ಒಂದು ದೌರ್ಬಲ್ಯ, ಸಾವಿರ ಪ್ರಯತ್ನ

27 Oct 2010

0 ಪ್ರತಿಕ್ರಿಯೆ

ಇದು ಸರಿಯಲ್ಲ ಅಂತ ಎಷ್ಟೋ ಸಾರಿ ಅನಿಸಿದೆ. 

ಆದರೂ, ಸರಿಯಾಗಿಲ್ಲ ನಾನು. ಅದೇ ಮಂಕುತನ, ಅದೇ ಮೂರ್ಖತನ, ಅದೇ ಹಠ, ಅದೇ ಚಟ. ನನ್ನ ಮೊದಲ ನೆನಪಿನ ದಿನಗಳಿಂದ ಹಿಡಿದು, ಮರೆಯಬೇಕೆಂದು ತೀವ್ರವಾಗಿ ಅಂದುಕೊಳ್ಳುತ್ತಿರುವ ಈ ಕ್ಷಣಗಳಲ್ಲೂ ನಾನು ಏನೇನೂ ಬದಲಾಗಿಲ್ಲ ಅಂತ ನನಗೇ ಪದೆ ಪದೆ ಅನ್ನಿಸುತ್ತಿದೆ. 

ಬಹುಶಃ ತುಂಬ ಜನ ಹೀಗೇ ಯೋಚಿಸುತ್ತಾರೇನೋ. ಯಾವುದೋ ಸಣ್ಣ ನಿರ್ಲಕ್ಷ್ಯ, ತಿರಸ್ಕಾರ, ಅವಮಾನ, ಹೀಯಾಳಿಸುವಿಕೆ ಮನಸ್ಸನ್ನು ಅರೆಕ್ಷಣದಲ್ಲಿ ಮುದುಡಿಸಿಬಿಡುತ್ತದೆ. ನಳನಳಿಸುತ್ತಿದ್ದ ಹೂವನ್ನು ಹೊಸಗಿದಂತೆ, ಮನಸ್ಸು ವಿಲಿವಿಲಿ ಒದ್ದಾಡತೊಡಗುತ್ತದೆ. ಛೇ, ನಾನು ಹೀಗೆ ತಕ್ಷಣ ಮುರುಟಬಾರದು ಅಂತ ಅನ್ನಿಸಿದರೂ, ಆಗಲೇ ಮನಸ್ಸು ಮುರುಟಿಹೋಗಿರುತ್ತದೆ. 

ಮುಂದಿನ ಸಮಸ್ಯೆ ಎಂದರೆ, ಏಟನ್ನು ಜೀರ್ಣಿಸಿಕೊಳ್ಳುವುದು.

ಅದು ಅಷ್ಟು ಸುಲಭವಲ್ಲ. ಮುದುಡಿದ ಮನಸ್ಸು ತಕ್ಷಣ ಸಹಜವಾಗುವುದಿಲ್ಲ. ಕಂಪ್ಯೂಟ್‌ರ್‌ನಂತೆ ಮನಸ್ಸನ್ನು ರಿಬೂಟ್‌ ಮಾಡಲಾಗುವುದಿಲ್ಲ. ನೋವುಣಿಸಿದವರು ಏನೇ ಸಮಾಧಾನ ಹೇಳಿದರೂ, ಅದನ್ನು ನಮ್ಮ ಮನಸ್ಸು ಒಪ್ಪಿಕೊಂಡರೂ, ತಕ್ಷಣದ ಬದಲಾವಣೆ ಬಹಳ ಕಷ್ಟ. ಕ್ಷಮೆ ಕೇಳಿಯಾಯ್ತಲ್ಲ, ಇನ್ನೂ ಯಾಕೆ ಮುದುಡಿಕೊಂಡಿದ್ದೀಯಾ ಅಂತ ಅವರು ಕೇಳ್ತಾರೆ. ನಿಜ. ಆದರೆ, ಮನಸ್ಸು ತಕ್ಷಣಕ್ಕೆ ಅರಳುವುದಿಲ್ಲ.

ಪದೆ ಪದೆ ಏಟು ತಿಂದವರಿಗೆ ಹೀಗಾಗುತ್ತದೋ ಅಥವಾ ಇದೊಂದು ಮಾನಸಿಕ ಸಮಸ್ಯೆಯೋ ಗೊತ್ತಿಲ್ಲ. ನನಗಂತೂ ತಕ್ಷಣ ಚೇತರಿಸಿಕೊಳ್ಳಲು ಆಗುವುದಿಲ್ಲ. ಎಲ್ಲ ತರ್ಕವನ್ನು ಒಪ್ಪಿಕೊಂಡಾದ ನಂತರವೂ, ಮತ್ತೆ ಸಹಜಸ್ಥಿತಿಗೆ ಬರಲು ಸಮಯ ಹಿಡಿಯುತ್ತದೆ. ಈ ಅವಧಿಯಲ್ಲಿ ಮನಸ್ಸು ಅಂತರ್ಮುಖ. ಅಳುತ್ತ ಮಲಗಿದ ಮಗು ನಿದ್ದೆಯಲ್ಲೂ ಬಿಕ್ಕುವಂತೆ, ಮನಸ್ಸು ಬಿಕ್ಕುತ್ತಿರುತ್ತದೆ. 

ತುಂಬ ಸಾರಿ ಯೋಚಿಸಿದ್ದೇನೆ, ಸಾವಿರಾರು ಸಾರಿ ಪ್ರಯತ್ನಿಸಿದ್ದೇನೆ. ಆದರೂ, ಏಟು ತಿಂದ ನೋವನ್ನು ತಕ್ಷಣ ಮರೆಯಲಾಗುವುದಿಲ್ಲ. ಅತಿ ಸಂವೇದಿಯಾಗಬಾರದು ಅಂತ ಎಷ್ಟೇ ಅಂದುಕೊಂಡರೂ, ಬದಲಾಗಲು ಆಗಿಲ್ಲ. ನನ್ನ ಈ ದೌರ್ಬಲ್ಯದಿಂದಾಗಿ, ಆಕಸ್ಮಿಕವಾಗಿ ನೋವುಂಟು ಮಾಡಿದವರು ನನಗಿಂತ ದುಪ್ಪಟ್ಟು ನೋವನುಭವಿಸುವಂತೆ ಆಗಿದೆ. ಇದನ್ನು ಬದಲಾಯಿಸೋದು ಹೇಗೆ? 

ಉತ್ತರ ಗೊತ್ತಾಗದೇ ಮಂಕಾಗುತ್ತೇನೆ. 

- ಚಾಮರಾಜ ಸವಡಿ

ಅಲ್ಲಮನ ನೆನಪಲಿ

25 Oct 2010

3 ಪ್ರತಿಕ್ರಿಯೆ
ಒಂದು ಕನಸಿತ್ತು
ಅವಳಂತೆ
ಒಂದು ವಾಸ್ತವ ನಿಂತಿತ್ತು
ಬದುಕಿನಂತೆ

ನಾನು ಎರಡನ್ನೂ ನೋಡಿದೆ
ಎರಡನ್ನೂ ಬೇಡಿದೆ
ಕನಸುಳಿಸು ಎಂದು ವಾಸ್ತವವ
ವಾಸ್ತವವಳಿಯಲಿ ಎಂದು ಕನಸ

ನೋಡಿದರೆ
ಕನಸೊಳು ವಾಸ್ತವ
ವಾಸ್ತವದೊಳು ಕನಸು

ಕಕ್ಕಾವಿಕ್ಕಿಯಾಗಿ
ಮನಸು ಚೀರಿತು

ಎಲಾ ಅಲ್ಲಮಾ! 


