ಸಂಗೊಳ್ಳಿ ರಾಯಣ್ಣ ತಂದ ಹೊಸ ಕನಸು

16 Oct 2010

ಸಂಗೊಳ್ಳಿ ರಾಯಣ್ಣನ ಬಗ್ಗೆ ಬಿಬಿಎಂಪಿ (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ)ಗೆ ಪುಸ್ತಕ ಮಾಡಿಕೊಡಲು ನನಗೆ ದಕ್ಕಿದ ಅವಧಿ ಕೇವಲ ಮೂರು ದಿನಗಳು ಮಾತ್ರ.

ಅಷ್ಟೊತ್ತಿಗೆ ಶುರುವಾಗಿದ್ದು ಕೆಐಎಡಿಬಿ ಹಾಗೂ ಡಿನೋಟಿಫಿಕೇಶನ್‌ ಹಗರಣಗಳು. ಕಚೇರಿ ಕೆಲಸದ ಅವಧಿ ಸಹಜವಾಗಿ ಹೆಚ್ಚಾಗಿತ್ತಾದರೂ, ಪುಸ್ತಕ ಪ್ರೀತಿಯನ್ನು ಕೈಬಿಡುವಂತಿರಲಿಲ್ಲ.

ಹೀಗಾಗಿ, ನಿದ್ದೆಗೆಡುವುದು ಅನಿವಾರ್ಯವಾಯಿತು. ಜೊತೆಗೆ, ಸಂಗೊಳ್ಳಿ ರಾಯಣ್ಣನ ಕುರಿತ ಮಾಹಿತಿ ಸಂಗ್ರಹದ ಕಠಿಣ ಕೆಲಸ.

ಸಾಮಾನ್ಯವಾಗಿ ಐತಿಹಾಸಿಕ, ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಮಾಹಿತಿ ಪುಸ್ತಕಗಳು ಸರಿಯಾಗಿ ಸಿಗುವುದಿಲ್ಲ. ಸದ್ಯ ಇರುವ ಬಹುತೇಕ ಪುಸ್ತಕಗಳು ಅಪ್‌ಡೇಟ್‌ ಆಗಿರುವುದಿಲ್ಲ. ಎಲ್ಲಕ್ಕಿಂತ ಮುಖ್ಯ ಸಮಸ್ಯೆ ಎಂದರೆ ಫೊಟೊ, ಭೂಪಟಗಳ ಕೊರತೆ. ಇವನ್ನೆಲ್ಲ ನೀಗಿಸಿಕೊಳ್ಳಬೇಕೆಂದರೆ, ಪುಸ್ತಕವನ್ನು ಅಂದುಕೊಂಡ ಸಮಯಕ್ಕೆ ನೀಡುವುದು ಸುಲಭವಲ್ಲ.

ಅದರಲ್ಲೂ ನಾನು ಒಪ್ಪಿಕೊಂಡ ಪುಸ್ತಕದ ಪುಟಮಿತಿ ನಿರ್ಧಾರವಾಗಿದ್ದು ಅಚ್ಚಿಗೆ ಹೋಗುವ ಹಿಂದಿನ ದಿನ. ಇವೆಲ್ಲ ಸಮಸ್ಯೆಗಳಿಂದಾಗಿ, ಯಾಕಾದರೂ ಈ ಕೆಲಸ ಒಪ್ಪಿಕೊಂಡೆನೋ ಎಂದು ಅನಿಸುವಷ್ಟು ಕಿರಿಕಿರಿಯಾಯ್ತು.

ತಕ್ಕ ಮಟ್ಟಿಗೆ ಮಾಹಿತಿ ಸಂಗ್ರಹಿಸಿಕೊಂಡು ಪುಸ್ತಕ ಬರೆಯಲು ಶುರು ಮಾಡಿದೆ. ಕಚೇರಿ ಕೆಲಸ ಮುಗಿಸಿಕೊಂಡು ರಾತ್ರಿ ಬರೆಯಲು ಕೂಡುತ್ತಿದ್ದೆ. ದಿನಕ್ಕೆ ಇಪ್ಪತ್ತು ಪುಟಗಳಂತೆ ನಾನು ಬರೆದಿದ್ದು ಮೂರು ದಿನಗಳ ಕಾಲ. ಅದರಲ್ಲಿ ಒಂದಿಡೀ ರಾತ್ರಿ ನಿದ್ದೆಗೆಡಬೇಕಾಯ್ತು.

