ಹೊಟ್ಟೆ ಖಾಲಿಯಾದಾಗ, ಮೆದುಳು ತೆರೆದುಕೊಳ್ಳುತ್ತದೆ. ವಿಚಾರಗಳು ಹೊಟ್ಟೆ ತುಂಬ ತುಂಬಿಕೊಂಡು ನೆತ್ತಿಗೇರುತ್ತವೆ.
ಕಳೆದ ಐದು ದಿನಗಳ ಕಾಲ ಹೀಗೇ ಆಗಿತ್ತು. ವಿಪರೀತ ಖಿನ್ನತೆ ತಡೆದುಕೊಳ್ಳಲಾರದೇ ಅನ್ನ ಸತ್ಯಾಗ್ರಹವನ್ನು ಶುರು ಮಾಡಿಕೊಂಡೆ.
ಮೊದಲ ದಿನದ ಹಿಂಸೆ ಹೇಳತೀರದು. ಹಾಗೆ ನೋಡಿದರೆ, ಉಪವಾಸ ಹಾಗೂ ಖಿನ್ನತೆಗಳು ನನ್ನ ಸನ್ಮಿತ್ರರು. ಅವು ನನಗೆ ಹಿಂಸೆಗಿಂತ ಹೆಚ್ಚು ಉಪಕಾರವನ್ನೇ ಮಾಡಿವೆ.
ಆದರೆ, ಉಪಕಾರದ ಫಲಕ್ಕಿಂತ ಅವುಗಳ ಹಿಂಸೆಯನ್ನು ಸಹಿಸಿಕೊಳ್ಳುವುದು ಕಡುಕಷ್ಟ.
ಮೊನ್ನೆ ಇದ್ದಕ್ಕಿದ್ದಂತೆ ಖಿನ್ನತೆ ಶುರುವಾಯ್ತು. ಇತ್ತೀಚಿನ ವರ್ಷಗಳಲ್ಲಿ ಅದು ಈ ಪರಿ ಕಾಡಿದ್ದು ಬಹಳ ಕಡಿಮೆ. ಖಿನ್ನತೆ ನನಗೆ ಆಗಾಗ ಬರುತ್ತಿತ್ತು, ನೆಗಡಿಯಂತೆ. ಬಂದ ಒಂದೆರಡು ದಿನ ಮಂಕಾಗಿಸಿ, ಹೊಸದೊಂದು ಹೊಳಹನ್ನು ತಲೆ ತುಂಬಿ ಮತ್ತೆ ಇಲ್ಲವಾಗುತ್ತಿತ್ತು. ಈ ಸಲದ ಖಿನ್ನತೆ ಮಾತ್ರ ಅಷ್ಟು ಮೆದುವಾಗಿರಲಿಲ್ಲ.
ಹಾಗೆ ನೋಡಿದರೆ, ಖಿನ್ನತೆ ಏಕೆ ಬರುತ್ತದೆಂಬುದು ಇವತ್ತಿಗೂ ನನಗೆ ಗೊತ್ತಿಲ್ಲ. ವಿಜ್ಞಾನದ ಕಾರಣಗಳು ನನಗೆ ಅಷ್ಟಾಗಿ ಅನ್ವಯವಾಗಿಲ್ಲ. ಕಾರಣವಿಲ್ಲದೇ ಬರುವುದು ನನ್ನ ಖಿನ್ನತೆಯ ವಿಶೇಷತೆ. ಏನೋ ಮಾಡುತ್ತ ಕೂತಿರುತ್ತೇನೆ. ಅದು ಕಚೇರಿಯಾಗಿರಬಹುದು, ಮನೆಯಾಗಿರಬಹುದು, ಇಲ್ಲವೇ ರಸ್ತೆಯಲ್ಲಿರಬಹುದು. ಇದ್ದಕ್ಕಿದ್ದಂತೆ ಒಳಮನಸ್ಸಿನಿಂದ ಸಂಕೇತವೊಂದು ರವಾನೆಯಾಗುತ್ತದೆ: ಖಿನ್ನತೆ ಬರ್ತಾ ಇದೆ.