- ಚಾಮರಾಜ ಸವಡಿ

ಒಂದು ಮೆಹಫಿಲ್‌...

1 ಪ್ರತಿಕ್ರಿಯೆ
ಅರ್ಧ ನಿಮೀಲಿತ ನೇತ್ರ
ಗೊತ್ತಾಗಿದ್ದೇ ಅಂದು.
ವಿವರಣೆ ಕಷ್ಟ;
ಗೊತ್ತಾಗಬಹುದು ಯಾವತ್ತೋ
ಒಂದಿನ,
ಗೊತ್ತಾದಂತೆ ನನಗೆ.

ಮುಚ್ಚಿದರ್ಧ ಕಣ್ಣು ಸಾಕು
ನಾದದಲೆಯ ಸರಿದಾರಿ ಪಯಣಕೆ-
ಅರೆ, ಗೊತ್ತಾಗಿದ್ದೇ ಅಂದು!
ಕಣ್ತೆರೆದುಕೊಂಡೇ ರಸ್ತೆ ಮೇಲೆ
ಸರಾಗ ನಡೆಯದ ನನಗೆ
ವಿವರಿಸಲಾಗದ ಅಚ್ಚರಿ...

ಹಾಡಿಗೆ ಒಂದಕ್ಕಿಂತ ಹೆಚ್ಚು ಅರ್ಥ
ಅದು ಅರ್ಥವಾಗಿದ್ದೇ ಅಂದು.
ಗೊತ್ತಿರುವುದರೊಂದಿಗೆ
ಗೊತ್ತಿರದ ಅರ್ಥವೂ ಸೇರಿ
ಅನರ್ಥವಾಗದೇ-
ಹೊಸ ಅರ್ಥವೊಂದು
ಹುಟ್ಟಿದ್ದರ ವಿವರಣೆ ಕಷ್ಟ.

ಹೇಗೆ ಹೇಳಲಿ ನಾ?
ಇರಲಿ ಹೇಗೆ ಹೇಳದೇ?
ಮೂಕನ ಆನಂದದಂತೆ. ಕುರುಡನ ಕನಸಂತೆ;
ಆಗದು, ವಿವರಿಸಲಾಗದು.
ಹಾಗೆಂದು ಇರದೆ ವಿವರಿಸಲಾರದೆ.
ರಾತ್ರಿ ಕಂಡ ಹೂವಿಗೆ-
ಹಗಲಿನ ಕಾಮನಬಿಲ್ಲು ಸೇರಿ
ಎದುರೇ ನಿಂತಂತೆ, ಪುಳಕ, ತೀರದ ಮೌನ.

ಅಂದು ನಾನಲ್ಲೇ ಇದ್ದೆ,
ಇದ್ದೆನಾ? ಇಲ್ಲ ಕಳೆದುಹೋಗಿದ್ದೆ
ಎದ್ದು ಬಂದೆನಾ? ಇಲ್ಲ,
ಕರಗಿಹೋಗಿದ್ದೆ ಅಲ್ಲೇ.
ಮನೆಗೆ ಬಂದವ ನಾನಾ,
ನನ್ನ ಚೇತನವಾ?
ಇಲ್ಲವೆ ವಿವರಿಸಲಾಗದ ಅನುಭೂತಿಯಾ..

ಬೇಡ ಬಿಡಿ. ಹೇಳುವುದು ಕಷ್ಟ,
ಹಾಗೆ ಹೇಳದಿರುವುದೂ ಕಷ್ಟ ಇನ್ನೂ.

- ಚಾಮರಾಜ ಸವಡಿ

ಕ್ರಿಯೆಗೊಂದು ಪ್ರತಿಕ್ರಿಯೆ

18 Oct 2010

5 ಪ್ರತಿಕ್ರಿಯೆ
ಮಳೆಯಲ್ಲ,
ಕಣ್ಣೀರೂ ತೋಯಿಸುತ್ತದೆ
ನೆಲವನ್ನಷ್ಟೇ ಅಲ್ಲ,
ಮನವನ್ನೂ

ಉತ್ತರ ಕೊಡುವವರಾದರೂ ಯಾರು?
ಅವರೆಲ್ಲ ಜೋಪಾನವಾಗಿದ್ದಾರೆ
ಮನೆಯಲ್ಲಿ, ಕನಸುಗಳಲ್ಲಿ, ಹುಮ್ಮಸ್ಸಿನಲ್ಲಿ
ಬ್ಯಾಂಕ್‌ ಖಾತೆಯಲ್ಲಿ, ಲಾಕರ್‌ಗಳಲ್ಲಿ,
ಭೋರ್ಗರೆದು ಮೊರೆಯುವ ಸ್ಪೀಕರ್‌ಗಳಲ್ಲಿ

ಕನಸುಗಳಿಗೆ ದನಿ ಇರುವುದಿಲ್ಲ ಗೆಳತಿ
ಅಲ್ಲಿ ಒಮ್ಮೊಮ್ಮೆ ಬೆಳಕೂ ಇರುವುದಿಲ್ಲ
ಜಗತ್ತು ಗುರುತಿಸುವುದಾದರೂ ಹೇಗೆ?
ಗಡಚಿಕ್ಕುವ ಶಬ್ದ, ಕೋರೈಸುವ ಬೆಳಕಿನ ಅಬ್ಬರದಲ್ಲಿ
ಕನಸು ಕರಗುತ್ತದೆ,
ಕರೆ ಕೂಡ ಉಳಿಯದಂತೆ ಕಳೆದುಹೋಗುತ್ತದೆ

ಎಲ್ಲೋ ಮೌನದ ನೀರವತೆಯಲ್ಲಿ
ಕನಸು ಬಿಕ್ಕುತ್ತದೆ
ಅತ್ತವನ ಮನದಲ್ಲಿ
ಮತ್ತೆ ನೋವು ಉಕ್ಕುತ್ತದೆ

ಗಾಜಿನ ಚೌಕಟ್ಟು ಮಬ್ಬಾಗುತ್ತದೆ ನಿಜ
ಮಳೆಗಷ್ಟೇ ಅಲ್ಲ
ಕಣ್ಣೀರಿಗೂ
ಗಾಜಲ್ಲ
ಮಬ್ಬಾಗುವುದು ಕಣ್ಣು
ಅದರಾಚೆ ನಿಂತಿರುವ ಹೆಣ್ಣು

ಅದು ಕನಸೇ?
ಅಲ್ಲ
ವಾಸ್ತವ
ಅವ
ಎಂದಿಗೂ ಮುಗಿಯದ ನಿರೀಕ್ಷೆಗಳ
ಹೊತ್ತವ


- ಚಾಮರಾಜ ಸವಡಿ

ನೆನಪುಗಳನ್ನು ಹೂತು ಹಾಕುವುದೆಂದರೆ... (ಭಾಗ-೧)

0 ಪ್ರತಿಕ್ರಿಯೆ
ಹೊಟ್ಟೆ ಖಾಲಿಯಾದಾಗ, ಮೆದುಳು ತೆರೆದುಕೊಳ್ಳುತ್ತದೆ. ವಿಚಾರಗಳು ಹೊಟ್ಟೆ ತುಂಬ ತುಂಬಿಕೊಂಡು ನೆತ್ತಿಗೇರುತ್ತವೆ.

