ಪಬ್‌ ದಾಳಿ ಎಂಬ ರಸಕವಳ

30 Jan 2009

5 ಪ್ರತಿಕ್ರಿಯೆ

ಕೊನೆಗೂ ನಮ್ಮ ವಿಚಾರವಾದಿಗಳಿಗೆ, ಬುದ್ಧಿಜೀವಿಗಳಿಗೆ ಜಗಿಯಲು ಸಮೃದ್ಧ ರಸಕವಳ ಸಿಕ್ಕಿದೆ- ಪಬ್‌ನ ಮೂಲಕ.

ಮಂಗಳೂರಿನ ಅಮ್ನೇಶಿಯಾ ಪಬ್‌ನಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರು ಮಾಡಿದ್ದು ನಿಜಕ್ಕೂ ಹೀನಾಯ ಕೆಲಸ. ಮಹಿಳೆಯರು ಹೀಗೆಯೇ ಬದುಕಬೇಕು ಎಂದು ನಿರ್ಬಂಧಿಸುವ ಸಂಪ್ರದಾಯ ಮುಸ್ಲಿಂ ಸಮುದಾಯದಲ್ಲಿದೆ. ಇತರ ಧರ್ಮಗಳಲ್ಲಿ ಅದರ ತೀವ್ರತೆ ಕಡಿಮೆ. ಆದರೆ, ಪಬ್‌ ಮೇಲೆ ದಾಳಿ ನಡೆಸುವ ಮೂಲಕ ತಮ್ಮಲ್ಲೂ ಅಂಥ ಮನಸ್ಥಿತಿ ಇದೆ ಎಂಬುದನ್ನು ಶ್ರೀರಾಮಸೇನೆಯ ಕಾರ್ಯಕರ್ತರು ಪ್ರದರ್ಶಿಸಿದ್ದಾರೆ.

ಮಹಿಳೆಯರು ಪಬ್‌ಗಳಿಗೆ ಹೋಗಬಾರದು ಎಂದು ನಿರ್ದೇಶಿಸುವ, ನಿರ್ಬಂಧಿಸುವ ಹಕ್ಕು ಯಾರಿಗೂ ಇಲ್ಲ. ಯಾವ ಧರ್ಮದವರಿಗೂ ಇಲ್ಲ. ಅದು ಮಹಿಳೆಯರಿಗೆ ಸಂಬಂಧಿಸಿದ, ಅವರೇ ನಿರ್ಧಾರ ತೆಗೆದುಕೊಳ್ಳಬೇಕಾದ ವಿಷಯ. ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ಇಲ್ಲದ ಆಚರಣೆಗಳನ್ನು, ನಿರ್ಬಂಧಗಳನ್ನು ಹೇರುವ ಹಕ್ಕು ಯಾರಿಗೂ ಇಲ್ಲ. ತನಗೆ ಅಂಥ ಹಕ್ಕಿದೆ ಎಂದು ಶ್ರೀರಾಮಸೇನೆಯಾಗಲಿ, ಇಸ್ಲಾಮಿ ಸಂಘಟನೆಗಳಾಗಲಿ ಭಾವಿಸಿದ್ದರೆ ಅದು ಅವರ ಮೂರ್ಖತನವೇ ಹೊರತು ಬೇರೇನೂ ಅಲ್ಲ.

ಯಾವ ಜನಾಂಗ ಮಹಿಳೆಯ ಹಕ್ಕುಗಳನ್ನು ಮೊಟಕುಗೊಳಿಸಿದೆಯೋ, ಅದು ಉದ್ಧಾರವಾದ ಉದಾಹರಣೆಗಳು ತೀರಾ ವಿರಳ. ತನ್ನಿಚ್ಛೆಯಂತೆ ಬದುಕುವ ಹಕ್ಕು ಎಲ್ಲರಿಗೂ ಇದೆ. ಅದಕ್ಕೆ ಪುರುಷ, ಮಹಿಳೆ ಎಂಬ ಭೇದವಿಲ್ಲ. ಧರ್ಮಗಳ, ಜಾತಿಗಳ ಚೌಕಟ್ಟಿಲ್ಲ. ಅಷ್ಟಕ್ಕೂ ಕಟ್ಟುಪಾಡು ಹೆಚ್ಚಿಸಿ, ಹಿಂಸೆಯ ಮೂಲಕ ಮಹಿಳೆಯನ್ನು ಹೊಸ್ತಿಲ ಒಳಗೆ, ಬೂರ್ಖಾದ ಮರೆಯಲ್ಲಿ ಕಟ್ಟಿಡುವ ಪ್ರಯತ್ನ ಮಾಡಿದರೆ ಅವು ಯಶಸ್ವಿಯಾಗುವುದೂ ಇಲ್ಲ. ಹಾಗೊಂದು ವೇಳೆ ಕಟ್ಟಿಡಲು ಹೊರಟರೂ, ಪುರುಷ ಮನೆಯ ಹೊಸ್ತಿಲ ಬಳಿಯೇ ಕಾವಲು ನಿಲ್ಲಬೇಕಾಗುತ್ತದೆ. ಜನಾಂಗವೊಂದು ಅಧಃಪತನಕ್ಕೆ ಈಡಾಗುವುದು ಹೀಗೆ.

ಮುಂಬೈ ದಾಳಿ ಹಾಗೂ ನಂತರದ ಆಕ್ರೋಶ ಪಾಕಿಸ್ತಾನಿಗಳ ವಿರುದ್ಧ, ಅದಕ್ಕೆ ಕಾರಣವಾದ ಮುಸ್ಲಿಂ ಧರ್ಮಾಂಧತೆಯ ವಿರುದ್ಧ ತಿರುಗಿದ್ದರಿಂದ ಕಳವಳಗೊಂಡಿದ್ದ ಬುದ್ಧಿಜೀವಿಗಳಿಗೆ ಮಂಗಳೂರಿನ ಪಬ್‌ ದಾಳಿ ರಸಗವಳದಂತೆ ಸಿಕ್ಕಿದೆ. ಮುಂಬೈ ದಾಳಿಯನ್ನು ಗಟ್ಟಿಯಾಗಿ ಖಂಡಿಸದ, ಅದನ್ನು ವಿರೋಧಿಸಿ ಹೇಳಿಕೆ ನೀಡದ, ಪ್ರತಿಭಟನೆಗೆ ಇಳಿಯದ ಇವರೆಲ್ಲ ಪಬ್‌ ದಾಳಿಯಲ್ಲಿ ’ಚಿಯರ್ಸ್‌’ ಹೇಳಲು ದೊಡ್ಡ ಸಂಖ್ಯೆಯಲ್ಲಿ ಹೊರಬಂದಿದ್ದಾರೆ.

ಪಬ್‌ ದಾಳಿ ಘಟನೆಯನ್ನು ಸೋ ಕಾಲ್ಡ್‌ ಬುದ್ಧಿಜೀವಿಗಳು, ಕೋಮು ಸೌಹಾರ್ದಿಗಳಷ್ಟೇ ಅಲ್ಲ, ಕಟ್ಟರ್‌ ಬಲಪಂಥೀಯರನ್ನು ಬಿಟ್ಟು ಎಲ್ಲರೂ ಖಂಡಿಸಿದ್ದಾರೆ. ಆದರೆ, ಬುದ್ಧಿಜೀವಿಗಳ, ಕೋಮು ಸೌಹಾರ್ದಿಗಳ ಖಂಡನೆಯ ತೀವ್ರತೆಯೇ ಬೇರೆ. ಮುದುಡಿದ್ದ ಅವರ ನಾಲಿಗೆಗಳು ಈಗ ಚಾಟಿಯಂತೆ ಚುರುಕಾಗಿವೆ. ಹಳೆಯ ಆರೋಪಗಳಿಗೆ ಹೊಸ ಜೀವ ಬಂದಿದೆ. ಪಬ್‌ ದಾಳಿಯನ್ನು ಉದಾಹರಣೆಯಾಗಿಟ್ಟುಕೊಂಡು ಎಂದಿನಂತೆ ಸಂಘ ಪರಿವಾರದ ವಿರುದ್ಧ ಇವರು ಮುಗಿಬಿದ್ದಿದ್ದಾರೆ.

ಅರೆ, ತಪ್ಪು ಯಾರೇ ಮಾಡಿದರೂ ತಪ್ಪಲ್ಲವೆ? ಎಲ್ಲ ತಪ್ಪುಗಳನ್ನೂ ಇದೇ ತೀವ್ರತೆಯಲ್ಲಿ ಇವರೇಕೆ ಖಂಡಿಸುತ್ತಿಲ್ಲ? ಎಸ್ಸೆಮ್ಮೆಸ್ ಮೂಲಕ ತಲ್ಲಾಖ್‌ ಹೇಳುವುದು, ಕುಡಿದ ನಿಶೆಯಲ್ಲಿ ತಲ್ಲಾಖ್‌ ಹೇಳುವುದು ಮಾನ್ಯ ಎಂಬ ಸುದ್ದಿಗಳು ಬಂದಾಗ ಇವರ ನಾಲಿಗೆಗಳೇಕೆ ಖಂಡನೆಗೆ ಇಳಿಯಲಿಲ್ಲ? ಮುಂಬೈ ದಾಳಿಯ ಹುನ್ನಾರವನ್ನು, ಅದಕ್ಕೆ ಕಾರಣರಾದವರನ್ನು ಇಂಥದೇ ಕಳಕಳಿಯಿಂದ ಉಗಿಯಲಿಲ್ಲವೇಕೆ?

ಒರಿಸ್ಸಾ, ಮಂಗಳೂರು, ಚರ್ಚ್‌ ದಾಳಿಯಂಥ ಘಟನೆಗಳಲ್ಲಷ್ಟೇ ಜಾಗೃತರಾಗುವ ಇವರು, ಇತರ ಸಂದರ್ಭಗಳಲ್ಲಿ ಯಾವ ಪಬ್‌ನಲ್ಲಿ ಚಿತ್ತಾಗಿರುತ್ತಾರೆ? ಅದ್ಯಾವ ಮಂಕು ಅವರನ್ನು ಆವರಿಸಿಕೊಂಡಿರುತ್ತದೆ? ಇಂಥ ಆಷಾಡಭೂತಿಗಳಿಂದಲೇ ಸಮಾಜದ ಅನಿಷ್ಟಗಳು ಬೆಳೆಯುತ್ತಲೇ ಇವೆ. ಒಂದು ಅತಿರೇಕ ಖಂಡಿಸದ್ದಕ್ಕೆ ಇನ್ನೊಂದು ಅತಿರೇಕ ಹುಟ್ಟಿಕೊಳ್ಳುತ್ತಿದೆ.

ಇಂಥ ಸೋಗಲಾಡಿಗಳಿಗೆ ಇನ್ನೂ ಅದೆಷ್ಟು ಬಾರಿ ಧಿಕ್ಕಾರ ಹೇಳಬೇಕಾಗುತ್ತದೋ !

- ಚಾಮರಾಜ ಸವಡಿ

ಬೊಗಸೆಗಣ್ಣಿನ ಬಯಕೆಯ ಹೆಣ್ಣು... (ಬೇಂದ್ರೆ-೧)

29 Jan 2009

0 ಪ್ರತಿಕ್ರಿಯೆ
ಬೆಳ್ಳಂಬೆಳಿಗ್ಗೆ ಬೇಂದ್ರೆ ಗಂಟು ಬಿದ್ದಿದ್ದಾರೆ.

ನಸುಕಿನ ಬೆಂಗಳೂರಲ್ಲಿ ಈಗ ಚಳಿ ಕಡಿಮೆ. ನಕ್ಷತ್ರಗಳು ಸ್ವಚ್ಛವಾಗಿ ಮುಗುಳ್ನಗುತ್ತಿವೆ. ನಸುಕಿನಲ್ಲಿ ಚಳಿಯಾದೀತು ಎಂದು ಕಾಲಡಿ ಹಾಕಿಕೊಂಡಿದ್ದ ರಗ್‌ಗಳು ಹಾಗೇ ಇವೆ. ಸಣ್ಣಗೇ ತಿರುಗುವ ಫ್ಯಾನ್‌ ಕೂಡಾ ಚಳಿ ಹುಟ್ಟಿಸುತ್ತಿಲ್ಲ.

