'ಎಷ್ಟೊಂದು ಕೆಟ್ಟ ಬರಹಗಳು ಬರ್ತಿವೆಯಲ್ಲ ಮಾರಾಯಾ!' ಎಂದು ಬೇಸರಪಟ್ಟುಕೊಂಡ ಗೆಳೆಯ.
ಅವನು ಮಾತಾಡುತ್ತಿದ್ದುದು ಬ್ಲಾಗ್ ಮತ್ತು ಸಮೂಹತಾಣಗಳ ಬರವಣಿಗೆ ಬಗ್ಗೆ. ಚಿಲ್ಲರೆ ವಿಷಯಗಳ ಬಗ್ಗೆ ಬರೆಯುವುದು, ಚರ್ಚಿಸುವುದು ಮತ್ತು ಅದನ್ನೇ ಚ್ಯೂಯಿಂಗ್‌ಗಮ್ ಥರ ರಸ ಮುಗಿದ ನಂತರವೂ ಜಗಿಯುತ್ತಿರುವುದು ಅವನಿಗೆ ಬೇಸರ ತರಿಸಿತ್ತು. ನನಗೆ ಗೊತ್ತಿರುವಂತೆ ಅವನು ಪತ್ರಿಕೆಗಳ ನಿಯಮಿತ ಓದುಗ. ಉತ್ತಮ ಬರವಣಿಗೆಯನ್ನು ತಕ್ಷಣ ಗುರುತಿಸಬಲ್ಲ ಪ್ರಬುದ್ಧ.
ನಾನು ಪತ್ರಿಕೋದ್ಯಮಕ್ಕೆ ಕೊಂಚ ಬ್ರೇಕ್ ಕೊಟ್ಟು ಇಂಟರ್‌ನೆಟ್‌ನ ಕನ್ನಡ ಚಟುವಟಿಕೆಗಳಲ್ಲಿ ತೀವ್ರವಾಗಿ ತೊಡಗಿಕೊಳ್ಳುತ್ತಿರುವ ದಿನಗಳಿವು. ಬಹಳ ದಿನಗಳ ನಂತರ ಸಿಕ್ಕಿದ್ದ ಅವನ ಪ್ರತಿಕ್ರಿಯೆ ಕೇಳಿ ನಗು ಬಂತು. 'ಸದ್ಯ ನಾನು ಆ ಕೆಟ್ಟ ಬರಹದ ಲೋಕವನ್ನೇ ಸೀರಿಯೆಸ್ ಆಗಿ ತೆಗೆದುಕೊಂಡಿದ್ದೇನೆ. ಅಂದರೆ, ಅದರಲ್ಲೇ ಕೆಲಸ ಮಾಡಲು ಮುಂದಾಗಿದ್ದೇನೆ. ನೀನು ಹೀಗೆ ಪ್ರತಿಕ್ರಿಯೆ ಕೊಟ್ಟರೆ, ನಾನು ಅದರಲ್ಲಿ ಬದುಕು ಕಟ್ಟಿಕೊಳ್ಳುವುದು ಹೇಗೆ ಮಾರಾಯಾ?' ಎಂದು ಸುಳ್ಳೇ ಗಾಬರಿ ತೋರಿದೆ.
ಅವನು ಮತ್ತೆ ಬ್ಲಾಗ್ ಮತ್ತು ಸಮೂಹತಾಣಗಳಲ್ಲಿ ಕಾಣಿಸಿಕೊಳ್ಳುವ ಕಳಪೆ ಬರಹಗಳ ಬಗ್ಗೆ ಮಾತನಾಡಿದ. ಪತ್ರಿಕೆಗಳಲ್ಲಿಯೂ ಗುಣಮಟ್ಟ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ. ಅವನೊಂದಿಗೆ ಮಾತನಾಡಿದ ಕೆಲ ವಿಷಯಗಳನ್ನಷ್ಟೇ ಇಲ್ಲಿ ಬರೆಯುವ ಮೂಲಕ, ಸಾರ್ವತ್ರಿಕೆ ಅಭಿಪ್ರಾಯಕ್ಕೆ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದೇನೆ.