ಕಳೆದ ಐದು ದಿನಗಳ ಕಾಲ ಹೀಗೇ ಆಗಿತ್ತು. ವಿಪರೀತ ಖಿನ್ನತೆ ತಡೆದುಕೊಳ್ಳಲಾರದೇ ಅನ್ನ ಸತ್ಯಾಗ್ರಹವನ್ನು ಶುರು ಮಾಡಿಕೊಂಡೆ.

ಮೊದಲ ದಿನದ ಹಿಂಸೆ ಹೇಳತೀರದು. ಹಾಗೆ ನೋಡಿದರೆ, ಉಪವಾಸ ಹಾಗೂ ಖಿನ್ನತೆಗಳು ನನ್ನ ಸನ್ಮಿತ್ರರು. ಅವು ನನಗೆ ಹಿಂಸೆಗಿಂತ ಹೆಚ್ಚು ಉಪಕಾರವನ್ನೇ ಮಾಡಿವೆ.

ಆದರೆ, ಉಪಕಾರದ ಫಲಕ್ಕಿಂತ ಅವುಗಳ ಹಿಂಸೆಯನ್ನು ಸಹಿಸಿಕೊಳ್ಳುವುದು ಕಡುಕಷ್ಟ.

ಮೊನ್ನೆ ಇದ್ದಕ್ಕಿದ್ದಂತೆ ಖಿನ್ನತೆ ಶುರುವಾಯ್ತು. ಇತ್ತೀಚಿನ ವರ್ಷಗಳಲ್ಲಿ ಅದು ಈ ಪರಿ ಕಾಡಿದ್ದು ಬಹಳ ಕಡಿಮೆ. ಖಿನ್ನತೆ ನನಗೆ ಆಗಾಗ ಬರುತ್ತಿತ್ತು, ನೆಗಡಿಯಂತೆ. ಬಂದ ಒಂದೆರಡು ದಿನ ಮಂಕಾಗಿಸಿ, ಹೊಸದೊಂದು ಹೊಳಹನ್ನು ತಲೆ ತುಂಬಿ ಮತ್ತೆ ಇಲ್ಲವಾಗುತ್ತಿತ್ತು. ಈ ಸಲದ ಖಿನ್ನತೆ ಮಾತ್ರ ಅಷ್ಟು ಮೆದುವಾಗಿರಲಿಲ್ಲ.

ಹಾಗೆ ನೋಡಿದರೆ, ಖಿನ್ನತೆ ಏಕೆ ಬರುತ್ತದೆಂಬುದು ಇವತ್ತಿಗೂ ನನಗೆ ಗೊತ್ತಿಲ್ಲ. ವಿಜ್ಞಾನದ ಕಾರಣಗಳು ನನಗೆ ಅಷ್ಟಾಗಿ ಅನ್ವಯವಾಗಿಲ್ಲ. ಕಾರಣವಿಲ್ಲದೇ ಬರುವುದು ನನ್ನ ಖಿನ್ನತೆಯ ವಿಶೇಷತೆ. ಏನೋ ಮಾಡುತ್ತ ಕೂತಿರುತ್ತೇನೆ. ಅದು ಕಚೇರಿಯಾಗಿರಬಹುದು, ಮನೆಯಾಗಿರಬಹುದು, ಇಲ್ಲವೇ ರಸ್ತೆಯಲ್ಲಿರಬಹುದು. ಇದ್ದಕ್ಕಿದ್ದಂತೆ ಒಳಮನಸ್ಸಿನಿಂದ ಸಂಕೇತವೊಂದು ರವಾನೆಯಾಗುತ್ತದೆ: ಖಿನ್ನತೆ ಬರ್ತಾ ಇದೆ.

ಒಂದರೆಕ್ಷಣ ಗಾಬರಿಯಾಗುತ್ತೇನೆ. ನೀಲ ಬಾನಿನ ಅಂಚಿನಲ್ಲಿ ಇದ್ದಕ್ಕಿದ್ದಂತೆ ಕಾರ್ಮೋಡಗಳು ದಟ್ಟೈಸಿದಂತೆ, ಖಿನ್ನತೆಯ ಕರಿ ಮೋಡ ಪ್ರಸನ್ನ ಮನಃಸ್ಥಿತಿಯನ್ನು ಆವರಿಸಿಕೊಳ್ಳುತ್ತದೆ. ಎಂಥದೋ ದುಗುಡ, ಏನೋ ಅಳುಕು. ಇದೆಲ್ಲ ನಶ್ವರ ಎಂಬ ಭಾವ ದಟ್ಟವಾಗತೊಡಗುತ್ತದೆ. ನಾನು ಮಾಡುತ್ತಿರುವುದೆಲ್ಲ ಮಣ್ಣು, ಇದರಿಂದ ಏನೂ ಉಪಯೋಗವಿಲ್ಲ. ಯಾರಿಗೆ ಇದರಿಂದ ಉಪಯೋಗ? ನಾನು ಯಾರಿಗೆ ಉಪಯೋಗಿ? ನನ್ನಿಂದ ಏನೂ ಮಾಡುವುದಕ್ಕೆ ಆಗುವುದಿಲ್ಲ. ನನ್ನ ಕನಸೆಲ್ಲ ವ್ಯರ್ಥ. ಪ್ರಯತ್ನ ಇನ್ನೂ ವ್ಯರ್ಥ. ಒಂದಿನ ಇದೆಲ್ಲ ಇಲ್ಲವಾಗುತ್ತದೆ. ನಾಶವಾಗುತ್ತದೆ. ಆಮೇಲೇನಿದೆ ಮಣ್ಣು- ಎಂದೆಲ್ಲ ಅನಿಸತೊಡಗುತ್ತದೆ.

ಅರೆ ಕ್ಷಣ ಮೌನವಾಗಿ ಕೂಡುತ್ತೇನೆ. ಅರ್ಜೆಂಟ್‌ ಕೆಲಸವಿದ್ದರೆ, ಕಷ್ಟಪಟ್ಟು, ಕಡು ಕಷ್ಟಪಟ್ಟು ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ. ಯಾವಾಗಲೂ ಪ್ರಸನ್ನನಾಗಿರುವ ಮುಖ ದುಡುಡಗೊಳ್ಳುತ್ತದೆ. ಕೆಲಸ ಯಾಂತ್ರಿಕವಾಗುತ್ತದೆ. ಮನಸ್ಸು ಎಲ್ಲೋ ಕಳೆದುಹೋಗಿರುತ್ತದೆ.

