯಾವೊಂದು ಸಮಸ್ಯೆಯೂ ಅಲ್ಲಿಯೇ ಉಳಿದುಬಿಡದೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ಬರುತ್ತದೆ. ಆಗ ಪರಿಹಾರ ಸುಲಭ. ಹಲವಾರು ಬುದ್ಧಿಜೀವಿಗಳು ಹಾಗೂ ತಂತ್ರಜ್ಞರು ಸೇರಿ ರೂಪಿಸಿದ್ದು ಮಾಹಿತಿ ಮತ್ತು ತಂತ್ರಜ್ಞಾನ ಬಳಕೆಯ ಈ ಐಡಿಯಾ. ಹಿಂದುಳಿದ ದೇಶವಾದ ಕೋಸ್ಟರಿಕ, ಭೂತಾನ್‌, ಅಭಿವೃದ್ಧಿಶೀಲ ದೇಶಗಳಾದ ಶ್ರೀಲಂಕಾ, ಮಲೇಷ್ಯದಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ  ಅಂತಾರೆ ರಿಗ್ಸ್.

'ಗ್ರಾಮೀಣ ಪ್ರದೇಶಕ್ಕೆ ಮಾಹಿತಿ ರವಾನಿಸುವುದು ಎಲ್ಲಾ ಕಾಲದಲ್ಲೂ ಎದುರಾಗಿರುವ ದೊಡ್ಡ ಸವಾಲು. ಇವತ್ತಿಗೂ ತುಂಬ ಜನ ಇದು ಕಷ್ಟಕರ ಎಂದೇ ಭಾವಿಸಿದ್ದಾರೆ. ಅವರ ಪ್ರಕಾರ ಮಾಹಿತಿ ಎಂದರೆ ಅಕ್ಷರರೂಪದಲ್ಲಿ ಇರುವಂಥದು. ವೆಬ್‌ಸೈಟ್, ದಿನಪತ್ರಿಕೆಗಳಲ್ಲಿ ಬರುವ ಮಾಹಿತಿಯನ್ನು ರೈತ ಓದಬಲ್ಲನೆ? ಎಂಬುದು ಅವರ ಪ್ರಶ್ನೆ. ನಿಜ, ರೈತನಿಗೆ ವೆಬ್‌ಸೈಟ್‌ನೋಡಲು ಆಗಲಿಕ್ಕಿಲ್ಲ. ಆದರೆ, ಸರ್ಕಾರ ನೋಡಬಹುದಲ್ಲ? ಸಂಬಂಧಿಸಿದ ಅಧಿಕಾರಿಗಳು ನೋಡಬಹುದು. ಅಲ್ಲಿಂದ ಹೆಕ್ಕಿದ ಮಾಹಿತಿಯನ್ನು ರೈತನಿಗೆ ತಲುಪಿಸುವುದಷ್ಟೇ ಮುಂದಿನ ಕೆಲಸ. ಮೊಬೈಲ್‌ಆ ಕೆಲಸವನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಬಹುದು. ರೇಡಿಯೋದಂತೆ ಇಲ್ಲಿ ಒಮ್ಮುಖ ಸಂಪರ್ಕ ಇಲ್ಲ. ರೈತ ಮತ್ತು ಸಂಬಂಧಿಸಿದ ವ್ಯಕ್ತಿಗಳೊಂದಿಗೆ ನೇರ ಸಂವಾದ ಸಾಧ್ಯವಿರುವುದರಿಂದ, ಸಮಸ್ಯೆ ಬೇಗ ಪರಿಹಾರ ಕಾಣಬಲ್ಲುದು' ಎಂಬುದು ಮೈಕೇಲ್‌ ರಿಗ್ಸ್ ವಾದ.

