ಕಳೆದುಹೋಗಬೇಕು...

26 Feb 2011

If I loved you less, I might be able to talk about it more?


ಹಾಗಂತ ಬರೆದುಕೊಂಡು ತುಂಬ ದಿನಗಳಾದವು. ಈ ನಡುವೆ ಗಂಭೀರವಾಗಿ ಏನೇ ಮಾಡಲು ಹೋದರೂ ಅದನ್ನು ಪೂರ್ತಿಗೊಳಿಸಲಾಗದೇ ಒದ್ದಾಡುವಂತಾಗುತ್ತಿದೆ. ಸುಮ್ಮನೇ ಪುಸ್ತಕದ ಷೆಲ್ಫ್ ದಿಟ್ಟಿಸುವುದು, ಅದರೊಳಗಿಂದ ಯಾವುದಾದರೂ ಪುಸ್ತಕ ಹೊರತೆಗೆಯುವುದು, ಒಂದಿಷ್ಟು ಪುಟಗಳನ್ನು ತಿರುವಿಹಾಕುವುದು, ಕೆಲ ಸಾಲುಗಳ ಓದು, ಇನ್ನು ಕೆಲ ಸಾಲುಗಳ ಮನನ-

ಅಷ್ಟೊತ್ತಿಗೆ ಮನಸ್ಸು ಎಲ್ಲೋ ಕಳೆದುಹೋಗಿರುತ್ತದೆ.

ಮಧ್ಯವಯಸ್ಕನ ಗೊಂದಲ ಶುರುವಾಯ್ತಾ ಅಂತ ಆಗೀಗ ಅನಿಸುತ್ತಿರುವುದು ನಿಜವಾದರೂ, ಅದನ್ನು ಒಪ್ಪಿಕೊಳ್ಳುವುದು ಮನಸ್ಸಿಗೆ ಕಷ್ಟ. ಛೇ ಇರಲಾರದು ಎಂದು ಸಮಾಧಾನ ಹೇಳಿಕೊಂಡರೂ, ಗೊಂದಲ ಹಾಗೇ ಇರುತ್ತದೆ. ನಿರ್ದಿಷ್ಟವಾಗಿ ಏನನ್ನೂ ಮಾಡಲು ಆಗುತ್ತಿಲ್ಲ. ಹಾಗಂತ ಸುಮ್ಮನೇ ಕೂಡಲೂ ಆಗುತ್ತಿಲ್ಲ.

ಮೋಡ ದಟ್ಟೈಸಿದೆ, ಗಾಳಿ ತಂಪಾಗಿದೆ. ನೆಲವೂ ಕಾದಿದೆ. ಬೇಂದ್ರೆಯವರ ನೀ ಹೀಂಗ ನೋಡಬ್ಯಾಡ ನನ್ನ ಕವಿತೆಯ ಸಾಲುಗಳು ನೆನಪಾಗುತ್ತವೆ. 

‘ನಿನ್ನ ಕಣ್ಣಿನಲಿ ಕಾಲೂರಿ ನದಿಯು, ನಡನಡುವೆ ಹುಚ್ಚು ನಗಿ ಯಾಕ?

ಹನಿ ಒಡೆಯಲಿಕ್ಕೆ ಬಂದಂಥ ಮೋಡ, ತಡೆದ್ಹಾಂಗ ಗಾಳಿಯ ನೆವಕ...’

ಹನಿ ಒಡೆಯಲೆಂದು ಮನಸ್ಸು ಹಂಬಲಿಸುತ್ತದೆ. ಒಳಗಿನದೆಲ್ಲ ಯಾವುದೋ ನೆಪವೊಡ್ಡಿಕೊಂಡು ಹೊರಗುಕ್ಕಲಿ, ಹರಿದು ಹಗುರವಾಗಲಿ ಅಂತ ಒರಲುತ್ತದೆ. 

ಆದರೆ, ಊಹೂಂ, ಹನಿ ಒಡೆಯುತ್ತಿಲ್ಲ. ಮೋಡ ಹಾಗೇ ಬಿಗಿದುಕೊಂಡಿದೆ. 

ಬರೆದು ಹಗುರಾಗಬೇಕೆಂದು ಹಂಬಲಿಸಿದ್ದಾಯ್ತು. ಆದರೆ, ಮನಸ್ಸನ್ನು ತೀವ್ರವಾಗಿ ಕಾಡುವಂಥ ಭಾವನೆಗಳನ್ನು ತಕ್ಷಣಕ್ಕೆ ಬರೆಯುವುದು ಕಷ್ಟಕರ. ತೀವ್ರತರ ಭಾವನೆಗಳು ಹದಗೊಳ್ಳಬೇಕು, ಕೊಂಚ ತಣಿಯಬೇಕು, ಕೊಂಚ ಇಂಗಬೇಕು. ಅಷ್ಟೊತ್ತಿಗೆ, ಹನಿ ಒಡೆಯಬೇಕಾದ ಘಳಿಗೆ ಬಂದು, ಧೋ ಎಂದು ಸಾಲುಗಳು ಉಕ್ಕತೊಡಗುತ್ತವೆ.