ಪುಟ ವಿನ್ಯಾಸ ಮಾಡಿದಾಗ, ಪುಟಗಳ ಸಂಖ್ಯೆ ೭೫ ದಾಟಿತ್ತು. ಅಷ್ಟೊತ್ತಿಗೆ, ಪುಸ್ತಕದ ಮಿತಿಯನ್ನು ೪೮ ಪುಟಗಳ ಮಿತಿಗೆ ಇಳಿಸುವಂತೆ ಬಿಬಿಎಂಪಿಯಿಂದ ಸೂಚನೆ ಬಂತು.

ಆಗ ಶುರುವಾಯ್ತು ನೋಡಿ ಪೀಕಲಾಟ. ಕೊನೇ ಹಂತದಲ್ಲಿ ಪುಸ್ತಕ ಕಿರಿದುಗೊಳಿಸುವುದು ಹೇಗೆ?

ಹೀಗಾಗಿ, ಮೂರು ಮುಖ್ಯ ಅಧ್ಯಾಯಗಳನ್ನು ಮುಲಾಜಿಲ್ಲದೇ ಕಿತ್ತು ಹಾಕಿದೆ. ವಿಸ್ತಾರವಾಗಿದ್ದ ಭಾಗಗಳನ್ನು ಕಿರಿದುಗೊಳಿಸಿದೆ. ಹಲವಾರು ಪೂರಕ ಹಾಗೂ ಇದುವರೆಗೆ ಹೆಚ್ಚಿನ ಜನರಿಗೆ ಗೊತ್ತಿರದ ಸಂಗತಿಗಳು ಮರೆಯಾಗಬೇಕಾಯ್ತು. ಇದರಿಂದಾಗಿ ಪುಸ್ತಕದ ಒಟ್ಟು ಧ್ವನಿಯೇ ಗೊಗ್ಗರಾದಂತೆನಿಸಿ ಬೇಸರವಾಯ್ತು.

ಆಗ ಮತ್ತೊಂದು ವಿನಂತಿ ಬಂತು. ಪುಸ್ತಕದಲ್ಲಿ ಗಣ್ಯರ ಶುಭಾಶಯಗಳನ್ನು ಹಾಕಿಕೊಳ್ಳಬೇಕು!

ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ, ಮಹಾಪೌರ- ಹೀಗೆ ನಾಲ್ಕೈದು ಜನರ ಶುಭಾಶಯಗಳು ಬಂದು ಬಿದ್ದವು. ಅವನ್ನೆಲ್ಲ ಪುಸ್ತಕದಲ್ಲಿ ಸೇರಿಸಲು ಮತ್ತೆರಡು ಅಧ್ಯಾಯಗಳು ಸ್ವಾಹಾ ಆದವು.

ಕೊನೆಗೂ ಪುಟ ವಿನ್ಯಾಸ ಮುಗಿದು, ಪುಸ್ತಕ ಅಚ್ಚಿಗೆ ಹೋಗುವಾಗ, ಸಂಗೊಳ್ಳಿ ರಾಯಣ್ಣನ ಮೂರ್ತಿ ಹಿಡಿದಿದ್ದ ಕತ್ತಿಯನ್ನು ನಾನೇ ಎತ್ತಿಕೊಳ್ಳಲೇ ಎನಿಸುವಷ್ಟು ರೇಗಿಹೋಗಿತ್ತು.