ಒಂದರೆಕ್ಷಣ ಗಾಬರಿಯಾಗುತ್ತೇನೆ. ನೀಲ ಬಾನಿನ ಅಂಚಿನಲ್ಲಿ ಇದ್ದಕ್ಕಿದ್ದಂತೆ ಕಾರ್ಮೋಡಗಳು ದಟ್ಟೈಸಿದಂತೆ, ಖಿನ್ನತೆಯ ಕರಿ ಮೋಡ ಪ್ರಸನ್ನ ಮನಃಸ್ಥಿತಿಯನ್ನು ಆವರಿಸಿಕೊಳ್ಳುತ್ತದೆ. ಎಂಥದೋ ದುಗುಡ, ಏನೋ ಅಳುಕು. ಇದೆಲ್ಲ ನಶ್ವರ ಎಂಬ ಭಾವ ದಟ್ಟವಾಗತೊಡಗುತ್ತದೆ. ನಾನು ಮಾಡುತ್ತಿರುವುದೆಲ್ಲ ಮಣ್ಣು, ಇದರಿಂದ ಏನೂ ಉಪಯೋಗವಿಲ್ಲ. ಯಾರಿಗೆ ಇದರಿಂದ ಉಪಯೋಗ? ನಾನು ಯಾರಿಗೆ ಉಪಯೋಗಿ? ನನ್ನಿಂದ ಏನೂ ಮಾಡುವುದಕ್ಕೆ ಆಗುವುದಿಲ್ಲ. ನನ್ನ ಕನಸೆಲ್ಲ ವ್ಯರ್ಥ. ಪ್ರಯತ್ನ ಇನ್ನೂ ವ್ಯರ್ಥ. ಒಂದಿನ ಇದೆಲ್ಲ ಇಲ್ಲವಾಗುತ್ತದೆ. ನಾಶವಾಗುತ್ತದೆ. ಆಮೇಲೇನಿದೆ ಮಣ್ಣು- ಎಂದೆಲ್ಲ ಅನಿಸತೊಡಗುತ್ತದೆ.
ಅರೆ ಕ್ಷಣ ಮೌನವಾಗಿ ಕೂಡುತ್ತೇನೆ. ಅರ್ಜೆಂಟ್ ಕೆಲಸವಿದ್ದರೆ, ಕಷ್ಟಪಟ್ಟು, ಕಡು ಕಷ್ಟಪಟ್ಟು ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ. ಯಾವಾಗಲೂ ಪ್ರಸನ್ನನಾಗಿರುವ ಮುಖ ದುಡುಡಗೊಳ್ಳುತ್ತದೆ. ಕೆಲಸ ಯಾಂತ್ರಿಕವಾಗುತ್ತದೆ. ಮನಸ್ಸು ಎಲ್ಲೋ ಕಳೆದುಹೋಗಿರುತ್ತದೆ.
ಏಕೆ ಹೀಗೆ ಆಗುತ್ತದೆ ಎಂದು ಸಾವಿರ ಸಾವಿರ ಬಾರಿ ಪ್ರಶ್ನಿಸಿಕೊಂಡಿದ್ದೇನೆ. ಖಿನ್ನತೆ ಈಗಿನ ಸಮಸ್ಯೆಯಲ್ಲ. ನನ್ನ ಬಾಲ್ಯದಿಂದಲೇ ಅಂಟಿಕೊಂಡಿರುವಂಥದು. ಅದು ನನ್ನನ್ನು ಬದುಕಿಗೇ ವಿಮುಖನನ್ನಾಗಿಸಿತು. ಅದರ ಹಿಂಸೆ ತಾಳಲಾರದೇ ಪರದಾಡಿಬಿಟ್ಟೆ. ಪುಸ್ತಕಗಳ ಹುಚ್ಚು ತಲೆಗೇರಿಸಿಕೊಂಡೆ. ನನ್ನ ವಯಸ್ಸಿನವರು ಅಂಜುವಂಥ ಅನಾಹುತಕಾರಿ ಪ್ರಯೋಗಗಳಿಗೆ ಮುಂದಾದೆ. ಆದರೆ, ಖಿನ್ನತೆ ಮಾತ್ರ ದೂರವಾಗಲಿಲ್ಲ.