ಸದ್ದಿಲ್ಲದೇ ಬೆಳಗಾಗುತ್ತದೆ. ಮೂಡಣದಲ್ಲಿ ಚೆಂಬೆಳಕು. ಅರೆ ಕ್ಷಣ ಧಾರವಾಡದ ಚೆಂಬೆಳಕು ಹೆಸರಿನ ಮನೆ ಮತ್ತು ಕವಿ ಚೆನ್ನವೀರ ಕಣವಿ ನೆನಪಾಗುತ್ತಾರೆ. ಅವರು ಕವಿತೆ ಓದುತ್ತಿದ್ದ ಪರಿ ನೆನಪಾಗುತ್ತದೆ. ಕಿರಿಯರನ್ನು ಪ್ರೋತ್ಸಾಹಿಸುವ ಪರಿ, ಬರೆದ ಸಣ್ಣ ತುಂಡುಗಳನ್ನು ಆಸ್ವಾದಿಸುವ ದೊಡ್ಡತನ ನೆನಪಾಗುತ್ತದೆ. ಅದೇ ಧಾರವಾಡದಲ್ಲಿ ಇದ್ದವರಲ್ಲವೆ ಬೇಂದ್ರೆ. ಮೂಡಣ ರಂಗೊಡೆಯುವ ಹೊತ್ತಿನಲ್ಲಿ, ಸಂಜೆ ಕುರಿತು ಬರೆದಿದ್ದರೂ ಅವರ ಮುಗಿಲ ಮಾರಿಗೆ ರಾಗರತಿ ನೆನಪಾಗುತ್ತದೆ. ಸಾಧನಕೇರಿಯ ಪುಟ್ಟ ಕೆರೆಯ ಎದುರಿನ ಬೇಂದ್ರೆ ಅಜ್ಜನ ಮನೆ, ಅಲ್ಲಿನ ವಿಚಿತ್ರ ನೀರವ, ಕೆರೆಯ ನೀರನ್ನು ಕಲಕುವ ಮೀನುಗಳು, ಸದ್ದಿಲ್ಲದೇ ಹರಿದಾಡುವ ಹಾವುಗಳು ಕಣ್ಮುಂದೆ ಬರುತ್ತವೆ.

ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ
-ಆಗ -ಸಂಜೆಯಾಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ


ಬೆಳಗಿನ ಬೆಂಗಳೂರಿನ ನೀರವತೆಯಲ್ಲಿ ಚಂದ್ರಾಲೇಔಟ್‌ ತುಂಬ ಹೊಸದೊಂದು ರಾಗರತಿ. ಬೆಳಕಿನ ರತಿ ಏರುತ್ತಿದ್ದಂತೆ ನಕ್ಷತ್ರಗಳ ಕಣ್ಣುಗಳ ಅರ್ಧನಿಮೀಲಿತವಾಗುತ್ತವೆ. ಕತ್ತಲೆಯಲ್ಲಿ ಮರೆಯಾದಂತಿದ್ದ ಕಟ್ಟಡಗಳು ಮಸುಕುಮಸುಕಾಗಿ ಮೇಲಕ್ಕೇಳುತ್ತವೆ. ಷೆಲ್ಫ್‌ನಲ್ಲಿ ಪುಸ್ತಕವಾಗಿ ಕೂತಿರುವ ಬೇಂದ್ರೆ ಅಜ್ಜನನ್ನು ಹೊರಕ್ಕೆಳೆಯುತ್ತೇನೆ. ಎಲ್ಲಿದೆ ಕವನ?

ಹಾಂ, ಸಿಕ್ಕಿತು. ಒಲವೆ ನಮ್ಮ ಬದುಕು ಪುಸ್ತಕದ ಪುಟ ೨ರಲ್ಲಿ ಬೆಚ್ಚಗೇ ಕೂತಿದೆ ’ರಾಗರತಿ’ ಕವಿತೆ. (ಮೂಲ ಸಂಕಲನ: ಗರಿ, ಕವನ ಸಂಖ್ಯೆ ೩೧)

ಬಿದಿಗಿ ಚಂದ್ರನಾ ಚೊಗಚೀ-ನಗಿ-ಹೂ ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ;
ಇರುಳ ಹೆರಳಿನ ಅರಳಮಲ್ಲಿಗೀ ಜಾಳಿಗಿ ಹಾಂಗಿತ್ತ
ಸೂಸ್ಯಾದ ಚಿಕ್ಕಿ ಅತ್ತಿತ್ತ.


ವ್ಹಾ ಬೇಂದ್ರೆ ಅಜ್ಜಾ! ’ಇರುಳ ಹೆರಳಿನ ಅರಳಮಲ್ಲಿಗಿ ಜಾಳಿಗಿ’ ಎಂಥಾ ಉಪಮೆ. ಸಂಜೆ ಹೊತ್ತಿನ ನಕ್ಷತ್ರಗಳು ಕತ್ತಲೆಯ ಜಡೆಯಲ್ಲಡಗಿದ್ದ ಅರಳುಮಲ್ಲಿಗೆಯಂತೆ ಕಂಡವಲ್ಲ ನಿನಗೆ. ರಸಿಕ ನೀನು!

ಮನಸ್ಸು ರಾಗರತಿಯಲ್ಲಿ ಲೀನವಾಗುತ್ತದೆ.

ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ
ತಿರುಗಿ ಮನೀಗೆ ಸಾಗಿತ್ತ
ಕಾಮಿ ಬೆಕ್ಕಿನ್ಹಾಂಗ ಭಾಂವಿ ಹಾದಿ ಕಾಲಾಗ ಸುಳಿತಿತ್ತ
ಎರಗಿ ಹಿಂದಕ್ಕುಳಿತಿತ್ತ


ರಾತ್ರಿ ನೀರು ತರುವ ಹೆಣ್ಣು ತಡರಾತ್ರಿಯ ಸಮಾಗಮದ ಬಯಕೆಯಲ್ಲಿ ಮನೆಗೆ ಹಿಂತಿರುಗುತ್ತಿದ್ದಾಳೆ. ಸಂಜೆಯ ಕೆಂಪು ಆಕೆಯಲ್ಲಿ ನವಿರು ಭಾವನೆಗಳನ್ನು ಉಕ್ಕಿಸಿದೆ. ಮನಸ್ಸಿನ ಆಸೆ ಸಾಕಿದ ಬೆಕ್ಕಿನಂತೆ ಸುತ್ತಮುತ್ತ ಸುಳಿದಾಡುತ್ತಿದೆ.

ಮಳ್ಳಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿತಿತ್ತ
ಮತಮತ ಬೆರಗಿಲೆ ಬಿಡತಿತ್ತ
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತ
ತನ್ನ ಮೈಮರ ಮರೆತಿತ್ತ


ಕವಿತೆ ಓದುತ್ತ ಓದುತ್ತ ಬೆಳಗಿನ ಚೆಂಬೆಳಕು ಸಂಜೆಯ ರಾಗರತಿಯಾಗಿ ಬದಲಾಯಿತು. ಬೇಂದ್ರೆ ಕಟ್ಟಿಕೊಟ್ಟ ಚಿತ್ರಣ ಮಸಕುಮಸಕಾಗಿ ಮೂಡಿತು. ಧಾರವಾಡದ ನೀರವ ಓಣಿಯಲ್ಲಿ ಸಂಜೆಯಾಗಿದೆ. ಹೆಣ್ಣೊಬ್ಬಳು ನೀರು ತರಲು ಹೋದವಳು ಮುದಗೊಂಡು, ಹುರುಪಿನಿಂದ ಮನೆಯತ್ತ ಹೊರಟಿದ್ದಾಳೆ. ಆಕೆಯ ಮನದಲ್ಲಿ ರಾತ್ರಿಯ ಸುಖದ ನಿರೀಕ್ಷೆ. ಹೆಜ್ಜೆಗಳು ಅದನ್ನೇ ಹೇಳಿವೆ. ಸಂಜೆಯ ತಂಪು ಗಾಳಿಗೆ ಆಕೆಯ ಸೆರಗು ಅಲೆಯಾಗುತ್ತಿದೆ. ಅವಳ ಮನಸ್ಸಿನ ನಿರೀಕ್ಷೆಯನ್ನು ಪ್ರತಿಫಲಿಸಿದೆ. ಹಾರುವ ಸೆರಗನ್ನು ಸುಳ್ಳುಸುಳ್ಳೇ ಬಿಗಿಯಾಗಿ ಹಿಡಿಯುತ್ತ ಮನೆ ಕಡೆ ಹೊರಟಿದ್ದಾಳೆ. ಹಗಲಿಡೀ ಉರಿದು ಮಂಕಾದ ಸೂರ್ಯ ಸುಖದ ನಿರೀಕ್ಷೆಯಲ್ಲಿ ಮುಳುಗುತ್ತಿರುವ ಚಿತ್ರಣವನ್ನು ಬೊಗಸಿಗಣ್ಣಿನ ಹೆಣ್ಣಿನ ಮೂಲಕ ಬಿಂಬಿಸುತ್ತ ಹೋಗಿದ್ದಾನೆ ಬೇಂದ್ರೆ ಅಜ್ಜ.

ಅರೆಕ್ಷಣ ಬೆಂಗಳೂರಿನ ಮುಂಜಾನೆಯ ಚೆಂಬೆಳಕಿನಲ್ಲಿ ರಾಗರತಿಯ ರಂಗು ಕಂಡಂತಾಯಿತು. ಟೆರೇಸ್‌ ಮೇಲೆ ನಿಂತು ನೋಡಿದರೆ, ಕೆಳಗೆ ವಾಕಿಂಗ್‌ ಹೊರಟ ಜನ ಅಲ್ಲೊಬ್ಬರು ಇಲ್ಲೊಬ್ಬರು. ಯಾವ ನೀರೆಯ ಸೊಂಟದಲ್ಲೂ ನೀರಿನ ಬಿಂದಿಗೆಯಿಲ್ಲ. ಬಾವಿಗಳಂತೂ ಮೊದಲೇ ಇಲ್ಲ. ಸೀರೆಯುಟ್ಟ ಆಂಟಿಯರ ಸೊಂಟದಲ್ಲಿ ಕೈಯಿಡಲಿಕ್ಕೇ ಜಾಗವಿಲ್ಲ, ಇನ್ನು ಬಿಂದಿಗೆ ಎಲ್ಲಿ ಕೂತೀತು? ಬಳುಕುವ ನೀರೆಯರ ಸೊಂಟ ಅದ್ಯಾವ ಪರಿ ತುಳುಕುತ್ತಿದೆ ಎಂದರೆ, ಬಿಂದಿಗೆ ಅಲ್ಲಿ ನಿಂತೀತೆ?

ಆದರೆ, ಕವಿತೆ ಕಟ್ಟಿಕೊಡುವ ಸುಖದ ಚಿತ್ರಕ್ಕೆ ಕಾಲ-ದೇಶದ ಹಂಗೇಕೆ? ಕವಿತೆ ಓದುತ್ತ ಓದುತ್ತ ಬೆಳಗಿನ ಆಗಸ ಬೇಂದ್ರೆ ಕಂಡ ಸಂಜೆಯ ರಾಗರತಿಯಾಗುತ್ತದೆ. ವಾಕಿಂಗ್‌ ಹೊರಟ ನೀರೆಯರು ಬಿಂದಿಗೆ ಹೊತ್ತ ಬೊಗಸೆಕಣ್ಣಿನ ಹೆಣ್ಣುಗಳಾಗುತ್ತಾರೆ. ರಸ್ತೆಯಾಚೆ ಎಲ್ಲೋ ಬಾವಿ ಇದ್ದೀತು. ಇವರು ಅತ್ತ ಕಡೆಯೇ ಹೊರಟಿದ್ದಾರು. ಇನ್ನೇನು, ಬಿಂದಿಗೆ ತುಂಬಿಕೊಂಡು ವಾಪಸ್‌ ಬರುತ್ತಾರೆ. ತಿಳಿಗಾಳಿಗೆ ಸೀರೆಯ ಸೆರಗು ಹಾರದಿದ್ದರೂ ಮುಂಗುರುಳಾದರೂ ಹಾರಿಯಾವು. ಕಾಮಿ ಬೆಕ್ಕಿನ್ಹಾಂಗ ಮುಖದ ತುಂಬ ಸುಳಿದಾಡಿಯಾವು. ಏನೋ ನೆನಪಲ್ಲಿ, ಬಿದಿಗಿ ಚಂದ್ರನ ಚೊಗಚಿ ನಗಿ ಹೂ ಅವರ ಮುಖದಲ್ಲಿ ಮೆಲ್ಲಗೆ ಮೂಡಿದರೂ ಮೂಡಬಹುದು.