ಬರಹದ ಗುಣಮಟ್ಟ ಕುಸಿಯುತ್ತಿದೆ ಎಂಬ ಆರೋಪ ನನಗೆ ಯಾವತ್ತೂ ಸರಿ ಅನಿಸಿಲ್ಲ. ಏಕೆಂದರೆ, ಹಿಂದೆ, ಅಂದರೆ ಪತ್ರಿಕೆಗಳ ಸಂಖ್ಯೆ ಹೆಚ್ಚುವ ಮುನ್ನ, ಇಂಟರ್‌ನೆಟ್ ಜನಪ್ರಿಯವಾಗುವ ಮುನ್ನ, ಕೆಲವೇ ಕೆಲವು ಜನ ನಿಯಮಿತವಾಗಿ ಬರೆಯುತ್ತಿದ್ದರು. ಪತ್ರಿಕೆಗಳ ಸಂಖ್ಯೆಯ ಜೊತೆಗೆ ಬರಹಗಾರರ ಸಂಖ್ಯೆಯೂ ಸೀಮಿತವಾಗಿತ್ತು. ಪತ್ರಿಕೆಗೆ ಬರೆಯಲು ಒಂದು ಮಟ್ಟದ ಪಾಂಡಿತ್ಯ ಮತ್ತು ಬರವಣಿಗೆ ಶೈಲಿ ಅವಶ್ಯ ಎಂದು ನಂಬಿದ್ದ ಹಾಗೂ ಅದನ್ನೇ ನಿರೀಕ್ಷಿಸುತ್ತಿದ್ದ ಕಾಲವದು. ಹೀಗಾಗಿ, ಬರೆದಿದ್ದೆಲ್ಲ ಚೆನ್ನಾಗಿಯೇ ಕಾಣುತ್ತಿತ್ತು.
ಕ್ರಮೇಣ ಪತ್ರಿಕೆಗಳ ಸಂಖ್ಯೆ ಹೆಚ್ಚಿತು. ಆದರೆ, ಆ ಪ್ರಮಾಣಕ್ಕೆ ತಕ್ಕಂತೆ ಬರಹಗಾರರ ಸಂಖ್ಯೆ ಹೆಚ್ಚಲಿಲ್ಲ. ಸಹಜವಾಗಿ, ಗುಣಮಟ್ಟ ಕಡಿಮೆ ಇರುವ ಜನ ಉದ್ಯಮ ಪ್ರವೇಶಿಸಿದರು. ಅಂಥ ಬಹುತೇಕರಿಗೆ ಪತ್ರಿಕೆಯಲ್ಲಿ ಕೆಲಸ ಮಾಡುವುದು ಒಂದು ವೃತ್ತಿಯಾಗಿತ್ತೇ ವಿನಾ ಅವರ ಪ್ರವೃತ್ತಿಗೆ ವೇದಿಕೆಯಾಗಿರಲಿಲ್ಲ. ಸಹಜವಾಗಿ ಬರವಣಿಗೆಯ ಗುಣಮಟ್ಟದಲ್ಲಿ ಮುಂಚೆ ಕಾಣುತ್ತಿದ್ದ ಗಟ್ಟಿತನ ಕಾಣಲಿಲ್ಲ. ಹೊಸಬರಲ್ಲಿ ತುಂಬ ಜನ ಚೆನ್ನಾಗಿ ಬರೆದರೂ, ಜೊಳ್ಳಿನ ಎದುರು ಅವರು ಅಷ್ಟಾಗಿ ಗಮನ ಸೆಳೆಯಲಿಲ್ಲ.
ಈ ಹಂತದಲ್ಲಿ ಇಂಟರ್‌ನೆಟ್ ಜನಪ್ರಿಯವಾಗಿ ಸಮೂಹತಾಣ, ಬ್ಲಾಗ್‌ಗಳು ಕಾಣಿಸಿಕೊಂಡವು. ಅದುವರೆಗೂ ಪತ್ರಿಕೆಗಳಲ್ಲಿ ಪ್ರಟಕವಾಗಬೇಕೆಂದರೆ, ಬರಹಗಳಿಗೆ ಒಂದು ಹಂತದ ಗುಣಮಟ್ಟ ಇರಲೇಬೇಕಿತ್ತು. ಆದರೆ, ಬ್ಲಾಗ್‌ಗಳಲ್ಲಿ ಬರೆಯಲು ಇಂಥ ಯಾವ ಅಡೆತಡೆಯೂ ಇರಲಿಲ್ಲ. ಯಾರು, ಯಾರ ಬಗ್ಗೆ ಏನು ಬೇಕಾದರೂ ಬರೆಯಬಹುದು ಎಂದಾದಾಗ, ಎಲ್ಲರೂ ಬರೆಯತೊಡಗಿದರು. ಜೊಳ್ಳು, ಪೊಳ್ಳು, ಕೊಳೆ, ಕೊಚ್ಚೆ, ವಿಷ, ನಂಜು- ಹೀಗೆ ಅದುಮಿಟ್ಟಿದ್ದ, ಮುಚ್ಚಿಟ್ಟಿದ್ದ ವಿಕೃತಿಯೆಲ್ಲವೂ ಧಾರಾಳವಾಗಿ ಹೊರಬರತೊಡಗಿತು. ಇವರ ನಡುವೆ ಅಸಲಿ ಪ್ರತಿಭಾವಂತರ ಬರವಣಿಗೆ ಗಮನ ಸೆಳೆದಿದ್ದು ಕಡಿಮೆ.