ಏಕೆ ಹೀಗೆ ಆಗುತ್ತದೆ ಎಂದು ಸಾವಿರ ಸಾವಿರ ಬಾರಿ ಪ್ರಶ್ನಿಸಿಕೊಂಡಿದ್ದೇನೆ. ಖಿನ್ನತೆ ಈಗಿನ ಸಮಸ್ಯೆಯಲ್ಲ. ನನ್ನ ಬಾಲ್ಯದಿಂದಲೇ ಅಂಟಿಕೊಂಡಿರುವಂಥದು. ಅದು ನನ್ನನ್ನು ಬದುಕಿಗೇ ವಿಮುಖನನ್ನಾಗಿಸಿತು. ಅದರ ಹಿಂಸೆ ತಾಳಲಾರದೇ ಪರದಾಡಿಬಿಟ್ಟೆ. ಪುಸ್ತಕಗಳ ಹುಚ್ಚು ತಲೆಗೇರಿಸಿಕೊಂಡೆ. ನನ್ನ ವಯಸ್ಸಿನವರು ಅಂಜುವಂಥ ಅನಾಹುತಕಾರಿ ಪ್ರಯೋಗಗಳಿಗೆ ಮುಂದಾದೆ. ಆದರೆ, ಖಿನ್ನತೆ ಮಾತ್ರ ದೂರವಾಗಲಿಲ್ಲ.

ಹೀಗೆ ಬದುಕಿಗೇ ವಿಮುಖನಾದ ನಾನು ಒಂದು ಹಂತದಲ್ಲಿ ಹಿಡಿ ಪ್ರೀತಿಗಾಗಿ ಹಂಬಲಿಸಿಬಿಟ್ಟೆ. ನನ್ನಳಲನ್ನು ಯಾರ ಮುಂದಾದರೂ ಹೇಳಿಕೊಂಡು ಹಗುರವಾಗಬೇಕು ಅಂತ ಇನ್ನಿಲ್ಲದಂತೆ ಹಂಬಲಿಸಿದೆ. ಆದರೆ, ಜಗತ್ತಿಗೆ ಅಳಲನ್ನು ಕೇಳುವ ವ್ಯವಧಾನವಿಲ್ಲ. ಅದು ಗೊತ್ತಾಗುವ ಹೊತ್ತಿಗೆ ಖಿನ್ನತೆ ನನ್ನ ದೇಹದ ಅಂಗವಾಗಿಬಿಟ್ಟಿತ್ತು.

ಅಷ್ಟೊತ್ತಿಗೆ ಪಿಯುಸಿಯಲ್ಲಿದ್ದೆ. ನನ್ನದಲ್ಲದ ತಪ್ಪಿಗೆ ಡಿಬಾರಾಗಿ ಒಂದು ವರ್ಷ ಕೂಡುವ ದುಃಸ್ಥಿತಿ ಬಂದಾಗಂತೂ ಖಿನ್ನತೆ ವಿಪರೀತವಾಯಿತು. ಸಹಿಸಲಾಗದೇ ಒಂದಿನ ಆತ್ಮಹತ್ಯೆಗೂ ಯತ್ನಿಸಿದೆ.

ಅದೆಲ್ಲವನ್ನೂ ಯಾವಾಗಾದರೂ ಬರೆದೇನು. ಆದರೆ, ಅಂದು ಆ ಮರದ ಹತ್ತಿರ ಹಗ್ಗ ತಗೊಂಡು ಹೋಗಿ ನಿಂತಾಗ, ಮನಸ್ಸಿನ ಎದುರು ಕೆಲ ಚಿತ್ರಗಳು ಮೂಡಿದವು. ನನ್ನ ಮನೆಯವರು, ಮಿತ್ರರು ನನ್ನ ಸಾವನ್ನು ನೋಡಿ ಅಳುವುದನ್ನು ಕಂಡೆ. ನನ್ನ ಸಹಪಾಠಿಗಳು ಅನುಕಂಪ ಸೂಚಿಸಿದ್ದನ್ನು ಕಂಡೆ.

ಮುಂದೆ?

ಆ ಚಿತ್ರ ಸ್ಪಷ್ಟವಾಗಲಿಲ್ಲ. ಹೌದು, ಸತ್ತ ಮೇಲೆ ಏನಾಗುತ್ತೇನೆ? ಎಂಬ ಪ್ರಶ್ನೆ ಎದ್ದು ನಿಂತಿತು. ದೆವ್ವ, ಭೂತದಂಥ ವಿಷಯಗಳಲ್ಲಿ ನನಗೆ ನಂಬಿಕೆಯಿಲ್ಲ. ಏನಾಗುತ್ತೇನೆ ಹಾಗಾದರೆ? ಬದುಕಿದಾಗಲೇ ಗೆಲ್ಲದ ಸವಾಲುಗಳನ್ನು ಸತ್ತ ನಂತರ ಹೇಗೆ ಗೆಲ್ಲುವೆ?


ಈ ಪ್ರಶ್ನೆಗಳಿಗೆ ಮರವಾಗಲಿ, ಹಗ್ಗವಾಗಲಿ ಉತ್ತರ ಕೊಡಲಿಲ್ಲ.

ಆಗ ಮೂರೂ ಸಂಜೆ. ಗದಗ ತಾಲ್ಲೂಕು, ನರೇಗಲ್ಲ ಪಟ್ಟಣದ ಪಕ್ಕದ ಹಳ್ಳಿ ಕೋಡಿಕೊಪ್ಪದ ಆ ಮರ, ಆ ಸಂಜೆಯ ನಸುಗತ್ತಲು, ಆ ತಂಗಾಳಿ, ಹಕ್ಕಿಗಳ ಚಿಲಿಪಿಲಿ ಹಾಗೂ ಆಗಿನ ನನ್ನ ವಿಚಿತ್ರ ಮನಃಸ್ಥಿತಿ ಈಗಲೂ ಕಣ್ಣ ಮುಂದೆ ಹಾಗೇ ಇವೆ.

ಇಲ್ಲ, ಸಾಯುವುದು ವ್ಯರ್ಥ ಅನಿಸಿತು. ನಾನು ಬದುಕಬೇಕು ಅಂದುಕೊಂಡೆ. ಆಗ ಒಂಚೂರು ಸಮಾಧಾನವಾದಂತಾಯಿತು. ನನ್ನ ಆತ್ಮಹತ್ಯೆ ಯತ್ನ ಕಂಡು ಖಿನ್ನತೆಯೂ ಬೆದರಿತ್ತೇನೋ. ಒಂದೆರಡು ಗಂಟೆ ಅದು ಹತ್ತಿರ ಸುಳಿಯಲಿಲ್ಲ.

ಒಬ್ಬನೇ ರೂಮಿನ ಅರೆಗತ್ತಲಲ್ಲಿ ಕೂತು ಯೋಚಿಸಿದೆ. ನನ್ನಲ್ಲೊಂದು ವಿಶಿಷ್ಟ ಶಕ್ತಿ ಇದೆ ಅಂತ ಅನ್ನಿಸಿತು. ಜೀವ ಕಳೆದುಕೊಳ್ಳುವ ಹಂತದವರೆಗೂ ತಲುಪಿದವನಿಗೆ ಮತ್ಯಾವ ಭಯ ಅಂದುಕೊಂಡೆ. ಇನ್ನು ಏನಾದರೂ ಮಾಡಬೇಕು, ಜೀವನವನ್ನು ಇನ್ನೊಂದು ದಿಕ್ಕಿನಿಂದ ಬದುಕಬೇಕು ಅಂತ ಅಂದುಕೊಂಡೆ.