ಟೆರೇಸ್‌ನಲ್ಲಿ ನಿಂತು ಕಾಯುತ್ತಿದ್ದೇನೆ: ರಾಗರತಿಯ ಸೊಗಸಿಗೆ, ಮಳ್ಳ ಗಾಳಿಗೆ, ಬೊಗಸೆ ಕಣ್ಣಿನ ಹೆಣ್ಣಿಗೆ, ಆ ಬಿದಿಗಿ ಚಂದ್ರನ ಚೊಗಚಿ ನಗೆಗೆ.

- ಚಾಮರಾಜ ಸವಡಿ

ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ...

23 Jan 2009

2 ಪ್ರತಿಕ್ರಿಯೆ

ಮನಸ್ಸಿನ ತುಂಬ ಬೇಸರ, ನಿರಾಶೆ ತುಂಬಿದಾಗ ಏನು ಮಾಡಬೇಕು?

ಪ್ರತಿಯೊಬ್ಬ ಮನುಷ್ಯನನ್ನು ಕಾಡುವ ಪ್ರಶ್ನೆಯಿದು. ನಾವು ಎಂಥ ಉತ್ತಮ ಸ್ಥಿತಿಯಲ್ಲೇ ಇರಲಿ, ಯಶಸ್ವಿ ವ್ಯಕ್ತಿಗಳೇ ಆಗಿರಲಿ, ಬೇಸರ ಎಂಬುದನ್ನು ಶಾಶ್ವತವಾಗಿ ತೊಡೆದು ಹಾಕುವುದು ಸಾಧ್ಯವಿಲ್ಲ. ಅದು ಯಾವಾಗ ಬೇಕಾದರೂ ಬರಬಹುದು. ಯಾರಿಗೆ ಬೇಕಾದರೂ ಬರಬಹುದು. ಬಂದು ನಮ್ಮ ಮನಸ್ಸಿನ ನೆಮ್ಮದಿಯನ್ನು ಕಸಿದುಕೊಳ್ಳಬಹುದು. ಅರಸನಿರಲಿ, ಆಳಿರಲಿ, ಎಲ್ಲರೂ ಬೇಸರಕ್ಕೆ ಸಮಾನರೇ.

ಇನ್ನೂ ಒಂದು ದೊಡ್ಡ ರೋಗವಿದೆ. ಅದರ ಹೆಸರು ನಿರಾಶೆ. ಬೇಸರದ ಅಣ್ಣ ಇದು. ಏನೋ ಅಂದುಕೊಂಡಿರುತ್ತೇವೆ. ಆದರೆ, ಅದು ಈಡೇರುವುದಿಲ್ಲ. ಏನೋ ಪ್ರಯತ್ನ ಮಾಡುತ್ತೇವೆ. ಅದು ಯಶಸ್ವಿಯಾಗುವುದಿಲ್ಲ. ನಮ್ಮ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಗೆಲುವು ನಮಗೆ ದಕ್ಕುವುದಿಲ್ಲ.

ಆಗ, ಮಾಡಿದ್ದೆಲ್ಲ ವ್ಯರ್ಥವಾಯಿತು ಎನ್ನುತ್ತಾರೆ ಸುತ್ತಮುತ್ತಲಿನವರು. ಮಾಡುವುದೇ ವ್ಯರ್ಥ ಎನ್ನುತ್ತಾರೆ ನಿರಾಶವಾದಿಗಳು. ನಿನಗೆ ಸರಿಯಾಗಿ ಮಾಡಲು ಬರುವುದಿಲ್ಲ ಎನ್ನುತ್ತಾರೆ ಅಸೂಯಾಪರರು. ನಾವು ಇಂಥ ಜನರ ಜೊತೆಯೇ ಬದುಕುತ್ತ ಗುರಿ ತಲುಪಬೇಕು. ಎಷ್ಟೋ ಸಾರಿ ನಿರಾಶೆ ಎಂಬುದು ಅಲೆಗಳಂತೆ ಉಕ್ಕುಕ್ಕಿ ಬರುತ್ತದೆ. ನಿರಂತರವಾಗಿ ಅಪ್ಪಳಿಸುತ್ತದೆ. ಒಂದು ಕ್ಷಣ, ಈ ಅಲೆಗಳು ತೀರವನ್ನೇ ನುಂಗಿ ಹಾಕಿಬಿಡುತ್ತವೇನೋ ಎಂದು ತಲ್ಲಣ ಹುಟ್ಟಿಸುತ್ತವೆ.

ಆದರೆ, ಯಾವ ಅಲೆಯೂ ತೀರವನ್ನು ನುಂಗಿ ಹಾಕಿಲ್ಲ. ಅಲೆಗಳು ಸಾವಿರಾರು ಬರಬಹುದು. ನಿರಂತರವಾಗಿ ಅಪ್ಪಳಿಸಬಹುದು. ಆದರೆ, ಮಣ್ಣಿನ ತೀರ ಜಗ್ಗದೇ ನಿಂತಿರುತ್ತದೆ. ಒಂದಿಷ್ಟು ಕೊರೆಯಬಹುದು. ಒಂದಿಷ್ಟು ಕಸಿಯಬಹುದು. ಆದರೆ, ಪೂರ್ತಿಯಾಗಿ ಇಲ್ಲವಾಗಿಸದು. ಯಾವ ಅಲೆಗೂ ತೀರ ನಾಶ ಮಾಡುವ ಶಕ್ತಿಯಿಲ್ಲ.

ಬೇಸರ, ಸೋಲು, ನಿರಾಶೆ, ನೋವು- ಇಂಥ ಸಾವಿರಾರು ಅಲೆಗಳು ಬದುಕಿನ ಕಡಲಲ್ಲಿ ಇದ್ದೇ ಇರುತ್ತವೆ. ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಸಮಯ ಬರುತ್ತದೆ. ಆಗ ಮುಟ್ಟಿದ್ದೆಲ್ಲ ಮಣ್ಣೇ. ಯಾವ ಪ್ರಯತ್ನವೂ ಕೈಗೂಡುವುದಿಲ್ಲ. ಹಾಗೆ ನೋಡಿದರೆ, ನಾವು ಅತ್ಯುತ್ತಮ ಪ್ರಯತ್ನವನ್ನೇ ಮಾಡಿರುತ್ತೇವೆ. ಆದರೆ, ಗೆಲುವು ಮಾತ್ರ ಮರೀಚಿಕೆಯೇ.

ಆಗ ನಿರಾಶೆಯಾಗುವುದು ಸಹಜ. ಇಷ್ಟು ಚೆನ್ನಾಗಿ ಪ್ರಯತ್ನಿಸಿದರೂ ಸಫಲನಾಗಲಿಲ್ಲವಲ್ಲ ಎಂದು ನೋವಾಗುತ್ತದೆ. ನನ್ನ ಪ್ರಯತ್ನದಲ್ಲಿ ದೋಷ ಎಲ್ಲಿತ್ತು ಎಂದು ಮನಸ್ಸು ಪ್ರಶ್ನಿಸುತ್ತದೆ. ಯಾವ ಉತ್ತರವೂ ಹೊಳೆಯುವುದಿಲ್ಲ. ಇದನ್ನು ಇಲ್ಲಿಗೇ ನಿಲ್ಲಿಸಬೇಕು. ಮತ್ತೆ ಪ್ರಯತ್ನಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಪದೆ ಪದೆ ಅನ್ನಿಸತೊಡಗುತ್ತದೆ. ಏನೂ ಮಾಡಬೇಕೆಂದರೂ ಮನಸ್ಸು ತೊಡಗುವುದಿಲ್ಲ. ಖುಷಿಯಿಂದ ಎದ್ದು ನಿಲ್ಲುವುದಿಲ್ಲ.

ಅಂಥ ಸಮಯದಲ್ಲಿ ನಾನು ಒಬ್ಬನೇ ಕೂಡುತ್ತೇನೆ. ಶಬ್ದ ಕಡಿಮೆ ಇರುವ, ಬೆಳಕು ಕಡಿಮೆ ಇರುವ ತಾಣ ಹುಡುಕಿ ಮೌನವಾಗಿ ಮಂಥನ ನಡೆಸುತ್ತೇನೆ. ನನ್ನ ವಿಫಲ ಪ್ರಯತ್ನಗಳ ಬಗ್ಗೆ ಯೋಚಿಸುತ್ತೇನೆ. ಇಡೀ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಒಂದೊಂದೇ ಹಂತವನ್ನು ಎಳೆಎಳೆಯಾಗಿ ಬಿಡಿಸಿ ನೋಡುತ್ತೇನೆ. ಎಲ್ಲಿ ತಪ್ಪಾಯಿತು? ಎಂದು ಹುಡುಕುತ್ತೇನೆ. ಸಾಮಾನ್ಯವಾಗಿ ಉತ್ತರ ಸಿಕ್ಕೇ ಸಿಗುತ್ತದೆ.

ಕೆಲವು ಪ್ರಯತ್ನಗಳು ಇನ್ನಷ್ಟು ತೀವ್ರಗೊಳ್ಳಬೇಕಿರುತ್ತದೆ. ಇನ್ನು ಕೆಲವಕ್ಕೆ ಸಮಯ ಬೇಕಿರುತ್ತದೆ. ಕೆಲವೊಂದರಲ್ಲಿ ನಾನೇ ಎಡವಿರುತ್ತೇನೆ. ಎಲ್ಲ ಎಳೆಗಳನ್ನೂ ಮತ್ತೆ ಜೋಡಿಸಿದ ನಂತರ ಉತ್ತರ ಸಿದ್ಧವಾಗುತ್ತದೆ. ಮರಳಿ ಯತ್ನವ ಮಾಡಲು ಮನಸ್ಸು ಹುರುಪುಗೊಳ್ಳುತ್ತದೆ.

ಮನಸ್ಸೇ ದೊಡ್ಡ ಕಡಲು. ಅಲ್ಲಿ ನಿತ್ಯ ಅಲೆಗಳು ಎದ್ದೇ ಏಳುತ್ತವೆ. ಕೆಲವೊಂದು ಅಲೆಗಳು ಭೀಕರ. ಆದರೆ, ಎಂಥ ಅಲೆಯೇ ಆದರೂ ಅದು ಮತ್ತೆ ಕಡಲಿನಲ್ಲಿ ಲೀನವಾಗಲೇಬೇಕು.

ಸ್ವಸ್ಥ ಮನಸ್ಸು ಸೋತ ಮನಸ್ಸನ್ನು ಸಂತೈಸುತ್ತದೆ. ನಿರಾಶೆಯನ್ನು ಭರವಸೆ ಮೈದಡವುತ್ತದೆ. ವಿವೇಕ ಉದ್ರೇಕವನ್ನು ಶಮನ ಮಾಡುತ್ತದೆ. ಮನಸ್ಸೇ ಮಿತ್ರನಂತೆ ಸಂತೈಸಿ ಸ್ವಸ್ಥನನ್ನಾಗಿಸುತ್ತದೆ.

’ಹರ್‌ ತೂಫಾನ್‌ ಮೈ ಕರೂಂಗಿ ಸಾಮನಾ
ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ’

ಎಂಬ ಸಿನಿಮಾ ಗೀತೆ ನೆನಪಾಗುತ್ತದೆ.

ಮನಸ್ಸು ಮತ್ತೆ ಉಲ್ಲಸಿತವಾಗುತ್ತದೆ. ಹೊಸ ಕನಸಿಗೆ, ಪ್ರಯತ್ನಕ್ಕೆ ಸಿದ್ಧವಾಗಿ ತುಡಿಯತೊಡಗುತ್ತದೆ.

- ಚಾಮರಾಜ ಸವಡಿ

ಹೊತ್ತಲ್ಲದ ಹೊತ್ತಿನಲ್ಲಿ ಹೊತ್ತಿಗೆ ತೆರೆದು...

22 Jan 2009

0 ಪ್ರತಿಕ್ರಿಯೆ

ರಾತ್ರಿಯಾಗಿದೆ.