ಅದೊಂಥರಾ ನಾರ್ಮಲ್ ಹೆರಿಗೆ.

ಆದರೆ, ಅದೇ ಸಾಧ್ಯವಾಗುತ್ತಿಲ್ಲ ಎಂಬುದು ಸದ್ಯದ ಸಮಸ್ಯೆ. ಅರ್ಜೆಂಟಾಗಿ ಮನಸ್ಸನ್ನು ಬಿಗಿದಿಟ್ಟಿರುವ ಒತ್ತಡ ಹೊರಬೀಳಬೇಕು. ಅತ್ತೋ, ಬರೆದೋ ಹಗುರಾಗಬೇಕು. ಗಂಡಸಾಗಿ ಅಳೋದಾ? ಎಂಬ ಯಾವ ಸೆಂಟಿಮೆಂಟನ್ನೂ ಇಟ್ಟುಕೊಂಡವನಲ್ಲ ನಾನು. ಅಷ್ಟಕ್ಕೂ ಅಳಬೇಕೆನ್ನುವುದು ಯಾವ ದುಃಖಕ್ಕೂ ಅಲ್ಲ.

ಏಕೆಂದರೆ, ಅಳು ಬರಲು ದುಃಖವೇ ಆಗಬೇಕೆಂದೇನೂ ಇಲ್ಲ.

ವಿಪರೀತ ಸೆಂಟಿಮೆಂಟಾದರೂ ಕಣ್ಣೀರು ಉಕ್ಕುತ್ತದೆ. ತೀವ್ರ ಖುಷಿಯಾದಾಗಲೂ. ನನಗೆ ದುಃಖಕ್ಕಿಂತ ಇಂಥ ಸಂದರ್ಭಗಳಲ್ಲಿ ಕಣ್ಣೀರು ಸುರಿದಿದ್ದೇ ಹೆಚ್ಚು.

ಈ ಸಲ ಅದ್ಯಾವುದೂ ಇಲ್ಲ. 

ಮತ್ಯಾಕೆ ಗಂಟು ಬಿತ್ತೀ ದುಗುಡ ಎಂದು ಖಿನ್ನವಾಗುತ್ತಿದೆ ಮನಸ್ಸು. ಕಾಣದ ತೀರಕ್ಕೆ ಹಂಬಲಿಸಿದೆ ಮನ ಎಂಬ ಕವಿವಾಣಿ ನಿಜವಾಗುವ ಮನಸ್ಸು ಹತ್ತಿರ ಬಂತೆ ಅಂತ ಅಂದುಕೊಳ್ಳುತ್ತೇನೆ. ಕಾಣದ ತೀರವನ್ನು ಪದೆ ಪದೆ ಹುಡುಕಿಕೊಂಡು ಹೋದ, ಬದುಕು ಕಟ್ಟಿಕೊಂಡವನು ನಾನು ಎಂದು ಸಮಾಧಾನ ತಂದುಕೊಳ್ಳುತ್ತೇನೆ. 

ಆದರೂ, ದುಗುಡ. 

ವಿಪರೀತ ಸೆಂಟಿಮೆಂಟ್ ಆಗುವುದೇ ದೊಡ್ಡ ಸಮಸ್ಯೆ ಅಂತ ಪದೆ ಪದೆ ಅಂದುಕೊಂಡರೂ, ದುಗುಡ ಶಮನವಾಗುತ್ತಿಲ್ಲ. ಈ ದುಗುಡದಾಳದಿಂದಲೇ ನೆಮ್ಮದಿ ಉಕ್ಕಲಿ ಎಂದು ಹಂಬಲಿಸುವುದೂ ನಿಂತಿಲ್ಲ. ಮನೋವಿಜ್ಞಾನಿಗಳು ಹೇಳುವ ಕೆಮಿಕಲ್ ಇಂಬ್ಯಾಲೆನ್ಸ್ ಇರಬಹುದೇ ಎಂದು ಸಣ್ಣ ಸಂಶಯ. 

ಅದೇನೇ ಇದ್ದರೂ, ಉಕ್ಕಿದ ಸಾಗರ, ಉಕ್ಕಿದಲ್ಲೇ ಶಮನವಾಗಬೇಕು. ಅದು ಮತ್ತೆಲ್ಲಿ ಹೋದೀತು? ಎದ್ದ ಕಡೆಯೇ ಅಲೆ ನಿಲ್ಲಬೇಕು, ಅಳು ನಿಲ್ಲಬೇಕು. ಮುದುಡಿದ ಕಡೆಯೇ ಬದುಕು ಅರಳಬೇಕು. ಅದು ನಿಯಮ.