ಹೀಗೆ ಬದುಕಿಗೇ ವಿಮುಖನಾದ ನಾನು ಒಂದು ಹಂತದಲ್ಲಿ ಹಿಡಿ ಪ್ರೀತಿಗಾಗಿ ಹಂಬಲಿಸಿಬಿಟ್ಟೆ. ನನ್ನಳಲನ್ನು ಯಾರ ಮುಂದಾದರೂ ಹೇಳಿಕೊಂಡು ಹಗುರವಾಗಬೇಕು ಅಂತ ಇನ್ನಿಲ್ಲದಂತೆ ಹಂಬಲಿಸಿದೆ. ಆದರೆ, ಜಗತ್ತಿಗೆ ಅಳಲನ್ನು ಕೇಳುವ ವ್ಯವಧಾನವಿಲ್ಲ. ಅದು ಗೊತ್ತಾಗುವ ಹೊತ್ತಿಗೆ ಖಿನ್ನತೆ ನನ್ನ ದೇಹದ ಅಂಗವಾಗಿಬಿಟ್ಟಿತ್ತು.
ಅಷ್ಟೊತ್ತಿಗೆ ಪಿಯುಸಿಯಲ್ಲಿದ್ದೆ. ನನ್ನದಲ್ಲದ ತಪ್ಪಿಗೆ ಡಿಬಾರಾಗಿ ಒಂದು ವರ್ಷ ಕೂಡುವ ದುಃಸ್ಥಿತಿ ಬಂದಾಗಂತೂ ಖಿನ್ನತೆ ವಿಪರೀತವಾಯಿತು. ಸಹಿಸಲಾಗದೇ ಒಂದಿನ ಆತ್ಮಹತ್ಯೆಗೂ ಯತ್ನಿಸಿದೆ.
ಅದೆಲ್ಲವನ್ನೂ ಯಾವಾಗಾದರೂ ಬರೆದೇನು. ಆದರೆ, ಅಂದು ಆ ಮರದ ಹತ್ತಿರ ಹಗ್ಗ ತಗೊಂಡು ಹೋಗಿ ನಿಂತಾಗ, ಮನಸ್ಸಿನ ಎದುರು ಕೆಲ ಚಿತ್ರಗಳು ಮೂಡಿದವು. ನನ್ನ ಮನೆಯವರು, ಮಿತ್ರರು ನನ್ನ ಸಾವನ್ನು ನೋಡಿ ಅಳುವುದನ್ನು ಕಂಡೆ. ನನ್ನ ಸಹಪಾಠಿಗಳು ಅನುಕಂಪ ಸೂಚಿಸಿದ್ದನ್ನು ಕಂಡೆ.
ಮುಂದೆ?
ಆ ಚಿತ್ರ ಸ್ಪಷ್ಟವಾಗಲಿಲ್ಲ. ಹೌದು, ಸತ್ತ ಮೇಲೆ ಏನಾಗುತ್ತೇನೆ? ಎಂಬ ಪ್ರಶ್ನೆ ಎದ್ದು ನಿಂತಿತು. ದೆವ್ವ, ಭೂತದಂಥ ವಿಷಯಗಳಲ್ಲಿ ನನಗೆ ನಂಬಿಕೆಯಿಲ್ಲ. ಏನಾಗುತ್ತೇನೆ ಹಾಗಾದರೆ? ಬದುಕಿದಾಗಲೇ ಗೆಲ್ಲದ ಸವಾಲುಗಳನ್ನು ಸತ್ತ ನಂತರ ಹೇಗೆ ಗೆಲ್ಲುವೆ?
ಈ ಪ್ರಶ್ನೆಗಳಿಗೆ ಮರವಾಗಲಿ, ಹಗ್ಗವಾಗಲಿ ಉತ್ತರ ಕೊಡಲಿಲ್ಲ.