ಹಾಗಂದುಕೊಂಡಿದ್ದಷ್ಟೆಯೇ ಹೊರತು, ಹೇಗೆ ಎಂಬ ದಾರಿ ಗೊತ್ತಿರಲಿಲ್ಲ. ರೂಮಿನ ಪಾತ್ರೆಗಳಷ್ಟೇ ಅಲ್ಲ, ಜೇಬೂ ಖಾಲಿಯಿದ್ದ ಭೀಕರ ಬಡತನದ ದಿನಗಳವು. ಹಣದಿಂದ ಕೊಳ್ಳಬಹುದಾದ ಹಲವಾರು ನೆಮ್ಮದಿ ಮಾರ್ಗಗಳು ಈ ಕಾರಣದಿಂದಾಗಿ ನನ್ನ ಪಾಲಿಗೆ ಮುಚ್ಚಿಹೋಗಿದ್ದವು.

ಆಗ ನೆಮ್ಮದಿ ಕೊಟ್ಟಿದ್ದು ಅಧ್ಯಾತ್ಮ. ಇವತ್ತಿಗೂ ಅದೇ ನನ್ನನ್ನು ಕೈ ಹಿಡಿದು ನಡೆಸುತ್ತಿರುವುದು. ಅಣ್ಣ ಕೊಟ್ಟಿದ್ದ ಭಗವದ್ಗೀತೆ ಪುಸ್ತಕ ರೂಮಿನಲ್ಲಿತ್ತು. ಅದನ್ನು ಕೈಗೆತ್ತಿಕೊಂಡೆ.

ಮತ್ತೊಂದಿಷ್ಟು ನೆಮ್ಮದಿ ಹರಿದು ಬಂತು. ನನ್ನ ಓರಗೆಯ ಹುಡುಗರು ಸಿನಿಮಾ, ಹರಟೆ, ಹುಡುಗಿಯರು ಎಂದೆಲ್ಲ ಬಿಜಿಯಾಗಿದ್ದಾಗ, ನಾನು ಗೀತೆಯ ಮೊರೆ ಹೋದೆ. ಅಲ್ಲಿದ್ದ ಯೋಗಮಾರ್ಗದ ಪ್ರಯೋಗ ಮಾಡುವ ಉತ್ಸಾಹ ಬಂತು.

ನಸುಕಿನ ನಾಲ್ಕು ಗಂಟೆಗೇ ಏಳತೊಡಗಿದೆ. ಯೋಗಾಸನ ಕಲಿತೆ. ಕೋಡಿಕೊಪ್ಪದ ಹೊರವಲಯದಲ್ಲಿದ್ದ ಹುಚ್ಚೀರಪ್ಪಜ್ಜನ ಮಠಕ್ಕೆ ದಿನಾ ಸಂಜೆ ಹೋಗತೊಡಗಿದೆ. ಅಲ್ಲಿ, ಮೈಲುಗಟ್ಟಲೇ ಹರಡಿರುತ್ತಿದ್ದ ಖಾಲಿ ಹೊಲಗಳಲ್ಲಿ, ಒಂದು ಟವೆಲ್‌ ಹಾಸಿ, ಮಲಗಿ, ರಾತ್ರಿ ಎಂಟಾಗುವವರೆಗೂ ನಕ್ಷತ್ರಗಳನ್ನು ದಿಟ್ಟಿಸುತ್ತ ವಿಚಾರಮಗ್ನನಾಗುತ್ತಿದ್ದೆ.

‘ಒಂದಲ್ಲ ಒಂದಿನ ನಾನು ಕೋಡಿಕೊಪ್ಪದಿಂದ ಹೋಗುತ್ತೇನೆ. ಬದುಕು ನನ್ನನ್ನು ಮತ್ತೊಂದು ದಿಕ್ಕಿಗೆ ಒಯ್ಯುತ್ತದೆ. ಅಲ್ಲಿ ನನ್ನ ನೋವನ್ನು ಅರ್ಥ ಮಾಡಿಕೊಳ್ಳುವವರು ಸಿಕ್ಕಾರು. ನನ್ನ ಖಿನ್ನತೆ ದೂರವಾದೀತು. ನಾನೂ ಸಹಜ ಮನುಷ್ಯನಾದೇನು’ ಅಂತ ಅಂದುಕೊಳ್ಳುತ್ತ, ಭರವಸೆ ತಂದುಕೊಳ್ಳುತ್ತಿದ್ದೆ.

ಇವತ್ತಿಗೂ ಕೋಡಿಕೊಪ್ಪದ ಆ ಖಾಲಿ ಹೊಲಗಳು ಮತ್ತು ದಿಗಿದಿಗಿ ಎನ್ನುತ್ತ ಬೆಳಗುತ್ತಿದ್ದ ನಕ್ಷತ್ರಗಳು ನನ್ನಲ್ಲಿ ತುಂಬಿದಷ್ಟು ಪ್ರೇರಣೆಯನ್ನು ಬೇರಾವುದೂ ತುಂಬಿಲ್ಲ. ಆ ಮಹಾಮೌನ ನನ್ನನ್ನು ಮತ್ತು ನನ್ನೊಳಗನ್ನು ಪರಸ್ಪರ ಮಿತ್ರರನ್ನಾಗಿಸಿತು. ನನ್ನ ನೋವಿಗೆ ನಾನೇ ಸಮಾಧಾನ ಹುಡುಕಿಕೊಳ್ಳುವುದನ್ನು ಅದು ಕಲಿಸಿತು. ಬದುಕಿನಲ್ಲಿ ನೋವುಣ್ಣುವುದು ವೈಯಕ್ತಿಕ, ನೆಮ್ಮದಿ ಹಂಚುವುದು ಸಾರ್ವತ್ರಿಕ ಎಂಬ ಪ್ರಾಥಮಿಕ ಪಾಠವನ್ನು ಕಲಿಸಿತು.

ಆಗ ನಾನು ಬರಹಗಾರನಾಗಿರಲಿಲ್ಲ. ಅನ್ನ ಹುಟ್ಟಿಸುವ ಯಾವ ಕೆಲಸವನ್ನೂ ಮಾಡಲು ಸಮರ್ಥನಾಗಿದ್ದಿಲ್ಲ. ಆಗ ನಾನೊಬ್ಬ ದಿಕ್ಕು ತಪ್ಪಿದ, ತೀವ್ರ ಗೊಂದಲದಲ್ಲಿರುವ, ಅಪಾರ ಖಿನ್ನತೆಯುಳ್ಳ, ಆದರೆ, ಅಪ್ಪಟ ಪ್ರಾಮಾಣಿಕ ಹುಡುಗನಾಗಿದ್ದೆ. ನೋವು ನನ್ನನ್ನು ಮಾಗಿಸತೊಡಗಿತ್ತು. ನನ್ನ ವ್ಯಕ್ತಿತ್ವವನ್ನು ರೂಪಿಸತೊಡಗಿತ್ತು.

