ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ...

23 Jan 2009


ಮನಸ್ಸಿನ ತುಂಬ ಬೇಸರ, ನಿರಾಶೆ ತುಂಬಿದಾಗ ಏನು ಮಾಡಬೇಕು?

ಪ್ರತಿಯೊಬ್ಬ ಮನುಷ್ಯನನ್ನು ಕಾಡುವ ಪ್ರಶ್ನೆಯಿದು. ನಾವು ಎಂಥ ಉತ್ತಮ ಸ್ಥಿತಿಯಲ್ಲೇ ಇರಲಿ, ಯಶಸ್ವಿ ವ್ಯಕ್ತಿಗಳೇ ಆಗಿರಲಿ, ಬೇಸರ ಎಂಬುದನ್ನು ಶಾಶ್ವತವಾಗಿ ತೊಡೆದು ಹಾಕುವುದು ಸಾಧ್ಯವಿಲ್ಲ. ಅದು ಯಾವಾಗ ಬೇಕಾದರೂ ಬರಬಹುದು. ಯಾರಿಗೆ ಬೇಕಾದರೂ ಬರಬಹುದು. ಬಂದು ನಮ್ಮ ಮನಸ್ಸಿನ ನೆಮ್ಮದಿಯನ್ನು ಕಸಿದುಕೊಳ್ಳಬಹುದು. ಅರಸನಿರಲಿ, ಆಳಿರಲಿ, ಎಲ್ಲರೂ ಬೇಸರಕ್ಕೆ ಸಮಾನರೇ.

ಇನ್ನೂ ಒಂದು ದೊಡ್ಡ ರೋಗವಿದೆ. ಅದರ ಹೆಸರು ನಿರಾಶೆ. ಬೇಸರದ ಅಣ್ಣ ಇದು. ಏನೋ ಅಂದುಕೊಂಡಿರುತ್ತೇವೆ. ಆದರೆ, ಅದು ಈಡೇರುವುದಿಲ್ಲ. ಏನೋ ಪ್ರಯತ್ನ ಮಾಡುತ್ತೇವೆ. ಅದು ಯಶಸ್ವಿಯಾಗುವುದಿಲ್ಲ. ನಮ್ಮ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಗೆಲುವು ನಮಗೆ ದಕ್ಕುವುದಿಲ್ಲ.

ಆಗ, ಮಾಡಿದ್ದೆಲ್ಲ ವ್ಯರ್ಥವಾಯಿತು ಎನ್ನುತ್ತಾರೆ ಸುತ್ತಮುತ್ತಲಿನವರು. ಮಾಡುವುದೇ ವ್ಯರ್ಥ ಎನ್ನುತ್ತಾರೆ ನಿರಾಶವಾದಿಗಳು. ನಿನಗೆ ಸರಿಯಾಗಿ ಮಾಡಲು ಬರುವುದಿಲ್ಲ ಎನ್ನುತ್ತಾರೆ ಅಸೂಯಾಪರರು. ನಾವು ಇಂಥ ಜನರ ಜೊತೆಯೇ ಬದುಕುತ್ತ ಗುರಿ ತಲುಪಬೇಕು. ಎಷ್ಟೋ ಸಾರಿ ನಿರಾಶೆ ಎಂಬುದು ಅಲೆಗಳಂತೆ ಉಕ್ಕುಕ್ಕಿ ಬರುತ್ತದೆ. ನಿರಂತರವಾಗಿ ಅಪ್ಪಳಿಸುತ್ತದೆ. ಒಂದು ಕ್ಷಣ, ಈ ಅಲೆಗಳು ತೀರವನ್ನೇ ನುಂಗಿ ಹಾಕಿಬಿಡುತ್ತವೇನೋ ಎಂದು ತಲ್ಲಣ ಹುಟ್ಟಿಸುತ್ತವೆ.

