ತುಂಬ ದಿನವಾಗಿತ್ತು ಪೆನ್ನು ಹೊರ ತೆಗೆದು ಬರೆಯಲು ಕೂತು.
ಹಳೆಯ ಪೆನ್ನು. ಅಂದರೆ, ಬಳಸದೇ ತುಂಬ ದಿನವಾಗಿತ್ತು. ಮಸಿ ಒಣಗಿದೆಯೇ ಎಂಬ ಅನುಮಾನ ಕಾಡಿದರೂ, ಪಕ್ಕದಲ್ಲೇ ಇದ್ದ ಪತ್ರಿಕೆಯೊಂದರ ಜಾಹೀರಾತಿನ ಮೇಲೆ ಗೀಚಿ ನೋಡಿದೆ. ಮೊದಲೊಂದಿಷ್ಟು ಉದ್ದ ಮಸಿ ಕಾರದೇ ಎಳೆದುಕೊಂಡು ಹೋದ ಪೆನ್ನು, ನಂತರ ಚೆಂದನೆಯ ಡೊಂಕು ಗೆರೆ ಕೊರೆಯಿತು. ಪರವಾಗಿಲ್ಲ, ಬದುಕಿದೆ ಎಂದು ಪೆನ್ನನ್ನು ಕೈಲಿ ಹಿಡಿದುಕೊಂಡು ಬರೆಯಲೆಂದೇ ತಂದುಕೊಂಡಿದ್ದ ಎ-೪ ಗಾತ್ರದ ಸುರುಳಿ ಕಟ್ಟಿನ ಹಾಳೆ ಪುಸ್ತಕ ತೆರೆದೆ.
ಮನಸ್ಸು ಅರೆಕ್ಷಣ ಎಲ್ಲೋ ಸಿಕ್ಕಿ ಹಾಕಿಕೊಂಡಿತು.
ತುಂಬ ದಿನಗಳ ಹಿಂದೆ, ಅಂದರೆ, ಪತ್ರಿಕಾ ಕಚೇರಿಯಲ್ಲಿ ಕೈಬರಹದ ಬರವಣಿಗೆ ನಿಷೇಧಿಸುವುದಕ್ಕೆ ಮುಂಚೆ, ನಿತ್ಯ ಹೀಗೇ ಬರೆಯುತ್ತಿದ್ದೆ. ಆಗ ಪೆನ್ನೆತ್ತಿಕೊಂಡರೆ ವರದಿಗಳು ಸರಾಗವಾಗಿ ಹರಿಯುತ್ತಿದ್ದವು. ಬರೆದಿದ್ದನ್ನು ಓದಿ, ಒಂದಿಷ್ಟು ಕಾಗುಣಿತ ತಪ್ಪುಗಳನ್ನು ಅಲ್ಲೇ ತಿದ್ದಿ, ಫೋಟೊಗಳ ಹಿಂದೆ ವಿವರ ಹಾಗೂ ವರದಿ ಶೀರ್ಷಿಕೆ ಬರೆದು, ಕ್ಲಿಪ್‌ನಲ್ಲಿ ಬಂಧಿಸಿ, ಲಕೋಟೆಯಲ್ಲಿಟ್ಟು ಬಸ್ ಡ್ರೈವರ್ ಮೂಲಕ ಕಳಿಸುತ್ತಿದ್ದೆ. ಮರುದಿನ ಬೆಳಗಿನ ನಿದ್ದೆಗಣ್ಣಲ್ಲಿ ಬಾಗಿಲ ಮುಂದೆ ಬಿದ್ದ ಪತ್ರಿಕೆ ಎತ್ತಿಕೊಂಡಾಗ, ನಿನ್ನೆಯ ಕೈಬರಹ ವರದಿ ಅಚ್ಚುಕಟ್ಟಾಗಿ ಅಚ್ಚಾಗಿ ಬಂದಿರುತ್ತಿತ್ತು. ಓಹ್, ನಿದ್ದೆಗಣ್ಣಿನಲ್ಲಿಯೂ ಅಪಾರ ಸಂತಸ.