ಆಗ ಮೂರೂ ಸಂಜೆ. ಗದಗ ತಾಲ್ಲೂಕು, ನರೇಗಲ್ಲ ಪಟ್ಟಣದ ಪಕ್ಕದ ಹಳ್ಳಿ ಕೋಡಿಕೊಪ್ಪದ ಆ ಮರ, ಆ ಸಂಜೆಯ ನಸುಗತ್ತಲು, ಆ ತಂಗಾಳಿ, ಹಕ್ಕಿಗಳ ಚಿಲಿಪಿಲಿ ಹಾಗೂ ಆಗಿನ ನನ್ನ ವಿಚಿತ್ರ ಮನಃಸ್ಥಿತಿ ಈಗಲೂ ಕಣ್ಣ ಮುಂದೆ ಹಾಗೇ ಇವೆ.
ಇಲ್ಲ, ಸಾಯುವುದು ವ್ಯರ್ಥ ಅನಿಸಿತು. ನಾನು ಬದುಕಬೇಕು ಅಂದುಕೊಂಡೆ. ಆಗ ಒಂಚೂರು ಸಮಾಧಾನವಾದಂತಾಯಿತು. ನನ್ನ ಆತ್ಮಹತ್ಯೆ ಯತ್ನ ಕಂಡು ಖಿನ್ನತೆಯೂ ಬೆದರಿತ್ತೇನೋ. ಒಂದೆರಡು ಗಂಟೆ ಅದು ಹತ್ತಿರ ಸುಳಿಯಲಿಲ್ಲ.
ಒಬ್ಬನೇ ರೂಮಿನ ಅರೆಗತ್ತಲಲ್ಲಿ ಕೂತು ಯೋಚಿಸಿದೆ. ನನ್ನಲ್ಲೊಂದು ವಿಶಿಷ್ಟ ಶಕ್ತಿ ಇದೆ ಅಂತ ಅನ್ನಿಸಿತು. ಜೀವ ಕಳೆದುಕೊಳ್ಳುವ ಹಂತದವರೆಗೂ ತಲುಪಿದವನಿಗೆ ಮತ್ಯಾವ ಭಯ ಅಂದುಕೊಂಡೆ. ಇನ್ನು ಏನಾದರೂ ಮಾಡಬೇಕು, ಜೀವನವನ್ನು ಇನ್ನೊಂದು ದಿಕ್ಕಿನಿಂದ ಬದುಕಬೇಕು ಅಂತ ಅಂದುಕೊಂಡೆ.
ಹಾಗಂದುಕೊಂಡಿದ್ದಷ್ಟೆಯೇ ಹೊರತು, ಹೇಗೆ ಎಂಬ ದಾರಿ ಗೊತ್ತಿರಲಿಲ್ಲ. ರೂಮಿನ ಪಾತ್ರೆಗಳಷ್ಟೇ ಅಲ್ಲ, ಜೇಬೂ ಖಾಲಿಯಿದ್ದ ಭೀಕರ ಬಡತನದ ದಿನಗಳವು. ಹಣದಿಂದ ಕೊಳ್ಳಬಹುದಾದ ಹಲವಾರು ನೆಮ್ಮದಿ ಮಾರ್ಗಗಳು ಈ ಕಾರಣದಿಂದಾಗಿ ನನ್ನ ಪಾಲಿಗೆ ಮುಚ್ಚಿಹೋಗಿದ್ದವು.
ಆಗ ನೆಮ್ಮದಿ ಕೊಟ್ಟಿದ್ದು ಅಧ್ಯಾತ್ಮ. ಇವತ್ತಿಗೂ ಅದೇ ನನ್ನನ್ನು ಕೈ ಹಿಡಿದು ನಡೆಸುತ್ತಿರುವುದು. ಅಣ್ಣ ಕೊಟ್ಟಿದ್ದ ಭಗವದ್ಗೀತೆ ಪುಸ್ತಕ ರೂಮಿನಲ್ಲಿತ್ತು. ಅದನ್ನು ಕೈಗೆತ್ತಿಕೊಂಡೆ.