ಆದರೆ, ಯಾವ ಅಲೆಯೂ ತೀರವನ್ನು ನುಂಗಿ ಹಾಕಿಲ್ಲ. ಅಲೆಗಳು ಸಾವಿರಾರು ಬರಬಹುದು. ನಿರಂತರವಾಗಿ ಅಪ್ಪಳಿಸಬಹುದು. ಆದರೆ, ಮಣ್ಣಿನ ತೀರ ಜಗ್ಗದೇ ನಿಂತಿರುತ್ತದೆ. ಒಂದಿಷ್ಟು ಕೊರೆಯಬಹುದು. ಒಂದಿಷ್ಟು ಕಸಿಯಬಹುದು. ಆದರೆ, ಪೂರ್ತಿಯಾಗಿ ಇಲ್ಲವಾಗಿಸದು. ಯಾವ ಅಲೆಗೂ ತೀರ ನಾಶ ಮಾಡುವ ಶಕ್ತಿಯಿಲ್ಲ.

ಬೇಸರ, ಸೋಲು, ನಿರಾಶೆ, ನೋವು- ಇಂಥ ಸಾವಿರಾರು ಅಲೆಗಳು ಬದುಕಿನ ಕಡಲಲ್ಲಿ ಇದ್ದೇ ಇರುತ್ತವೆ. ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಸಮಯ ಬರುತ್ತದೆ. ಆಗ ಮುಟ್ಟಿದ್ದೆಲ್ಲ ಮಣ್ಣೇ. ಯಾವ ಪ್ರಯತ್ನವೂ ಕೈಗೂಡುವುದಿಲ್ಲ. ಹಾಗೆ ನೋಡಿದರೆ, ನಾವು ಅತ್ಯುತ್ತಮ ಪ್ರಯತ್ನವನ್ನೇ ಮಾಡಿರುತ್ತೇವೆ. ಆದರೆ, ಗೆಲುವು ಮಾತ್ರ ಮರೀಚಿಕೆಯೇ.

ಆಗ ನಿರಾಶೆಯಾಗುವುದು ಸಹಜ. ಇಷ್ಟು ಚೆನ್ನಾಗಿ ಪ್ರಯತ್ನಿಸಿದರೂ ಸಫಲನಾಗಲಿಲ್ಲವಲ್ಲ ಎಂದು ನೋವಾಗುತ್ತದೆ. ನನ್ನ ಪ್ರಯತ್ನದಲ್ಲಿ ದೋಷ ಎಲ್ಲಿತ್ತು ಎಂದು ಮನಸ್ಸು ಪ್ರಶ್ನಿಸುತ್ತದೆ. ಯಾವ ಉತ್ತರವೂ ಹೊಳೆಯುವುದಿಲ್ಲ. ಇದನ್ನು ಇಲ್ಲಿಗೇ ನಿಲ್ಲಿಸಬೇಕು. ಮತ್ತೆ ಪ್ರಯತ್ನಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಪದೆ ಪದೆ ಅನ್ನಿಸತೊಡಗುತ್ತದೆ. ಏನೂ ಮಾಡಬೇಕೆಂದರೂ ಮನಸ್ಸು ತೊಡಗುವುದಿಲ್ಲ. ಖುಷಿಯಿಂದ ಎದ್ದು ನಿಲ್ಲುವುದಿಲ್ಲ.

ಅಂಥ ಸಮಯದಲ್ಲಿ ನಾನು ಒಬ್ಬನೇ ಕೂಡುತ್ತೇನೆ. ಶಬ್ದ ಕಡಿಮೆ ಇರುವ, ಬೆಳಕು ಕಡಿಮೆ ಇರುವ ತಾಣ ಹುಡುಕಿ ಮೌನವಾಗಿ ಮಂಥನ ನಡೆಸುತ್ತೇನೆ. ನನ್ನ ವಿಫಲ ಪ್ರಯತ್ನಗಳ ಬಗ್ಗೆ ಯೋಚಿಸುತ್ತೇನೆ. ಇಡೀ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಒಂದೊಂದೇ ಹಂತವನ್ನು ಎಳೆಎಳೆಯಾಗಿ ಬಿಡಿಸಿ ನೋಡುತ್ತೇನೆ. ಎಲ್ಲಿ ತಪ್ಪಾಯಿತು? ಎಂದು ಹುಡುಕುತ್ತೇನೆ. ಸಾಮಾನ್ಯವಾಗಿ ಉತ್ತರ ಸಿಕ್ಕೇ ಸಿಗುತ್ತದೆ.