ಅದಾದ ನಂತರ, ಬದುಕು ಊರುಗಳನ್ನು ಸುತ್ತಿಸಿತು. ಹಲವಾರು ಪತ್ರಿಕಾ ಕಚೇರಿಗಳ ಮೆಟ್ಟಿಲೇರಿ ಇಳಿಸಿತು. ಆದರೆ, ಪೆನ್ನು ಯಾವತ್ತೂ ಜೇಬಿನಿಂದ ಕದಲಿರಲಿಲ್ಲ. ಇದೇ ಪೆನ್ನಿನ ಮೂಲಕ ಕೆಲಸಕ್ಕೆ ಅರ್ಜಿ ಬರೆದಿದ್ದೆ. ನೌಕರಿ ದಕ್ಕಿದ್ದಕ್ಕೆ ಧನ್ಯವಾದ ಬರೆದಿದ್ದೆ. ಮುಂದೆ ವರ್ಷಗಟ್ಟಲೇ ವರದಿ/ಲೇಖನಗಳನ್ನು ಬರೆದೆ. ರಾಜೀನಾಮೆಗಳನ್ನೂ ಬರೆದಿದ್ದೇನೆ. ಎಷ್ಟೊಂದು ಬರೆದರೂ ಪೆನ್ನು ಎಂದೂ ಬಸವಳಿಯಲಿಲ್ಲ.
ಆದರೆ, ಕಂಪ್ಯೂಟರ್ ಎಂಬ ಯಂತ್ರ ಬಂದ ಕೂಡಲೇ ಅದರ ಮಸಿಯೇ ಆರಿದಂತಾಯಿತು.
’ಮುಂದಿನ ತಿಂಗಳ ಒಂದನೇ ತಾರೀಖಿನಿಂದ, ಫ್ಯಾಕ್ಸ್ ಅಥವಾ ಕೊರಿಯರ್ ಮೂಲಕ ಕಳಿಸುವ ಕೈಬರಹದ ವರದಿಗಳನ್ನು ಅಚ್ಚು ಹಾಕುವುದಿಲ್ಲ. ಏನಿದ್ದರೂ ಕಂಪ್ಯೂಟರ್‌ನಲ್ಲೇ ಟೈಪ್ ಮಾಡಿ ಮೋಡೆಮ್ ಮೂಲಕ ಕಳಿಸಬೇಕು’ ಎಂಬ ಪತ್ರ ಸಂಪಾದಕರಿಂದ ಬಂದಾಗ, ನನಗಿಂತ ಪೆನ್ನಿಗೇ ಹೆಚ್ಚು ಬೇಸರವಾಗಿತ್ತು. ಮೊದಲ ಬಾರಿ ಕಂಪ್ಯೂಟರ್ ಮುಂದೆ ಕೂತು, ಕೀಲಿಮಣೆಗಳನ್ನು ತೊಡರುತ್ತ ಒತ್ತುವಾಗ, ಪೆನ್ನು ಅಪನಂಬಿಕೆಯಿಂದ ನೋಡಿತ್ತು.
ಮೊದಮೊದಲು ತುಂಬ ಬೇಸರವಾಗಿತ್ತು. ಆದರೆ, ದಿನಗಳು ಬಲುಬೇಗ ಬದಲಾದವು. ನೋಟ್ಸ್ ತೆಗೆದುಕೊಳ್ಳುವಾಗ ಹೊರತುಪಡಿಸಿ, ಇತರ ಸಮಯದಲ್ಲಿ ಜೇಬಿನಿಂದ ಇಳಿಯುವ ಅವಕಾಶ ಪೆನ್ನಿಗೆ ಬರಲೇ ಇಲ್ಲ. ಮೊದಮೊದಲು ಕಾಡಿದ್ದ ಹಳಹಳಿ ನಂತರ ರೂಢಿಯಾಯಿತು. ಕೀಬೋರ್ಡ್ ಸರಾಗವಾಯಿತು. ಮನಸ್ಸಿನಲ್ಲಿ ವಿಚಾರಗಳು ಮೂಡುವ ವೇಗದಲ್ಲೇ ಬೆರಳುಗಳೂ ಕೀಬೋರ್ಡ್ ಮೇಲೆ ಹರಿದಾಡುವುದು ರೂಢಿಯಾಗಿ, ಪೆನ್ನು ಕೇವಲ ಅಲಂಕಾರಿಕ ವಸ್ತುವಾಗಿಬಿಟ್ಟಿತು.