ಇವತ್ತಿಗೂ ತೀವ್ರ ನೋವು ಕಾಡಿದಾಗ, ನಾನು ಒಂಟಿಯಾಗಿ ಕೂಡುತ್ತೇನೆ. ನನ್ನ ಮನಸ್ಸನ್ನು ಕೆದಕುತ್ತೇನೆ. ನನ್ನ ಸಮಸ್ಯೆಗಳನ್ನು ನಾನೇ ವಿಶ್ಲೇಷಿಸುತ್ತ, ನನ್ನೊಳಗೆ ನಾನೇ ಚರ್ಚೆ ನಡೆಸುತ್ತ, ಉತ್ತರ ಕಂಡುಕೊಳ್ಳುತ್ತೇನೆ. ಆ ಮೌನ ಅನುಸಂಧಾನದಲ್ಲಿ ನಾನು ಅದ್ಭುತ ಸತ್ಯ ಕಂಡುಕೊಂಡಿದ್ದೇನೆ. ಅಪಾರ ನೆಮ್ಮದಿ ಅನುಭವಿಸಿದ್ದೇನೆ. ಒಬ್ಬನೇ ಅತ್ತಿದ್ದೇನೆ. ನಕ್ಕಿದ್ದೇನೆ. ಶಾಂತನಾಗಿದ್ದೇನೆ.

ಸಿದ್ದಯ್ಯ ಪುರಾಣಿಕರ ಕವಿತೆಯ ಈ ನುಡಿ ನನ್ನೆದೆಯೊಳಗೆ ಶಾಶ್ವತವಾಗಿ ಅಚ್ಚೊತ್ತಿದೆ:

ನೂರು ದುಃಖಗಳನು ನುಂಗಿ ನಗೆಯ ತೋರಬೇಕು
ಎಲ್ಲರೊಡನೆ ಬೆರೆತು ಒಂದೇ ಸೊಗವ ಬೀರಬೇಕು
ಒತ್ತಿ ಬರುವ ಕಣ್ಣ ನೀರ ಹತ್ತಿ ಹಿಡಿಯಬೇಕು
ಕತ್ತಲಲ್ಲಿ ಅತ್ತು ಬೆಳಿಗ್ಗೆ ಮತ್ತೆ ದುಡಿಯಬೇಕು


ಯಾವ ಗಳಿಗೆಯಲ್ಲಿ ಈ ಅದ್ಭುತ ಸಾಲುಗಳನ್ನು ಬರೆದರೋ ಸಿದ್ದಯ್ಯ ಪುರಾಣಿಕರು. ಅದು ನನ್ನ ಜೀವನದ ಪರಮೋಚ್ಚ ಪ್ರೇರಕ ಶಕ್ತಿಯಾಯ್ತು. ನನ್ನ ಕೈ ಹಿಡಿದು ನಡೆಸುವ ದೀವಿಗೆಯಾಯ್ತು. ಆ ಸಾಲುಗಳನ್ನು ಪದೆ ಪದೆ ಮನನ ಮಾಡಿಕೊಳ್ಳುತ್ತ ನಾನು ಇದುವರೆಗೂ ಬಂದಿದ್ದೇನೆ. ಬಹುಶಃ ಮುಂದೆಯೂ ಅವೇ ಸಾಲುಗಳ ಪ್ರೇರಕ ಶಕ್ತಿ ನನ್ನನ್ನು ಮುನ್ನಡೆಸುತ್ತದೆ.

ಆದರೆ, ಪ್ರೇಮರಾಹಿತ್ಯ ಭಾವನೆ ಮಾತ್ರ ಖಿನ್ನತೆಯಂತೆ ಶಾಶ್ವತವಾಗಿ ಜೊತೆಗೇ ಉಳಿದುಬಿಟ್ಟಿತು. ನನ್ನೆಲ್ಲ ದುಗುಡಗಳನ್ನು ಹಂಚಿಕೊಳ್ಳಬಲ್ಲ, ಅರ್ಥ ಮಾಡಿಕೊಳ್ಳಬಲ್ಲ, ಸಂತೈಸಬಲ್ಲ, ಜೊತೆಗೆ ನಿಲ್ಲಬಲ್ಲ ಜೀವದ ಕೊರತೆ ಮಾತ್ರ ನೀಗಲೇ ಇಲ್ಲ. ಅದು ಯಾರ ತಪ್ಪೂ ಅಲ್ಲ, ಅಂಥ ವ್ಯಕ್ತಿಯನ್ನು ಹುಡುಕಿಕೊಳ್ಳುವಲ್ಲಿ ನಾನೇ ವಿಫಲನಾದೆನೇನೋ ಎಂದು ಅನಿಸತೊಡಗುತ್ತದೆ.

ಕೈ ಹಿಡಿದ ರೇಖಾ ನನ್ನ ಖಿನ್ನತೆಯನ್ನು ಬಹುತೇಕ ಒರೆಸಿಹಾಕಿದಳು ನಿಜ. ಆದರೆ, ಪೂರ್ತಿಯಾಗಿ ಇಲ್ಲವಾಗಿಸುವುದು ಆಕೆಗೂ ಸಾಧ್ಯವಾಗಲಿಲ್ಲ. ಅದು ಆಕೆಯ ಮಿತಿಯಲ್ಲ, ನನ್ನ ಮಿತಿ.

ಹೀಗಾಗಿ ಇವತ್ತಿಗೂ ಹಳೆಯ ನೆಂಟನಂತೆ ಬರುತ್ತದೆ ಖಿನ್ನತೆ. ಬಂದಾಗೆಲ್ಲ ಅದೇ ತೀವ್ರತೆ, ಅದೇ ತೀಕ್ಷ್ಣತೆ. ಆಗೆಲ್ಲ ವಿಹ್ವಲನಾಗುತ್ತೇನೆ. ಮನಸ್ಸು ಅಂತರ್ಮುಖವಾಗುತ್ತದೆ. ಬದುಕಿನ ಅರ್ಥವನ್ನು ಹುಡುಕತೊಡಗುತ್ತದೆ.

ಮೊನ್ನೆ ಬಂದ ಖಿನ್ನತೆ ಬಹಳ ವರ್ಷಗಳ ನಂತರ ನನ್ನನ್ನು ತೀವ್ರವಾಗಿ ಕಾಡಿತ್ತು. ಎಷ್ಟು ತೀವ್ರವಾಗಿತ್ತೆಂದರೆ, ಊಟ ರುಚಿಸಲಿಲ್ಲ. ಹೀಗಾಗಿ, ಐದು ದಿನ ಉಪವಾಸ ಮಾಡಬೇಕಾಯ್ತು.

ಅದರ ಬಗ್ಗೆ ಮುಂದೆ ಬರೆಯುತ್ತೇನೆ.

(ಮುಂದಿನ ಭಾಗದಲ್ಲಿ ಮುಕ್ತಾಯ) 

- ಚಾಮರಾಜ ಸವಡಿ

ಸಂಗೊಳ್ಳಿ ರಾಯಣ್ಣ ತಂದ ಹೊಸ ಕನಸು

16 Oct 2010

2 ಪ್ರತಿಕ್ರಿಯೆ
ಸಂಗೊಳ್ಳಿ ರಾಯಣ್ಣನ ಬಗ್ಗೆ ಬಿಬಿಎಂಪಿ (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ)ಗೆ ಪುಸ್ತಕ ಮಾಡಿಕೊಡಲು ನನಗೆ ದಕ್ಕಿದ ಅವಧಿ ಕೇವಲ ಮೂರು ದಿನಗಳು ಮಾತ್ರ.