ಕೆಲವು ಪ್ರಯತ್ನಗಳು ಇನ್ನಷ್ಟು ತೀವ್ರಗೊಳ್ಳಬೇಕಿರುತ್ತದೆ. ಇನ್ನು ಕೆಲವಕ್ಕೆ ಸಮಯ ಬೇಕಿರುತ್ತದೆ. ಕೆಲವೊಂದರಲ್ಲಿ ನಾನೇ ಎಡವಿರುತ್ತೇನೆ. ಎಲ್ಲ ಎಳೆಗಳನ್ನೂ ಮತ್ತೆ ಜೋಡಿಸಿದ ನಂತರ ಉತ್ತರ ಸಿದ್ಧವಾಗುತ್ತದೆ. ಮರಳಿ ಯತ್ನವ ಮಾಡಲು ಮನಸ್ಸು ಹುರುಪುಗೊಳ್ಳುತ್ತದೆ.

ಮನಸ್ಸೇ ದೊಡ್ಡ ಕಡಲು. ಅಲ್ಲಿ ನಿತ್ಯ ಅಲೆಗಳು ಎದ್ದೇ ಏಳುತ್ತವೆ. ಕೆಲವೊಂದು ಅಲೆಗಳು ಭೀಕರ. ಆದರೆ, ಎಂಥ ಅಲೆಯೇ ಆದರೂ ಅದು ಮತ್ತೆ ಕಡಲಿನಲ್ಲಿ ಲೀನವಾಗಲೇಬೇಕು.

ಸ್ವಸ್ಥ ಮನಸ್ಸು ಸೋತ ಮನಸ್ಸನ್ನು ಸಂತೈಸುತ್ತದೆ. ನಿರಾಶೆಯನ್ನು ಭರವಸೆ ಮೈದಡವುತ್ತದೆ. ವಿವೇಕ ಉದ್ರೇಕವನ್ನು ಶಮನ ಮಾಡುತ್ತದೆ. ಮನಸ್ಸೇ ಮಿತ್ರನಂತೆ ಸಂತೈಸಿ ಸ್ವಸ್ಥನನ್ನಾಗಿಸುತ್ತದೆ.

’ಹರ್‌ ತೂಫಾನ್‌ ಮೈ ಕರೂಂಗಿ ಸಾಮನಾ
ಬಸ್‌ ಏಕ್‌ ಜರಾ, ಸಾಥ್‌ ಹೋ ತೇರಾ’

ಎಂಬ ಸಿನಿಮಾ ಗೀತೆ ನೆನಪಾಗುತ್ತದೆ.

ಮನಸ್ಸು ಮತ್ತೆ ಉಲ್ಲಸಿತವಾಗುತ್ತದೆ. ಹೊಸ ಕನಸಿಗೆ, ಪ್ರಯತ್ನಕ್ಕೆ ಸಿದ್ಧವಾಗಿ ತುಡಿಯತೊಡಗುತ್ತದೆ.

- ಚಾಮರಾಜ ಸವಡಿ

2 comments:

ranjith said...

ಸಂಪದದಲ್ಲಿ ಓದಿದ್ದೆ. ನಿಮ್ಮ ಬರಹ ಶೈಲಿ ಮೋಹಕವಾಗಿದೆ.
ಇಂಥಹ ಝಲಕ್ ಗಳನ್ನು ಬರೆಯುತ್ತಿರಿ.

-ರಂಜಿತ್.

Chamaraj Savadi said...

ಥ್ಯಾಂಕ್ಸ್‌ ರಂಜಿತ್‌. ಬರೆಯುತ್ತಿರುತ್ತೇನೆ.