ಎಲೆಕ್ಟ್ರಾನಿಕ್‌ ಗಡಿಯಾರವಾದ್ದರಿಂದ ಟಿಕ್‌ ಟಿಕ್‌ ಸದ್ದಿಲ್ಲ. ಡಿಜಿಟಲ್‌ ಅಂಕೆಗಳಿರುವುದರಿಂದ ಮುಳ್ಳುಗಳು ಕಾಣುವುದಿಲ್ಲ. ಗಂಟೆಗೊಮ್ಮೆ ಸಂಗೀತ ಮೊಳಗಿಸಿ, ಗಂಟೆಯ ಸದ್ದು ಹೊರಡಿಸುವುದನ್ನು ಬಿಟ್ಟರೆ ಗಡಿಯಾರ ತನ್ನ ಗಡಿ ದಾಟಿ ತೊಂದರೆ ಕೊಡುವುದಿಲ್ಲ.

ಮಕ್ಕಳು ಮಲಗಿರುತ್ತವೆ. ಮಡದಿಗೂ ಗಾಢ ನಿದ್ರೆ. ಕಚೇರಿಯ ಉದ್ವೇಗವನ್ನು ಇಳಿಸಿಕೊಳ್ಳಲು ಮೌನವಾಗಿ ಕೂತವನಿಗೆ ಕಂಪ್ಯೂಟರ್‌ ತೆರೆಯುವುದು ಏಕೋ ಬೇಸರ.

ಸ್ವಲ್ಪ ಹೊತ್ತು ಸುಮ್ಮನೇ ಕೂಡುತ್ತೇನೆ. ಸಾವಿರ ನೆನಪುಗಳು ಮುಕುರಿಕೊಳ್ಳುತ್ತವೆ. ಬಾಲ್ಯ, ಹರೆಯ, ಓದಿನ ಗುಂಗು, ಬಡತನ, ಹಳ್ಳಿ, ಬೀಸುವ ಗಾಳಿ, ಕೆಟ್ಟ ಬಿಸಿಲು, ಹಸಿವು ನೆನಪಾಗುತ್ತವೆ. ಗದಗ ಜಿಲ್ಲೆ, ರೋಣ ತಾಲ್ಲೂಕಿನ ಕೋಡಿಕೊಪ್ಪ ಎಂಬ ಹಳ್ಳಿಯಲ್ಲಿ ಕಳೆದ ಮೂರು ವರ್ಷಗಳು ಕಣ್ಮುಂದೆ ಸುಳಿಯುತ್ತವೆ. ನನ್ನ ಬದುಕು ಯಾವತ್ತೂ ಬದಲಾಗುವುದಿಲ್ಲ ಬಿಡು ಅಂತ ಅದೆಷ್ಟು ಸಾವಿರ ಸಲ ಹೇಳಿಕೊಂಡಿದ್ದೆನೋ ಅಲ್ಲಿ. ಆದರೆ, ನೋಡನೋಡುತ್ತ ಬದುಕು ಬದಲಾಗುತ್ತಲೇ ಹೋಯಿತು. ಹೌದು: Things fall apart. ಏಕೆಂದರೆ, centre can not hold.

ಪುಸ್ತಕಗಳು ಸೆಳೆಯುತ್ತವೆ. ಇದ್ದ ಷೆಲ್ಫ್‌ ತುಂಬಿದ್ದರಿಂದ, ಡಬ್ಬದಲ್ಲಿರುವ ಪುಸ್ತಕಗಳನ್ನು ಹೊರತೆಗೆಯಲೇ ಆಗಿಲ್ಲ. ಬೇಂದ್ರೆಯವರ ಬಹುತೇಕ ಕವನ ಸಂಕಲನಗಳು ಒಂದೆಡೆ ಕೂತಿವೆ. ಬೇಂದ್ರೆ ಓದುತ್ತಿದ್ದರೆ ಮನಸ್ಸು ಹರಿಯುವ ನೀರಾಗುತ್ತದೆ. ಅಲ್ಲಮಪ್ರಭು ಹೇಳಿದ್ದಾರಲ್ಲ: ಹರಿವ ನೀರಿಗೆ ಮೈಯೆಲ್ಲಾ ಕೈಕಾಲು. ಎಂಥ ಉದಾತ್ತ ವಿಚಾರ!

ಒಂದಿಷ್ಟು ವಚನಗಳನ್ನು ಓದಬೇಕು. ದೂರದಲ್ಲಿರುವ ಮಿತ್ರ ರಾಮಪ್ರಸಾದ್‌ (ಹಂಸಾನಂದಿ) ಅವರ ದಾಸರ ಸಂಕಲನಗಳನ್ನೂ ಓದಬೇಕು. ಆ ಕುರಿತು ನಿಯಮಿತವಾಗಿ ಬರೆಯಬೇಕು. ಕನ್ನಡದ ಅಷ್ಟೂ ಸೊಗಸನ್ನು ಭಕ್ತಿ ಸಾಹಿತ್ಯವೇ ಭಟ್ಟಿ ಇಳಿಸಿಕೊಂಡಿದೆ ಎಂಬಷ್ಟು ತೀವ್ರವಾಗಿರುವ ವಚನ-ದಾಸರ ಪದಗಳನ್ನು ಆಗಾಗ ನೋಡುತ್ತಿದ್ದರೂ ಸಾಕು, ಮನಸ್ಸು ಸ್ವಸ್ಥವಾಗುತ್ತದೆ. ಬರವಣಿಗೆ ಸುಲಭವಾಗುತ್ತದೆ. ಆದರೆ, ನನ್ನ ಹತ್ತಿರ ಈ ಸರಕೇ ಇಲ್ಲ ಎಂಬುದು ಅರಿವಾದಾಗ, ಕ್ಷಣ ಕಾಲ ಪೆಚ್ಚೆನಿಸಿತು.

ಒಂದಿಷ್ಟು ಇಂಗ್ಲಿಷ್‌ ಕವಿತಾ ಸಂಕಲನಗಳನ್ನು ತರಬೇಕು. ಎಜ್ರಾ ಪೌಂಡ್‌ನ ಕವಿತೆಗಳು, ರಸ್ಕಿನ್‌ ಬಾಂಡ್‌ನ ಕತೆಗಳು, ವಿ.ಎಸ್‌. ನಾಯ್‌ಪಾಲ್‌ರ ಗದ್ಯ, ಕಮಲಾ ದಾಸ್‌ ಪದ್ಯ- ಎಲ್ಲ ಸೇರಿಸಿಕೊಂಡು ಸುಮ್ಮನೇ ಒಂದಿಷ್ಟು ಕತೆಗಳನ್ನು ಅನುವಾದ ಮಾಡಬೇಕು. ಕವಿತೆಗಳನ್ನು ಬರೆಯಬೇಕು ಎಂದು ಅಂದುಕೊಂಡು ಖುಷಿಪಟ್ಟೆ.

ರಸ್ಕಿನ್‌ ಬಾಂಡ್‌ನ ಎರಡು ಕತೆಗಳ ಅನುವಾದಗಳು ಈಗಾಗಲೇ ಪತ್ರಿಕೆಗಳಲ್ಲಿ ಅಚ್ಚಾಗಿವೆ. ಸಂಪದದಲ್ಲಿ ಅವನ್ನೇ ಮೊದಲು ಹಾಕಬೇಕು. ನಂತರ ನನಗೆ ಹಿಡಿಸಿದ ಕತೆಗಳನ್ನು ನಿಯಮಿತವಾಗಿ ಅನುವಾದ ಮಾಡಿದರೆ ಹೇಗೆ ಎಂದೂ ಯೋಚಿಸಿದೆ. ಅದೇ ರೀತಿ ಒಂದಿಷ್ಟು ಕವಿತೆಗಳನ್ನೂ ಅನುವಾದ ಮಾಡಬೇಕು. ಒಂದೆರಡು ತಿಂಗಳಲ್ಲಿ ಈ ಕೆಲಸ ಒಂದು ಹದಕ್ಕೆ ಬರಬೇಕು ಎಂದೂ ಕಟ್ಟು ಹಾಕಿಕೊಂಡೆ.

ಗಂಟೆ ಹನ್ನೆರಡಾಗಿರಬೇಕು. ಎಲೆಕ್ಟ್ರಾನಿಕ್‌ ಗಡಿಯಾರ ಮೆಲ್ಲಗೇ ಮೊಳಗಿತು. ಮೊದಲು ಒಂದಿಷ್ಟು ಸಂಗೀತ. ನಂತರ ಢಣ್‌ ಢಣ್‌ ಗಂಟಾನಾದ. ರಾತ್ರಿಯ ಕಾವಳದಲ್ಲಿ ಒಬ್ಬನೇ ಸುಮ್ಮನೇ ಕೂತಿದ್ದನ್ನು ನೋಡಿದವರು ನನ್ನ ಮನಃಸ್ಥಿತಿಯ ಬಗ್ಗೆ ಅನುಮಾನಪಟ್ಟಾರು ಎಂದೂ ಅನಿಸಿತು. ಓದದೇ ಮಲಗಲಾರೆ. ಬೇಂದ್ರೆಯವರ ಕವಿತಾ ಸಂಕಲನ ಹಿಡಿದು ಕೂತೆ.

ಮನಸ್ಸು ಪಾತರಗಿತ್ತಿ ಪಕ್ಕವಾಯಿತು. ನೆನಪುಗಳಿಂದ ನೆನಪುಗಳಿಗೆ ಹಾರುತ್ತ ಹಾರುತ್ತ ಹೊರಟಿತು. ಅದರ ಹಿಂದೆ ಹೊರಟ ಮನಸ್ಸು ಎಲ್ಲಿ ಕಳೆದುಹೋಯಿತೋ-

ನಸುಕಿನಲ್ಲಿ ಎಚ್ಚರವಾದಾಗ, ಬೇಂದ್ರೆ ಪುಸ್ತಕ ಪಕ್ಕದಲ್ಲಿ ಮಲಗಿತ್ತು. ಅದರೊಳಗಿನ ಕನಸುಗಳು ಮಾತ್ರ ಈ ಚಳಿಯಲ್ಲಿಯೂ ಬೆಚ್ಚಗಿವೆ.

- ಚಾಮರಾಜ ಸವಡಿ

ಎಲ್ಲಿಂದಲೋ ಬಂದವರು

17 Jan 2009

10 ಪ್ರತಿಕ್ರಿಯೆ

ಬೆಂಗಳೂರಿನ ಚಂದ್ರಾ ಲೇಔಟ್‌ ಬಡಾವಣೆಗೆ ಮನೆ ಬದಲಿಸಿದ ಪ್ರಾರಂಭದ ದಿನಗಳವು.

ಇಡೀ ದಿನ ಮನೆ ಸಾಮಾನುಗಳನ್ನು ಪ್ಯಾಕ್‌ ಮಾಡಿ, ಲಾರಿಗೆ ಹೇರಿಸಿ, ಇಳಿಸಿ, ಮತ್ತೆ ಜೋಡಿಸುವ ಕೆಲಸದಲ್ಲಿ ಹೈರಾಣಾಗಿದ್ದೆ. ಅದು ಕೇವಲ ದೈಹಿಕ ದಣಿವಲ್ಲ. ಪ್ರತಿಯೊಂದು ಸಲ ಮನೆ ಬದಲಿಸಿದಾಗಲೂ ಆಗುವ ಭಾವನಾತ್ಮಕ ತಾಕಲಾಟಗಳ ಸುಸ್ತದು.

ಮಕ್ಕಳು ಮಲಗಲು ಬೇಕಾದ ಕನಿಷ್ಠ ವ್ಯವಸ್ಥೆ ಮಾಡಿ, ಹೋಟೆಲ್‌ನಿಂದ ತಂದಿದ್ದ ಊಟವನ್ನು ಒಂದಿಷ್ಟು ತಿನ್ನಿಸಿ ಅವನ್ನು ಮಲಗಿಸಿದ್ದಾಯ್ತು. ಮನೆ ತುಂಬ ಎಲ್ಲೆಂದರಲ್ಲಿ ಬಿದ್ದಿದ್ದ ಗಂಟು, ಮೂಟೆ, ಡಬ್ಬಗಳ ಮಧ್ಯೆ ಎರಡು ಕುರ್ಚಿ ಹಾಕಿಕೊಂಡು ನಾನು ಮತ್ತು ರೇಖಾ ಸ್ವಲ್ಪ ಹೊತ್ತು ಸುಮ್ಮನೇ ಕೂತೆವು.