ಮತ್ತೊಂದಿಷ್ಟು ನೆಮ್ಮದಿ ಹರಿದು ಬಂತು. ನನ್ನ ಓರಗೆಯ ಹುಡುಗರು ಸಿನಿಮಾ, ಹರಟೆ, ಹುಡುಗಿಯರು ಎಂದೆಲ್ಲ ಬಿಜಿಯಾಗಿದ್ದಾಗ, ನಾನು ಗೀತೆಯ ಮೊರೆ ಹೋದೆ. ಅಲ್ಲಿದ್ದ ಯೋಗಮಾರ್ಗದ ಪ್ರಯೋಗ ಮಾಡುವ ಉತ್ಸಾಹ ಬಂತು.
ನಸುಕಿನ ನಾಲ್ಕು ಗಂಟೆಗೇ ಏಳತೊಡಗಿದೆ. ಯೋಗಾಸನ ಕಲಿತೆ. ಕೋಡಿಕೊಪ್ಪದ ಹೊರವಲಯದಲ್ಲಿದ್ದ ಹುಚ್ಚೀರಪ್ಪಜ್ಜನ ಮಠಕ್ಕೆ ದಿನಾ ಸಂಜೆ ಹೋಗತೊಡಗಿದೆ. ಅಲ್ಲಿ, ಮೈಲುಗಟ್ಟಲೇ ಹರಡಿರುತ್ತಿದ್ದ ಖಾಲಿ ಹೊಲಗಳಲ್ಲಿ, ಒಂದು ಟವೆಲ್ ಹಾಸಿ, ಮಲಗಿ, ರಾತ್ರಿ ಎಂಟಾಗುವವರೆಗೂ ನಕ್ಷತ್ರಗಳನ್ನು ದಿಟ್ಟಿಸುತ್ತ ವಿಚಾರಮಗ್ನನಾಗುತ್ತಿದ್ದೆ.
‘ಒಂದಲ್ಲ ಒಂದಿನ ನಾನು ಕೋಡಿಕೊಪ್ಪದಿಂದ ಹೋಗುತ್ತೇನೆ. ಬದುಕು ನನ್ನನ್ನು ಮತ್ತೊಂದು ದಿಕ್ಕಿಗೆ ಒಯ್ಯುತ್ತದೆ. ಅಲ್ಲಿ ನನ್ನ ನೋವನ್ನು ಅರ್ಥ ಮಾಡಿಕೊಳ್ಳುವವರು ಸಿಕ್ಕಾರು. ನನ್ನ ಖಿನ್ನತೆ ದೂರವಾದೀತು. ನಾನೂ ಸಹಜ ಮನುಷ್ಯನಾದೇನು’ ಅಂತ ಅಂದುಕೊಳ್ಳುತ್ತ, ಭರವಸೆ ತಂದುಕೊಳ್ಳುತ್ತಿದ್ದೆ.
ಇವತ್ತಿಗೂ ಕೋಡಿಕೊಪ್ಪದ ಆ ಖಾಲಿ ಹೊಲಗಳು ಮತ್ತು ದಿಗಿದಿಗಿ ಎನ್ನುತ್ತ ಬೆಳಗುತ್ತಿದ್ದ ನಕ್ಷತ್ರಗಳು ನನ್ನಲ್ಲಿ ತುಂಬಿದಷ್ಟು ಪ್ರೇರಣೆಯನ್ನು ಬೇರಾವುದೂ ತುಂಬಿಲ್ಲ. ಆ ಮಹಾಮೌನ ನನ್ನನ್ನು ಮತ್ತು ನನ್ನೊಳಗನ್ನು ಪರಸ್ಪರ ಮಿತ್ರರನ್ನಾಗಿಸಿತು. ನನ್ನ ನೋವಿಗೆ ನಾನೇ ಸಮಾಧಾನ ಹುಡುಕಿಕೊಳ್ಳುವುದನ್ನು ಅದು ಕಲಿಸಿತು. ಬದುಕಿನಲ್ಲಿ ನೋವುಣ್ಣುವುದು ವೈಯಕ್ತಿಕ, ನೆಮ್ಮದಿ ಹಂಚುವುದು ಸಾರ್ವತ್ರಿಕ ಎಂಬ ಪ್ರಾಥಮಿಕ ಪಾಠವನ್ನು ಕಲಿಸಿತು.