ಇದನ್ನೆಲ್ಲ ಮರೆಸಿದ್ದು ನಾನು ರಾಯಣ್ಣನ ಬಗ್ಗೆ ತಿಳಿಯುತ್ತ, ಬರೆಯುತ್ತ ಕೂತ ಆ ಮೂರು ದಿನಗಳು. ಎಂಥಾ ಅದ್ಭುತ ವ್ಯಕ್ತಿಯಾಗಿದ್ದ ರಾಯಣ್ಣ! ಕಿತ್ತೂರು ಸಂಸ್ಥಾನವನ್ನು ಮತ್ತೆ ಸ್ವತಂತ್ರಗೊಳಿಸಬೇಕೆಂದು ಮುಂದಾದಾಗ, ಮಮತೆ ಕಾಡಬಾರದು ಎಂದು ತುಂಬು ಬಸುರಿ ಹೆಂಡತಿಯನ್ನು ತೌರು ಮನೆಗೆ ಕಳಿಸುತ್ತಾನೆ. ಹುಟ್ಟಿದ ಮಗುವನ್ನೂ ನೋಡಲು ಹೋಗುವುದಿಲ್ಲ. ಗುಪ್ತ ವೇಷದಲ್ಲಿ ಆತ ಒಮ್ಮೆ ಹೆಂಡತಿ ಇದ್ದ ಊರಿಗೇ ಹೋದರೂ ಮನೆಗೆ ಹೋಗುವುದಿಲ್ಲ. ಹೆಂಡತಿ-ಮಗುವಿನ ಮೋಹ ತನ್ನ ಉದ್ದೇಶವನ್ನು ಬಲಿ ತೆಗೆದುಕೊಂಡಾವು ಎಂಬ ಅಳುಕಿಗೆ.

ಇಂಥ ಹಲವಾರು ಘಟನೆಗಳು ಮೂಲ ಬರವಣಿಗೆಯಲ್ಲಿದ್ದವು. ಇಂಥ ಇನ್ನೂ ಹಲವಾರು ಅಂಶಗಳು ಇನ್ನೂ ಸೇರಬೇಕಿದ್ದವು. ಸಂಗೊಳ್ಳಿ ರಾಯಣ್ಣನ ಬಗ್ಗೆ ವಸ್ತುಸ್ಥಿತಿ ನೀಡುವುದಕ್ಕಿಂತ ರೋಚಕ ಮಾಹಿತಿ ಹೊಂದಿರುವ ಪುಸ್ತಕಗಳೇ ಹೆಚ್ಚಾಗಿರುವಾಗ, ಈ ಪುಸ್ತಕವಾದರೂ ವಸ್ತುನಿಷ್ಠ ಆಗಲೆಂದು ನನಗಿದ್ದ ಸಾಕಷ್ಟು ಮಿತಿಯಲ್ಲಿ ಪ್ರಯತ್ನಿಸಿದ್ದೆ. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಆ ಆಸೆ ಈಡೇರಿದ್ದು ಅರೆಬರೆಯಾಗಿ. ಅದೇ ಬೇಸರ.

ದುರಂತ ಎಂದರೆ, ’ಸ್ವಾತಂತ್ರ‍್ಯದ ಕಿಡಿ ಸಂಗೊಳ್ಳಿ ರಾಯಣ್ಣ’ ಎಂಬ ಶೀರ್ಷಿಕೆಯ ಈ ಪುಸ್ತಕ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಬಿಬಿಎಂಪಿ ಪುಸ್ತಕಗಳನ್ನು ತಾನೇ ಹಂಚಿದೆ.

ಹೀಗಾಗಿ, ಈ ಪುಸ್ತಕವನ್ನು ಇನ್ನಷ್ಟು ವಿಸ್ತರಿಸಿ, ಮುಕ್ತ ಮಾರುಕಟ್ಟೆಯಲ್ಲಿಯೂ ದೊರೆಯುವಂತೆ ಮಾಡೋಣ ಎಂದು ಒಂದಿಬ್ಬರು ಆಸಕ್ತರು ಸೂಚಿಸಿದ್ದಾರೆ. ಹೀಗಾಗಿ, ಪುಸ್ತಕವನ್ನು ಇನ್ನಷ್ಟು ವಿವರವಾಗಿ ಬರೆಯಬೇಕಿದೆ.

ಆ ನೆಪದಲ್ಲಿ ಮತ್ತೊಮ್ಮೆ ಸಂಗೊಳ್ಳಿ ರಾಯಣ್ಣನ ವೀರ ವ್ಯಕ್ತಿತ್ವವನ್ನು ಸವಿಯಬಹುದು ಎಂಬ ಪುಳಕ ನನಗಿದೆ.