ಅಷ್ಟೊತ್ತಿಗೆ ಶುರುವಾಗಿದ್ದು ಕೆಐಎಡಿಬಿ ಹಾಗೂ ಡಿನೋಟಿಫಿಕೇಶನ್‌ ಹಗರಣಗಳು. ಕಚೇರಿ ಕೆಲಸದ ಅವಧಿ ಸಹಜವಾಗಿ ಹೆಚ್ಚಾಗಿತ್ತಾದರೂ, ಪುಸ್ತಕ ಪ್ರೀತಿಯನ್ನು ಕೈಬಿಡುವಂತಿರಲಿಲ್ಲ.

ಹೀಗಾಗಿ, ನಿದ್ದೆಗೆಡುವುದು ಅನಿವಾರ್ಯವಾಯಿತು. ಜೊತೆಗೆ, ಸಂಗೊಳ್ಳಿ ರಾಯಣ್ಣನ ಕುರಿತ ಮಾಹಿತಿ ಸಂಗ್ರಹದ ಕಠಿಣ ಕೆಲಸ.

ಸಾಮಾನ್ಯವಾಗಿ ಐತಿಹಾಸಿಕ, ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಮಾಹಿತಿ ಪುಸ್ತಕಗಳು ಸರಿಯಾಗಿ ಸಿಗುವುದಿಲ್ಲ. ಸದ್ಯ ಇರುವ ಬಹುತೇಕ ಪುಸ್ತಕಗಳು ಅಪ್‌ಡೇಟ್‌ ಆಗಿರುವುದಿಲ್ಲ. ಎಲ್ಲಕ್ಕಿಂತ ಮುಖ್ಯ ಸಮಸ್ಯೆ ಎಂದರೆ ಫೊಟೊ, ಭೂಪಟಗಳ ಕೊರತೆ. ಇವನ್ನೆಲ್ಲ ನೀಗಿಸಿಕೊಳ್ಳಬೇಕೆಂದರೆ, ಪುಸ್ತಕವನ್ನು ಅಂದುಕೊಂಡ ಸಮಯಕ್ಕೆ ನೀಡುವುದು ಸುಲಭವಲ್ಲ.

ಅದರಲ್ಲೂ ನಾನು ಒಪ್ಪಿಕೊಂಡ ಪುಸ್ತಕದ ಪುಟಮಿತಿ ನಿರ್ಧಾರವಾಗಿದ್ದು ಅಚ್ಚಿಗೆ ಹೋಗುವ ಹಿಂದಿನ ದಿನ. ಇವೆಲ್ಲ ಸಮಸ್ಯೆಗಳಿಂದಾಗಿ, ಯಾಕಾದರೂ ಈ ಕೆಲಸ ಒಪ್ಪಿಕೊಂಡೆನೋ ಎಂದು ಅನಿಸುವಷ್ಟು ಕಿರಿಕಿರಿಯಾಯ್ತು.

ತಕ್ಕ ಮಟ್ಟಿಗೆ ಮಾಹಿತಿ ಸಂಗ್ರಹಿಸಿಕೊಂಡು ಪುಸ್ತಕ ಬರೆಯಲು ಶುರು ಮಾಡಿದೆ. ಕಚೇರಿ ಕೆಲಸ ಮುಗಿಸಿಕೊಂಡು ರಾತ್ರಿ ಬರೆಯಲು ಕೂಡುತ್ತಿದ್ದೆ. ದಿನಕ್ಕೆ ಇಪ್ಪತ್ತು ಪುಟಗಳಂತೆ ನಾನು ಬರೆದಿದ್ದು ಮೂರು ದಿನಗಳ ಕಾಲ. ಅದರಲ್ಲಿ ಒಂದಿಡೀ ರಾತ್ರಿ ನಿದ್ದೆಗೆಡಬೇಕಾಯ್ತು.

ಪುಟ ವಿನ್ಯಾಸ ಮಾಡಿದಾಗ, ಪುಟಗಳ ಸಂಖ್ಯೆ ೭೫ ದಾಟಿತ್ತು. ಅಷ್ಟೊತ್ತಿಗೆ, ಪುಸ್ತಕದ ಮಿತಿಯನ್ನು ೪೮ ಪುಟಗಳ ಮಿತಿಗೆ ಇಳಿಸುವಂತೆ ಬಿಬಿಎಂಪಿಯಿಂದ ಸೂಚನೆ ಬಂತು.

ಆಗ ಶುರುವಾಯ್ತು ನೋಡಿ ಪೀಕಲಾಟ. ಕೊನೇ ಹಂತದಲ್ಲಿ ಪುಸ್ತಕ ಕಿರಿದುಗೊಳಿಸುವುದು ಹೇಗೆ?

ಹೀಗಾಗಿ, ಮೂರು ಮುಖ್ಯ ಅಧ್ಯಾಯಗಳನ್ನು ಮುಲಾಜಿಲ್ಲದೇ ಕಿತ್ತು ಹಾಕಿದೆ. ವಿಸ್ತಾರವಾಗಿದ್ದ ಭಾಗಗಳನ್ನು ಕಿರಿದುಗೊಳಿಸಿದೆ. ಹಲವಾರು ಪೂರಕ ಹಾಗೂ ಇದುವರೆಗೆ ಹೆಚ್ಚಿನ ಜನರಿಗೆ ಗೊತ್ತಿರದ ಸಂಗತಿಗಳು ಮರೆಯಾಗಬೇಕಾಯ್ತು. ಇದರಿಂದಾಗಿ ಪುಸ್ತಕದ ಒಟ್ಟು ಧ್ವನಿಯೇ ಗೊಗ್ಗರಾದಂತೆನಿಸಿ ಬೇಸರವಾಯ್ತು.

ಆಗ ಮತ್ತೊಂದು ವಿನಂತಿ ಬಂತು. ಪುಸ್ತಕದಲ್ಲಿ ಗಣ್ಯರ ಶುಭಾಶಯಗಳನ್ನು ಹಾಕಿಕೊಳ್ಳಬೇಕು!

ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ, ಮಹಾಪೌರ- ಹೀಗೆ ನಾಲ್ಕೈದು ಜನರ ಶುಭಾಶಯಗಳು ಬಂದು ಬಿದ್ದವು. ಅವನ್ನೆಲ್ಲ ಪುಸ್ತಕದಲ್ಲಿ ಸೇರಿಸಲು ಮತ್ತೆರಡು ಅಧ್ಯಾಯಗಳು ಸ್ವಾಹಾ ಆದವು.

ಕೊನೆಗೂ ಪುಟ ವಿನ್ಯಾಸ ಮುಗಿದು, ಪುಸ್ತಕ ಅಚ್ಚಿಗೆ ಹೋಗುವಾಗ, ಸಂಗೊಳ್ಳಿ ರಾಯಣ್ಣನ ಮೂರ್ತಿ ಹಿಡಿದಿದ್ದ ಕತ್ತಿಯನ್ನು ನಾನೇ ಎತ್ತಿಕೊಳ್ಳಲೇ ಎನಿಸುವಷ್ಟು ರೇಗಿಹೋಗಿತ್ತು.