ಹೀಗಾಗಿ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಮಾಹಿತಿ ತಂತ್ರಜ್ಞಾನದ ನೆರವಿನಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮುಂದಾಗಿದೆ. ಅದರಲ್ಲೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತದಂಥ ದೇಶದಲ್ಲಿ, ಪ್ರಗತಿಯ ಸಾಧ್ಯತೆಗಳು ಅಪಾರ. ಇಲ್ಲಿ ಮೊಬೈಲ್‌ದರ ಅತ್ಯಂತ ಕಡಿಮೆ. ವ್ಯಾಪ್ತಿ ಹೆಚ್ಚು. ಹಲವಾರು ಕಂಪನಿಗಳು ಕಣದಲ್ಲಿರುವುದರಿಂದ ಸ್ಪರ್ಧಾತ್ಮಕ ದರದಲ್ಲಿ ಸೇವೆ ಸಿಗುತ್ತದೆ. ರೈತರ ಯೋಜನೆಗಳಿಗೆ ಇನ್ನೂ ರಿಯಾಯಿತಿ ಪಡೆಯಬಹುದು. ಸರ್ಕಾರ ಮನಸ್ಸು ಮಾಡಿದರೆ, ಖಂಡಿತವಾಗಿ ಗ್ರಾಮೀಣ ಅಭಿವೃದ್ಧಿ ಕೆಲಸ ತೀವ್ರಗೊಳ್ಳುತ್ತದೆ ಎಂಬುದು ರಿಗ್ಸ್ ಮಾತಿನ ಸಾರಾಂಶ.

ಇಷ್ಟೊಂದು ತಂತ್ರಜ್ಞಾನ ಬಂದಿದೆ. ಆದರೂ ಹಸಿವೆಯನ್ನು ಹೋಗಲಾಡಿಸಲು ಆಗಿಲ್ಲ. ಎಲ್ಲ ಪ್ರದೇಶಗಳಿಗೂ ಒಂದೇ ರೀತಿಯ ಯೋಜನೆ ರೂಪಿಸುವ ಸಾಂಪ್ರದಾಯಿಕ ವಿಧಾನಗಳಿಂದ ಉಪಯೋಗವಿಲ್ಲ. ಮೊಬೈಲ್‌ತಂತ್ರಜ್ಞಾನವೊಂದನ್ನೇ ಬಳಸಿಕೊಂಡರೂ ಪ್ರತಿಯೊಂದು ಹಳ್ಳಿಗೆ ಅದಕ್ಕೆ ಬೇಕಾದ ರೀತಿಯ ಪರಿಹಾರ ಕ್ರಮಗಳನ್ನು ರೂಪಿಸಲು ಸಾಧ್ಯ. ಆಗ ಭೂಮಿಯ ಇನ್ನೊಂದು ಮೂಲೆಯಲ್ಲಿರುವ ರೈತನೊಂದಿಗೆ ಇಲ್ಲಿಯ ರೈತ ಸಂಪರ್ಕ ಹೊಂದಲು, ಮಾಹಿತಿ ವಿನಿಮಯ ಮಾಡಿಕೊಳ್ಳಲು ಸಾಧ್ಯ. ಹೊಸ ವಿಚಾರ, ವಿಧಾನ ಆತನಿಗೆ ದಕ್ಕುತ್ತವೆ. ರೈತನೊಳಗೊಬ್ಬ ಕ್ರಿಯಾಶೀಲ ವಿಜ್ಞಾನಿ, ಕೆಲಸಗಾರ ಕಣ್ತೆರೆಯುತ್ತಾನೆ. ಹೊಸ ವಿಚಾರಗಳು ಹರಿದಾಡುವುದರಿಂದ ಅಭಿವೃದ್ಧಿ ವೇಗವಾಗಿ ನಡೆಯುತ್ತದೆ. ನನ್ನ ಎಂಟು ವರ್ಷಗಳ ಅನುಭವ ಹೇಳುವುದಾದರೆ, ಜಗತ್ತಿನ ಎಲ್ಲ ಗ್ರಂಥಾಲಯಗಳನ್ನು ಜೋಡಿಸಿದಾಗ ಸಿಗುವ ಮಾಹಿತಿಗಿಂತ ನಮ್ಮ ಹತ್ತಿರ ಹೆಚ್ಚು ಮಾಹಿತಿ ಸಂಗ್ರಹವಾಗಬಲ್ಲುದು ಅಂತಾರೆ ರಿಗ್ಸ್.