ಹಾಗಂದುಕೊಂಡು ಮತ್ತೆ ಪುಸ್ತಕಗಳ ಮೊರೆ ಹೋಗುತ್ತೇನೆ. Our sweetest songs are those, which tell our saddest thoughts ಎಂಬ ಪಿ.ಬಿ. ಷೆಲ್ಲಿ ಮಹಾನುಭಾವನ ಕವಿವಾಣಿ ಕಣ್ಣಿಗೆ ಬೀಳುತ್ತದೆ.

ಅರೆ, ಹೌದಲ್ಲವೆ? ಎಂದು ಮನಸ್ಸು ಕೊಂಚ ಅರಳಿತು. 

ಅಳುವ ಮನಸು ಅರಳುವ ಪರಿಯೇ ವಿಚಿತ್ರ. ಇದ್ದಕ್ಕಿದ್ದಂತೆ ದುಗುಡ ಕರಗುವ ಛಾಯೆ. ಮೋಡ ಹನಿ ಒಡೆದ ಅನುಭವ. ದಟ್ಟೈಸಿದ ಎಲ್ಲವೂ ಕರಗತೊಡಗಿದ ಭಾವ. ವಿಚಿತ್ರ ನೆಮ್ಮದಿ ಅಲೆಅಲೆಯಾಗಿ ಆವರಿಸಿದಂತೆ, ಯಾವ ಮದಿರೆಯೂ ನೀಡದ ನೆಮ್ಮದಿಯನ್ನು ನೀಡಿದಂತೆ, ಅದ್ಭುತ ಕವಿತೆಯೊಂದನ್ನು ಓದಿದ ತೃಪ್ತಿಯಂತೆ, ಮನಸ್ಸು ಹಂತಹಂತವಾಗಿ ತಣಿಯತೊಡಗಿತು.

ಅಷ್ಟೇ-

ಅದೆಲ್ಲಿ ಅಡಗಿದ್ದವೋ ಕಣ್ಣೀರು ಉಕ್ಕತೊಡಗಿದವು. ರಾತ್ರಿಯ ನೀರವ ಮೌನದಲ್ಲಿ, ದನಿ ಕೂಡ ಹೊರಬರಲು ಆಸ್ಪದ ನೀಡದಂತೆ ಕಣ್ಣೀರು ಇಳಿದವು. ಜೊತೆಗೆ, ದಟ್ಟ ದುಗುಡ. ಮುಂದೈದು ನಿಮಿಷದಲ್ಲಿ ಅಬ್ಬರಿಸುತ್ತಿದ್ದ ಕಡಲು ಪ್ರಶಾಂತವಾಗಿ, ಕವಿದ ಕಾರ್ಮೋಡ ಕರಗಿ, ಅಪರಾತ್ರಿಯ ಕಾಳವದಲ್ಲಿ ನಕ್ಷತ್ರಗಳು ಸುಮ್ಸುಮ್ಮನೇ ನಕ್ಕವು.

ನಾನೂ ನಕ್ಕೆ. ನನ್ನನ್ನೇ ನೋಡಿಕೊಂಡು. 

- ಚಾಮರಾಜ ಸವಡಿ

2 comments:

ಅಮೃತಾ ಹೆಗಡೆ said...

ಸರ್ ... ನಿಮ್ಮ ಬರಹಗಳನ್ನು ಓದುತ್ತಾ ಇದ್ದರೆ , ನನ್ನ ಆರ್ದ್ರ ಕಣ್ಣುಗಳಲ್ಲಿಯೂ ಭರವಸೆ ಕಾಣುತ್ತದೆ. ಮನದ ಮೂಲೆಯಲ್ಲಿ ಯಾವಾಗಲೂ ಕುಳಿತೇ ಇರುವ ಕೊರಗಿಗೆ ಸಾಂತ್ವನ ಸಿಕ್ಕ ಅನುಭವ.. ಹೃದಯ ಸ್ಪರ್ಷಿಯಾದ ನಿಮ್ಮ ಲೇಖನಗಳ ಪ್ರತೀ. ವಾಕ್ಯಗಳೂ ಮನಸ್ಸಿಗೆ ತಾಗುತ್ತವೆ... ಭಾವನೆಗಳ ಜೊತೆ ಮಾತನಾಡುತ್ತವೆ... ಮನಸ್ಸಿಗೆ ಹತ್ತಿರವಾಗುತ್ತವೆ.. . ಓದಿ ತುಂಬಾ ಖುಷಿಯಾಯ್ತು ಸರ್...

Chamaraj Savadi said...

ಥ್ಯಾಂಕ್ಸ್‌ ಅಮೃತಾ.