ಅಲ್ಲಿಯವರೆಗೆ, ಈಗ ಅಚ್ಚಾಗಿ ಮಾಯವಾಗಿರುವ ಪುಸ್ತಕದ ಪಿಡಿಎಫ್‌ ಪ್ರತಿಯನ್ನು ನನ್ನ ಬ್ಲಾಗ್‌ಗೆ ಹಾಕಬೇಕೆನ್ನುವ ಯೋಚನೆಯಿದೆ. ಅದಕ್ಕೆ ಒಂಚೂರು ಸಮಯ ಬೇಕು. ನನ್ನ ಸೋಮಾರಿತನ ಅವಕಾಶ ಮಾಡಿಕೊಡಬೇಕು.

ರಾಯಣ್ಣನಂಥ ವ್ಯಕ್ತಿಗಳು ಹೆಚ್ಚೆಚ್ಚು ಹರಡಿದಷ್ಟೂ ನಮ್ಮ ನಡುವಿನ ಮಲ್ಲಪ್ಪ ಶೆಟ್ಟಿಗಳು, ವೆಂಕಟರಾಯರು, ಬಾಳಪ್ಪ ಕುಲಕರ್ಣಿಯಂಥವರ ಪ್ರಭಾವ ಕಡಿಮೆಯಾಗುತ್ತದೆ. ಆ ಕಾರಣಕ್ಕಾಗಿಯಾದರೂ ಮರೆತಿರುವ ಇಂಥ ಮಹನೀಯರಿಗೆ ಮರು ಜೀವ ಕೊಡಬೇಕಿದೆ. ಆ ಕೆಲಸ ಈಗ ರಾಯಣ್ಣನಿಂದ ಶುರುವಾಗಿದೆ. ಮುಂದೆ ಯಾರ‍್ಯಾರು ಇದಕ್ಕೆ ಸೇರಿಕೊಳ್ಳುತ್ತಾರೋ ನೋಡಬೇಕು.

ಈ ಕೆಲಸ ಮಾಡಿ ಮುಗಿಸುವಂಥ ಶಕ್ತಿ ನನಗೆ ದಕ್ಕಲಿ. ಇಚ್ಛಾಶಕ್ತಿ ಕುಸಿಯದಿರಲಿ ಅಂತ ಪದೆ ಪದೆ ಅಂದುಕೊಳ್ಳುತ್ತಿದ್ದೇನೆ.

- ಚಾಮರಾಜ ಸವಡಿ

2 comments:

ವಿ.ರಾ.ಹೆ. said...

ಸರ್, ಒಳ್ಳೆಯ ಅವಕಾಶ. ರಾಯಣ್ಣನ ಬಗ್ಗೆ ಪೂರ್ತಿ ಮಾಹಿತಿಗಳನ್ನು ಸೇರಿಸಿ ಪುಸ್ತಕ ಮಾಡಿ. ಸ್ವಲ್ಪ ಟೈಮ್ ಆದರೂ ಪರ್ವಾಗಿಲ್ಲ. ವಸ್ತುನಿಷ್ಠತೆ ಜೊತೆಗೆ ರೋಚಕತೆ ಕೂಡ ಈಗಿನ ಅಗತ್ಯ.

Chamaraj Savadi said...

ಹೌದು ವಿಕಾಸ್‌, ನನಗೂ ಒಂಚೂರು ವಿವರವಾಗಿಯೇ ಬರೆಯೋಣ ಅಂತ ಅನಿಸುತ್ತಿದೆ. ಕೊಂಚ ಹೆಚ್ಚು ಸಮಯ ಹಿಡಿದರೂ ಪರವಾಗಿಲ್ಲ. ನೀವು ಹೇಳಿದಂತೆ, ವಸ್ತುನಿಷ್ಠತೆಯನ್ನೇ ಸರಾಗವಾಗಿ ಓದಿಸಿಕೊಳ್ಳುವಂತೆ ಬರೆಯಬೇಕಿದೆ.

ಖಂಡಿತ ಪ್ರಯತ್ನಿಸುವೆ.