ಆದರೂ, ಅದರ ಸಂಗ ತೊರೆಯಲಿಲ್ಲ.
ಅದು ಜೇಬಿನಲ್ಲಿದ್ದರೆ ಎಂಥದೋ ನೆಮ್ಮದಿ. ತುಂಬ ಬೇಸರವಾದಾಗ, ಅದನ್ನು ಕೈಗೆ ತೆಗೆದುಕೊಂಡು, ಕ್ಯಾಪ್ ತೆರೆದು, ಬೆರಳುಗಳ ನಡುವೆ ತಿರುಗಿಸುತ್ತ ಕೂತರೆ ಎಂಥದೋ ಸಮಾಧಾನ. ವಿಚಾರಗಳು ತಾನೇ ತಾನಾಗಿ ಬರುತ್ತವೆ. ಹೊಸ ವಿಚಾರಗಳು ಮೂಡುತ್ತವೆ. ಬರೆಯಬೇಕೆಂದುಕೊಂಡಿದ್ದು ಕೈಬೆರಳಿನ ಮೂಲಕ ಇಳಿದು, ಇನ್ನೇನು ಪೆನ್ನಿನ ಮೂಲಕ ಮಸಿಯಾಗಿ ಹರಿದು ಅಕ್ಷರಗಳಾಗಿಬಿಡುತ್ತವೆ ಎನ್ನುವಂತೆ ಉಕ್ಕುತ್ತವೆ. ಆದರೆ, ಭಾವನೆ ಉಕ್ಕುತ್ತಲೇ ಪೆನ್ನು ಪಕ್ಕಕ್ಕಿಟ್ಟ ಕೈಗಳು ಕಂಪ್ಯೂಟರ್ ಕೀಬೋರ್ಡ್‌ನ ಮೇಲೆ ಹರಿದಾಡುತ್ತವೆ. ಪೆನ್ನು ಅಸಹಾಯಕತೆಯಿಂದ, ಅವಮಾನದಿಂದ ನೋಡುತ್ತಿರುವಂತೆ, ಚೆಂದನೆಯ ಅಕ್ಷರಗಳು ಮಾನಿಟರ್ ಮೇಲೆ ಮೂಡತೊಡಗುತ್ತವೆ. ಕ್ಯಾಪ್ ಇಲ್ಲದ ಬೋಳು ಪೆನ್ನನ್ನು ನಾನೂ ಮರೆತುಬಿಡುತ್ತೇನೆ.
ವರ್ಷಗಟ್ಟಲೇ ಇದು ನಡೆದುಕೊಂಡು ಬಂದಿತ್ತು.
ಇವತ್ತು ಏಕೋ ಮನಸ್ಸು ಖಾಲಿ ಖಾಲಿ. ವೀಕ್ ಆಫ್ ಇದ್ದುದರಿಂದ, ನಿತ್ಯದ ವೃತ್ತಿ ವಾತಾವರಣ ಇಲ್ಲದೇ ಬೇಸರವಾಗಿದೆಯೇನೋ ಅಂದುಕೊಂಡು ಸ್ವಲ್ಪ ಹೊತ್ತು ಸುಮ್ಮನೇ ಅದು ಇದು ಓದುತ್ತ ಕೂತೆ. ಆದರೂ ಸಮಾಧಾನವಾಗಲಿಲ್ಲ. ಕೀ ಬೋರ್ಡ್ ಪಕ್ಕಕ್ಕಿಟ್ಟ ಪೆನ್ನು ಕರೆದಂತಾಯಿತು. ಎತ್ತಿಕೋ ಎಂದಂತಾಯಿತು. ಎತ್ತಿಕೊಂಡೆ. ಮನಸ್ಸಿಗೆ ಹಾಯ್ ಅನ್ನಿಸಿತು. ಸ್ವಲ್ಪ ಹೊತ್ತು ಅದನ್ನೇ ತಿರುಗಿಸುತ್ತ ಕೂತೆ. ಭಾವನೆಗಳು ಉಕ್ಕಿದವು. ಭೋರ್ಗರೆದವು. ಪೆನ್ನನ್ನು ಪಕ್ಕಕ್ಕಿಟ್ಟು ಕಂಪ್ಯೂಟರ್ ಆನ್ ಮಾಡಿ ನೋಡುತ್ತೇನೆ:
ಪೆನ್ ಮುಖದಲ್ಲಿ ನೋವಿನ ಛಾಯೆ !