ಇದನ್ನೆಲ್ಲ ಮರೆಸಿದ್ದು ನಾನು ರಾಯಣ್ಣನ ಬಗ್ಗೆ ತಿಳಿಯುತ್ತ, ಬರೆಯುತ್ತ ಕೂತ ಆ ಮೂರು ದಿನಗಳು. ಎಂಥಾ ಅದ್ಭುತ ವ್ಯಕ್ತಿಯಾಗಿದ್ದ ರಾಯಣ್ಣ! ಕಿತ್ತೂರು ಸಂಸ್ಥಾನವನ್ನು ಮತ್ತೆ ಸ್ವತಂತ್ರಗೊಳಿಸಬೇಕೆಂದು ಮುಂದಾದಾಗ, ಮಮತೆ ಕಾಡಬಾರದು ಎಂದು ತುಂಬು ಬಸುರಿ ಹೆಂಡತಿಯನ್ನು ತೌರು ಮನೆಗೆ ಕಳಿಸುತ್ತಾನೆ. ಹುಟ್ಟಿದ ಮಗುವನ್ನೂ ನೋಡಲು ಹೋಗುವುದಿಲ್ಲ. ಗುಪ್ತ ವೇಷದಲ್ಲಿ ಆತ ಒಮ್ಮೆ ಹೆಂಡತಿ ಇದ್ದ ಊರಿಗೇ ಹೋದರೂ ಮನೆಗೆ ಹೋಗುವುದಿಲ್ಲ. ಹೆಂಡತಿ-ಮಗುವಿನ ಮೋಹ ತನ್ನ ಉದ್ದೇಶವನ್ನು ಬಲಿ ತೆಗೆದುಕೊಂಡಾವು ಎಂಬ ಅಳುಕಿಗೆ.

ಇಂಥ ಹಲವಾರು ಘಟನೆಗಳು ಮೂಲ ಬರವಣಿಗೆಯಲ್ಲಿದ್ದವು. ಇಂಥ ಇನ್ನೂ ಹಲವಾರು ಅಂಶಗಳು ಇನ್ನೂ ಸೇರಬೇಕಿದ್ದವು. ಸಂಗೊಳ್ಳಿ ರಾಯಣ್ಣನ ಬಗ್ಗೆ ವಸ್ತುಸ್ಥಿತಿ ನೀಡುವುದಕ್ಕಿಂತ ರೋಚಕ ಮಾಹಿತಿ ಹೊಂದಿರುವ ಪುಸ್ತಕಗಳೇ ಹೆಚ್ಚಾಗಿರುವಾಗ, ಈ ಪುಸ್ತಕವಾದರೂ ವಸ್ತುನಿಷ್ಠ ಆಗಲೆಂದು ನನಗಿದ್ದ ಸಾಕಷ್ಟು ಮಿತಿಯಲ್ಲಿ ಪ್ರಯತ್ನಿಸಿದ್ದೆ. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಆ ಆಸೆ ಈಡೇರಿದ್ದು ಅರೆಬರೆಯಾಗಿ. ಅದೇ ಬೇಸರ.

ದುರಂತ ಎಂದರೆ, ’ಸ್ವಾತಂತ್ರ‍್ಯದ ಕಿಡಿ ಸಂಗೊಳ್ಳಿ ರಾಯಣ್ಣ’ ಎಂಬ ಶೀರ್ಷಿಕೆಯ ಈ ಪುಸ್ತಕ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಬಿಬಿಎಂಪಿ ಪುಸ್ತಕಗಳನ್ನು ತಾನೇ ಹಂಚಿದೆ.

ಹೀಗಾಗಿ, ಈ ಪುಸ್ತಕವನ್ನು ಇನ್ನಷ್ಟು ವಿಸ್ತರಿಸಿ, ಮುಕ್ತ ಮಾರುಕಟ್ಟೆಯಲ್ಲಿಯೂ ದೊರೆಯುವಂತೆ ಮಾಡೋಣ ಎಂದು ಒಂದಿಬ್ಬರು ಆಸಕ್ತರು ಸೂಚಿಸಿದ್ದಾರೆ. ಹೀಗಾಗಿ, ಪುಸ್ತಕವನ್ನು ಇನ್ನಷ್ಟು ವಿವರವಾಗಿ ಬರೆಯಬೇಕಿದೆ.

ಆ ನೆಪದಲ್ಲಿ ಮತ್ತೊಮ್ಮೆ ಸಂಗೊಳ್ಳಿ ರಾಯಣ್ಣನ ವೀರ ವ್ಯಕ್ತಿತ್ವವನ್ನು ಸವಿಯಬಹುದು ಎಂಬ ಪುಳಕ ನನಗಿದೆ.

ಅಲ್ಲಿಯವರೆಗೆ, ಈಗ ಅಚ್ಚಾಗಿ ಮಾಯವಾಗಿರುವ ಪುಸ್ತಕದ ಪಿಡಿಎಫ್‌ ಪ್ರತಿಯನ್ನು ನನ್ನ ಬ್ಲಾಗ್‌ಗೆ ಹಾಕಬೇಕೆನ್ನುವ ಯೋಚನೆಯಿದೆ. ಅದಕ್ಕೆ ಒಂಚೂರು ಸಮಯ ಬೇಕು. ನನ್ನ ಸೋಮಾರಿತನ ಅವಕಾಶ ಮಾಡಿಕೊಡಬೇಕು.

ರಾಯಣ್ಣನಂಥ ವ್ಯಕ್ತಿಗಳು ಹೆಚ್ಚೆಚ್ಚು ಹರಡಿದಷ್ಟೂ ನಮ್ಮ ನಡುವಿನ ಮಲ್ಲಪ್ಪ ಶೆಟ್ಟಿಗಳು, ವೆಂಕಟರಾಯರು, ಬಾಳಪ್ಪ ಕುಲಕರ್ಣಿಯಂಥವರ ಪ್ರಭಾವ ಕಡಿಮೆಯಾಗುತ್ತದೆ. ಆ ಕಾರಣಕ್ಕಾಗಿಯಾದರೂ ಮರೆತಿರುವ ಇಂಥ ಮಹನೀಯರಿಗೆ ಮರು ಜೀವ ಕೊಡಬೇಕಿದೆ. ಆ ಕೆಲಸ ಈಗ ರಾಯಣ್ಣನಿಂದ ಶುರುವಾಗಿದೆ. ಮುಂದೆ ಯಾರ‍್ಯಾರು ಇದಕ್ಕೆ ಸೇರಿಕೊಳ್ಳುತ್ತಾರೋ ನೋಡಬೇಕು.

ಈ ಕೆಲಸ ಮಾಡಿ ಮುಗಿಸುವಂಥ ಶಕ್ತಿ ನನಗೆ ದಕ್ಕಲಿ. ಇಚ್ಛಾಶಕ್ತಿ ಕುಸಿಯದಿರಲಿ ಅಂತ ಪದೆ ಪದೆ ಅಂದುಕೊಳ್ಳುತ್ತಿದ್ದೇನೆ.

- ಚಾಮರಾಜ ಸವಡಿ