ಏನಂತ ಮಾತಾಡುವುದು? ನಾವು ಹೀಗೆ ಕೂತಿದ್ದು ಇದೇ ಮೊದಲ ಸಲವೇನಲ್ಲ. ಮದುವೆಗೆ ಮುಂಚೆಯೇ ಏಳೆಂಟು ಸಲ ರೂಮ್‌ ಬದಲಿಸಿದ ಭೂಪ ನಾನು. ಮದುವೆಯಾದ ಏಳು ವರ್ಷಗಳಲ್ಲಿ ಸರಾಸರಿ ವರ್ಷಕ್ಕೊಮ್ಮೆಯಂತೆ ಮನೆ ಬದಲಿಸಿದ್ದೇನೆ. ನೌಕರಿ ಬದಲಾದಾಗ ಮನೆ ಬದಲಾಗಿವೆ. ಟ್ರಾನ್ಸಫರ್‌ ಆದಾಗ ಅನಿವಾರ್ಯವಾಗಿ ಮನೆ ಬದಲಿಸಲೇಬೇಕಲ್ಲ. ಹೆಚ್ಚಿನ ಅನುಕೂಲತೆಗಳಿಗಾಗಿ ಎರಡು ಸಲ ನಾವೇ ಹೊಸ ಮನೆ ಹುಡುಕಿದ್ದೆವು. ಹೀಗಾಗಿ, ಪ್ರತಿ ಸಲ ಎತ್ತಂಗಡಿಯಾದಾಗಲೂ ಅದೇ ಭಾವ, ಅದೇ ನೋವು.

ಮನೆ ತುಂಬ ಹರಡಿರುವ ಸಾಮಾನುಗಳನ್ನು ನೋಡುತ್ತಿದ್ದರೆ, ನಾವು ಯಾರದೋ ಮನೆಯಲ್ಲಿ ಕೂತಿದ್ದೇವೆ ಅನಿಸುತ್ತಿತ್ತು. ಒಂದು ಬೆಂಕಿಪೆಟ್ಟಿಗೆಯೂ ಕೈಗೆ ಸಿಗುವುದಿಲ್ಲ. ನಾಳೆಯವರೆಗೆ ಕುಡಿಯುವ ನೀರಿನ ತೊಂದರೆಯಿಲ್ಲ. ಪೇಸ್ಟ್‌ ಬ್ರಷ್‌ ಗೊತ್ತಿರುವ ಕಡೆ ಇಟ್ಟಿದ್ದು ಸಮಾಧಾನ. ಇನ್ನೆರಡು ಲೈಟ್‌ ಹಾಕಬೇಕು. ನಾಳೆಯ ನಾಷ್ಟಾ ಹೋಟೆಲ್‌ನಿಂದ ತಂದುಬಿಡಿ. ಬಾತ್‌ರೂಮಿನಲ್ಲಿ ಗ್ಯಾಸ್‌ ಗೀಜರ್‌ ಜೋಡಿಸಬೇಕು. ಒಂದು ನಲ್ಲಿ ಸೋರುತ್ತಿದೆ, ಪ್ಲಂಬರ್‌ ಕರೆಸಿ. ಈ ಮನೆಯಲ್ಲಿ ಫ್ಯಾನ್‌ಗಳೇ ಇಲ್ಲ. ಎಲೆಕ್ಟ್ರಿಸಿಯನ್‌ ಕೂಡಾ ಬರಬೇಕು. ಇಲ್ಲಿ ಕೆಲಸದವರು ಸಿಗುತ್ತಾರಾ? ಗೌರಿ ಸ್ಕೂಲಿನ ದಾರಿ ಸರಿಯಾಗಿ ನೋಡಿದ್ದೀರಲ್ವಾ? ರೇಶನ್‌ ಎಲ್ಲಿ ಸಿಗುತ್ತದೆ? ತರಕಾರಿ ಎಲ್ಲಿ? ಅಂದ್ಹಾಗೆ ನಾಳೆ ಬೆಳಿಗ್ಗೆ ಬೇಗ ಎದ್ದು ಹಾಲು ತಗೊಂಬನ್ನಿ. ಕಾಫಿ ಪುಡಿ, ಸಕ್ಕರೆ ಎಲ್ಲಿಟ್ಟಿದ್ದೀನೋ ನೆನಪಿಲ್ಲ. ಬರ್ತಾ ಅವನ್ನೂ ತಂದ್ಬಿಡಿ. ಇಲ್ಲೆಲ್ಲೋ ಬೇಕರಿ ಇರಬೇಕು. ಒಂದಿಷ್ಟು ಬ್ರೆಡ್‌...

ಬರೀ ಇವೇ ಮಾತಾಯ್ತಲ್ಲ ಮಾರಾಯ್ತಿ ಎಂದು ಸಿಡುಕಿದೆ. ಆಕೆ ಸುಮ್ಮನಾದಳು.

ಮನೆ ಗವ್ವನೇ ದಿಟ್ಟಿಸಿತು. ಆ ಮೂಲೆಯಲ್ಲಿರುವ ರಟ್ಟಿನ ಡಬ್ಬದಲ್ಲಿ ನನ್ನ ಕಂಪ್ಯೂಟರ್‌ ಇದೆ. ಈ ಮನೆಗೆ ಇಂಟರ್‌ನೆಟ್‌ ಯಾವಾಗ ಬರುತ್ತದೋ. ಬಿಎಸ್ಸೆನ್ನೆಲ್‌ ಕಚೇರಿ ಎಲ್ಲಿದೆಯೋ, ಅವರು ಯಾವಾಗ ನೆಟ್‌ ಕನೆಕ್ಷನ್‌ ಕೊಡ್ತಾರೋ. ಪೆಟ್ರೋಲ್‌ ಬಂಕ್‌ ಹತ್ತಿರದಲ್ಲಿದೆಯಾ? ದಾರಿಯಲ್ಲೆಲ್ಲೋ ನೋಡಿದ ನೆನಪು. ನನ್ನ ಡ್ರೆಸ್‌ಗಳು ಯಾವ ಮೂಟೆಯಲ್ಲಿ ಮಾಯವಾಗಿವೆಯೋ, ಇಸ್ತ್ರಿ ಮಾಡುವವರನ್ನು ಎಲ್ಲಿ ಹುಡುಕುವುದು?...

ನನ್ನ ಪ್ರಶ್ನೆಗಳನ್ನು ನನ್ನಲ್ಲೇ ನುಂಗಿದೆ. ಮತ್ತೆ ಮೌನ.

ಆಕೆಗೆ ಕಣ್ಣೆಳೆಯುತ್ತಿದ್ದವು. ಮಲ್ಕೋ ಹೋಗು ಎಂದೆ. ಆಕೆ ಎದ್ದು ಹೋಗುತ್ತಲೇ ತುಂಬಿದ ಮನೆಯಲ್ಲಿ ಖಾಲಿ ಮನಃಸ್ಥಿತಿಯಲ್ಲಿ ಸುಮ್ಮನೇ ಕೂತೆ.

ವಿದಾಯ ಎಷ್ಟೊಂದು ವಿಚಿತ್ರವಲ್ಲವಾ? ಎಲ್ಲಿಂದಲೋ ಬರುತ್ತೇವೆ. ನಮ್ಮ ಹಾಗೆ ಎಲ್ಲಿಂದಲೋ ಬಂದವರ ಜೊತೆ ಸ್ನೇಹ ಬೆಳೆಯುತ್ತದೆ. ಪರಸ್ಪರ ಕಷ್ಟ-ಸುಖ ಹಂಚಿಕೊಳ್ಳುತ್ತೇವೆ. ನಮ್ಮ ಮಕ್ಕಳು ಅವರ ಮನೆಯಲ್ಲಿ ಆಡುತ್ತವೆ. ಅವರ ಮನೆಯ ಕಷ್ಟಗಳಿಗೆ ನಮ್ಮ ಸಾಂತ್ವನ. ರಾತ್ರಿ ಮನೆಗೆ ಬರುವುದು ತಡವಾದರೂ ಪಕ್ಕದ ಮನೆಯವರು ಇದ್ದಾರೆ ಎಂಬ ಭರವಸೆ. ಮಕ್ಕಳಿಗೆ ಹುಷಾರಿಲ್ಲ ಎಂದರೆ, ಓನರ್‌ ಆಂಟಿ ಜತೆಗಿರುತ್ತಾರೆ ಎಂಬ ನೆಮ್ಮದಿ. ನಂಟು ಬೆಳೆಯಲು ಇಂಥ ಒಂದಿಷ್ಟು ಎಳೆಗಳು ಸಾಕು.

ಕ್ರಮೇಣ ಪರಿಚಯ ಆತ್ಮೀಯತೆಗೆ ತಿರುಗುತ್ತದೆ. ಓನರ್‌ ಆಂಟಿಗೆ ಪರಿಚಯ ಇರುವ ಜನ ನಮಗೂ ಪರಿಚಯವಾಗುತ್ತಾರೆ. ಫ್ಯಾಮಿಲಿ ಡಾಕ್ಟರ್‌, ಕಿರಾಣಿ ಅಂಗಡಿಯವರು, ಪೇಪರ್‌ ಹಾಕುವ ಹುಡುಗ, ತರಕಾರಿ ಮಾರುವವರು, ಇಸ್ತ್ರೀ ಅಂಗಡಿಯವ, ಹತ್ತಿರದ ದೇವಸ್ಥಾನ, ಅಷ್ಟೇ ಹತ್ತಿರ ಇರುವ ಡಿಪಾರ್ಟ್‌‌ಮೆಂಟಲ್‌ ಸ್ಟೋರ್‌, ಮೆಜೆಸ್ಟಿಕ್‌ ಬಸ್‌ ನಂಬರ್‌, ಬಳೆ ಅಂಗಡಿ, ಔಷಧಿ ಅಂಗಡಿ, ಇದ್ದುದರಲ್ಲೇ ಪರವಾಗಿಲ್ಲ ಎನ್ನುವ ಹೋಟೆಲ್‌ಗಳು- ಒಂದಕ್ಕೊಂದು ಮಾಹಿತಿ ದಕ್ಕಿ ಕ್ರಮೇಣ ಪಕ್ಕದ ಮನೆಯವರೊಂದಿಗೆ ನಂಟು ಬಲವಾಗುತ್ತದೆ. ಅವರಿಗೆ ಉಪ್ಪಿಟ್ಟು ಇಷ್ಟ ಎಂದು ನಮಗೂ, ಮೈಸೂರು ಮಂಡಕ್ಕಿಯನ್ನು ಈಕೆ ಚೆನ್ನಾಗಿ ಮಾಡುತ್ತಾಳೆ ಎಂದು ಅವರಿಗೂ ಗೊತ್ತಾಗುತ್ತದೆ. ಇಬ್ಬರೂ ಸೇರಿಕೊಂಡು ಉಪ್ಪಿನಕಾಯಿಗೆ ಮಸಾಲೆ ಅರೆಯುತ್ತಾರೆ. ಅವರ ಮನೆಯ ಹೋಳಿಗೆಗೆ ನಮ್ಮನೆಯ ಕರಿದ ಸಂಡಿಗೆ, ಹಪ್ಪಳ ರುಚಿ ಕೊಡುತ್ತವೆ. ಬದುಕು ಘಮ್ಮೆಂದು ಅರಳತೊಡಗುತ್ತದೆ.

ಕೊಂಚ ಬೇಜವಾಬ್ದಾರಿತನ ಇರುವ ನನಗೆ ಇದು ಸ್ವಾಗತಾರ್ಹ ಬೆಳವಣಿಗೆ. ಈ ಸಲದ ರೇಶನ್‌ ಪಟ್ಟಿ ಮಾಡಬೇಕು ಎಂಬ ನನ್ನ ಹೆಂಡತಿಯ ಮೊದಲ ವಾರ್ನಿಂಗ್‌ ಯಾವತ್ತೂ ನನ್ನ ತಲೆಗೆ ನಾಟಿಲ್ಲ. ಇನ್ನೊಂದು ವಾರದಲ್ಲಿ ರೇಶನ್‌ ಖಾಲಿಯಾಗುತ್ತದೆ ಎಂಬ ಎರಡನೇ ವಾರ್ನಿಂಗನ್ನೂ ಕೇರ್‌ ಮಾಡಿದವನಲ್ಲ. ಅಡುಗೆ ಎಣ್ಣೆ ನಾಳೆವರೆಗೆ ಮಾತ್ರ ಬರುತ್ತದೆ ಎಂಬ ವಾರ್ನಿಂಗ್‌ ಕಚೇರಿಗೆ ಹೋಗುವ ಹೊತ್ತಿಗೆ ಮರೆತುಹೋಗಿರುತ್ತದೆ. ನಾಳೆ ಎಂದರೆ ಇಪ್ಪತ್ನಾಲ್ಕು ಗಂಟೆ ತಾನೆ? ಬೆಳಿಗ್ಗೆ ತರ್ತೀನಿ ಬಿಡು ಅನ್ನುತ್ತೇನೆ. ಮರುದಿನ ಬೆಳಿಗ್ಗೆ ಅರ್ಜೆಂಟ್‌ ಕೆಲಸವೊಂದು ಗಂಟು ಬಿದ್ದಿರುತ್ತದೆ. ಅಗತ್ಯಕ್ಕಿಂತ ಹೆಚ್ಚು ಗಂಭೀರನಾಗೇ ಕಂಪ್ಯೂಟರ್‌ ಮುಂದೆ ಕೂತ ನನ್ನ ಮುಂದೆ ರೇಶನ್‌ ಎಂಬ ಚಿಲ್ಲರೆ ವಿಷಯವನ್ನು ರೇಖಾ ಪ್ರಸ್ತಾಪಿಸುವುದಾದರೂ ಹೇಗೆ?