ಸಮುದಾಯಗಳನ್ನು ಸ್ಥಾಪಿಸಿಕೊಳ್ಳಬೇಕು. ಇಪ್ಪತ್ತರಿಂದ ನೂರು ಜನರಿರುವ ಸಣ್ಣ ಸಣ್ಣ ತಂಡಗಳನ್ನು ರಚಿಸುವ ಮೂಲಕ ನಾವು ಗುರಿಯನ್ನು ಸುಲಭವಾಗಿ ತಲುಪಬಹುದು. ಪ್ರತಿಯೊಂದು ಸಮುದಾಯವೂ ದೂರ ಸಂಪರ್ಕ ಸಾಧನಗಳ ಮೂಲಕ ಪರಸ್ಪರ ಸಂಪರ್ಕ ಹೊಂದಬೇಕು. ವಿಚಾರ ವಿನಿಮಯವಾಗಬೇಕು. ರೈತರ ಇಂಥ ಸಮುದಾಯ ಜಗತ್ತಿನ ಎಲ್ಲ ಭಾಗಗಳ ಜನರನ್ನು ಒಳಗೊಳ್ಳಬೇಕು. ಏಕೆಂದರೆ, ಜಗತ್ತಿನ ಎಲ್ಲ ರೈತರ ಸಮಸ್ಯೆಗಳು ಹಾಗೂ ಪರಿಹಾರಗಳೂ ಒಂದೇ ಆಗಿವೆ. ಏಕದಿಂದ ಅನೇಕ (ಒನ್‌ಟು ಮೆನಿ) ನೀತಿಯಿಂದ ಸಾಕಷ್ಟು ರೈತರು ಪರಸ್ಪರ ಸಂಪರ್ಕಿಸಬಲ್ಲರು, ಮಾಹಿತಿ ವಿನಿಮಯ ಮಾಡಿಕೊಳ್ಳಬಲ್ಲರು. ಒಂದು ಮಾಹಿತಿ ಸಾವಿರಾರು ಜನರನ್ನು ತಲುಪಬಲ್ಲುದು. ಕಳೆದ ಎಂಟು ವರ್ಷಗಳಲ್ಲಿ ನಾನು ಕಂಡುಕೊಂಡ ಯಶಸ್ಸಿನ ಗುಟ್ಟಿದು ಎಂದರು ರಿಗ್ಸ್.

ಸಿಐಎಸ್‌(ಸೆಂಟರ್ ಫಾರ್ ಇಂಟರ್ನೆಟ್‌ಸೊಸೈಟಿ) ಈ ಕೆಲಸಕ್ಕೆ ಮುಂದಾಗಬೇಕು ಎಂದು ಆಶಿಸಿದ ರಿಗ್ಸ್, ಗ್ರಾಮೀಣ ಜನತೆಯನ್ನು ತಲುಪುವ ಕೆಲಸ ನಿಮ್ಮಿಂದ ಪ್ರಾರಂಭವಾಗಲಿ ಎಂದರು. ಜಗತ್ತಿನ ಯಾವೊಂದು ಸಮುದಾಯವೂ ತನ್ನ ಸಮಸ್ಯೆಯನ್ನು ತಾನೊಂದೇ ಪೂರ್ತಿಯಾಗಿ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಸಮುದಾಯದ ಪಾಲ್ಗೊಳ್ಳುವಿಕೆ ಮುಖ್ಯವಾಗುತ್ತದೆ. ಹೀಗಾಗಿ, ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ. ಆಗ, ಸಮಸ್ಯೆಗಳು ಹಗುರವಾಗುತ್ತವೆ. ಲಾಭ ದುಪ್ಪಟ್ಟಾಗುತ್ತದೆ ಎಂದರು.

ಮೈಕೇಲ್‌ರಿಗ್ಸ್ ಹೊಸ ರೀತಿಯ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಯ ಕನಸನ್ನು ಬಿತ್ತುತ್ತ ನಡೆದಿದ್ದಾರೆ. ಅದನ್ನು ಗ್ರಾಮೀಣ ಪ್ರದೇಶಕ್ಕೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದು.

- ಚಾಮರಾಜ ಸವಡಿ

4 comments:

Unknown said...

