ಇದು ಸರಿಯಲ್ಲ ಅಂತ ಎಷ್ಟೋ ಸಾರಿ ಅನಿಸಿದೆ.
ಆದರೂ, ಸರಿಯಾಗಿಲ್ಲ ನಾನು. ಅದೇ ಮಂಕುತನ, ಅದೇ ಮೂರ್ಖತನ, ಅದೇ ಹಠ, ಅದೇ ಚಟ. ನನ್ನ ಮೊದಲ ನೆನಪಿನ ದಿನಗಳಿಂದ ಹಿಡಿದು, ಮರೆಯಬೇಕೆಂದು ತೀವ್ರವಾಗಿ ಅಂದುಕೊಳ್ಳುತ್ತಿರುವ ಈ ಕ್ಷಣಗಳಲ್ಲೂ ನಾನು ಏನೇನೂ ಬದಲಾಗಿಲ್ಲ ಅಂತ ನನಗೇ ಪದೆ ಪದೆ ಅನ್ನಿಸುತ್ತಿದೆ.
ಬಹುಶಃ ತುಂಬ ಜನ ಹೀಗೇ ಯೋಚಿಸುತ್ತಾರೇನೋ. ಯಾವುದೋ ಸಣ್ಣ ನಿರ್ಲಕ್ಷ್ಯ, ತಿರಸ್ಕಾರ, ಅವಮಾನ, ಹೀಯಾಳಿಸುವಿಕೆ ಮನಸ್ಸನ್ನು ಅರೆಕ್ಷಣದಲ್ಲಿ ಮುದುಡಿಸಿಬಿಡುತ್ತದೆ. ನಳನಳಿಸುತ್ತಿದ್ದ ಹೂವನ್ನು ಹೊಸಗಿದಂತೆ, ಮನಸ್ಸು ವಿಲಿವಿಲಿ ಒದ್ದಾಡತೊಡಗುತ್ತದೆ. ಛೇ, ನಾನು ಹೀಗೆ ತಕ್ಷಣ ಮುರುಟಬಾರದು ಅಂತ ಅನ್ನಿಸಿದರೂ, ಆಗಲೇ ಮನಸ್ಸು ಮುರುಟಿಹೋಗಿರುತ್ತದೆ.
ಮುಂದಿನ ಸಮಸ್ಯೆ ಎಂದರೆ, ಏಟನ್ನು ಜೀರ್ಣಿಸಿಕೊಳ್ಳುವುದು.
ಅದು ಅಷ್ಟು ಸುಲಭವಲ್ಲ. ಮುದುಡಿದ ಮನಸ್ಸು ತಕ್ಷಣ ಸಹಜವಾಗುವುದಿಲ್ಲ. ಕಂಪ್ಯೂಟ್‌ರ್‌ನಂತೆ ಮನಸ್ಸನ್ನು ರಿಬೂಟ್ ಮಾಡಲಾಗುವುದಿಲ್ಲ. ನೋವುಣಿಸಿದವರು ಏನೇ ಸಮಾಧಾನ ಹೇಳಿದರೂ, ಅದನ್ನು ನಮ್ಮ ಮನಸ್ಸು ಒಪ್ಪಿಕೊಂಡರೂ, ತಕ್ಷಣದ ಬದಲಾವಣೆ ಬಹಳ ಕಷ್ಟ. ಕ್ಷಮೆ ಕೇಳಿಯಾಯ್ತಲ್ಲ, ಇನ್ನೂ ಯಾಕೆ ಮುದುಡಿಕೊಂಡಿದ್ದೀಯಾ ಅಂತ ಅವರು ಕೇಳ್ತಾರೆ. ನಿಜ. ಆದರೆ, ಮನಸ್ಸು ತಕ್ಷಣಕ್ಕೆ ಅರಳುವುದಿಲ್ಲ.
ಪದೆ ಪದೆ ಏಟು ತಿಂದವರಿಗೆ ಹೀಗಾಗುತ್ತದೋ ಅಥವಾ ಇದೊಂದು ಮಾನಸಿಕ ಸಮಸ್ಯೆಯೋ ಗೊತ್ತಿಲ್ಲ. ನನಗಂತೂ ತಕ್ಷಣ ಚೇತರಿಸಿಕೊಳ್ಳಲು ಆಗುವುದಿಲ್ಲ. ಎಲ್ಲ ತರ್ಕವನ್ನು ಒಪ್ಪಿಕೊಂಡಾದ ನಂತರವೂ, ಮತ್ತೆ ಸಹಜಸ್ಥಿತಿಗೆ ಬರಲು ಸಮಯ ಹಿಡಿಯುತ್ತದೆ. ಈ ಅವಧಿಯಲ್ಲಿ ಮನಸ್ಸು ಅಂತರ್ಮುಖ. ಅಳುತ್ತ ಮಲಗಿದ ಮಗು ನಿದ್ದೆಯಲ್ಲೂ ಬಿಕ್ಕುವಂತೆ, ಮನಸ್ಸು ಬಿಕ್ಕುತ್ತಿರುತ್ತದೆ.
ತುಂಬ ಸಾರಿ ಯೋಚಿಸಿದ್ದೇನೆ, ಸಾವಿರಾರು ಸಾರಿ ಪ್ರಯತ್ನಿಸಿದ್ದೇನೆ. ಆದರೂ, ಏಟು ತಿಂದ ನೋವನ್ನು ತಕ್ಷಣ ಮರೆಯಲಾಗುವುದಿಲ್ಲ. ಅತಿ ಸಂವೇದಿಯಾಗಬಾರದು ಅಂತ ಎಷ್ಟೇ ಅಂದುಕೊಂಡರೂ, ಬದಲಾಗಲು ಆಗಿಲ್ಲ. ನನ್ನ ಈ ದೌರ್ಬಲ್ಯದಿಂದಾಗಿ, ಆಕಸ್ಮಿಕವಾಗಿ ನೋವುಂಟು ಮಾಡಿದವರು ನನಗಿಂತ ದುಪ್ಪಟ್ಟು ನೋವನುಭವಿಸುವಂತೆ ಆಗಿದೆ. ಇದನ್ನು ಬದಲಾಯಿಸೋದು ಹೇಗೆ?
ಉತ್ತರ ಗೊತ್ತಾಗದೇ ಮಂಕಾಗುತ್ತೇನೆ.
- ಚಾಮರಾಜ ಸವಡಿ
No comments:
Post a Comment