ಸಂಜೆ ಹೊತ್ತಿಗೆ ಎಣ್ಣೆ ಖಾಲಿ. ತುಪ್ಪ ತಳ ಕಂಡಿರುತ್ತದೆ. ಮಸಾಲೆ ಹಪ್ಪಳದ ಮುರುಕುಗಳಷ್ಟೇ ಉಳಿದಿವೆ. ಈಕೆಯೇ ಕೂತು ಉದ್ದುದ್ದ ಪಟ್ಟಿ ತಯಾರಿಸುತ್ತಾಳೆ. ಕಚೇರಿಯಿಂದ ಮನೆಗೆ ಬರುತ್ತಲೇ ವಾತಾವರಣದ ಗಂಭೀರತೆ ಗೇಟಿನವರೆಗೆ ತಲುಪಿರುತ್ತದೆ. ಓಹೋ, ರೇಶನ್‌ ವಿಷ್ಯ ಅಂತ ಅಂದುಕೊಳ್ಳುತ್ತಲೇ ಅಗತ್ಯಕ್ಕಿಂತ ಹೆಚ್ಚು ನಗುತ್ತ ಒಳಗೆ ಬರುತ್ತೇನೆ. ಆಕೆ ನಗುವುದಿಲ್ಲ. ಊಟಕ್ಕೆ ಕೂತಾಗ, ಅಡುಗೆ ಮಾಮೂಲಿನಂತೆ ಚೆನ್ನಾಗೇ ಇರುತ್ತದೆ. ಇದೇನು ಎಣ್ಣೆ ಇಲ್ಲ ಅಂತಿದ್ದೆ, ಹಪ್ಪಳ ಕರಿದಿದ್ದೀ? ಎಂದು ಅಚ್ಚರಿಪಡುತ್ತೇನೆ. ಓನರ್‌ ಆಂಟಿ ಮನ್ಯಾಗಿಂದ ತಂದೆ ಎಂದು ಈಕೆ ಮುಖ ಬಿಗಿ ಹಿಡಿದುಕೊಂಡೇ ಉತ್ತರಿಸುತ್ತಾಳೆ.

ಹೊಸ ಮನೆಯ ಮಸಕು ಬೆಳಕಿನಲ್ಲಿ ಒಬ್ಬನೇ ಕೂತ ನನಗೆ ಇಂಥ ನೂರಾರು ಘಟನೆಗಳು ನೆನಪಾಗುತ್ತವೆ.

ಇಲ್ಲಿ ಯಾರೂ ಗೊತ್ತಿಲ್ಲ. ಅಷ್ಟು ಸುಲಭವಾಗಿ ಪರಿಚಯವಾಗುವ ಸಂಭವವೂ ಇಲ್ಲ. ಸದ್ಯಕ್ಕಂತೂ ಇಲ್ಲ. ಪ್ರತಿಯೊಂದನ್ನೂ ನಾವೇ ಹುಡುಕಿಕೊಂಡು ಹೋಗಬೇಕು. ಮಕ್ಕಳ ಡಾಕ್ಟರ್‌, ಹಾಲಿನವರು, ತರಕಾರಿ, ರೇಶನ್‌, ಔಷಧ ಅಂಗಡಿ, ಕಸ ಸಂಗ್ರಹಿಸುವವರು, ಪೇಪರ್‌ ಹಾಕುವವರು, ಕೇಬಲ್‌, ಫೋನ್‌- ಪಟ್ಟಿ ಬೆಳೆಯುತ್ತಲೇ ಇತ್ತು.

ಎಷ್ಟೊತ್ತು ಕೂತಿದ್ದೆನೋ, ನಿದ್ದೆ ಒತ್ತರಿಸಿಕೊಂಡು ಬರುತ್ತಿತ್ತು. ಅಡ್ಡಡ್ಡ ಬಿದ್ದಿದ್ದ ಮೂಟೆಗಳನ್ನು ಹುಷಾರಾಗಿ ದಾಟಿ ರೂಮೊಳಗೆ ಹೋಗಿ, ಮಕ್ಕಳಿಗೆ ಸರಿಯಾಗಿ ಹೊದಿಸಿ ಬಿದ್ದುಕೊಂಡೆ.

ಎಂದಿನಂತೆ ಮರುದಿನ ನಸುಕಿನಲ್ಲಿ ಎಚ್ಚರವಾಯಿತು. ಎದ್ದವ ಕಕ್ಕಾವಿಕ್ಕಿ. ಎಲ್ಲಿದ್ದೇನೆ ಎಂಬುದೇ ತಿಳಿಯುತ್ತಿಲ್ಲ. ನೈಟ್‌ ಬಲ್ಬ್‌ನ ಮಂದ ಬೆಳಕಲ್ಲಿ ಎಲ್ಲವೂ ವಿಚಿತ್ರವಾಗಿ ಕಾಣುತ್ತಿದೆ. ಬಾಗಿಲೆಲ್ಲಿದೆ? ಬಾತ್‌ ರೂಮ್‌? ಇದೇನಿದು ಇಷ್ಟೊಂದು ಸಾಮಾನುಗಳು ಬಿದ್ದಿವೆ?

ಕ್ರಮೇಣ ಮನಸ್ಸು ತಿಳಿಯಾಯಿತು. ಓ, ಇದು ಹೊಸ ಮನೆ!

ಮೌನವಾಗಿ ಎದ್ದೆ. ಮಕ್ಕಳಿಗೆ ಹೊದಿಸಿದೆ. ಮೂಟೆಗಳನ್ನು ಹುಷಾರಾಗಿ ದಾಟುತ್ತ ಕದ ತೆರೆದು ವರಾಂಡಕ್ಕೆ ಬಂದು ನಿಂತೆ. ಡಿಸೆಂಬರ್‌ನ ಚಳಿ ಮುಖಕ್ಕೆ ರಾಚಿತು. ಮನೆ ಎದುರಿನ ಬೀದಿ ದೀಪದ ಬೆಳಕಿನಲ್ಲಿ ನಾನಿದ್ದ ಬೀದಿ ಶಾಂತವಾಗಿ ಮಲಗಿತ್ತು. ಅರೆ ಕ್ಷಣ ಮೌನವಾಗಿ ನಿಂತೆ.

ಹೊಸ ಮನೆಯಲ್ಲಿ ಹಳೆಯ ಕನಸುಗಳಿಗೆ ಜೀವ ತುಂಬಬೇಕು. ಹೊಸ ಕನಸುಗಳು ಅರಳಬೇಕು. ಮೂಟೆ ಬಿಚ್ಚಿ, ಎಲ್ಲವನ್ನೂ ಮತ್ತೆ ಜೋಡಿಸಿ, ಖಾಲಿ ಕಟ್ಟಡದಲ್ಲಿ ಮನೆ ರೂಪಿಸಬೇಕು ಎಂದು ಯೋಚಿಸುತ್ತಿದ್ದಾಗ ಬೀಸಿದ ಚಳಿ ಗಾಳಿ ಮೈ ನಡುಗಿಸಿತು. ತಲೆ ಕೊಡವಿ ಒಳ ಹೊಕ್ಕವ ಮುಖ ತೊಳೆದು, ಚಪ್ಪಲಿ ಮೆಟ್ಟಿ ಬೀದಿಗಿಳಿದೆ.

ಹಾಲಿನ ಬೂತ್‌ ಹುಡುಕಿ ಹೊರಟವನನ್ನು ಮುಂಜಾವಿನ ಮೊದಲ ಸೂರ್ಯಕಿರಣಗಳು ಆದರದಿಂದ ಸ್ವಾಗತಿಸಿದವು.

- ಚಾಮರಾಜ ಸವಡಿ

ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ

13 Jan 2009

8 ಪ್ರತಿಕ್ರಿಯೆ

’ಬ್ಲಾಗ್‌ನಲ್ಲಿ ಬರೆಯುವವರು ಬರಹಗಾರರೇನಲ್ಲ’ ಅಂದ ನನ್ನ ಪತ್ರಕರ್ತ ಮಿತ್ರನೊಬ್ಬ.

ಹಾಗಾದರೆ, ಬರಹಗಾರರೆಂದರೆ ಯಾರು? ಅಂದೆ.

ಅವನ ಉತ್ತರ ಕೇಳಿ ನನಗೆ ದಿಗ್ಭ್ರಮೆಯಾಯಿತು. ನಂತರ ಮರುಕ ಹುಟ್ಟಿತು. ಆತನ ಪ್ರಕಾರ, ಪತ್ರಿಕೆಗಳಲ್ಲಿ ಬರೆಯುವವರು ಮಾತ್ರ ಬರಹಗಾರರು. ಉಳಿದವರೆಲ್ಲ ತಮ್ಮ ತೆವಲಿಗೆ ಬರೆಯುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಅವಕ್ಕೆ ಮೌಲ್ಯವಿಲ್ಲ.

ಆತನ ಜೊತೆ ವಾದಿಸುವುದು ವ್ಯರ್ಥ ಅನಿಸಿ ಸುಮ್ಮನಾದೆ. ಆದರೆ, ಈ ವಿಷಯ ಪ್ರಸ್ತಾಪಿಸುವುದು ಉತ್ತಮ ಅನಿಸಿ ಇಲ್ಲಿ ಬರೆಯುತ್ತಿದ್ದೇನೆ.

ಹಿಂದೊಮ್ಮೆ ಇಂಥದೇ ವಿಷಯದ ಬಗ್ಗೆ ಓದಿದ್ದು ನೆನಪಾಯಿತು. ಟಿವಿ ದಾಂಗುಡಿಯಿಡುತ್ತಿದ್ದ ದಿನಗಳವು. ಟಿವಿ ತಾರೆಯರು ಸಿನಿಮಾ ತಾರೆಯರಂತೆ ಜನಪ್ರಿಯತೆ ಗಳಿಸುತ್ತಿದ್ದರು. ಆಗ ಕೆಲ ನಟ, ನಟಿಯರು ಮೇಲಿನ ಅಭಿಪ್ರಾಯವನ್ನೇ ಬಿಂಬಿಸುವಂಥ ಮಾತು ಹೇಳಿದ್ದರು: ಸಿನಿಮಾ ನಟನೆಯೇ ನಿಜವಾದ ನಟನೆ. ಟಿವಿ ನಟನೆಗೆ ಮೌಲ್ಯವಿಲ್ಲ.

ಗಡಿಯಾರವನ್ನು ಇನ್ನೊಂಚೂರು ಹಿಂದಕ್ಕೆ ತಿರುಗಿಸೋಣ. ಸಿನಿಮಾ ಜನಪ್ರಿಯವಾಗುವುದಕ್ಕೂ ಮುನ್ನ ನಾಟಕ ರಂಗ ಕ್ರಿಯಾಶೀಲವಾಗಿತ್ತು. ಆಗ, ಸಿನಿಮಾ ನಟ-ನಟಿಯರ ಕುರಿತು ರಂಗಕರ್ಮಿಗಳು ಇಂಥದೇ ಮಾತು ಹೇಳಿದ್ದರು.

ಇದು ಏನನ್ನು ಸೂಚಿಸುತ್ತದೆ?