ಸರ್ ಮೈಕೇಲ್ ರಿಗ್ಸ್ ಅವರ ಮಾತಿನಲ್ಲಿ ಸತ್ಯಾಂಶವಿದೆ. ಇಂದು ಮೊಬೈಲ್ ಗ್ರಾಮೀಣ ಪ್ರದೇಶದಲ್ಲೂ ತನ್ನ ಪ್ರಭಾವವನ್ನು ಭೀರಿದೆ. ನನ್ನ ೂರಿನಲ್ಲಿ ಮೊಬೈಲ್ ಇಲ್ಲದ ಮನೆಯೇ ಇಲ್ಲ! ಬಹುಶಃ ಇದು ಎಲ್ಲಾ ಊರುಗಳ ಕಥೆಯೇ ಆಗಿದೆ. ಈ ಸಂಪರ್ಕಜಾಲವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಲ್ಲಿ ಮಾಹಿತಿ ವಿನಿಮಯ ಖಂಡಿತಾ ಸುಲಭಸಾಧ್ಯ. ಾದರೆ ನಮ್ಮ ಸರ್ಕಾರಿಯಂತ್ರಗಳು ಅವುಗಳ ವೇಗ ೆಷ್ಟು ಎಂಬುದು ಅವುಗಳ ವೆಬ್ ಸೈಟ್ ನೋಡಿದರೆ ತಿಳಿಯುತ್ತದೆ!

Chamaraj Savadi said...

ನಿಜ ಸತ್ಯನಾರಾಯಣ ಅವರೇ, ತಂತ್ರಜ್ಞಾನ ಒಂದು ಅನಿವಾರ್ಯತೆ. ಆಯಾ ಕಾಲದ ಅವಶ್ಯಕತೆಗೆ ತಕ್ಕಂತೆ ಬದಲಾಗುತ್ತಿರುವಂಥದು. ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದೊಂದೇ ನಮ್ಮ ಬೆಳವಣಿಗೆಗೆ ಇರುವ ಮಾರ್ಗ. ಮೈಕೇಲ್ ರಿಗ್ಸ್ ಒತ್ತು ಕೊಟ್ಟಿರುವುದು ಈ ಅಂಶದ ಬಗ್ಗೆ. ಇದರಲ್ಲಿ ಅಪಾರ ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳಿರುವುದರಿಂದ, ಸರ್ಕಾರ ಮತ್ತು ದೊಡ್ಡ ಸಂಸ್ಥೆಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು.

ಬಹುಶಃ, ನಾವಿರುವ ಕಡೆಯೇ ಇಂಥದೊಂದು ಪ್ರಯತ್ನವನ್ನು ನಮ್ಮ ನಮ್ಮ ಮಿತಿಯಲ್ಲಿ ಮಾಡಲು ಯತ್ನಿಸಬೇಕು ಅನಿಸುತ್ತದೆ.

shivu.k said...

ಸಾವಡಿ ಸರ್,

ರೈತರಿಗೆ ಅನುಕೂಲವಾಗಲು, ಮತ್ತು ಅಭಿವೃದ್ಧಿಗೆ ಇದು ಸಹಕಾರಿಯೆನಿಸುತ್ತೆ. ಮೈಕಲ್ ರಿಗ್ಸ್ ಮಾತು ಸರಿಯೆನಿಸುತ್ತೆ. ಇಲ್ಲಿ ಸರ್ಕಾರ ಮತ್ತು ಇತರ ವಿಭಾಗಗಳು ಕೈಜೋಡಿಸಿದರೆ ಇದು ಖಂಡಿತ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ...

ಮಾಹಿತಿಯುಕ್ತವಾಗಿ ಚಿಂತನೆಗೀಡುಮಾಡುವ ಬರಹ ....

ಧನ್ಯವಾದಗಳು.

Chamaraj Savadi said...

ಮೈಕೇಲ್‌ ರಿಗ್ಸ್‌ನಂಥವರು ಕಂಡ ಕನಸನ್ನು ನನಸು ಮಾಡಲು ಹಲವಾರು ಸಂಘ-ಸಂಸ್ಥೆಗಳು ಹಾಗೂ ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ, ಬದಲಾವಣೆ ತಕ್ಷಣ ಗೋಚರವಾಗಲಿಕ್ಕಿಲ್ಲ. ಆದರೆ, ಬರಲಿರುವ ದಿನಗಳಲ್ಲಿ ಕೃಷಿ ಪ್ರಮುಖ ಕ್ಷೇತ್ರವಾಗಿ ಗುರುತಿಸಲ್ಪಡುವುದು ಖಚಿತ. ಭಾರತದ ಮಟ್ಟಿಗಂತೂ ಕೃಷಿ ಇವತ್ತಿಗೂ ಪ್ರಮುಖ ಕ್ಷೇತ್ರವೇ. ಹೀಗಾಗಿ, ನನಗೆ ಈ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ.

ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು ಶಿವು.