ಆಗ ನಾನು ಬರಹಗಾರನಾಗಿರಲಿಲ್ಲ. ಅನ್ನ ಹುಟ್ಟಿಸುವ ಯಾವ ಕೆಲಸವನ್ನೂ ಮಾಡಲು ಸಮರ್ಥನಾಗಿದ್ದಿಲ್ಲ. ಆಗ ನಾನೊಬ್ಬ ದಿಕ್ಕು ತಪ್ಪಿದ, ತೀವ್ರ ಗೊಂದಲದಲ್ಲಿರುವ, ಅಪಾರ ಖಿನ್ನತೆಯುಳ್ಳ, ಆದರೆ, ಅಪ್ಪಟ ಪ್ರಾಮಾಣಿಕ ಹುಡುಗನಾಗಿದ್ದೆ. ನೋವು ನನ್ನನ್ನು ಮಾಗಿಸತೊಡಗಿತ್ತು. ನನ್ನ ವ್ಯಕ್ತಿತ್ವವನ್ನು ರೂಪಿಸತೊಡಗಿತ್ತು.
ಇವತ್ತಿಗೂ ತೀವ್ರ ನೋವು ಕಾಡಿದಾಗ, ನಾನು ಒಂಟಿಯಾಗಿ ಕೂಡುತ್ತೇನೆ. ನನ್ನ ಮನಸ್ಸನ್ನು ಕೆದಕುತ್ತೇನೆ. ನನ್ನ ಸಮಸ್ಯೆಗಳನ್ನು ನಾನೇ ವಿಶ್ಲೇಷಿಸುತ್ತ, ನನ್ನೊಳಗೆ ನಾನೇ ಚರ್ಚೆ ನಡೆಸುತ್ತ, ಉತ್ತರ ಕಂಡುಕೊಳ್ಳುತ್ತೇನೆ. ಆ ಮೌನ ಅನುಸಂಧಾನದಲ್ಲಿ ನಾನು ಅದ್ಭುತ ಸತ್ಯ ಕಂಡುಕೊಂಡಿದ್ದೇನೆ. ಅಪಾರ ನೆಮ್ಮದಿ ಅನುಭವಿಸಿದ್ದೇನೆ. ಒಬ್ಬನೇ ಅತ್ತಿದ್ದೇನೆ. ನಕ್ಕಿದ್ದೇನೆ. ಶಾಂತನಾಗಿದ್ದೇನೆ.
ಸಿದ್ದಯ್ಯ ಪುರಾಣಿಕರ ಕವಿತೆಯ ಈ ನುಡಿ ನನ್ನೆದೆಯೊಳಗೆ ಶಾಶ್ವತವಾಗಿ ಅಚ್ಚೊತ್ತಿದೆ:
ನೂರು ದುಃಖಗಳನು ನುಂಗಿ ನಗೆಯ ತೋರಬೇಕು
ಎಲ್ಲರೊಡನೆ ಬೆರೆತು ಒಂದೇ ಸೊಗವ ಬೀರಬೇಕು
ಒತ್ತಿ ಬರುವ ಕಣ್ಣ ನೀರ ಹತ್ತಿ ಹಿಡಿಯಬೇಕು
ಕತ್ತಲಲ್ಲಿ ಅತ್ತು ಬೆಳಿಗ್ಗೆ ಮತ್ತೆ ದುಡಿಯಬೇಕು
ಯಾವ ಗಳಿಗೆಯಲ್ಲಿ ಈ ಅದ್ಭುತ ಸಾಲುಗಳನ್ನು ಬರೆದರೋ ಸಿದ್ದಯ್ಯ ಪುರಾಣಿಕರು. ಅದು ನನ್ನ ಜೀವನದ ಪರಮೋಚ್ಚ ಪ್ರೇರಕ ಶಕ್ತಿಯಾಯ್ತು. ನನ್ನ ಕೈ ಹಿಡಿದು ನಡೆಸುವ ದೀವಿಗೆಯಾಯ್ತು. ಆ ಸಾಲುಗಳನ್ನು ಪದೆ ಪದೆ ಮನನ ಮಾಡಿಕೊಳ್ಳುತ್ತ ನಾನು ಇದುವರೆಗೂ ಬಂದಿದ್ದೇನೆ. ಬಹುಶಃ ಮುಂದೆಯೂ ಅವೇ ಸಾಲುಗಳ ಪ್ರೇರಕ ಶಕ್ತಿ ನನ್ನನ್ನು ಮುನ್ನಡೆಸುತ್ತದೆ.