ಮಾಧ್ಯಮ ಬದಲಾದರೂ, ಅಭಿವ್ಯಕ್ತಿ ಎಂಬುದು ಹಾಗೇ ಉಳಿದಿದೆ ಅಂತ ಅಲ್ಲವೆ? ಬರಹಗಾರ ಪತ್ರಿಕೆಗಳಿಗೆ ಬರೆದಂತೆ ಅಂತರ್ಜಾಲ ವಾಹಿನಿಯಲ್ಲೂ ಬರೆಯಬಲ್ಲ. ನಟನೆ ಬಲ್ಲವ ಸಿನಿಮಾ, ಟಿವಿ, ರಂಗಭೂಮಿ ಎಂಬ ಭೇದವಿಲ್ಲದೇ ನಟಿಸಬಲ್ಲ. ಆ ಮಾಧ್ಯಮ ಅವನಿಗೆ ಒಗ್ಗದಿದ್ದರೆ ಬೇರೆ ಮಾತು. ಆದರೆ, ನಟಿಸಲು ಯಾವ ವೇದಿಕೆಯಾದರೇನು?

ಇದೇ ಮಾತನ್ನು ಬರವಣಿಗೆಗೂ ಹೇಳಬಹುದು. ವೈಯಕ್ತಿಕವಾಗಿ ನನಗೆ ಎಲ್ಲ ರೀತಿಯ ಬರವಣಿಗೆ ಒಗ್ಗಿದೆ. ಅಭ್ಯಾಸವಾಗಿದೆ. ಇಷ್ಟಪಟ್ಟಿದ್ದೇನೆ ಕೂಡಾ. ಟ್ಯಾಬ್ಲಾಯ್ಡ್‌, ದಿನಪತ್ರಿಕೆ, ವಾರಪತ್ರಿಕೆ, ಸಾಹಿತ್ಯಿಕ, ಟಿವಿ, ಈಗ ಅಂತರ್ಜಾಲ- ಹೀಗೆ ಎಲ್ಲ ಪ್ರಕಾರಗಳಲ್ಲೂ ಬರೆದಿದ್ದೇನೆ. ಯಾವೊಂದು ಮಾಧ್ಯಮವೂ ನನಗೆ ಕಡಿಮೆ ಎಂದು ಅನಿಸಿಲ್ಲ. ಪ್ರತಿಯೊಂದಕ್ಕೂ ಅದರದೇ ಮಹತ್ವವಿದೆ. ವ್ಯಾಪ್ತಿಯಿದೆ. ಓದುಗರಿದ್ದಾರೆ. ವಿಷಯಗಳಿವೆ. ಬರೆಯುವ ಆಸಕ್ತಿ ಮತ್ತು ವ್ಯಕ್ತಪಡಿಸುವ ರೀತಿ ಗೊತ್ತಿದ್ದವ ಸುಲಭವಾಗಿ ವ್ಯಕ್ತವಾಗುತ್ತ ಹೋಗುತ್ತಾನೆ.

ದುರಂತವೆಂದರೆ, ಬಹಳಷ್ಟು ಜನರಿಗೆ ಈ ಸೂಕ್ಷ್ಮ ಅರ್ಥವಾದಂತಿಲ್ಲ. ಅಥವಾ ಅರ್ಥವಾಗಿದ್ದರೂ ಅಸೂಯೆಗೆ ಹಾಗೆ ಹೇಳುತ್ತಾರೇನೋ. ನನಗೆ ಗೊತ್ತಿರುವಂತೆ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮದಲ್ಲಿರುವ ಬಹಳಷ್ಟು ಜನ ಅಕ್ಷರಶತ್ರುಗಳು. ಅವರಿಗೆ ಅದೊಂದು ವೃತ್ತಿ. ಅವರ ಬರವಣಿಗೆ ದೇವರಿಗೇ ಪ್ರೀತಿ. ಏಜೆನ್ಸಿಗಳಿಂದ ಬರುವ ಸುದ್ದಿಗಳನ್ನು ರೆಡಿಮೇಡ್‌ ಚೌಕಟ್ಟಿಗೆ ಬದಲಾಯಿಸದ ಮಾತ್ರಕ್ಕೆ ಪತ್ರಕರ್ತರಾದಂತೆ ಎಂಬುದು ಅವರ ಅಭಿಪ್ರಾಯ. ಸದ್ಯದ ಪರಿಸ್ಥಿತಿಯಲ್ಲಿ ಅಷ್ಟು ಮಾತ್ರದ ಕೆಲಸ ಮಾಡಿದರೆ ಸಾಕು ಎನ್ನುವ ವಾತಾವರಣವೂ ಇದೆ. ಸುದ್ದಿ ಬರೆಯುವ ಬಹಳಷ್ಟು ಜನರಿಗೆ ಲೇಖನ ಬರೆಯಲು ಬರುವುದಿಲ್ಲ. ಸಾಹಿತ್ಯವಂತೂ ದೂರವೇ ಉಳಿಯಿತು. ಅದೆಲ್ಲ ಗೊತ್ತಿದ್ದರೆ ಮಾತ್ರ ಪತ್ರಕರ್ತನಾಗಬಹುದು ಎಂದಲ್ಲ. ಗೊತ್ತಿದ್ದರೆ ಉತ್ತಮ. ಅಷ್ಟೇ.

ಹೋಗಲಿ, ಸುದ್ದಿಯನ್ನಾದರೂ ಸರಿಯಾಗಿ ಬರೆಯುತ್ತಾರಾ? ವಿಷಯವನ್ನು ತುರುಕಿದ ಮಾತ್ರಕ್ಕೆ ಅದು ವರದಿಯಾದೀತೆ? ಅಂಕಿಅಂಶಗಳನ್ನು ಸೇರಿಸಿ, ಒಂದೆರಡು ಮಹನೀಯರ ಅಭಿಪ್ರಾಯ ದಾಖಲಿಸಿದ ಮಾತ್ರಕ್ಕೆ ಅದು ವರದಿಯಾ? ಉಪ್ಪು, ಹುಳಿ, ಖಾರ, ಒಗ್ಗರಣೆ, ಬೆಂದ ಬೇಳೆಯನ್ನು ಸುರಿದು ನೀರು ಹಾಕಿ ಕುದಿಸಿದರೆ ಹೇಗೆ ಅದು ಸಾರೋ ಸಾಂಬಾರೋ ಆಗುವುದಿಲ್ಲವೋ, ಹಾಗೆ ಮಾಹಿತಿ ತುರುಕಿದ ಮಾತ್ರಕ್ಕೆ ಅದು ವರದಿಯಾಗುವುದಿಲ್ಲ. ಈ ಸೂಕ್ಷ್ಮ ತುಂಬ ಜನರಿಗೆ ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳುವ ಮನಃಸ್ಥಿತಿಯೂ ಇರುವುದಿಲ್ಲ.

ಇಂಥ ಸಂದರ್ಭದಲ್ಲಿ ಮೇಲೆ ಹೇಳಿದಂಥ ಅಭಿಪ್ರಾಯಗಳು ರೂಪುಗೊಳ್ಳುತ್ತವೆ. ನಾನು ಬರೆದಿದ್ದೇ ಸತ್ಯ ಎಂಬ ಧಾರ್ಷ್ಟ್ಯ ಹುಟ್ಟಿಕೊಳ್ಳುತ್ತದೆ. ಪತ್ರಕರ್ತರಿಗೆ ಕೋಡುಗಳು ಮೂಡುವುದೇ ಆವಾಗ. ಇಷ್ಟಾದರೆ ಮುಗೀತು, ಸಿಕ್ಕಸಿಕ್ಕವರನ್ನು ಇರಿಯಲು ಹೋಗುವುದೇ ವೃತ್ತಿಯಾಗುತ್ತದೆ. ಕ್ರಮೇಣ ಅದೇ ಪ್ರವೃತ್ತಿಯಾಗುತ್ತದೆ. ಇಂಥ ಕಡೆ ಅಧ್ಯಯನ, ಅಭಿವ್ಯಕ್ತಿ, ಕುಶಲತೆ, ವೃತ್ತಿಪರತೆ ಎಂಬ ಸೂಕ್ಷ್ಮಗಳು ಅರ್ಥ ಕಳೆದುಕೊಳ್ಳುತ್ತ ಹೋಗುತ್ತವೆ.

ಈ ಸಮಸ್ಯೆ ಕೇವಲ ಪತ್ರಿಕೋದ್ಯಮದಲ್ಲಷ್ಟೇ ಅಲ್ಲ, ಬಹುತೇಕ ರಂಗಗಳಲ್ಲೂ ಇದೆ. ಸೂಕ್ಷ್ಮತೆ, ಸಂವೇದನೆ ಇಲ್ಲದ ಬಹಳಷ್ಟು ಜನ ತಮ್ಮವೇ ಆದ ರೀತಿ ವಿಶ್ಲೇಷಣೆ ನಡೆಸುತ್ತ, ತಮ್ಮ ಬೌದ್ಧಿಕಮಟ್ಟ ತೋರಿಸುತ್ತ ಹೋಗುತ್ತಾರೆ.

ಮೂಲ ವಿಷಯಕ್ಕೆ ಬರೋಣ. ಅಂತರ್ಜಾಲದಲ್ಲಿ ಬರುತ್ತಿರುವುದು ಬರವಣಿಗೆ ಅಲ್ಲವೆ? ಇಲ್ಲಿಯೂ ಸೊಗಸಾದ ಅಭಿವ್ಯಕ್ತಿ ಇಲ್ಲವೆ? ಸಾಹಿತ್ಯದ ಬಹುತೇಕ ಪ್ರಕಾರಗಳು ಇಲ್ಲಿ ತುಂಬ ಚೆನ್ನಾಗಿ ವ್ಯಕ್ತವಾಗುತ್ತಿಲ್ಲವೆ? ಇದ್ದಕ್ಕಿದ್ದಂತೆ ತಮ್ಮ ಸ್ಥಾನಕ್ಕೇ ಕೈ ಹಾಕಿದ ಅಂತರ್ಜಾಲ ಬರಹಗಾರರು ಅರಮರ್ಧ ಪತ್ರಕರ್ತರಲ್ಲಿ ಹುಟ್ಟಿಸಿದ ದಿಗಿಲಿನಿಂದಾಗಿ ಇಂಥ ಅಭಿಪ್ರಾಯಗಳು ಹೊಮ್ಮುತ್ತಿವೆ ಎಂದು ನಾನು ಭಾವಿಸಿದ್ದೇನೆ.

ಯಾವುದೇ ರಂಗವಿರಲಿ, ಅಲ್ಲಿ ಎಲ್ಲ ಬಲ್ಲವರಿಲ್ಲ. ಬಲ್ಲವರ ಸಂಖ್ಯೆ ಬಹಳಿಲ್ಲ. ಹಾಗಂದುಕೊಂಡು, ನಕ್ಕು ಸುಮ್ಮನಾಗುತ್ತೇನೆ.

- ಚಾಮರಾಜ ಸವಡಿ

ಸುಮ್ಮನೇ ಬರುವುದಿಲ್ಲ ಇಲ್ಲಿ ಸಂಜೆ...!

4 Jan 2009

2 ಪ್ರತಿಕ್ರಿಯೆ

ಸಂಜೆಯಾಯಿತು.

ಬೆಂಗಳೂರಿನಲ್ಲಿ ಸಂಜೆ ಎನ್ನುವುದು ಸುಮ್ಮನೇ ಬರುವುದಿಲ್ಲ. ಸೂರ್ಯ ಇದ್ದಕ್ಕಿದ್ದಂತೆ ತನ್ನ ಉರಿ ಕಳೆದುಕೊಂಡು, ಅನಗತ್ಯವಾಗಿ ಕೆಂಪೇರಿ, ಏನೋ ಅರ್ಜೆಂಟ್ ಕೆಲಸವಿದ್ದವನಂತೆ ದುಂಡಗಾಗಿ ಪಶ್ಚಿಮದೆಡೆಗೆ ಹೊರಡುವಾಗ, ಸಂಜೆಯಾಗುತ್ತದೆ.

ಮೆಜೆಸ್ಟಿಕ್ ಬಸ್ ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳಲ್ಲಿ ಇನ್ನೂ ಉಳಿದಿರುವ ಮರಗಳಲ್ಲಿ ಸಾವಿರಾರು ಹಕ್ಕಿಗಳ ಸಂಜೆ ಸಂಭ್ರಮದ ಗೀತೆ ವಾಹನಗಳ ಕರ್ಕಶ ಸದ್ದಿನಲ್ಲಿ ಅಡಗಿ ಹೋಗುತ್ತಿರುವಾಗ, ಸಂಜೆಯಾಗುತ್ತದೆ.