ಇಲ್ಲ ಮಿತ್ರ, ಇವತ್ತೇನಿದ್ದರೂ ನಿನ್ನ ಬಗ್ಗೆಯೇ ಬರೆಯುತ್ತೇನೆ ಎಂದುಕೊಂಡೆ. ಕೀ ಬೋರ್ಡ್ ಸಹಕರಿಸಿತು. ಬೆರಳುಗಳು ನಲಿದಾಡಿದವು. ಬರೆದಾದ ಮೇಲೆ, ತೃಪ್ತಿಯಿಂದ ಪೆನ್ ಕಡೆ ನೋಡಿದೆ.
ಅದರ ಮುಖದ ಮೇಲೂ ತೃಪ್ತಿಯ ಬೆಳಕು !
- ಚಾಮರಾಜ ಸವಡಿ
Subscribe to:
Post Comments (Atom)
2 comments:
ಸರ್, ಅಣುಅಣುವಿನಲ್ಲೂ ನೀವು ನೆಡುವ ದೃಷ್ಟಿ ಒಂದು ಕ್ಷಣ ಸುಮ್ಮನಾಗಿಸಿಬಿಡುತ್ತದೆ. ಓಡುವ ಮನಸ್ಸನ್ನು ಹಿಡಿದು ನಿಲ್ಲಿಸುವ ಶಕ್ತಿ ನಿಮ್ಮ ಅಕ್ಷರಗಳಿಗಿದೆ. ಪ್ರಸ್ತುತ ದಿನಮಾನಗಳಲ್ಲಿ ಸಂವೇದನೆ ಕಳೆದುಕೊಳ್ಳುತ್ತಿರುವ ಮನಸ್ಸುಗಳಿಗೆ ಇಂಥ ವಿಚಾರಗಳು ಅತ್ಯವಶ್ಯ. ಬರಹ ಖುಷಿ ಕೊಟ್ಟಿತು. ಮತ್ತೆ ಕಾಯುತ್ತಿದ್ದೇವೆ ಬರೆಯಿರಿ.
ಥ್ಯಾಂಕ್ಸ್‌ರೀ,
ಸಂವೇದನೆ ಕಳೆದುಕೊಳ್ಳುವುದು, ಪಡೆದುಕೊಳ್ಳುವುದು ಎಲ್ಲ ದಿನಗಳಲ್ಲಿಯೂ ನಡೆದುಕೊಂಡು ಬಂದಿದೆ. ಅವತ್ತಿನ ಅನಿವಾರ್ಯತೆ ಹಾಗೂ ಅವಶ್ಯಕತೆಗಳ ಮೇಲೆ ಈ ಆಟ ನಡೆಯುತ್ತಿರುತ್ತದೆ. ಆದರೆ, ಮನುಷ್ಯ ಸಂವೇದನೆ ಕಳೆದುಕೊಳ್ಳಲಾರ. ಅದೇನಿದ್ದರೂ ತಾತ್ಕಾಲಿಕ ಸ್ಥಿತಿ.
ಹೀಗಾಗಿ ಬದುಕು ಸಹ್ಯವಾಗಿರುವುದು.
- ಚಾಮರಾಜ ಸವಡಿ
Post a Comment