ಆದರೆ, ಪ್ರೇಮರಾಹಿತ್ಯ ಭಾವನೆ ಮಾತ್ರ ಖಿನ್ನತೆಯಂತೆ ಶಾಶ್ವತವಾಗಿ ಜೊತೆಗೇ ಉಳಿದುಬಿಟ್ಟಿತು. ನನ್ನೆಲ್ಲ ದುಗುಡಗಳನ್ನು ಹಂಚಿಕೊಳ್ಳಬಲ್ಲ, ಅರ್ಥ ಮಾಡಿಕೊಳ್ಳಬಲ್ಲ, ಸಂತೈಸಬಲ್ಲ, ಜೊತೆಗೆ ನಿಲ್ಲಬಲ್ಲ ಜೀವದ ಕೊರತೆ ಮಾತ್ರ ನೀಗಲೇ ಇಲ್ಲ. ಅದು ಯಾರ ತಪ್ಪೂ ಅಲ್ಲ, ಅಂಥ ವ್ಯಕ್ತಿಯನ್ನು ಹುಡುಕಿಕೊಳ್ಳುವಲ್ಲಿ ನಾನೇ ವಿಫಲನಾದೆನೇನೋ ಎಂದು ಅನಿಸತೊಡಗುತ್ತದೆ.
ಕೈ ಹಿಡಿದ ರೇಖಾ ನನ್ನ ಖಿನ್ನತೆಯನ್ನು ಬಹುತೇಕ ಒರೆಸಿಹಾಕಿದಳು ನಿಜ. ಆದರೆ, ಪೂರ್ತಿಯಾಗಿ ಇಲ್ಲವಾಗಿಸುವುದು ಆಕೆಗೂ ಸಾಧ್ಯವಾಗಲಿಲ್ಲ. ಅದು ಆಕೆಯ ಮಿತಿಯಲ್ಲ, ನನ್ನ ಮಿತಿ.
ಹೀಗಾಗಿ ಇವತ್ತಿಗೂ ಹಳೆಯ ನೆಂಟನಂತೆ ಬರುತ್ತದೆ ಖಿನ್ನತೆ. ಬಂದಾಗೆಲ್ಲ ಅದೇ ತೀವ್ರತೆ, ಅದೇ ತೀಕ್ಷ್ಣತೆ. ಆಗೆಲ್ಲ ವಿಹ್ವಲನಾಗುತ್ತೇನೆ. ಮನಸ್ಸು ಅಂತರ್ಮುಖವಾಗುತ್ತದೆ. ಬದುಕಿನ ಅರ್ಥವನ್ನು ಹುಡುಕತೊಡಗುತ್ತದೆ.
ಮೊನ್ನೆ ಬಂದ ಖಿನ್ನತೆ ಬಹಳ ವರ್ಷಗಳ ನಂತರ ನನ್ನನ್ನು ತೀವ್ರವಾಗಿ ಕಾಡಿತ್ತು. ಎಷ್ಟು ತೀವ್ರವಾಗಿತ್ತೆಂದರೆ, ಊಟ ರುಚಿಸಲಿಲ್ಲ. ಹೀಗಾಗಿ, ಐದು ದಿನ ಉಪವಾಸ ಮಾಡಬೇಕಾಯ್ತು.
ಅದರ ಬಗ್ಗೆ ಮುಂದೆ ಬರೆಯುತ್ತೇನೆ.
(ಮುಂದಿನ ಭಾಗದಲ್ಲಿ ಮುಕ್ತಾಯ)
- ಚಾಮರಾಜ ಸವಡಿ
Subscribe to:
Post Comments (Atom)
No comments:
Post a Comment