ಅದೇ ಮೆಜೆಸ್ಟಿಕ್‌ನ ಸಿಟಿ ಬಸ್ ನಿಲ್ದಾಣದಲ್ಲಿ, ತಮ್ಮ ಕಾಂಕ್ರೀಟ್ ಗೂಡು ಸೇರುವ ಕಾತರದಲ್ಲಿ ನಿಂತ ಲಕ್ಷಾಂತರ ಜನ, ‘ಈ ಹಾಳಾದ ಬಸ್ ಇನ್ನೂ ಬರಲಿಲ್ಲವಲ್ಲ’ ಎಂದು ಮನಸ್ಸಿನೊಳಗೇ ಶಪಿಸುತ್ತಿರುವಾಗ, ಸಂಜೆಯಾಗುತ್ತದೆ. ಮುಖ್ಯ ರಸ್ತೆಗಳಲ್ಲಿ, ಜನರಿಗೆ ನಡೆದಾಡಲೂ ಜಾಗವಿಲ್ಲದಂತೆ ತುಂಬಿಕೊಂಡ ವಾಹನಗಳು, ಮುಂದಕ್ಕೆ ಹೋಗಲಾಗದೇ ಹೊಗೆಯುಗುಳುತ್ತ ಅಸಹನೆಯಿಂದ ಕಿರಿಚಿಕೊಳ್ಳುವಾಗ, ಸಂಜೆಯಾಗುತ್ತದೆ. ಒಳ ಭಾಗದಲ್ಲಿರುವ ಸಣ್ಣ ರಸ್ತೆಗಳನ್ನೇ ತಾತ್ಕಾಲಿಕ ಆಟದ ಮೈದಾನವನ್ನಾಗಿ ಮಾಡಿಕೊಂಡ ಮಕ್ಕಳು ಆಟ ಆಡುತ್ತ ಕೇಕೆ ಹಾಕುತ್ತಿರುವಾಗ, ಸಂಜೆಯಾಗುತ್ತದೆ.

ದಿನವಿಡೀ ಅಡಗಿ ಕುಳಿತಂತಿದ್ದ ಭೇಲ್ ಪೂರಿ, ಪಾನಿ ಪೂರಿ ಅಂಗಡಿಯವರು ಕೂಡು ರಸ್ತೆಗಳ ಪಕ್ಕದಲ್ಲಿ ತಳ್ಳುಗಾಡಿ ನಿಲ್ಲಿಸಿ ಸ್ಟೌವ್‌ಗೆ ಗಾಳಿ ಹೊಡೆಯುವಾಗ, ಸಂಜೆಯಾಗುತ್ತದೆ. ಅದೇ ರಸ್ತೆಯ ಪಕ್ಕ, ಅಂಥದೇ ಗಾಡಿಯಲ್ಲಿ ಕಬಾಬ್, ಬೋಂಡ, ಮೀನುಗಳು ಸುಡುವ ಎಣ್ಣೆಯಲ್ಲಿ ಈಜಿಗಿಳಿದಾಗ, ಸಂಜೆಯಾಗುತ್ತದೆ.

ಬೆಂಗಳೂರಿನ ಸಂಜೆಗೆ ತನ್ನದೇ ಆದ ಮಾದಕತೆಯಿದೆ.

ತಾವು ಮಲಗಿದ್ದಾಗ ಏನೇನಾಯಿತು? ಎಂದು ಕೇಳುತ್ತ ಬೀದಿ ದೀಪಗಳು ಕಣ್ಣರಳಿಸುತ್ತವೆ. ದೇವರಿಗೆ ಬಿಟ್ಟ ಬಸವನಂತೆ ಚಲಿಸುವ ವಾಹನಗಳು ಛಕ್ಕಂತ ದೀಪ ಹಾಕಿಕೊಳ್ಳುತ್ತವೆ. ಮರಗಿಡಗಳು ನಿಧಾನಕ್ಕೆ ಕಪ್ಪಗಾದರೆ, ಎತ್ತರದ ಕಟ್ಟಡಗಳು ಲಕ್ಷ ದೀಪೋತ್ಸವದ ಗೋಪುರಗಳಂತೆ ಮಿಂಚತೊಡಗುತ್ತವೆ. ಗಲ್ಲಿಗೆರಡರಂತಿರುವ ದೇವಸ್ಥಾನಗಳಲ್ಲಿ ದೇವರು ಕೂಡ ಫ್ರೆಶ್‌ ಆಗಿ ಭಕ್ತರ ದರ್ಶನಕ್ಕೆ ಸಿದ್ಧನಾಗುತ್ತಾನೆ.

ಒಲಿದವಳು ಜೊತೆಗಿರುವಾಗ ಬ್ರಿಗೇಡ್, ಎಂ.ಜಿ. ರಸ್ತೆಗಳ ತಂಪು ಗಾಳಿಯ ಮಧ್ಯೆ, ಐಸ್‌ಕ್ರೀಮೂ ಬಿಸಿ ಹುಟ್ಟಿಸುತ್ತದೆ. ಮೊಬೈಲ್‌ಗಳ ಮೂಲಕ ಸಾವಿರಾರು ಸಾಂಕೇತಿಕ ಸಂದೇಶಗಳು, ಲಕ್ಷಾಂತರ ಪಿಸು ಧ್ವನಿಗಳು ಹರಿದಾಡುತ್ತವೆ. ಬಾನ ಹಕ್ಕಿಗಳು ಗೂಡು ಸೇರುವ ಹೊತ್ತಿನಲ್ಲಿ ಮಾನವ ಹಕ್ಕಿಗಳು ರಸ್ತೆಗಿಳಿಯುತ್ತವೆ. ಒಂದರೆಕ್ಷಣ ಸಂಚಾರಿ ಪೊಲೀಸನೂ ಮೈಮರೆಯುತ್ತಾನೆ.

ಪಬ್‌ಗಳಲ್ಲಿ ಬೀರು ನೊರೆಯುಕ್ಕಿಸುತ್ತದೆ. ಗ್ಲಾಸ್‌ಗಳು ಕಿಣಿಕಿಣಿಗುಟ್ಟುತ್ತವೆ. ಮುಚ್ಚಿದ ಬಾಗಿಲನ್ನು ಇಷ್ಟೇ ತೆರೆದು, ಸಮವಸ್ತ್ರಧಾರಿ ಗಾರ್ಡ್ ‘ಗುಡ್ ಇವನಿಂಗ್ ಸರ್’ ಎಂದು ಸ್ವಾಗತಿಸುತ್ತಾನೆ. ಹೋಟೆಲಿನ ರೂಮಿನಲ್ಲಿ ಆಫೀಸ್ ಬಾಯ್, ‘ಸಂಜೆಗೆ ಏನು ಆರ್ಡರ್ ಸರ್?’ ಎಂದು ವಿನೀತನಾಗಿ ವಿಚಾರಿಸುತ್ತಾನೆ. ದರ್ಶಿನಿಗಳಲ್ಲಿ ಅನ್ನ ಉಗಿಯಾಡುತ್ತದೆ. ಚಪಾತಿ ಮೈ ಕಾಯಿಸಿಕೊಳ್ಳುತ್ತದೆ. ಪಲ್ಯ, ಸಾಂಬಾರ್, ರಸಮ್‌ಗಳು ಪರಿಮಳ ಸೂಸುತ್ತ ಕುದಿಯುತ್ತವೆ. ಹೆಂಡತಿ ಗಂಡನ ದಾರಿ ಕಾಯುವಂತೆ ಬಾಳೆ ಎಲೆಗಳು ಭೋಜನಾರ್ಥಿಗಳ ದಾರಿ ನೋಡುತ್ತವೆ.

ಕಾರ್ಖಾನೆಗಳಲ್ಲಿ ಪಾಳಿ ಬದಲಾಗುತ್ತದೆ. ವಾತಾವರಣದಲ್ಲಿ ಗಾಳಿ ತಂಪಾಗುತ್ತದೆ. ಆದರೆ, ಸಿಗ್ನಲ್ ದೀಪಗಳು ಮಾತ್ರ ಬೇಗ ಬದಲಾಗುವುದೇ ಇಲ್ಲ. ತುಂಬು ಬಸುರಿಯಂತಾಗಿರುವ ಸಿಟಿ ಬಸ್‌ಗಳೊಳಗೆ ಸಿಕ್ಕಿಕೊಂಡ ದೂರ ಪ್ರದೇಶದ ಪ್ರಯಾಣಿಕ ಕಿಟಕಿಯತ್ತ ಬಗ್ಗಿ ರಸ್ತೆಯಂಚಿನ ಸಂಭ್ರಮ ನೋಡುತ್ತ ಬೆವರೊರೆಸಿಕೊಳ್ಳುತ್ತಾನೆ. ಕಬ್ಬನ್ ಪಾರ್ಕ್‌ನ ಅಸಂಖ್ಯಾತ ಗಿಡಮರಗಳ ಕೆಳಗೆ ನಿತ್ಯ ಸುಮಂಗಲಿಯರ ಕಣ್ಸನ್ನೆ ಬಾಯ್ಸನ್ನೆಗಳು, ಆ ಕತ್ತಲ್ಲಲೂ, ಕಾಣಬೇಕಾದವರ ಕಣ್ಣು ತಲುಪುತ್ತವೆ.

ಸಂಜೆಯಾದರೆ ಇಲ್ಲಿ ಕೆಲವರು ಸಿಗುವುದೇ ಇಲ್ಲ. ಇನ್ನು ಕೆಲವರು ಸಿಗುವುದು ಸಂಜೆ ಮಾತ್ರ. ಇಡೀ ಊರಿನ ಮುಕ್ಕಾಲು ಪಟ್ಟು ಜನ ಆ ಹೊತ್ತು ರಸ್ತೆಯಲ್ಲಿರುತ್ತಾರೆ. ಪಾರ್ಕ್‌ಗಳು ಭರ್ತಿ. ಸಿನಿಮಾ ಮಂದಿರಗಳು ಫುಲ್. ಹೋಟೆಲ್‌ಗಳು ರಷ್. ಬಸ್‌ಗಳು... ಉಶ್‌...!

ಮಕ್ಕಳಿಗೆ ಹೋಂ ವರ್ಕ್ ಮಾಡಿಸಿ ಟಿವಿ ಧಾರಾವಾಹಿ ನೋಡಲು ಮನೆಯಲ್ಲಿರುವ ತಾಯಂದಿರಿಗೆ ಆತುರ. ಸರ್ಕಾರಿ ಕಚೇರಿಗಳ ಸಿಬ್ಬಂದಿಗೆ ‘ಬೇಕಾದ’ ಫೈಲ್‌ಗಳನ್ನು ವಿಲೇವಾರಿ ಮಾಡಿ ಜೇಬು ತುಂಬಿಸಿಕೊಳ್ಳುವ ಕಾತರ. ಸಿಟಿ ಮಾರ್ಕೆಟ್‌ನ ಸಣ್ಣ ವ್ಯಾಪಾರಿಗಳಿಗೆ ಇದ್ದಬಿದ್ದ ಮಾಲನ್ನೆಲ್ಲ ಖಾಲಿ ಮಾಡುವ ಅವಸರ. ಜೇಬುಗಳ್ಳರಿಗೆ ವೃತ್ತಿ ಚಳಕ ಮೆರೆಯುವ ಸಡಗರ.

ಸಂಜೆ ಹೊತ್ತಿಗೆ ಇಡೀ ಬೆಂಗಳೂರು ಬೀದಿಯಲ್ಲಿರುತ್ತದೆ. ಕೂಗುತ್ತ, ರೇಗುತ್ತ, ಪುಳಕಗೊಳ್ಳುತ್ತ, ಅಲ್ಲಿಂದಿಲ್ಲಿಗೆ ಸರಭರ ಹರಿದಾಡುತ್ತ ತನ್ನೆಲ್ಲ ಕನಸು, ಸೊಗಸು ಮತ್ತು ಕಲ್ಮಶಗಳನ್ನು ಹರಿಬಿಡುತ್ತ ಅರಳುತ್ತದೆ, ಕೆರಳುತ್ತದೆ-

ಮತ್ತು ಎಂಥದೋ ಸುಖದ ನಿರೀಕ್ಷೆಯಲ್ಲಿ ಹೊರಳುತ್ತದೆ.

- ಚಾಮರಾಜ ಸವಡಿ