ನನ್ನ ಮಿತ್ರನಿಗೆ ಇದನ್ನೆಲ್ಲ ವಿವರಿಸಿ ಹೇಳಿದೆ. ಎಲ್ಲಾ ಕಾಲದಲ್ಲೂ ಅತ್ಯುತ್ತಮವಾದದ್ದು ಇದ್ದೇ ಇರುತ್ತದೆ. ಅದಕ್ಕಾಗಿ ಕೊಂಚ ಹುಡುಕಬೇಕು. ಜೊಳ್ಳನ್ನು ಸರಿಸಿ ನೋಡಿದರೆ, ಗಟ್ಟಿ ಕಾಳು ಸಿಕ್ಕೀತು. ಆದರೆ, ಜೊಳ್ಳಿನ ಪ್ರಮಾಣ ಜಾಸ್ತಿ ಇದೆ ಎಂಬ ಕಾರಣಕ್ಕೆ ಇಡೀ ವ್ಯವಸ್ಥೆಯನ್ನೇ ದೂರಬೇಡ. ಆ ಮೂಲಕ ಇರಬಹುದಾದ ಅಲ್ಪಸ್ವಲ್ಪ ಗಟ್ಟಿಕಾಳನ್ನೂ ನೀನು ಕಳೆದುಕೊಂಡು ಬಿಡುತ್ತೀ. ಪೇಲವ, ಟೊಳ್ಳು, ಕಡಿಮೆ ಗುಣಮಟ್ಟದ ಬರವಣಿಗೆ ಮಾಡುವವರು ಮಾಡುತ್ತ ಹೋಗಲಿಬಿಡು. ನಿನಗೆ ಬೇಕೆನಿಸಿದ್ದನ್ನು ಓದು, ಉಳಿದಿದ್ದನ್ನು ನಿರ್ಲಕ್ಷ್ಯಿಸು. 'ಅಯ್ಯೋ ಕಾಲ ಕೆಟ್ಟುಹೋಯಿತು' ಎಂಬ ವೃದ್ಧ ಗೊಣಗುವಿಕೆಗಿಂತ, ಸೂಕ್ತ ಆಯ್ಕೆ ಮತ್ತು ಜಾಣ ನಿರ್ಲಕ್ಷ್ಯ ಉತ್ತಮ ಎಂದು ಸಲಹೆ ನೀಡಿದೆ.
'ಅಲ್ಲ ಮಾರಾಯ, ಇಷ್ಟೊಂದು ಬ್ಲಾಗ್‌ಗಳು, ಬರವಣಿಗೆಗಳು ಬರುತ್ತಿರುವಾಗ, ಉತ್ತಮವಾದದ್ದನ್ನು ಹುಡುಕುವುದು ಹೇಗೆ? ಎಷ್ಟೊಂದು ಸಮಯ ವ್ಯರ್ಥವಾಗುತ್ತದಲ್ಲ' ಎಂದು ಆತ ಚಿಂತಿತನಾದ.
'ಅದಕ್ಕೆಂದೇ ಮಿತ್ರ ಸಿರಿ ಸಂಪದ ಎಂಬ ಹೊಸ ತಾಣ ಬರುತ್ತಿದೆ. ಈ ಕೆಲಸವನ್ನು ಅದು ಮಾಡುತ್ತದೆ. ಅಲ್ಲಿಯವರೆಗೆ ಕಾಯಿ, ಇಲ್ಲಾಂದ್ರೆ ಎಲ್ಲಾದ್ರೂ ಹೋಗಿ ಸಾಯಿ' ಎಂದೆ ನಗುತ್ತ.
ಅವನೂ ನಕ್ಕ.
- ಚಾಮರಾಜ ಸವಡಿ